ಒಕ್ಕಲಿಗರ ಬಳಿಕ ಲಿಂಗಾಯತರಿಂದಲೂ ವರದಿ ಬಿಡುಗಡೆಗೆ ವಿರೋಧ
ಸಿದ್ದರಾಮಯ್ಯ
ರಾಜ್ಯದಲ್ಲಿ ಜಾತಿ ಗಣತಿ ಬಿಡುಗಡೆಗೆ ಒಕ್ಕಲಿಗರು ವಿರೋಧ ವ್ಯಕ್ತಪಡಿಸಿದ ಬೆನ್ನಿಗೇ ಈಗ ಇನ್ನೊಂದು ಪ್ರಬಲ ಸಮುದಾಯ ಲಿಂಗಾಯತರಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ. ಬಿಹಾರದಲ್ಲಿ ಜಾತಿಗಣತಿ ವರದಿ ಬಹಿರಂಗಗೊಂಡ ನಂತರ ಕರ್ನಾಟಕದಲ್ಲೂ ಈ ಹಿಂದೆಯೇ ಆಗಿರುವ ಜಾತಿಗಣತಿ ವರದಿ ಬಿಡುಗಡೆಗೆ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ಬಹಳಷ್ಟು ಮಂದಿ ಎಚ್ ಕಾಂತರಾಜು ಆಯೋಗದ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡಿದ್ದರು.
ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ 'ವರದಿ ಸ್ವೀಕರಿಸುತ್ತೇನೆ. ಆದಷ್ಟು ಬೇಗ ವರದಿ ಬಿಡುಗಡೆ ಮಾಡುತ್ತೇವೆ' ಎಂದಿದ್ದರು. ನವೆಂಬರ್ ತಿಂಗಳಾಂತ್ಯದಲ್ಲಿ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲು ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮುಂದಾಗಿದ್ದಾರೆ ಎಂದು ವರದಿಯಾಗಿತ್ತು.
ಈ ನಡುವೆ ಒಕ್ಕಲಿಗರ ಸಮುದಾಯದ ಶಾಸಕರು, ಸಚಿವರು, ಮುಖಂಡರು ಚಿಂತನ ಮಂಥನ ಸಭೆಯನ್ನು ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಜಾತಿ ಗಣತಿ ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರಿನಲ್ಲಿ ಕಳೆದ ವಾರ ಏರ್ಪಡಿಸಿದ್ದ ಚಿಂತನ-ಮಂಥನ ಸಭೆಯಲ್ಲಿ ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಿರಾದ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಭಾಗಿಯಾಗಿದ್ದರು.
ಇವರೆಷ್ಟೇ ಅಲ್ಲದೆ, ರಾಜಕೀಯ ಮುಖಂಡರೂ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಚಲುವರಾಯಸ್ವಾಮಿ, ಮಾಜಿ ಸಚಿವರಾದ ಎಸ್ ಟಿ ಸೋಮಶೇಖರ್, ಅರಗ ಜ್ಞಾನೇಂದ್ರ, ಶಾಸಕರಾದ ಡಾ. ರಂಗನಾಥ್, ಶರತ್ ಬಚ್ಚೇಗೌಡ, ರವಿ ಗಣಿಗಾ, ಮಂಥರ್ ಗೌಡ, ಎಂಎಲ್ಸಿಗಳಾದ ಎಸ್ ರವಿ, ದಿನೇಶ್ ಗೂಳಿಗೌಡ, ಅ. ದೇವೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ, ಗೌರವಾಧ್ಯಕ್ಷ ಕೆಂಚಪ್ಪಗೌಡ, ಉಪಾಧ್ಯಕ್ಷ ಎಲ್ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಜಯಮುತ್ತು ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಡಿಸಿಎಂ ಡಿಕೆಶಿ ಸಮುದಾಯದ ಪರ ನಿಂತು ವರದಿ ಬಿಡುಗಡೆ ಮಾಡಲ್ಲ ಎಂದು ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಇನ್ನೊಂದೆಡೆ ರಾಹುಲ್ ಗಾಂಧಿ ವರದಿ ಬಿಡುಗಡೆ ಮಾಡಬೇಕು ಎಂದು ಹೇಳುತ್ತಿರುವುದು ಅತ್ತ ಹೈಕಮಾಂಡ್ , ಇತ್ತ ಸಮುದಾಯ ಹೀಗೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಡಿಕೆಶಿ. ಒಕ್ಕಲಿಗರ ವಿರೋಧ ವ್ಯಕ್ತವಾದ ಬೆನ್ನಲ್ಲೇ , ಇದೀಗ ವೀರಶೈವ ಲಿಂಗಾಯತರ ಸರದಿ.
ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರ ಕೂಡಲೇ ಸ್ವೀಕರಿಸಬೇಕು ಎಂಬ ಕೂಗು ಕೇಳಿ ಬಂದ ಬೆನ್ನಲ್ಲೇ ವೀರಶೈವ ಲಿಂಗಾಯತರು ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗುರುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಶಾಸಕರೂ ಆಗಿರುವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಅರಣ್ಯ ಸಚಿವರೂ ಆಗಿರುವ ಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ನೇತೃತ್ವದಲ್ಲಿ ಈ ಸಭೆ ನಡೆದಿದೆ.
ಜಾತಿ ಗಣತಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ನಡೆಸಬೇಕು. ಸಂಗ್ರಹಿಸಿರುವ ಮಾಹಿತಿಯನ್ನು ದೃಢಪಡಿಸಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ಪರಿಶೀಲಿಸಬೇಕು ಎಂದೂ ಮಹಾಸಭಾ ಆಗ್ರಹಿಸಿದೆ. ವರದಿ ಬಿಡುಗಡೆ ಮಾಡಬೇಡಿ ಎನ್ನುತ್ತಿರುವ ಒಕ್ಕಲಿಗರ ನಾಯಕರ ವಾದ ಹೀಗಿದೆ..
ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ. ತುಂಬಾ ಹಳೆಯ ವರದಿ ಪ್ರಸ್ತುತ ವರ್ಷಕ್ಕೆ ಸೂಕ್ತವಿಲ್ಲ. ಜಾತಿಗಣತಿ ವರದಿ ತಯಾರಿಸಿ 8 ವರ್ಷ ಕಳೆದು ಹೋಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವುದರಿಂದ ಈ ವರದಿ ಅಪ್ರಸ್ತುತವಾಗಿದೆ.
ಜಾತಿ ಗಣತಿಯ ಅಂಕಿ ಅಂಶ ಬಿಡುಗಡೆ ಮಾಡುವುದಾದರೆ ಮೊದಲು ಸಮುದಾಯದ ಗಮನಕ್ಕೆ ತರಬೇಕು.
ಜಾತಿ ಗಣತಿಯ ವರದಿಯಲ್ಲಿ ಲೋಪಗಳಿವೆ, ಸಮಿತಿ ಕಾರ್ಯದರ್ಶಿಗಳ ಸಹಿ ಇಲ್ಲ. ವರದಿ ವಿಚಾರವಾಗಿ ಸಿಎಂ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಶ್ರೀಗಳ ಜೊತೆ ಸಭೆ ಮಾಡಬೇಕು. ಯಾವ ಕಾರಣಕ್ಕೂ ಕಾಂತರಾಜು ಸಮಿತಿ ವರದಿ ಒಪ್ಪಬಾರದು. ಜಾತಿ ಜನಗಣತಿ ಮಾಡುವುದಾದರೆ ಹೊಸದಾಗಿ ಜಾತಿ ಆಧರಿತವಾಗಿ ಮಾಡಲಿ ಎಂಬುದು ಒಕ್ಕಲಿಗರ ವಾದ.
