×
Ad

27 ವರ್ಷಗಳ ಬಳಿಕ ಬಿಜೆಪಿಗೆ ರಾಜ್ಯಭಾರ

Update: 2025-02-08 15:18 IST

ದಿಲ್ಲಿ ವಿಧಾನಸಭೆ ಫಲಿತಾಂಶ ನೋಡುತ್ತಿದ್ದರೆ, ಕಾಂಗ್ರೆಸ್ ಮತ್ತು ಎಎಪಿ ನಡುವಿನ ಕಚ್ಚಾಟದ ಲಾಭ ಪೂರ್ತಿಯಾಗಿ ಬಿಜೆಪಿ ಪಾಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ದಿಲ್ಲಿಯಲ್ಲಿ ಕಾಂಗ್ರೆಸ್ ಸತತ ನಾಲ್ಕನೇ ಹೀನಾಯ ಸೋಲನ್ನು ಕಂಡಂತಾಗಿದೆ. ಸತತ ಮೂರನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.

15 ವರ್ಷಗಳ ಕಾಲ ದಿಲ್ಲಿಯನ್ನು ಆಳಿದ್ದ ಕಾಂಗ್ರೆಸ್, 2013ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 8 ಸ್ಥಾನಗಳನ್ನು ಪಡೆದಿತ್ತು. 28 ಕ್ಷೇತ್ರಗಳಲ್ಲಿ ಗೆದ್ದಿದ್ದ ಎಎಪಿಗೆ ಬೆಂಬಲ ನೀಡಿತ್ತು. ಆದರೆ ಕೆಲವೇ ದಿನಗಳಲ್ಲಿ ಮೈತ್ರಿ ಮುರಿದಿತ್ತು.

31 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಅಧಿಕಾರದಿಂದ ದೂರ ಉಳಿದಿತ್ತು. 2015ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳನ್ನು ಗೆದ್ದು ಹೊಸ ದಾಖಲೆ ಬರೆದಿತ್ತು. ಬಿಜೆಪಿ 3 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.

2020ರ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು ಎರಡನೇ ಬಾರಿಗೆ ಅಧಿಕಾರ ಹಿಡಿದಿತ್ತು. ಬಿಜೆಪಿ 8 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಮತ್ತೆ ಶೂನ್ಯ ಸಂಪಾದನೆ ಮಾಡಿತ್ತು. ಈಗ 2025ರ ಚುನಾವಣೆಯಲ್ಲೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದಂತಾಗಿದೆ.

ಎಎಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಅಧಿಕಾರ ಹಿಡಿಯುತ್ತಿದೆ. 2015 ಮತ್ತು 2020 ರ ದಿಲ್ಲಿ ಚುನಾವಣೆಯಲ್ಲಿ ಎಎಪಿ ಅದ್ಭುತ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಲ್ಲಿಯ ಮಧ್ಯಮ ವರ್ಗದ ಮತ್ತು ಪೂರ್ವಾಂಚಲಿ ಮತದಾರರು ಬಿಜೆಪಿಯತ್ತ ಮುಖ ಮಾಡಿರುವಂತೆ ತೋರುತ್ತಿದೆ. 27 ವರ್ಷಗಳ ನಂತರ ಬಿಜೆಪಿ ದಿಲ್ಲಿಯಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ.

ಪಶ್ಚಿಮ ದಿಲ್ಲಿ, ಪೂರ್ವ ದಿಲ್ಲಿ, ದಕ್ಷಿಣ ದಿಲ್ಲಿ, ಮಧ್ಯ ದಿಲ್ಲಿ ಮತ್ತು ನವದಿಲ್ಲಿಯಾದ್ಯಂತ ಮಧ್ಯಮ ವರ್ಗದ ಪ್ರಾಬಲ್ಯದ ಹೆಚ್ಚಿನ ಸ್ಥಾನಗಳಲ್ಲಿ ಹಾಗೂ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಪೂರ್ವಾಂಚಲಿ ಮತದಾರರು ನಿರ್ಣಾಯಕ ಪಾತ್ರ ವಹಿಸುವ 25 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದೇ ಇಡೀ ಫಲಿತಾಂಶ ಬದಲಾಗಲು ಕಾರಣ.

