×
Ad

ಆಡಳಿತಾತ್ಮಕ ಮಂಜೂರಾತಿ ಪಡೆಯದೇ ವೆಚ್ಚ ಮಾಡಿದ 41 ಗ್ರಾಪಂಗಳು

Update: 2025-05-29 08:30 IST

ಸಾಂದರ್ಭಿಕ ಚಿತ್ರ PC: shutterstock

ಬೆಂಗಳೂರು: ರಾಜ್ಯದ 11 ಜಿಲ್ಲೆಗಳಲ್ಲಿನ 41 ಗ್ರಾಮ ಪಂಚಾಯತ್‌ಗಳು ಸಕ್ಷಮ ಅಧಿಕಾರಿಗಳಿಂದ ತಾಂತ್ರಿಕ ಮಂಜೂರಾತಿ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆಯದೇ ಅಪಾರ ಪ್ರಮಾಣದಲ್ಲಿ ವೆಚ್ಚವನ್ನು ಭರಿಸಿದ್ದವು ಎಂಬುದನ್ನು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಪತ್ತೆ ಹಚ್ಚಿದೆ.

ಹಾಗೆಯೇ ವಸೂಲು ಮಾಡಿದ್ದ ಮೊತ್ತವನ್ನು ಡಿಸಿಬಿ ವಹಿಯಲ್ಲಿ ಕಡಿಮೆ, ಹೆಚ್ಚು ನಮೂದಿಸಿ ಹಣವನ್ನು ದುರುಪಯೋಗಡಿಸಿಕೊಂಡಿದ್ದವು ಮತ್ತು ಭದ್ರತಾ ಠೇವಣಿ ಪಡೆಯದೇ ಕಾಮಗಾರಿಯನ್ನು ಕೈಗೊಂಡಿದ್ದರ ಬಗ್ಗೆ ವಿಸ್ತೃತವಾಗಿ ಲೆಕ್ಕ ಪರಿಶೋಧನೆಯಲ್ಲಿ ವಿವರಿಸಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯ (2022-23) ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇವೆ.

ರಾಜ್ಯದ 2,916 ಗ್ರಾಮ ಪಂಚಾಯತ್‌ಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯತ್‌ಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಹಾಗೂ ವಸೂಲಾತಿಯಲ್ಲಿ ಪಂಚಾಯತ್‌ಗಳ ನಿರ್ಲಕ್ಷ್ಯ, ಪಂಚಾಯತ್‌ಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿದ್ದವು.

ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿರುವ ಲೆಕ್ಕ ಪರಿಶೋಧಕರು, ಗ್ರಾಮ ಪಂಚಾಯತ್‌ಗಳು ವಸೂಲು ಮಾಡುವ ಉಪ ಕರಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ ಎಂಬ ಸಂಗತಿಯು ಬಹಿರಂಗಗೊಂಡಿದ್ದರ ಬೆನ್ನಲ್ಲೇ ಒಎಫ್‌ಸಿ ಕೇಬಲ್ ಶುಲ್ಕವನ್ನೂ ವಸೂಲು ಮಾಡಿಲ್ಲ. ಇದರ ಬೆನ್ನಲ್ಲೇ ಸಕ್ಷಮ ಪ್ರಾಧಿಕಾರಗಳಿಂದ ತಾಂತ್ರಿಕ ಮಂಜೂರಾತಿ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆಯದೆ ಮಾಡಿರುವ ವೆಚ್ಚ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಬಹಿರಂಗಗೊಳಿಸಿರುವುದು ಮುನ್ನೆಲೆಗೆ ಬಂದಿವೆ.

ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು "the-file.in"ಗೆ ಲಭ್ಯವಾಗಿದೆ. ಕರ್ನಾಟಕ ಪಂಚಾಯತ್‌ರಾಜ್ (ಗ್ರಾಮ ಪಂಚಾಯತ್ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006 ನಿಯಮ 77 (ii) ಮತ್ತು (iv) ರ ಪ್ರಕಾರ ಅಂದಾಜು ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ಪಡೆಯಬೇಕು. ಇದಕ್ಕೆ ಆರ್ಥಿಕ ಮಿತಿಯನ್ನೂ ನಿಗದಿಪಡಿಸಿದೆ. ತಾಂತ್ರಿಕ ಮಂಜೂರಾತಿ ಅಂದಾಜುಗಳಿಗೆ ಗ್ರಾಮ ಪಂಚಾಯತ್ ಮಟ್ಟದ ಇಂಜಿನಿಯರ್‌ಗಳು 25,000 ರೂ.ವರೆಗೆ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಮಟ್ಟದಲ್ಲಿ 25,000 ರೂ. ಮೀರುವ 4,00,000 ರೂ. ಒಳಗೆ, ಕಾರ್ಯನಿರ್ವಾಹಕ ಅಭಿಯಂತರರು 4,00,000.00 ರೂ. ಮೀರುವ ಮತ್ತು 10,00,000 ರೂ. ಒಳಗಿನ ಮೊತ್ತ ಮತ್ತು ಅಧೀಕ್ಷಕ ಅಭಿಯಂತರರು 10,00,000.00 ರೂ. ಮೀರುವ ಮೊತ್ತಗಳಿಗೆ ತಾಂತ್ರಿಕ ಮಂಜೂರಾತಿ ನೀಡುವ ಆರ್ಥಿಕ ಮಿತಿಯನ್ನು ಹೇರಿವೆ.

