×
Ad

ಭಾರತ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದ ಪ್ಯಾರಿಸ್ ಮ್ಯಾಜಿಸ್ಟ್ರೇಟ್

Update: 2023-07-14 22:47 IST

-ಆರ್. ಜೀವಿ

​ಭಾರತದ ಅತಿ ದೊಡ್ಡ ರಕ್ಷಣಾ ಹಗರಣವೆನ್ನಲಾಗುವ ರಫೇಲ್ ಹಗರಣದ ತನಿಖೆ ದೇಶದಲ್ಲಿ ರೆಕ್ಕೆಮುರಿದುಕೊಂಡು ಬಿದ್ದು ಬಹಳ ಕಾಲವೇ ಆಗಿದೆ. ಆದರೆ ಫ್ರಾನ್ಸ್ ಸರ್ಕಾರ ಮಾತ್ರ ಇದರ ಬೆನ್ನು ಬಿಡುತ್ತಲೇ ಇಲ್ಲ.

ಈಗ ಅದು ತನಿಖೆಗೆ ಸಹಕರಿಸುವಂತೆ ಭಾರತವನ್ನು ಕೋರಿದೆ. ಮೋದಿ ಫ್ರಾನ್ಸ್ ಭೇಟಿಗೆ ಹೊರಡಲಿರುವಾಗಲೇ, ಪ್ಯಾರಿಸ್ ಮ್ಯಾಜಿಸ್ಟ್ರೇಟ್ ಗಳು ರಫೇಲ್ ಹಗರಣದ ತನಿಖೆ ವಿಚಾರವಾಗಿ ಭಾರತ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿರುವುದಾಗಿ ಫ್ರೆಂಚ್ ನ್ಯೂಸ್ ಪೋರ್ಟಲ್ ಮೀಡಿಯಾಪಾರ್ಟ್ ಬಹಿರಂಗಪಡಿಸಿದೆ. ರಫೇಲ್ ಖರೀದಿಯಲ್ಲಿ ಹಗರಣವಾಗಿದೆ ಎಂದು ಮೊದಲು ಹೇಳಿದ್ದು ಇದೇ ಮೀಡಿಯಾ ಪಾರ್ಟ್.

ಈಗ ಪ್ರಧಾನಿ ಮೋದಿ ಎರಡು ದಿನಗಳ ಫ್ರಾನ್ಸ್ ಭೇಟಿ ಪ್ರಾರಂಭವಾಗುವಾಗಲೇ ಮಹತ್ವದ ಸುದ್ದಿ ಹೊರಬಂದಿದೆ. 2015-16ರಲ್ಲಿನ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ಫ್ರಾನ್ಸ್ ನ ಡಾಸೊ ಕಂಪೆನಿ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದೆ ಎಂಬ ಆರೋಪದ ಬಗ್ಗೆ ತಲೆಕೆಡಿಸಿಕೊಂಡಿರುವ ಫ್ರಾನ್ಸ್ ಸರ್ಕಾರ, ತನಿಖೆಯ ವಿಚಾರದಲ್ಲಿ ದೃಢವಾಗಿದೆ.

ಆದರೆ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೇವೆ ಎನ್ನುವ, ತಮಗಾಗದ ಎಲ್ಲರನ್ನೂ ದೇಶದ ಭದ್ರತೆಗೆ ಧಕ್ಕೆ ತರುವವರು ಎಂದು ಜೈಲಿಗಟ್ಟುವ ಮೋದಿ ಸರ್ಕಾರ ಮಾತ್ರ ದೇಶದ ರಕ್ಷಣೆಗೆ ಭಾರೀ ಅಪಾಯವೊಡ್ಡುವ ಸಾಧ್ಯತೆ ಇದೆಯೆನ್ನಲಾದ ಹಗರಣವನ್ನು ಕಸದ ಬುಟ್ಟಿಗೆ ಹಾಕಿ ಕೂತಿದೆ. ತನಿಖೆಗೆ ಸಹಕರಿಸಲು ಕೋರಿ ಫ್ರಾನ್ಸ್ ಬರೆದಿರುವ ಪತ್ರಕ್ಕೆ ಭಾರತ ಸರ್ಕಾರದ ಪ್ರತಿಕ್ರಿಯೆ ಏನಿರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಸಾಮಾನ್ಯವಾಗಿ ಈ ರೀತಿಯ ವಿನಂತಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿಭಾಯಿಸುತ್ತದೆ ಮತ್ತು ಅನಂತರ ಸಂಬಂಧಿಸಿದ ಇಲಾಖೆಗಳು ನೋಡಿಕೊಳ್ಳುತ್ತವೆ. ಈ ಹಗರಣದ ವಿಚಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ಮತ್ತು ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರಬಹುದು. ಸಿಬಿಐ ಮತ್ತು ಈ.ಡಿ ಕಾರ್ಯನಿರ್ವಹಿಸೋದು ಕ್ರಮವಾಗಿ ಈ ಸಚಿವಾಲಯಗಳ ಅಡಿಯಲ್ಲಿಯೇ.

