×
Ad

ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಆರೋಪಿಗಳ ಪರವಾಗಿ ವಾದ ಮಂಡಿಸದಿರಲು ಅಯೋಧ್ಯೆ ಬಾರ್ ಅಸೋಸಿಯೇಷನ್ ನಿರ್ಧಾರ; ಇದು ಕಾನೂನುಬದ್ಧವೇ?

Update: 2026-06-30 20:42 IST

ರಾಮ ಮಂದಿರ | Photo Credit : PTI

ರಾಮ ಮಂದಿರದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಎಂಟು ಮಂದಿ ಆರೋಪಿಗಳ ಪರವಾಗಿ ತಮ್ಮ ಯಾವುದೇ ವಕೀಲರು ವಾದ ಮಂಡಿಸುವುದಿಲ್ಲ ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಸೋಮವಾರ (ಜೂನ್ 29) ಘೋಷಿಸಿದೆ. ನಿಯಮ ಮೀರಿ ಯಾರಾದರೂ ಆರೋಪಿಗಳ ಪರ ವಕಾಲತ್ತು ವಹಿಸಿದರೆ ಅಂತಹ ವಕೀಲರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿಯೂ ಅಸೋಸಿಯೇಷನ್ ಎಚ್ಚರಿಸಿದೆ.

"ಇಂತಹ ನಿರ್ಣಯಗಳು ಸಂವಿಧಾನ, ಕಾನೂನು ಮತ್ತು ವೃತ್ತಿಪರ ನೈತಿಕತೆಯ ಎಲ್ಲಾ ನಿಯಮಗಳಿಗೆ ವಿರುದ್ಧವಾಗಿವೆ" ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಬಾರಿ ತೀರ್ಪು ನೀಡಿದೆ. ಆದರೆ, ವಕೀಲರ ಸಂಘಗಳು ಇಂತಹ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಇದೇ ಮೊದಲೇನಲ್ಲ.

ಭಾರತೀಯ ಸಂವಿಧಾನದ ವಿಧಿ 22(1)ರ ಪ್ರಕಾರ, ಯಾವುದೇ ವ್ಯಕ್ತಿಗೆ ತನಗೆ ಇಷ್ಟವಾದ ವಕೀಲರನ್ನು ಸಂಪರ್ಕಿಸುವ ಮತ್ತು ಅವರ ಮೂಲಕ ತನ್ನ ಪರ ವಾದ ಮಂಡಿಸುವಂತೆ ಮಾಡುವ ಮೂಲಭೂತ ಹಕ್ಕನ್ನು ನಿರಾಕರಿಸುವಂತಿಲ್ಲ.

ಇನ್ನು ವಿಧಿ 14 ದೇಶದ ಪ್ರತಿಯೊಬ್ಬರಿಗೂ ಕಾನೂನಿನ ಮುಂದೆ ಸಮಾನತೆ ಮತ್ತು ಸಮಾನ ರಕ್ಷಣೆಯನ್ನು ನೀಡುತ್ತದೆ. ಅದೇ ರೀತಿ, ರಾಜ್ಯ ನಿರ್ದೇಶಕ ತತ್ವಗಳ ಭಾಗವಾಗಿರುವ ವಿಧಿ 39A ಪ್ರಕಾರ, ದೇಶದ ಕಾನೂನು ವ್ಯವಸ್ಥೆಯು ಎಲ್ಲರಿಗೂ ನ್ಯಾಯ ಒದಗಿಸುವುದನ್ನು ಸರ್ಕಾರ ಖಚಿತಪಡಿಸಬೇಕು. ಆರ್ಥಿಕ ಅಥವಾ ಯಾವುದೇ ಕಾರಣಗಳಿಂದಾಗಿ ಯಾವುದೇ ನಾಗರಿಕನಿಗೆ ನ್ಯಾಯ ಸಿಗದೇ ಇರಬಾರದು ಮತ್ತು ಅವರಿಗೆ ಉಚಿತ ಕಾನೂನು ನೆರವು ಸಿಗಬೇಕು ಎಂದು ಈ ನಿಯಮ ಹೇಳುತ್ತದೆ.

