ಬಿಸಿಲಿನ ಬೇಗೆಗೆ ತತ್ತರಿಸಿದ ಯುರೋಪ್; ಏರುತ್ತಿರುವ ತಾಪಮಾನದ ನಡುವೆ ಹವಾನಿಯಂತ್ರಣ ವ್ಯವಸ್ಥೆಯ ಬಗ್ಗೆ ಚರ್ಚೆಯಾಗುತ್ತಿರುವುದೇಕೆ?
ಸಾಂದರ್ಭಿಕ ಚಿತ್ರ | PC : freepik.com
ಜೂನ್ 20ರಿಂದ ಆರಂಭವಾದ ಅಭೂತಪೂರ್ವ ತಾಪಮಾನದ ಅಲೆಯಿಂದಾಗಿ ಯುರೋಪ್‌ನ ಹಲವು ಭಾಗಗಳಲ್ಲಿ ರವಿವಾರ (ಜೂನ್ 28) ಉಷ್ಣಾಂಶವು 40°C ತಲುಪಿದೆ. ಫ್ರಾನ್ಸ್ ನಲ್ಲೇ ಈ ತಾಪಮಾನದ ತೀವ್ರತೆಗೆ ಬಲಿಯಾದವರ ಸಂಖ್ಯೆ 1,000 ದಾಟಿದೆ ಎಂದು ವರದಿಯಾಗಿದೆ.
ಪ್ರಸ್ತುತ ಯುರೋಪಿನ ದೇಶಗಳಲ್ಲಿ ಮುಂದುವರಿದಿರುವ ಈ ತಾಪಮಾನದ ಅಲೆಯು 15 ಕೋಟಿಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಗೆ ಅಡ್ಡಿಯಾಗಿದ್ದು, ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಅಷ್ಟೇ ಅಲ್ಲದೆ, ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆಯೂ ತೀವ್ರ ಒತ್ತಡ ಬಿದ್ದಿದೆ. 'ವರ್ಲ್ಡ್ ವೆದರ್ ಆಟ್ರಿಬ್ಯೂಷನ್' ಸಂಸ್ಥೆ ನಡೆಸಿದ ಕ್ಷಿಪ್ರ ಅಧ್ಯಯನದ ಪ್ರಕಾರ, ಮಾನವನ ಹಸ್ತಕ್ಷೇಪದಿಂದ ಉಂಟಾಗಿರುವ ಹವಾಮಾನ ಬದಲಾವಣೆಯಿಲ್ಲದೆ ಇಂತಹ ತಾಪಮಾನದ ಅಲೆ ಸೃಷ್ಟಿಯಾಗಲು "ಸಾಧ್ಯವೇ ಇರಲಿಲ್ಲ". ಅಷ್ಟೇ ಅಲ್ಲದೆ, ಎರಡು ದಶಕಗಳ ಹಿಂದಕ್ಕೆ ಹೋಲಿಸಿದರೆ ಪ್ರಸ್ತುತ ರಾತ್ರಿಯ ಅವಧಿಯಲ್ಲಿ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ 100 ಪಟ್ಟು ಹೆಚ್ಚಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.