ಇಲ್ಲಿ ಎರಡು ವಿಚಾರಗಳಿವೆ.

ಮೊದಲನೆಯದು, ಮೀಡಿಯಾಪಾರ್ಟ್ ಈ ಹಿಂದೆ ಬಹಿರಂಗಪಡಿಸಿದಂತೆ, ಡಾಸೊ 2016ರಲ್ಲಿ ಸಹಿ ಹಾಕಲಾದ ಒಪ್ಪಂದವನ್ನು ಗಟ್ಟಿಯಾಗಿಸುವ ಪ್ರಯತ್ನದ ಭಾಗವಾಗಿ ಡಾಸೊ ಭಾರತೀಯ ಮೂಲದ ವ್ಯಾಪಾರ ಮಧ್ಯವರ್ತಿ ಸುಷೇನ್ ಗುಪ್ತಾಗೆ ಹಲವಾರು ಮಿಲಿಯನ್ ಯುರೋಗಳನ್ನು ರಹಸ್ಯವಾಗಿ ಪಾವತಿಸಿದೆ ಎಂಬುದು.

ಎರಡನೆಯದು, ಮೀಡಿಯಾಪಾರ್ಟ್ ನ ಹೊಸ ಸ್ಫೋಟಕ ವರದಿ ಹೇಳುತ್ತಿರುವ ಪ್ರಕಾರ, ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ 2015ರಲ್ಲಿ ಫ್ರಾನ್ಸ್ ನಿಂದ ದೊಡ್ಡ ಮೊತ್ತದ ತೆರಿಗೆ ಕಡಿತ ಪಡೆದರೆಂಬುದು. 151 ಮಿಲಿಯನ್ ಯೂರೋ ತೆರಿಗೆ ಬಿಲ್ ಕಡಿತಗೊಳಿಸುವಂತೆ ಆಗಿನ ಫ್ರೆಂಚ್ ವಿತ್ತ ಸಚಿವ ಈಗ ಅಲ್ಲಿನ ಅಧ್ಯಕ್ಷರಾಗಿರುವ ಇಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಹಣಕಾಸು ಸಚಿವ ಮೈಕೆಲ್ ಸಪಿನ್ ಅವರಿಗೆ ಪತ್ರ ಬರೆದಿದ್ದರೆಂದು ಮೀಡಿಯಾ ಪಾರ್ಟ್ ಹೇಳಿದೆ. ಅಷ್ಟೇ ಅಲ್ಲ, ಒಂದು ವಾರದಲ್ಲಿಯೇ ಆ ವಿಚಾರ ಇತ್ಯರ್ಥವಾಗಿ, 6.6 ಮಿಲಿಯನ್ ಯೂರೋ ಮಾತ್ರ ಪಾವತಿಸಲು ಅನಿಲ್ ಅಂಬಾನಿಗೆ ಕೇಳಲಾಯಿತೆಂದೂ ಮೀಡಿಯಾಪಾರ್ಟ್ ವರದಿ ಬಹಿರಂಗಪಡಿಸಿದೆ. ಆ ಮೊತ್ತ ತೆರಿಗೆ ವ್ಯವಹಾರ ಚುಕ್ತಾಗೊಳಿಸಿಕೊಳ್ಳುವುದಕ್ಕೆ ಅಂಬಾನಿ ಪ್ರಸ್ತಾಪಿಸಿದ್ದ ಮೊತ್ತಕ್ಕೆ ಹತ್ತಿರದಲ್ಲಿತ್ತು ಎಂಬ ವಿಚಾರವನ್ನೂ ವರದಿ ಹೇಳಿದೆ.

