×
Ad

ರಾಯಚೂರು ಜಿಲ್ಲೆಯಲ್ಲಿ 28 ಹೊಸ ಪ್ರವಾಸಿ ತಾಣಗಳು

ಐತಿಹಾಸಿಕ ಸ್ಮಾರಕ, ಕಟ್ಟಡಗಳ ಅಭಿವೃದ್ಧಿಗೆ ಯೋಜನೆ

Update: 2025-11-17 08:05 IST

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ತಾಣಗಳಿದ್ದು, ಹೊಸ ಪೀಳಿಗೆಗೆ ಪರಿಚಯಿಸಿ ಅಭಿವೃದ್ಧಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಯಾವುದೇ ಐತಿಹಾಸಿ ಸ್ಮಾರಕ, ಕಟ್ಟಡಗಳನ್ನು ಉಳಿಸಿ ಬೆಳೆಸಲು ಪುರಾತತ್ವ ಇಲಾಖೆಯ ಜತೆಗೆ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಈ ದಿಸೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಕಾಳಜಿಯಿಂದ ಜನರಿಂದ ದೂರವಾಗಿ ಅಳಿವಿನಂಚಿನಲ್ಲಿರುವ ಜಿಲ್ಲೆಯ 28 ಐತಿಹಾಸಿಕ ಹೊಸ ತಾಣಗಳನ್ನು ಗುರುತಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಲು ಮುಂದಾಗಿದೆ.

ಜಿಲ್ಲೆಯಲ್ಲಿ ನೂರಾರು ಪುರಾತನ ಸ್ಮಾರಕಗಳಿದ್ದರೂ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವ್ಯಾಪ್ತಿಗೆ ಒಂದೇ ಒಂದು ಸ್ಮಾರಕವನ್ನೂ ಸೇರಿಸಿಲ್ಲ. ಇದೀಗ ಪ್ರವಾಸೋದ್ಯಮ ಇಲಾಖೆಯು ರಾಯಚೂರು ಜಿಲ್ಲೆಯಲ್ಲಿ 28 ಹೊಸ ತಾಣಗಳನ್ನು ಗುರುತಿಸಿದ್ದು ಜನರಲ್ಲಿ ಹರ್ಷ ತಂದಿದೆ.

ಜಿಲ್ಲೆಯ ಐತಿಹಾಸಿಕ ಸ್ಥಳಗಳಾವುವು ಎಂದರೆ ಥಟ್ ಅಂತ ರಾಯಚೂರು ಕೋಟೆ, ಮಲಿಯಾಬಾದ್ ಕಲ್ಲಾನೆಗಳು, ಪಂಚ್ ಬೀಬಿ ಪಹಾಡ್, ಗುಬ್ಬೇರು ಬೆಟ್ಟ, ಆತ್ಕೂರು ಗ್ರಾಮದ ದತ್ತಾತ್ರೇಯ ದೇವಸ್ಥಾನ, ಲಿಂಗಸುಗೂರಿನ ಜಲದುರ್ಗ ಕೋಟೆ, ಮಸ್ಕಿಯ ಅಶೋಕ ಶಿಲಾಶಾಸನ, ಪಂಚಮುಖಿ ಗಾಣಧಾಳ ಸೇರಿ ಬೆರಳೆಣಿಕೆಯಷ್ಟು ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಆದರೆ ಅನೇಕ ಐತಿಹಾಸಿ ಸ್ಥಳಗಳಿದ್ದು ಅವುಗಳನ್ನು ಅಭಿವೃದ್ಧಿಗೊಳಿಸಲು ಭಾರತೀಯ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

2024ರ ಜುಲೈ 9ರಂದು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಜಿಲ್ಲಾಧಿಕಾರಿಗಳೇ ಗುರುತಿಸಬೇಕು. ಖಾಸಗಿ ಸಹಭಾಗಿತ್ವ ಮಾತ್ರವಲ್ಲ, ಸರಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು ಎಂದು ಸೂಚಿಸಿದ್ದರು. ಬಜೆಟ್ ಯೋಜನೆ ಸಿದ್ಧಪಡಿಸಬೇಕು. ಜಿಲ್ಲಾಧಿಕಾರಿ ಸಿದ್ಧಪಡಿಸುವ ಮಾಸ್ಟರ್ ಪ್ಲಾನ್‌ಗೆ ಹಣಕಾಸು ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದ್ದರು.

ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ 10 ಇದರ ಜತೆಗೆ 28 ಹೊಸ ತಾಣಗಳನ್ನು ಪಟ್ಟಿ ಮಾಡಿ ಕಳುಹಿಸಲಾಗಿತ್ತು. ಇವೆಲ್ಲವನ್ನೂ ಸರಕಾರ ಪ್ರವಾಸಿ ತಾಣವಾಗಿ ಪರಿಗಣಿಸಿ ಅನುಮೋದನೆ ಕೊಟ್ಟಿದೆ. ಮೊದಲ ಹಂತದಲ್ಲಿ ಮಸ್ಕಿ ಅಶೋಕನ ಶಿಲಾಶಾಸನ ಹಾಗೂ ಗೂಗಲ್ ತಾಣದ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 10 ಕೋಟಿ ರೂ. ಅನುದಾನ ಮಂಜೂರಾಗಿದೆ.

ರಾಯಚೂರು ತಾಲೂಕಿನ ಕುರ್ವಕಲದ ದತ್ತಾತ್ತೇಯ ಮಂದಿರ, ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ಹಾಗೂ ಗಾಣದಾಳು ಪಂಚಮುಖಿ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರ ಸರಕಾರದ ಪ್ರಸಾದ್ ಯೋಜನೆಯಡಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಝೀರ್ ಅಹ್ಮದ್.

ಇತ್ತೀಚೆಗೆ ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಪ್ರವಾಸೋದ್ಯಮ ಇಲಾಖೆಯ ಆಯುಕ್ತರು, ರಾಜ್ಯದಲ್ಲಿ ಸುಮಾರು 800ಕ್ಕೂ ಹೆಚ್ಚು ರಾಜ್ಯ ಸಂರಕ್ಷಿತ ಸ್ಮಾರಕಗಳು ಇವೆ. ಅದರಲ್ಲಿ ಶೇಕಡ 50ರಷ್ಟು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಂಡುಬರುತ್ತವೆ. ಇವುಗಳ ಸಂಖ್ಯೆ ಅನುಗುಣವಾಗಿ ಇನ್ನೂ ಇಲಾಖೆಯಿಂದ ಆದ್ಯತೆ ನೀಡಬೇಕು. ಕೋಟೆಯಲ್ಲಿ ಪಾಲಿಕೆ ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದರು.


ಹೊಸ ತಾಣಗಳು :

►ರಾಯಚೂರು ತಾಲೂಕು: ನವರಂಗ ದರ್ವಾಝಾ, ಕಾಟೆ ದರ್ವಾಝಾ, ಮೆಕ್ಕಾ ದರ್ವಾಝಾ, ಪಂಚ ಬೀಬಿ ಪಹಾಡ್, ತೀನ್ ಕಂದೀಲ್, ನಾರದಗಡ್ಡೆ, ಮಲಿಯಾಬಾದ್ ಕೋಟೆ, ಕಲ್ಲಾನೆ, ಪಂಚಮುಖಿ ಆಂಜನೇಯ ದೇಗುಲ, ಮಾವಿನಕೆರೆ, ಕುರ್ವಾಕುಲದ ದತ್ತಾತ್ರೇಯ ದೇಗುಲ, ದೇವಸುಗೂರಿನ ಸುಗೂರೇಶ್ವರ, ಬಿಜ್ಜಾಲಿಯ ಏಕಶಿಲಾ ಬೃಂದಾವನ, ಮಂಚಲಾಪುರ ಕೆರೆ, ಶಕ್ತಿನಗರದ ವಿದ್ಯುತ್ ಉತ್ಪಾದನೆ ಘಟಕ-ಶಕ್ತಿನಗರ, ಕಲ್ಮಲಾ ಕರಿಯಪ್ಪ ತಾತನ ದೇಗುಲ.

