×
Ad

ಅರ್ಜೆಂಟೀನಾ ತಂಡದ ವಿರುದ್ಧ ಫುಟ್ಬಾಲ್ ಜಗತ್ತು ತಿರುಗಿ ಬಿದ್ದಿದ್ದೇಕೆ?

Update: 2026-07-14 19:05 IST

ಲಿಯೊನೆಲ್ ಮೆಸ್ಸಿ | Photo Credit : AP 

ಮೆಸ್ಸಿ ಮತ್ತು ಅರ್ಜೆಂಟೀನಾ ಇದೀಗ ಪ್ರತಿ ಪಂದ್ಯದಲ್ಲೂ ಪರಿಶೀಲನೆಗೆ ಒಳಗಾಗುತ್ತಿದ್ದಾರೆ. ವೀಡಿಯೋ ರೆಫ್ರಿಗಳನ್ನು ಪ್ರಶ್ನಿಸಲಾಗುತ್ತಿದೆ. ಅರ್ಜೆಂಟೀನಾ ಹೀಗೆ ಫುಟ್ಬಾಲ್ ನ ಖಳನಾಗಿ ಬೆಳೆದದ್ದು ಹೇಗೆ?

ಫುಟ್ಬಾಲ್ ಅಭಿಮಾನಿಗಳು ಇದೀಗ ಲಿಯೊನೆಲ್ ಮೆಸ್ಸಿಯ ಬದಲಾಗಿ ರೆಫ್ರಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ! ಹೌದು, ವರ್ಷಗಳಿಂದ ಫುಟ್ಬಾಲ್ ಜಗತ್ತು ಅರ್ಜೆಂಟೀನಾ ಗೆಲ್ಲಬೇಕು ಎಂದು ಬಯಸಿತ್ತು. ಮುಖ್ಯವಾಗಿ ಮೆಸ್ಸಿಯ ಗೆಲುವನ್ನು ಬಯಸಿತ್ತು. ಸುಮಾರು 2 ದಶಕಗಳವರೆಗೆ ಮೆಸ್ಸಿ ಫುಟ್ಬಾಲ್ ನ ದುರಂತ ನಾಯಕನಾಗಿದ್ದರು. ಪ್ರತಿ ಸೋಲು ಅವರ ವಿಶ್ವಕಪ್ ಗೆಲುವನ್ನು ಕಸಿದುಕೊಳ್ಳುತ್ತಿತ್ತು. 2014ರಲ್ಲಿ ವಿಶ್ವಕಪ್ ಫೈನಲ್ ನಲ್ಲಿ ಅರ್ಜೆಂಟೀನಾ ಜರ್ಮನಿ ವಿರುದ್ಧ ಸೋತಾಗ ತಟಸ್ಥ ಫುಟ್ಬಾಲ್ ಅಭಿಮಾನಿಗಳು ಕೂಡ ಮೆಸ್ಸಿಯ ಪರವಾಗಿ ನಿಂತು ಬೇಸರ ವ್ಯಕ್ತಪಡಿಸಿದರು.

ಕೋಪಾ ಅಮೆರಿಕ ಫೈನಲ್ನಲ್ಲಿ 2015 ಮತ್ತು 2016ರಲ್ಲಿ ಮತ್ತೆ ಮೆಸ್ಸಿಯ ತಂಡ ಸೋತಾಗ ಆ ಅಭಿಮಾನ ಇನ್ನಷ್ಟು ಹೆಚ್ಚಾಯಿತು. ಎರಡನೇ ಸೋಲಿನ ನಂತರ ಮೆಸ್ಸಿ ಅಲ್ಪ ಸಮಯದವರೆಗೆ ನಿವೃತ್ತಿ ಘೋಷಿಸಿದಾಗ ಅವರ ಪ್ರತಿಸ್ಪರ್ಧಿ ತಂಡಗಳ ಅಭಿಮಾನಿಗಳೂ ಮರಳಿ ಫುಟ್ಬಾಲ್ ಕಣಕ್ಕೆ ಇಳಿಯುವಂತೆ ಅವರನ್ನು ಬೇಡಿಕೊಂಡರು. ದುರಂತ ನಾಯಕನಾಗಿ ಕಂಡ ಮೆಸ್ಸಿಯನ್ನು ಜಗತ್ತು ಪ್ರೀತಿಸಿತು. ಅಂತಿಮ ಸುತ್ತಿನಲ್ಲಿ ಸೋಲುವ ತಂಡವಾಗಿ ಕಂಡ ಕಾರಣ ಜಗತ್ತು ಅರ್ಜೆಂಟೀನಾ ಪರವಾಗಿ ನಿಂತಿತ್ತು.

