×
Ad

ನ್ಯಾಯಾಲಯಗಳಲ್ಲಿ AI ಬಳಕೆಗೆ ಕರಡು ನಿಯಮ: ಯಾವುದಕ್ಕೆ ಅವಕಾಶ, ಯಾವುದಕ್ಕೆ ನಿಷೇಧ?

Update: 2026-07-13 22:00 IST

Photo Credit : indianexpress - AI

ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲು, ಸಾಮಾನ್ಯ ತತ್ವಗಳನ್ನು ಜಾರಿಗೆ ತರಲು ಮತ್ತು ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಕಳೆದ ತಿಂಗಳು 'ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ನಿಯಮಗಳು, 2026'ರ ಕರಡನ್ನು ಬಿಡುಗಡೆ ಮಾಡಿದೆ. ಈ ಕುರಿತು ಜುಲೈ 15ರ ಒಳಗಾಗಿ ಸಾರ್ವಜನಿಕರು ಮತ್ತು ಸಂಬಂಧಪಟ್ಟವರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ನ್ಯಾಯಾಲಯದ ಆಡಳಿತವನ್ನು ಉತ್ತಮಗೊಳಿಸಲು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ AI ಬಳಕೆಯನ್ನು ನಿಯಂತ್ರಿಸಲು ಈ ಕರಡು ನಿಯಮಗಳನ್ನು ತರಲಾಗುತ್ತಿದೆ.

►ಇದು ಕಡ್ಡಾಯವಾಗಿ ಅನ್ವಯಿಸುತ್ತದೆಯೇ?

ಇಲ್ಲ, ಇದು ತಾನಾಗಿಯೇ ಅಥವಾ ಎಲ್ಲರಿಗೂ ಒಂದೇ ಬಾರಿಗೆ ಕಡ್ಡಾಯವಾಗಿ ಅನ್ವಯಿಸುವುದಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿಗಳು ಸೂಚಿಸುವ ದಿನಾಂಕದಿಂದ ಈ ನಿಯಮಗಳು ಸುಪ್ರೀಂ ಕೋರ್ಟ್ಗೆ ಅನ್ವಯವಾಗುತ್ತವೆ. ಇನ್ನು ಹೈಕೋರ್ಟ್ಗಳು ಹಾಗೂ ಅವುಗಳ ವ್ಯಾಪ್ತಿಗೆ ಬರುವ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಿಗೆ, ಆಯಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಸೂಚಿಸುವ ದಿನಾಂಕಗಳಿಂದ ಇವು ಜಾರಿಗೆ ಬರಲಿವೆ. ಬೇರೆ ಬೇರೆ ನಿಯಮಗಳನ್ನು ವಿಭಿನ್ನ ದಿನಾಂಕಗಳಂದು ಜಾರಿಗೆ ತರಲು ಅವಕಾಶವಿದ್ದು, ನ್ಯಾಯಾಲಯಗಳ ಅಗತ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ಹಂತಹಂತವಾಗಿ AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು.

►AI ಬಳಕೆಗೆ ಸುಪ್ರೀಂ ಕೋರ್ಟ್ ನೀಡಿರುವ ಮುಕ್ತ ಅವಕಾಶಗಳೇನು?