►ಇಂತಹ ನಿರ್ಣಯಗಳ ಕುರಿತು ಸುಪ್ರೀಂ ಕೋರ್ಟ್ ಏನು ಹೇಳಿದೆ?

2010ರಲ್ಲಿ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆ ನಡೆಸುವಾಗ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಾಟ್ಜು ಮತ್ತು ಜ್ಞಾನ ಸುಧಾ ಮಿಶ್ರಾ ಅವರ ಪೀಠವು ಬಾರ್ ಅಸೋಸಿಯೇಷನ್‌ಗಳು ಅಂಗೀಕರಿಸುವ ಇಂತಹ ನಿರ್ಣಯಗಳ ಕಾನೂನುಬಾಹಿರತೆಯನ್ನು ವಿವರವಾಗಿ ಚರ್ಚಿಸಿತ್ತು.

ಈ ಪ್ರಕರಣವು 2006ರಲ್ಲಿ ಕೊಯಮತ್ತೂರಿನಲ್ಲಿ ವಕೀಲರೊಬ್ಬರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಿಂದ ಆರಂಭವಾಗಿತ್ತು. ಇದರ ಬೆನ್ನಲ್ಲೇ, ಪೊಲೀಸ್ ಸಿಬ್ಬಂದಿಯ ಪರವಾಗಿ ಯಾವುದೇ ವಕೀಲರು ವಾದ ಮಂಡಿಸದಂತೆ ವಕೀಲರ ಸಂಘವು ನಿರ್ಣಯ ಅಂಗೀಕರಿಸಿತ್ತು. ಮದ್ರಾಸ್ ಹೈಕೋರ್ಟ್ ಇದನ್ನು "ವೃತ್ತಿಪರ ನಡವಳಿಕೆಗೆ ವಿರುದ್ಧ" ಎಂದು ತೀರ್ಪು ನೀಡಿತು. ನಂತರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು.

ಮೇಲ್ಮನವಿಯ (ಎ.ಎಸ್. ಮೊಹಮ್ಮದ್ ರಫಿ Vs ತಮಿಳುನಾಡು ಸರ್ಕಾರ) ವಿಚಾರಣೆಯ ಸಂದರ್ಭದಲ್ಲಿ, "ಅತ್ಯಂತ ಕಾನೂನು ಮತ್ತು ಸಾಂವಿಧಾನಿಕ ಪ್ರಾಮುಖ್ಯತೆ" ಹೊಂದಿರುವ ಈ ವಿಷಯವು ಪೀಠಕ್ಕೆ "ತೀವ್ರ ಬೇಸರ" ತಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. "ನಮ್ಮ ಅಭಿಪ್ರಾಯದಲ್ಲಿ, ಇಂತಹ ನಿರ್ಣಯಗಳು ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ಬಾರ್‌ನ ಎಲ್ಲಾ ಸಂಪ್ರದಾಯಗಳಿಗೆ ಮತ್ತು ವೃತ್ತಿಪರ ನೈತಿಕತೆಗೆ ವಿರುದ್ಧವಾಗಿವೆ. ಸಮಾಜವು ಒಬ್ಬ ವ್ಯಕ್ತಿಯನ್ನು ಎಷ್ಟೇ ಕೆಟ್ಟವನು, ಭ್ರಷ್ಟನು, ನೀಚನು, ವಿಕೃತನು ಅಥವಾ ದ್ವೇಷಾರ್ಹನು ಎಂದು ಪರಿಗಣಿಸಿದರೂ, ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದ ಮಂಡಿಸಿಕೊಳ್ಳುವ ಹಕ್ಕು ಅವನಿಗಿದೆ. ಅದೇ ರೀತಿ, ಅವನ ಪರವಾಗಿ ವಾದ ಮಂಡಿಸುವುದು ವಕೀಲರ ಕರ್ತವ್ಯವಾಗಿದೆ" ಎಂದು ಕೋರ್ಟ್ ಹೇಳಿದೆ.