ಆ ನಂತರ ಅರ್ಜೆಂಟೀನಾ ಗೆಲ್ಲಲು ಆರಂಭಿಸಿತು. 2021ರಲ್ಲಿ ಕೋಪಾ ಅಮೆರಿಕ ಪಂದ್ಯಾವಳಿ ಗೆದ್ದುಕೊಂಡಿತು. 2022ರಲ್ಲಿ Finalissima ಟ್ರೋಫಿಯೂ ಬಂತು. ಖತರ್ ವಿಶ್ವಕಪ್ ಗೆಲುವನ್ನೂ ಮೆಸ್ಸಿ ಸಾಧಿಸಿದರು. ಅಲ್ಲಿಗೆ ಅವರ ಫೇರಿಟೇಲ್ ಫುಟ್ಬಾಲ್ ಪಯಣ ಪೂರ್ಣಗೊಂಡಿತು. ಖತರ್ ಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದ ನಂತರ ಫುಟ್ಬಾಲ್ ಜಗತ್ತಿನ ಮನೋಸ್ಥಿತಿ ಬದಲಾಗಲು ಆರಂಭವಾಯಿತು. ನಾಯಕರು ಖಳರಾದರು!

ಬಹಳ ವರ್ಷಗಳಿಂದ ಫುಟ್ಬಾಲ್ ಪಂದ್ಯಾವಳಿಗಳ ಫೈನಲ್ ನಲ್ಲಿ ಸೋಲುತ್ತಿದ್ದ ಅರ್ಜೆಂಟೀನಾ ತಂಡ ಇದೀಗ ಅಗತ್ಯಕ್ಕಿಂತ ಹೆಚ್ಚು ಟ್ರೋಫಿಗಳನ್ನು ಗೆಲ್ಲುತ್ತಿದೆ ಎನ್ನುವ ಆರೋಪ ಕೇಳಿಬರಲಾರಂಭಿಸಿತು. ಮೆಸ್ಸಿ ಫುಟ್ಬಾಲ್ ಕಪ್ ಗಳನ್ನು ಗೆಲ್ಲಬೇಕು ಎಂದು ಬಯಸುತ್ತಿದ್ದವರೇ ಈಗ ಅರ್ಜೆಂಟೀನಾ ಪಂದ್ಯಾವಳಿಯಿಂದ ಹೊರ ಹೋಗಬೇಕು ಎಂದು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.

ವಾಸ್ತವದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಅರ್ಜೆಂಟೀನಾ ಆಟಗಾರರು ಬಹಳ ಪ್ರತಿಭಾವಂತರು. ಅವರ ಬೆಂಬಲಿಗರು ಈಗಲೂ ಫುಟ್ಬಾಲ್ ಹುಚ್ಚನ್ನು ಹೊತ್ತುಕೊಂಡವರೇ. ಫುಟ್ಬಾಲ್ ಇಂದಿಗೂ ಭಾವನಾತ್ಮಕ, ಗೊಂದಲಮಯ ಮತ್ತು ತೀವ್ರ ಸ್ಪರ್ಧೆಯ ಕಣವಾಗಿದೆ. ಆದರೆ, ಖತರ್ ವಿಶ್ವಕಪ್ ನಂತರ ಅರ್ಜೆಂಟೀನಾ ಟೀಕಾಕಾರರ ಪ್ರಿಯ ತಂಡವಾಗಿದೆ. ಈಗಿನ ವಿಶ್ವಕಪ್ ಪಂದ್ಯಾವಳಿ ಅದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ.

ಖತರ್ ನಲ್ಲಿ ಅರ್ಜೆಂಟಿನಾ ಏಳು ಪಂದ್ಯಗಳನ್ನು ಗೆದ್ದಿತ್ತು. ಸೆಮಿಫೈನಲ್ ನಲ್ಲಿ ಕ್ರೊವೇಷಿಯವನ್ನು ಸುಲಭವಾಗಿ ಸೋಲಿಸಿದರೆ, ಫೈನಲ್ ಪಂದ್ಯದಲ್ಲಿ ಕಠಿಣ ಹೋರಾಟದಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿತ್ತು. ಹಾಗಿದ್ದರೂ, ಪಂದ್ಯಾವಳಿಯ ನಂತರ ಟೀಕಾಕಾರರು ಒಟ್ಟು ವಿಶ್ವಕಪ್ ಅನ್ನು ಅರ್ಜೆಂಟೀನಾ ತಂಡದ ಗೆಲುವಿಗಾಗಿ ಸಿದ್ಧಪಡಿಸಲಾಗಿತ್ತು ಎಂದು ಟೀಕಿಸಲು ಆರಂಭಿಸಿದರು.