ನ್ಯಾಯದಾನ ಪ್ರಕ್ರಿಯೆಯನ್ನು ಸುಲಭಗೊಳಿಸಲು, ವಿಳಂಬವನ್ನು ಕಡಿಮೆ ಮಾಡಲು ಅಥವಾ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಸ್ಪಷ್ಟವಾಗಿ ಸಹಕಾರಿಯಾಗುವ AI ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಿಕೊಳ್ಳಲು ನ್ಯಾಯಾಲಯಗಳು "ಸಕ್ರಿಯವಾಗಿ ಅವಕಾಶಗಳನ್ನು ಹುಡುಕಬೇಕು" ಎಂದು ಈ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಕರಣಗಳ ನಿರ್ವಹಣೆ, ಟ್ರಾನ್ಸ್ಕ್ರಿಪ್ಷನ್, ಭಾಷಾಂತರ, ಕಾನೂನು ಸಂಶೋಧನೆ, ದಾಖಲೆಗಳ ಸಾರಾಂಶ ಸಿದ್ಧಪಡಿಸುವುದು, ಸುಲಭ ಲಭ್ಯತೆ ಮತ್ತು ನ್ಯಾಯಾಲಯದ ಆಡಳಿತ ಸೇರಿದಂತೆ ಹಲವು ಆಡಳಿತಾತ್ಮಕ ಮತ್ತು ಸಹಾಯಕ ಕಾರ್ಯಗಳಿಗಾಗಿ AI ಬಳಸಲು ಸ್ಪಷ್ಟ ಅನುಮತಿ ನೀಡಲಾಗಿದೆ. ಆದರೆ, ಈ ಎಲ್ಲದಕ್ಕೂ ಸುಪ್ರೀಂ ಕೋರ್ಟ್ನ ಸರ್ವೋಚ್ಚ ಸಮಿತಿ ಅಥವಾ ಹೈಕೋರ್ಟ್/ನ್ಯಾಯಮಂಡಳಿಯ AI ಸಮಿತಿಯಿಂದ ಲಿಖಿತ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ನ್ಯಾಯಾಲಯದಿಂದ ನೇಮಕಗೊಂಡ ಅಧಿಕಾರಿಗಳ ಉಸ್ತುವಾರಿ ಮತ್ತು ಪರಿಶೀಲನೆ ಇಲ್ಲಿ ಅತ್ಯಗತ್ಯವಾಗಿರುತ್ತದೆ.

►AI ಪ್ರಕರಣವೊಂದರ ತೀರ್ಪು ನೀಡಬಹುದೇ?

ಖಂಡಿತವಾಗಿಯೂ ಇಲ್ಲ. ಕೇವಲ ಅಲ್ಗಾರಿದಮ್ ಗಳ ಆಧಾರದ ಮೇಲೆ ಅಥವಾ AI ನೀಡಿದ ಮಾಹಿತಿಯ ಆಧಾರದ ಮೇಲೆ ಮಾತ್ರ ಯಾವುದೇ ಪ್ರಕರಣದ ತೀರ್ಪನ್ನು ನೀಡುವಂತಿಲ್ಲ ಎಂದು ಕರಡು ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಎಲ್ಲಾ ರೀತಿಯ ನ್ಯಾಯಾಂಗ ತೀರ್ಪುಗಳಲ್ಲಿ ಮಾನವ ಬುದ್ಧಿಮತ್ತೆ ಮತ್ತು ನ್ಯಾಯಾಧೀಶರ ನಿರ್ಧಾರವೇ ಅಂತಿಮವಾಗಿರುತ್ತದೆ. ಆದ್ದರಿಂದ, ಪ್ರಕರಣದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ AI ಪಾತ್ರ ಏನೇ ಇದ್ದರೂ, ಅದು ಕೇವಲ ಸಲಹಾತ್ಮಕವಾಗಿರುತ್ತದೆಯೇ ಹೊರತು, ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ.

►ಯಾವ ಅಂಶಗಳನ್ನು ನಿಷೇಧಿಸಲಾಗಿದೆ?

