ಒಂದು ವರ್ಷ ಪೂರೈಸಿದ S I R: ಸಿಗದ ಅಕ್ರಮ ವಲಸಿಗರ ಸಂಖ್ಯೆ, ಮತದಾನದ ಹಕ್ಕಿನಿಂದ ಕೋಟ್ಯಂತರ ಜನ ವಂಚಿತ?
Photo: PTI
ಚುನಾವಣಾ ಆಯೋಗವು 2025ರ ಜೂನ್ 24ರಂದು ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ಘೋಷಿಸಿತ್ತು. ನಿಯಮ ಪುಸ್ತಕಗಳಲ್ಲೇ ಇಲ್ಲದ ಈ ಪ್ರಕ್ರಿಯೆಗೆ "ಅಕ್ರಮ ವಿದೇಶಿ ವಲಸಿಗರ ಹೆಸರುಗಳು ಸೇರ್ಪಡೆಯಾಗಿರುವುದು" ಸೇರಿದಂತೆ ಹಲವು ಕಾರಣಗಳನ್ನು ಆಯೋಗ ನೀಡಿತ್ತು. ಆದರೆ, S I R ಆರಂಭವಾಗಿ ಒಂದು ವರ್ಷ ಕಳೆದಿದ್ದರೂ, ಈಗಾಗಲೇ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಪತ್ತೆಯಾಗಿರುವ "ಅಕ್ರಮ ವಿದೇಶಿ ವಲಸಿಗರ" ನಿಖರ ಸಂಖ್ಯೆಯನ್ನು ನೀಡಲು ಚುನಾವಣಾ ಆಯೋಗಕ್ಕೆ ಇಂದಿಗೂ ಸಾಧ್ಯವಾಗಿಲ್ಲ.
ಆದರೆ, ಕಳೆದ ಒಂದು ವರ್ಷದಲ್ಲಿ ನಡೆದ ಈ ಪ್ರಕ್ರಿಯೆಯು ಕೆಲವು ಬೇರೆ ಅಂಕಿ-ಅಂಶಗಳನ್ನು ಹೊರಹಾಕಿದೆ. ಈ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 5 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇಷ್ಟೇ ಅಲ್ಲದೆ, ಕಳೆದ ಎಪ್ರಿಲ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳವೊಂದರಲ್ಲೇ ಸುಮಾರು 27 ಲಕ್ಷ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಇವರೆಲ್ಲರೂ ತಮ್ಮ ಮೇಲ್ಮನವಿಗಳ ಕುರಿತು ನ್ಯಾಯಾಂಗ ನ್ಯಾಯಮಂಡಳಿಗಳು ನೀಡುವ ತೀರ್ಪಿಗಾಗಿ ಇಂದಿಗೂ ಕಾಯುತ್ತಿದ್ದಾರೆ.
ಈ ಪರಿಷ್ಕರಣಾ ಪ್ರಕ್ರಿಯೆಯು ದೇಶದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ನಾಗರಿಕರ ಹಕ್ಕುಗಳ ನಿರಾಕರಣೆಗೆ ಕಾರಣವಾಗಿದೆ. S I R ಮೂಲಕ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟ ಜನರಿಗೆ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಹೊಸ ಬಿಜೆಪಿ ಮುಖ್ಯಮಂತ್ರಿಗಳು ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಆದರೆ, ಕಳೆದ ತಿಂಗಳು S I R ಪ್ರಕ್ರಿಯೆಯನ್ನು ಎತ್ತಿಹಿಡಿದು ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, "ಚುನಾವಣಾ ಆಯೋಗವು ಕೇವಲ ಮತದಾರರ ಪಟ್ಟಿ ಸಿದ್ಧಪಡಿಸುವ ಉದ್ದೇಶಕ್ಕಾಗಿ ಮಾತ್ರ ಪೌರತ್ವವನ್ನು ಪರಿಶೀಲಿಸಬಹುದೇ ವಿನಃ, ಪೌರತ್ವವನ್ನು ನಿರ್ಧರಿಸುವ ಪೂರ್ಣ ಅಧಿಕಾರ ಕೇವಲ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ" ಎಂದು ಸ್ಪಷ್ಟಪಡಿಸಿತ್ತು. ಇದರ ಹೊರತಾಗಿಯೂ ರಾಜ್ಯ ಸರ್ಕಾರಗಳು ಈ ರೀತಿ ಹಕ್ಕುಗಳನ್ನು ನಿರಾಕರಿಸುತ್ತಿವೆ.