ಅರ್ಜೆಂಟೀನಾಗೆ ನೀಡಿದ ಪೆನಾಲ್ಟಿಗಳು ಜಾಗತಿಕವಾಗಿ ಚರ್ಚೆಗೆ ಒಳಗಾದವು. ಸಾಮಾಜಿಕ ಜಾಲತಾಣಗಳಲ್ಲಿ “ಪೆಸ್ಸಿ” ತಮಾಷೆಗಳು ಹರಡಿದವು. ರೆಫ್ರಿಗಳ ಪ್ರತಿ ನಿರ್ಧಾರಗಳು ಎಲ್ಲಾ ಚೌಕಟ್ಟುಗಳಲ್ಲೂ ತಪಾಸಣೆಗೆ ಒಳಗಾದವು. ಪ್ರತಿ ವೀಡಿಯೋ ರೆಫ್ರಿ ಮಧ್ಯಪ್ರವೇಶ ಅರ್ಜೆಂಟೀನಾ ಪರವಾದ ಪಿತೂರಿಗೆ ಸಾಕ್ಷ್ಯ ಒದಗಿಸಿದವು!

ಹಾಗೆ ನೋಡಿದರೆ ಅರ್ಜೆಂಟೀನಾ ಮಾತ್ರ ಪ್ರಮುಖ ಪಂದ್ಯಾವಳಿಗಳಲ್ಲಿ ಪೆನಾಲ್ಟಿಗಳ ಲಾಭ ಪಡೆದ ತಂಡವಲ್ಲ. ಪರವಾದ ನಿರ್ಧಾರಗಳನ್ನು ಇತರ ತಂಡಗಳೂ ಪಡೆದಿರುವುದು ಚರ್ಚೆಗೆ ಒಳಗಾಗಿವೆ. ಫುಟ್ಬಾಲ್ ಇತಿಹಾಸ ಇಂತಹ ಅನೇಕ ವಿವಾದಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇಂಗ್ಲೆಂಡ್ ನ 1966ರ ವಿಜಯ ಈಗಲೂ ಚರ್ಚೆಗೆ ಒಳಗಾಗುತ್ತಿದೆ. ಏಕೆಂದರೆ ಜೆಫ್ ಹೆರ್ಸ್ಟ್ ಅವರ ಪ್ರಸಿದ್ಧ ‘ವೆಂಬ್ಲಿ ಗೋಲ್’ ಕಾರಣದಿಂದಾಗಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಆದರೆ ಆ ಗೋಲು ಹೊಡೆದಾಗ ಚೆಂಡು ಸಂಪೂರ್ಣ ಗೆರೆ ದಾಟಲಿಲ್ಲ ಎಂದು ಅನೇಕರು ಅಭಿಪ್ರಾಯಪಡುತ್ತಾರೆ.

1990ರ ವಿಶ್ವಕಪ್ ಫೈನಲ್ ನಲ್ಲಿ ಪಶ್ಚಿಮ ಜರ್ಮನಿಗೆ ನೀಡಲಾದ ಪೆನಾಲ್ಟಿ ಮತ್ತು ಪೆಡ್ರೊ ಮೊನ್ಜಾನ್ ಅವರ ಔಟ್ಗೆ ಅರ್ಜೆಂಟೀನಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಿರ್ಧಾರಗಳು ಫಲಿತಾಂಶವನ್ನು ರೂಪಿಸಿವೆ ಎಂದು ಅನೇಕರು ನಂಬುತ್ತಾರೆ. ಸ್ಪೇನ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿಗಳು ಪ್ರಮುಖ ಪಂದ್ಯಾವಳಿಗಳ ವಿಜಯದಲ್ಲಿ ವಿವಾದಾತ್ಮಕ ಕ್ಷಣಗಳನ್ನು ಎದುರಿಸಿವೆ.

ಹಾಗಿದ್ದರೂ ಅರ್ಜೆಂಟೀನಾದ ಸಾಧನೆಯನ್ನು ಸಂಶಯದಿಂದ ಗಮನಿಸಲಾಗುತ್ತಿದೆ. ಅನೇಕ ಮಂದಿ ಈಗಾಗಲೇ ಫಿಫಾ ಅರ್ಜೆಂಟೀನಾ ಪರವಾಗಿದೆ ಎಂದು ನಂಬಿದ್ದಾರೆ. ವಿಶ್ವಾದ್ಯಂತ ಅನೇಕ ಫುಟ್ಬಾಲ್ ಅಭಿಮಾನಿಗಳು ಅರ್ಜೆಂಟೀನಾ ಸೋಲಬೇಕು ಎಂದು ಬಯಸುತ್ತಿದ್ದಾರೆ. ಅದಕ್ಕೆ ವಿವಾದಾತ್ಮಕ ವೀಡಿಯೋ ರೆಫ್ರಿ ನಿರ್ಧಾರಗಳು, ಮೈದಾನದಲ್ಲಿನ ವರ್ತನೆಗಳು ಮತ್ತು ಅಹಂಕಾರಗಳನ್ನು ಕಾರಣಗಳನ್ನಾಗಿ ನೀಡಲಾಗುತ್ತಿದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News