ಕರಡು ನಿಯಮಗಳಲ್ಲಿ ಕೆಲವು ಪ್ರಮುಖ ಅಂಶಗಳ ಬಳಕೆಯನ್ನು "ಸಂಪೂರ್ಣವಾಗಿ ಮತ್ತು ಕಡ್ಡಾಯವಾಗಿ" ನಿಷೇಧಿಸಲಾಗಿದೆ. ಅಂದರೆ, ಭವಿಷ್ಯದಲ್ಲಿ ಯಾವುದೇ ಅಧಿಕಾರಿಗಳು ಇವುಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಅವುಗಳೆಂದರೆ ಆರೋಪಿಗಳು ತಲೆಮರೆಸಿಕೊಳ್ಳುವ ಸಾಧ್ಯತೆಯ ಮೌಲ್ಯಮಾಪನಕ್ಕೆ 'ರಿಸ್ಕ್ ಸ್ಕೋರಿಂಗ್' ಮಾಡುವುದು, ಅಪರಾಧಗಳು ಮರುಕಳಿಸುವ ಸಾಧ್ಯತೆಯನ್ನು ಮುನ್ಸೂಚಿಸುವುದು, ಜಾಮೀನು ಅರ್ಹತೆಯನ್ನು ಮೌಲ್ಯಮಾಪನ ಮಾಡುವುದು, ಸಾಕ್ಷಿಗಳ ವಿಶ್ವಾಸಾರ್ಹತೆಯನ್ನು ನಿರ್ಧರಿಸುವುದು, ಯಾವುದೇ ವ್ಯಕ್ತಿಗಳು, ಆರೋಪಿಗಳು, ಸಾಕ್ಷಿಗಳು ಅಥವಾ ಕಾನೂನು ಪ್ರತಿನಿಧಿಗಳ ಭವಿಷ್ಯದ ನಡವಳಿಕೆ ಅಥವಾ ವರ್ತನೆಯನ್ನು ಊಹಿಸಲು AI ಬಳಸುವುದು, AI ಮೂಲಕ ಸಿದ್ಧಪಡಿಸಿದ ಮಾಹಿತಿಯನ್ನು ಮುಕ್ತವಾಗಿ ಬಹಿರಂಗಪಡಿಸದೆ ಸ್ವತಂತ್ರ ಸಾಕ್ಷ್ಯವಾಗಿ ಸಲ್ಲಿಸುವುದು ಮತ್ತು ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ವಿಷಯಗಳಲ್ಲಿ ಸ್ಪಷ್ಟನೆ ನೀಡದ (ಬ್ಲ್ಯಾಕ್ಬಾಕ್ಸ್) AI ವ್ಯವಸ್ಥೆಗಳನ್ನು ಬಳಸುವುದು.

►ತಮ್ಮ ಪ್ರಕರಣದಲ್ಲಿ AI ಬಳಸಲಾಗಿದೆಯೇ ಎಂಬುದು ಕಕ್ಷಿದಾರರಿಗೆ ತಿಳಿಯುತ್ತದೆಯೇ?

ಹೌದು, ಪ್ರಕರಣದ ನಿರ್ವಹಣೆ, ದಾಖಲೆಗಳ ವಿಶ್ಲೇಷಣೆ ಅಥವಾ ನ್ಯಾಯಾಂಗ ಆಡಳಿತದ ಯಾವುದೇ ಪ್ರಮುಖ ಹಂತದಲ್ಲಿ ನ್ಯಾಯಾಲಯವು AI ಸಾಧನವನ್ನು "ಗಣನೀಯವಾಗಿ ಬಳಸಿಕೊಂಡರೆ", ಆ ಕುರಿತು ಕಕ್ಷಿದಾರರಿಗೆ (ಮೊಕದ್ದಮೆ ಹೂಡಿದವರಿಗೆ ಹಾಗೂ ಅವರ ವಕೀಲರಿಗೆ) ಸೂಕ್ತ ಸಮಯದಲ್ಲಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುವುದನ್ನು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಇಲ್ಲಿ ಗಣನೀಯ ನೆರವಿನ ಮಾನದಂಡವನ್ನು ಅನ್ವಯಿಸಲಾಗಿರುವುದರಿಂದ, AI ಬಳಸಿದ ಎಲ್ಲಾ ಸಣ್ಣಪುಟ್ಟ ಸಂದರ್ಭಗಳನ್ನು ಕಕ್ಷಿದಾರರಿಗೆ ತಿಳಿಸಲಾಗುವುದಿಲ್ಲ. ಕೇವಲ ನ್ಯಾಯಾಧೀಶರಿಗೆ AI ಪ್ರಮುಖವಾಗಿ ನೆರವಾದಾಗ ಮಾತ್ರ ಕಕ್ಷಿದಾರರಿಗೆ ಮಾಹಿತಿ ನೀಡಲಾಗುತ್ತದೆ.