ರಫೇಲ್ ಹಗರಣ ಏನು ಎಂಬುದನ್ನು ಒಮ್ಮೆ ಅವಲೋಕಿಸೋಣ. ಈಗಾಗಲೇ ಇರುವ ಆರೋಪಗಳ ಪ್ರಕಾರ, 126ರ ಬದಲು 36 ಯುದ್ಧವಿಮಾನಗಳ ಖರೀದಿಗೆ ಮೋದಿ ಏಕಾಏಕಿ ನಿರ್ಧರಿಸಿದರು. ಈ ನಿರ್ಧಾರ ರಕ್ಷಣಾ ಸಚಿವರಿಗೂ ಗೊತ್ತಿಲ್ಲದಂತೆ ಮತ್ತು ಸಚಿವ ಸಂಪುಟದ ಭದ್ರತಾ ಸಮಿತಿಯ ಅನುಮೋದನೆಯೂ ಇಲ್ಲದೆ ತೆಗೆದುಕೊಂಡದ್ದಾಗಿತ್ತು.

ಇದಕ್ಕೂ ಕೆಲದಿನಗಳ ಮೊದಲಷ್ಟೇ 126 ಯುದ್ಧವಿಮಾನಗಳ ಖರೀದಿ ಒಪ್ಪಂದ ಘೋಷಣೆಯಾಗಲಿರುವ ಬಗ್ಗೆ ಎಚ್ಎಎಲ್ ಹೇಳಿತ್ತು. ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಕೂಡ ಅಂತಿಮ ಹಂತದ ಮಾತುಕತೆ ನಡೆಯುತ್ತಿರುವುದರ ಬಗ್ಗೆ ಹೇಳಿದ್ದರು. ಹೀಗಿರುವಾಗಲೇ ಮೋದಿ ನಿರ್ಧರಿಸಿದ್ದು ಬೇರೆಯೇ ಇತ್ತು.

ಮೋದಿ ಜೊತೆ ಫ್ರಾನ್ಸ್ ಗೆ ತೆರಳಿದ್ದ ನಿಯೋಗದಲ್ಲಿ ಎಚ್ಎಎಲ್ ಆಗಿನ ಅಧ್ಯಕ್ಷ ಸುವರ್ಣರಾಜು ಕೂಡ ಇದ್ದರು. ಆದರೆ ಫ್ರಾನ್ಸ್ ಅಧ್ಯಕ್ಷರನ್ನು ಭೇಟಿಯಾಗುವ ಹೊತ್ತಿಗೆ ಎಲ್ಲವೂ ಪಲ್ಲಟವಾಗಿತ್ತು. ಆ ಭೇಟಿಯ ವೇಳೆ ಸುವರ್ಣರಾಜು ಇರಲಿಲ್ಲ. ಬದಲಿಗೆ ಅನಿಲ್ ಅಂಬಾನಿಯಿದ್ದರು. ಅಂದರೆ ಒಪ್ಪಂದದ ಪಾಲುದಾರಿಕೆಯಲ್ಲಿ ಎಚ್ಎಎಲ್ ಬದಲಿಗೆ ದಿಢೀರನೇ ರಿಲಯನ್ಸ್ ಬಂದಿತ್ತು.

ಅದಕ್ಕೂ ವಾರದ ಮುಂಚೆಯಷ್ಟೇ ನೊಂದಾಯಿತಗೊಂಡಿದ್ದ, ರಕ್ಷಣಾ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಅನುಭವ ಹಾಗು ಸಾಕಷ್ಟು ಹಣವೂ ಇಲ್ಲದಿದ್ದ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿ ರಫೇಲ್ ಖರೀದಿಯಲ್ಲಿ ಭಾರತೀಯ ಪಾಲುದಾರ ಕಂಪನಿಯಾಗಿ ಸೇರಿದ ಮಹಾ ಮ್ಯಾಜಿಕ್ ಒಂದು ನಡೆದುಹೋಯಿತು. ಮೋದಿ ಹೈ ತೋ ಮುಮ್ಕಿನ್ ಹೈ ಅಂತಾರಲ್ಲ... ಹಾಗೆ.

72 ಯುದ್ಧವಿಮಾನಗಳ ಅಗತ್ಯವಿದೆ ಎಂದು ಭಾರತೀಯ ವಾಯುಪಡೆ ಹೇಳಿದ್ದರೂ, 36 ಯುದ್ಧವಿಮಾನಗಳನ್ನಷ್ಟೇ ಖರೀದಿಸಲು ಮೋದಿ ನಿರ್ಧರಿಸಿದ್ದರು. 2015ರ ಏಪ್ರಿಲ್ನಲ್ಲಿ ಒಪ್ಪಂದ ಘೋಷಣೆಯಾಯಿತು.

