×
Ad

600 ವರ್ಷಗಳ ಇತಿಹಾಸವುಳ್ಳ ಬಿದ್ರಿ ಕಲೆ ಅವನತಿಯತ್ತ

Update: 2025-06-26 13:55 IST

ಬೆಂಗಳೂರು: ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಬಿದ್ರಿ ಕಲೆ ಅವಸಾನದತ್ತ ಸಾಗಿದೆ. ಬಿದ್ರಿ ಕಲೆಯನ್ನೇ ಜೀವನಾಧಾರವಾಗಿ ಮಾಡಿಕೊಂಡಿದ್ದ 250ಕ್ಕೂ ಹೆಚ್ಚು ಕಲಾವಿದರ ಕುಟುಂಬಗಳು ಇಂದಿಗೂ ಸಂಕಷ್ಟ ಅನುಭವಿಸುತ್ತಿವೆ. ಬಿದ್ರಿ ಕಲೆಗೆ ಕೇಂದ್ರ ಸರಕಾರದಿಂದ 2023ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದ್ದರೂ, ಈ ಕಲೆಯನ್ನು ಪ್ರೋತ್ಸಾಹಿಸಬೇಕಾದ ಸರಕಾರ ಕಂಡೂ ಕಾಣದಂತೆ ಮೌನಕ್ಕೆ ಜಾರಿದೆ. ಕುಶಲಕರ್ಮಿಗಳು ವಂಶಪರಂಪರಾಗತವಾಗಿ ಬಂದಿದ್ದ ಬಿದ್ರಿ ಕಲೆಯನ್ನು ಬಿಟ್ಟು ಬೇರೆ ಉದ್ಯೋಗ ಅರಸಿಕೊಂಡು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ.

<ಇತಿಹಾಸದ ಪುಟದಲ್ಲಿ ಖ್ಯಾತಿ ಪಡೆದ ಕಲೆ: ಕೆಲವು ಮೂಲಗಳು ಬಿದ್ರಿ ಕಲೆಯನ್ನು ಖ್ವಾಜಾ ಮುಈನುದ್ದೀನ್ ಚಿಶ್ತಿ ಮತ್ತು ಅವರ ಅನುಯಾಯಿಗಳು ಭಾರತಕ್ಕೆ ತಂದರು ಎನ್ನುತ್ತಿದೆ. ಈ ಕಲೆಯು ಒಂದು ಪ್ರಾಚೀನ ಕರಕುಶಲ ಕಲೆಯಾಗಿದ್ದು, ಪರ್ಷಿಯನ್, ಅರೇಬಿಕ್ ಮತ್ತು ಸ್ಥಳೀಯ ಕರಕುಶಲತೆಯ ಸಮ್ಮಿಲನವನ್ನು ತೋರಿಸುತ್ತದೆ. ಬೀದರ್‌ನಿಂದ ಉಗಮವಾದ ಬಿದ್ರಿ ಕಲೆ, ಭಾರತದ ಅತ್ಯಂತ ವಿಶಿಷ್ಟ ಲೋಹ ಕರಕುಶಲ ಕಲೆಗಳಲ್ಲಿ ಒಂದಾಗಿದೆ. 14ನೇ ಶತಮಾನದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಇದು ಜನ್ಮ ತಾಳಿತು ಎನ್ನುತ್ತಾರೆ ಇತಿಹಾಸಕಾರರು. ಬಿದ್ರಿ ಕಲೆಯ ವಿಶೇಷತೆಯೆಂದರೆ ತಾಮ್ರ ಮತ್ತು ಸತುವಿನ ಮಿಶ್ರಲೋಹದ ಮೇಲೆ ಬೆಳ್ಳಿಯ ಒಳಕೊರೆತ (ಇನ್‌ಲೇ) ಕೆಲಸ, ಇದು ಕಪ್ಪು ಹಿನ್ನೆಲೆಯಲ್ಲಿ ಆಕರ್ಷಕವಾಗಿ ಹೊಳೆಯುತ್ತದೆ. ಈ ಕಲಾಕೃತಿಗಳು ಸೂಕ್ಷ್ಮ ಕೆತ್ತನೆ ಮತ್ತು ಕಲಾತ್ಮಕತೆಯಿಂದ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ.

ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಲಂಡನ್ ಸೇರಿದಂತೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿದ್ರಿ ವಸ್ತುಗಳನ್ನು ಸಾವಿರಾರು ರೂ. ಕೊಟ್ಟು ಖರೀದಿ ಮಾಡುತ್ತಾರೆ. ಹೀಗೆ ಬಿದ್ರಿ ಕಲೆಯು ಬೀದರ್‌ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗೆ ಸಾಕ್ಷಿಯಾಗಿದೆ.

ಮಾರುಕಟ್ಟೆಯ ಕೊರತೆ: ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಯಿಂದ ವಸ್ತುಗಳನ್ನು ತಯಾರು ಮಾಡಲು ತಿಂಗಳುಗಳೇ ಬೇಕಾಗುತ್ತದೆ. ಈ ಕಲೆಯ ಮೂಲಕ ಗೊಂಬೆಗಳು, ಬಳೆಗಳು, ಕೀ ಚೈನ್, ಮಹಾತ್ಮರ ಮೂರ್ತಿಗಳು, ದೇವರ ವಿಗ್ರಹಗಳನ್ನು ತಾಮ್ರ ಹಾಗೂ ಸತುಗಳಿಂದ ತಯಾರಿಸಿ ಅದರ ಮೇಲೆ ಕೆತ್ತಿಸುತ್ತಾರೆ. ಹೀಗೆ ಕಷ್ಟಪಟ್ಟು ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಕೊರತೆಯು ಎದ್ದು ಕಾಣುತ್ತದೆ. ಇದರಿಂದಾಗಿ ಹಲವು ಮಾರಾಟ ಮಳಿಗೆಗಳಲ್ಲಿ ಬಿದ್ರಿ ಕಲಾಕೃತಿಗಪಳು ಧೂಳು ಹಿಡಿಯುತ್ತಿದ್ದು, ಅಂಗಡಿಗಳಿಗೆ ಬಾಗಿಲು ಹಾಕುವ ಸ್ಥಿತಿ ಕೂಡ ಬಂದಿದೆ. ಕೋವಿಡ್ ಬಳಿಕ ಐತಿಹಾಸಿಕ ಬಿದ್ರಿ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ ಎಂದು ತಿಳಿದ ಅದೆಷ್ಟೋ ಬಿದ್ರಿ ಕಲೆ ಪರಿಣಿತರು ಈ ಕಲೆಯಿಂದ ದೂರ ಸರಿಯುತ್ತಿದ್ದಾರೆ. ಅಲ್ಲದೇ ಬಿದ್ರಿ ಕಲೆಯ ಪ್ರದರ್ಶನ ಹಾಗೂ ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಈ ಕಲೆಗೆ ಜೀವ ತುಂಬಲು ಪ್ರಯತ್ನಗಳಾಗಬೇಕು ಎನ್ನುವುದು ಕರಕುಶಲ ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಹಯೋಗ್ ಸಂಸ್ಥೆಯ ನಿರ್ದೇಶಕ ಶಫೀವುದ್ದೀನ್ ಮನವಿಯಾಗಿದೆ.

ಸಾರ್ವಜನಿಕ ಸಹಕಾರವೂ ಅಗತ್ಯ

ಕೆಲ ತಿಂಗಳ ಹಿಂದೆ ಒಂದು ಗ್ರಾಂ ಬೆಳ್ಳಿಯ ದರ 400 ರೂ. ಇತ್ತು. ಈಗ 1 ಸಾವಿರ ರೂ. ದಾಟಿದೆ. ಇದರಿಂದ ಬಿದ್ರಿ ಕಲಾಕೃತಿ ಉದ್ಯಮ ನೆಲಕಚ್ಚಿದೆ. ಇದನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು ನಷ್ಟ ಅನುಭವಿಸಿ ಕಲೆಯನ್ನೇ ಬಿಟ್ಟು ಹೋಗುವ ಸ್ಥಿತಿ ಎದುರಾಗಿದೆ. ಬಿದ್ರಿ ಕಲೆಯ ಸೌಂದರ್ಯ ಮತ್ತು ಕಲಾತ್ಮಕತೆಯನ್ನು ಉಳಿಸಲು ಸರಕಾರ ಮತ್ತು ಸಾರ್ವಜನಿಕರ ಸಹಕಾರ ಅಗತ್ಯ. ಈ ಅಪರೂಪದ ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ. ಹ್ಯಾಂಡಿ ಕ್ರಾಫ್ಟ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ವತಿಯಿಂದ ನೋಂದಾಯಿತ ಬಿದ್ರಿ ಕಲಾವಿದರ ದಾಖಲೆಗಳನ್ನು ಪಡೆಯಲಾಗಿದ್ದು, ಇನ್ನೂ ಬಹುತೇಕರಿಗೆ ಪ್ರೋತ್ಸಾಹಧನ ತಲುಪಿಲ್ಲ ಎನ್ನುತ್ತಾರೆ ಕಲಾವಿದರು.