ಅದೇ ರೀತಿ ಆಡಳಿತಾತ್ಮಕ ಮಂಜೂರಾತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ 5,000 ರೂ. ಮೀರುವ ಮತ್ತು 10,00,000 ರೂ. ಒಳಗಿನ ಮೊತ್ತದವರೆಗೆ ಮಂಜೂರಾತಿ ನೀಡಲು ಆರ್ಥಿಕ ಮಿತಿ ನಿಗದಿಪಡಿಸಿದೆ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು 10,00,000 ರೂ. ಮೀರುವ ಮತ್ತು 30,00,000 ರೂ. ಒಳಗಿನ ಮೊತ್ತ ಮತ್ತು ಸರಕಾರವು ನೇರವಾಗಿ 30,00,000 ರೂ. ಮೀರುವ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಅನುಮೋದಿಸಿದೆ.

ಹಾಗೆಯೇ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ಪಡೆಯದೇ ಪಂಚಾಯತ್‌ಗಳು ಯಾವುದೇ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ. ಆದರೆ ರಾಜ್ಯದ 11 ಜಿಲ್ಲೆಗಳ 41 ಗ್ರಾಮ ಪಂಚಾಯತ್‌ಗಳು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಕ್ರಿಯಾ ಯೋಜನೆ ಇಲ್ಲದೆಯೇ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದವು. ಇದರ ಮೊತ್ತ 64.89 ಲಕ್ಷ ರೂ.ನಷ್ಟಿತ್ತು. ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲಬುರಗಿ, ಮಂಡ್ಯ, ಮೈಸೂರು ಮತ್ತು ಉತ್ತರ ಕನ್ನಡದ ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳು ಈ ಪಟ್ಟಿಯಲ್ಲಿರುವುದು ವರದಿಯಿಂದ ಗೊತ್ತಾಗಿದೆ.

ಅದೇ ರೀತಿ ವಸೂಲಿ ಮಾಡಿದ್ದ ಮೊತ್ತದಲ್ಲೇ ಕಡಿಮೆ/ ಹೆಚ್ಚು ತೋರಿಸಿರುವ ಪಂಚಾಯತ್‌ಗಳ ಪಟ್ಟಿಯನ್ನೂ ಲೆಕ್ಕ ಪರಿಶೋಧನೆ ವರದಿಯಲ್ಲಿ ನೀಡಿದೆ. ನಿಯಮಗಳ ಪ್ರಕಾರ ನೀಡಲಾದ ರಸೀದಿಗಳ ಕಚೇರಿ ಪ್ರತಿಗಳನ್ನು ಆಧರಿಸಿ ಬೇಡಿಕೆ ರಿಜಿಸ್ಟರ್‌ನಲ್ಲಿ ಸಂಬಂಧಪಟ್ಟ ಕಾಲಂ ಅಡಿಯಲ್ಲಿ ವಸೂಲಾತಿಗಳನ್ನು ಅದೇ ದಿನ ನಮೂದಿಸಬೇಕು. ಇದನ್ನು ಕಚೇರಿ ಸಿಬ್ಬಂದಿ ವರ್ಗವು ಮಾಡಬೇಕು. ತೆರಿಗೆದಾರರಿಂದ ಹಣ ವಸೂಲಿ ಮಾಡುವ ವ್ಯಕ್ತಿಗೆ ಯಾವ ಸಂದರ್ಭದಲ್ಲಿಯೂ ಈ ರಿಜಿಸ್ಟರ್‌ಅನ್ನು ನೀಡಬಾರದು ಎಂದು ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಆದರೆ ‘ಗ್ರಾಮ ಪಂಚಾಯತ್‌ಯು ವಸೂಲಿ ಮಾಡಿದ ಮೊತ್ತವನ್ನು ಡಿಸಿಬಿ ವಹಿಯಲ್ಲಿ ಕಡಿಮೆ, ಹೆಚ್ಚು ನಮೂದಿಸುವ ಮೂಲಕ ಹಣ ದುರುಪಯೋಗ ಮಾಡಿರುವ ಪ್ರಕರಣಗಳು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿವೆ. ಇದೊಂದು ತೀವ್ರತರವಾದ ಹಣ ದುರುಪಯೋಗ ಪ್ರಕರಣವಾಗಿದೆ’