ಆದರೆ, ಪ್ರಸ್ತುತ ಅಲ್ಲಿನ ಪ್ರಮುಖ ನೀತಿ ನಿರೂಪಣಾ ಚರ್ಚೆಯು ಹವಾನಿಯಂತ್ರಣ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ಒದಗಿಸುವ ವಿಷಯದ ಸುತ್ತ ಸುತ್ತುತ್ತಿದೆ. ಫ್ರಾನ್ಸ್‌ನ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ನೇತೃತ್ವದ ತೀವ್ರ ಬಲಪಂಥೀಯ 'ನ್ಯಾಷನಲ್ ರ‍್ಯಾಲಿ' ಪಕ್ಷವು ರಾಷ್ಟ್ರೀಯ ಹವಾನಿಯಂತ್ರಣ ಯೋಜನೆಯೊಂದನ್ನು ಪ್ರಕಟಿಸಿದೆ. ಇದರ ಅಡಿಯಲ್ಲಿ ಎಲ್ಲಾ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಎಸಿ ಸೌಲಭ್ಯ ಕಲ್ಪಿಸುವುದು ಹಾಗೂ ಸುಮಾರು 4 ಕೋಟಿ ಕುಟುಂಬಗಳು ಎಸಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಸರ್ಕಾರಿ ಪ್ರಾಯೋಜಿತ 20 ಬಿಲಿಯನ್ ಯುರೋ (22.7 ಬಿಲಿಯನ್ ಡಾಲರ್) ಮೌಲ್ಯದ ಬಡ್ಡಿರಹಿತ ಸಾಲವನ್ನು ಒದಗಿಸುವ ಭರವಸೆ ನೀಡಲಾಗಿದೆ. ಬ್ರಿಟನ್‌ನಲ್ಲಿಯೂ ಸಹ, ವಿರೋಧ ಪಕ್ಷವಾದ ಕನ್ಸರ್ವೇಟಿವ್ಸ್, ಎಸಿ ಬಳಕೆಯಿಂದಾಗಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಪಳೆಯುಳಿಕೆ ಇಂಧನಗಳು ಸೇರಿದಂತೆ ದೇಶೀಯ ಇಂಧನ ಉತ್ಪಾದನೆಯನ್ನು ವಿಸ್ತರಿಸಬೇಕೆಂದು ವಾದಿಸಿದೆ.
ಆದರೆ ವಿಮರ್ಶಕರು, ಈ ತೀವ್ರ ತಾಪಮಾನಕ್ಕೆ ಪರಿಹಾರ ಬೇರೆಯೇ ಇದೆ ಎಂದು ವಾದಿಸುತ್ತಿದ್ದಾರೆ. ಎಲ್ಲೆಡೆ ವ್ಯಾಪಕವಾಗಿ ಹವಾನಿಯಂತ್ರಣ ವ್ಯವಸ್ಥೆಯನ್ನು ಬಳಸುವುದು ಯುರೋಪ್ ಅನ್ನು ಮತ್ತಷ್ಟು ಹೆಚ್ಚಿನ ಇಂಧನ ಬಳಕೆಯತ್ತ ದೂಡುತ್ತದೆ, ತಾಪಮಾನದ ಅಲೆಯ ಸಮಯದಲ್ಲಿ ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಪ್ರಸ್ತಾಪಗಳು, ಯುರೋಪ್ ತನ್ನ ಹವಾಮಾನ ಗುರಿಗಳಿಗೆ ಧಕ್ಕೆ ತರದಂತೆ ಹೆಚ್ಚುತ್ತಿರುವ ಬೇಸಿಗೆಯ ತಾಪಮಾನಕ್ಕೆ ಹೇಗೆ ಹೊಂದಿಕೊಳ್ಳಬೇಕು ಎಂಬ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿವೆ.
ಯುರೋಪ್‌ನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಏಕೆ ವ್ಯಾಪಕವಾಗಿಲ್ಲ?
