Photo Credit : indianexpress.com

ದೇಶಾದ್ಯಂತ ನಡೆದ 28 ವಿಧಾನ ಪರಿಷತ್ (MLC) ಸ್ಥಾನಗಳ ಪೈಕಿ ಕಾಂಗ್ರೆಸ್ ಬುಧವಾರ (ಅಕ್ಟೋಬರ್ 28) ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಯಶಸ್ವಿಯಾದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯವಾಡಿದ್ದಾರೆ. ತಮ್ಮ ಸೋಲಿಗೆ EVM (Electronic Voting Machines) ಕಾರಣ ಎಂದು ಹಿಂದೆ ಕಾಂಗ್ರೆಸ್ ಆರೋಪಿಸಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆಗಳು EVMಗಳ ಬದಲಿಗೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ನಡೆಯುತ್ತವೆ. ದ್ವಿಸದನ ಶಾಸಕಾಂಗ ವ್ಯವಸ್ಥೆ ಹೊಂದಿರುವ ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಸದಸ್ಯರ ಚುನಾವಣೆ ನಡೆಯುತ್ತದೆ.

ಪ್ರಧಾನಿಯವರ ಈ ಹೇಳಿಕೆಯಿಂದಾಗಿ EVM ಮತ್ತು ಬ್ಯಾಲೆಟ್ ಪೇಪರ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

►ಭಾರತದಲ್ಲಿ ಯಾವ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ?

ಗ್ರಾಮ ಪಂಚಾಯಿತಿ, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಹೆಚ್ಚಿನ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕವೇ ನಡೆಯುತ್ತವೆ. ಪಂಚಾಯತ್ ರಾಜ್ ಸಚಿವಾಲಯದ ಧನಸಹಾಯದೊಂದಿಗೆ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್’ (IIPA) 2023ರಲ್ಲಿ ನಡೆಸಿದ ಅಧ್ಯಯನ ವರದಿಯ ಪ್ರಕಾರ, "ಶೇ.53ರಷ್ಟು ರಾಜ್ಯಗಳು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮತ ಚಲಾಯಿಸಲು ಬ್ಯಾಲೆಟ್ ಪೇಪರ್ ಅನ್ನೇ ಬಳಸುತ್ತಿವೆ."

"ಕೇವಲ ಮೂರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (ಕೇರಳ, ಸಿಕ್ಕಿಂ ಹಾಗೂ ದಾದ್ರಾ ಮತ್ತು ನಾಗರ ಹವೇಲಿ ಮತ್ತು ದಮನ್ ಮತ್ತು ದಿಯು) ಮಾತ್ರ ಗ್ರಾಮ ಪಂಚಾಯಿತಿಯ ಎಲ್ಲಾ ಕ್ಷೇತ್ರಗಳಲ್ಲಿ EVM ಮೂಲಕ ಚುನಾವಣೆ ನಡೆಸುತ್ತವೆ. ಇತರ ರಾಜ್ಯಗಳು ಬದಲಾವಣೆಯ ಹಂತದಲ್ಲಿದ್ದು, ಶೇ.22ರಷ್ಟು ರಾಜ್ಯಗಳು ಕೆಲವು ಕ್ಷೇತ್ರಗಳಲ್ಲಿ EVM ಹಾಗೂ ಉಳಿದ ಕ್ಷೇತ್ರಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುತ್ತಿವೆ" ಎಂದು ವರದಿ ಹೇಳಿದೆ. "ಮಧ್ಯಂತರ ಮತ್ತು ಜಿಲ್ಲಾ ಪಂಚಾಯಿತಿಗಳಂತಹ ಮೇಲ್ಮಟ್ಟದ ಪಂಚಾಯತ್ ಚುನಾವಣೆಗಳಲ್ಲಿ EVM ಬಳಕೆ ಹೆಚ್ಚಾಗಿದೆ. ಉದಾಹರಣೆಗೆ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಶೇ.17ರಷ್ಟು ರಾಜ್ಯಗಳು ಎಲ್ಲಾ ಕ್ಷೇತ್ರಗಳಲ್ಲೂ EVM ಬಳಸುತ್ತವೆ."

