ಸಿಐಎ ಬೇಹುಗಾರ ಆಗುವುದಕ್ಕೂ ಮುನ್ನ ಅಮೆರಿಕಾ ಪ್ರಜೆಯೊಬ್ಬರು ಭಾರತದ ಪ್ರಪ್ರಥಮ ವಿಮಾನ ಕಾರ್ಖಾನೆಗೆ ಹೇಗೆ ನೆರವಾಗಿದ್ದರು ಗೊತ್ತೆ?
Photo: Newspapers.com
ಹೊಸದಿಲ್ಲಿ: 1939ರಲ್ಲಿ ಇಬ್ಬರು ಉದ್ಯಮಿಗಳು ಒಂದೇ ಪ್ಯಾನ್ ಅಮೆರಿಕನ್ ವಿಮಾನದಲ್ಲಿ ಹೊನೊಲುಲುನಿಂದ ಹಾಂಗ್ ಕಾಂಗ್ ಗೆ ಪ್ರಯಾಣಿಸುತ್ತಿದ್ದರು. ಈ ಪೈಕಿ ಓರ್ವ ಉದ್ಯಮಿ ಪೂರ್ವ ಏಷ್ಯಾದ ಅತಿ ದೊಡ್ಡ ವಿಮಾನ ಯಾನ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿಲಿಯಂ ಡಗ್ಲಸ್ ಪಾಲೇ ಆಗಿದ್ದರೆ, ಮತ್ತೊಬ್ಬ ಉದ್ಯಮಿಯು ಭಾರತದ ಸ್ವದೇಶಿ ಹಡಗು ಸಂಸ್ಥೆಯಾಗಿದ್ದ ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿಯ ಅಧ್ಯಕ್ಷ ವಾಲ್ ಚಂದ್ ಹಿರಾಚಂದ್ ಆಗಿದ್ದರು. ಈ ಇಬ್ಬರೂ ನಿರ್ಮಾಣ, ವಿಮೆ ಹಾಗೂ ಸಕ್ಕರೆ ಉದ್ಯಮಗಳಲ್ಲಿ ಪರಸ್ಪರ ಆಸಕ್ತಿ ಹೊಂದಿದ್ದರು.
ಅವರಿಬ್ಬರೂ ತಮ್ಮ ಮತ್ತೊಂದು ಆಸಕ್ತಿದಾಯಕ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದರು: ವಿಮಾನ ಯಾನ
ಪಾಲೇ ವಿಮಾನ ತಯಾರಿಕಾ ಸೌಲಭ್ಯಗಳನ್ನು ನಿರ್ಮಾಣ ಮಾಡುವಲ್ಲಿ ಎತ್ತಿದ ಕೈ ಆಗಿದ್ದರು. ಮತ್ತೊಂದೆಡೆ ವಸಾಹತುಶಾಹಿ ಆರ್ಥಿಕ ನೀತಿಗಳ ಕಟು ಟೀಕಾಕಾರರಾಗಿದ್ದ ಹಿರಾಚಂದ್ ಅವರಿಗೆ ರಸ್ತೆ, ಜಲ ಹಾಗೂ ವಾಯುವಿನಲ್ಲಿ ಸಾರಿಗೆ ಸೌಲಭ್ಯಗಳನ್ನು ಭಾರತವು ನಿರ್ಮಿಸುವಂತಾಗಬೇಕು ಎಂಬ ತುಡಿತ ಹೊಂದಿದವರಾಗಿದ್ದರು. ಈ ಕತೆ ಮುಂದುವರಿದಂತೆ, ವಾಲ್ ಚಂದ್ ಅವರು ಭಾರತದಲ್ಲಿ ವಿಮಾನ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲು ನೀವು ನೆರವು ನೀಡಲು ಬಯಸುವಿರೆ ಎಂದು ಪ್ರಾಮಾಣಿಕವಾಗಿ ಪ್ರಶ್ನಿಸುತ್ತಾರೆ. ಅವರಿಬ್ಬರ ನಡುವಿನ ಮಾತುಕತೆಯ ಫಲಿತಾಂಶವಾಗಿ ಭಾರತದ ಪ್ರಪ್ರಥಮ ವಿಮಾನ ತಯಾರಿಕಾ ಕಾರ್ಖಾನೆ ಹಿಂದೂಸ್ಥಾನ್ ಏರ್ ಕ್ರಾಫ್ಟ್ ಲಿಮಿಟೆಡ್ ಸ್ಥಾಪನೆಯಾಗುತ್ತದೆ.