ಬಹಳ ದೀರ್ಘಕಾಲದಿಂದಲೂ ಯುರೋಪ್ ರಾಷ್ಟ್ರಗಳು ಹವಾನಿಯಂತ್ರಣ ವ್ಯವಸ್ಥೆಯ ಬಗ್ಗೆ ನಿರಾಸಕ್ತಿ ಹೊಂದಿವೆ. ವಿಶೇಷವಾಗಿ ಫ್ರೆಂಚ್ ಜನರು ಎಸಿ ಬಳಕೆಯನ್ನು ಅತಿರೇಕದ ಮತ್ತು ಅಮೆರಿಕನ್ನರ ಸಂಸ್ಕೃತಿ ಎಂದು ಪರಿಗಣಿಸುತ್ತಾರೆ. ತಂಪಾದ ಗಾಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು ಎಂಬ ಬಲವಾದ ನಂಬಿಕೆ ಫ್ರಾನ್ಸ್‌ನಲ್ಲಿ ಇದೆ. ಜೊತೆಗೆ ಎಸಿಯನ್ನು ಐಷಾರಾಮಿ ಉತ್ಪನ್ನ ಎಂದೇ ಅಲ್ಲಿ ವ್ಯಾಪಕವಾಗಿ ನೋಡಲಾಗುತ್ತದೆ. ಅಲ್ಲಿನ ಬಹುತೇಕರ ಪ್ರಕಾರ ದಪ್ಪನೆಯ ಕಲ್ಲಿನ ಗೋಡೆಗಳು, ಮರದ ಕಿಟಕಿ-ಬಾಗಿಲುಗಳು ಮತ್ತು ತೆರೆದ ಕಿಟಕಿಗಳನ್ನು ಹೊಂದಿರುವ ಮನೆಗಳೇ ಅತ್ಯುತ್ತಮ ವಾಸ್ತುಶಿಲ್ಪದ ಪ್ರತೀಕ. ಹೀಗಾಗಿ ಯಾಂತ್ರಿಕ ತಂಪಾಗಿಸುವಿಕೆಗಿಂತ ನೈಸರ್ಗಿಕ ಗಾಳಿಯೇ ಸಾಕು ಎಂಬ ಭಾವನೆ ಅವರಲ್ಲಿದೆ.
ಉತ್ತರ ಅಮೆರಿಕ ಮತ್ತು ಏಷ್ಯಾದ ದೇಶಗಳಿಗೆ ಹೋಲಿಸಿದರೆ ಯುರೋಪ್‌ನಲ್ಲಿ ಎಸಿ ಬಳಕೆಯ ಪ್ರಮಾಣ ತುಂಬಾ ಕಡಿಮೆ ಇದ್ದು, ಕೇವಲ ಐದನೇ ಒಂದು ಭಾಗದಷ್ಟು ಕುಟುಂಬಗಳು ಮಾತ್ರ ಎಸಿ ಹೊಂದಿವೆ. ಯುರೋಪ್‌ನ ಒಳಗೂ ಸಹ ಈ ಬಳಕೆಯ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವಿದೆ. 'ಯುರೋಸ್ಟಾಟ್' ಅಂಕಿ-ಅಂಶಗಳ ಪ್ರಕಾರ, ಇಟಲಿ, ಸ್ಪೇನ್ ಮತ್ತು ಗ್ರೀಸ್‌ನಂತಹ ದಕ್ಷಿಣ ಯುರೋಪ್ ದೇಶಗಳು ಎಸಿ ಹೊಂದುವಲ್ಲಿ ಉತ್ತರ ಯುರೋಪ್ ದೇಶಗಳಿಗಿಂತ ಬಹಳ ಮುಂದಿವೆ. ಯುರೋಪಿಯನ್ ಯೂನಿಯನ್‌ನ 27 ಸದಸ್ಯ ರಾಷ್ಟ್ರಗಳಲ್ಲಿ ಹವಾನಿಯಂತ್ರಣಕ್ಕಾಗಿ ಬಳಕೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಪಾಲನ್ನು ಇಟಲಿ ಹೊಂದಿದೆ.
ಎಸಿ ಬಳಕೆಯ ಕುರಿತಾದ ಈ ಸಾಂಸ್ಕೃತಿಕ ಮನೋಭಾವವನ್ನು ಹೊರತುಪಡಿಸಿ, ಯುರೋಪ್ ಖಂಡದಾದ್ಯಂತ ಎಸಿ ಬಳಕೆ ಸೀಮಿತವಾಗಿರಲು ಮೂರು ಪ್ರಮುಖ ಕಾರಣಗಳಿವೆ.