1792ರಲ್ಲಿ ಇಂಗ್ಲೆಂಡ್‌ ನಲ್ಲಿ ರಾಜದ್ರೋಹದ ಆರೋಪ ಎದುರಿಸಿದ ಬರಹಗಾರ ಥಾಮಸ್ ಪೇನ್ ಅವರ ಉದಾಹರಣೆಯನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ವೇಲ್ಸ್ ರಾಜಕುಮಾರನ ಅಟಾರ್ನಿ ಜನರಲ್ ಆಗಿದ್ದ ಥಾಮಸ್ ಅರ್ಸ್ಕಿನ್ ಅವರು ಪೇನ್ ಪರ ವಕಾಲತ್ತು ವಹಿಸಿದರೆ ಅವರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಎಚ್ಚರಿಸಲಾಗಿತ್ತು. ಆದರೂ ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡು ಹೀಗೆ ಹೇಳಿದರು: "ಆರೋಪ ಅಥವಾ ಆರೋಪಿಯ ರಕ್ಷಣೆಯ ಬಗ್ಗೆ ತನಗಿರುವ ವೈಯಕ್ತಿಕ ಅಭಿಪ್ರಾಯದ ಆಧಾರದ ಮೇಲೆ ಒಬ್ಬ ವಕೀಲನು ವಾದ ಮಂಡಿಸಲು ನಿರಾಕರಿಸಿದರೆ, ಅವನು ವಕೀಲನ ಸ್ಥಾನವನ್ನು ಬಿಟ್ಟು ತಾನೇ ನ್ಯಾಯಾಧೀಶನ ಪಾತ್ರ ವಹಿಸಿದಂತಾಗುತ್ತದೆ."

ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳು, ಮಹಾತ್ಮಾ ಗಾಂಧಿ ಮತ್ತು ಇಂದಿರಾ ಗಾಂಧಿಯವರ ಹತ್ಯೆಯ ಆರೋಪಿಗಳು ಹಾಗೂ ಲಕ್ಷಾಂತರ ಜನರ ಕೊಲೆಗಡುಕರಾದ ನ್ಯೂರೆಂಬರ್ಗ್ ವಿಚಾರಣೆಯ ನಾಝಿ ಯುದ್ಧ ಅಪರಾಧಿಗಳ ಪರವಾಗಿಯೂ ವಕೀಲರು ವಾದ ಮಂಡಿಸಿದ ಇತರ ಐತಿಹಾಸಿಕ ಉದಾಹರಣೆಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ನ್ಯಾಯಮೂರ್ತಿ ಕಾಟ್ಜು ಅವರು ಬರೆದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ವಾತಂತ್ರ್ಯ ಹೋರಾಟದ ಉಲ್ಲೇಖವಿದ್ದು, ಅಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳ ಪರವಾಗಿ ವಕೀಲರು ವಾದ ಮಂಡಿಸಿದ್ದನ್ನು ನೆನಪಿಸಲಾಗಿದೆ. ಕೆಲವು ಆರೋಪಿಗಳ ಪರ ವಾದ ಮಂಡಿಸಲು ಬಾರ್ ಅಸೋಸಿಯೇಷನ್‌ಗಳು ನಿರಾಕರಿಸುತ್ತಿರುವ ಸುದ್ದಿಗಳು ತಮಗೆ "ಆಘಾತ" ತಂದಿವೆ ಎಂದು ಕೋರ್ಟ್ ಹೇಳಿದೆ. "ವೃತ್ತಿಪರ ನೈತಿಕತೆಯ ಪ್ರಕಾರ, ಕಕ್ಷಿದಾರನು ಶುಲ್ಕವನ್ನು ಪಾವತಿಸಲು ಸಿದ್ಧನಿದ್ದಾಗ ಮತ್ತು ವಕೀಲರು ಬೇರೆ ಕೆಲಸಗಳಲ್ಲಿ ನಿರತರಾಗಿಲ್ಲದಿದ್ದರೆ, ಅವರು ಪ್ರಕರಣವನ್ನು ಒಪ್ಪಿಕೊಳ್ಳಲು ನಿರಾಕರಿಸುವಂತಿಲ್ಲ."