ಅನಧಿಕೃತ ವಸಾಹತುಗಳಿಂದ ಕೂಡಿದ ಟ್ರಾನ್ಸ್ ಯಮುನಾ ಪ್ರದೇಶದ 20 ಸ್ಥಾನಗಳಲ್ಲಿ, ಬಿಜೆಪಿ 12 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ, ಎಎಪಿ 8 ಸ್ಥಾನಗಳಲ್ಲಿ ಮುಂದಿದೆ. 2015 ಮತ್ತು 2020 ರ ಚುನಾವಣೆಗಳಲ್ಲಿ ಕ್ರಮವಾಗಿ 3 ಮತ್ತು 8 ಸ್ಥಾನಗಳನ್ನು ಮಾತ್ರ ಗೆದ್ದಿದ್ದ ಬಿಜೆಪಿ ಪಾಲಿಗೆ ಇದು ಗಮನಾರ್ಹ ತಿರುವು ನೀಡಿದ ಬೆಳವಣಿಗೆ.

ಅರವಿಂದ ಕೇಜ್ರಿವಾಲ್ ಸೇರಿದಂತೆ ಎಎಪಿಯ ಘಟಾನುಘಟಿಗಳೇ ಹಿನ್ನಡೆ ಕಾಣುವಂತಾದದ್ದು ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿದೆ. ದಿಲ್ಲಿ ಸಿಎಂ ಅತಿಶಿ, ಮನೀಶ್ ಸಿಸೋಡಿಯಾ ಎಲ್ಲರೂ ದೊಡ್ಡ ಆಘಾತ ಕಂಡಿದ್ದಾರೆ. ಕಡಿಮೆ ಆದಾಯ ಹೊಂದಿರುವವರು ಎಎಪಿಗೆ ಮತ ಹಾಕಿದ್ದಾರೆ.

ಈ ಸಲದ ಬಜೆಟ್ ಮಧ್ಯಮ ವರ್ಗದ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಕಾರಣವಾಗಿರಬಹುದು. ಮಧ್ಯಮ ವರ್ಗದವರಿಗೆ ನೀಡಿದ್ದ ಬಜೆಟ್ ಪರಿಹಾರ, 12 ಲಕ್ಷ ರೂ.ಗಳವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದು ಇವೆಲ್ಲವೂ ಬಿಜೆಪಿಗೆ ಲಾಭ ತಂದಿರುವಂತೆ ಕಾಣಿಸುತ್ತದೆ. ಜೊತೆಗೆ ವಾಯು ಮತ್ತು ಜಲ ಮಾಲಿನ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿಷಯಗಳ ಕುರಿತು ಎಎಪಿ ನಿಷ್ಕ್ರಿಯತೆ ಬಗ್ಗೆ ಜನರ ಅಸಮಾಧಾನವೂ ಬಿಜೆಪಿಗೆ ಲಾಭಧಾಯಕವಾದಂತಿದೆ.

ದಿಲ್ಲಿ ಚುನಾವಣೆಗೆ ಸ್ವಲ್ಪ ಮೊದಲು 8 ನೇ ವೇತನ ಆಯೋಗದ ಘೋಷಣೆ ಕೂಡ ಬಿಜೆಪಿಗೆ ಮತ್ತೊಂದು ಸಕಾರಾತ್ಮಕ ಅಂಶವಾಯಿತು. ಏಕೆಂದರೆ ದಿಲ್ಲಿಯಲ್ಲಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರು ಮತದಾರರಾಗಿದ್ದಾರೆ.