ವಿಲಿಯಂ ಡಗ್ಲಸ್ ಪಾಲೇ
ಬೆಂಗಳೂರಿನಲ್ಲಿ ಘಟಕ
ಈ ಕತೆಯನ್ನು ಇತಿಹಾಸಕಾರ ಆಶಿಕಿ ಅಹ್ಮದ್ ಇಕ್ಬಾಲ್ ಅವರು ತಮ್ಮ ‘The Aeroplane and the Making of Modern India’ ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಎರಡನೆ ವಿಶ್ವ ಯುದ್ಧವು ಇನ್ನೂ ಪ್ರಬಲವಾಗಿ ಮುಂದುವರಿದಿರುವಾಗಲೇ 1940ರಲ್ಲಿ ಪಾಲೇ ಹಾಗೂ ಹಿರಾಚಂದ್ ತಮ್ಮ ಮಹತ್ವಾಕಾಂಕ್ಷೆಯ ವಿಮಾನ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲು ಮುಂದಾಗಿದ್ದರು. ಈ ಜಂಟಿ ಪಯಣಕ್ಕೆ ನೆರವು ನೀಡಿದ್ದು ಆಗಿನ ಮೈಸೂರು ಸರ್ಕಾರ. ಮೈಸೂರು ಸರ್ಕಾರವು ಈ ಯೋಜನೆಗೆ ಶೇ. 50ರಷ್ಟು ಬಂಡವಾಳವನ್ನು ಮಾತ್ರ ನೀಡದೆ, ಹಿಂದೂಸ್ಥಾನ್ ಏರ್ ಕ್ರಾಫ್ಟ್ ಲಿಮಿಟೆಡ್ ಕಾರ್ಖಾನೆ ಸ್ಥಾಪಿಸಲು ಬೆಂಗಳೂರಿನಲ್ಲಿ ಜಾಗವನ್ನೂ ಒದಗಿಸಿತು.
ಇದರೊಂದಿಗೆ ಎಚ್‍ಎಎಲ್ ಹಾರ್ಲೊ ಪಿಸಿ-5 ಟ್ರೈನರ್ ಎಂಬ ಯುದ್ಧ ವಿಮಾನವನ್ನು ಕಾರ್ಖಾನೆ ಸ್ಥಾಪನೆಯಾದ ಮರುವರ್ಷದ ಆಗಸ್ಟ್ ನಲ್ಲೇ ತಯಾರಿಸಿತು. ಆದರೆ, 1942ರಲ್ಲಿ ಬ್ರಿಟಿಷರ ಭಾರತ ಸರ್ಕಾರವು ಆ ಕಾರ್ಖಾನೆಯನ್ನು ರಾಷ್ಟ್ರೀಕರಣಗೊಳಿಸಿ, ಅದರ ನಿರ್ವಹಣೆಯನ್ನು ಅಮೆರಿಕನ್ನರಿಗೆ ವಹಿಸಿತು. ಇದರ ಪರಿಣಾಮವಾಗಿ, ಪಾಲೇ ಅವರೇ ಎಚ್‍ಎಎಲ್ ಘಟಕದ ಕಾರ್ಯನಿರ್ವಹಣೆಯ ನೇತೃತ್ವ ವಹಿಸಬೇಕಾಗಿ ಬಂದಿತು.
