×
Ad

Tamil Nadu ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧದ ಮೊಕದ್ದಮೆಯಲ್ಲಿ ಗೆಲ್ಲಲು ಇಶಾ ಫೌಂಡೇಶನ್‌ ಗೆ ಕೇಂದ್ರ ಸರ್ಕಾರ ಹೇಗೆ ಸಹಾಯ ಮಾಡಿತು?

Update: 2026-07-14 00:16 IST

Photo Credit : newslaundry

ಆಕಾಶ್‌ ದೇಶ್ಮಾನೆ - newslaundry. com ವರದಿ

"ನೋಡಿ ಸ್ವಾಮಿ... ನನ್ನ ಮಾತು ಕೇಳಿ, ಈ ದೇಶದಲ್ಲಿರುವ ಪ್ರತಿಯೊಂದು ಕಾನೂನನ್ನೂ ನಾವು ಪಾಲಿಸಿದ್ದೇವೆ. ಏನಾದರೂ ಸಣ್ಣಪುಟ್ಟ ಲೋಪದೋಷಗಳಿದ್ದರೆ, ಅವುಗಳನ್ನು ನಾವು ಸರಿಪಡಿಸಿದ್ದೇವೆ. ಅದು ಬಹಳ ದಿನಗಳ ಹಿಂದೆ, ಅಂದರೆ 20 ವರ್ಷಗಳ ಹಿಂದೆ ನಡೆದಿದ್ದು... ಯಾವುದೋ ಒಂದು ಸಣ್ಣ ತಪ್ಪು... ಅದನ್ನು ನಾವು ಈಗ ಸರಿಪಡಿಸಿದ್ದೇವೆ. 20 ವರ್ಷಗಳ ಹಿಂದೆ ಏನೋ ಒಂದು ಸಮಸ್ಯೆ ಇತ್ತು, ಅದನ್ನು ನಾವು ಬಗೆಹರಿಸಿದ್ದೇವೆ."

ಇದು 2022ರ ಜೂನ್ ನಲ್ಲಿ BBC ತಮಿಳು ವಾಹಿನಿಯ ಪತ್ರಕರ್ತರೊಬ್ಬರ ಪ್ರಶ್ನೆಗೆ ಯೋಗ ಮತ್ತು ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ (ಸದ್ಗುರು) ಅವರು ನೀಡಿದ ಉತ್ತರ. 1992ರಲ್ಲಿ ತಾವು ಸ್ಥಾಪಿಸಿದ ಇಶಾ ಫೌಂಡೇಶನ್ ಸಂಸ್ಥೆಗೆ ಸಂಬಂಧಿಸಿದ ವಿವಾದದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸದ್ಗುರು ಈ ರೀತಿ ಪ್ರತಿಕ್ರಿಯಿಸಿದ್ದರು. ಈ ಪ್ರಶ್ನೆ ಮುಖ್ಯವಾಗಿ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದ ಪ್ರಧಾನ ಕಚೇರಿಗೆ ಸಂಬಂಧಿಸಿದ್ದಾಗಿತ್ತು.

ವಿಶಾಲವಾಗಿ ಹರಡಿರುವ ಈ ಆಶ್ರಮ ಸಂಕೀರ್ಣವು 4.87 ಲಕ್ಷ ಚದರ ಮೀಟರ್ ಗಳಷ್ಟು ವಿಸ್ತಾರವಾಗಿದೆ. ಇಲ್ಲಿರುವ ಬಹುತೇಕ ಕಟ್ಟಡಗಳನ್ನು 1994 ಮತ್ತು 2012ರ ನಡುವೆ ನಿರ್ಮಿಸಲಾಗಿದೆ. ವೆಳ್ಳಿಯಂಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ಇಕ್ಕರೈ ಬೊಲುವಂಪಟ್ಟಿ ಗ್ರಾಮದಲ್ಲಿ ಈ ಕೇಂದ್ರವಿದೆ. ಆನೆಗಳ ಆವಾಸಸ್ಥಾನವಾಗಿರುವ ಬೊಲಂಪಟ್ಟಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಇದು ತೀರಾ ಹತ್ತಿರದಲ್ಲಿದೆ. ಸಾಮಾನ್ಯವಾಗಿ ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಬೇಕಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇಷ್ಟಾದರೂ, ಇಶಾ ಫೌಂಡೇಶನ್ ಯಾವುದೇ ಅಗತ್ಯ ಸರ್ಕಾರಿ ಅನುಮತಿಗಳನ್ನು ಪಡೆಯದೆಯೇ ಕೊಯಮತ್ತೂರಿನಲ್ಲಿ ತನ್ನ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸಿದೆ ಎಂದು ಸ್ಥಳೀಯ ಕಾರ್ಯಕರ್ತರು ಮತ್ತು ಅಧಿಕಾರಿಗಳು ಆರೋಪಿಸಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಲು BBC ಪತ್ರಕರ್ತರು ಬಯಸಿದ್ದರು. ಆದರೆ ಜಗ್ಗಿ ವಾಸುದೇವ್ ಅವರು ಇದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಈ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 20 ವರ್ಷಗಳ ಹಳೆಯ "ಸಣ್ಣ ಲೋಪದೋಷ"ವನ್ನು ಈಗಾಗಲೇ ಸರಿಪಡಿಸಲಾಗಿದೆ ಎಂದು ಜಗ್ಗಿ ಹೇಳಿದರು. ಇದಾದ ಕೆಲವೇ ಕ್ಷಣಗಳಲ್ಲಿ ಸಂದರ್ಶನವು ಹಠಾತ್ ಆಗಿ ಕೊನೆಗೊಂಡಿತು. ಇದರ ಬೆನ್ನಲ್ಲೇ, "ಈ ಹಂತದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗಿದ್ದವರು ಮೂರು ಕ್ಯಾಮೆರಾಗಳ ರೆಕಾರ್ಡಿಂಗ್ ಅನ್ನು ಬಲವಂತವಾಗಿ ನಿಲ್ಲಿಸಿದರು" ಎಂಬ ಸಂದೇಶವನ್ನು ಆ ಸುದ್ದಿ ವಾಹಿನಿ ಬಿತ್ತರಿಸಿತು.

ಈ ಸಂದರ್ಶನ ಮತ್ತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಜಗ್ಗಿ ನಿರಾಕರಿಸಿದ ಘಟನೆಯು, ಈ ಸುದೀರ್ಘ ವಿವಾದದ ಮತ್ತೊಂದು ಪ್ರಮುಖ ತಿರುವಾಯಿತು. ಅಷ್ಟರಲ್ಲಾಗಲೇ ಇಶಾ ಫೌಂಡೇಶನ್ನ ಪರಿಸರ ಕಾಳಜಿಯ ಇತಿಹಾಸವು ಸಾರ್ವಜನಿಕರ ಕುತೂಹಲ ಮತ್ತು ಗಮನವನ್ನು ಸೆಳೆದಿತ್ತು. ಸಂಸ್ಥೆಯು ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವಿಮರ್ಶಕರು ದೂರಿದ್ದರು. ಇಶಾ ಫೌಂಡೇಶನ್ ಆವರಣದಲ್ಲಿರುವ ನೂರಾರು ಕಟ್ಟಡಗಳು ಮತ್ತು ಅಲ್ಲಿಗೆ ಬರುವ ಪ್ರವಾಸಿಗರ ದಂಡು, ಕಾಲಾನಂತರದಲ್ಲಿ ಆನೆಗಳ ಸಂಚಾರ ಮಾರ್ಗಕ್ಕೆ ಅಡ್ಡಿಯುಂಟುಮಾಡಿದೆ ಎಂದು ಹಿಂದಿನ ತನಿಖಾ ವರದಿಗಳು ಗಮನಿಸಿದ್ದವು.

ಕೆಲವು ಅಧಿಕಾರಿಗಳು ಈ ವಿಷಯದಲ್ಲಿ ಕಣ್ಣು ಮುಚ್ಚಿ ಕುಳಿತರೆ, ಇನ್ನು ಕೆಲವರು ಕ್ರಮ ಕೈಗೊಳ್ಳಲು ಪ್ರಯತ್ನಿಸಿ ಅಲ್ಪ ಮಟ್ಟದ ಯಶಸ್ಸು ಕಂಡರು. ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (TNPCB) ಮತ್ತು ಇಶಾ ಫೌಂಡೇಶನ್ ನಡುವೆ ಮದ್ರಾಸ್ ಹೈಕೋರ್ಟ್ನಲ್ಲಿ ನಡೆದ ಇಂತಹದ್ದೇ ಒಂದು ಪ್ರಕರಣದ ಕಥೆ ಇಲ್ಲಿದೆ.

2022ರ ಜೂನ್ನಲ್ಲಿ BBC ತಮಿಳು ವಾಹಿನಿಯ ಅಪೂರ್ಣ ಸಂದರ್ಶನ ಪ್ರಸಾರವಾದಾಗ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ನ್ಯಾಯಾಲಯ ಇನ್ನು ತೀರ್ಪು ನೀಡಿರಲಿಲ್ಲ. ಅದೇ ವರ್ಷದ ಡಿಸೆಂಬರ್ ವೇಳೆಗೆ ಕೋರ್ಟ್ ಇಶಾ ಫೌಂಡೇಶನ್ ಪರವಾಗಿ ತೀರ್ಪು ನೀಡಿತು. ಫೌಂಡೇಶನ್‌ ಗೆ TNPCB ನೀಡಿದ್ದ ಶೋಕಾಸ್ ನೋಟಿಸ್ ಅನ್ನು ರದ್ದುಗೊಳಿಸಿದ ನ್ಯಾಯಾಲಯ, ತನ್ನ ಪ್ರಧಾನ ಕಚೇರಿಯಲ್ಲಿ ಈ ಹಿಂದೆ ಕೈಗೊಂಡಿದ್ದ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಸಂಸ್ಥೆಯು ಪರಿಸರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ತೀರ್ಪು ನೀಡಿತು. 2025ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಕೂಡ ಮದ್ರಾಸ್ ಹೈಕೋರ್ಟ್ನ ಈ ತೀರ್ಪನ್ನು ಎತ್ತಿಹಿಡಿಯಿತು.