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಈ ಪ್ರಕ್ರಿಯೆಯನ್ನು ಘೋಷಿಸಿದಾಗ ಅದರ ಸಮಯದ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಕಳೆದ ಒಂದು ವರ್ಷದಲ್ಲಿ ಚುನಾವಣಾ ಆಯೋಗವು ವಿವಿಧ ರಾಜ್ಯಗಳಲ್ಲಿ S I R ಪ್ರಕ್ರಿಯೆಗೆ ಬೇರೆ ಬೇರೆ ವಿಧಾನಗಳನ್ನು ಬಳಸಿದೆ. ಬಿಹಾರದಲ್ಲಿ ಒಂದು ವಿಧಾನ, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ವಿಧಾನವನ್ನು ಅನುಸರಿಸಿದರೆ, ಅಸ್ಸಾಂನಲ್ಲಿ ಯಾವುದೇ ಪರಿಷ್ಕರಣೆ ನಡೆಸಿಲ್ಲ. ಹೀಗೆ ಮಾಡಲು ಆಯೋಗವು ಯಾವುದೇ ಸೂಕ್ತ ಕಾರಣವನ್ನೂ ನೀಡಿಲ್ಲ.
S I R ಜಾರಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ಅದರ ಒಟ್ಟಾರೆ ಪ್ರಭಾವದ ಕುರಿತು 'the wire' ನಡೆಸಿದ ಅವಲೋಕನ ಇಲ್ಲಿದೆ:
►ಮತದಾರರ ಪಟ್ಟಿಯಲ್ಲಿ ಪತ್ತೆಯಾಗದ 'ವಿದೇಶಿಗರ' ಸಂಖ್ಯೆ
S I R ಆರಂಭವಾದಾಗಿನಿಂದ, ದೇಶದಲ್ಲಿ ಅಕ್ರಮ ವಲಸಿಗರು ಇದ್ದಾರೆ ಎಂಬ ತನ್ನ ರಾಜಕೀಯ ನಿರೂಪಣೆಯನ್ನು ಬಲಪಡಿಸಲು ಬಿಜೆಪಿ ಈ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಚುನಾವಣಾ ರ‍್ಯಾಲಿಗಳಿಂದ ಹಿಡಿದು ಸಂಸತ್ತಿನವರೆಗೆ, ಕೋಟ್ಯಂತರ ಮತದಾರರು ತಮ್ಮ ಪೌರತ್ವಕ್ಕೆ ದಾಖಲೆ ಪುರಾವೆಗಳನ್ನು ಸಲ್ಲಿಸಬೇಕಾದ ಈ ಪರಿಷ್ಕರಣಾ ಪ್ರಕ್ರಿಯೆಯನ್ನು ಬಿಜೆಪಿ ಸರ್ಕಾರವು ತನ್ನ "ಪತ್ತೆ ಹಚ್ಚಿ, ಪಟ್ಟಿಯಿಂದ ತೆಗೆದುಹಾಕಿ ಮತ್ತು ದೇಶದಿಂದ ಹೊರಗಟ್ಟಿ" ಎಂಬ ನೀತಿಯ ಭಾಗವಾಗಿ ಸಮರ್ಥಿಸಿಕೊಳ್ಳುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಭಾರತದ ನಾಗರಿಕರಲ್ಲದ ಮತದಾರರನ್ನು ಮಾತ್ರ S I R ಮೂಲಕ ಪಟ್ಟಿಯಿಂದ ಕೈಬಿಡಲಾಗಿದೆ" ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಪ್ರಾಯೋಗಿಕವಾಗಿ ನಡೆಸಲಾದ S I R ಪೂರ್ಣಗೊಂಡ ನಂತರ, ಅಕ್ಟೋಬರ್ 5ರಂದು ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮತದಾರರ ಪಟ್ಟಿಯಲ್ಲಿ ಪತ್ತೆಯಾದ ವಿದೇಶಿ "ಅಕ್ರಮ ವಲಸಿಗರ" ಸಂಖ್ಯೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ. ಆದರೂ, ಅದೇ ತಿಂಗಳು, ಅಂದರೆ ಅಕ್ಟೋಬರ್ 27ರಂದು ಚುನಾವಣಾ ಆಯೋಗವು ಇತರ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ S I R ಆರಂಭಿಸುವುದಾಗಿ ಘೋಷಿಸಿದಾಗ, ಮತ್ತೊಮ್ಮೆ "ವಿದೇಶಿಗರ ತಪ್ಪು ಸೇರ್ಪಡೆ" ಸೇರಿದಂತೆ "ಮತದಾರರ ಪಟ್ಟಿಯಲ್ಲಿ ಆಗಿರುವ ಹಲವಾರು ಬದಲಾವಣೆಗಳನ್ನು" ತೋರಿಸಿತ್ತು.