ಕೆಲವು ತಿಂಗಳುಗಳು ಕಳೆಯುತ್ತಿದ್ದಂತೆಯೆ, ಕಾರ್ಖಾನೆಯು ಉತ್ಪಾದನೆ ಮಾಡುವುದನ್ನು ಮುಂದುವರಿಸಿತು. ಇದರೊಂದಿಗೆ ಯುದ್ಧದಲ್ಲಿ ಹಾನಿಗೊಳಗಾದ ವಿಮಾನಗಳನ್ನು ರಿಪೇರಿ ಮಾಡುವ ಕೆಲಸವು ಈ ಕಾರ್ಖಾನೆಯ ಹೆಗಲಿಗೇರಿತು. ಆ ಅವಧಿಯು ಎಚ್‍ಎಎಲ್ ಪಾಲಿಗೆ ಹೆಚ್ಚು ಕಾರ್ಯಭಾರವಿರುವ ಸಮಯವಾಗಿತ್ತು. ಈ ಹೊತ್ತಿನಲ್ಲಿ ಜಪಾನ್ ಪಡೆಗಳು ಭಾರತದತ್ತ ನುಗ್ಗಿ ಬರುತ್ತಿದ್ದವು ಹಾಗೂ ಹಿಮಾಲಯದ ಪೂರ್ವ ಭಾಗದಲ್ಲಿ ಸದೃಢ ವಿಮಾನಗಳ ಹಾರಾಟ ನಡೆಸಲು ‘Flying Tiger’ ಪಡೆಯ ಸದಸ್ಯರು ತೀವ್ರ ಸ್ವರೂಪದಲ್ಲಿ ತೊಡಗಿಕೊಂಡಿದ್ದರು.
ಅದು ಯಶಸ್ವಿಯಾದ ನಂತರ, ಫ್ಲೈಯಿಂಗ್ ಟೈಗರ್ ಪಡೆಯೊಂದಿಗೆ ಪಾಲೇಯವರ ಹೆಸರೂ ಖ್ಯಾತವಾಯಿತು. ಆದರೆ, ಈ ಕತೆಯನ್ನು ಪತ್ತೆ ಹಚ್ಚಬೇಕಿದ್ದರೆ, ಪಾಲೇ ಹೇಗೆ ವಿಮಾನ ಯಾನ ಉದ್ಯಮಕ್ಕೆ ಪ್ರವೇಶಿಸಿದರು ಎಂಬುದನ್ನು ತಿಳಿದುಕೊಳ್ಳಬೇಕಿರುವುದು ಅಗತ್ಯ.
ರಹಸ್ಯ ಗೆರಿಲ್ಲಾಗಳು
1896ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಫ್ಲಾರೆನ್ಸ್ ನಲ್ಲಿ ಪಾಲೇ ಜನಿಸಿದರು. ಅವರು ಖಾಸಗಿ ಶಾಲೆಗಳು ಹಾಗೂ ಸೇನಾ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದರಾದರೂ, ಅವರ ತುಡಿತವಿದ್ದದ್ದು ಮಾತ್ರ ವ್ಯಾಪಾರದ ಕಡೆ. ಅವರು ತಮ್ಮ ಪ್ರಥಮ ಉದ್ಯೋಗವನ್ನು ರಫ್ತು ಕಂಪನಿಯಲ್ಲಿ ಪ್ರಾರಂಭಿಸಿದರು ಹಾಗೂ ಅದು ಅವರನ್ನು ಮೇಣದ ಬತ್ತಿಗಾಗಿ ಪ್ಯಾರಾಫಿನ್ ಅನ್ನು ಮಾರಲು ಪೆರುಗೆ ಕಳಿಸಿಕೊಟ್ಟಿತು. ಅಲ್ಲಿಂದ ಅವರು ಫ್ಲೋರಿಡಾದಲ್ಲಿ ಸ್ವತ್ತುಗಳ ಮಾರಾಟಕ್ಕೆ ಇಳಿದರು. ಅದಕ್ಕೂ ಮುನ್ನ ದಿಕ್ಸೂಚಿ ಸಾಧನಗಳನ್ನು ಉತ್ಪಾದಿಸುವ ಅಮೆರಿಕಾ ಕಂಪನಿಯ ಮಾರಾಟ ಪ್ರತಿನಿಧಿಯಾಗಿ ಚೀನಾಗೆ ತೆರಳಿದ್ದರು.