ಇನ್ನು ಗುರುವಾರದ ಅಖಿಲ ಭಾರತ ವೀರಶೈವ ಮಹಾಸಭಾದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಹಲವರ ಮನೆಗಳಿಗೆ ಭೇಟಿ ನೀಡದೇ ವರದಿ ಸಿದ್ಧಪಡಿಸಲಾಗಿದೆ ಎಂಬ ದೂರುಗಳಿವೆ. ಈ ಸಮೀಕ್ಷೆಯಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಅಪೂರ್ಣ ಮಾಹಿತಿಯನ್ನು ಒಳಗೊಂಡ ಸಮೀಕ್ಷೆಯನ್ನು ಸ್ವೀಕರಿಸಿದರೆ, ಸಮಾಜಕ್ಕೆ ದೊಡ್ಡ ಮಟ್ಟದ ನಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದಿದ್ದಾರೆ.
‘ಈಗ ಸಿದ್ಧಪಡಿಸಿರುವ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ತಯಾರಾಗಿರುವ ವರದಿಯು ಎಂಟು ವರ್ಷಗಳಷ್ಟು ಹಳೆಯದಾಗಿದ್ದು, ನ್ಯೂನತೆಗಳಿಂದ ಕೂಡಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬೇಕು. ಸರ್ಕಾರ ಮತ್ತೊಮ್ಮೆ ಈ ಬಗ್ಗೆ ವಿವೇಚನಾಯುತವಾಗಿ ಪರಾಮರ್ಶಿಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಶಾಮನೂರು ಒತ್ತಾಯಿಸಿದರು.
‘ವೀರಶೈವ–ಲಿಂಗಾಯತ ಸಮುದಾಯವು ಸಕಲ ಜಾತಿ–ಜನಾಂಗಗಳಿಗೆ ಲೇಸನ್ನೇ ಬಯಸುವ ಸಮುದಾಯವಾಗಿದೆ. ನಾವು ಜಾತಿ ಗಣತಿಯ ವಿರೋಧಿಗಳಲ್ಲ’ ಎಂದು ಅವರು ಹೇಳಿದರು. ಈ ನಡುವೆ , ಕಾಂತರಾಜ ವರದಿ ಜಾತಿ ಗಣತಿ ಅಲ್ಲವೇ ಅಲ್ಲ. ಇದು ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸರಿಪಡಿಸುವ ಹಿನ್ನೆಲೆಯಲ್ಲಿ ತಯಾರಾದ ವರದಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಕಾಂತರಾಜ ವರದಿಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ. ಈ ವರದಿಯನ್ನು ಜಾತಿ ಗಣತಿ ವರದಿ ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ.
'ಕಾಂತರಾಜ ಅವರ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ ಶಿಕ್ಷಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದ ಅಂಕಿ– ಅಂಶವನ್ನು ಸ್ಪಷ್ಟವಾಗಿ ತಿಳಿಯಬಹುದು. ಈ ವರದಿ ವಿರೋಧಿಸಿ ಕೆಲವು ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಇನ್ನು ಸರ್ಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ವರದಿ ಸ್ವೀಕಾರ ಮಾಡಿದರೆ ಅದನ್ನು ಪಡೆದು ಅಧ್ಯಯನ ಮಾಡುತ್ತೇನೆ. ವರದಿ ವಿರೋಧ ಮಾಡುತ್ತಿರುವವರೂ ವರದಿ ನೋಡಿದ್ದರೆ ನಮಗೆ ತಿಳಿಸಲಿ. ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲೂ ಮನವಿ ಮಾಡುತ್ತೇನೆ' ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧವಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವರದಿ ಸ್ವೀಕಾರವಾಗಿಲ್ಲ. ಇದರಲ್ಲಿ ರಾಜಕೀಯ ಹಿತಾಸಕ್ತಿ ಅಡಗಿಲ್ಲ ಎಂದು ತಂಗಡಗಿ ಹೇಳಿದರು.
ಒಕ್ಕಲಿಗರ ಸಭೆಯ ಬಳಿಕ ಮಾತನಾಡಿರುವ ಸಂಸದ ಡಿ ಕೆ ಸುರೇಶ್ ಅವರು ನಿರ್ಮಲಾನಂದನಾಥ ಶ್ರೀಗಳು ಸಮಾಜದ ಅಭಿಪ್ರಾಯ ತಿಳಿಸಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶ ಏನಿಲ್ಲ. ಕಾಂತರಾಜ್ ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿ ಸರ್ಕಾರದ ಮುಂದೆ ಬಂದಿಲ್ಲ. ಸರ್ಕಾರ ಇನ್ನೂ ಸಮ್ಮತಿಸಿಲ್ಲ. ಸಮಾಜದ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಮಾಜದ ಅಭಿಪ್ರಾಯವನ್ನ ಹೇಳಿದ್ದಾರೆ ತಪ್ಪೇನಿಲ್ಲ. ವರದಿ ಬಂದ ಮೇಲೆ ತಾನೆ ನನಗೆ ಗೊತ್ತಾಗುವುದು. ವರದಿಯಲ್ಲಿ ಏನಿದ್ಯೋ ನನಗೇನು ಗೊತ್ತು. ಕಾಂತರಾಜ್ ಸಮಿತಿಗೆ ಸರ್ಕಾರ ಇನ್ನ ಒಪ್ಪಿಲ್ಲ. ಊಹಾಪೋಹಗಳಲ್ಲಿ ತೇಲುತ್ತಿದ್ದೇವೆ. ಕಾಂತರಾಜ್ ಸಮಿತಿ ವರದಿ ರಾಜಕೀಯ ವಸ್ತುವಲ್ಲ ಎಂದು ಹೇಳಿದ್ದಾರೆ.
ವಿರೋಧದ ಮಧ್ಯೆಯೂ ಸರ್ಕಾರ ವರದಿಯನ್ನು ಸ್ವೀಕರಿಸಿದರೆ ಮುಂದಿನ ಹೋರಾಟದ ದಾರಿ ಏನಾಗಿರಬೇಕು ಎಂಬ ಬಗ್ಗೆ ಚರ್ಚಿಸಲು ಇದೇ ತಿಂಗಳ ಕೊನೆಯ ವಾರದಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಸಭೆ ಕರೆಯಲು ವೀರಶೈವ ಮಹಾಸಭಾ ತೀರ್ಮಾನಿಸಿದೆ. ‘ಈ ಸಭೆಗೆ ವೀರಶೈವ–ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಸಂಸದರು ಶಾಸಕರನ್ನು ಆಮಂತ್ರಿಸಲಾಗುವುದು. ಅಪೂರ್ಣ ವರದಿಯನ್ನು ಅನುಷ್ಠಾನ ಮಾಡಲು ಮುಂದಾದರೆ ಸದನದ ಒಳಗೆ–ಹೊರಗೆ ಹೋರಾಟ ಅನಿವಾರ್ಯ ಆಗಬಹುದು. ಈ ವಿಷಯದಲ್ಲಿ ರಾಜಕೀಯ ಹೊರತಾದ ಒಗ್ಗಟ್ಟಿನ ತೀರ್ಮಾನ ಕೈಗೊಳ್ಳಬೇಕಾಗಿದ್ದು ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಸಮಾಲೋಚನೆ ನಡೆಸಲು ನಿರ್ಧರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಪ್ರತಿಪಕ್ಷ ಬಿಜೆಪಿಯೂ ಜಾತಿ ಗಣತಿ ವಿಚಾರವನ್ನು ಪ್ರಬಲ ಅಸ್ತ್ರವನ್ನಾಗಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಕಾಂತರಾಜ್ ಸಮಿತಿ ವರದಿಯನ್ನು ಸುಡಬೇಕು ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದರು. ಅತ್ತ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆಯನ್ನು ಬಳಸಿಕೊಂಡು ಹಿಂದುಳಿದ ವರ್ಗಗಳನ್ನು ಸೆಳೆಯಲು ತಂತ್ರಗಾರಿಕೆ ಹೂಡಿದೆ ಎನ್ನಲಾಗುತ್ತಿದೆ.