"ಆದ್ದರಿಂದ, ಆರೋಪಿಯು ಪೊಲೀಸ್ ಅಧಿಕಾರಿಯಾಗಿದ್ದಾನೆ ಅಥವಾ ಶಂಕಿತ ಉಗ್ರಗಾಮಿ, ಅತ್ಯಾಚಾರಿ, ಸಾಮೂಹಿಕ ಹತ್ಯೆಗಾರ ಇತ್ಯಾದಿ ಎಂಬ ಕಾರಣವನ್ನು ಮುಂದಿಟ್ಟುಕೊಂಡು, ಯಾವುದೇ ಬಾರ್ ಅಸೋಸಿಯೇಷನ್ ತನ್ನ ಯಾವುದೇ ಸದಸ್ಯರು ಆ ನಿರ್ದಿಷ್ಟ ಆರೋಪಿಯ ಪರವಾಗಿ ವಾದ ಮಂಡಿಸಬಾರದು ಎಂದು ನಿರ್ಣಯ ಕೈಗೊಳ್ಳುವುದು ಸಂವಿಧಾನ, ಕಾನೂನು ಮತ್ತು ವೃತ್ತಿಪರ ನೈತಿಕತೆಯ ಎಲ್ಲಾ ನಿಯಮಗಳಿಗೆ ವಿರುದ್ಧವಾಗಿದೆ" ಎಂದು ಕೋರ್ಟ್ ಹೇಳಿದೆ. ಜೊತೆಗೆ ಇಂತಹ ನಿರ್ಣಯಗಳನ್ನು "ಕಾನೂನು ಜಗತ್ತಿಗೆ ಒಂದು ಕಪ್ಪು ಚುಕ್ಕೆ" ಎಂದು ಕರೆದಿದೆ.

ಇಂತಹ ನಿರ್ಣಯಗಳು ಕಾನೂನುಬಾಹಿರ ಮತ್ತು ಶೂನ್ಯ ಎಂದು ಘೋಷಿಸಿದ ಸುಪ್ರೀಂ ಕೋರ್ಟ್, "ಈ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯಬೇಕಾದರೆ, ಸತ್ಪ್ರಜೆಗಳಾದ ವಕೀಲರು ಇಂತಹ ನಿರ್ಣಯಗಳನ್ನು ನಿರ್ಲಕ್ಷಿಸಬೇಕು ಮತ್ತು ಧಿಕ್ಕರಿಸಬೇಕು" ಎಂದು ಹೇಳಿದೆ.

►ವಕೀಲರ ವೃತ್ತಿಪರ ನೈತಿಕತೆಯನ್ನು ಹೇಗೆ ವ್ಯಾಖ್ಯಾನಿಸಲಾಗಿದೆ?

ಬಾರ್ ಕೌನ್ಸಿಲ್ ಆಫ್ ಇಂಡಿಯಾ ವೃತ್ತಿಪರ ಗುಣಮಟ್ಟದ ನಿಯಮಗಳನ್ನು ಹೊಂದಿದೆ. ಇದು ಅಡ್ವೊಕೇಟ್ಸ್ ಕಾಯ್ದೆಯಡಿ ವಕೀಲರು ಪಾಲಿಸಬೇಕಾದ ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರದ ನಿಯಮಗಳ ಭಾಗವಾಗಿದೆ. ಇದರ ಪ್ರಕಾರ, ವಕೀಲರು ತಮ್ಮ ಹಿರಿತನ ಮತ್ತು ಪ್ರಕರಣದ ಸ್ವರೂಪಕ್ಕೆ ತಕ್ಕಂತೆ ಶುಲ್ಕವನ್ನು ಪಡೆದು, ನ್ಯಾಯಾಲಯಗಳು ಅಥವಾ ನ್ಯಾಯಮಂಡಳಿಗಳಲ್ಲಿ ಯಾವುದೇ ಪ್ರಕರಣವನ್ನು ಒಪ್ಪಿಕೊಳ್ಳಲು ಬದ್ಧರಾಗಿರುತ್ತಾರೆ.

