ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿ : ಸರಕಾರಕ್ಕೆ 285 ಕೋಟಿ ರೂ. ಹೊರೆ
photo: x.com/ram_bhaktha
ಬೆಂಗಳೂರು : ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ಸೂಚನೆ ಮೇರೆಗೆ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರಿಂದಾಗಿಯೇ ಸರಕಾರಕ್ಕೆ 285 ಕೋಟಿ ರೂ.ಹೊರೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ದಾಖಲೆಗಳ ಸಮೇತ ದೃಢಪಡಿಸಿದೆ.
ಅಲ್ಲದೇ ಈ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಯ್ದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಷರತ್ತುಗಳನ್ನು ವಿಧಿಸಲಾಗಿತ್ತು. ಹೀಗಾಗಿಯೇ ಈ ಟೆಂಡರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸಲು ತಪ್ಪಿಸಿದಂತಾಗಿತ್ತಲ್ಲದೇ ಸ್ಪರ್ಧಾ ತ್ಮಕತೆ ಅವಕಾಶವನ್ನು ತಪ್ಪಿಸಿದಂತಾಗಿತ್ತು ಎಂದು ತನಿಖಾ ತಂಡವು ಬಯಲು ಮಾಡಿದೆ.
ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು 14 ಪುಸ್ತಕಗಳ 5,134 ಪುಟಗಳಲ್ಲಿ ನೀಡಿರುವ ಸಮಗ್ರ ತನಿಖಾ ವರದಿಯು ‘the-file.in'ಗೆ ಲಭ್ಯವಾಗಿವೆ.
ತನಿಖಾ ವರದಿಯಲ್ಲೇನಿದೆ?: ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿಯ ನಿರ್ವಹಿಸುವ ಸಂದರ್ಭದಲ್ಲಿ ಎಂಸಿಐ ಮತ್ತು ಎನ್‌ಎಂಸಿ ನಿಯಮಗಳು ಪಾಲನೆಯಾಗಿದೆಯೇ ಇಲ್ಲವೇ ಎಂಬುದನ್ನು ತನಿಖಾ ಸಮಿತಿಯು ಅವಲೋಕಿಸಿದೆ. ದಾಖಲೆಗಳನ್ನು ಪರಿಶೀಲಿಸಿದ್ದ ಸಮಿತಿಯು ಮಾನದಂಡಗಳ ಪ್ರಕಾರ ಹಾಗೂ ಉಪಯೋಗಿ ಇಲಾಖೆಯವರ ಕೋರಿಕೆಯಂತೆ ಪರಿಶೀಲಿಸಲಾಗಿ ಹೆಚ್ಚುವರಿಯಾಗಿ ಒಟ್ಟಾರೆಯಾಗಿ ಅಂದಾಜು 14,947 ಚ.ಮೀ. ಕಟ್ಟಡವನ್ನು ನಿರ್ಮಿಸಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿದೆ.
ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಯಾವುದೇ ಕಾರ್ಯಾದೇಶ ನೀಡಿಲ್ಲ. ಆದರೆ ಈ ಕಾಮಗಾರಿಗೆ 525 ಕೋಟಿ ರೂ.ಗಳಿಗೆ ಅಂದಾಜು ಪಟ್ಟಿ ಮಂಜೂರಾಗಿತ್ತು. ಹೆಚ್ಚುವರಿ ಕಾಮಗಾರಿಗಳಿಗಾಗಿ ಒಟ್ಟು 810 ಕೋಟಿ ರೂ. ಪರಿಷ್ಕೃತ ಅಂದಾಜುಪಟ್ಟಿಯ ಪ್ರಸ್ತಾವವನ್ನು ಸರಕಾರಕ್ಕೆ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿರುವ ತನಿಖಾ ಸಮಿತಿಯು ಪರಿಷ್ಕೃತ ಅಂದಾಜಿಗೆ ಕಾರಣಗಳೇನು ಎಂದು ತನ್ನ ವರದಿಯಲ್ಲಿ ಪಟ್ಟಿ ಮಾಡಿದೆ.