ಎಂದು ವರದಿಯಲ್ಲಿ ಲೆಕ್ಕ ಪರಿಶೋಧಕರು ವಿವರಿಸಿರುವುದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವ್ಯಕ್ತಿಯು ಸಂಸ್ಥೆಗೆ ಬರಬೇಕಾಗಿದ್ದ ಆದಾಯ, ವರಮಾನವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ಸರಕಾರಕ್ಕೆ ನಷ್ಟ ಉಂಟು ಮಾಡಿರುವವರನ್ನು ಸೇವಾ ನಿಯಮಗಳ ಅನ್ವಯ ಗುರುತರ ಶಿಕ್ಷೆಗೆ ಗುರಿಪಡಿಸಬೇಕು ಎಂದೂ ಲೆಕ್ಕ ಪರಿಶೋಧಕರು ಶಿಫಾರಸು ಮಾಡಿರುವುದು ಗೊತ್ತಾಗಿದೆ.

ರಾಜ್ಯದ 9 ಜಿಲ್ಲೆಗಳ 115 ಪಂಚಾಯತ್‌ಗಳಲ್ಲಿ ಡಿಸಿಬಿ ವಹಿಯಲ್ಲಿ ಕಡಿಮೆ/ಹೆಚ್ಚು ನಮೂದಿಸಿ ಹಣ ದುರುಪಯೋಗವಾಗಿವೆ. ಇದರ ಮೊತ್ತ ಸೆಕ್ಷನ್ ಎ ರಲ್ಲಿ 28.89 ಲಕ್ಷ ಮತ್ತು ಸೆಕ್ಷನ್ ಬಿ ರಲ್ಲಿ 0.33 ಲಕ್ಷ ರೂ. ಎಂದು ವರದಿಯಲ್ಲಿ ನೀಡಿದೆ. ರಾಜ್ಯದ 2 ಜಿಲ್ಲೆಗಳ 154 ಗ್ರಾಮ ಪಂಚಾಯತ್‌ಗಳು ಭದ್ರತಾ ಠೇವಣಿಯನ್ನು ಪಡೆಯದೇ ಕಾಮಗಾರಿ ಕೈಗೊಂಡಿದ್ದವು. ಇದರ ಮೊತ್ತ 1.41 ಕೋಟಿ ರೂ.ಯಷ್ಟಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮ ಪಂಚಾಯತ್‌ನಲ್ಲಿ 14/15ನೇ ಹಣಕಾಸು ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳಲ್ಲಿ ವಿಕಲಚೇತನರಿಗೆ ಸ್ನೇಹಿ ಶೌಚಾಲಯ ನಿರ್ಮಾಣ, ಶಾಲಾ ಕೊಠಡಿ ದುರಸ್ತಿ, ಸಿಸಿ ಚರಂಡಿ ನಿರ್ಮಾಣ, ಚರಂಡಿಗಳಲ್ಲಿ ಹೂಳು ತೆಗೆದು ಕಸ ವಿಲೇವಾರಿ ಮಾಡುವ ಕಾಮಗಾರಿಗಳನ್ನು ನಡೆಸಿತ್ತು. ಇದರ ಮೊತ್ತ ಒಟ್ಟು 45,82,047 ರೂ. ಅಗಿತ್ತು. ನಿಯಮಗಳ ಪ್ರಕಾರ ಶೇ.5ರಂತೆ 2,29,102 ರೂ.ಗಳನ್ನು ಭದ್ರತಾ ಠೇವಣಿಯನ್ನು ಸಂಬಂಧಿತ ಗುತ್ತಿಗೆದಾರರಿಂದ ಪಡೆಯಬೇಕಿತ್ತು. ಆದರೆ ಈ ಪಂಚಾಯತ್‌ನಲ್ಲಿ ಭದ್ರತಾ ಠೇವಣಿಯನ್ನು ಪಡೆದುಕೊಂಡಿಲ್ಲ ಮತ್ತು ಈ ಕುರಿತು ಯಾವುದೇ ದಾಖಲೆಗಳನ್ನೂ ನಿರ್ವಹಿಸಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News