ಕಾಂಗ್ರೆಸ್ ಕೇವಲ ಶೇ.6 ಮತಗಳನ್ನು ಪಡೆಯುತ್ತದೆ. ಎಎಪಿ ತನ್ನ ಸೋಲಿಗೆ ಕಾಂಗ್ರೆಸ್ ಅನ್ನು ದೂಷಿಸುವುದು ಸರಿಯಲ್ಲ. ಎಂಸಿಡಿ ಮಾಡಿದ ಕೆಲಸ ಕೊರತೆಯಿಂದಾಗಿ ಎಎಪಿ ಸೋಲಿಗೆ ಕಾರಣವಾಗಿದೆ ಎಂಬುದನ್ನು ಕೂಡ ಒಪ್ಪಬಹುದು. ಮತ ಹಂಚಿಕೆಯ ವ್ಯತ್ಯಾಸ ಕೇವಲ ಶೇ.3 ಎಂಬುದನ್ನು ಗಮನಿಸಬೇಕು.

ಕಳೆದ ಎರಡು ಚುನಾವಣೆಗಳಲ್ಲಿ ಎಎಪಿ ಭರವಸೆ ನೀಡಿದ ಉಚಿತ ಕೊಡುಗೆಗಳು ಪಕ್ಷ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮತಗಳನ್ನು ಆಕರ್ಷಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಬಿಜೆಪಿಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ, ಪಕ್ಷವು ಗೆದ್ದರೆ ಉಚಿತ ವಿದ್ಯುತ್ ಮತ್ತು ಉಚಿತ ಬಸ್ ಪ್ರಯಾಣದಂತಹ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ದಿಲ್ಲಿ ಮತದಾರರಿಗೆ ಬಿಜೆಪಿ ಭರವಸೆ ನೀಡಿತ್ತು.

ಎಎಪಿಯ ಮತ್ತೊಂದು ಮತದಾರರ ನೆಲೆ ಪೂರ್ವಾಂಚಲಿ ಸಮುದಾಯ ಕೂಡ ಈ ಸಲ ಬಿಜೆಪಪಿ ಕಡೆ ಹೋಗಿರುವಂತಿದೆ. ಅವರು ನಗರದ ಮತದಾರರಲ್ಲಿ ಸುಮಾರು ಶೇ.30 ರಷ್ಟಿದ್ದಾರೆ. ಒಟ್ಟಾರೆಯಾಗಿ ಇವೆಲ್ಲವೂ ಎಎಪಿ ಪಾಲಿಗೆ ಕರಾಳವಾದವು.

ಬಹುಶಃ ಇದನ್ನು ಮೊದಲೇ ಗ್ರಹಿಸಿದ್ದ ಕೇಜ್ರಿವಾಲ್, ಪೂರ್ವಾಂಚಲಿ ಭಾವನೆಗಳನ್ನು ಪ್ರಚೋದಿಸಲು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರ ಯಮುನಾ ನದಿಯನ್ನು ವಿಷಕಾರಿಯಾಗಿಸುತ್ತಿದೆ ಎಂದು ಆರೋಪಿಸಿದ್ದರು. ಪೂರ್ವಾಂಚಲಿ ಸಮುದಾಯದಲ್ಲಿ ಯಮುನಾ ನದಿಯನ್ನು ಬಹಳ ಪೂಜಿಸಲಾಗುತ್ತದೆ. ಯಮುನೆಯನ್ನು ಸ್ವಚ್ಛಗೊಳಿಸುವ ತನ್ನ ಬದ್ಧತೆಯಲ್ಲಿ ವಿಫಲವಾಗಿದ್ದನ್ನು ಎಎಪಿ ಒಪ್ಪಿಕೊಂಡಿತ್ತು. ಕಡೆಗೂ ಪೂರ್ವಾಂಚಲಿಗಳು ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದಂತೆ ತೋರುತ್ತದೆ.

ಬಿಜೆಪಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಹೆಚ್ಚಿನ ಸಂಖ್ಯೆಯ ನಕಲಿ ಮತದಾರರನ್ನು ನೋಂದಾಯಿಸುವ ಮೂಲಕ ಮತದಾರರ ಪಟ್ಟಿಯನ್ನು ತಿದ್ದಿದೆ ಎಂಬ ಅರವಿಂದ್ ಕೇಜ್ರಿವಾಲ್ ಅವರ ಆರೋಪ ಇನ್ನೊಂದೆಡೆ ಇದೆ. ಮೋದಿ ನೇತೃತ್ವದ ಬಿಜೆಪಿಯ ಪ್ರಚಾರ ಒಂದು ಸಂದೇಶದ ಮೇಲೆ ಸಾಗಿತ್ತು. ಅದೆಂದರೆ, ಎಎಪಿ ಯೋಜನೆಗಳ ಮುಂದುವರಿಕೆ ಮತ್ತು ಎಎಪಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮದ ಭರವಸೆ. ಎಎಪಿ ಹಿರಿಯ ನಾಯಕರೆಲ್ಲ ದೀರ್ಘ ಕಾಲದವರೆಗೆ ಜೈಲಿನಲ್ಲಿ ಕಳೆದ ಕಾರಣ ಆಡಳಿತ ವಿರೋಧಿ ಅಲೆಯೂ ಇತ್ತು. ಅಲ್ಲದೆ, ಆಂತರಿಕ ಅವ್ಯವಸ್ಥೆಯೂ ಎಎಪಿಯನ್ನು ಕಾಡಿತ್ತು.

ಅದು ಈಗ ಮಧ್ಯಮ ವರ್ಗದವರ ವಿಶ್ವಾಸವನ್ನು ಕಳೆದುಕೊಂಡಿರುವಂತೆ ಕಂಡುಬಂದಿದೆ. ಬಿಜೆಪಿ ಗೆಲುವಿಗೆ ಕಾರಣಗಳೇನು ಎಂದು ನೋಡುವುದಾದರೆ,

1. ಮಧ್ಯಮ ವರ್ಗದ ಮೇಲೆ ಗಮನ ಕೇಂದ್ರೀಕರಿಸಿದ್ದು.

ಮಧ್ಯಮ ವರ್ಗಷದವರನ್ನು ಆಕರ್ಷಿಸಿ ಗೆದ್ದ ಎಎಪಿಯ ತಂತ್ರವನ್ನೇ ಬಿಜೆಪಿ ಬಹಳ ನಾಜೂಕಾಗಿ ಈ ಸಲ ಪ್ರಯೋಗಿಸಿದೆ.

ಬಿಜೆಪಿ ಹಲವಾರು ವಿಧಾನಗಳ ಮೂಲಕ ಈ ಮತದಾರರ ವಿಭಾಗವನ್ನು ಆಕರ್ಷಿಸಿತು. ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ ಬೃಹತ್ ತೆರಿಗೆ ಕಡಿತವೂ ಅದರಲ್ಲಿ ಒಂದು.

2. ಎಎಪಿಯ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಬಿಜೆಪಿ ಘೋಷಿಸಿದ್ದು ಡಬಲ್ ಲಾಭ ತಂದಿದೆ.

ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಬಿಜೆಪಿ ಹೇಳಿದ್ದು ಮಹತ್ವದ ತಿರುವಾಗಿತ್ತು. ಬಿಜೆಪಿಗೆ ಮತ ಹಾಕಿದರೆ ಬಡವರು ಪ್ರಯೋಜನ ಕಳೆದುಕೊಳ್ಳುತ್ತಾರೆ ಎಂಬ ಎಎಪಿ ಹೇಳಿಕೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳದೇ ಇರಲು ಬಿಜೆಪಿಯ ಈ ಭರವಸೆ ಕಾರಣವಾಯಿತು.

3. ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ

ಎಎಪಿ ಜನಪ್ರಿಯತೆ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ, ದಿಲ್ಲಿಯ ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ.

ತುಂಬಿ ಹರಿಯುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ದಿಲ್ಲಿಯ ಮತದಾರರನ್ನು ಕೆರಳಿಸಿತ್ತು. ಎಂಸಿಡಿಯಲ್ಲಿಯೂ ಎಎಪಿ ಅಧಿಕಾರದಲ್ಲಿದೆ ಎಂದರೆ ಅದು ಬಿಜೆಪಿಯ ಕಡೆ ಬೆರಳು ಮಾಡುವಂತಿರಲಿಲ್ಲ. ಕಳಪೆ ರಸ್ತೆಗಳು, ಸ್ವಚ್ಛತೆ ಮತ್ತು ತುಂಬಿ ಹರಿಯುವ ಒಳಚರಂಡಿಗಳು ಕಳೆದ ಎರಡು ವರ್ಷಗಳಿಂದ ದಿಲ್ಲಿಯಾದ್ಯಂತ ದೊಡ್ಡ ಸಮಸ್ಯೆಯಾಗಿತ್ತು.