ಮೊದಲನೆಯದಾಗಿ, ಅಲ್ಲಿನ ಹವಾಮಾನ. ದಕ್ಷಿಣ ಯುರೋಪ್‌ನ ದೇಶಗಳು ತಾಪಮಾನವನ್ನು ನಿರ್ವಹಿಸುವ ರೀತಿಯಲ್ಲೇ ತಮ್ಮ ನಗರಗಳನ್ನು ನಿರ್ಮಿಸಿಕೊಂಡಿವೆ. ದಪ್ಪ ಗೋಡೆಗಳು, ನೆರಳು ನೀಡುವ ಕಿಟಕಿಗಳು ಮತ್ತು ಉತ್ತಮ ಗಾಳಿ-ಬೆಳಕು ಇರುವ ರಸ್ತೆ ವಿನ್ಯಾಸಗಳನ್ನು ಇವು ಹೊಂದಿವೆ. ಈ ನಗರಗಳ ಕಟ್ಟಡಗಳಿಗೆ ತಿಳಿ ಬಣ್ಣಗಳನ್ನು ಬಳಸಿರುವುದರಿಂದ ಮತ್ತು ಶಾಖವನ್ನು ಪ್ರತಿಫಲಿಸುವ ಮೇಲ್ಮೈ ಇರುವುದರಿಂದ ಕಟ್ಟಡಗಳು ಹೆಚ್ಚಿನ ಶಾಖವನ್ನು ಹೀರಿಕೊಳ್ಳುವುದಿಲ್ಲ. ಇದರಿಂದಾಗಿ ಮನೆಯ ಒಳಭಾಗ ತಂಪಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ದಶಕಗಳಿಂದ ಸೌಮ್ಯವಾದ ಬೇಸಿಗೆಯನ್ನು ಹೊಂದಿದ್ದ ಉತ್ತರ ಯುರೋಪ್‌ನ ದೇಶಗಳು, ದೀರ್ಘಾವಧಿಯ ಚಳಿಗಾಲದಲ್ಲಿ ಶಾಖವನ್ನು ಕಟ್ಟಡದ ಒಳಗೇ ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ ತಮ್ಮ ಮನೆಗಳನ್ನು ವಿನ್ಯಾಸಗೊಳಿಸಿವೆ.
ಈ ಸವಾಲು ಈಗ ಪ್ಯಾರಿಸ್ ನಂತಹ ನಗರಗಳಲ್ಲಿ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಲಿನ ಅನೇಕ ಅಪಾರ್ಟ್‌ಮೆಂಟ್‌ಗಳು ಸತುವಿನ ಮೇಲ್ಛಾವಣಿಗಳನ್ನು ಹೊಂದಿದ್ದು, ಬೇಸಿಗೆಯ ಶಾಖವನ್ನು ತಡೆಯುವ ನಿರೋಧಕ ಶಕ್ತಿಯನ್ನು ಹೊಂದಿಲ್ಲ. ಇದರಿಂದಾಗಿ ಸುದೀರ್ಘ ತಾಪಮಾನದ ಅವಧಿಯಲ್ಲಿ ಮೇಲಿನ ಮಹಡಿಗಳು ಅತ್ಯಂತ ವೇಗವಾಗಿ ಕಾಯುತ್ತವೆ.
ಮತ್ತೊಂದು ಪ್ರಮುಖ ಅಡ್ಡಿಯೆಂದರೆ ವೆಚ್ಚ. ಅಮೆರಿಕಕ್ಕೆ ಹೋಲಿಸಿದರೆ ಯುರೋಪ್‌ನಲ್ಲಿ ಗೃಹಬಳಕೆಯ ವಿದ್ಯುತ್ ದರಗಳು ಗಣನೀಯವಾಗಿ ಹೆಚ್ಚಿವೆ. ಉಕ್ರೇನ್ ವಿರುದ್ಧ ರಷ್ಯಾ ಸಾರಿದ ಯುದ್ಧದ ನಂತರ 2022ರಲ್ಲಿ ಉಂಟಾದ ಇಂಧನ ಬಿಕ್ಕಟ್ಟಿನಿಂದಾಗಿ ಈ ದರ ವ್ಯತ್ಯಾಸ ಮತ್ತಷ್ಟು ಹೆಚ್ಚಾಗಿದೆ. ಪ್ರಸ್ತುತ ದಿನಗಳಲ್ಲಿ ಎಸಿ ಸಾಧನಗಳು ಸುಲಭವಾಗಿ ಸಿಗುತ್ತಿದ್ದರೂ ಸಹ, ಅವುಗಳನ್ನು ಚಲಾಯಿಸಲು ತಗಲುವ ವಿದ್ಯುತ್ ವೆಚ್ಚವು ಇಂದಿಗೂ ಅನೇಕ ಕುಟುಂಬಗಳಿಗೆ ಹೊರೆಯಾಗಿಯೇ ಉಳಿದಿದೆ.