ಚೀನಾದಲ್ಲಿ ಪಾಲೊ ಚೀನಾದ ಬಹುಭಾಗವನ್ನು ನಿಯಂತ್ರಿಸುತ್ತಿದ್ದ ಚೀನಾ ದಂಡನಾಯಕ ಚಿಯಾಂಗ್ ಕೈ-ಶೇಕ್ ಹಾಗೂ ಅವರ ಸಹೋದರ ಸಂಬಂಧಿ, ಶ್ರೀಮಂತ ಬ್ಯಾಂಕರ್ ಟಿವಿ ಸೂಂಗ್ ಅವರೊಂದಿಗೆ ಗೆಳೆತನಕ್ಕೆ ಬಿದ್ದರು. ಈ ಸಂಬಂಧಗಳು ಪಾಲೆ ಪಾಲಿಗೆ ಪ್ರಯೋಜನಕಾರಿಯಾಗಿ ಒದಗಿ ಬಂದವು. 1937ರಲ್ಲಿ ಚೀನಾ ಹಾಗೂ ಜಪಾನ್ ನಡುವೆ ಯುದ್ಧ ನಡೆಯಲು ಪ್ರಾರಂಭವಾದಾಗ, ಚಿಯಾಂಗ್ ಮುನ್ನಡೆಸುತ್ತಿದ್ದ ರಾಷ್ಟ್ರೀಯವಾದಿ ಪಕ್ಷ ಕುಯೊಮಿಂಟಾಂಗ್ ನೊಂದಿಗೆ ಸಹಭಾಗಿತ್ವ ಸಾಧಿಸಿದ ಪಾಲೇ, ಸೆಂಟ್ರಲ್ ಏರ್ ಕ್ರಾಫ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಅಥವಾ ಕ್ಯಾಮ್ಕೊದ ನೇತೃತ್ವ ವಹಿಸಿದರು. ಆ ಕಂಪನಿಯು ಅಮೆರಿಕಾದ ಹಾಕ್ ಸೇನಾ ವಿಮಾನಗಳ ಬಿಡಿ ಭಾಗಗಳನ್ನು ಜೋಡಿಸುವ ಕೆಲಸ ಮಾಡುತ್ತಿತ್ತು.
ಜಪಾನ್ ಸೇನೆಯು ಚೀನಾದತ್ತ ಮುನ್ನುಗ್ಗತೊಡಗಿದಾಗ ಪಾಲೇ ಕ್ಯಾಮ್ಕೊ ಕಂಪನಿಯು ಕ್ಯುಯೊಮಿಂಟಾಂಗ್ ಸೇನೆಯೊಂದಿಗೆ ಸಂಪೂರ್ಣ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸಿದರು. ಹ್ಯಾಂಗ್ ಝೌನ ಪೂರ್ವದಲ್ಲಿದ್ದ ಕಂಪನಿಯನ್ನು ಪಾಲೆ ನೈಋತ್ಯ ಚೀನಾದ ವುಹಾನ್ ಗೆ ವರ್ಗಾಯಿಸಿದರು. ಆನಂತರ ಬರ್ಮಾದೊಂದಿಗೆ ಗಡಿ ಹಂಚಿಕೊಂಡಿದ್ದ ದಕ್ಷಿಣ ಭಾಗದ ಲೋಯಿವಿಂಗ್ ಗೆ ವರ್ಗಾಯಿಸಿದರು. ಅಷ್ಟು ಮಾತ್ರವಾಗಿರಲಿಲ್ಲ. ಕೆಲ ಸಮಯ ತಮ್ಮ ಸಹೋದರರಾದ ಎಡ್ವರ್ಡ್ ಹಾಗೂ ಯುಜೀನ್ ರೊಂದಿಗೆ ಪಾಲೇ ರಂಗೂನ್ ನ ಹೊರವಲಯದಲ್ಲಿ ಎಚ್-75 ಹಾಗೂ ಪಿ-36 ಏಕಾಸನದ ವಿಮಾನಗಳನ್ನು ರಿಪೇರಿ ಮಾಡುವ ಸೌಲಭ್ಯವನ್ನು ಸ್ಥಾಪಿಸಿದರು. ಆದರೆ, ಜಪಾನ್ ಪಡೆಗಳು 1941ರಲ್ಲಿ ಉತ್ತರ ದಿಕ್ಕಿನ ಮೂಲಕ ಆಗ್ನೇಯ ಏಷ್ಯಾದತ್ತ ಮುಖ ಮಾಡಿದಾಗ, ಆ ಕಾರ್ಖಾನೆಯನ್ನೂ ಲೋಯಿವಿಂಗ್ ಗೆ ವರ್ಗಾಯಿಸಬೇಕಾಯಿತು.
