×
Ad

ಮರೆತ ನಾಯಕರ ಸಾಲಿನಲ್ಲಿ ವಿ.ಪಿ. ಸಿಂಗ್

Update: 2023-06-25 08:24 IST

ವಿ.ಪಿ. ಸಿಂಗ್ ಅವರ ದೊಡ್ಡ ನಿರ್ಧಾರವೆಂದರೆ, ಇತರ ಹಿಂದುಳಿದ ವರ್ಗದವರಿಗೆ ಶೇ.27 ಮೀಸಲಾತಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ್ದು. ‘‘ಮಂಡಲ್ ಆಯೋಗದ ವರದಿಯ ಆಧಾರದ ಮೇಲೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನನ್ನ ಸರಕಾರ ತೆಗೆದುಕೊಂಡಿರುವ ಸಾಮಾಜಿಕ ನ್ಯಾಯದ ಮಹತ್ವದ ನಿರ್ಧಾರವನ್ನು ಈ ಸದನದಲ್ಲಿ ಘೋಷಿಸಲು ನನಗೆ ಸಂತೋಷವಾಗಿದೆ’’ ಎಂದು ಅವರು ಆಗಸ್ಟ್ 7, 1990ರಂದು ಲೋಕಸಭೆಯಲ್ಲಿ ಹೇಳಿದರು. ನಿಜಕ್ಕೂ ಅದು ಚಾರಿತ್ರಿಕ ಕ್ಷಣವಾಗಿತ್ತು.

ವಿ.ಪಿ. ಸಿಂಗ್ ಭಾರತದ 8ನೇ ಪ್ರಧಾನ ಮಂತ್ರಿಯಾಗಿದ್ದವರು. ಅಧಿಕಾರದಲ್ಲಿದ್ದುದು ಅತ್ಯಲ್ಪ ಸಮಯವೇ ಆದರೂ, ಆಗ ಇತರ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ.27 ಮೀಸಲಾತಿಯನ್ನು ವಿಸ್ತರಿಸುವ ಮೂಲಕ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸುವ ಮಹತ್ವದ ನಿರ್ಧಾರದಿಂದಾಗಿ ಅವರ ಅವಧಿ ಚಾರಿತ್ರಿಕವಾಗಿದೆ.

ಸಿಂಗ್ ಅವರು ಡಿಸೆಂಬರ್ 2, 1989ರಂದು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು ನವೆಂಬರ್ 10, 1990ರವರೆಗೆ 343 ದಿನಗಳ ಅವಧಿಗೆ ಅಧಿಕಾರದಲ್ಲಿದ್ದರು.

ಜೂನ್ 25, 1931ರಂದು ಅಲಹಾಬಾದ್ನಲ್ಲಿ ಜನಿಸಿದ ಸಿಂಗ್, ಉತ್ತರ ಪ್ರದೇಶದ ಫತೇಪುರ್ನಲ್ಲಿರುವ ಮಂಡಾದ ಹಿಂದಿನ ಆಡಳಿತ ಕುಟುಂಬದ ಕುಡಿಯಾಗಿದ್ದರು.

ಸಿಂಗ್ ಅವರು 1988ರಲ್ಲಿ ಸ್ಥಾಪಿಸಿದ ಜನತಾ ದಳದ ನಾಯಕರಾಗಿ ದೇಶದ ಉನ್ನತ ಹುದ್ದೆಗೆ ಏರಿದರು. 1960ರ ದಶಕದ ಅಂತ್ಯದಲ್ಲಿ ಅಲಹಾಬಾದ್ನಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು. 1969ರಲ್ಲಿ ಮಧ್ಯಂತರ ಚುನಾವಣೆ ನಡೆದಾಗ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾದರು. ಎರಡು ವರ್ಷಗಳ ನಂತರ ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಿದರು ಮತ್ತು ಫುಲ್ಪುರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಭಾರತೀಯ ಕ್ರಾಂತಿ ದಳದ (ಬಿಕೆಡಿ) ಅಭ್ಯರ್ಥಿ ಬಿ.ಡಿ. ಸಿಂಗ್ ಅವರನ್ನು 66,780 ಮತಗಳಿಂದ ಆಗ ಸಿಂಗ್ ಸೋಲಿಸಿದ್ದರು.