"ಹಣಕಾಸಿನ ಕೊರತೆ ಮತ್ತು EVM ಬಳಕೆಯ ಬಗ್ಗೆ ಅರಿವಿನ ಕೊರತೆಯೇ ಪಂಚಾಯತ್ ಚುನಾವಣೆಗಳನ್ನು ನಡೆಸಲು ಪ್ರಮುಖ ಅಡೆತಡೆಗಳಾಗಿವೆ ಎಂದು ಬ್ಯಾಲೆಟ್ ಪೇಪರ್ ಬಳಸುವ ರಾಜ್ಯಗಳು ತಿಳಿಸಿವೆ. ಆದರೆ, ಇದೇ ಮತದಾರರು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ EVM ಬಳಸಿ ಮತ ಚಲಾಯಿಸುತ್ತಾರೆ. ಹೀಗಾಗಿ, ಮತದಾರರಲ್ಲಿ ಅರಿವಿನ ಕೊರತೆಯಿದೆ ಎಂಬ ವಾದ ಸರಿಯಲ್ಲ" ಎಂದು ವರದಿ ಹೇಳಿದೆ. ಜೊತೆಗೆ, ಬ್ಯಾಲೆಟ್ ಪೇಪರ್ ಎಣಿಕೆಯು ಹೆಚ್ಚಿನ ಮಾನವಶಕ್ತಿಯ ಅಗತ್ಯವಿರುವ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇದು ಪರಿಸರ ಸ್ನೇಹಿಯೂ ಅಲ್ಲ ಎಂದು ಹೇಳಿದೆ.