4. ಲೆಫ್ಟಿನಂಟ್ ಗವರ್ನರ್ ಮತ್ತು ಎಎಪಿಯ ಸತತ ಜಗಳ ಕೂಡ ಮತ್ತೊಂದು ಕಾರಣವಾಯಿತು.

ರಸ್ತೆಗಳ ಕಳಪೆ ಸ್ಥಿತಿ ಮತ್ತು ನಾಗರಿಕ ಕಾರ್ಯಗಳ ಕೊರತೆಗೆ ಎಎಪಿ ನೀಡಿದ ವಿವರಣೆ, ಲೆಫ್ಟಿನಂಟ್ ಗವರ್ನರ್ ಯೋಜನೆಗಳನ್ನು ವಿಳಂಬ ಮಾಡುತ್ತಿದ್ದಾರೆ ಎಂಬುದು. ಕಳೆದ ಕೆಲವು ವರ್ಷಗಳಿಂದ ದಿಲ್ಲಿ ಸರ್ಕಾರ ಮತ್ತು ಎಲ್ಜಿ ನಡುವಿನ ಹೆಚ್ಚಿದ ವೈಷಮ್ಯ ಎದ್ದು ಕಾಣುತ್ತಿತ್ತು. ಬಿಜೆಪಿಯದ್ದೇ ಸರ್ಕಾರವಿದ್ದರೆ ಇಂಥ ರಗಳೆಯೇ ಇಲ್ಲ ಎಂದು ಮತದಾರರು ನಿರ್ಧರಿಸಿರಲೂ ಬಹುದು. ಇದೇ ವೇಳೆ ದಿಲ್ಲಿಗಾಗಿ ಒಟ್ಟಾಗಿ ಕೆಲಸ ಮಾಡುವ ಡಬಲ್ ಎಂಜಿನ್ ಸರ್ಕಾರದ ಬಿಜೆಪಿ ಭರವಸೆಯನ್ನೂ ಜನರು ಪೂರಕವಾಗಿ ತೆಗೆದುಕೊಂಡಿರಬಹುದು.

5. ಆಡಳಿತ ವಿರೋಧಿ ಅಲೆ

ಎಎಪಿಗೆ ಆಡಳಿತ ವಿರೋಧಿ ಅಲೆಯ ಬಗ್ಗೆ ತಿಳಿದಿತ್ತು. ಅದರ ಕೆಲವು ಶಾಸಕರ ಬಗೆಗಿನ ಮತದಾರರ ಅಸಮಾಧಾನ ಕೂಡ ಎಎಪಿ ಪಾಲಿಗೆ ಘಾತುಕವಾಯಿತು. ಆದರೆ ಎಎಪಿ ಹಿನ್ನಡೆಯ ಹೊರತಾಗಿಯೂ ಪ್ರಬಲ ಪೈಪೋಟಿಯೊಡ್ಡಿತು ಮತ್ತು ದಿಲ್ಲಿಯ ಜನ ಅದನ್ನು ತಿರಸ್ಕರಿಸಿಲ್ಲ ಎಂಬುದು ಕೂಡ ಕಾಣುತ್ತಿದೆ.