ಅಕ್ಟೋಬರ್ 1974ರಲ್ಲಿ ಅವರು ಇಂದಿರಾ ಗಾಂಧಿ ಸರಕಾರದಲ್ಲಿ ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿ ಸೇರಿದರು. ಮಾರ್ಚ್ 1977ರವರೆಗೆ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಇಂದಿರಾ ನೇತೃತ್ವದ ಕಾಂಗ್ರೆಸ್ ಆರನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಎದುರು ಸೋತಿತು. ವಿ.ಪಿ. ಸಿಂಗ್ ಅವರಿಗೂ ಸೋಲಾಯಿತು. ಭಾರತೀಯ ಲೋಕದಳದ ಜನೇಶ್ವರ್ ಮಿಶ್ರಾ ಅವರ ಎದುರು ಸಿಂಗ್ ಸೋಲು ಕಂಡರು.

ಆನಂತರ, ಸಿಂಗ್ ಅವರು 1980ರ ಲೋಕಸಭಾ ಚುನಾವಣೆಯಲ್ಲಿ ಅಲಹಾಬಾದ್ನಿಂದ ಜನತಾ ಪಕ್ಷದ (ಜಾತ್ಯತೀತ) ಅಭ್ಯರ್ಥಿ ಲಕ್ಷ್ಮ್ಮೀ ಭೂಷಣ ವರ್ಷ್ನಿ ಅವರ ವಿರುದ್ಧ ಗೆದ್ದರು. ಆದರೆ ಜೂನ್ 9, 1980ರಂದು ಉತ್ತರ ಪ್ರದೇಶದ ಸಿಎಂ ಆಗಲು ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನವೆಂಬರ್ 21, 1980ರಂದು ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಬಳಿಕ ತಿಂದವಾರಿ ಅಸೆಂಬ್ಲಿ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಜೂನ್ 14, 1981ರಂದು ಶಾಸಕರಾದರು. ಜೂನ್ 28, 1982ರವರೆಗೆ ಉತ್ತರ ಪ್ರದೇಶ ಸಿಎಂ ಆಗಿದ್ದರು.

ಜುಲೈ 1983ರಲ್ಲಿ ಮತ್ತೆ ಅವರು ರಾಷ್ಟ್ರ ರಾಜಕೀಯಕ್ಕೆ ಮರಳಿದರು. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಇಂದಿರಾ ಸಂಪುಟದಲ್ಲಿ ವಾಣಿಜ್ಯ ಸಚಿವರಾಗಿ ಸೇರಿದರು. ರಾಜೀವ್ ಗಾಂಧಿ ಸಂಪುಟದಲ್ಲಿ, ಸಿಂಗ್ ಅವರು ಹಣಕಾಸು ಮುಂತಾದ ಉನ್ನತ ಖಾತೆಗಳನ್ನು ಹೊಂದಿದ್ದರು. ಬಳಿಕ ಅವರಿಂದ ಹಣಕಾಸು ಖಾತೆಯನ್ನು ರಾಜೀವ್ ಗಾಂಧಿ ಕಿತ್ತುಕೊಂಡು ರಕ್ಷಣಾ ಖಾತೆ ನೀಡಿದಾಗ, ಅದನ್ನು ಪ್ರತಿಭಟಿಸಿ ಎಪ್ರಿಲ್ 12, 1987ರಂದು ರಾಜೀನಾಮೆ ನೀಡಿದರು.

ಶೀಘ್ರದಲ್ಲೇ ಅವರನ್ನು ಕಾಂಗ್ರೆಸ್ನಿಂದ ಹೊರಹಾಕಲಾಯಿತು. ನಂತರ, ಅವರು ಭಿನ್ನಮತೀಯ ಕಾಂಗ್ರೆಸ್ ನಾಯಕರ ಗುಂಪಾದ ಜನ ಮೋರ್ಚಾವನ್ನು ರಚಿಸಿದರು. ಅಕ್ಟೋಬರ್ 1988ರಲ್ಲಿ, ಅವರು ಜನತಾ ದಳವನ್ನು ಸ್ಥಾಪಿಸಿದರು ಮತ್ತು ಬೋಫೋರ್ಸ್ ಹಗರಣದ ಬಗ್ಗೆ ಆಗಿನ ಪ್ರಧಾನಿ ರಾಜೀವ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದರು.

1989ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜೀವ್ ನೇತೃತ್ವದ ಕಾಂಗ್ರೆಸ್ ಸೋಲನ್ನು ಅನುಭವಿಸಿತು, ಅದರ ಸಂಖ್ಯೆಯು 1984ರಲ್ಲಿ 404 ಇದ್ದದ್ದು 197ಕ್ಕೆ ಕುಸಿಯಿತು. 143 ಸ್ಥಾನಗಳನ್ನು ಗಳಿಸುವುದರೊಂದಿಗೆ, ಜನತಾ ದಳ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಎಡಪಕ್ಷಗಳ ಜೊತೆಗಿನ ಮೈತ್ರಿ ಮತ್ತು ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಸರಕಾರವನ್ನು ರಚಿಸುವಲ್ಲಿ ಯಶಸ್ವಿಯಾಯಿತು.