►ಇದರ ಮೇಲ್ವಿಚಾರಣೆ ಯಾರು ಮಾಡುತ್ತಾರೆ?

ಈ ಸಾಂಸ್ಥಿಕ ವ್ಯವಸ್ಥೆಯ ಉನ್ನತ ಮಟ್ಟದ ಉಸ್ತುವಾರಿಯನ್ನು ಸುಪ್ರೀಂ ಕೋರ್ಟ್ ನ "ಸರ್ವೋಚ್ಚ ಸಮಿತಿ" ವಹಿಸಿಕೊಳ್ಳಲಿದೆ. ಇದರಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ಹಾಗೂ ಹಣಕಾಸು ಮತ್ತು ಸೈಬರ್ ಭದ್ರತಾ ತಜ್ಞರು ಇರುತ್ತಾರೆ. ಈ ಸಮಿತಿಯು AI ವ್ಯವಸ್ಥೆಗಳ ಬಳಕೆಗೆ ಅನುಮೋದನೆ ನೀಡಲು ಕನಿಷ್ಠ ಕಡ್ಡಾಯ ಮಾನದಂಡಗಳನ್ನು ಮತ್ತು ಅನುಷ್ಠಾನದ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಇದು ಐದು ವಿಶೇಷ ಸಮಿತಿಗಳ ಮೂಲಕ ಕಾರ್ಯನಿರ್ವಹಿಸಲಿದ್ದು, ಸುಪ್ರೀಂ ಕೋರ್ಟ್ ಮತ್ತು ಪ್ರತಿ ಹೈಕೋರ್ಟ್ ಗಳು ತಮ್ಮದೇ ಆದ AI ಸಮಿತಿಗಳನ್ನು ಹೊಂದಿರಲಿವೆ. ಇವುಗಳಿಗೆ ಪೂರಕವಾಗಿ AI ಸಚಿವಾಲಯ ಕಾರ್ಯನಿರ್ವಹಿಸಲಿದೆ.

ಇದರ ಜೊತೆಗೆ, ಸರ್ವೋಚ್ಚ ಸಮಿತಿಗೆ ನೆರವು ನೀಡಲು 'ಸೆಂಟರ್ ಆಫ್ ರಿಸರ್ಚ್ ಅಂಡ್ ಎಕ್ಸಲೆನ್ಸ್ ಆನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' (CoRE-AI) ಎಂಬ ಪ್ರತ್ಯೇಕ ಸಂಶೋಧನಾ ಸಂಸ್ಥೆಯು ಹೊಸ ಸಾಧನಗಳನ್ನು ಮೌಲ್ಯಮಾಪನ ಮಾಡಲಿದೆ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಗಮನಿಸಲಿದೆ.

►ಖಾಸಗಿ ಕಂಪೆನಿಗಳ ಪಾತ್ರ ಇರುತ್ತದೆಯೇ?

ಹೌದು, ಆದರೆ ಸಂಬಂಧಪಟ್ಟ ನ್ಯಾಯಾಲಯದ ಪ್ರಾಧಿಕಾರದಿಂದ ಲಿಖಿತ ಅನುಮೋದನೆ ಪಡೆದ ನಂತರ ಹಾಗೂ ಕಡ್ಡಾಯ ಒಪ್ಪಂದದ ನಿಯಮಗಳಿಗೆ ಒಳಪಟ್ಟು ಮಾತ್ರ ಖಾಸಗಿ ಕಂಪೆನಿಗಳು ಭಾಗಿಯಾಗಬಹುದು. ನ್ಯಾಯಾಲಯದ ಡೇಟಾ ಮತ್ತು AI ನೀಡುವ ಮಾಹಿತಿಯ ಮಾಲೀಕತ್ವ ಹಾಗೂ ಪ್ರವೇಶದ ಹಕ್ಕುಗಳು, ಸೂಕ್ಷ್ಮ ನ್ಯಾಯಾಂಗ ಮಾಹಿತಿಯನ್ನು ಬಳಸದಂತೆ ನಿರ್ಬಂಧ ಮತ್ತು AI ಸಮಿತಿಯ ಲಿಖಿತ ಅನುಮತಿಯಿಲ್ಲದೆ ನ್ಯಾಯಾಲಯದ ಡೇಟಾವನ್ನು ಬಳಸಿಕೊಂಡು ಮಾದರಿಗಳನ್ನು ಅಭಿವೃದ್ಧಿಪಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸುವ ಅಂಶಗಳು ಈ ಒಪ್ಪಂದದಲ್ಲಿ ಇರಬೇಕಾಗುತ್ತದೆ.