ಒಂದು ಕಾಲದಲ್ಲಿ ತನ್ನ ಭದ್ರ ಕೋಟೆಯಾಗಿದ್ದ ದಿಲ್ಲಿಯಲ್ಲಿ ದಶಕದಿಂದಲೂ ಕಾಂಗ್ರೆಸ್ ಬಲ ಕಳೆದುಕೊಂಡಿದೆ. ತಾನು ಮತ್ತೆ ದಿಲ್ಲಿಯಲ್ಲಿ ಚೇತರಿಸಿಕೊಳ್ಳಬೇಕೆಂದರೆ, ಎಎಪಿ ಪತನವಾಗುವುದರಿಂದ ಮಾತ್ರ ಸಾಧ್ಯ ಎಂದು ಅದು ನಂಬಿಕೊಂಡು ಕೂತ ಹಾಗಿದೆ. ಇನ್ನೊಂದೆಡೆ, ಇಂಡಿಯಾ ಒಕ್ಕೂಟದಲ್ಲಿಯೇ ಕಾಂಗ್ರೆಸ್ ಮತ್ತು ಎಎಪಿ ನಡುವಿನ ತಿಕ್ಕಾಟದ ಬಗ್ಗೆ ಸಹಜವಾಗಿಯೇ ಅಸಮಾಧಾನವಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ರಚನೆಯಾದ ಇಂಡಿಯಾ ಒಕ್ಕೂಟದಲ್ಲೇ ಕಡೆಗೆ ಪ್ರಬಲ ಪಕ್ಷಗಳ ನಡುವೆ ವಿರಸ ಮೂಡಿತ್ತು. ರಾಜ್ಯಗಳ ವಿಚಾರ ಬಂದಾಗ ತಾವೇ ಅಧಿಖಾರ ಹಿಡಿಯುವ, ಹಂಚಿಕೊಳ್ಳಲು ಬಯಸದ ಧೋರಣೆ ಶುರುವಾಗಿ ಬಿಜೆಪಿಗೆ ಲಾಭ ಮಾಡಿಕೊಟ್ಟದ್ದೂ ಆಯಿತು.

ಹರ್ಯಾಣ ಚುನಾವಣೆ ಫಲಿತಾಂಶ ಕೂಡ ಹಾಗೆಯೇ ಆಯಿತು. ದಿಲ್ಲಿಯಲ್ಲಿ ಕೂಡ ಅವೆರಡೂ ಪಕ್ಷಗಳು ಸತತ ಕಚ್ಚಾಡಿದವು. ಬಿಜೆಪಿಯನ್ನು ಎದುರಿಸಲು ಎರಡೂ ಪಕ್ಷಗಳು ಒಂದಾಗಬೇಕಿತ್ತು. ಕಾಂಗ್ರೆಸ್ ಕೈಜೋಡಿಸಬೇಕಿತ್ತು ಅಥವಾ ಎಎಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಎಂದೇ ಇಂಡಿಐಆ ಒಕ್ಕೂಟದ ಹೆಚ್ಚಿನ ಪಕ್ಷಗಳು ಭಾವಿಸಿದ್ದವು.

ಈಗ ತಪ್ಪಿನ ಫಲವನ್ನು ಉಣ್ಣಬೇಕಾಗಿದೆ. ಎಎಪಿ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸಲಿಲ್ಲ ಎಂಬುದು ಕಾಂಗ್ರೆಸ್ ವಾದ. ಅರವಿಂದ್ ಕೇಜ್ರಿವಾಲ್ ಎಲ್ಲಾ 70 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಮೊದಲು ಘೋಷಿಸಿದಾಗ ಅದನ್ನು ಸ್ಪಷ್ಟವಾಗಿಯೇ ಹೇಳಿದ್ದರು.ಆದರೆ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವಿನ ಬೆನ್ನಲ್ಲೇ ದಿಲ್ಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಈ ಫಲಿತಾಂಶ, ಲೋಕಸಭಾ ಚುನಾವಣೆಯಲ್ಲಿನ ಬಿಜೆಪಿಯ ಹಿನ್ನಡೆಯನ್ನು ಮರೆಸುತ್ತದೆ. ಅಲ್ಲದೆ, ಚುನಾವಣೆ ದೃಷ್ಟಿಯಿಂದ ಬಿಜೆಪಿ ಪ್ರಾಬಲ್ಯ ಸಾಧಿಸುತ್ತದೆ ಎಂದು ಬಿಂಬಿಸಲಿ ಮತ್ತು ನರೇಂದ್ರ ಮೋದಿ ಇನ್ನೂ ಜನಪ್ರಿಯರಾಗಿದ್ದಾರೆ ಎಂಬ ರಾಜಕೀಯ ನಿರೂಪಣೆಯನ್ನು ಮತ್ತೊಮ್ಮೆ ಹೆಣೆಯಲು ಇದು ಸಹಾಯ ಮಾಡುತ್ತದೆ. ಇಂಡಿಯಾ ಒಕ್ಕೂಟಕ್ಕೆ ಇದು ಬಹಳ ದೊಡ್ಡ ನಷ್ಟ.