ಸರಕಾರಕ್ಕೆ 285 ಕೋಟಿ ರೂ. ಹೊರೆ: ಇದರ ಪ್ರಕಾರ ಟೆಂಡರ್ ಪ್ರೀಮಿಯಂ, ದರ ಹೊಂದಾಣಿಕೆ, ಹೆಚ್ಚುವರಿಯಾಗಿ ಶೇ. 6ರಷ್ಟು ಜಿಎಸ್‌ಟಿಗಳು ಮೂಲ ಅಂದಾಜಿನಲ್ಲಿ ಸೇರ್ಪಡೆಯಾಗಿರಲಿಲ್ಲ ಎಂದು ಹೇಳಿದೆ. ಹೀಗಾಗಿ ಇವೆಲ್ಲವನ್ನೂ ಪರಿಷ್ಕೃತ ಅಂದಾಜಿನಲ್ಲಿ 171.43 ಕೋಟಿ ರೂ. ಸೇರಿಸಲಾಗಿದೆ.
ಕೌಶಲಾಭಿವೃದ್ಧಿ ಕೇಂದ್ರ, ಉಪಹಾರ ಗೃಹ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ 113.56 ಕೋಟಿ ರೂ. ಸಹ ಈ ಹೆಚ್ಚುವರಿ ಕಾಮಗಾರಿಯಲ್ಲಿ ಸೇರಿಸಲಾಗಿತ್ತು.
ಮೂಲ ಅಂದಾಜಿನಲ್ಲಿ ಸೇರ್ಪಡೆಯಾಗಿಲ್ಲದ ಕಾಂಪೋನೆಂಟ್‌ಗಳು ಮತ್ತು ಹೆಚ್ಚುವರಿಯಾಗಿ ನಿರ್ಮಿಸಿರುವ, ನಿರ್ಮಿಸುತ್ತಿರುವ ಕಾಂಪೋ ನೆಂಟ್‌ಗಳಿಂದಾಗಿ ಮೂಲ ಮಂಜೂರಾದ ಅಂದಾಜಿಗಿಂತ 285 ಕೋಟಿ ರೂ. ಹೆಚ್ಚುವರಿಯಾಗಿದೆ ಎಂದು ತನಿಖಾ ತಂಡವು ಪತ್ತೆ ಹಚ್ಚಿದೆ.
ಕಾಂಪೋನೆಂಟ್‌ಗಳ ಅಗತ್ಯವಿತ್ತೇ?
ಈ ಕಾಮಗಾರಿಯಲ್ಲಿ ಒಳಗೊಂಡಿರುವ ಎಲ್ಲಾ ಕಾಂಪೋನೆಂಟ್‌ಗಳು ಅಗತ್ಯವಿತ್ತೇ? ಅಥವಾ ಅವುಗಳನ್ನು ಅನಾವಶ್ಯಕವಾಗಿ ಸೇರಿಸಲಾಗಿದೆಯೇ? ಎಂಬ ಬಗ್ಗೆ ತನಿಖಾ ತಂಡವು ಪರಿಶೀಲನೆ ನಡೆಸಿದೆ. ಡೋಮ್ಸ್ ಮತ್ತು ಕಾರ್ನಿಸಿಸ್ ಉಪಯೋಗಿ ಇಲಾಖೆಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಬಗ್ಗೆ ಸೂಚಿಸಲಾಗಿತ್ತು. ಅಲ್ಲದೇ ಸಭೆಯ ನಡವಳಿಯಂತೆ ಈ ಕಾಮಗಾರಿಗಳನ್ನು ಪರಿಗಣಿಸಲಾಗಿತ್ತು. ಇದಕ್ಕಾಗಿ ಸುಮಾರು 21 ಕೋಟಿ ರೂ., ಐಸಿಯು ಮತ್ತಿತರ ಕಾಮಗಾರಿಗಳಿಗೆ 2.28 ಕೋಟಿ ರೂ., ಕಿಚನ್ ಮತ್ತು ಲ್ಯಾಂಡ್ರಿಗಳಿಗಾಗಿ 6.30 ಕೋಟಿ ರೂ.ಗೆ ಅನುವು ಮಾಡಿಕೊಡಲಾಗಿದೆ. ಅನುವು ಮಾಡಿಕೊಟ್ಟಿದ್ದನ್ನು ತನಿಖಾ ತಂಡವು ಬಯಲು ಮಾಡಿದೆ.