ಇನ್ನೂ ಒಂದು ವಿಲಕ್ಷಣ ಸಂಗತಿ ಈ ಒಪ್ಪಂದದಲ್ಲಿದೆ. 520 ಕೋಟಿ ಯೂರೊ ಅಂದರೆ ಆಗಿನ ಲೆಕ್ಕದಲ್ಲಿ ಸುಮಾರು 4 ಲಕ್ಷ ಕೋಟಿ ರೂಪಾಯಿಯಷ್ಟು ಬೆಲೆ ನಿಗದಿಪಡಿಸುವಂತೆ ತಜ್ಞರ ಸಲಹೆಯಿತ್ತು. ಆದರೆ ಮೋದಿ ನೇತೃತ್ವದ ಸಂಪುಟ ಭದ್ರತಾ ಸಮಿತಿ 820 ಕೋಟಿ ಯೂರೋಗೆ ಅಂದರೆ ಸುಮಾರು 6.41 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಒಪ್ಪಂದ ರೂಪಿಸಲು ಒಪ್ಪಿಗೆ ನೀಡಿತು. ಅಂತಿಮ ಒಪ್ಪಂದಕ್ಕೆ ಸಹಿಹಾಕುವ ಕೆಲವೇ ದಿನಗಳ ಮೊದಲು ತೆಗೆದುಕೊಳ್ಳಲಾಗಿದ್ದ ಈ ನಿರ್ಧಾರ ಡಾಸೊ ಕಂಪನಿಯ ಪರವಾಗಿಯೇ ಇತ್ತು.

ಒಪ್ಪಂದವಾಗುವಾಗ ಡಾಸೊ ಕಂಪನಿ ಬ್ಯಾಂಕ್ ಖಾತರಿ ಕೊಡಲು ನಿರಾಕರಿಸಿದಾಗ ಅದಕ್ಕೂ ಮೋದಿ ಸರ್ಕಾರ ಹೂಂಗುಟ್ಟಿತು. ವಿಮಾನಗಳ ಹಸ್ತಾಂತರ ಮೂರು ವರ್ಷದ ಬಳಿಕವೇ ಆಗಿದ್ದರೂ ದೊಡ್ಡ ಮೊತ್ತದ ಮುಂಗಡ ನೀಡುವುದಕ್ಕೂ ಒಪ್ಪಿಕೊಂಡಿತು. ಭ್ರಷ್ಟಾಚಾರ ತಡೆ ನಿಯಮದ ವ್ಯಾಪ್ತಿಗೂ ಡಾಸೊ ಕಂಪನಿ ಬರದ ಹಾಗೆ ನೋಡಿಕೊಳ್ಳಲಾಯಿತು. ಅದರ ಅಕೌಂಟ್ ಬುಕ್ ಪರಿಶೀಲಿಸುವ ಹಕ್ಕನ್ನೂ ಬಿಟ್ಟುಕೊಟ್ಟಿತು.

ಇದೇ ವೇಳೆ ಚುನಾವಣಾ ಬಾಂಡ್ ನಿಯಮಕ್ಕೂ ತಿದ್ದಪಡಿ ತಂದು, ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿಗೆ ಡಾಸೊ ಕಂಪನಿ ಕೊಟ್ಟ ಲಂಚವೂ ಗುಪ್ತವಾಗಿರುವಂತೆ ಮಾಡಲಾಯಿತು ಎಂಬ ಆರೋಪಗಳೂ ಕೇಳಿ ಬಂದಿದ್ದವು. ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡ 126 ಯುದ್ಧವಿಮಾನಗಳ ಖರೀದಿ ವಿಚಾರ ಮೋದಿ ಸರ್ಕಾರದ ಕಾರಣದಿಂದಾಗಿ ಹೀಗೆ ದಿಕ್ಕೆಟ್ಟಿತ್ತು. ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕಿದ್ದ ಮಹತ್ವದ ನಡೆಯೊಂದನ್ನು ಯಾರ್ಯಾರದೋ ಹಿತಾಸಕ್ತಿಗೆ ಬಲಿ ಕೊಡಲಾಯಿತು ಎಂದು ವಿಪಕ್ಷ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ನ ರಾಹುಲ್ ಗಾಂಧಿ ದೂರಿದರು.

ಅಂಬಾನಿ ಕಂಪನಿಯನ್ನು ರಫೇಲ್‌ನ ಪಾಲುದಾರ ಕಂಪನಿಯಾಗಿ ಸೇರಿಸಿದ್ದು ಮೋದಿ ಸರ್ಕಾರದ ಒತ್ತಾಯದಿಂದ ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ 2018ರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಆದರೆ ಡಾಸೊ ಮತ್ತು ರಿಲಯನ್ಸ್ ಅದನ್ನು ಅಲ್ಲಗಳೆದಿದ್ದವು. ಫ್ರೆಂಚ್ ಕಂಪನಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ತನ್ನ ಪಾತ್ರವೇನಿಲ್ಲ ಎಂದು ಮೋದಿ ಸರ್ಕಾರವೂ ಜಾರಿಕೊಂಡಿತ್ತು.