►ಸಿಂಧನೂರು ತಾಲೂಕು: ಸೋಮಾಪುರದ ಅಂಬಾಮಂಠ, ಗಾಂಧಿನಗರದ ಶಿವಾಲಯ ದೇಗುಲ, ಉದ್ಬಾಳದ ಜೋಳದ ರಾಶಿ ಆಂಜನೇಯ ದೇವಸ್ಥಾನ,

►ಮಾನ್ವಿ ತಾಲೂಕು: ಕಲ್ಲೂರು ಮಹಾಲಕ್ಷ್ಮೀ ದೇಗುಲ. ಮಾನ್ವಿ ಕೋಟೆ, ನೀರ ಮಾನ್ವಿಯ ಯಲ್ಲಮ್ಮದೇವಿ ದೇಗುಲ, ಹರವಿಯ ಬಸವೇಶ್ವರ ದೇಗುಲ, ಗೋರ್ಕಲ್‌ನ ವೆಂಕಟೇಶ್ವರ ದೇಗುಲ-ಗೋರ್ಕಲ್, ರಾಜಲಬಂಡಾ ಬ್ಯಾರೇಜ್.

►ದೇವದುರ್ಗ ತಾಲೂಕು: ಗಬ್ಬೂರಿನ ದೇವಾಲಯಗಳು, ಕೊಪ್ಪುರು ಶ್ರೀನರಸಿಂಹ ದೇವಸ್ಥಾನ, ಗೂಗಲ್ ಶ್ರೀಅಲ್ಲಮಪ್ರಭು ದೇವಸ್ಥಾನ ಹಾಗೂ ಬ್ರಿಜ್ ಕಮ್ ಬ್ಯಾರೇಜ್, ವೀರಗೋಟದ ಆದಿ ಮೌನಲಿಂಗೇಶ್ವರ ದೇಗುಲ, ತಿಂಥಣಿ ಕನಕ ಪೀಠ.

►ಲಿಂಗಸುಗೂರು ತಾಲೂಕು: ಹಟ್ಟಿ ಚಿನ್ನದಗಣಿ-ಪಟ್ಟಿ, ಮುದಗಲ್ ಕೋಟೆ, ಗೋಲಪಲ್ಲಿಯ ಬಂಡಲಗುಂಡ ಜಲಪಾತ, ಗುರುಗುಂಟಾ ಅಮರೇಶ್ವರ ದೇವಸ್ಥಾನ, ಅಂಕಲಿಮಠ, ಪಿಕಳಿಹಾಳ.

►ಮಸ್ಕಿ ತಾಲೂಕು: ಮಸ್ಕಿ ಮಲ್ಲಿಕಾರ್ಜುನ ದೇಗುಲ, ಅಶೋಕನ ಶಿಲಾಶಾಸನ, ಮಲ್ಲಿಕಾರ್ಜುನ ದೇಗುಲ, ಚಿಕ್ಕ ಸವದತ್ತಿ ಯಲ್ಲಮ್ಮ ದೇಗುಲ, ಅಶೋಕನ ಕನ್ನಡ ಶಿಲಾ ಶಾಸನ.


ಪುರಾತತ್ವ ಇಲಾಖೆಯ ಸಹಭಾಗಿತ್ವದಲ್ಲಿ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸುತ್ತೋಲೆ ಹಿನ್ನೆಲೆಯಲ್ಲಿ ಅಧಿಕೃತ ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಅಗತ್ಯ ದಾಖಲಾತಿಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು.

-ಜುಬಿನ್ ಮೊಹಪಾತ್ರ, ರಾಯಚೂರು ಪಾಲಿಕೆ ಆಯುಕ್ತ


ರಾಯಚೂರಿನ ಮಹಾನಗರ ಪಾಲಿಕೆಯ ಆಸ್ತಿಗಳಾದ ಕೋಟೆ, ಕಂದಕ, ತೀನ್ ಕಂದೀಲ್ ಸಹಿತ ಇತರ ಸ್ಥಳಗಳಿಗೆ ಭೇಟಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

-ದೇವರಾಜು, ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರು





Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News