ಆದರೆ, ವಿಶೇಷ ಸಂದರ್ಭಗಳಲ್ಲಿ ನಿರ್ದಿಷ್ಟ ಪ್ರಕರಣವನ್ನು ಒಪ್ಪಿಕೊಳ್ಳಲು ವಕೀಲರು ನಿರಾಕರಿಸಲು ಈ ನಿಯಮಗಳಲ್ಲಿ ಅವಕಾಶವಿದೆ. ಕಳೆದ ವರ್ಷ ಉತ್ತರಾಖಂಡ ಹೈಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿ, ಇದು ಕೇವಲ ಒಬ್ಬ ವೈಯಕ್ತಿಕ ವಕೀಲನಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿತು. ಆತ ತನಗೆ ಇಷ್ಟವಿಲ್ಲದಿದ್ದರೆ ನಿರ್ದಿಷ್ಟ ಪ್ರಕರಣದಿಂದ ದೂರ ಉಳಿಯಬಹುದು. ಆದರೆ, ಬಾರ್ ಅಸೋಸಿಯೇಷನ್‌ನ ಸದಸ್ಯತ್ವವನ್ನು ರದ್ದುಗೊಳಿಸುವ ಬೆದರಿಕೆ ಹಾಕಿ, ಯಾವುದೇ ವಕೀಲನು ಆರೋಪಿಯ ಪರ ವಾದ ಮಂಡಿಸದಂತೆ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.

►ಆರೋಪಿಗಳ ಪರ ವಾದ ಮಂಡಿಸಬಾರದು ಎಂಬ ಇಂತಹ ನಿರ್ಣಯಗಳು ಸಾಮಾನ್ಯವೇ?

ದೇಶದ ವಿವಿಧ ಬಾರ್ ಅಸೋಸಿಯೇಷನ್‌ಗಳು ಆರೋಪಿಗಳ ಪರವಾಗಿ ವಕೀಲರು ವಾದ ಮಂಡಿಸದಂತೆ ತಡೆಯಲು ಕಾಲಕಾಲಕ್ಕೆ ಇಂತಹ ನಿರ್ಣಯಗಳನ್ನು ಅಂಗೀಕರಿಸುತ್ತಲೇ ಇವೆ. ಸಾಮಾನ್ಯವಾಗಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು, ಭಯೋತ್ಪಾದನಾ ಪ್ರಕರಣಗಳು ಹಾಗೂ ವಕೀಲರ ಮೇಲಿನ ದಾಳಿಯ ಪ್ರಕರಣಗಳಲ್ಲಿ ಇಂತಹ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.

2008ರ ಮುಂಬೈ ಭಯೋತ್ಪಾದನಾ ದಾಳಿಯ ವೇಳೆ ಬಂಧಿತನಾಗಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ಪರ ವಾದ ಮಂಡಿಸದಂತೆಯೂ ಇಂತಹದೇ ನಿರ್ಣಯ ಕೈಗೊಳ್ಳಲಾಗಿತ್ತು. ಈ ಪ್ರಕರಣಕ್ಕೆ ನೇಮಕಗೊಂಡಿದ್ದ ಉಚಿತ ಕಾನೂನು ನೆರವು ವಿಭಾಗದ ವಕೀಲರೊಬ್ಬರು ಕಸಬ್ ಪರ ವಾದ ಮಂಡಿಸಲು ನಿರಾಕರಿಸಿದ್ದರು. ಮತ್ತೊಬ್ಬ ವಕೀಲರು ಆತನ ಪರ ವಾದಿಸಲು ಒಪ್ಪಿಕೊಂಡಾಗ ರಾಜಕೀಯ ಪಕ್ಷವೊಂದು ಅವರಿಗೆ ಬೆದರಿಕೆ ಹಾಕಿತ್ತು. ತದನಂತರ, ಮತ್ತೊಬ್ಬ ವಕೀಲರನ್ನು ನೇಮಿಸಿ ಅವರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿತ್ತು.

