AI ಬಂದು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ Gen Z
ಸಾಂದರ್ಭಿಕ ಚಿತ್ರ | Photo Credit : freepik
ಯುವ ಕಾರ್ಮಿಕರ ನಡುವೆ ಎಐ ಆತಂಕ ಅತಿಯಾಗಿದೆ ಎಂದಿದೆ ರಾಂಡ್ಸ್ಟಡ್ ವರ್ಕ್ಮಾನಿಟರ್ ಸಮೀಕ್ಷೆ
ರಾಂಡ್ಸ್ಟಡ್ ಸಂಸ್ಥೆಯ ವರ್ಕ್ಮಾನಿಟರ್ (ಕೆಲಸದ ಮೇಲ್ವಿಚಾರಣೆ ಕುರಿತ) ಸಮೀಕ್ಷೆಯೊಂದು ಹೇಳಿರುವ ಪ್ರಕಾರ ಯುವ ವೃತ್ತಿಪರರಲ್ಲಿ ನಾಲ್ಕರಲ್ಲಿ ಮೂವರು ತಮ್ಮ ಕೆಲಸದ ಮೇಲೆ AI (ಕೃತಕ ಬುದ್ಧಿಮತ್ತೆ) ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ Gen Z ತಮ್ಮ ಉದ್ಯೋಗ ಭದ್ರತೆಯ ಮೇಲೆ ಎಐ ಪರಿಣಾಮ ಬೀರುವ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಪ್ರಕಾರ ‘ಎಐ ಏಜೆಂಟ್’ ಕೌಶಲ್ಯವು ಅಗತ್ಯವಿರುವ ಉದ್ಯೋಗಗಳ ಪ್ರಮಾಣ ಶೇ 1587ರಷ್ಟು ಹೆಚ್ಚಾಗಿದೆ. ಎಐ ಮತ್ತು ಅಟೋಮೇಶನ್ ಕಾರಣದಿಂದ ಕಡಿಮೆ- ಸಂಕೀರ್ಣತೆ ಇರುವ ಮತ್ತು ವಹಿವಾಟುಗಳ ಉದ್ಯೋಗಗಳು (ಟ್ರಾನ್ಸಾಕ್ಷನಲ್ ರೋಲ್ಸ್) ಹೆಚ್ಚಾಗಿ ಬದಲಾಗುತ್ತಿವೆ. ಟ್ರಾನ್ಸಾಕ್ಷನಲ್ ರೋಲ್ಸ್ ಎಂದರೆ ದೀರ್ಘಾವಧಿಯ ಬದಲಾವಣೆಗೆ ಕಾರಣವಾಗುವ ಕಾರ್ಯಯೋಜನೆಯ ಉದ್ಯೋಗಗಳಿಗೆ ವಿರುದ್ಧವಾಗಿ, ಯಥಾಸ್ಥಿತಿ ಕಾಪಾಡಿಕೊಳ್ಳುವತ್ತ ಗಮನಹರಿಸುವ ದಿನನಿತ್ಯದ, ಕಾರ್ಯ-ಆಧಾರಿತ ಚಟುವಟಿಕೆಗಳು ಒಳಗೊಂಡಿರುತ್ತವೆ. ಅಂದರೆ ಆಡಳಿತಾತ್ಮಕ, ಹಣಕಾಸು (ಇನ್ವಾಯ್ಸ್ ಮಾಡುವುದು, ಪೇರೋಲ್ ಮಾಡುವುದು) ಮತ್ತು ನೇಮಕಾತಿ ಹಾಗೂ ನೇಮಿಸಿಕೊಳ್ಳುವುದು ಮೊದಲಾದ ಎಚ್ಆರ್ ಕಾರ್ಯಗಳು.
ಜಗತ್ತಿನ ಅತಿ ದೊಡ್ಡ ಉದ್ಯೋಗ ನೇಮಕಾತಿ ಸಂಸ್ಥೆಯಾಗಿರುವ ರಾಂಡ್ಸ್ಟಡ್ ಸಮೀಕ್ಷೆಯಲ್ಲಿ 27,000 ಉದ್ಯೋಗಿಗಳು ಮತ್ತು 1225 ಉದ್ಯೋದದಾತರು ಭಾಗವಹಿಸಿದ್ದಾರೆ. ಒಟ್ಟು 35 ಮಾರುಕಟ್ಟೆಗಳಾದ್ಯಂತ 3 ದಶಲಕ್ಷ ಉದ್ಯೋಗ ಪೋಸ್ಟಿಂಗ್ಗಳನ್ನು ಸಮೀಕ್ಷೆ ಪರಿಶೀಲಿಸಿದೆ.
ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗಳ ವ್ಯಾಪಾರ ಯುದ್ಧ ಮತ್ತು ನಿಯಮ ಆಧಾರಿತವಾಗಿ ಸಾಗುತ್ತಿದ್ದ ವಿಶ್ವ ಕ್ರಮಕ್ಕೆ ಅಡ್ಡಿಯುಂಟು ಮಾಡಿರುವ ಆಕ್ರಮಣಕಾರಿ ವಿದೇಶಾಂಗ ನೀತಿ ಕ್ರಮಗಳಿಂದ ಗ್ರಾಹಕರ ಭಾವನೆ ಮಂಕಾಗಿದೆ. ಹೀಗಾಗಿ ವಿಶ್ವಾದ್ಯಂತ ವಾಣಿಜ್ಯ ಸಂಸ್ಥೆಗಳು ಉದ್ಯೋಗ ಕಡಿತವನ್ನು ಹೆಚ್ಚಿಸುತ್ತಿದ್ದು, ಕಾರ್ಮಿಕ ಮಾರುಕಟ್ಟೆಗಳು ಅಪಾರ ಒತ್ತಡದಲ್ಲಿವೆ. ಈ ಸಂದರ್ಭದಲ್ಲಿ ಎಐ-ಕೇಂದ್ರಿತ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗಿಗಳ ಬದಲಾಗಿ ಆಟೋಮೇಶನ್ ಅಳವಡಿಸಿಕೊಳ್ಳುತ್ತಿವೆ. ಎಐ ಹೂಡಿಕೆಯಿಂದ ಇನ್ನೂ ಸೂಕ್ತ ಆದಾಯ ಗಳಿಸದೆ ಇದ್ದರೂ, ಭವಿಷ್ಯದ ವ್ಯಾಪಾರ ಜಗತ್ತನ್ನು ಎಐ ರೂಪಿಸಲಿರುವುದು ಸುಳ್ಳಲ್ಲ.
ರಾಂಡ್ಸ್ಟಡ್ನ ಸಿಇಒ ಹೇಳಿರುವ ಪ್ರಕಾರ, ಸಾಮಾನ್ಯವಾಗಿ ಎಐ ಕುರಿತಾಗಿ ಉದ್ಯೋಗಿಗಳು ಆಸಕ್ತಿ ಪ್ರಕಟಿಸುತ್ತಿದ್ದಾರೆ. ಅದೇ ಸಂದರ್ಭದಲ್ಲಿ, ಕಂಪನಿಗಳು ವೆಚ್ಚ ಕಡಿತ ಮತ್ತು ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಎಐ ಬಳಸಿ ತಮ್ಮ ಉದ್ಯೋಗಕ್ಕೆ ಹಾನಿ ತರುವ ಸಂಶಯ ಕಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಜನ್ ಝೀ (20-29ರ ವಯಸ್ಸಿನವರು) ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬೇಬಿ ಬೂಮರ್ಸ್ (1946-64) ಎಐ ಬದಲಾವಣೆ ಮತ್ತು ಅದಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದ ಬಗ್ಗೆ ಅತೀ ಕಡಿಮೆ ಚಿಂತೆ ವ್ಯಕ್ತಪಡಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಅಭಿಪ್ರಾಯ ವ್ಯಕ್ತಪಡಿಸಿದ ಬಹುತೇಕ ಕಾರ್ಮಿಕರು ಎಐ ತಂತ್ರಜ್ಞಾನದಿಂದ ಕಾರ್ಪೋರೇಟ್ ಕಂಪನಿಗಳಿಗೆ ಲಾಭವಾಗಲಿದೆಯೇ ವಿನಾ ಉದ್ಯೋಗಿಗಳಿಗೆ ಲಾಭವಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗದಾತರು ಮತ್ತು ಕಾರ್ಮಿಕರು ಉದ್ಯಮದ ಕಾರ್ಯಕ್ಷಮತೆಯನ್ನು ಗಮನಿಸುವಲ್ಲೂ ವ್ಯತ್ಯಾಸವಿದೆ. ಸಮೀಕ್ಷೆಗೊಳಗಾದ ಶೇ 95ರಷ್ಟು ಉದ್ಯೋಗದಾತರು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ನಿರೀಕ್ಷಿಸಿದ್ದಾರೆ. ಶೇ 51ರಷ್ಟು ಉದ್ಯೋಗಿಗಳು ಮಾತ್ರ ಆಶಾವಾದ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.