ಮಹಾರಾಷ್ಟ್ರದ ಚಂದ್ರಾಪುರದ ಮಾಜಿ ಸರಪಂಚ್ ಕಲ್ಯಾಣ್ ಕುಮಾರ್ ಮಾತನಾಡಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಕೆಲವು ದಿನಗಳ ಮೊದಲು ತಹಸೀಲ್ದಾರರು ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡುತ್ತಾರೆ. "ಅವರು ಮೂರು ಆಯ್ಕೆಗಳನ್ನು ಕೇಳಿ, ಅವುಗಳಲ್ಲಿ ಒಂದನ್ನು ಹಂಚಿಕೆ ಮಾಡುತ್ತಾರೆ. ಇವು ನಮಗೆ ತಿಳಿದಿರುವ ಪಕ್ಷದ ಚಿಹ್ನೆಗಳಲ್ಲ." ಅವರ ಪ್ರಕಾರ, ಈ ಚುನಾವಣೆಗಳಲ್ಲಿ ಸಿದ್ಧಾಂತಕ್ಕಿಂತ ಅಭ್ಯರ್ಥಿಯು ಮತದಾರರೊಂದಿಗೆ ಎಷ್ಟು ಸಂಪರ್ಕದಲ್ಲಿದ್ದಾನೆ ಮತ್ತು ದಿನನಿತ್ಯದ ಕೆಲಸಗಳಲ್ಲಿ ಅವರಿಗೆ ಹೇಗೆ ಸಹಾಯ ಮಾಡುತ್ತಾನೆ ಎಂಬುದು ಹೆಚ್ಚು ಮುಖ್ಯವಾಗಿರುತ್ತದೆ. ಅವರ ಯಶಸ್ಸು ಮತದಾರರೊಂದಿಗಿನ ಬಾಂಧವ್ಯವನ್ನು ತೋರಿಸುತ್ತದೆ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯನ್ನು ವಿವರಿಸಿದ ಬಿಹಾರದ ಅಧಿಕಾರಿಯೊಬ್ಬರು, ಗ್ರಾಮ ಪಂಚಾಯಿತಿ, ಪಂಚಾಯತ್ ಸಮಿತಿ ಮುಂತಾದ ಹಲವು ಹಂತಗಳ ಚುನಾವಣೆಗಳು ಒಂದೇ ಸಮಯದಲ್ಲಿ ನಡೆಯುವುದರಿಂದ ಬ್ಯಾಲೆಟ್ ಪೇಪರ್ ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ, ಇಷ್ಟೊಂದು ಯಂತ್ರಗಳನ್ನು ಬಳಸುವುದು ಕಷ್ಟ. ಇಷ್ಟಿದ್ದರೂ, ಬ್ಯಾಲೆಟ್ ಪೇಪರ್ ಬಳಸುವ ಕಡೆಗಳಲ್ಲಿ ಎಣಿಕೆ ಪ್ರಕ್ರಿಯೆ ಕಷ್ಟಕರವಾಗುತ್ತದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಸಾಂಪ್ರದಾಯಿಕ ಪಕ್ಷದ ಚಿಹ್ನೆಗಳಿಲ್ಲದಿದ್ದರೂ ಕೆಲವು ರಾಜ್ಯಗಳು ಪಂಚಾಯತ್ ಚುನಾವಣೆಗಳನ್ನು EVM ಮೂಲಕ ಹೇಗೆ ನಡೆಸುತ್ತವೆ ಎಂಬುದಕ್ಕೆ ಸಂಬಂಧಿಸಿದಂತೆ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿದ್ದಾರೆ. EVMಗಳಿಗೆ ಅಗತ್ಯವಿರುವ ಚಿಹ್ನೆಗಳನ್ನು ಅಳವಡಿಸಲು 'ಸಿಂಬಲ್ ಲೋಡಿಂಗ್' ಎಂಬ ಪ್ರಕ್ರಿಯೆಯನ್ನು ಬಳಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಗಳ ವಿಚಾರಕ್ಕೆ ಬಂದರೆ, ಈ ಚುನಾವಣೆಗಳು ರಾಜ್ಯ ಚುನಾವಣಾ ಆಯೋಗಗಳ ವ್ಯಾಪ್ತಿಗೆ ಬರುತ್ತವೆ. EVM ಅಥವಾ ಬ್ಯಾಲೆಟ್ ಪೇಪರ್ ಬಳಕೆಯ ನಿರ್ಧಾರವನ್ನು ಆಯೋಗಗಳೇ ತೆಗೆದುಕೊಳ್ಳಬಹುದು ಎಂದು ಲಾವಾಸಾ ಹೇಳಿದ್ದಾರೆ. ಉದಾಹರಣೆಗೆ, ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳನ್ನು EVM ಮೂಲಕ ನಡೆಸಲಾಗುತ್ತದೆ. ಆದರೆ, ಪಂಜಾಬ್ 2026ರಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಬದಲಾಗಲು ನಿರ್ಧರಿಸಿತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, 1994ರ ಪಂಜಾಬ್ ಪುರಸಭೆ ಚುನಾವಣಾ ನಿಯಮಗಳು ಬ್ಯಾಲೆಟ್ ಪೇಪರ್ ಹಾಗೂ EVM ಎರಡಕ್ಕೂ ಅವಕಾಶ ನೀಡುತ್ತವೆ. ಹೀಗಾಗಿ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಕಾನೂನುಬದ್ಧ ಹಕ್ಕಿದೆ ಎಂದು ಸ್ಪಷ್ಟಪಡಿಸಿದೆ.

ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನೂ EVM ಅಥವಾ ಬ್ಯಾಲೆಟ್ ಪೇಪರ್ ಬಳಸಿ ನಡೆಸಲಾಗುತ್ತದೆ. ಉದಾಹರಣೆಗೆ, ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) ಚುನಾವಣೆಗೆ EVM ಬಳಸಲಾಗುತ್ತದೆ. "EVMಗಳು ಅಭ್ಯರ್ಥಿಗಳ ಹೆಸರುಗಳನ್ನು ಅಕ್ಷರಮಾಲೆಯ ಕ್ರಮದಲ್ಲಿ ತೋರಿಸುತ್ತವೆ. ಇಲ್ಲಿ ಅಭ್ಯರ್ಥಿಯ ಹೆಸರು ಮತ್ತು ಬ್ಯಾಲೆಟ್ ಸಂಖ್ಯೆ ಮುಖ್ಯವಾಗುತ್ತದೆ" ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ರಾಷ್ಟ್ರೀಯ ಮಾಧ್ಯಮ ಸಂಚಾಲಕ ಹರ್ಷ ಅತ್ರಿ ಹೇಳಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ.