ನ್ಯಾಯಾಂಗದ ಡೇಟಾ ಅಥವಾ ಸಾರ್ವಜನಿಕ ಸಂಪನ್ಮೂಲಗಳನ್ನು ಪ್ರಮುಖವಾಗಿ ಬಳಸಿಕೊಂಡು ಸಿದ್ಧಪಡಿಸಿದ ಸಾಧನಗಳ ಮೇಲೆ ಮಾರಾಟಗಾರರು ಯಾವುದೇ ವಿಶೇಷ ಹಕ್ಕನ್ನು ಕ್ಲೈಮ್ ಮಾಡುವಂತಿಲ್ಲ ಎಂದು ಕರಡು ನಿಯಮಗಳು ತಿಳಿಸುತ್ತವೆ.

►ಯಾವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ?

ಕರಡು ನಿಯಮಗಳು AI ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೊದಲು, ಅಳವಡಿಕೆಯ ಸಮಯದಲ್ಲಿ ಮತ್ತು ನಂತರದ ಸಂಪೂರ್ಣ ಅವಧಿಯ ಸುರಕ್ಷತೆಗೆ ಒತ್ತು ನೀಡುತ್ತವೆ. ತಂತ್ರಜ್ಞಾನದ ವಿನ್ಯಾಸ, ತರಬೇತಿ ಡೇಟಾ, ಪಕ್ಷಪಾತ, ತಪ್ಪು ಮಾಹಿತಿ ನೀಡುವ ಅಪಾಯಗಳು ಮತ್ತು ಸೈಬರ್ ಭದ್ರತೆಯ ಸ್ಥಿತಿಗತಿಗಳನ್ನು ಒಳಗೊಂಡ ತಾಂತ್ರಿಕ ಮತ್ತು ನೈತಿಕ ಪ್ರಭಾವದ ಮೌಲ್ಯಮಾಪನವನ್ನು ಮಾಡುವುದು ಕಡ್ಡಾಯವಾಗಿರುತ್ತದೆ. ಕೆಲವು ವ್ಯವಸ್ಥೆಗಳನ್ನು ಮೊದಲು ಪ್ರತ್ಯೇಕ ಪರಿಸರದಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗಬಹುದು. ಅಳವಡಿಕೆಯ ನಂತರ ತಾಂತ್ರಿಕ, ಕಾನೂನು ಮತ್ತು ನೈತಿಕ ತಪಾಸಣೆಗಳು ಹಾಗೂ ಸೈಬರ್ ಭದ್ರತಾ ತಪಾಸಣೆಗಳು ನಿಯತಕಾಲಿಕವಾಗಿ ನಡೆಯಲಿವೆ. ಇವುಗಳನ್ನು ಆಂತರಿಕವಾಗಿಯೇ ನಡೆಸಬೇಕಾಗುತ್ತದೆ, ಏಕೆಂದರೆ ಸೋರ್ಸ್ ಕೋಡ್ ಮತ್ತು ತರಬೇತಿ ಡೇಟಾವನ್ನು ತಪಾಸಣೆಯ ಉದ್ದೇಶಕ್ಕಾಗಿ ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು ಅವಕಾಶವಿರುವುದಿಲ್ಲ.