ಆತ್ತ ಬಿಜೆಪಿಯ ವಿರೋಧ ಇತ್ತ ಸ್ವಪಕ್ಷೀಯ ಒಕ್ಕಲಿಗ, ಲಿಂಗಾಯತ ನಾಯಕರಿಂದಲೇ ವಿರೋಧವನ್ನು ಸಿದ್ದರಾಮಯ್ಯ ಸರಕಾರ ಹೇಗೆ ನಿಭಾಯಿಸಲಿದೆ ಎಂಬುದು ಬಹಳ ಮುಖ್ಯ. ವಿಶೇಷವಾಗಿ ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆಯೂ ಬರಲಿದೆ. ಹಾಗಾಗಿ ಇದು ಸಿದ್ದರಾಮಯ್ಯ ಸರಕಾರಕ್ಕೆ ಅಗ್ನಿ ಪರೀಕ್ಷೆಯಾಗಲಿದೆ.
ಪ್ರಬಲ ಸಮುದಾಯಗಳು ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ದಲಿತರು, ಹಿಂದುಳಿದವರು ವರದಿಯನ್ನು ಬಿಡುಗಡೆ ಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬುಧವಾರ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಂಟಿ ಮಾಧ್ಯಮಗೋಷ್ಟಿ ನಡೆಸಿ, ನ್ಯಾಯವಾದಿ ಕಾಂತರಾಜು ಆಯೋಗದ ಜಾತಿವಾರು ಸಮೀಕ್ಷೆಯನ್ನು ಈ ಕೂಡಲೇ ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸಿದವು.
ಕಳೆದ 20 ವರ್ಷಗಳಿಂದ ರಾಜ್ಯ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿಯನ್ನು ಪರಿಷ್ಕರಣೆ ಮಾಡದೆ ಇರುವ ಕಾರಣ ಕಾಂತರಾಜು ಆಯೋಗದ ವರದಿ ಬಿಡುಗಡೆಗೊಳಿಸಿ, ಅದನ್ನು ಅಂಗೀಕರಿಸುವ ಮೂಲಕ ಶೀಘ್ರ ಜಾರಿಗೆ ತರಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದ್ದಾರೆ.
ವರದಿ ಪರವಾಗಿ ದಲಿತರು, ಹಿಂದುಳಿದ ಸಮಾಜಗಳು ವಾದ ಮಾಡಿದರೆ, ರಾಜಕೀಯವಾಗಿ ಪ್ರಭಾವಿ ಸಮುದಾಯಗಳು ವರದಿಯನ್ನು ವಿರೋಧಿಸುತ್ತಿವೆ. ಜೊತೆಗೆ ಬಿಜೆಪಿಯೂ ಈ ಗೊಂದಲದ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದೆ. ಬಿಜೆಪಿ ನಾಯಕರು ಒಂದೊಂದೇ ಹೇಳಿಕೆಯನ್ನೂ ಕೊಡುತ್ತಿದ್ದಾರೆ.
ದೇಶದಲ್ಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಮೊದಲ ಸರಕಾರ ಕರ್ನಾಟಕ ಆಗಬೇಕಿತ್ತು. ಬೇರೆ ಬೇರೆ ಕಾರಣಗಳಿಂದ ಅದಾಗಲಿಲ್ಲ. ಈಗ ಇನ್ನೇನೂ ಸಬೂಬು ಉಳಿದಿಲ್ಲ. ಸಾಲದ್ದಕ್ಕೆ ಸ್ವತಃ ರಾಹುಲ್ ಗಾಂಧಿಯವರೇ ಜಾತಿ ಗಣತಿ ವರದಿ ಎಲ್ಲ ರಾಜ್ಯಗಳಲ್ಲೂ ಬಿಡುಗಡೆಯಾಗಬೇಕು ಎಂದು ಹೇಳುತ್ತಿದ್ದಾರೆ. ಈ ಕಠಿಣ ಸವಾಲನ್ನು ಸಿದ್ದರಾಮಯ್ಯ ಸರಕಾರ ಹೇಗೆ ಎದುರಿಸಲಿದೆ ಎಂದು ಕಾದು ನೋಡಬೇಕು.