×
Ad

"ʼಫುನ್ಸುಖ್ ವಾಂಗ್ಡುʼ ಸಾಯಬಾರದು": ಸೋನಂ ವಾಂಗ್ಚುಕ್ ಗೆ ಬೆಂಬಲ ನೀಡುವಂತೆ ಕೋರಿದ ‘3 ಈಡಿಯಟ್ಸ್’ ನಟ ಓಮಿ ವೈದ್ಯ

Update: 2026-07-14 17:31 IST

 ನಟ ಓಮಿ ವೈದ್ಯ(X \ @OmiOneKenobe) , ಸೋನಂ ವಾಂಗ್ಚುಕ್(PTI)

ಓಮಿ ವೈದ್ಯ , 

ಭಾವನಾತ್ಮಕ ವೀಡಿಯೋ ಸಂದೇಶದ ಮೂಲಕ ಓಮಿ ವೈದ್ಯ ಅವರು ವಾಂಗ್ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ದಿಲ್ಲಿಯ ಜಂತರ್ ಮಂತರ್ ನಲ್ಲಿ ಪ್ರಸ್ತುತ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣ ತಜ್ಞ ಮತ್ತು ಹವಾಮಾನ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರಿಗೆ ನಟ ಓಮಿ ವೈದ್ಯ ಅವರು ಬೆಂಬಲ ಸೂಚಿಸಿದ್ದಾರೆ.

ಭಾವನಾತ್ಮಕ ವೀಡಿಯೋ ಸಂದೇಶದ ಮೂಲಕ ಓಮಿ ವೈದ್ಯ ಅವರು ವಾಂಗ್ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಆಮಿರ್ ಖಾನ್ ರ ‘3 ಈಡಿಯಟ್ಸ್’ ಸಿನಿಮಾದಲ್ಲಿ ನಿರ್ವಹಿಸಿದ ದಂತಕತೆಯಾಗಿರುವ ‘ಫುನ್ಸುಖ್ ವಾಂಗ್ಡು’ ಪಾತ್ರಕ್ಕೆ ಪ್ರೇರಣೆ ಸೋನಂ ವಾಂಗ್ಚುಕ್ ಎಂದು ಅವರು ಎಲ್ಲರಿಗೂ ನೆನಪಿಸಿದ್ದಾರೆ.

‘ಇನ್ಸ್ಟಾಗ್ರಾಂ’ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹಂಚಿಕೊಂಡಿರುವ ಓಮಿ ವೈದ್ಯ ಅವರು, ಸಾರ್ವಜನಿಕರಿಗೆ ಭಾವನಾತ್ಮಕ ವಿನಂತಿ ಮಾಡಿಕೊಳ್ಳುವ ಮೊದಲು ಸ್ವತಃ ಪರಿಚಯಿಸಿಕೊಂಡರು.

“ಫುನ್ಸುಖ್ ವಾಂಗ್ಡು ಸಾಯುವುದನ್ನು ನಾನು ಬಯಸುವುದಿಲ್ಲ. ಹೆಲೋ ಈಡಿಯಟ್ಸ್, ಪರಿಚಯವಾಯಿತೆ, ಇದು ಓಮಿ ವೈದ್ಯ. ‘3 ಈಡಿಯಟ್ಸ್’ ಸಿನಿಮಾದಲ್ಲಿ ಚತುರ್ ಪಾತ್ರವನ್ನು ನಿರ್ವಹಿಸಿದ್ದೇನೆ ಮತ್ತು ‘ದಿ ಆಫೀಸ್’ ನ ಸಾದಿಕ್ ಪಾತ್ರ ನಿರ್ವಹಿಸಿದ್ದೇನೆ. ನಾನು ನಿಮಗಾಗಿ ಒಂದು ಮುಖ್ಯ ಸಂದೇಶ ತಂದಿರುವೆ. ನಾನು ಸಾಮಾನ್ಯವಾಗಿ ಇದು ಮಾಡುವುದಿಲ್ಲ. ಆದ್ದರಿಂದ ದಯವಿಟ್ಟು ಕೇಳಿ. ಬಾಲಿವುಡ್ ನ ಅತ್ಯಂತ ಪ್ರೀತಿಪಾತ್ರ ಪಾತ್ರಗಳಲ್ಲಿ ಒಂದಾದ ‘ಫುನ್ಸುಖ್ ವಾಂಗ್ಡು’ ನಿಜ ಜೀವನದಲ್ಲಿ ಲಡಾಖಿ ಎಂಜಿನಿಯರ್, ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ಸೋನಂ ವಾಂಗ್ಚುಕ್ ಅವರನ್ನು ಆಧರಿಸಿದೆ ಎಂದು ನಿಮಗೆ ತಿಳಿದಿದೆಯೆ? ನಾನು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದೇನೆ. ಅವರು ಸಾಕಷ್ಟು ಆಸಕ್ತಿದಾಯಕ ಪಾತ್ರ” ಎಂದು ಹೇಳಿದ್ದಾರೆ.