►ಒಮ್ಮೆ ವರ್ಗಾಯಿಸಬಹುದಾದ ಮತ

ಒಮ್ಮೆ ವರ್ಗಾಯಿಸಬಹುದಾದ ಮತ ಪದ್ಧತಿಯ ಮೂಲಕ ನಡೆಯುವ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಸುವುದು ಕಡ್ಡಾಯವಾಗಿದೆ. ಭಾರತೀಯ ಸಂವಿಧಾನದ ವಿಧಿ 171ರ ಪ್ರಕಾರ, ವಿಧಾನ ಪರಿಷತ್ ಚುನಾವಣೆಗಳು ಒಮ್ಮೆ ವರ್ಗಾಯಿಸಬಹುದಾದ ಮತದ ಮೂಲಕವೇ ನಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ಮತದಾರರು ತಮ್ಮ ಮೊದಲ, ಎರಡನೇ ಹಾಗೂ ನಂತರದ ಆದ್ಯತೆಗಳನ್ನು ಮತಪತ್ರದಲ್ಲಿ ಗುರುತಿಸಬೇಕಾಗುತ್ತದೆ. ಇದರಿಂದ ಮತವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯು EVM ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ನಡೆಯುತ್ತದೆ.

ರಾಜ್ಯಸಭಾ ಚುನಾವಣೆಗಳೂ ಸಹ ಒಮ್ಮೆ ವರ್ಗಾಯಿಸಬಹುದಾದ ಮತ ಪದ್ಧತಿಯಲ್ಲೇ ನಡೆಯುತ್ತವೆ. ಇಲ್ಲಿ ಮತದಾರರು (ಶಾಸಕರು) ತಮ್ಮ ಆದ್ಯತೆಗಳನ್ನು ಮತಪತ್ರದಲ್ಲಿ ಗುರುತಿಸುತ್ತಾರೆ. ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ 'ಕೋಟಾ' (ಮತಗಳ ಸಂಖ್ಯೆ) ಲೆಕ್ಕಹಾಕಲು ಒಂದು ಸೂತ್ರವನ್ನು ಬಳಸಲಾಗುತ್ತದೆ. ರಾಜ್ಯದಲ್ಲಿ ಮತ ಚಲಾಯಿಸುವ ಒಟ್ಟು ಶಾಸಕರ ಸಂಖ್ಯೆಯನ್ನು, ಚುನಾವಣೆ ನಡೆಯುತ್ತಿರುವ ಒಟ್ಟು ಸ್ಥಾನಗಳ ಸಂಖ್ಯೆಗೆ 1 ಸೇರಿಸಿ ಭಾಗಿಸಲಾಗುತ್ತದೆ. ಬಂದ ಫಲಿತಾಂಶಕ್ಕೆ ಮತ್ತೆ 1 ಸೇರಿಸಿದಾಗ ಗೆಲುವಿಗೆ ಬೇಕಾದ ಕೋಟಾ ಸಿಗುತ್ತದೆ. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.

ಒಂದು ರಾಜ್ಯದಲ್ಲಿ ಮತ ಚಲಾಯಿಸುವ ಶಾಸಕರ ಸಂಖ್ಯೆ 200 ಮತ್ತು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ಎಂದಿಟ್ಟುಕೊಳ್ಳೋಣ. ಆ ಸಂದರ್ಭದಲ್ಲಿ 200 ಅನ್ನು (4+1) ಅಂದರೆ 5ರಿಂದ ಭಾಗಿಸಿದಾಗ 40 ಸಿಗುತ್ತದೆ. ಇದಕ್ಕೆ 1 ಸೇರಿಸಿದಾಗ ಕೋಟಾ 41 ಆಗುತ್ತದೆ. 41 ಮತಗಳನ್ನು ಪಡೆಯುವ ಯಾವುದೇ ಅಭ್ಯರ್ಥಿ ಗೆದ್ದಂತೆ ಘೋಷಣೆಯಾಗುತ್ತಾರೆ.

