ಇಮ್ರಾನ್ ಹಶ್ಮಿ ಮೊದಲ ಸೋಲೋ ಮೈಲಿಗಲ್ಲು; 100 ಕೋಟಿ ರೂ. ಮೀರಿ ಗಳಿಕೆ ಮಾಡಿದ ʼಆವಾರಾಪನ್ 2 ʼ
Photo Via YouTube
ಇದೀಗ ‘ಆವಾರಪನ್ 2’ ಸಿನಿಮಾದ ಭಾರತದ ಒಟ್ಟು ಗಳಿಕೆ 120 ಕೋಟಿ ರೂ.ಗಳಿಗೆ ಏರಿದ್ದು, ವಿಶ್ವವ್ಯಾಪಿ ಗಳಿಕೆ 144.13 ಕೋಟಿ ರೂ.ಗಳಿಗೇರಿದೆ.
ನಟ ಇಮ್ರಾನ್ ಹಶ್ಮಿ ಅವರ ‘ಆವಾರಪನ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ದಾಟಿದೆ. ಉತ್ತಮ ಆರಂಭಿಕ ವಾರಾಂತ್ಯ ಮತ್ತು ಸೋಮವಾರದವರೆಗೆ ಸ್ಥಿರ ಪ್ರದರ್ಶನದ ನಂತರ 5ನೇ ದಿನದಂದು ಭಾರತದಲ್ಲಿ 100 ಕೋಟಿ ರೂ, ಗಡಿ ದಾಟಿದೆ.
ಆಗಸ್ಟ್ 14ರಂದು ಬಿಡುಗಡೆಯಾದ ‘ಆವಾರಪನ್’ನ ದ್ವಿತೀಯ ಭಾಗವಾದ ಸಿನಿಮಾ ಶುಕ್ರವಾರ 22 ಕೋಟಿ ರೂ.ಗಳೊಂದಿಗೆ ಬಾಕ್ಸ್ಆಫೀಸ್ಗೆ ಲಗ್ಗೆ ಇಟ್ಟಿತ್ತು. ಶನಿವಾರ ಶೇ 55ರಷ್ಟು ಏರಿಕೆಕಂಡು 33.75 ಕೋಟಿ ರೂ. ಸಂಗ್ರಹಿಸಿತ್ತು. ರವಿವಾರ ಈ ಸಿನಿಮಾ 26 ಕೋಟಿ ರೂ.ಗಳನ್ನು ಗಳಿಸಿದೆ. ಸೋಮವಾರ 9.25 ಕೋಟಿ ರೂ.ಗಳ ಜೊತೆಗೆ ನೆಲೆ ಉಳಿಸಿಕೊಂಡಿದೆ.
ಮಂಗಳವಾರ 5ನೇ ದಿನದಂದು ‘ಆವಾರಪನ್ 2’ ಸಿನಿಮಾ ಮತ್ತೆ ಭಾರತದಲ್ಲಿ ಒಟ್ಟು 9.75 ಕೋಟಿ ಗಳಿಕೆ ಮಾಡಿದೆ. ಹೀಗಾಗಿ ಸಿನಿಮಾದ ಒಟ್ಟು ಗಳಿಕೆ 100.75 ಕೋಟಿಗೇರಿದೆ. ಇದೀಗ ಭಾರತದ ಒಟ್ಟು ಗಳಿಕೆ 120 ಕೋಟಿ ರೂ.ಗಳಿಗೆ ಏರಿದ್ದು, ವಿಶ್ವವ್ಯಾಪಿ ಗಳಿಕೆ 144.13 ಕೋಟಿ ರೂ.ಗಳಿಗೇರಿದೆ ಎಂದು ವರದಿಯಾಗಿದೆ.