ಸುಪ್ರೀಂ ಕೋರ್ಟ್ ತನಿಖೆಯ ಅಗತ್ಯವಿಲ್ಲ ಎಂದಿತು. ಮೋದಿ ಸರ್ಕಾರ ಅದನ್ನೇ ತನಗೆ ಸಿಕ್ಕ ಕ್ಲೀನ್ ಚಿಟ್ ಎಂದು ಬಿಂಬಿಸಿತು.ಆದರೆ ಫ್ರಾನ್ಸ್ನಲ್ಲಿ ಮಾತ್ರ ಈ ಹಗರಣ ಪ್ರಸ್ತುತ ಕ್ರಿಮಿನಲ್ ತನಿಖೆಯ ವಿಷಯವಾಗಿದೆ. ಹೆಚ್ಚು ಹಣ ಕೊಟ್ಟು ಕಡಿಮೆ ಯುದ್ಧವಿಮಾನಗಳನ್ನು ಪಡೆದ ಈ ಒಪ್ಪಂದದಲ್ಲಿ ಅಕ್ರಮದ ವಾಸನೆ ಢಾಳಾಗಿಯೇ ಇದೆ. ತನಿಖಾ ಸಂಸ್ಥೆಗಳಿಂದಲೂ ಇದರ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಆದರೆ ಎಲ್ಲವನ್ನೂ ಸರ್ಕಾರ ಅಲ್ಲಲ್ಲೇ ಅದುಮಿಹಾಕಿತು. ಹಗರಣಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆಗಳೇ ಕಳವಾದವು. ಎಲ್ಲವೂ ಹಗರಣದ ತನಿಖೆಯಾಗದಂತೆ ನೋಡಿಕೊಳ್ಳುವ ಸರ್ಕಾರದ ಹಿಕಮತ್ತಿನಿಂದಲೇ ಆಗಿತ್ತು ಎಂದು ವಿಪಕ್ಷಗಳು ದೂರಿದವು. ​500 ಕೋಟಿಗೆ ಸಿಗಲಿದ್ದ ಒಂದೊಂದು ಫೈಟರ್ ಜೆಟ್ ಅನ್ನು1600 ಕೋಟಿಗೂ ಹೆಚ್ಚು ದುಡ್ಡು ಕೊಟ್ಟು ಮೋದಿ ಸರಕಾರ ಖರೀದಿಸುತ್ತಿದೆ ಎಂಬ ಆರೋಪ ಕೇಳಿ ಬಂತು. ​ಸರ್ಕಾರ ತಾನು ಕ್ಲೀನ್ ಎಂದು ಕೊಚ್ಚಿಕೊಂಡಿತು. ರಾಹುಲ್ ಗಾಂಧಿ 2019 ರ ಲೋಕಸಭಾ ಚುನಾವಣೆಯಲ್ಲಿ ' ಚೌಕಿದಾರ್ ಚೋರ್ ಹೈ' ಎಂದೇ ಪ್ರಚಾರ ಮಾಡಿದರು. ಆ ಚುನಾವಣೆಯಲ್ಲಿ ಮೋದಿ ಹಾಗು ಬಿಜೆಪಿ ಭರ್ಜರಿಯಾಗಿ ಗೆದ್ದ ಬೆನ್ನಿಗೇ ಭಾರತದಲ್ಲಿ ರಫೇಲ್ ಹಗರಣ ಮೂಲೆ ಸೇರಿತು. ಆಮೇಲೆ ಸುಪ್ರೀಂ ಕೋರ್ಟ್ ಕೂಡ ರಫೇಲ್ ಖರೀದಿ ಸಂಬಂಧಿತ ಎಲ್ಲ ಅರ್ಜಿಗಳನ್ನು ವಜಾ ಮಾಡಿತು.

ಈಗ ಮತ್ತೆ ರಫೇಲ್ ಭೂತ ಎದ್ದಿದೆ. ತನಿಖೆಗೆ ಸಹಕರಿಸಲು ಫ್ರಾನ್ಸ್ ಕೇಳಿರುವ ವಿಚಾರದಲ್ಲಿ ಮೋದಿ ಸರ್ಕಾರದ ನಡೆ ಇನ್ನೇನಿರುತ್ತದೊ ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News