ಇಲ್ಲಿ ಅನುಸರಿಸುವ ವ್ಯವಸ್ಥೆಯು ಒಮ್ಮೆ ವರ್ಗಾಯಿಸಬಹುದಾದ ಮತ ಪದ್ಧತಿಯಾಗಿದೆ. ಹೀಗಾಗಿ, ಮತ ಚಲಾಯಿಸುವ ಶಾಸಕರು ತಮ್ಮ ಮೊದಲ, ಎರಡನೇ, ಮೂರನೇ ಹೀಗೆ ಆದ್ಯತೆಗಳನ್ನು ಗುರುತಿಸಬಹುದು (ರಾಜ್ಯಸಭಾ ಚುನಾವಣೆಯಲ್ಲಿ ಬಹಿರಂಗ ಮತದಾನ ಇರುತ್ತದೆ).

ಮೇಲಿನ ಉದಾಹರಣೆಯಲ್ಲಿ, 41 ಮೊದಲ ಆದ್ಯತೆಯ ಮತಗಳನ್ನು ಪಡೆಯುವ ಪ್ರತಿಯೊಬ್ಬ ಅಭ್ಯರ್ಥಿಯೂ ಗೆದ್ದಿದ್ದಾರೆ ಎಂದು ಘೋಷಿಸಲಾಗುತ್ತದೆ. ಇದರಿಂದ ಎಲ್ಲಾ ಸ್ಥಾನಗಳು ಭರ್ತಿಯಾಗದಿದ್ದರೆ, ಈಗಾಗಲೇ ಗೆದ್ದವರ ಹೆಚ್ಚುವರಿ ಮತಗಳನ್ನು, ಮೊದಲ ಆದ್ಯತೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಮತ ಹಾಕಿದ ಶಾಸಕರ ಎರಡನೇ ಆದ್ಯತೆಯ ಅಭ್ಯರ್ಥಿಗಳಿಗೆ ವರ್ಗಾಯಿಸಲಾಗುತ್ತದೆ.

41 ಮತಗಳು ಗೆಲುವಿನ ಕೋಟಾ ಆಗಿರುವ ಮೇಲಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಗೆದ್ದ ಅಭ್ಯರ್ಥಿಯೊಬ್ಬರು 45 ಮತಗಳನ್ನು ಪಡೆದಿದ್ದರೆ, ಅವರ ಬಳಿ 4 ಹೆಚ್ಚುವರಿ ಮತಗಳಿವೆ ಎಂದರ್ಥ. ಈ 4 ಹೆಚ್ಚುವರಿ ಮತಗಳನ್ನು ಅವರ ಮತಪತ್ರದಲ್ಲಿರುವ ಎರಡನೇ ಆದ್ಯತೆಯ ಅಭ್ಯರ್ಥಿಗಳಿಗೆ ವರ್ಗಾಯಿಸಲಾಗುತ್ತದೆ.

ಒಂದಕ್ಕಿಂತ ಹೆಚ್ಚು ಗೆದ್ದ ಅಭ್ಯರ್ಥಿಗಳಲ್ಲಿ ಹೆಚ್ಚುವರಿ ಮತಗಳಿದ್ದರೆ, ಅತಿ ಹೆಚ್ಚು ಹೆಚ್ಚುವರಿ ಮತಗಳನ್ನು ಮೊದಲು ವರ್ಗಾಯಿಸಲಾಗುತ್ತದೆ. ಇದರಿಂದಲೂ ಎಲ್ಲಾ ಸ್ಥಾನಗಳು ಭರ್ತಿಯಾಗದಿದ್ದರೆ, ಅತಿ ಕಡಿಮೆ ಮೊದಲ ಆದ್ಯತೆಯ ಮತಗಳನ್ನು ಪಡೆದ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ ಮತ್ತು ಅವರ ಮತಪತ್ರದಲ್ಲಿದ್ದ ಎರಡನೇ ಆದ್ಯತೆಯ ಮತಗಳನ್ನು ಇತರರಿಗೆ ವರ್ಗಾಯಿಸಲಾಗುತ್ತದೆ.

ಎಲ್ಲಾ ಸ್ಥಾನಗಳು ಭರ್ತಿಯಾಗುವವರೆಗೆ ಈ ಪ್ರಕ್ರಿಯೆ ಮುಂದುವರಿಯುತ್ತದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor