ನಾರಾಯಣಪುರ ಬಲದಂಡೆ ಕಾಲುವೆ ಅಂದಾಜು ಸಮಿತಿ ಸಭೆಯ ನಡಾವಳಿ ಪುಟಗಳನ್ನೇ ಬದಲಾಯಿಸಿದ ಅಧಿಕಾರಿಗಳು!
ಬೆಂಗಳೂರು: ನಾರಾಯಣಪುರ ಬಲದಂಡೆ ಮುಖ್ಯ ಮತ್ತು ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 ಮತ್ತು 2 ರ ಪ್ರಕರಣಗಳನ್ನು ಚರ್ಚೆಗೆ ಕೈಗೆತ್ತಿಕೊಂಡಿರುವ ಶಾಸಕ ಹಂಪನಗೌಡ ಬಾದರ್ಲಿ ಅವರ ಅಧ್ಯಕ್ಷತೆಯಲ್ಲಿರುವ ಅಂದಾಜುಗಳ ಸಮಿತಿ ಶಾಖೆಯ ಅಧಿಕಾರಿಗಳು ಸಭೆಯ ನಡಾವಳಿಗಳ ಪುಟಗಳನ್ನೇ ಬದಲಾಯಿಸಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಅಂದಾಜು ಸಮಿತಿಯ ನಡಾವಳಿಗಳ ಪುಟಗಳನ್ನು ಬದಲಾಯಿಸಿ ಪ್ರತ್ಯೇಕವಾಗಿ ಬೆರಳಚ್ಚು ಮಾಡಿರುವ ಹಾಳೆಗಳನ್ನು ಸೇರಿಸಿದ್ದಾರೆ. ವಿಚಾರಣೆ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸದೇ ಇದ್ದರೂ ‘ಕೈ ಬಿಡಲಾಗಿದೆ’ ಎಂದು ಪ್ರತ್ಯೇಕ ಹಾಳೆಯನ್ನು ಮೂಲ ನಡಾವಳಿಯಲ್ಲೇ ಸೇರ್ಪಡೆಗೊಳಿಸಿದ್ದಾರೆ. ಸಮಿತಿಯು ಕೈಗೊಂಡಿದ್ದ ತೀರ್ಮಾನಗಳನ್ನು, ಸಭೆಯ ಗಮನಕ್ಕೆ ತಾರದೆಯೇ ಬದಲಾಯಿಸುತ್ತಿರುವ ಪ್ರಕರಣಗಳು, ಶಾಸಕಾಂಗ ಸಮಿತಿಗಳ ಬಗೆಗಿನ ವಿಶ್ವಾಸಕ್ಕೇ ಧಕ್ಕೆ ತಂದಂತಾಗಿದೆ.
ಈ ಸಂಬಂಧ ಕಡತದ (ಕವಿಸಸ/54/ಅಂಸ/2025) ಕೆಲವು ಟಿಪ್ಪಣಿ ಹಾಳೆಗಳು "the-file.in"ಗೆ ಲಭ್ಯವಾಗಿದೆ.
ಅಂದಾಜು ಸಮಿತಿಯು ಜಲಸಂಪನ್ಮೂಲ ಇಲಾಖೆಗೆ ಸಂಂಧಿಸಿದಂತೆ 2025ರ ಎಪ್ರಿಲ್ 4 ಮತ್ತು ಮೇ 9ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ನಾರಾಯಣಪುರ ಬಲದಂಡೆ ಮುಖ್ಯ ಮತ್ತು ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 ಮತ್ತು 2 ರ ಪ್ರಕರಣಗಳ ಕುರಿತು ಸಮಿತಿಯು ಚರ್ಚೆ ನಡೆಸಿತ್ತು. 2025ರ ಎಪ್ರಿಲ್ 4ರಂದು ನಡೆದಿದ್ದ ಸಭೆಯಲ್ಲಿನ ಚರ್ಚೆಯ ಅಂಶಗಳನ್ನು ನಡಾವಳಿಯಲ್ಲಿ ದಾಖಲಿಸಲಾಗಿತ್ತು.
ಅಂತಿಮ 2 ಪುಟಗಳಲ್ಲಿ ಚರ್ಚಿಸಿದ್ದೇನು?:
ಸಮಿತಿಯ ಸದಸ್ಯ ಡಾ ಶಿವರಾಜ್ ಪಾಟೀಲ್ ಅವರು ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 (1ರಿಂದ 15) ಮತ್ತು ಪ್ಯಾಕೇಜ್ 2 (16ರಿಂದ 18) ತನಿಖಾ ಪ್ರಕರಣಗಳ ಎರಡೂ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯಲ್ಲಿ ನಮೂದಾಗಿದೆ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಪೈಕಿ ಕೆಲವು ಪ್ರಕರಣಗಳು ಕೋರ್ಟ್‌ನಲ್ಲಿವೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅಂಥವುಗಳನ್ನು ಸಮಿತಿಯಲ್ಲಿ ಚರ್ಚೆಗೆ ತೆಗೆದುಕೊಳ್ಳುವುದು ಬೇಡ ಎಂದು ಅಭಿಪ್ರಾಯಿಸಿದ್ದರು.
ಇದಕ್ಕೆ ಸಮಿತಿಯ ಮತ್ತೊಬ್ಬ ಸದಸ್ಯ ಅಪ್ಪಾಜಿ ಗೌಡ ನಾಡಗೌಡ ಅವರು 'We Wait for the Court Orders. ಏನೇನಾಗಿದೆ ಎಂದು ಮಾಹಿತಿ ಕೊಡಲಿ. ಕೋರ್ಟ್ ಅಥವಾ ಟ್ರಿಬ್ಯೂನಲ್ ಮುಂದೆ ರಿವ್ಯೆ ಆಗಿದ್ದರೇ ಆ ರಿಪೋರ್ಟ್‌ಅನ್ನು ಕಮಿಟಿ ಮುಂದೆ ಪ್ಲೇಸ್ ಮಾಡಲಿ. ಅದರ ಮೆಲೆ ಚರ್ಚೆ ಮಾಡೋಣ, ಇಲ್ಲದೇ ಹೋದರೆ ಈ ಸಮಿತಿಯ ಅಧಿಕಾರವನ್ನು ಕಸಿದುಕೊಂಡಂತೆ ಆಗುತ್ತದೆ. ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿ ಬಂದಿದ್ದರೇ ಮೊದಲು ಅಸೆಂಬ್ಲಿಯಲ್ಲಿ ಪ್ಲೇಸ್ ಆಗಲಿ, ನಂತರ ಸಮಿತಿಗೆ ಬರಲಿ. ನಾವು ಚರ್ಚೆ ಮಾಡೋಣ,’ ಎಂದು ಹೇಳಿದ್ದರು. ಅಲ್ಲಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯು ಅಲ್ಲಿಗೆ ಮುಕ್ತಾಯವಾಗಿತ್ತು.
ಈ ವಿಷಯಗಳ ಕುರಿತು ನಡೆದಿದ್ದ ಚರ್ಚೆಯ ಅಂಶಗಳು ವರದಿಗಾರರ ಶಾಖೆಯಿಂದ ಸಲ್ಲಿಸಿರುವ ಮೂಲ ನಡಾವಳಿಯಲ್ಲಿಯೂ ಇದ್ದವು. ಆದರೆ ಅಂದಾಜು ಸಮಿತಿ ಶಾಖೆಯ ಕೆಳ ಹಂತದ ಅಧಿಕಾರಿಯವರು ಸಲ್ಲಿಸಿದ್ದ ಕಡತದಲ್ಲಿನ ನಡಾವಳಿಯಲ್ಲಿನ ಕೊನೆಯ ಎರಡು ಪುಟಗಳು ಉದ್ದೇಶಪೂರ್ವಕವಾಗಿ ಹೆಚ್ಚುವರಿಯಾಗಿ ಬೆರಳಚ್ಚು ಮಾಡಿಸಲಾಗಿತ್ತು. ಅಲ್ಲದೇ ನಡಾವಳಿಯಲ್ಲಿ ವ್ಯತ್ಯಾಸವೂ ಕಂಡು ಬಂದಿತ್ತು ಎಂದು ಗೊತ್ತಾಗಿದೆ.
ಬೆರಳಚ್ಚು ಮಾಡಿದ್ದ ಹಾಳೆಯಲ್ಲೇನಿತ್ತು?:
‘ಸರಕಾರವು ಈಗಾಗಲೇ ನಾರಾಯಣಪುರ ಬದಲಂಡೆ ಕಾಲುವೆಯ ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ಪ್ಯಾಕೇಜ್ 1 (1ರಿಂದ 15 ಮತ್ತು ಪ್ಯಾಕೇಜ್ 2, (16ರಿಂದ 18) ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತನಿಖಾ ಆಯೋಗವನ್ನು ರಚಿಸಿದ್ದು ಆಯೋಗವು ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಎರಡೂ ಪ್ರಸ್ತಾವಗಳನ್ನು ಸಮಿತಿಯಿಂದ ಕೈಬಿಡಲಾಗಿದೆ ಎಂದು ಸಮಿತಿಯು ಈ ಹಂತದಲ್ಲಿ ತೀರ್ಮಾನಿಸಿತು,’ ಎಂದು ಬೆರಳಚ್ಚು ಮಾಡಿದ್ದ ಹಾಳೆಯಲ್ಲಿ ಸೇರಿಸಿರುವುದು ತಿಳಿದು ಬಂದಿದೆ.
ನಡಾವಳಿಯ ಮೂಲ ಪ್ರತಿಯನ್ನೇ ಬದಲಾಯಿಸಿದರೇ?:
ಈ ಎರಡೂ ಪ್ರಕರಣಗಳನ್ನು ಕೈ ಬಿಡುವ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನವೂ ಆಗಿರಲಿಲ್ಲ. ಆದರೂ ನಡಾವಳಿಯಲ್ಲಿ ಈ ಎರಡೂ ಪ್ರಕರಣಗಳನ್ನು ಕೈ ಬಿಡಲಾಗಿದೆ ಎಂದು ಸೇರಿಸಿದ್ದು ಸಂಶಯಗಳಿಗೆ ಕಾರಣವಾಗಿತ್ತು. ಈ ಕುರಿತು ಮೂಲ ನಡಾವಳಿ ಮತ್ತು ಸೇರ್ಪಡೆ ಮಾಡಿರುವ ನಡಾವಳಿಗಳನ್ನು ಚರ್ಚೆ ಸಂಪಾದನೆ ಶಾಖೆಯಿಂದ ತರಿಸಿಕೊಳ್ಳಲಾಗಿತ್ತು. ಅದರಲ್ಲಿ ಎರಡು ಪ್ರಸ್ತಾವಗಳನ್ನು ಕೈ ಬಿಟ್ಟಿರುವ ಬಗ್ಗೆ ಯಾವುದೇ ಉಲ್ಲೇಖವೇ ಇರಲಿಲ್ಲ. ಹಾಗೂ ನಡಾವಳಿಯ ಕೊನೆಯ ಎರಡು ಪುಟಗಳನ್ನು ಬದಲಾಯಿಸಿ ಪ್ರತ್ಯೇಕವಾಗಿ ಬೆರಳಚ್ಚು ಮಾಡಿ ನಡಾವಳಿಯಲ್ಲಿ ಸೇರಿಸಲಾಗಿತ್ತು.
ಅಂದಾಜು ಸಮಿತಿಯ ಕೆಳ ಹಂತದ ಅಧಿಕಾರಿಗಳ ಈ ಲೋಪದ ಬಗ್ಗೆ ಸಮಿತಿಯ ಹಿರಿಯ ಅಧಿಕಾರಿಗಳು ಕಡತದಲ್ಲಿಯೇ (ಕವಿಸಸ/54/ಅಂಸ/2025) ವಿಧಾಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರ ಗಮನಕ್ಕೆ ತಂದಿದ್ದರು. ಆದರೆ ಈ ಬಗ್ಗೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಲೋಪವೆಸಗಿರುವ ಕೆಳ ಹಂತದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ನಾರಾಯಣಪುರ ಬಲದಂಡೆ ಪ್ರಕರಣವೇನು?:
ರಾಯಚೂರು ಜಿಲ್ಲೆಯ ಲಿಂಗಸೂರು ಹಾಗೂ ದೇವದುರ್ಗ ನಾರಾಯಣಪುರ ಬಲದಂಡೆ ನಾಲೆಯ ಉಪ ಕಾಲುವೆ ಆಧುನೀಕರಣದ ಕಾಮಗಾರಿಯಲ್ಲಿ ಕಾಮಗಾರಿ ಮಾಡದೇ ಬಿಲ್ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಆಧುನೀಕರಣದ ಕಾಮಗಾರಿಯ ಮೊದಲ ಪ್ಯಾಕೇಜ್ ಅನ್ನು 828.40 ಕೋಟಿ ರೂ.ಗೆ ಎನ್‌ಡಿ ವಡ್ಡರ್ ಆಂಡ್ ಕಂಪೆನಿಗೆ ನೀಡಲಾಗಿತ್ತು. ಒಟ್ಟು ಎರಡು ಪ್ಯಾಕೇಜ್‌ಗಳನ್ನು 1,619 ಕೋಟಿ ರೂ. ಮೊತ್ತ ಪಡೆದುಕೊಂಡಿದ್ದ ಈ ಕಂಪೆನಿಯು ಕಳಪೆ ಕಾಮಗಾರಿ ನಡೆಸಿತ್ತು. ಈಗಾಗಲೇ ಮೊದಲ ಪ್ಯಾಕೇಜ್‌ನಲ್ಲಿ 282 ಕೋಟಿ ರೂ.ಯಷ್ಟು ಹಾಗೂ ಎರಡನೇ ಪ್ಯಾಕೇಜ್‌ನಲ್ಲಿ 143 ಕೋಟಿ ರೂ. ಪಾವತಿಯಾಗಿತ್ತು. ಆದರೆ ಕಾಮಗಾರಿ ಮಾಡದೆ ಬಿಲ್ ತೆಗೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಆರೋಪಿಸಿದ್ದರು.
ಕಾಂಗ್ರೆಸ್ ಸರಕಾರ ಸದನಕ್ಕೆ ನೀಡಿದ್ದ ಉತ್ತರದಲ್ಲೇನಿದೆ?:
ಈ ಪ್ರಕರಣಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು 2025ರ ಮಾರ್ಚ್ 6ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಿದ್ದರು.
ಈ ಉತ್ತರದ ಪ್ರಕಾರ ನಾರಾಯಣಪುರ ಬಲದಂಡೆ ಮುಖ್ಯಕಾಲುವೆಯ 0.00ರಿಂದ 95.00 ವರೆಗಿನ ಆಧುನೀಕರಣ ಪ್ಯಾಕೇಜ್ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರದಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಈ ಸತ್ಯಶೋಧನಾ ಸಮಿತಿಯ ಸಮಿತಿ ಶಿಫಾರಸುಗಳ ಅನ್ವಯ (ಸರಕಾರದ ಆದೇಶ ಸಂಖ್ಯೆ ಜಸಂಇ 146 ಸೇ.ಇವಿ 2020 ದಿನಂಕ 05.07.2021) ಗುತ್ತಿಗೆದಾರರಾದ ಡಿ.ವೈ.ಉಪ್ಪಾರ್ ಮತ್ತು ಸನ್ಸ್ ಅವರಿಂದ ಒಟ್ಟು 42.785 ಕೋಟಿ ರೂ. ಮೊತ್ತವನ್ನು ಈಗಾಗಲೇ ವಸೂಲಾತಿ ಮಾಡಲಾಗಿದೆ.
ಲೋಕಾಯುಕ್ತರು ಸಹ ಈ ಕಾಮಗಾರಿಗೆ ಸಂಬಂಧಿಸಿ ತನಿಖೆಯ ಪ್ರಕಣವನ್ನು 2022ರ ಜನವರಿ 10ರ ಅಂತಿಮ ಪರಿಶೀಲನಾ ವರದಿ ಅನ್ವಯ ಮುಕ್ತಾಯಗೊಳಿಸಿದೆ. ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಅಡ್ಡಲಾಗಿ ನಿರ್ಮಿಸಿರುವ 1ರಿಂದ 15ರವರೆಗಿನ ವಿತರಣಾ ಕಾಲುವೆ, ಉಪ/ಸೀಳು ಕಾಲುವೆಗಳ ಆಧುನೀಕರಣ ಪ್ಯಾಕೇಜ್ 1 ಕಾಮಗಾರಿ ಹಾಗೂ 16ರಿಂದ 18ರವರೆಗಿನ ವಿತರಣಾ ಕಾಲುವೆ, ಉಪ, ಸೀಳು ಕಾಲುವೆಗಳ ಆಧುನೀಕರಣ ಪ್ಯಾಕೇಜ್ 2 ಕಾಮಗಾರಿಗಳ ಮೇಲೆ ಆಪಾದನೆ ಮಾಡಲಾಗಿತ್ತು. ಈ ಆಪಾದನೆಗಳಿಗೆ, ಆರೋಪಗಳಿಗೆ ಸಂಬಂಧಿಸಿ ತನಿಖೆ ನಡೆಸಲು ಸರಕಾರದ ಆದೇಶ (ಸಂಖ್ಯೆ; ಜಸಂಇ 301 ಕೆಬಿಎನ್ 2023 ದಿನಾಂಕ 04/01/2024) ಅನ್ವಯ ಈ ಹಿಂದೆ ರಚನೆಗೊಂಡಿದ್ದ ತಾಂತ್ರಿಕ ತಜ್ಞರ ಸಮಿತಿಯನ್ನು ಹಿಂಪಡೆಯಲಾಗಿತ್ತು.
ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಎಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದ ವಿಚಾರಣೆ ಆಯೋಗಕ್ಕೆ ವಹಿಸಿ ಆದೇಶಿಸಲಾಗಿತ್ತು. ಈ ಪ್ಯಾಕೇಜ್ ಕಾಮಗಾರಿಗಳ ತನಿಖೆಯು ವಿಚಾರಣೆ ಹಂತದಲ್ಲಿರುತ್ತದೆ ಎಂದು ಮಾಹಿತಿ ಒದಗಿಸಿದ್ದರು.
2022ರ ಸೆ.28ರಂದು ಹಾಗೂ 2023ರ ಫೆ.9ರಂದು ನಡೆದ ಅಂದಾಜು ಸಮಿತಿ ಸಭೆಯಲ್ಲಿ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ವಿತರಣೆ ಕಾಲುವೆ ಸಂಖ್ಯೆ 1ರಿಂದ 15ರವರೆಗಿನ ಪ್ಯಾಕೇಜ್ 1 ಹಾಗೂ ವಿತರಣಾ ಕಾಲುವೆ ಸಂಖ್ಯೆ 16ರಿಂದ 18ರವರೆಗಿನ ಪ್ಯಾಕೇಜ್ 2 ಕಾಮಗಾರಿಗಳ ಉಪ ಸೀಳು ಕಾಲುವೆಗಳ ಆಧುನೀಕರಣ ಪ್ಯಾಕೇಜ್‌ಗಳ ಕಾಮಗಾರಿಗಳಿಗೆ ಸಂಬಂಧಿಸಿ ಪಾವತಿಸಬೇಕಾಗಿರುವ ಬಿಲ್‌ಗಳು ಬಾಕಿ ಇದ್ದವು. ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿತ್ತು.
ಗುಣಮಟ್ಟದ ಕಾಮಗಾರಿಗೆ ಪೂರ್ಣ ಪ್ರಮಾಣದ ಬಿಲ್‌ಅನ್ನ್ನು ಪಾವತಿಸಬಹುದೆಂದು ನೀರಾವರಿ ಇಲಾಖೆಯ ಮುಖ್ಯಸ್ಥರಾದ ಅಪರ ಮುಖ್ಯ ಕಾರ್ಯದರ್ಶಿಗೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಬಾಕಿ ಉಳಿದಿರುವ ಬಿಲ್‌ನ ಮೊತ್ತವನ್ನು ಪಾವತಿಸುವ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಸರಕಾರಕ್ಕೆ ಕೋರಲಾಗಿತ್ತು. ಹಾಗಾಗಿ ಸರಕಾರದ ಪತ್ರದಲ್ಲಿ ಅಂದಾಜು ಸಮಿತಿಯು ಲೋಕಾಯುಕ್ತ ಸಂಸ್ಥೆಯವರು ನೀಡುವ ವರದಿಯನ್ನು ಸಮಿತಿಗೆ ಒಪ್ಪಿಸುವಂತೆ ಸೂಚಿಸಲಾಗಿರುವ ಅಂಶಗಳ ಬಗ್ಗೆ ಚರ್ಚಿಸಲಾಗಿತ್ತು.
ತಾಂತ್ರಿಕ ತಜ್ಞರ ಸಮಿತಿಯು ಸಲ್ಲಿಸಲಾಗುವ ವರದಿಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳ ಪ್ರಗತಿಯ ಹಿತದೃಷ್ಟಿಯಿಂದ ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಯ ಪ್ಯಾಕೇಜ್ 1ರಿಂದ 15ರವರರೆಗೆ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಬಿಲ್‌ನ ಮೊತ್ತವನ್ನು ಪಾವತಿಸುವ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶಿಸಲಾಗಿತ್ತು.
ಈ ಪ್ಯಾಕೇಜ್ ಕಾಮಗಾರಿಗಳು 2021ರ ಜುಲೈ 23ರಂದು ಪ್ರಾರಂಭಗೊಂಡಿವೆ. ಇದುವರೆಗೂ ಪ್ಯಾಕೇಜ್ ಕಾಮಗಾರಿಗಳಿಗೆ ಹಣ ಪಾವತಿಸಲಾಗಿದೆ ಎಂದು ಮಾಹಿತಿ ಒದಗಿಸಿದ್ದರು.
ಪ್ಯಾಕೇಜ್ 1 (1ರಿಂದ 15ರವರೆಗೆ) ಎನ್ ಡಿ ವಡ್ಡರ್ ಆಂಡ್ ಕಂಪೆನಿಗೆ ಒಪ್ಪಂದದ ಪ್ರಕಾರ 977.51 ಕೋಟಿ 51 ಲಕ್ಷ ರೂ. ನೀಡಬೇಕಿತ್ತು. ಕಡೆಗೆ ಬಿಲ್ ಮೊತ್ತವನ್ನು 867.66 ಕೋಟಿ ರೂ.ಗೆ ಇಳಿಸಿತ್ತು. ಈ ಪೈಕಿ 590.10 ಕೋಟಿ ರೂ. ಪಾವತಿಯಾಗಿದೆ. ಇನ್ನೂ 277.56 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿದೆ. ಅದೇ ರೀತಿ ಪ್ಯಾಕೇಜ್ 2 (16ರಿಂದ 18ವರೆಗೆ) ಇದೇ ಎನ್‌ಡಿ ವಡ್ಡರ್ ಆಂಡ್ ಕಂಪೆನಿಗೆ 909.23 ಕೋಟಿ ರೂ. ಒಪ್ಪಂದವಾಗಿತ್ತು. ಕಡೆಗೆ ಇದನ್ನು 636.58 ಕೋಟಿ ರೂ.ಗೆ ಇಳಿಸಿತ್ತು. ಈ ಪೈಕಿ 377.71 ಕೋಟಿ ರೂ. ಪಾವತಿಯಾಗಿತ್ತು. 258.87 ಕೋಟಿ ರೂ.ಗಳನ್ನು ತಡೆಹಿಡಿಯಲಾಗಿತ್ತು. ಒಟ್ಟು 1886.74 ಕೋಟಿ ರೂ. ಒಪ್ಪಂದವಾಗಿದ್ದರ ಪೈಕಿ 1504.24 ಕೋಟಿ ರೂ.ಗೆ ಇಳಿಸಲಾಗಿತ್ತು. ಈ ಪೈಕಿ 967.81 ಕೋಟಿ ರೂ. ಪಾವತಿಯಾಗಿದೆ. ಇನ್ನೂ 536.43 ಕೋಟಿ ರೂ. ಪಾವತಿಗೆ ತಡೆಹಿಡಿಯಲಾಗಿದೆ.
ಈ ಮಧ್ಯೆ ಗುತ್ತಿಗೆದಾರರಾದ ಎನ್.ಡಿ.ವಡ್ಡರ್ ಆಂಡ್ ಕಂಪೆನಿ, ಏಜೆನ್ಸಿಯವರು ತಮ್ಮ ಬಿಲ್‌ಅನ್ನು ತಡೆ ಹಿಡಿದಿರುವುದಕ್ಕೆ ಮತ್ತು ನಾಗಮೋಹನ್ ದಾಸ್ ವಿಚಾರಣೆ ಆಯೋಗವನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ಒದಗಿಸಿದ್ದರು.