ಇದು ಹೆಚ್ಚಿನ ಜನರಿಗೆ ತಿಳಿದಿಲ್ಲದಿದ್ದರೂ, ಸುಪ್ರೀಂ ಕೋರ್ಟ್ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್ನ ತೀರ್ಪು ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ಅಧಿಕಾರಿಗಳು ನೀಡಿದ ಎರಡು ಸ್ಪಷ್ಟೀಕರಣಗಳನ್ನು ಆಧರಿಸಿತ್ತು ಎಂಬುದು ಸಾರ್ವಜನಿಕ ದಾಖಲೆಗಳಿಂದ ತಿಳಿದುಬರುತ್ತದೆ. ಈ ಸ್ಪಷ್ಟೀಕರಣಗಳು ಇಶಾ ಫೌಂಡೇಶನ್ ನ ವಾದವನ್ನು ಸಮರ್ಥಿಸಿದ್ದವು. ಆದರೆ ಸಚಿವಾಲಯವು ಈ ಸ್ಪಷ್ಟೀಕರಣಗಳಲ್ಲಿ ಒಂದನ್ನು ಏಕೆ ನೀಡಿತು ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ.

ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದಾಗ, ಇಶಾ ಫೌಂಡೇಶನ್ನ ಪ್ರತಿನಿಧಿಯೊಬ್ಬರು ಕೇಂದ್ರ ಪರಿಸರ ಸಚಿವಾಲಯಕ್ಕೆ ಕಳುಹಿಸಿದ ಮನವಿಯ ಮೇರೆಗೆ ಸರ್ಕಾರವು ಈ ಹಸ್ತಕ್ಷೇಪ ಮಾಡಿದೆ ಎಂಬುದನ್ನು ಈ ಹಿಂದೆ ಬಹಿರಂಗವಾಗದ ಕೆಲವು ದಾಖಲೆಗಳು ಪುಷ್ಟೀಕರಿಸುತ್ತವೆ.ʼThe News Minute' ಪರಿಶೀಲಿಸಿರುವ ದಾಖಲೆಗಳಲ್ಲಿ, ಇಶಾ ಫೌಂಡೇಶನ್ ಪ್ರತಿನಿಧಿ ಕಳುಹಿಸಿದ ಪತ್ರ, ಈ ಮನವಿಯ ಕುರಿತು ಸಚಿವಾಲಯದ ವಿಜ್ಞಾನಿಗಳ ನಡುವೆ ನಡೆದ ಆಂತರಿಕ ಚರ್ಚೆಗಳ ಫೈಲ್ ನೋಟ್ ಗಳು, ಶಿಕ್ಷಣ ಮತ್ತು ಪರಿಸರ ಸಚಿವಾಲಯಗಳ ಅಧಿಕಾರಿಗಳ ನಡುವಿನ ಪತ್ರವ್ಯವಹಾರಗಳು ಹಾಗೂ ಪರಿಸರ ಸಚಿವಾಲಯವು ಈ ಪ್ರಕರಣದಲ್ಲಿ ಸಲ್ಲಿಸಿದ ಅಫಿಡವಿಟ್ ಗಳು ಸೇರಿವೆ.

ಈ ಸ್ಪಷ್ಟೀಕರಣದ ವಿನಂತಿಯು ಯಾವುದಕ್ಕೆ ಸಂಬಂಧಿಸಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು, ಅದರ ಹಿನ್ನೆಲೆಯನ್ನು ತಿಳಿಯಬೇಕು. ಇಶಾ ಫೌಂಡೇಶನ್ ಪರವಾಗಿ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು, ಮುಖ್ಯವಾಗಿ ಪರಿಸರ ಸಚಿವಾಲಯವು 2014ರಲ್ಲಿ ತಂದಿದ್ದ ತಿದ್ದುಪಡಿಯ ಕೆಲವು ವ್ಯಾಖ್ಯಾನಗಳನ್ನು ಆಧರಿಸಿತ್ತು.

2014ರ ಈ ತಿದ್ದುಪಡಿಯು ಪರಿಸರ ಅನುಮತಿ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿತ್ತು. 1986ರ ಪರಿಸರ (ಸಂರಕ್ಷಣೆ) ಕಾಯ್ದೆಯಡಿ ಕಾನೂನುಬದ್ಧ ಅಧಿಕಾರ ಹೊಂದಿರುವ 2006ರ ಪರಿಸರ ಪ್ರಭಾವದ ಮೌಲ್ಯಮಾಪನ ಅಧಿಸೂಚನೆಯಲ್ಲಿ ವಿವರಿಸಲಾದ ಕಠಿಣ ಪರಿಶೀಲನಾ ಪ್ರಕ್ರಿಯೆಯ ನಂತರವೇ ಅಭಿವೃದ್ಧಿ ಅಥವಾ ಕೈಗಾರಿಕಾ ಯೋಜನೆಗಳಿಗೆ ಈ ನಿಯಂತ್ರಕ ಅನುಮೋದನೆಯನ್ನು ನೀಡಲಾಗುತ್ತದೆ. ಈ ತಿದ್ದುಪಡಿಯು ಶಿಕ್ಷಣ ಸಂಸ್ಥೆಗಳು ತಮ್ಮ ಯೋಜನೆಗಳಿಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಿತ್ತು.

ಇಶಾ ಫೌಂಡೇಶನ್ ಮಂಡಿಸಿದ ಕಾನೂನು ವಾದ ಎರಡು ಮುಖಗಳನ್ನು ಹೊಂದಿತ್ತು. ಮೊದಲನೆಯದಾಗಿ, ಶಿಕ್ಷಣ ಕೇಂದ್ರವಾಗಿ ತನ್ನ ಆವರಣವು ಈ ವಿನಾಯಿತಿಗೆ ಅರ್ಹವಾಗಿದೆ ಎಂಬುದು. ಎರಡನೆಯದಾಗಿ, ಈ ವಿನಾಯಿತಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಬಹುದು. ಅಂದರೆ, 2014 ಕ್ಕಿಂತ ಮೊದಲು ಫೌಂಡೇಶನ್ ಕೈಗೊಂಡಿದ್ದ ಕಟ್ಟಡ ನಿರ್ಮಾಣಗಳಿಗೂ ಈ ವಿನಾಯಿತಿ ಅನ್ವಯಿಸುತ್ತದೆ ಎಂಬುದು ಅವರ ವಾದವಾಗಿತ್ತು.

ತಾವು ಕಾನೂನುಬದ್ಧವಾಗಿ ಶಿಕ್ಷಣ ಸಂಸ್ಥೆಯಾಗಿ ಅರ್ಹತೆ ಹೊಂದಿದ್ದೇವೆ ಎಂಬ ವಾದವನ್ನು ಬಲಪಡಿಸಲು, ಇಶಾ ಫೌಂಡೇಶನ್ ಪರಿಸರ ಸಚಿವಾಲಯ ಹೊರಡಿಸಿದ್ದ ಸ್ಪಷ್ಟೀಕರಣವನ್ನು ಉಲ್ಲೇಖಿಸಿತ್ತು. ಆದರೆ, ತನ್ನದೇ ವಿನಂತಿಯ ಮೇರೆಗೆ ಸಚಿವಾಲಯವು ಈ ಸ್ಪಷ್ಟೀಕರಣವನ್ನು ನೀಡಿದೆ ಎಂಬ ವಿಷಯವನ್ನು ಫೌಂಡೇಶನ್ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ.

"ಮೊಕದ್ದಮೆ ಹೂಡಿದವರ ಕೋರಿಕೆಯ ಮೇರೆಗೆ ಪಡೆದ ಸ್ಪಷ್ಟೀಕರಣವನ್ನು, ಅದರ ಮೂಲದ ಬಗ್ಗೆ ಪಾರದರ್ಶಕತೆ ಇಲ್ಲದೆ ಸ್ವತಂತ್ರ ನಿಯಂತ್ರಕ ಮಾರ್ಗದರ್ಶನದಂತೆ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿರುವುದು ಕಾನೂನು ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ತೋರಿದ ಅಗೌರವವನ್ನು ತೋರಿಸುತ್ತದೆ" ಎಂದು ಖಾಸಗಿ ಚಿಂತಕರ ಚಾವಡಿಯಾದ 'ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ'ಯ ಹವಾಮಾನ ಬದಲಾವಣೆ ಮತ್ತು ಪರಿಸರ ವ್ಯವಸ್ಥೆಗಳ ವಿಭಾಗದ ಮುಖ್ಯಸ್ಥ ದೇಬಾದಿತ್ಯೋ ಸಿನ್ಹಾ ಹೇಳಿದ್ದಾರೆ.