ಸರಿಸುಮಾರು ಇದೇ ಅವಧಿಯಲ್ಲಿ ಅಮೆರಿಕಾದ ಸ್ವಯಂಸೇವಕರ ಗುಂಪು ಫ್ಲೈಯಿಂಗ್ ಟೈಗರ್ಸ್ ಸ್ಥಾಪನೆಯಾಗಿತ್ತು. ಈ ಗುಂಪನ್ನು ರಹಸ್ಯ ಗೆರಿಲ್ಲಾ ಗುಂಪು ಎಂದೇ ಕರೆಯಲಾಗುತ್ತಿತ್ತು ಹಾಗೂ ಈ ಗುಂಪಿನಲ್ಲಿ 100 ಮಂದಿ ಸದಸ್ಯರಿದ್ದರು. ಅಪಾಯಕಾರಿ ಹಿಮಾಲಯದ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಕಾರ್ಖಾನೆಯು ತನ್ನೆಲ್ಲ ಯಂತ್ರಗಳು ಹಾಗೂ ಜನರನ್ನು ಕಳೆದುಕೊಂಡರೂ, ಫ್ಲೈಯಿಂಗ್ ಟೈಗರ್ ತನ್ನ ಕೌಶಲ ಹಾಗೂ ಧೈರ್ಯವಂತಿಕೆಯಿಂದ ಮನೆಮಾತಾಯಿತು.
ಸಿಐಎ ಏಜೆಂಟ್
ಎರಡನೆ ವಿಶ‍್ವ ಯುದ್ಧ ಮುಗಿದ ನಂತರ ಪಾಲೇ ಅಮೆರಿಕಾ ರಾಜತಾಂತ್ರಿಕರಾಗುವ ಮೂಲಕ ಪೆರು ಹಾಗೂ ಬ್ರೆಜಿಲ್ ದೇಶಕ್ಕೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು. ಆದರೆ, ವಾಸ್ತವವಾಗಿ ಅವರು ಸಿಐಎ ಏಜೆಂಟ್ ಆಗಿದ್ದರು. ಈ ಪಾತ್ರದಲ್ಲಿ ಅವರು, ನಿರ್ದಯಿ ಸರ್ವಾಧಿಕಾರಿಯಾಗಿದ್ದ ರಫೇಲ್ ತ್ರುಜಿಲ್ಲೊಗೆ ಅಮೆರಿಕಾ ನೆರವನ್ನು ಖಾತರಿ ಪಡಿಸಿದರು ಹಾಗೂ 19544ರಲ್ಲಿ ಗ್ವಾಟೆಮಾಲಾದ ಅಧ್ಯಕ್ಷ ಜಾಕೊಬೊ ಅರ್ಬೆಂಝ್ ಅವರನ್ನು ಪದಚ್ಯುತಗೊಳಿಸುವಲ್ಲಿ ಸಿಐಎಗೆ ನೆರವು ನೀಡಿದರು. ಇಂತಹ ವರ್ಣರಂಜಿತ ವ್ಯಕ್ತಿತ್ವದ ಪಾಲೇ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.
ಕೃಪೆ : scroll.in