ವಿಶೇಷವಾಗಿ ಈ ವರ್ಷದ ಕೊನೆಯ ವೇಳೆಗೆ ಬಿಹಾರದಲ್ಲಿ ಮತ್ತು ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿರುವಾಗ ಇಂಡಿಯಾ ಒಕ್ಕೂಟದೊಳಗಿನ ಬೆಳವಣಿಗಳು ಅಪೇಕ್ಷಣೀಯವಂತೂ ಅಲ್ಲ. ಮತ್ತೊಮ್ಮೆ ಬಿಜೆಪಿಯನ್ನು ಎದುರಿಸಬೇಕಾಗಿರುವ ಆ ಪ್ರಮುಖ ಹಂತದಲ್ಲಿ ಈ ಒಡಕು ದೊಡ್ಡ ಸವಾಲಾಗಲಿದೆ.

ಶನಿವಾರದ ಫಲಿತಾಂಶ ನೋಡಿದರೆ. ಕಾಂಗ್ರೆಸ್ ಪಕ್ಷ ಎಎಪಿ ಮತ ಹಂಚಿಕೆಯಿಂದ ಹೆಚ್ಚು ಲಾಭ ಗಳಿಸಿಲ್ಲ, ಕಳೆದ ಬಾರಿ ಪಡೆದ ಶೇ.4.26 ಮತಗಳಿಗೆ ಸ್ವಲ್ಪವೂ ಸೇರಿಲ್ಲ. ಚುನಾವಣೆ ಹೊತ್ತಲ್ಲಿ ಎಎಪಿ ಮತ್ತು, ಅದಕ್ಕಿಂತಲೂ ಕೇಜ್ರಿವಾಲ್ ವಿರುದ್ಧ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.

ಆದರೂ, ಎಎಪಿ ವಿರುದ್ಧದ ಅಸಮಾಧಾನದ ಅಲೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಅದರ ವಿರುದ್ಧದ ದಾಳಿ ನಡೆಸುವ ಪಕ್ಷದ ನಿರ್ಧಾರ ಸರಿಯಾಗಿಯೇ ಇತ್ತೆಂದು ಕಾಂಗ್ರೆಸ್ ಒಳಗಿನವರು ಹೇಳುತ್ತಾರೆ. ದಿಲ್ಲಿ ಪ್ರಚಾರದ ಕೊನೆಯ ದಿನಗಳಲ್ಲಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಎಲ್ಲಾ ಕಾಂಗ್ರೆಸ್ ಉನ್ನತ ನಾಯಕರು ಎಎಪಿ ವಿರುದ್ಧ ತೀವ್ರೆ ವಾಗ್ದಾಳಿ ನಡೆಸಿದ್ದರು.

1998 ರಿಂದ 2013 ರವರೆಗೆ ದಿಲ್ಲಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2008ರಲ್ಲಿ ಅದು ಸತತ ಮೂರನೇ ಬಾರಿಗೆ ದಿಲ್ಲಿಯನ್ನು ಗೆದ್ದಾಗ, ಅದರ ಮತ ಹಂಚಿಕೆ ಶೇ.40.31ರಷ್ಟಿತ್ತು, ಆ ಪ್ರಮಾಣ 2013ರಲ್ಲಿ ಶೇ.24.55ಕ್ಕೆ ಇಳಿಯಿತು. 2015ರಲ್ಲಿ ಶೇ.10 ಕ್ಕಿಂತ ಕಡಿಮೆಯಾಯಿತು.