2012ರ ಡಿಸೆಂಬರ್ 16ರ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ, ಸಾಕೇತ್ ನ್ಯಾಯಾಲಯದ ವಕೀಲರು ಇಂತಹದೇ ನಿರ್ಣಯವನ್ನು ಅಂಗೀಕರಿಸಿದ್ದರು. ಹಾಗೆಯೇ, 2019ರಲ್ಲಿ ಹೈದರಾಬಾದ್‌ ನಲ್ಲಿ 26 ವರ್ಷದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪರವಾಗಿಯೂ ವಾದ ಮಂಡಿಸಲು ಬಾರ್ ಅಸೋಸಿಯೇಷನ್ ನಿರಾಕರಿಸಿತ್ತು. ನಂತರ ಈ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತರಾಗಿದ್ದರು.

ಗುರುಗ್ರಾಮದ ಶಾಲೆಯೊಂದರಲ್ಲಿ ಏಳು ವರ್ಷದ ಬಾಲಕನ ಕೊಲೆ ಪ್ರಕರಣದ ಆರೋಪಿಯ ಪರ ವಾದ ಮಂಡಿಸುತ್ತಿದ್ದ ವಕೀಲರಿಗೆ ಯಾವುದೇ ಅಡ್ಡಿಪಡಿಸದಂತೆ 2017ರಲ್ಲಿ ಸುಪ್ರೀಂ ಕೋರ್ಟ್ ಗುರಗಾಂವ್ ಜಿಲ್ಲಾ ಬಾರ್ ಅಸೋಸಿಯೇಷನ್‌ನ ವಕೀಲರಿಗೆ ನಿರ್ದೇಶನ ನೀಡಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮೊದಲು ಬಸ್ ನಿರ್ವಾಹಕನನ್ನು ಬಂಧಿಸಿದ್ದರು. ಆದರೆ ನಂತರ ಅದೇ ಶಾಲೆಯ ಅಪ್ರಾಪ್ತ ಬಾಲಕನೊಬ್ಬ ಈ ಕೃತ್ಯ ಎಸಗಿರುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು.

►ಇಂಥ ನಿರ್ಣಯಗಳಿಗಾಗಿ ವಕೀಲರು ಎಂದಾದರೂ ಕ್ರಮ ಎದುರಿಸಿದ್ದಾರೆಯೇ?

ಕೋಟ್‌ದ್ವಾರ್ ಬಾರ್ ಅಸೋಸಿಯೇಷನ್, 'ವಕೀಲರೊಬ್ಬರ ಕೊಲೆ ಪ್ರಕರಣದ ಆರೋಪಿಗಳ ಪರವಾಗಿ ವಾದ ಮಂಡಿಸುವ ಯಾವುದೇ ವಕೀಲರ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು' ಎಂದು ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ 2019ರಲ್ಲಿ ಉತ್ತರಾಖಂಡ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ನ್ಯಾಯಾಲಯವು ಆ ನಿರ್ಣಯವನ್ನು ಕಾನೂನುಬಾಹಿರ ಮತ್ತು ಶೂನ್ಯ ಎಂದು ಘೋಷಿಸಿತು.

ಮುಂದಿನ ದಿನಗಳಲ್ಲಿ ಇಂತಹ ನಿರ್ಣಯಗಳನ್ನು ಅಂಗೀಕರಿಸಿದರೆ ಬಾರ್ ಅಸೋಸಿಯೇಷನ್‌ನ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಾರ್ ಕೌನ್ಸಿಲ್‌ಗೆ ಕೋರ್ಟ್ ನಿರ್ದೇಶನ ನೀಡಿತು. ಜೊತೆಗೆ, ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸುವ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 15(2)ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದನ್ನು ಪರಿಗಣಿಸಬಹುದು ಎಂದೂ ಕೋರ್ಟ್ ಹೇಳಿತು.

2020ರಲ್ಲಿ, ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವುದಕ್ಕೆ ಸ್ಥಳೀಯ ಬಾರ್ ಅಸೋಸಿಯೇಷನ್‌ಗಳು ಆಕ್ಷೇಪ ವ್ಯಕ್ತಪಡಿಸಿದಾಗ, ಆರೋಪಿಗಳ ಪರ ವಾದ ಮಾಡದಂತೆ ವಕೀಲರು ನಿರ್ಣಯ ಕೈಗೊಳ್ಳುವುದು ಅನೈತಿಕ ಮತ್ತು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News