×
Ad

ವಸತಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆ: 30 ಕೋಟಿ ರೂ. ಕೊಡಲು ಆರ್ಥಿಕ ಇಲಾಖೆ ಆಕ್ಷೇಪ

Update: 2025-10-09 10:09 IST

ಸಾಂದರ್ಭಿಕ ಚಿತ್ರ PC: freepik

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ 30 ಕೋಟಿ ರೂ. ಕೊಡಲು ಆರ್ಥಿಕ ಇಲಾಖೆಯು ಸಹಮತ ಸೂಚಿಸಿಲ್ಲ. ವಸತಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಸಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆಯು ವರ್ಷದ ಹಿಂದೆ ಹೊರಡಿಸಿದ್ದ ಆದೇಶವು ಗೃಹಜ್ಯೋತಿ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆರ್ಥಿಕ ಇಲಾಖೆಯು ಹೇಳಿದೆ.

ಇಂಧನ ಇಲಾಖೆಗೆ 1,000 ಕೋಟಿ ರೂ.ಗೂ ಅಧಿಕ ಅನುದಾನವನ್ನು ಎಸ್‌ಸಿ ಎಸ್ಪಿ ಮತ್ತು ಟಿಎಸ್ಪಿ ಅಡಿಯಲ್ಲಿ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ವರ್ಷಕ್ಕೆ ಕೇವಲ 30 ಕೋಟಿ ರೂ.ಯನ್ನು ಹೊಂದಾಣಿಕೆ ಮಾಡಲು ಆರ್ಥಿಕ ಇಲಾಖೆಯು ಒಪ್ಪಿಲ್ಲ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆ, ಪದವಿಪೂರ್ವ ವಸತಿ ಕಾಲೇಜುಗಳಿಗೆ ಎಸ್ಸಿಎಸ್ಪಿಮತ್ತು ಟಿಎಸ್ಪಿಅಡಿಯಲ್ಲಿ ಇಂಧನ ಇಲಾಖೆಗೆ ಒದಗಿಸಿದ್ದ ಅನುದಾನದಲ್ಲಿಯೇ ವೆಚ್ಚ ಭರಿಸಿ ಉಚಿತ ವಿದ್ಯುತ್ ಸೌಲಭ್ಯ ವಿಸ್ತರಿಸಲು ಸೂಚಿಸಿತ್ತು. ಈ ಸಂಬಂಧ ಆದೇಶವನ್ನೂ ಹೊರಡಿಸಿತ್ತು.

ಆದರೀಗ ಈ ಆದೇಶವೇ ಗೃಹಜ್ಯೋತಿ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿದೆ. ಇಂಧನ ಇಲಾಖೆಯು ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವ (EN/231/PSR/2024) ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 2025ರ ಸೆ. 15ರಂದು ತನ್ನ ಅಭಿಪ್ರಾಯ ( FD/11/EXP-1/2024, DATED 15/09/2025)ನೀಡಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?

ಪ್ರಸ್ತಾವನೆ ಪರಿಶೀಲಿಸಲಾಗಿದೆ. ಇಂಧನ ಇಲಾಖೆಯು ಸಲ್ಲಿಸಿ ರುವ ಪ್ರಸ್ತಾವನೆಗೆ ಹಣಕಾಸು ಇಲಾಖೆಯು ವಿಷಾದ ವ್ಯಕ್ತಪಡಿಸುತ್ತದೆ. ಗೃಹ ಜ್ಯೋತಿ ಲೆಕ್ಕಾಚಾರದಲ್ಲಿ ಕೊರತೆಯಿದೆ. ಹೀಗಾಗಿ ಯಾವುದೇ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಈ ವರ್ಷ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿಯಾಗಿ 1000 ಕೋಟಿ ರೂ. ಪ್ರಸ್ತಾಪಿಸಲಾಗಿದೆ. ಇಲಾಖೆಯು ಅದರಿಂದಲೇ ಪ್ರಸಕ್ತ ವರ್ಷದಲ್ಲಿ ಪಾವತಿಗಳನ್ನು ಮಾಡಬಹುದು. ಗೃಹ ಜ್ಯೋತಿಯ ಉದ್ದೇಶಕ್ಕೆ ವಿರುದ್ಧವಾಗಿ ಸರಕಾರಿ ಆದೇಶ ಇರುವುದರಿಂದ ಇಲಾಖೆಯು ಅದನ್ನು ಹಿಂಪಡೆಯಬಹುದು ಎಂದು ಅಭಿಪ್ರಾಯದಲ್ಲಿ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

ಈ ಕುರಿತು ’ದಿ ಫೈಲ್’, ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿತು. ಈ ಸಂಬಂಧ ಪ್ರತಿಕ್ರಿಯಿಸಿರುವ ಮಣಿವಣ್ಣನ್ ಅವರು, ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯವನ್ನು ಪರಿಶೀಲಿಸಲಾಗುತ್ತಿದೆ, ಇಲಾಖೆ ಸಚಿವರು, ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸುತ್ತೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಸಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.

ಕರ್ನಾಟಕದ ಎಲ್ಲ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ‘ಗೃಹ ಜ್ಯೋತಿ’ ಮಾದರಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಈ ಯೋಜನೆಯು 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಇದರಡಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸಂಪರ್ಕ ಒದಗಿಸಲಾಗುತ್ತದೆ. ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಗಾಗಿ ಖರ್ಚಾಗುವ ಹಣವನ್ನು ಉಳಿಸಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯ ಸುಧಾರಿಸಲು ಬಳಸಿಕೊಳ್ಳಲು ಮುಂದಾಗಿತ್ತು.

ಈ ಸೌಲಭ್ಯವನ್ನು ಕಲ್ಪಿಸಲು 25 ಕೋಟಿ ರೂ. ಅನುದಾನವನ್ನು ನೀಡಲಾಗಿತ್ತು. ಸಂಘದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 503 ವಸತಿ ಶಾಲೆಗಳು, ಪರಿಶಿಷ್ಟ ಪಂಗಡದ 144, ಹಿಂದುಳಿದ ವರ್ಗದ 174 ಸೇರಿ ಒಟ್ಟಾರೆ 821 ವಸತಿ ಶಾಲಾ, ಕಾಲೇಜುಗಳಿವೆ. ಇವುಗಳಿಗೆ ಉಚಿತ ವಿದ್ಯುತ್ ಪೂರೈಸಲು ವಾರ್ಷಿಕ ಅಂದಾಜು 36 ಕೋಟಿ ರೂ. ಬೇಕಾಗುತ್ತದೆ. 3 ಇಲಾಖೆಗಳು ಕ್ರಮವಾಗಿ 23 ಕೋಟಿ ರೂ., 6 ಕೋಟಿ ರೂ. ಮತ್ತು 7 ಕೋಟಿ ರೂ. ಭರಿಸಬೇಕಾಗುತ್ತದೆ. ಎಸ್ಸಿ, ಎಸ್ಟಿ ವಸತಿ ಶಾಲೆಗಳ 29 ಕೋಟಿ ರೂ. ವಿದ್ಯುತ್ ಬಿಲ್ ಅನ್ನು ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಯಡಿ ಒದಗಿಸುವ ಅನುದಾನದ ಮೂಲಕ ಭರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor

Similar News