ಮೂರನೆಯ ಕಾರಣ ಪರಿಸರ ಕಾಳಜಿ. ವ್ಯಾಪಕವಾಗಿ ಹವಾನಿಯಂತ್ರಣ ವ್ಯವಸ್ಥೆಯನ್ನು ಬಳಸುವುದು ಒಂದಕ್ಕೊಂದು ಸಂಬಂಧ ಹೊಂದಿರುವ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂದು ನೀತಿ ನಿರೂಪಕರು ಮತ್ತು ಹವಾಮಾನ ತಜ್ಞರು ದೀರ್ಘಕಾಲದಿಂದಲೂ ವಾದಿಸುತ್ತಿದ್ದಾರೆ. ಇದು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುತ್ತದೆ (ಇದರಲ್ಲಿ ಹೆಚ್ಚಿನ ಭಾಗವನ್ನು ಇಂದಿಗೂ ಪಳೆಯುಳಿಕೆ ಇಂಧನಗಳ ಮೂಲಕವೇ ಪೂರೈಸಲಾಗುತ್ತಿದೆ). ಇದರ ಜೊತೆಗೆ ಎಸಿಗಳು ಹೊರಸೂಸುವ ಬಿಸಿ ಗಾಳಿಯು ನಗರಗಳನ್ನು ಮತ್ತಷ್ಟು ಬಿಸಿಯಾಗಿಸುತ್ತದೆ ಎಂಬುದು ಅವರ ವಾದವಾಗಿದೆ.
ಈ ಆಲೋಚನೆಯೇ ಯುರೋಪ್‌ನ ಹವಾಮಾನ ನೀತಿಯನ್ನು ರೂಪಿಸಿದೆ. ಯುರೋಪಿಯನ್ ಯೂನಿಯನ್ 2050ರ ವೇಳೆಗೆ 'ನೆಟ್-ಝೀರೋ' (ಶೂನ್ಯ ಇಂಗಾಲ ಹೊರಸೂಸುವಿಕೆ) ಗುರಿಯನ್ನು ತಲುಪಲು ಬದ್ಧವಾಗಿದೆ. ಇದಕ್ಕಾಗಿ ಅಲ್ಲಿನ ಸರ್ಕಾರಗಳು ಇಂಧನ ದಕ್ಷತೆಯನ್ನು ಸುಧಾರಿಸುವುದು, ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವುದು ಮತ್ತು ಒಟ್ಟಾರೆ ಇಂಧನ ಬೇಡಿಕೆಯನ್ನು ಕಡಿಮೆ ಮಾಡುವುದರ ಕಡೆಗೆ ಗಮನ ಹರಿಸಿವೆ. ಹೀಗಿರುವಾಗ, ಲಕ್ಷಾಂತರ ಹೊಸ ಎಸಿಗಳ ಬಳಕೆಯನ್ನು ಉತ್ತೇಜಿಸುವುದು ಯುರೋಪ್‌ನ ವಿಶಾಲವಾದ ಹವಾಮಾನ ಗುರಿಗಳಿಗೆ ಹೊಂದಿಕೆಯಾಗುತ್ತಿಲ್ಲ.
►ಈ ಸಾಂಪ್ರದಾಯಿಕ ಒಮ್ಮತಕ್ಕೆ ಈಗ ಸವಾಲು ಎದುರಾಗುತ್ತಿರುವುದು ಏಕೆ?