ಆಗ ಮಾತನಾಡಿದ್ದ ಜ್ಞಾನೇಶ್ ಕುಮಾರ್, "ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯ ಗುಣಮಟ್ಟದ ಕುರಿತು ಚುನಾವಣಾ ಆಯೋಗದ ಮುಂದೆ ಹಲವು ಪ್ರಶ್ನೆಗಳನ್ನು ಎತ್ತಿವೆ. 1951ರಿಂದ 2004ರವರೆಗೆ ಸುಮಾರು 8 ಬಾರಿ ಈಗಾಗಲೇ S I R ನಡೆಸಲಾಗಿದೆ. ಕೊನೆಯ ಬಾರಿಗೆ 21 ವರ್ಷಗಳ ಹಿಂದೆ, ಅಂದರೆ 2002-2004ರ ನಡುವೆ ನಡೆಸಲಾಗಿತ್ತು" ಎಂದು ತಿಳಿಸಿದ್ದರು.
"ಕಳೆದ ಎರಡು ದಶಕಗಳಲ್ಲಿ ಮತದಾರರ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ. ಜನರು ಪದೇ ಪದೇ ವಲಸೆ ಹೋಗುವುದರಿಂದ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮೃತಪಟ್ಟ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಅಥವಾ ವಿದೇಶಿಗರ ಹೆಸರುಗಳು ತಪ್ಪಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಕಾರಣಗಳಿಗಾಗಿ ಚುನಾವಣಾ ಆಯೋಗವು ದೇಶಾದ್ಯಂತ ಹಂತ ಹಂತವಾಗಿ S I R ನಡೆಸಲು ನಿರ್ಧರಿಸಿದೆ. ಇದರ ಮೊದಲ ಹಂತವನ್ನು ಬಿಹಾರದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ" ಎಂದು ಅವರು ಹೇಳಿದ್ದರು.
ಆದರೆ, ಇಷ್ಟೆಲ್ಲ ಆದರೂ ಮತದಾರರ ಪಟ್ಟಿಯಲ್ಲಿ ಇದುವರೆಗೆ ಎಷ್ಟು ಜನ ವಿದೇಶಿಗರು ಪತ್ತೆಯಾಗಿದ್ದಾರೆ ಎಂಬ ಯಾವುದೇ ನಿಖರ ಅಂಕಿ-ಅಂಶವನ್ನು ನೀಡಲು ಚುನಾವಣಾ ಆಯೋಗಕ್ಕೆ ಇಂದಿಗೂ ಸಾಧ್ಯವಾಗಿಲ್ಲ.
►ವಿದೇಶಿಗರು ಎಂದು ಘೋಷಿಸದಿದ್ದರೂ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ನಾಗರಿಕರು
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾದ ವ್ಯಕ್ತಿಗಳು ವಿದೇಶಿಗರೇ ಅಥವಾ ಅಲ್ಲವೇ ಎಂಬುದನ್ನು ಅಂತಿಮವಾಗಿ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗದ್ದಲ್ಲ, ಬದಲಿಗೆ ಕೇಂದ್ರ ಸರ್ಕಾರದ್ದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಹಾಗಿದ್ದರೂ, ಕೇವಲ S I R ಪ್ರಕ್ರಿಯೆಯಲ್ಲಿ ಹೆಸರು ಕೈಬಿಡಲಾಗಿದೆ ಎಂಬ ಕಾರಣಕ್ಕೆ ಈಗಾಗಲೇ ಅನೇಕ ನಾಗರಿಕರು ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳು ಸೇರಿದಂತೆ ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮಹಿಳೆಯರಿಗೆ ನಗದು ವರ್ಗಾವಣೆ ಮಾಡುವ 'ಅನ್ನಪೂರ್ಣ ಯೋಜನೆ'ಯಡಿ, S I R ನಲ್ಲಿ ಹೆಸರು ಕಳೆದುಕೊಂಡ ಮಹಿಳೆಯರನ್ನು ಸೇರಿಸಲಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕ ಪಡಿತರ ವ್ಯವಸ್ಥೆಯಿಂದ "ಅರ್ಹರಲ್ಲದ" ಫಲಾನುಭವಿಗಳನ್ನು ಗುರುತಿಸಿ ಅವರ ಹೆಸರುಗಳನ್ನು ತೆಗೆದುಹಾಕಲು S I R ಪಟ್ಟಿಯನ್ನು ಆಧರಿಸಿ ರಾಜ್ಯಾದ್ಯಂತ ಪರಿಶೀಲನಾ ಕಾರ್ಯಾಚರಣೆ ನಡೆಸುವಂತೆ ಈ ತಿಂಗಳ ಆರಂಭದಲ್ಲಿ ಆದೇಶಿಸಿದೆ. ಇತ್ತ, ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ S I R ಪ್ರಕ್ರಿಯೆಯ ಬೆನ್ನಲ್ಲೇ ರಾಜ್ಯದಲ್ಲಿ 22 ಲಕ್ಷ ರೇಷನ್ ಕಾರ್ಡ್ ಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ ಎಂದು ಎಪ್ರಿಲ್ ನಲ್ಲಿ ತಿಳಿಸಿದ್ದರು.