ಪ್ರತಿ ನ್ಯಾಯಾಲಯವು ಅನುಮೋದಿತ ವ್ಯವಸ್ಥೆಗಳು ಮತ್ತು ತಪಾಸಣಾ ವರದಿಗಳನ್ನು ಒಳಗೊಂಡ AI ರಿಜಿಸ್ಟರ್ ಅನ್ನು ನಿರ್ವಹಿಸಬೇಕಾಗುತ್ತದೆ. ಹಾಗೆಯೇ ಪ್ರತಿ AI ಸಚಿವಾಲಯವು ತಾಂತ್ರಿಕ ದೋಷಗಳು, ತಪ್ಪುಗಳು ಮತ್ತು ಪಕ್ಷಪಾತಗಳನ್ನು ದಾಖಲಿಸುವ AI ಇನ್ಸಿಡೆಂಟ್ ಡೇಟಾಬೇಸ್ ಅನ್ನು ಹೊಂದಿರಬೇಕು. ಒಂದು ವೇಳೆ ಯಾವುದೇ ಸಾಧನವು ವಿಫಲವಾದರೆ ಅಥವಾ ಸ್ಥಗಿತಗೊಂಡರೆ 24 ಗಂಟೆಗಳೊಳಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಾಗುತ್ತದೆ. AI ವ್ಯವಸ್ಥೆಯು ಕೈಕೊಟ್ಟರೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ಮ್ಯಾನುಯಲ್ ಆಗಿ ನಡೆಸಲು ಪ್ರತಿ ಹೈಕೋರ್ಟ್ ತುರ್ತು ಪರ್ಯಾಯ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.

►ಪ್ರಕರಣದಲ್ಲಿ ಬಳಸಲಾದ AIನಿಂದ ಹಾನಿಯಾದರೆ ಕಕ್ಷಿದಾರರಿಗೆ ಇರುವ ಪರಿಹಾರಗಳೇನು?

ನಿಷೇಧಿತ AI ಬಳಕೆಯಿಂದ ಹಾನಿ ಉಂಟಾದಾಗ ಮಾತ್ರ ಈ ಕುರಿತು ದೂರು ನೀಡಲು ಅವಕಾಶವಿರುತ್ತದೆ. ತೊಂದರೆಗೊಳಗಾದ ವ್ಯಕ್ತಿಯು ಸಂಬಂಧಪಟ್ಟ AI ವ್ಯವಸ್ಥೆಯನ್ನು ಬಳಸಲಾದ ನ್ಯಾಯಾಲಯದಲ್ಲಿ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬಹುದು. ಆ ನ್ಯಾಯಾಲಯವು ಬಾಧಿತ ವ್ಯಕ್ತಿಯ ವಾದವನ್ನು ಆಲಿಸಿ, ತನಗೆ ಸೂಕ್ತವೆನಿಸುವ ಆದೇಶಗಳನ್ನು ಹೊರಡಿಸಬೇಕಾಗುತ್ತದೆ.

ಕಾನೂನು ಜ್ಞಾನ ಕಡಿಮೆ ಇರುವ ಜನರಿಗೂ ಇದು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹೈಕೋರ್ಟ್ಗಳು ಸರಳೀಕೃತ ಪ್ರಕ್ರಿಯೆಗಳು ಮತ್ತು ದೂರು ನೀಡುವ ನಮೂನೆಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಬಹುದು. ಈ ದೂರು ಪರಿಹಾರ ವ್ಯವಸ್ಥೆಯು ಸಾಮಾನ್ಯ ಕಾನೂನಿನ ಅಡಿಯಲ್ಲಿ ಈಗಾಗಲೇ ಲಭ್ಯವಿರುವ ಇತರ ಯಾವುದೇ ಕಾನೂನು ಪರಿಹಾರಗಳ ಜೊತೆಯಲ್ಲಿಯೇ ಚಾಲ್ತಿಯಲ್ಲಿರಲಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News