ಬಹಳ ದೀರ್ಘಕಾಲದವರೆಗೆ ಯುರೋಪ್‌ನ ಬೇಸಿಗೆ ಎಂದರೆ ದೀರ್ಘ ಸಂಜೆಗಳು, ತೆರೆದ ಕಿಟಕಿಗಳು ಮತ್ತು ಆಹ್ಲಾದಕರವಾದ ವಾತಾವರಣದ ನಡುವಿನ ರಜಾದಿನಗಳಾಗಿದ್ದವು. ಆದರೆ ಯುರೋಪ್ ಬೇರೆಲ್ಲಾ ಖಂಡಗಳಿಗಿಂತ ವೇಗವಾಗಿ ಕಾಯುತ್ತಿರುವುದರಿಂದ, ಆ ಹಳೆಯ ಅನುಭವ ಈಗ ಮರೆಯಾಗುತ್ತಿದೆ.
ತಾಪಮಾನದ ಅಲೆಗಳು ಈಗ ಹೆಚ್ಚು ಆಗಾಗ್ಗೆ, ದೀರ್ಘಕಾಲದವರೆಗೆ ಮತ್ತು ಹೆಚ್ಚು ತೀವ್ರವಾಗಿ ಕಾಣಿಸಿಕೊಳ್ಳುತ್ತಿವೆ. ಇದು ಹವಾನಿಯಂತ್ರಣ ವ್ಯವಸ್ಥೆಯೊಂದಿಗಿನ ತನ್ನ ಸುದೀರ್ಘ ಸಂಬಂಧವನ್ನು ಮರುಪರಿಶೀಲಿಸುವಂತೆ ಯುರೋಪ್‌ಗೆ ಒತ್ತಾಯಿಸುತ್ತಿದೆ. ಚಳಿಗಾಲದ ತೀವ್ರತೆಗೆ ಹೋಲಿಸಿದರೆ, ಅತಿಯಾದ ಶಾಖವು ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸದ್ದಿಲ್ಲದೆ ಬಲಿ ತೆಗೆದುಕೊಳ್ಳುತ್ತದೆ.
ಕಳೆದ ತಲೆಮಾರಿನ ಅವಧಿಯಲ್ಲಿ ಆರಾಮದಾಯಕವಾಗಿದ್ದ ಮನೆಗಳು, ಈಗ ಹಗಲಿನಲ್ಲಿ 35°C ತಾಪಮಾನ ಮತ್ತು ರಾತ್ರಿಯಲ್ಲೂ ಉಸಿರುಗಟ್ಟಿಸುವ ವಾತಾವರಣದಿಂದಾಗಿ ಕಷ್ಟಪಡುತ್ತಿವೆ. ಆಸ್ಪತ್ರೆಗಳಲ್ಲಿ ಶಾಖ ಸಂಬಂಧಿತ ಕಾಯಿಲೆಗಳಿಂದ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಶಾಲೆಗಳು, ವೃದ್ಧಾಶ್ರಮಗಳು ಮತ್ತು ಕಚೇರಿಗಳು ಇಂತಹ ಸುದೀರ್ಘ ತೀವ್ರ ತಾಪಮಾನವನ್ನು ಎದುರಿಸಲು ಸಿದ್ಧವಾಗಿಲ್ಲ ಎಂಬುದು ಸಾಬೀತಾಗಿದೆ.