ಡಿಸೆಂಬರ್ 2, 1989ರಂದು ಪ್ರಧಾನ ಮಂತ್ರಿಯಾಗಿ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ಕೂಡಲೇ, ಡಿಸೆಂಬರ್ 29, 1989ರಂದು ಅವರು ಬೋಫೋರ್ಸ್ ಗೆ ಯಾವುದೇ ಭವಿಷ್ಯದ ಒಪ್ಪಂದಗಳನ್ನು ನಿಷೇಧಿ ಸುವುದಾಗಿ ಲೋಕಸಭೆಯಲ್ಲಿ ಘೋಷಿಸಿದರು.

ವಿ.ಪಿ. ಸಿಂಗ್ ಅವರ ದೊಡ್ಡ ನಿರ್ಧಾರವೆಂದರೆ, ಇತರ ಹಿಂದುಳಿದ ವರ್ಗದವರಿಗೆ ಶೇ.27 ಮೀಸಲಾತಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ್ದು. ‘‘ಮಂಡಲ್ ಆಯೋಗದ ವರದಿಯ ಆಧಾರದ ಮೇಲೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನನ್ನ ಸರಕಾರ ತೆಗೆದುಕೊಂಡಿರುವ ಸಾಮಾಜಿಕ ನ್ಯಾಯದ ಮಹತ್ವದ ನಿರ್ಧಾರವನ್ನು ಈ ಸದನದಲ್ಲಿ ಘೋಷಿಸಲು ನನಗೆ ಸಂತೋಷವಾಗಿದೆ’’ ಎಂದು ಅವರು ಆಗಸ್ಟ್ 7, 1990ರಂದು ಲೋಕಸಭೆಯಲ್ಲಿ ಹೇಳಿದರು. ನಿಜಕ್ಕೂ ಅದು ಚಾರಿತ್ರಿಕ ಕ್ಷಣವಾಗಿತ್ತು.

ಆದರೆ ಯಾರಿಗಾಗಿ ಮಂಡಲ್ ವರದಿ ಜಾರಿಗೊಳಿಸುವ ಮೂಲಕ ಅವರು ತಮ್ಮ ರಾಜಕೀಯ ಬದುಕನ್ನೇ ಬಲಿ ಕೊಟ್ಟರೋ ಆ ವರ್ಗವು ಅವರನ್ನು ಮರೆತೇ ಹೋಯಿತು.

ಸಿಂಗ್ ಭಾರತೀಯ ರಾಜಕೀಯದಲ್ಲಿ ಬಹಳ ವಿಭಿನ್ನ ವ್ಯಕ್ತಿತ್ವದ ನಾಯಕ. ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟ ಕಾಂಗ್ರೆಸ್ನಿಂದಲೇ ಅವರು ಹೊರಬರುವುದಕ್ಕೆ ಕಾರಣವಾಯಿತು. ಅವರ ಮೌಲ್ಯಾಧಾರಿತ ರಾಜಕಾರಣ ಅವರನ್ನು ಆಪ್ತರಿಂದಲೇ ದೂರ ಮಾಡಿತು.

ಕಡೆಗೆ ಯಾವ ಹಿಂದುಳಿದ ವರ್ಗಕ್ಕಾಗಿ ಅವರೊಂದು ಮಹತ್ವ ಮತ್ತು ದಿಟ್ಟ ಹೆಜ್ಜೆಯಿಟ್ಟರೊ ಅದನ್ನು ಹಿಂದುಳಿದ ವರ್ಗವೂ ಅರ್ಥಮಾಡಿಕೊಳ್ಳದೇ ಹೋದದ್ದು ವಿಪರ್ಯಾಸ.

ಅವರ ರಾಜಕೀಯ ಬದುಕು ಒಂದು ಹಂತದ ಯಶಸ್ಸಿನ ಬಳಿಕ ಬಲಪಂಥೀಯರಿಂದ ಮತ್ತು ಕಡೆಗೆ ಎಡಪಂಥೀಯರಿಂದಲೂ ಸಮಾನ ಅಂತರದಲ್ಲಿ ಕೊನೆಯಾಯಿತು. ಹೀಗೆ ರಾಜಕೀಯವಾಗಿ ಅವರು ಕಡೆಯ ದಿನಗಳಲ್ಲಿ ಒಬ್ಬಂಟಿಯಾಗಿಬಿಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News