ಈ ವಿಷಯದಲ್ಲಿ ಪರಿಸರ ಸಚಿವಾಲಯ ನಡೆದುಕೊಂಡ ರೀತಿ "ಸಂಸ್ಥೆಯ ಪ್ರಾಮಾಣಿಕತೆ ಮತ್ತು ದೇಶದ ನೈಸರ್ಗಿಕ ಸಂಪತ್ತಿನ ಭವಿಷ್ಯದ ಬಗ್ಗೆ ಗಂಭೀರವಾದ ಕಳವಳಕಾರಿ ಪ್ರಶ್ನೆಗಳನ್ನು ಉಂಟುಮಾಡುತ್ತದೆ" ಎಂದಿದ್ದಾರೆ ದೇಬಾದಿತ್ಯೋ. ಇಶಾ ಫೌಂಡೇಶನ್ನ ಆಜ್ಞೆಯ ಮೇರೆಗೆ ತಾವು ಈ ಸ್ಪಷ್ಟೀಕರಣವನ್ನು ನೀಡಿದ್ದೇವೆ ಎಂಬ ವಿಷಯವನ್ನು ಸಚಿವಾಲಯವು ನ್ಯಾಯಾಲಯಕ್ಕೆ ತಿಳಿಸದಿರುವುದು "ಸಂಸ್ಥೆಯ ತಟಸ್ಥತೆ ಮತ್ತು ವಿಶ್ವಾಸಾರ್ಹತೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂಥಾ ಅಪಾರದರ್ಶಕತೆಯು ಸಚಿವಾಲಯದಿಂದ ನಿರೀಕ್ಷಿಸಲಾಗುವ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮಾನದಂಡಗಳಿಗೆ ತದ್ವಿರುದ್ಧವಾಗಿದೆ" ಎಂದಿದ್ದಾರೆ ಅವರು

ಕೇಳಲಾದ ವಿವರವಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಇಶಾ ಫೌಂಡೇಶನ್, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧದ ಪ್ರಕರಣದ ವಿಚಾರಣೆ ಮದ್ರಾಸ್ ಹೈಕೋರ್ಟ್ನಲ್ಲಿ ನಡೆಯುತ್ತಿದ್ದಾಗ ಪರಿಸರ ಸಚಿವಾಲಯಕ್ಕೆ ಯಾವುದೇ ವಿನಂತಿಯನ್ನು ಕಳುಹಿಸಿಲ್ಲ ಎಂದು ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯೆ ಕೋರಿ 'TNM' ಕಳುಹಿಸಿದ ವಿನಂತಿಗಳಿಗೆ ಪರಿಸರ ಸಚಿವಾಲಯ ಯಾವುದೇ ಉತ್ತರ ನೀಡಿಲ್ಲ.

►ಪರಿಸರ ಅನುಮತಿ ಕುರಿತು ಇಶಾ ಫೌಂಡೇಶನ್ನ ಬದಲಾಗುತ್ತಿರುವ ನಿಲುವುಗಳು

ಈ ಬಗ್ಗೆ ಹೆಚ್ಚು ವಿವರಿಸುವ ಮುನ್ನ ಪರಿಸರ ಅನುಮತಿ (Environmental Clearance) ಎಂದರೇನು ? ಅದು ಏಕೆ ಅಷ್ಟು ಮುಖ್ಯ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳೋಣ

ಈ ಪರಿಸರ ಅನುಮತಿಯ ಮೂಲವು 1992ರ ರಿಯೋ ಘೋಷಣೆಯಲ್ಲಿದೆ. ಇದು ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಅಂಗೀಕರಿಸಲಾದ 27 ಸುಸ್ಥಿರ ಅಭಿವೃದ್ಧಿ ತತ್ವಗಳ ಒಂದು ಗುಂಪಾಗಿದೆ. ಭಾರತವೂ ಈ ಘೋಷಣೆಗೆ ಸಹಿ ಹಾಕಿತ್ತು. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಯೋಜನೆಗಳು ಅಥವಾ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಹಿ ಹಾಕಿದ ದೇಶಗಳು ಮುನ್ನೆಚ್ಚರಿಕೆ ವಹಿಸಬೇಕು ಎಂಬ ನಿರ್ದೇಶನವನ್ನು ಈ ತತ್ವಗಳು ಒಳಗೊಂಡಿದ್ದವು.

ಭಾರತದ ನ್ಯಾಯಾಲಯಗಳು ಸಹ ಹಲವು ತೀರ್ಪುಗಳಲ್ಲಿ ಪರಿಸರ ಅನುಮತಿಯ ಗಂಭೀರತೆಯನ್ನು ಒತ್ತಿಹೇಳಿವೆ. ಉದಾಹರಣೆಗೆ, 2020ರ 'ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ vs ರೋಹಿತ್ ಪ್ರಜಾಪತಿ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, "ಶಾಸನಬದ್ಧ ಅಧಿಸೂಚನೆಯು ಪರಿಸರದ ಮೇಲೆ ಉದ್ದೇಶಿತ ಚಟುವಟಿಕೆಯಿಂದ ಉಂಟಾಗಬಹುದಾದ ಪರಿಣಾಮಗಳ ಅಧ್ಯಯನದ ಜೊತೆಗೆ, ಅತ್ಯಂತ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳುವುದನ್ನು ಬಯಸುತ್ತದೆ" ಎಂದು ತೀರ್ಪು ನೀಡಿತ್ತು. ಸಂಬಂಧಿತ ಸ್ಥಳೀಯ ಆಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸಾರ್ವಜನಿಕ ವಿಚಾರಣೆಗಳನ್ನು ನಡೆಸಿ, ಕೈಗಾರಿಕಾ ಚಟುವಟಿಕೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿದ ನಂತರವಷ್ಟೇ ಪರಿಸರ ಅನುಮತಿಯನ್ನು ನೀಡಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.

ಈಗ ಮತ್ತೆ ಇಶಾ ಫೌಂಡೇಶನ್ ವಿಷಯಕ್ಕೆ ಬರೋಣ.

2017ರಲ್ಲಿ, ಫೌಂಡೇಶನ್ ತನ್ನ ಯೋಗ ಕೇಂದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮೋದನೆ ಕೋರಿತ್ತು. ತಮಿಳುನಾಡಿನ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ಆಯುಕ್ತರು ಈ ಅನುಮೋದನೆಯನ್ನು ನೀಡಿದರು, ಆದರೆ ಅದಕ್ಕೊಂದು ಷರತ್ತು ವಿಧಿಸಿದ್ದರು. ಅದೇನೆಂದರೆ, ಫೌಂಡೇಶನ್ ಪರಿಸರ ಅನುಮತಿಗಾಗಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ಎಂಬುದಾಗಿತ್ತು.

ಒಂದು ವರ್ಷದ ನಂತರ, ಅಂದರೆ 2018ರ ಎಪ್ರಿಲ್ 12ರಂದು, ಫೌಂಡೇಶನ್ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆಯಿತು. ಈ ಪ್ರಾಧಿಕಾರವು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ ಕೇಂದ್ರ ಪರಿಸರ ಸಚಿವಾಲಯದಿಂದ ರಚಿಸಲ್ಪಟ್ಟ ಒಂದು ನಿಯಂತ್ರಕ ಸಂಸ್ಥೆಯಾಗಿದೆ. ಆ ಪತ್ರದಲ್ಲಿ ಫೌಂಡೇಶನ್ ತನ್ನ ತಪ್ಪನ್ನು ಒಪ್ಪಿಕೊಂಡಿತ್ತು. "ನಾವು ನಮ್ಮ ಯೋಗ ಕೇಂದ್ರವನ್ನು ಪರಿಸರ ಅನುಮತಿ ಪಡೆಯದೆಯೇ ನಿರ್ಮಿಸಿದ್ದೇವೆ, ಆ ಮೂಲಕ 2006ರ EIA ಅಧಿಸೂಚನೆಯನ್ನು ಉಲ್ಲಂಘಿಸಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ಈ ಉಲ್ಲಂಘನೆಯನ್ನು ಸರಿಪಡಿಸಲು, ಫೌಂಡೇಶನ್ 'ಪೂರ್ವಾನ್ವಯ ಪರಿಸರ ಅನುಮತಿ'ಗಾಗಿ ವಿನಂತಿಸಿತು. ಅಂದರೆ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರವೂ ಪರಿಸರ ಸಚಿವಾಲಯವು ನೀಡಬಹುದಾದ ಅನುಮತಿ ಇದಾಗಿದೆ. ಸಚಿವಾಲಯವು 2017ರಲ್ಲಿ ಹೊರಡಿಸಿದ ಅಧಿಸೂಚನೆಯಿಂದಾಗಿ ಇಂತಹ ಅನುಮತಿಗೆ ಅವಕಾಶವಿತ್ತು. ಈ ರೀತಿ ಅನುಮತಿ ಪಡೆಯುವವರು ಪರಿಸರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ಹಾನಿ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ಸರ್ಕಾರದಿಂದ ನೇಮಕಗೊಂಡ ಪರಿಸರ ತಜ್ಞರನ್ನು ಒಳಗೊಂಡ ತಜ್ಞರ ಮೌಲ್ಯಮಾಪನ ಸಮಿತಿಯು, ಪ್ರತಿ ಪ್ರಕರಣವನ್ನು ಪರಿಶೀಲಿಸಿ ಈ ಸುಧಾರಣಾ ಕ್ರಮಗಳು ಮತ್ತು ಪರಿಹಾರದ ಮೊತ್ತವನ್ನು ನಿರ್ಧರಿಸುತ್ತದೆ. (ಈ ಅಧಿಸೂಚನೆಯನ್ನು 2025ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು).

ಮುಂದಿನ ಕೆಲವು ವರ್ಷಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ವಿವಿಧ ಅಧಿಕಾರಿಗಳು ಇಶಾ ಫೌಂಡೇಶನ್ನ ಪರಿಸರ ಸಮಸ್ಯೆಗಳನ್ನು ಮತ್ತು ಪೂರ್ವಾನ್ವಯ ಅನುಮತಿಗಾಗಿ ಅದು ಸಲ್ಲಿಸಿದ್ದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು.

2021ರ ಎಪ್ರಿಲ್ ವೇಳೆಗೆ, ಇಶಾ ಫೌಂಡೇಶನ್ ಈ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿತು. ತಮಗೆ ಈ ಅನುಮತಿಯ ಅಗತ್ಯವೇ ಇರಲಿಲ್ಲ ಎಂಬುದು ತಡವಾಗಿ ಮನವರಿಕೆಯಾದ ಕಾರಣ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಫೌಂಡೇಶನ್ನ ವಕೀಲರು ಮದ್ರಾಸ್ ಹೈಕೋರ್ಟ್ಗೆ ತಿಳಿಸಿದರು. ಕೊಯಮತ್ತೂರಿನಲ್ಲಿರುವ ತನ್ನ ಆವರಣವು ಯೋಗ ಕೇಂದ್ರವಾಗಿರುವುದರಿಂದ, ಶಿಕ್ಷಣ ಸಂಸ್ಥೆಗಳಿಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡುವ ಪರಿಸರ ಸಚಿವಾಲಯದ 2014ರ EIA ಅಧಿಸೂಚನೆಯ ತಿದ್ದುಪಡಿಯ ಅಡಿ ತಮಗೂ ವಿನಾಯಿತಿ ಸಿಗುತ್ತದೆ ಎಂದು ಫೌಂಡೇಶನ್ ತೀರ್ಮಾನಿಸಿತು. ಈ ಅರ್ಜಿ ಹಿಂಪಡೆಯುವಿಕೆಯ ವಿನಂತಿಯು ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರದ ಬಳಿ ಬಾಕಿ ಉಳಿಯಿತು.