ಈ ಮೈಲಿಗಲ್ಲು ಇಮ್ರಾನ್ ಹಶ್ಮಿ ಅವರಿಗೆ ಬಹಳ ಮಹತ್ವದ್ದಾಗಿದೆ. ಬಲವಾದ ಅಭಿಮಾನಿ ವರ್ಗವನ್ನು ಹೊಂದಿದ್ದರೂ, ವೃತ್ತಿಜೀವನದಲ್ಲಿ ಅನೇಕ ಯಶಸ್ವಿ ಸಿನಿಮಾಗಳನ್ನು ನೀಡಿದ್ದರೂ ಅವರು ಸೋಲೋ ಹೀರೋ ಆಗಿ ನಟಿಸಿದ ಸಿನಿಮಾ ಈ ಹಿಂದೆ 100 ಕೋಟಿ ರೂ. ಗಳಿಕೆಯ ಗಡಿ ದಾಟಿರಲಿಲ್ಲ.
ಇದಕ್ಕೆ ಮೊದಲು ಇಮ್ರಾನ್ ಹಶ್ಮಿ ನಟಿಸಿದ ‘ಟೈಗರ್ 3’ ಮತ್ತು ‘ದೆ ಕಾಲ್ ಹಿಮ್ ಒಜಿ’ ಸಿನಿಮಾಗಳು 100 ಕೋಟಿ ರೂ. ಮೀರಿ ಗಳಿಕೆ ಮಾಡಿದ್ದರೂ, ಅವು ಬಹು ತಾರಾಗಣದ ಸಿನಿಮಾಗಳಾಗಿದ್ದವು. ‘ಅವಾರಾಪನ್ 2’ ಸಿನಿಮಾದಲ್ಲಿ ಏಕ ನಾಯಕನಾಗಿ ನಟಿಸಿ ಮೊದಲ ಬಾರಿಗೆ 100 ಕೋಟಿ ರೂ. ಗಳಿಕೆ ದಾಖಲಿಸಿದ್ದಾರೆ.
ಈ ಯಶಸ್ಸು ‘ಆವಾರಾಪನ್’ ಫ್ರಾಂಚೈಸ್ಗೂ ಹೊಸ ಅಧ್ಯಾಯ ನೀಡಿದೆ. 2007ರ ಮೂಲ ಸಿನಿಮಾ ಅದರ ಚಿತ್ರಮಂದಿರದ ಪ್ರದರ್ಶನದಲ್ಲಿ ದೊಡ್ಡ ಪರಿಣಾಮ ಬೀರುವಲ್ಲಿ ವಿಫಲವಾಗಿತ್ತು. ಆದರೆ ಸಂಗೀತ ಮತ್ತು ಭಾವನಾತ್ಮಕ ಕಥಾ ಹಂದರವು ವರ್ಷಗಳಲ್ಲಿ ಜನಪ್ರಿಯವಾಗಲು ಸಹಾಯ ಮಾಡಿತು. ಹೀಗಾಗಿ ಎರಡನೇ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
45 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾದ ‘ಆವಾರಾಪನ್ 2’ ಈಗಾಗಲೇ ದೊಡ್ಡ ಹಿಟ್ ಬಜೆಟ್ ಆಗಿ ಹೊರಹೊಮ್ಮಿದೆ. ಐದು ದಿನಗಳಲ್ಲಿ ಭಾರತಾದ್ಯಂತ 100.75 ಕೋಟಿ ರೂ. ನಿವ್ವಳ ಸಂಗ್ರಹದ ಜೊತೆಗೆ ಎರಡು ಪಟ್ಟು ಲಾಭ ಗಳಿಸಿದೆ.
ಸಿನಿಮಾದಲ್ಲಿ ದಿಶಾ ಪಟಾನಿ, ಶಬಾನಾ ಅಝ್ಮಿ, ಸುರ್ವಿಂದರ್ ವಿಕ್ಕಿ ಮತ್ತು ಪೂರಣ್ ಗಬ್ಬಿ ಮುಖ್ಯ ಪಾತ್ರದಲ್ಲಿದ್ದಾರೆ.