ಇದು ಒಂದು ಕಠಿಣ ವಾಸ್ತವವನ್ನು ತೋರಿಸುತ್ತಿದೆ. ತೀವ್ರ ತಾಪಮಾನದ ಸಮಯದಲ್ಲಿ ಎಸಿ ಬಳಕೆಯು ಜೀವಗಳನ್ನು ಉಳಿಸಬಲ್ಲದು ನಿಜ, ಆದರೆ ಅದರ ವ್ಯಾಪಕ ಬಳಕೆಯು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುತ್ತದೆ. ವಿದ್ಯುತ್ ಜಾಲಗಳು ಇಂದಿಗೂ ಪಳೆಯುಳಿಕೆ ಇಂಧನಗಳನ್ನೇ ಅವಲಂಬಿಸಿರುವುದರಿಂದ, ಇದು ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಇಂಗಾಲದ ಹೊರಸೂಸುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇದೇ ಕಾರಣಕ್ಕೆ ಹವಾನಿಯಂತ್ರಣ ವ್ಯವಸ್ಥೆಯು ಈಗ ಒಂದು ರಾಜಕೀಯ ಪ್ರಶ್ನೆಯಾಗಿ ಮಾರ್ಪಟ್ಟಿದ್ದು, ಸ್ಪಷ್ಟ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ತೀವ್ರ ಬಲಪಂಥೀಯ 'ನ್ಯಾಷನಲ್ ರ‍್ಯಾಲಿ' ಪಕ್ಷವು ಎಸಿ ಸೌಲಭ್ಯವನ್ನು ಸಾರ್ವಜನಿಕ ಆರೋಗ್ಯದ ಅಗತ್ಯ ಎಂದು ಬಿಂಬಿಸಿದೆ. ವ್ಯಾಪಕ ಎಸಿ ಬಳಕೆಯಿಂದ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆ ಹೆಚ್ಚಾಗಿ ಹವಾಮಾನ ಬದಲಾವಣೆ ಮತ್ತಷ್ಟು ತೀವ್ರಗೊಳ್ಳಬಹುದು ಎಂಬ ಆತಂಕಗಳನ್ನು ಅದು ತಳ್ಳಿಹಾಕಿದೆ. ಮತ್ತೊಂದೆಡೆ, ತೀವ್ರ ಎಡಪಂಥೀಯ 'ಫ್ರಾನ್ಸ್ ಅನ್‌ಬೋವ್ಡ್' ನಂತಹ ಪಕ್ಷಗಳು, ಸರ್ಕಾರಗಳು ವ್ಯಾಪಕವಾಗಿ ಎಸಿ ಅಳವಡಿಸುವುದಕ್ಕಿಂತ ಕಟ್ಟಡಗಳ ಉತ್ತಮ ವಿನ್ಯಾಸ, ಶಾಖ ನಿರೋಧಕ ವ್ಯವಸ್ಥೆ, ಮರಗಳನ್ನು ಬೆಳೆಸುವುದು ಮತ್ತು ನಗರಗಳನ್ನು ಹಸಿರಾಗಿಸುವಂತಹ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ವಾದಿಸುತ್ತಿವೆ.
ಆದರೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಈ ಚರ್ಚೆಯನ್ನು ಕೇವಲ ಎರಡು ಆಯ್ಕೆಗಳ ನಡುವಿನ ಹೋರಾಟವಾಗಿ ನೋಡಲು ನಿರಾಕರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ಸರ್ಕಾರಗಳು ತಾಪಮಾನದ ಅಲೆಯ ಸಮಯದಲ್ಲಿ ವಿಶೇಷವಾಗಿ ದುರ್ಬಲ ವರ್ಗದ ಜನರಿಗೆ ತಂಪಾದ ಒಳಾಂಗಣ ಸ್ಥಳಗಳ ಸೌಲಭ್ಯ ಸಿಗುವಂತೆ ಮಾಡಲು ಆದ್ಯತೆ ನೀಡಬೇಕು. ಇದರೊಂದಿಗೆ, ಕೇವಲ ಹವಾನಿಯಂತ್ರಣ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳುವ ಬದಲು, ಉತ್ತಮ ಕಟ್ಟಡ ವಿನ್ಯಾಸ ಮತ್ತು ನಗರಗಳನ್ನು ಹಸಿರಾಗಿಸುವಂತಹ ದೀರ್ಘಕಾಲೀನ ಕ್ರಮಗಳಲ್ಲಿ ಹೂಡಿಕೆ ಮಾಡಬೇಕು.