ಈ ಮಧ್ಯೆ, 2021 ನವೆಂಬರ್ 19ರಂದು, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಇಶಾ ಫೌಂಡೇಶನ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು. ಅದರಲ್ಲಿ, ಕೊಯಮತ್ತೂರು ಆಶ್ರಮದ ಆವರಣವು ಪರಿಸರ (ಸಂರಕ್ಷಣೆ) ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ವಾದಿಸಲಾಗಿತ್ತು. "ವಿವಿಧ ರೀತಿಯ ವಸತಿ ಕಟ್ಟಡಗಳು, ಶಾಲೆ, ಧ್ಯಾನ ಮಂದಿರ ಮುಂತಾದ ಕಟ್ಟಡಗಳ ನಿರ್ಮಾಣವನ್ನು ಪರಿಸರ ಅನುಮತಿ ಪಡೆಯುವ ಮುನ್ನವೇ ಪೂರ್ಣಗೊಳಿಸಲಾಗಿದೆ" ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

ಇದು ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 15(1) (ಉಲ್ಲಂಘನೆಗಳಿಗೆ ದಂಡನೆ) ಮತ್ತು ಸೆಕ್ಷನ್ 16(1) (ಕಂಪನಿಗಳು ಮಾಡುವ ಅಪರಾಧಗಳು) ಅಡಿಯಲ್ಲಿ ಫೌಂಡೇಶನ್ ಅನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಅರ್ಹವಾಗಿಸುತ್ತದೆ ಎಂದು ನೋಟಿಸ್ ನಲ್ಲಿ ನಿರ್ದಿಷ್ಟವಾಗಿ ಹೇಳಲಾಗಿತ್ತು. ಆಶ್ರಮದ ಆವರಣದಲ್ಲಿ ವಸತಿ ಗೃಹಗಳು, ಶಾಲೆ ಮತ್ತು ಧ್ಯಾನ ಮಂದಿರದಂತಹ ಕಟ್ಟಡಗಳನ್ನು ನಿರ್ಮಿಸಿದ್ದಕ್ಕಾಗಿ ಫೌಂಡೇಶನ್ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಏಕೆ ಪ್ರಾರಂಭಿಸಬಾರದು ಎಂದು TNPCB ಪ್ರಶ್ನಿಸಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ಇಶಾ ಫೌಂಡೇಶನ್ ತನ್ನ ವಾದವನ್ನು ಮತ್ತಷ್ಟು ಬಲವಾಗಿ ಸಮರ್ಥಿಸಿಕೊಂಡಿತು..2022ರ ಜನವರಿ 7ರಂದು, ಅದು ಮದ್ರಾಸ್ ಹೈಕೋರ್ಟ್ನಲ್ಲಿ TNPCB ವಿರುದ್ಧ ಮೊಕದ್ದಮೆ ಹೂಡಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಶೋಕಾಸ್ ನೋಟಿಸ್ ನ ಕಾನೂನುಬದ್ಧತೆಯನ್ನು ಫೌಂಡೇಶನ್ ಪ್ರಶ್ನಿಸಿತು. ಅಲ್ಲದೆ, 2014ರ ತಿದ್ದುಪಡಿಯು "ಪಕ್ಷಪಾತದ" ತಾರತಮ್ಯವನ್ನು ಮಾಡಿದೆ ಎಂದು ವಾದಿಸಿತು. ಏಕೆಂದರೆ, ಈ ವಿನಾಯಿತಿಯು 2014 ಡಿಸೆಂಬರ್ 22ಕ್ಕಿಂತ ಮೊದಲು ಕಟ್ಟಡಗಳನ್ನು ನಿರ್ಮಿಸಿದ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತಿರಲಿಲ್ಲ.

ಈ ಕಾರಣದಿಂದಾಗಿ, ಇಶಾ ಫೌಂಡೇಶನ್ ಆ ತಿದ್ದುಪಡಿಯನ್ನು "ಅಸಂವಿಧಾನಿಕ" ಎಂದು ಕರೆದಿತು. ಕೊಯಮತ್ತೂರಿನಲ್ಲಿರುವ ತನ್ನ ಯೋಗ ಕೇಂದ್ರವು ಶಿಕ್ಷಣ ಸಂಸ್ಥೆಗಳಿಗಾಗಿ "2014ರ EIA ಅಧಿಸೂಚನೆಯಡಿ ನೀಡಲಾದ ವಿನಾಯಿತಿಗೆ ಅರ್ಹವಾಗಿದೆ" ಎಂದು ಪರಿಸರ ಸಚಿವಾಲಯದಿಂದ ಪ್ರಕಟಣೆ ಹೊರಡಿಸಬೇಕೆಂದು ಅದು ಕೋರಿತು.

2022ರ ಡಿಸೆಂಬರ್ ವೇಳೆಗೆ, ಮದ್ರಾಸ್ ಹೈಕೋರ್ಟ್ ಇಶಾ ಫೌಂಡೇಶನ್ ಪರವಾಗಿ ತೀರ್ಪು ನೀಡಿತು. ತನ್ನ ಈ ನಿರ್ಧಾರಕ್ಕೆ ನ್ಯಾಯಾಲಯವು ಎರಡು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದೆ. ಇವೆರಡೂ ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿಗಳು ಕೈಗೊಂಡ ಎರಡು ಕ್ರಮಗಳಿಗೆ ನೇರವಾಗಿ ಸಂಬಂಧಿಸಿವೆ.

►ಇಶಾ ಫೌಂಡೇಶನ್‌ ಗೆ ನ್ಯಾಯಾಲಯದಲ್ಲಿ ನೆರವಾದ ಸರ್ಕಾರದ ಎರಡು ಹಸ್ತಕ್ಷೇಪಗಳು

ಇಶಾ ಫೌಂಡೇಶನ್ ತನ್ನ ಕೊಯಮತ್ತೂರು ಆಶ್ರಮದ ಆವರಣವು "ನೋಂದಾಯಿತ ಶಿಕ್ಷಣ ಸಂಸ್ಥೆ" ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು TNPCB ನ್ಯಾಯಾಲಯದಲ್ಲಿ ವಾದಿಸಿತ್ತು. ಫೌಂಡೇಶನ್ ಈ ಆವರಣದಲ್ಲಿ 'ಇಶಾ ಹೋಮ್ ಸ್ಕೂಲ್' ಎಂಬ ಖಾಸಗಿ ಸಹ-ಶಿಕ್ಷಣ ವಸತಿ ಶಾಲೆಯನ್ನು ನಡೆಸುತ್ತಿದ್ದರೂ, ಈ ಆವರಣದಲ್ಲಿ "ಯೋಗ, ಧ್ಯಾನ ಮಂದಿರ ಮುಂತಾದ ಇತರ ಚಟುವಟಿಕೆಗಳೂ ನಡೆಯುತ್ತಿವೆ" ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಉಲ್ಲೇಖಿಸಿತ್ತು. "ವಿವಿಧ ಯೋಗ ಕಾರ್ಯಕ್ರಮಗಳನ್ನು ನಡೆಸುವುದು ಶಿಕ್ಷಣ ಸಂಸ್ಥೆಯ ವ್ಯಾಪ್ತಿಗೆ ಬರುವುದಿಲ್ಲ" ಎಂಬುದು ಮಂಡಳಿಯ ವಾದವಾಗಿತ್ತು.

ಇದೇ ಸಂದರ್ಭದಲ್ಲಿ ಸರ್ಕಾರದ ಮೊದಲ ಹಸ್ತಕ್ಷೇಪವು ಮುಂಚೂಣಿಗೆ ಬಂದಿತು. ಅದುವೇ ಮೇ 19, 2022ರ ಆಫೀಸ್ ಮೆಮೊರಾಂಡಮ್. ಈ ಮೆಮೊರಾಂಡಮ್ಗೆ ಭಾರತದ ಪರಿಸರ ಸಚಿವಾಲಯದ ವಿಜ್ಞಾನಿಯೊಬ್ಬರು ಸಹಿ ಹಾಕಿದ್ದರು. 'TNM' ಪರಿಶೀಲಿಸಿದ ಆಂತರಿಕ ದಾಖಲೆಗಳ ಪ್ರಕಾರ, ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಮೇ 17, 2022ರಂದು ಈ ಪತ್ರಕ್ಕೆ ಅನುಮೋದನೆ ನೀಡಿದ್ದರು. ಮದ್ರಾಸ್ ಹೈಕೋರ್ಟ್ ನಲ್ಲಿ ಇಶಾ ಫೌಂಡೇಶನ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಪರಿಸರ ಸಚಿವಾಲಯವು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿರುವ ಈ ಮೆಮೊರಾಂಡಮ್ ನ್ನು ಹೊರಡಿಸಿತ್ತು.