2020ರಲ್ಲಿ, ಅದು ಕೇವಲ ಶೇ.4.26ರಷ್ಟು ಮತ ಹಂಚಿಕೆ ಪಡೆಯುವಲ್ಲಷ್ಟೇ ಯಶಸ್ವಿಯಾಯಿತು. ಮತ್ತೊಂದೆಡೆ, 2013ರಲ್ಲಿ ಎಎಪಿ ಮತ ಹಂಚಿಕೆ ಶೇ.29.49ರಷ್ಟಿತ್ತು. 2015ರಲ್ಲಿ ಶೇ.54.34ಕ್ಕೆ ಏರಿತು. 2020 ರಲ್ಲಿ ಶೇ.53.57 ಆಯಿತು. ಬಿಜೆಪಿ ಮತ ಹಂಚಿಕೆ 2013ರಲ್ಲಿ ಶೇ.33.07 ರಷ್ಟಿತ್ತು. 2015ರಲ್ಲಿ ಸ್ವಲ್ಪ ಕಡಿಮೆಯಾಗಿ, ಶೇ.32.19ಕ್ಕೆ ಇಳಿಯಿತು. 2020ರಲ್ಲಿ ಶೇ.38.51 ಕ್ಕೆ ಏರಿತ್ತು.

ಈಗಿನ ಸನ್ನಿವೇಶ ನೋಡುತ್ತಿದ್ದರೆ, ಕಾಂಗ್ರೆಸ್ ಗಿದ್ದ ಬೆಂಬಲದ ನೆಲೆ ಪೂರ್ತಿಯಾಗಿ ಎಎಪಿಗೆ ತಿರುಗಿದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಎಎಪಿಯನ್ನು ಸೋಲಿಸುವುದು ಮತ್ತೆ ತಾನು ಚೇತರಿಸಿಕೊಳ್ಳಲು ಮುಖ್ಯ ಎಂದು ಕಾಂಗ್ರೆಸ್ ಭಾವಿಸುತ್ತಿದೆ.

ಕಾರ್ಯಕರ್ತರ ನೆಲೆಯನ್ನು ಹೊಂದಿರುವ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗಳಿಗಿಂತ ಭಿನ್ನವಾಗಿ, ಒಂದು ಚಳುವಳಿಯ ಮೂಲಕ ಹುಟ್ಟಿದ ಎಎಪಿಯಂಥ ಸ್ವಯಂಸೇವಕರ ನೇತೃತ್ವದ ಪಕ್ಷ ಅಧಿಕಾರ ಕಳೆದುಕೊಂಡರೆ ಮತ್ತೆ ಜೀವಂತವಾಗಿರುವುದಿಲ್ಲ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು ಎನ್ನಲಾಗುತ್ತಿದೆ. ಆದರೆ ಅದೆಲ್ಲ ಲೆಕ್ಕಾಚಾರವೂ ತಲೆಕೆಳಗಾಗಿದೆ. ಕಾಂಗ್ರೆಸ್ ಅಂದುಕೊಂಡಿದ್ದೆಲ್ಲ ಸುಳ್ಳಾಗಿದೆ.

ಎಎಪಿ ಅಧಿಕಾರ ಕಳೆದುಕೊಂಡಿದ್ದರೂ, ಅದು ಕಾಂಗ್ರೆಸ್ ನ ಹಾಗೆ ಹೀನಾಯ ಸೋಲು ಕಂಡಿಲ್ಲ. ದಿಲ್ಲಿಯಲ್ಲಿ ತನ್ನ ಬಲವನ್ನು ಅದು ಉಳಿಸಿಕೊಂಡಿದೆ ಮತ್ತು ಈ ಸೋಲು ತಾತ್ಕಾಲಿಕ ಎಂದು ಭಾವಿಸಿ ಮತ್ತೆ ಚೇತರಿಸಿಕೊಳ್ಳುವ ಲಕ್ಷಣಗಳಿವೆ. ಆದರೆ ಕಾಂಗ್ರೆಸ್ ಕಥೆ ಏನು ಎಂಬುದೇ ಪ್ರಶ್ನೆ.

ಮುಂದಿನ ಚುನಾವಣೆ ಇರುವ ಬಿಹಾರದಲ್ಲಿ ಇದರ ತಕ್ಷಣದ ಪರಿಣಾಮ ಬೀರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News