ಯಾವ ನಾಗರಿಕರ ಮೇಲ್ಮನವಿಗಳು ರಾಜ್ಯದ 19 ನ್ಯಾಯಾಂಗ ನ್ಯಾಯಮಂಡಳಿಗಳಲ್ಲಿ ಬಾಕಿ ಉಳಿದಿವೆಯೋ, ಅವರು ಇತರ ಸರ್ಕಾರಿ ಪ್ರಕ್ರಿಯೆಗಳಲ್ಲೂ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಉದಾಹರಣೆಗೆ, 'The Telegraph' ಪತ್ರಿಕೆಯ ಮಾಜಿ ಸಂಪಾದಕ ಆರ್. ರಾಜಗೋಪಾಲ್ ಅವರ ಹೆಸರು S I Rನಲ್ಲಿ ಕೈಬಿಡಲ್ಪಟ್ಟಿರುವುದರಿಂದ, ಅವರ ಪಾಸ್‌ಪೋರ್ಟ್ ನವೀಕರಣ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ಕಳೆದ ತಿಂಗಳು ಈ ಪರಿಷ್ಕರಣಾ ಪ್ರಕ್ರಿಯೆಯನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, "ಚುನಾವಣಾ ಆಯೋಗದ ಈ ಪ್ರಕ್ರಿಯೆಯ ಪರಿಣಾಮಗಳು ಕೇವಲ ಮತದಾರರ ಪಟ್ಟಿಗೆ ಹೆಸರು ಸೇರಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ" ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಹ, ರಾಜ್ಯ ಸರ್ಕಾರಗಳು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ.
"ಇದು ಕೇವಲ ಒಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಲು ಅರ್ಹನೇ ಅಥವಾ ಇಲ್ಲವೇ ಎಂಬುದರ ಮೇಲೆ ಮತ್ತು ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವರ ಹಕ್ಕಿನ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ, ಇದು ಆ ವ್ಯಕ್ತಿಯ ಪೌರತ್ವದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಅಥವಾ ಪೌರತ್ವ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರವು ಆ ಪ್ರಶ್ನೆಯನ್ನು ನಿರ್ಧರಿಸುವ ಹಕ್ಕನ್ನು ಮುಚ್ಚಿಹಾಕುವುದಿಲ್ಲ" ಎಂದು ಕೋರ್ಟ್ ಹೇಳಿತ್ತು.
ಇದರೊಂದಿಗೆ, ಕಾನೂನುಬದ್ಧ ನಿಯಮಗಳನ್ನು ಪೂರೈಸದ ವ್ಯಕ್ತಿಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಉಲ್ಲೇಖಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
►ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮಗಳು
ಚುನಾವಣಾ ಆಯೋಗದ ಈ S I R ಪ್ರಕ್ರಿಯೆಯು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿದೆ. ಬಿಹಾರದಲ್ಲಿ ಮತದಾರರಿಗೆ ಗಣತಿ ನಮೂನೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿತ್ತು. ಆದರೆ, ಎರಡನೇ ಹಂತದಲ್ಲಿ S I R ನಡೆಸಲಾದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಮತದಾರರು ತಮ್ಮ ಹೆಸರನ್ನು 2002ರ ಮತದಾರರ ಪಟ್ಟಿಯೊಂದಿಗೆ ತಾಳೆ ಮಾಡಿ ನೋಡಿ ಲಿಂಕ್ ಮಾಡಲು ಸೂಚಿಸಲಾಯಿತು.