ಈ ಮೆಮೊರಾಂಡಮ್ ಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ಪಡೆಯಲು ಅರ್ಹವಾಗುವ 'ಶಿಕ್ಷಣ ಸಂಸ್ಥೆ'ಯ ವ್ಯಾಖ್ಯಾನವನ್ನು ಸ್ಪಷ್ಟಪಡಿಸಲು ಬಳಸಲಾಗಿತ್ತು. ಇದು 2000ರ ಧ್ವನಿ ಮಾಲಿನ್ಯ (ನಿಯಂತ್ರಣ ಮತ್ತು ಮೇಲ್ವಿಚಾರಣೆ) ನಿಯಮಗಳಲ್ಲಿ ನೀಡಲಾದ ವ್ಯಾಖ್ಯಾನವನ್ನು ಆಧರಿಸಿತ್ತು. ಈ ನಿಯಮಗಳ ಪ್ರಕಾರ, ಶಿಕ್ಷಣ ಸಂಸ್ಥೆ ಎಂದರೆ ಕೇವಲ ಶಾಲೆ, ಧಾರ್ಮಿಕ ಶಿಕ್ಷಣ ಕೇಂದ್ರ, ಕಾಲೇಜು, ವಿಶ್ವವಿದ್ಯಾಲಯ, ವೃತ್ತಿಪರ ಅಕಾಡೆಮಿಗಳು ಮತ್ತು ಇತರ ಸಂಸ್ಥೆಗಳ ಕಟ್ಟಡಗಳು ಮಾತ್ರವಲ್ಲದೆ, "ಶಿಕ್ಷಣದ ಸಂಪೂರ್ಣ ಉದ್ದೇಶವನ್ನು ಈಡೇರಿಸಲು ಅಗತ್ಯವಿರುವ ಎಲ್ಲಾ ಮೈದಾನಗಳು ಮತ್ತು ಆವರಣಗಳನ್ನು" ಒಳಗೊಂಡಿರುತ್ತದೆ. ಇದು ಮಾನಸಿಕ, ನೈತಿಕ ಮತ್ತು ದೈಹಿಕ ಬೆಳವಣಿಗೆಗೆ ಅಗತ್ಯವೆಂದು ಪರಿಗಣಿಸಲಾದ ಚಟುವಟಿಕೆಗಳಿಗೂ ಅನ್ವಯಿಸುತ್ತದೆ.

ಈ ವ್ಯಾಖ್ಯಾನದ ಪ್ರಕಾರ, ಇಶಾ ಫೌಂಡೇಶನ್ನ ಆವರಣವನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಬಹುದಾಗಿತ್ತು.

ಇಶಾ ಫೌಂಡೇಶನ್ನ ಕೊಯಮತ್ತೂರು ಆವರಣವನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಲು ಪರಿಸರ ಸಚಿವಾಲಯದ ಈ ಮೆಮೊರಾಂಡಮ್ಗೆ ಪ್ರಮುಖ ಆಧಾರವಾಗಿ ಮದ್ರಾಸ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಆದರೆ, ಇಶಾ ಫೌಂಡೇಶನ್ ಪ್ರತಿನಿಧಿಯೊಬ್ಬರಿಂದ ವಿನಂತಿ ಬಂದ ಕೆಲವೇ ತಿಂಗಳುಗಳಲ್ಲಿ ಸಚಿವಾಲಯವು ಈ ಪತ್ರವನ್ನು ಹೊರಡಿಸಿತ್ತು ಎಂಬ ವಿಷಯವನ್ನು ಮಾತ್ರ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

'TNM' ಪರಿಶೀಲಿಸಿದ ಆಂತರಿಕ ದಾಖಲೆಗಳ ಪ್ರಕಾರ, ಇಶಾ ಫೌಂಡೇಶನ್ನ ಸಿ.ಆರ್. ದಿನೇಶ್ ರಾಜಾ ಅವರು ಡಿಸೆಂಬರ್ 20, 2021ರ ಪತ್ರದ ಮೂಲಕ ಪರಿಸರ ಸಚಿವಾಲಯಕ್ಕೆ ಈ ವಿನಂತಿಯನ್ನು ಕಳುಹಿಸಿದ್ದರು. TNPCB ಫೌಂಡೇಶನ್‌ ಗೆ ಶೋಕಾಸ್ ನೋಟಿಸ್ ನೀಡಿದ ಒಂದು ತಿಂಗಳ ನಂತರ ಮತ್ತು ಫೌಂಡೇಶನ್ ಮದ್ರಾಸ್ ಹೈಕೋರ್ಟ್ನಲ್ಲಿ ಈ ನೋಟಿಸ್ ವಿರುದ್ಧ ಅರ್ಜಿ ಸಲ್ಲಿಸುವ ಒಂದು ತಿಂಗಳ ಮುಂಚೆ ಈ ಪತ್ರವನ್ನು ಬರೆಯಲಾಗಿತ್ತು.

ದಿನೇಶ್ ರಾಜಾ ಅವರು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ಶಿಕ್ಷಣ ಸಂಸ್ಥೆಗಳಿಗೆ 2014ರಲ್ಲಿ ನೀಡಲಾದ ವಿನಾಯಿತಿಯ ವಿವರಗಳನ್ನು ಉಲ್ಲೇಖಿಸಿದ್ದರು. ಅಲ್ಲದೆ, 2000ರ ಧ್ವನಿ ಮಾಲಿನ್ಯ ನಿಯಮಗಳ ಪ್ರಕಾರ ಶಿಕ್ಷಣ ಸಂಸ್ಥೆಯು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು ಮತ್ತು ಇಂಥದ್ದೇ ಇತರ ಸಂಸ್ಥೆಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಅವರು ಎತ್ತಿ ತೋರಿಸಿದ್ದರು.

ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುವ ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ಈ ಪತ್ರದಲ್ಲಿ ಪಟ್ಟಿ ಮಾಡಲಾಗಿತ್ತು. ಇವುಗಳಲ್ಲಿ ಇಶಾ ಹೋಮ್ ಸ್ಕೂಲ್, ಮಕ್ಕಳಿಗಾಗಿ ಶಾಸ್ತ್ರೀಯ ನೃತ್ಯ, ಸಂಗೀತ ಮತ್ತು ಸಂಸ್ಕೃತ ತರಗತಿಗಳು, ಯೋಗ ಮತ್ತು ಧ್ಯಾನಕ್ಕಾಗಿ ಅಲ್ಪಾವಧಿ, ಮಧ್ಯಮ ಅವಧಿ ಮತ್ತು ದೀರ್ಘಾವಧಿಯ ಕಾರ್ಯಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಪ್ರಾಯೋಜಿಸುವ ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಗಳಿಗಾಗಿ ನಡೆಸುವ 'ಇನ್ನರ್ ಇಂಜಿನಿಯರಿಂಗ್ ಲೀಡರ್ಶಿಪ್ ಪ್ರೋಗ್ರಾಂ' ಸೇರಿದ್ದವು.

ರಾಜಾ ಅವರು ಪತ್ರದ ಕೊನೆಯಲ್ಲಿ, "ಮೇಲಿನ ಚಟುವಟಿಕೆಗಳನ್ನು ಹೊಂದಿರುವ ಇಶಾ ಯೋಗ ಕೇಂದ್ರವು, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ 2006ರ EIA ಅಧಿಸೂಚನೆಯ ಪ್ರಕಾರ ಪೂರ್ವ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ಪಡೆಯುತ್ತದೆಯೇ ಎಂಬ ಬಗ್ಗೆ ದಯವಿಟ್ಟು ಸ್ಪಷ್ಟೀಕರಣವನ್ನು ನೀಡಬೇಕು" ಎಂದು ವಿನಂತಿಸಿದ್ದರು.

ಈ ಮನವಿಯು ಸಚಿವಾಲಯವನ್ನು ತಕ್ಷಣ ಕಾರ್ಯಪ್ರವೃತ್ತವಾಗುವಂತೆ ಮಾಡಿತು. ಡಿಸೆಂಬರ್ 2021 ಮತ್ತು ಮೇ 2022ರ ನಡುವೆ ಸರ್ಕಾರಿ ವಿಜ್ಞಾನಿಗಳ ನಡುವೆ ಹಾಗೂ ಪರಿಸರ ಮತ್ತು ಶಿಕ್ಷಣ ಸಚಿವಾಲಯಗಳ ಅಧಿಕಾರಿಗಳ ನಡುವೆ ನಡೆದ ಆಂತರಿಕ ಚರ್ಚೆಗಳ ದಾಖಲೆಗಳು, ಅವರು 'ಶಿಕ್ಷಣ ಸಂಸ್ಥೆ' ಎಂಬ ಪದಕ್ಕೆ ಸಂಭಾವ್ಯ ವ್ಯಾಖ್ಯಾನವನ್ನು ರೂಪಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವುದನ್ನು ತೋರಿಸುತ್ತವೆ.

ಮೇ 4, 2022ರ ಪತ್ರವೊಂದರಲ್ಲಿ, ಉನ್ನತ ಶಿಕ್ಷಣ ಇಲಾಖೆಯು ಪರಿಸರ ಸಚಿವಾಲಯದ ನೀತಿ ನಿರೂಪಕರಿಗೆ, ಮಾನ್ಯತೆ, ಸಂಯೋಜನೆ ಇತ್ಯಾದಿಗಳ ಉದ್ದೇಶಕ್ಕಾಗಿ ವಿವಿಧ ಕಾನೂನುಗಳಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ತಾಂತ್ರಿಕ ಸಂಸ್ಥೆಗಳು ಮುಂತಾದ ವಿವಿಧ ರೀತಿಯ ಶಿಕ್ಷಣ ಸಂಸ್ಥೆಗಳನ್ನು ವ್ಯಾಖ್ಯಾನಿಸಲಾಗಿದ್ದರೂ, 'ಶಿಕ್ಷಣ ಸಂಸ್ಥೆಗಳು' ಎಂಬ ಪದಕ್ಕೆ ಯಾವುದೇ ನಿರ್ದಿಷ್ಟ ಒಟ್ಟಾರೆ ವ್ಯಾಖ್ಯಾನವಿಲ್ಲ ಎಂದು ತಿಳಿಸಿತು. ಕೊನೆಗೆ ಇಲಾಖೆಯು 2000ರ ಧ್ವನಿ ಮಾಲಿನ್ಯ ನಿಯಮಗಳ ಅಡಿಯಲ್ಲಿ ನೀಡಲಾದ ವ್ಯಾಖ್ಯಾನದ ಕಡೆಗೆ ಪರಿಸರ ಸಚಿವಾಲಯದ ಗಮನವನ್ನು ಸೆಳೆಯಿತು.