ವಾಂಗ್ಚುಕ್ ಅವರನ್ನು ‘ವಿನಮ್ರ’ ಮತ್ತು ‘ಸಾಕಷ್ಟು ಪ್ರಭಾವಶಾಲಿ ವ್ಯಕ್ತಿ’ ಎಂದು ಕರೆದಿರುವ ಓಮಿ ವೈದ್ಯ, ಅವರ ಕೊಡುಗೆಗಳನ್ನು ಒತ್ತಿ ಹೇಳಿದರು.

Full View

“ಪ್ರಸ್ತುತ ಅವರು ದೀರ್ಘ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆಯಂಶ ತುಂಬಾ ಕಡಿಮೆಯಾಗಿದೆ. ನಿಮಗೆ ಈ ಬಗ್ಗೆ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ. ಮಾಧ್ಯಮಗಳು ಇದನ್ನು ವರದಿ ಮಾಡುತ್ತಿವೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇದು ಬಹಳ ಮುಖ್ಯ ವಿಷಯ. ವಿಭಿನ್ನ ಅಭಿಪ್ರಾಯಗಳ ಹೊರತಾಗಿಯೂ ಜನರು ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಆಶಿಸುತ್ತೇನೆ. ನೀವು ಅವರ ಅಭಿಪ್ರಾಯ ಒಪ್ಪುತ್ತೀರೋ ಇಲ್ಲವೋ, ಆ ವ್ಯಕ್ತಿ ಸಾಯುವುದನ್ನು ನಾನು ನಿಜವಾಗಿಯೂ ಬಯಸುವುದಿಲ್ಲ” ಎಂದು ಓಮಿ ವೈದ್ಯ ಹೇಳಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೇಳಿರುವ ಪ್ರಕಾರ ಉಪವಾಸದ ಸಮಯದಲ್ಲಿ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಅವರು ಸುಮಾರು 9 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ವಾಂಗ್ಚುಕ್ ‘ನೀಟ್’ ಪರೀಕ್ಷೆಯ ಅಕ್ರಮಗಳ ವಿರುದ್ಧ ಪ್ರತಿಭಟನಾ ನಿರತರಾಗಿದ್ದಾರೆ. ಜೊತೆಗೆ ಶಿಕ್ಷಣ, ಲಡಾಖ್ ನ ಸ್ವಾಯತ್ತತೆ ಮತ್ತು ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಜೊತೆಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾದ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ಪರಿಹಾರವನ್ನು ಕೇಳಲಾಗುತ್ತಿದೆ. ಜುಲೈ 20ರಂದು ಮಳೆಗಾಲದ ಅಧಿವೇಶನದ ಸಮಯದಲ್ಲಿ ಸಂಸತ್ತಿಗೆ ಶಾಂತಿಯುತ ಮೆರವಣಿಗೆಯನ್ನು ಸಿಜೆಪಿ ಘೋಷಿಸಿದೆ.

ಕಾರ್ಯಕರ್ತ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ನಟನ ವೀಡಿಯೋವನ್ನು ಮರುಹಂಚಿಕೊಂಡಿದ್ದಾರೆ. “ಇದೀಗ ‘3 ಈಡಿಯಟ್ಸ್’ನ ಕನಿಷ್ಠ ಒಂದು ಪಾತ್ರ ಸೋನಂ ಅವರ ಪರವಾಗಿ ಮಾತನಾಡಿದ್ದಾರೆ. ಆಮಿರ್ ಖಾನ್ ಏನು ಹೇಳುತ್ತಾರೆ ಎಂದು ಕಾಯುತ್ತಿದ್ದೇನೆ” ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಓಮಿ ವೈದ್ಯ ಅವರು ರಾಜ್ಕುಮಾರ್ ಹಿರಾನಿ ಅವರ ‘3 ಈಡಿಯಟ್ಸ್’ ಸಿನಿಮಾದಲ್ಲಿ ಚತುರ್ ರಾಮಲಿಂಗಂ ಪಾತ್ರ ನಿರ್ವಹಿಸಿದ್ದರು. ಸ್ಮರಣೀಯ ಅಭಿನಯಕ್ಕಾಗಿ ಓಮಿ ವೈದ್ಯ ಗುರುತಿಸಿಕೊಂಡಿದ್ದಾರೆ. ಅವರು ‘ದಿಲ್ ತೋ ಬಚ್ಚಾ ಹೆಜಿ’, ‘ಪ್ಲೇಯರ್ಸ್’, ‘ಜೋಡಿ ಬ್ರೇಕರ್ಸ್’, ಮತ್ತು ‘ದೇಸಿ ಬಾಯ್ಸ್’ನಂತರ ಚಿತ್ರಗಳಲ್ಲಿ ನಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News