ಇಷ್ಟೇ ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಮತದಾರರು ಕೇವಲ 2002ರ ಪಟ್ಟಿಯೊಂದಿಗೆ ತಮ್ಮನ್ನು ಲಿಂಕ್ ಮಾಡಿಕೊಳ್ಳುವುದು ಮಾತ್ರವಲ್ಲದೆ, "ಲಾಜಿಕಲ್ ಡಿಸ್ಕ್ರೆಪೆನ್ಸಿ" (ತಾರ್ಕಿಕ ವ್ಯತ್ಯಾಸಗಳು) ಎಂಬ ಹೊಸ ನಿಯಮದ ಸವಾಲನ್ನೂ ಎದುರಿಸಬೇಕಾಯಿತು. ಇದು ಒಂದೇ ರೀತಿಯ ಹೆಸರುಗಳು ಹಾಗೂ ಭಾಷಾಂತರ ಕಾರಣದಿಂದಾಗಿ ಉಂಟಾದ ದೋಷಗಳನ್ನು ಮತ್ತಷ್ಟು ದೊಡ್ಡದಾಗಿಸಿತು ಮತ್ತು ಕಠಿಣ ನಿಯಮಗಳ ಕಾರಣದಿಂದಾಗಿ ಹೆಸರುಗಳು ಮ್ಯಾಚ್ ಆಗದೆ ದೊಡ್ಡ ಗೊಂದಲ ಸೃಷ್ಟಿಸಿತು.
ಇದರ ಪರಿಣಾಮವಾಗಿ, ಅಲ್ಲಿನ ಒಟ್ಟು ಮತದಾರರ ಸಂಖ್ಯೆ ಸುಮಾರು 90 ಲಕ್ಷದಷ್ಟು ಕುಸಿಯಿತು. ಚುನಾವಣೆಗೂ ಕೇವಲ ಎರಡು ವಾರಗಳ ಮುಂಚೆ, 27 ಲಕ್ಷ ಮತದಾರರು ತಮ್ಮ ಭವಿಷ್ಯದ ತೀರ್ಪಿಗಾಗಿ 19 ನ್ಯಾಯಾಂಗ ನ್ಯಾಯಮಂಡಳಿಗಳ ಮುಂದೆ ಕಾಯುವಂತಾಯಿತು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೂಡ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು. ಅಂತಿಮವಾಗಿ ನ್ಯಾಯಮಂಡಳಿಗಳು ಮತದಾನದ ದಿನದ ಒಳಗೆ ಇತ್ಯರ್ಥಪಡಿಸಿದ್ದು ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಮಾತ್ರ.
ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಚುನಾವಣೆಗೂ ಮುನ್ನವೇ S I R ನಡೆಸಲಾಗಿತ್ತು. ಆದರೆ, ಅಸ್ಸಾಂನಲ್ಲಿ ಚುನಾವಣೆಗಿಂತ ಮುಂಚೆ ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ನಡೆಸಲೇ ಇಲ್ಲ. ಪಶ್ಚಿಮ ಬಂಗಾಳದಂತೆಯೇ ಅಸ್ಸಾಂ ಕೂಡ ಗಡಿ ರಾಜ್ಯವಾಗಿದ್ದರೂ ಸಹ, ಅಲ್ಲಿ ಕೇವಲ "ಸಂಕ್ಷಿಪ್ತ ಪರಿಷ್ಕರಣೆ" ಮಾತ್ರ ನಡೆಸಲಾಯಿತು.
ಪ್ರಸ್ತುತ ಈ ಪ್ರಕ್ರಿಯೆ ಆರಂಭವಾಗುತ್ತಿರುವ ಇನ್ನುಳಿದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದರಲ್ಲೂ ಈ ವರ್ಷ ಚುನಾವಣೆ ನಡೆಯುತ್ತಿಲ್ಲ. ಮೂರನೇ ಹಂತದಲ್ಲಿರುವ ದೆಹಲಿ, ಮಹಾರಾಷ್ಟ್ರ, ಒಡಿಶಾ, ಜಾರ್ಖಂಡ್ ಮತ್ತು ಹರಿಯಾಣದಂತಹ ಹಲವು ರಾಜ್ಯಗಳಲ್ಲಿ ಕಳೆದ ಎರಡು ವರ್ಷಗಳ ಹಿಂದಷ್ಟೇ ಚುನಾವಣೆಗಳು ನಡೆದು ಮುಗಿದಿವೆ. ಇದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಕುಮಾರ್ ಅವರು ಬಿಹಾರ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಸಮರ್ಥನೆಗೆ ತದ್ವಿರುದ್ಧವಾಗಿದೆ. ಆಗ ಅವರು, "ಚುನಾವಣೆಯ ನಂತರ ಪರಿಷ್ಕರಣೆ ನಡೆಸುವುದು ಕಾನೂನಿಗೆ ಬದ್ಧವಾಗಿರುವುದಿಲ್ಲ" ಎಂದು ಹೇಳಿದ್ದರು.
ಸೌಜನ್ಯ: thewire.in