ಇದಾದ ಎರಡು ವಾರಗಳ ನಂತರ, ಅಂದರೆ ಮೇ 19, 2022ರಂದು ಪರಿಸರ ಸಚಿವಾಲಯವು ಮೆಮೊರಾಂಡಮ್ ಗೆ ಅಧಿಕೃತವಾಗಿ ಹೊರಡಿಸಿತು. ಇದು ಪರಿಸರ ಅನುಮತಿಗಾಗಿ ಅರ್ಜಿ ಸಲ್ಲಿಸುವುದರಿಂದ ವಿನಾಯಿತಿ ನೀಡುವ 2014ರ ತಿದ್ದುಪಡಿ ಕಾಯ್ದೆಗೆ ಯಾವ ರೀತಿಯ ಶಿಕ್ಷಣ ಸಂಸ್ಥೆಗಳು ಅರ್ಹವಾಗಿವೆ ಎಂಬುದನ್ನು ಸ್ಪಷ್ಟಪಡಿಸಿತು.

ಈ ತಿದ್ದುಪಡಿಯು ಅನ್ವಯವಾಗುವ 'ಶಿಕ್ಷಣ ಸಂಸ್ಥೆಯ ವ್ಯಾಖ್ಯಾನದ ಕುರಿತು ಸ್ಪಷ್ಟೀಕರಣಕ್ಕಾಗಿ ವಿನಂತಿ' ಬಂದಿದ್ದರಿಂದ ಈ ಮೆಮೊರಾಂಡಮ್ಗೆ ಸಿದ್ಧಪಡಿಸಲಾಗಿತ್ತು. ಆದರೆ, ಈ ವಿನಂತಿ ಯಾರಿಂದ ಬಂದಿತ್ತು ಎಂಬುದನ್ನು ಮಾತ್ರ ಆ ಪತ್ರದಲ್ಲಿ ಬಹಿರಂಗಪಡಿಸಿರಲಿಲ್ಲ

ಸಚಿವಾಲಯವು ಅಂತಿಮವಾಗಿ ರೂಪಿಸಿದ ಈ ವ್ಯಾಖ್ಯಾನವು ಇಶಾ ಫೌಂಡೇಶನ್ನ ವಾದಕ್ಕೆ ಪೂರಕವಾಗಿ ಒದಗಿಬಂತು.

ಆದರೆ ಇದು ಸಮಸ್ಯೆಯ ಒಂದು ಭಾಗವಷ್ಟೇ ಆಗಿತ್ತು. ಏಕೆಂದರೆ ಈ ಆಶ್ರಮ ಸಂಕೀರ್ಣದ ಬಹುಪಾಲು ಕಟ್ಟಡಗಳನ್ನು 1994 ಮತ್ತು 2006 ರ ನಡುವೆ ನಿರ್ಮಿಸಲಾಗಿತ್ತು. ಅಂದರೆ ಪರಿಸರ ಸಚಿವಾಲಯವು ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡುವ ತಿದ್ದುಪಡಿಯನ್ನು ಜಾರಿಗೆ ತರುವುದಕ್ಕಿಂತ (2014) ಎಷ್ಟೋ ವರ್ಷಗಳ ಮುಂಚೆಯೇ ಇವು ನಿರ್ಮಾಣವಾಗಿದ್ದವು.

ಹೀಗಾಗಿ, ಮದ್ರಾಸ್ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಇಶಾ ಫೌಂಡೇಶನ್, ಈ ವಿನಾಯಿತಿಯನ್ನು ಪೂರ್ವಾನ್ವಯವಾಗಿ ಅಂದರೆ ಸೆಪ್ಟೆಂಬರ್ 14, 2006 ರಿಂದಲೇ ಅನ್ವಯಿಸಬೇಕು ಎಂದು ಆಗ್ರಹಿಸಿತು. ಪರಿಸರ ಅನುಮತಿ (EC) ಪಡೆಯುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದ ನಿಯಮ ಜಾರಿಗೆ ಬಂದ ದಿನಾಂಕ ಇದಾಗಿತ್ತು. ಒಂದು ವೇಳೆ ಈ ವಿನಾಯಿತಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಿದರೆ, ಫೌಂಡೇಶನ್ನ ಆವರಣವನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸುವ ತನಕ, ಅದು ಪರಿಸರ ಅನುಮತಿ ಇಲ್ಲದೆ ಕೈಗೊಂಡಿದ್ದ ಎಲ್ಲಾ ಹಳೆಯ ಕಟ್ಟಡ ನಿರ್ಮಾಣಗಳೂ ಕಾನೂನುಬದ್ಧವಾಗುತ್ತಿದ್ದವು.

ಫೌಂಡೇಶನ್ನ ಈ ಬೇಡಿಕೆ ನ್ಯಾಯಸಮ್ಮತವೇ ಎಂಬುದು ನ್ಯಾಯಾಲಯದ ಮುಂದಿದ್ದ ಮುಖ್ಯ ಪ್ರಶ್ನೆಯಾಗಿತ್ತು. ಈ ಹಂತದಲ್ಲಿ ಸರ್ಕಾರದ ಎರಡನೇ ಹಸ್ತಕ್ಷೇಪವು ಸಂಸ್ಥೆಯ ನೆರವಿಗೆ ಬಂದಿತು.

ಸೆಪ್ಟೆಂಬರ್ 9, 2022 ರಂದು ಪರಿಸರ ಸಚಿವಾಲಯದ ಸಂಯೋಜಿತ ಪ್ರಾದೇಶಿಕ ಕಚೇರಿಯ ವಿಜ್ಞಾನಿ ಡಾ. ಸಿ. ಪಾಲ್ಪಾಂಡಿ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಿದರು. ಅದರಲ್ಲಿ, 2014 ರ ತಿದ್ದುಪಡಿಯು ಕೇವಲ ಒಂದು "ಸ್ಪಷ್ಟೀಕರಣದ ತಿದ್ದುಪಡಿ" ಎಂದು ಪಾಲ್ಪಾಂಡಿ ಬರೆದಿದ್ದರು. ಕಟ್ಟಡ ಮತ್ತು ನಿರ್ಮಾಣ ಯೋಜನೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಶೇಷ ನಿಯಮಗಳನ್ನು ಒಳಗೊಂಡಿರುವ 'EIA ವೇಳಾಪಟ್ಟಿಯ 8(ಎ)' ವ್ಯಾಪ್ತಿಯನ್ನು ಸ್ಪಷ್ಟಪಡಿಸಲು ಇದನ್ನು ಹೊರಡಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು. ಆದ್ದರಿಂದ, ಈ ತಿದ್ದುಪಡಿಯನ್ನು ಖಂಡಿತವಾಗಿಯೂ ಪೂರ್ವಾನ್ವಯವಾಗಿ ಅನ್ವಯಿಸಬಹುದು ಎಂದು ಅವರು ತೀರ್ಮಾನಿಸಿದ್ದರು.

ಸಚಿವಾಲಯದ ಈ ವ್ಯಾಖ್ಯಾನವು ಇಶಾ ಫೌಂಡೇಶನ್‌ ಗೆ ಅದು ಬಯಸಿದ್ದನ್ನೇ ತಂದುಕೊಟ್ಟಿತು. ಈ ವಿನಾಯಿತಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಿದರೆ, TNPCB ನೀಡಿದ್ದ ಶೋಕಾಸ್ ನೋಟಿಸ್ ಸಿಂಧುವಾಗುತ್ತಿರಲಿಲ್ಲ. ಅಲ್ಲದೆ, ಇಶಾ ಫೌಂಡೇಶನ್ ಪರಿಸರ ಅನುಮತಿ ಇಲ್ಲದೆ ಕೈಗೊಂಡಿರಬಹುದಾದ ಇತರ ಯಾವುದೇ ನಿರ್ಮಾಣ ಕಾರ್ಯಗಳ ವಿರುದ್ಧ ಭವಿಷ್ಯದಲ್ಲಿ ಕಾನೂನು ಕ್ರಮ ಜರುಗಿಸದಂತೆಯೂ ಇದು ತಡೆಯೊಡ್ಡಿತು.

ಈ ವಿನಾಯಿತಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಬಹುದು ಎಂಬ ಸಚಿವಾಲಯದ ನಿಲುವು "ಪರಿಸರ ಸಂರಕ್ಷಣಾ ನಿಯಮಗಳನ್ನು ಗಣನೀಯವಾಗಿ ದುರ್ಬಲಗೊಳಿಸಿದಂತೆ" ಎಂದು ವಿಧಿ ಸಂಸ್ಥೆಯ ದೇಬಾದಿತ್ಯೋ ಅಭಿಪ್ರಾಯಪಟ್ಟಿದ್ದಾರೆ. ಹಳೆಯ ಉಲ್ಲಂಘನೆಗಳನ್ನು ಹೊಣೆಗಾರಿಕೆಯಿಂದ ಮುಚ್ಚಿಡಲು ಸಂಪೂರ್ಣವಾಗಿ ಹೊಸ ಹಾಗೂ ನಿರಂಕುಶ ವಿನಾಯಿತಿಯನ್ನು ಬಳಸುವುದು ಪರಿಸರ ಕಾನೂನಿನ ಆಶಯವಲ್ಲ ಎಂದಿದ್ದಾರೆ ಅವರು.