ಪದ್ಮಶ್ರೀ ಪುರಸ್ಕೃತ ಕಲಾವಿದನ ನೋವಿಗೆ ಸಿಗದ ಸ್ಪಂದನೆ

ಪದ್ಮಶ್ರೀ ಪುರಸ್ಕೃತರಾದ ‘ಬಿದ್ರಿ ಮಾಸ್ಟರ್’ ಎಂದೇ ಪ್ರಸಿದ್ಧಿ ಪಡೆದಿದ್ದ ಹೆಸರಾಂತ ಬಿದ್ರಿ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ ಅವರು ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದು, ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಈಗ ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಕಲೆಯ ಮಹತ್ವವನ್ನು ಸಾಗರದಾಚೆಗೂ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದಕ್ಕಾಗಿಯೇ ಇವರಿಗೆ ಕೇಂದ್ರ ಸರಕಾರವು 2023ನೇ ಸಾಲಿನಲ್ಲಿ ಪದ್ಮಶ್ರೀ ನೀಡಿ ಗೌರವಿಸಿತ್ತು. ಅನೇಕ ರಾಷ್ಟ್ರ, ರಾಜ್ಯ ಪ್ರಶಸ್ತಿಗಳೂ ಸಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಹಮ್ಮದ್ ಖಾದ್ರಿಯವರ ಹಿರಿಯ ಮಗ ಫರ್ಹಾನ್ ಷಾ ರಶೀದ್, ನಮ್ಮ ತಂದೆಯ ಪರಿಸ್ಥಿತಿಯ ಬಗ್ಗೆ ರಾಜ್ಯ ಸರಕಾರ, ಜಿಲ್ಲೆಯ ಸಚಿವರಿಗೆ ಪತ್ರ ಬರೆದು ವಿವರಿಸಿದ್ದೇನೆ. ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸರಕಾರ ಸ್ಪಂದಿಸಿದರೆ ನಮ್ಮ ತಂದೆಯ ಆರೋಗ್ಯ ಚೇತರಿಕೆಗೆ ಅನುಕೂಲವಾಗಬಹುದು ಎಂದು ಹೇಳಿಕೊಂಡಿದ್ದಾರೆ.

ಕಲಾವಿದರಿಗೆ ಪ್ರೋತ್ಸಾಹ ಬೇಕಿದೆ

ಯಾವುದೇ ಒಂದು ವಸ್ತುವಿನ ಮೇಲೆ ಅಲಂಕಾರಿಕ ಚಿತ್ರ ಬೀಡಿಸಬೇಕಾದರೆ ಕನಿಷ್ಠ 2-3 ದಿನಗಳು ಬೇಕಾಗುತ್ತದೆ. ಅಲ್ಲದೇ ಸ್ವಲ್ಪಯಾಮಾರಿದೂ ಇಡೀ ವಸ್ತು ಹಾಳಾಗಿಬಿಡುತ್ತವೆ. ಇಂತಹ ಸೂಕ್ಷ್ಮ ಕಲೆಯನ್ನು ಕರಗತಮಾಡಿಕೊಂಡು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ. ಈ ಕಲೆಗೆ ಬೇಕಾದ ವಸ್ತುಗಳನ್ನು ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಸಹ ಸರಕಾರ ಸರಿಯಾಗಿ ಪೂರೈಸುತ್ತಿಲ್ಲ. ಈ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕಲಾವಿದರ ಬಗ್ಗೆ ಸರಕಾರ ನಿಷ್ಕಾಳಜಿ ತೋರುತ್ತಿರುವುದೇ ಕಲಾವಿದರ ಬದುಕು ಬೀದಿಗೆ ಬರಲು ಕಾರಣ ಎನ್ನುತ್ತಾರೆ ಕುಶಲಕರ್ಮಿಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಇಬ್ರಾಹಿಂ ಖಲೀಲ್ ಬನ್ನೂರು

contributor

Similar News