2014ರ ತಿದ್ದುಪಡಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಬಹುದು ಎಂದು ಪಾಲ್ಪಾಂಡಿ ಅಫಿಡವಿಟ್ ಸಲ್ಲಿಸಿದ ಸುಮಾರು ಎರಡು ವಾರಗಳ ನಂತರ, ಇಶಾ ಫೌಂಡೇಶನ್ನ ಅಧಿಕೃತ ಕಾನೂನು ಪ್ರತಿನಿಧಿ ಡಿ. ದಿನೇಶ್ ರಾಜಾ ಕೂಡ ಮದ್ರಾಸ್ ಹೈಕೋರ್ಟ್ ನಲ್ಲಿ ಅಫಿಡವಿಟ್ವೊಂದನ್ನು ಸಲ್ಲಿಸಿದರು. ರಾಜಾ ಅವರು ಪರಿಸರ ಸಚಿವಾಲಯದ ಆಫೀಸ್ ಮೆಮೊರಾಂಡಮ್ ಅನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಸ್ಪಷ್ಟೀಕರಣದಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾದ ವಿನಾಯಿತಿಯು ಫೌಂಡೇಶನ್ನ ಕೊಯಮತ್ತೂರು ಕೇಂದ್ರಕ್ಕೂ ಅನ್ವಯಿಸುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ವಾದಿಸಿದರು. ಆದರೆ, ತಾವು ಸಚಿವಾಲಯಕ್ಕೆ ಸಲ್ಲಿಸಿದ ವಿನಂತಿಯ ಮೇರೆಗೇ ಈ ಮೆಮೊರಾಂಡಮ್ ಹೊರಡಿಸಲಾಗಿದೆ ಎಂಬ ವಿಷಯವನ್ನು ರಾಜಾ ತಮ್ಮ ಅಫಿಡವಿಟ್ನಲ್ಲಿ ಎಲ್ಲೂ ಉಲ್ಲೇಖಿಸಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಆಫೀಸ್ ಮೆಮೊರಾಂಡಮ್ ಮತ್ತು ಪಾಲ್ಪಾಂಡಿ ಅವರ ಅಫಿಡವಿಟ್ ಈ ಮೊಕದ್ದಮೆಯು ಇಶಾ ಫೌಂಡೇಶನ್ ಪರವಾಗಿ ತಿರುಗುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಮೆಮೊರಾಂಡಮ್ ಆಧರಿಸಿ, ಮದ್ರಾಸ್ ಹೈಕೋರ್ಟ್ ಫೌಂಡೇಶನ್ನ ಕೊಯಮತ್ತೂರು ಪ್ರಧಾನ ಕಚೇರಿಯನ್ನು ಶಿಕ್ಷಣ ಸಂಸ್ಥೆ ಎಂದೇ ಪರಿಗಣಿಸಿತು. ಇನ್ನು ಪೂರ್ವಾನ್ವಯ ಅನ್ವಯದ ವಿಷಯಕ್ಕೆ ಬಂದರೆ, ಪರಿಸರ ಸಚಿವಾಲಯವೇ "ಈ ಅಧಿಸೂಚನೆಯನ್ನು ರೂಪಿಸಿರುವುದರಿಂದ" ಅದರ ವಿವರಣೆಯನ್ನು ಒಪ್ಪಿಕೊಳ್ಳಲು ತಾನು ಬದ್ಧವಾಗಿರುವುದಾಗಿ ನ್ಯಾಯಾಲಯ ಹೇಳಿತು.

ಎರಡು ವರ್ಷಗಳ ನಂತರ, ಅಂದರೆ 2024ರ ಡಿಸೆಂಬರ್ 10ರಂದು, TNPCB ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತು.

►ಅಂದು ಕಾನೂನುಬದ್ಧ, ಇಂದು ಪ್ರಶ್ನಾರ್ಹ

ಶಿಕ್ಷಣ ಸಂಸ್ಥೆಗಳಿಗೆ ಪರಿಸರ ಸಚಿವಾಲಯವು 2014ರಲ್ಲಿ ನೀಡಿದ್ದ ವಿನಾಯಿತಿಯ ಸಿಂಧುತ್ವವೇ ಸ್ವತಃ ಒಂದು ವಿವಾದದ ವಿಷಯವಾಗಿತ್ತು ಎಂಬುದನ್ನು ಈ ಹಂತದಲ್ಲಿ ಗಮನಿಸಬೇಕಾಗಿದೆ.

ನಾಗರಿಕ ಹಿತರಕ್ಷಣಾ ಗುಂಪೊಂದು ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿದ್ದ ಕೇರಳ ಹೈಕೋರ್ಟ್, 2024ರ ಮಾರ್ಚ್ನಲ್ಲಿ ಈ 2014ರ ತಿದ್ದುಪಡಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಪರಿಸರ ಸಚಿವಾಲಯವು ಈ ಅಧಿಸೂಚನೆಯನ್ನು ತಂದ ಅಪಾರದರ್ಶಕ ವಿಧಾನವನ್ನು ನ್ಯಾಯಾಲಯವು ತೀವ್ರವಾಗಿ ಟೀಕಿಸಿತ್ತು. ಸಚಿವಾಲಯವು 2014ರ ಸೆಪ್ಟೆಂಬರ್ನಲ್ಲಿ ಸಾರ್ವಜನಿಕ ಸಮಾಲೋಚನೆಗಾಗಿ ಅಧಿಸೂಚನೆಯ ಕರಡನ್ನು ಪ್ರಕಟಿಸಿದಾಗ, ಅದರಲ್ಲಿ ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಶೆಡ್ಗಳು ಮತ್ತು ಇತರ ಕೆಲವು ಯೋಜನೆಗಳಿಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಲಾಗುವುದು ಎಂಬ ವಿಷಯವನ್ನು ಉಲ್ಲೇಖಿಸಿಯೇ ಇರಲಿಲ್ಲ ಎಂಬುದನ್ನು ಕೋರ್ಟ್ ಗಮನಿಸಿತ್ತು.

ಇದು 1897ರ ಜನರಲ್ ಕ್ಲಾಸ್ ಆಕ್ಟ್ನ ಸೆಕ್ಷನ್ 23ರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು. ಈ ಕಾಯ್ದೆಯ ಪ್ರಕಾರ, ಯಾವುದೇ ಸರ್ಕಾರಿ ಸಂಸ್ಥೆಯು ಕಾನೂನುಗಳನ್ನು ರೂಪಿಸುವ ಮುನ್ನ ಕರಡನ್ನು ಪ್ರಕಟಿಸಿ, ಅದರಿಂದ ಬಾಧಿತರಾಗುವ ಜನರಿಗೆ ಅದರ ವಿವರಗಳನ್ನು ತಿಳಿಸುವುದು ಕಡ್ಡಾಯವಾಗಿದೆ.

ಕೇರಳ ಹೈಕೋರ್ಟ್ನ ಈ ತೀರ್ಪಿನ ಪರಿಣಾಮವಾಗಿ, ಪರಿಸರ ಸಚಿವಾಲಯವು 2025ರ ಜನವರಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಿ ಹೊಸ ಅಧಿಸೂಚನೆಯನ್ನು ಹೊರಡಿಸಿತು.

ಇದಾಗಿ ಸುಮಾರು ಒಂದು ತಿಂಗಳ ನಂತರ, ಇಶಾ ಫೌಂಡೇಶನ್ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ TNPCB ಸಲ್ಲಿಸಿದ್ದ ಮೇಲ್ಮನವಿಯ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

2025ರ ಫೆಬ್ರವರಿ 28ರ ಆದೇಶದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಇಬ್ಬರು ನ್ಯಾಯಾಧೀಶರ ಪೀಠವು ಮದ್ರಾಸ್ ಹೈಕೋರ್ಟ್ನ ತೀರ್ಪನ್ನು ಎತ್ತಿಹಿಡಿಯಿತು. ಮದ್ರಾಸ್ ಹೈಕೋರ್ಟ್ನ ತೀರ್ಪು ಹಾಗೂ ತನ್ನದೇ ಆದೇಶವನ್ನು "ಪ್ರಕರಣದ ವಿಶೇಷ ಸಂಗತಿಗಳು ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು" ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ಭವಿಷ್ಯದಲ್ಲಿ ಯಾವುದೇ ಕಾನೂನುಬಾಹಿರ ಅಥವಾ ಅನಧಿಕೃತ ನಿರ್ಮಾಣಗಳನ್ನು ಸಕ್ರಮಗೊಳಿಸಲು ಈ ಆದೇಶಗಳನ್ನು "ಮಾದರಿ ಎಂದು ಪರಿಗಣಿಸಬಾರದು" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಇದೇ ವೇಳೆ, ಅದೇ ವರ್ಷದ ಆಗಸ್ಟ್ನಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠವು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಶೆಡ್ಗಳಿಗೆ ಪರಿಸರ ಅನುಮತಿಯ ನಿಯಮಗಳಿಂದ ವಿನಾಯಿತಿ ನೀಡುವುದು "ಪರಿಸರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದ ಉದ್ದೇಶಕ್ಕೆ ಪೂರಕವಾಗಿರುವಂತೆ ಕಾಣುತ್ತಿಲ್ಲ" ಎಂದು ತೀರ್ಪು ನೀಡಿತು. ಅಂತಹ ಕಟ್ಟಡಗಳನ್ನು ಅಧಿಸೂಚನೆಯ ಕಠಿಣ ನಿಯಮಗಳಿಂದ ಹೊರಗಿಡುವುದರ ಹಿಂದೆ ಯಾವುದೇ ತಾರ್ಕಿಕ ಕಾರಣ ಕಾಣುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. "ಆದ್ದರಿಂದ, ಕೈಗಾರಿಕಾ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ನಿರ್ಮಿಸಲಾದ ಕಟ್ಟಡಗಳನ್ನು ಇತರ ಕಟ್ಟಡಗಳಿಗಿಂತ ಭಿನ್ನವಾಗಿ ನೋಡಿ ತಾರತಮ್ಯ ಮಾಡಲು ನಮಗೆ ಯಾವುದೇ ಕಾರಣ ಕಾಣಿಸುತ್ತಿಲ್ಲ" ಎಂದು ಕೋರ್ಟ್ ತೀರ್ಮಾನಿಸಿತು.

ಕೇವಲ ಕೆಲವೇ ತಿಂಗಳುಗಳ ಅಂತರದಲ್ಲಿ ಈ ವಿನಾಯಿತಿಯ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ತಳೆದ ಭಿನ್ನ ನಿಲುವುಗಳು "ಪರಸ್ಪರ ವಿರೋಧಾತ್ಮಕವಾಗಿವೆ" ಎಂದು ವೃತ್ತಿಪರ ಕಾರಣಗಳಿಗಾಗಿ ಹೆಸರು ಹೇಳಲು ಇಚ್ಛಿಸದ ಸ್ವತಂತ್ರ ಕಾನೂನು ತಜ್ಞರೊಬ್ಬರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ನ ಎರಡೂ ತೀರ್ಪುಗಳನ್ನು ಪರಿಶೀಲಿಸಿದ ಆ ತಜ್ಞರು 'TNM' ಜೊತೆ ಮಾತನಾಡಿ, ಫೆಬ್ರವರಿಯಲ್ಲಿ ನ್ಯಾಯಾಲಯವು ಇಶಾ ಫೌಂಡೇಶನ್ ಪರವಾಗಿ ತೀರ್ಪು ನೀಡಿದಾಗ ಶಿಕ್ಷಣ ಸಂಸ್ಥೆಗಳಿಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿ ಇರುವುದು ಕಾನೂನುಬದ್ಧವಾಗಿತ್ತು ಎಂದಿದ್ದಾರೆ. ಆದರೆ, ಅದೇ ವರ್ಷದ ಆಗಸ್ಟ್ನಲ್ಲಿ ಅದೇ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳು ಮತ್ತು ಇತರ ಕಟ್ಟಡಗಳ ನಡುವೆ ಇಂತಹ ತಾರತಮ್ಯ ಮಾಡುವುದು "ಸಂಪೂರ್ಣವಾಗಿ ನಿರಂಕುಶ" ಎಂದು ಅಭಿಪ್ರಾಯಪಟ್ಟಿದೆ ಎಂದು ತಜ್ಞರು ಗಮನಿಸಿದ್ದಾರೆ. ಅಷ್ಟರಲ್ಲಾಗಲೇ ಇಶಾ ಫೌಂಡೇಶನ್ ಸುಪ್ರೀಂ ಕೋರ್ಟ್ನ ಫೆಬ್ರವರಿ ತೀರ್ಪಿನ ಲಾಭವನ್ನು ಪಡೆದುಕೊಂಡಿತ್ತು.

►ಪರಿಸರ ಹಾಳು ಮಾಡುವುದಿಂದ ಹಿಡಿದು 'ಮಣ್ಣು ಉಳಿಸಿ' ಅಭಿಯಾನದವರೆಗೆ

ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿ ನಾಲ್ಕು ವರ್ಷಗಳು ಕಳೆದಿರುವ ಬೆನ್ನಲ್ಲೇ, ಇಶಾ ಫೌಂಡೇಶನ್ ಸುತ್ತಲಿದ್ದ ವಿವಾದದ ಎಲ್ಲಾ ಲಕ್ಷಣಗಳು ತಿಳಿಯಾಗಿವೆ. ಸಂಸ್ಥೆಯ ಪರಿಸರವನ್ನು ಹಾಳುಮಾಡುತ್ತಿರುವ ಕುರಿತು ಹೊರಬರುತ್ತಿದ್ದ ಸ್ವತಂತ್ರ ವರದಿಗಳ ಜಾಗವನ್ನು, ಈಗ ಹೆಚ್ಚಾಗಿ ಅದರ ಜನಪ್ರಿಯ ಪರಿಸರ ಸ್ನೇಹಿ ಉಪಕ್ರಮಗಳ ಸರಣಿ ಸುದ್ದಿಗಳು ಆಕ್ರಮಿಸಿಕೊಂಡಿವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಸದ್ಗುರು ಅವರು ಕನಿಷ್ಠ ಎರಡು ದಶಕಗಳ ಹಿಂದೆ ಆರಂಭಿಸಿದ 'ಮಣ್ಣು ಉಳಿಸಿ' (Save Soil) ಆಂದೋಲನ.

2022ರಲ್ಲಿ ಇಶಾ ಫೌಂಡೇಶನ್ ಲಂಡನ್ನ ಪ್ರತಿಷ್ಠಿತ ಸ್ಥಳವೊಂದರಿಂದ ಜಾಗತಿಕ 'ಮಣ್ಣು ಉಳಿಸುವ ಪ್ರವಾಸ' ಅಭಿಯಾನವನ್ನು ಪ್ರಾರಂಭಿಸಿತು. ಈ ಅಭಿಯಾನದ ಭಾಗವಾಗಿ ಜಗ್ಗಿ ವಾಸುದೇವ್ ಅವರು "ಮಣ್ಣಿನ ಸವೆತದ ಬಗ್ಗೆ ಜಾಗೃತಿ ಮೂಡಿಸಲು 26 ದೇಶಗಳ ಮೂಲಕ 100 ದಿನಗಳ ಮೋಟಾರ್ ಸೈಕಲ್ ಪ್ರಯಾಣ." ಕೈಗೊಂಡರು. ಪ್ರಕೃತಿ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ , ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳು ಆ ಸಮಯದಲ್ಲಿ ಈ ಅಭಿಯಾನವನ್ನು ಬೆಂಬಲಿಸಿದ್ದವು.

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಒಳಗೂ ಇಶಾ ಫೌಂಡೇಶನ್ ವಿರುದ್ಧದ ಟೀಕೆಗಳು ಕಡಿಮೆಯಾಗಿವೆ. ಜಗ್ಗಿ ವಾಸುದೇವ್ ಅವರಿಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಉತ್ತಮ ಸಂಪರ್ಕ ಇರುವುದು ಇದಕ್ಕೆ ಕಾರಣವಾಗಿರಬಹುದು. ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಾರ್ವಜನಿಕವಾಗಿ ಪರಸ್ಪರ ಬೆಂಬಲಿಸುವ ಬಾಂಧವ್ಯವನ್ನು ಹೊಂದಿದ್ದಾರೆ. ದೇಶದಲ್ಲಿ ಆಂದೋಲನಗಳು ನಡೆದ ಕಠಿಣ ಸಂದರ್ಭಗಳಲ್ಲೂ ಇಬ್ಬರೂ ಪರಸ್ಪರ ಬೆಂಬಲಕ್ಕೆ ನಿಂತಿದ್ದಾರೆ.

2017ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಉದ್ಘಾಟನಾ ಸಮಾರಂಭವು ವಿವಾದಕ್ಕೆ ಈಡಾಗಿತ್ತು. ಇಶಾ ಫೌಂಡೇಶನ್ "ವೆಳ್ಳಿಯಂಗಿರಿ ಬೆಟ್ಟಗಳಲ್ಲಿ ಬುಡಕಟ್ಟು ಜನರು ಮತ್ತು ಆನೆಗಳ ಜೀವನೋಪಾಯವನ್ನು ನಾಶಪಡಿಸಿದೆ" ಎಂಬ ಕಾರಣ ನೀಡಿ, ಆನ್ಲೈನ್ ಅರ್ಜಿಯ ಮೂಲಕ ಮೋದಿ ಅವರು ಈ ಕಾರ್ಯಕ್ರಮಕ್ಕೆ ಬರಬಾರದು ಎಂದು ಮನವಿ ಮಾಡಲಾಗಿತ್ತು. ಪ್ರತಿಮೆ ಅನಾವರಣಗೊಂಡ ದಿನದಂದು ಪ್ರತಿಭಟನೆಗೆ ಯತ್ನಿಸಿದ ಸುಮಾರು 500 ಜನರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು.

2019ರ ಡಿಸೆಂಬರ್ನಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಪೌರತ್ವಕ್ಕೆ ಧಾರ್ಮಿಕ ಪರೀಕ್ಷೆಯನ್ನು ಪರಿಚಯಿಸಿದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಗ್ಗಿ ವಾಸುದೇವ್ ಬೆಂಬಲಿಸಿದ್ದರು. "ರಸ್ತೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಜನರು ಹೋರಾಡುತ್ತಿರುವ ತೀವ್ರತೆಯನ್ನು ನೋಡಿದಾಗ, ನಾನು ಏನನ್ನಾದರೂ ಮರೆತಿದ್ದೇನೆಯೇ ಅಥವಾ ಇಲ್ಲಿ ನಡೆಯುತ್ತಿರುವುದು ನನಗೆ ಅರ್ಥವಾಗುತ್ತಿಲ್ಲವೇ ಎಂದು ಆಶ್ಚರ್ಯವಾಯಿತು" ಎಂದು ಜಗ್ಗಿ CAA ವಿರೋಧಿ ಪ್ರತಿಭಟನೆಗಳ ಬಗ್ಗೆ ಹೇಳಿದ್ದರು. ಒಂದು ತಿಂಗಳ ನಂತರ, ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಜೊತೆ ಮಾತನಾಡಿದ ಜಗ್ಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. "ಬಸ್ಸುಗಳು ಉರಿಯುವ ಜಾಗದಲ್ಲಿ ಯಾರೂ ಹೂಡಿಕೆ ಮಾಡುವುದಿಲ್ಲ" ಎಂದು ಅವರು ಹೇಳಿದ್ದರು.

ಇತ್ತೀಚೆಗೆ 2024ರ 'ಇಂಡಿಯಾ ಟುಡೇ ಕನ್ಕ್ಲೇವ್'ನಲ್ಲಿ ಜಗ್ಗಿ ವಾಸುದೇವ್ ಅವರು 'ಒಂದು ದೇಶ, ಒಂದು ಚುನಾವಣೆ'ಗೆ ಕರೆ ನೀಡಿದರು. ಇದು ರಾಮರಾಜ್ಯದತ್ತ ಪ್ರಮುಖ ಹೆಜ್ಜೆಯಾಗಲಿದೆ ಎಂದು ಅವರು ಪ್ರತಿಪಾದಿಸಿದರು. ಅಷ್ಟೇ ಅಲ್ಲದೆ, "ಭಾರತವು 12 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವವರೆಗೆ ಪ್ರತಿ ಎಂಟು ವರ್ಷಗಳಿಗೊಮ್ಮೆ ಮಾತ್ರ" ಚುನಾವಣೆಗಳನ್ನು ನಡೆಸಬೇಕು ಎಂದು ಅವರು ಹೇಳಿದ್ದರು.

ಸೌಜನ್ಯ: newslaundry.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News