ಪೇರಳೆ ಹಣ್ಣು | Photo Credit : magnific

ಪೇರಳೆ ಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ದಿನವಿಡೀ ಅನಗತ್ಯವಾಗಿ ತಿಂಡಿ-ತಿನಿಸುಗಳನ್ನು ಸೇವಿಸುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಪೇರಳೆ ಹಣ್ಣು (ಸೀಬೆ ಹಣ್ಣು) ತಿನ್ನಬೇಕೆ? ಥಾಣೆಯ ಕಿಮ್ಸ್ ಆಸ್ಪತ್ರೆಗಳ ಮುಖ್ಯ ಆಹಾರ ತಜ್ಞೆ ಡಿ.ಟಿ. ಅಮ್ರೀನ್ ಶೇಖ್ ಅವರ ಪ್ರಕಾರ, ನಿಮ್ಮ ದಿನವನ್ನು ಒಂದು ಪೇರಳೆ ಹಣ್ಣಿನಿಂದ ಪ್ರಾರಂಭಿಸುವುದು ಎಂದರೆ ಆಹಾರದಲ್ಲಿ ಹೆಚ್ಚಿನ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡಂಟ್ ಗಳನ್ನು ಸೇರಿಸುವ ಸರಳ ಮಾರ್ಗವಾಗಿದೆ.

“ಪೇರಳೆ ಹಣ್ಣಿನಲ್ಲಿ ಹೆಚ್ಚಿನ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ದಿನವಿಡೀ ಅನಗತ್ಯವಾಗಿ ತಿಂಡಿ-ತಿನಿಸುಗಳನ್ನು ಸೇವಿಸುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎನ್ನುತ್ತಾರೆ ಅಮ್ರೀನ್ ಶೇಖ್.

ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ, ಚರ್ಮದ ಆರೋಗ್ಯ ಮತ್ತು ಕೊಲಾಜೆನ್ ಉತ್ಪಾದನೆಗೆ ಬೆಂಬಲ ನೀಡುತ್ತದೆ. ಇದರ ಗ್ಲೈಸೆಮಿಕ್ ಸೂಚ್ಯಂಕ ತುಲನಾತ್ಮಕವಾಗಿ ಕಡಿಮೆ ಇರುವುದರಿಂದ, ಸಮತೋಲಿತ ಉಪಾಹಾರದ ಭಾಗವಾಗಿ ಇದನ್ನು ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತನೆ ಏರಿಕೆಯಾಗುವ ಬದಲು ದೇಹಕ್ಕೆ ನಿರಂತರವಾಗಿ ಶಕ್ತಿ ಒದಗಿಸುತ್ತದೆ.

►ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಸುರಕ್ಷಿತವೇ?

ಆರೋಗ್ಯವಂತ ವ್ಯಕ್ತಿಗಳು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಹುದು. “ಸಾಮಾನ್ಯವಾಗಿ ಪೇರಳೆ ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಸೂಕ್ಷ್ಮ ಹೊಟ್ಟೆ ಅಥವಾ ಇರಿಟೇಬಲ್ ಬೌಲ್ ಸಿಂಡ್ರೋಮ್ ನಂತಹ ಜೀರ್ಣಕಾರಿ ಸಮಸ್ಯೆ ಇರುವವರು, ವಿಶೇಷವಾಗಿ ಫೈಬರ್ ಭರಿತ ಆಹಾರವನ್ನು ತಿನ್ನಲು ಒಗ್ಗಿಕೊಳ್ಳದಿದ್ದರೆ, ಅದರ ಹೆಚ್ಚಿನ ನಾರಿನಂಶವು ಹೊಟ್ಟೆ ಉಬ್ಬುವುದು ಅಥವಾ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಅಂತಹ ಸಂದರ್ಭಗಳಲ್ಲಿ ಪೇರಳೆಯನ್ನು ಸ್ವಲ್ಪ ಕಡಲೆಗಳೊಂದಿಗೆ ಬೆರೆಸುವುದು ಅಥವಾ ಉಪಾಹಾರದ ನಂತರ ಸೇವಿಸುವುದು ಉತ್ತಮ ಆಯ್ಕೆಯಾಗಿರಬಹುದು” ಎಂದು ವೈದ್ಯರು ಅಭಿಪ್ರಾಯಪಟ್ಟರು.

►ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆಯೇ?

ಪೇರಳೆ ತೂಕ ನಿರ್ವಹಣೆಯಲ್ಲಿ ಉಪಯುಕ್ತ ಸೇರ್ಪಡೆಯಾಗಬಹುದು. ಏಕೆಂದರೆ ಇದು ನೈಸರ್ಗಿಕವಾಗಿ ಕಡಿಮೆ ಕ್ಯಾಲರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಹಸಿವನ್ನು ನಿಯಂತ್ರಿಸಲು ಮತ್ತು ದಿನದ ನಂತರ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಿದ್ದರೂ, ಹಣ್ಣು ತಿಂದ ತಕ್ಷಣ ತೂಕ ಕಡಿಮೆಯಾಗುವುದಿಲ್ಲ. ಸ್ಥಿರವಾದ ಆಹಾರ ಪದ್ಧತಿ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಒಟ್ಟಾರೆ ಸಮತೋಲಿತ ಆಹಾರವು ಪ್ರಮುಖ ಅಂಶಗಳಾಗಿ ಉಳಿದಿವೆ.

►ಗಮನಿಸಬೇಕಾಗಿರುವುದು ಏನು?

ಒಂದು ಮಧ್ಯಮ ಗಾತ್ರದ ಪೇರಳೆ ಹಣ್ಣು ಬಹುತೇಕರಿಗೆ ಉತ್ತಮ. ಪೇರಳೆಗೆ ಉಪ್ಪು, ಸಕ್ಕರೆ ಅಥವಾ ಮಸಾಲೆಯುಕ್ತ ಪದಾರ್ಥಗಳನ್ನು ನಿಯಮಿತವಾಗಿ ಸೇರಿಸುವುದನ್ನು ತಪ್ಪಿಸಿ. ಏಕೆಂದರೆ ಅವು ಅದರ ಒಟ್ಟು ಆರೋಗ್ಯ ಪ್ರಯೋಜನಗಳನ್ನು ಕಡಿಮೆ ಮಾಡಬಹುದು. ಜೀರ್ಣಕಾರಿ ಸಮಸ್ಯೆಗಳಿರುವ ಜನರು ಫೈಬರ್ ಸೇವನೆಯನ್ನು ಕ್ರಮೇಣ ಹೆಚ್ಚಿಸಬೇಕು ಮತ್ತು ಸಾಕಷ್ಟು ನೀರು ಕುಡಿಯಬೇಕು. ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಪೇರಳೆ ಹಣ್ಣನ್ನು ಸೇರಿಸಿಕೊಳ್ಳಬಹುದು. ಆದರೆ ಅದನ್ನು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸ್ವತಂತ್ರ ಪರಿಹಾರವೆಂದು ಪರಿಗಣಿಸುವ ಬದಲು, ತಮ್ಮ ಒಟ್ಟು ಕಾರ್ಬೋಹೈಡ್ರೇಟ್ ಸೇವನೆ ಮತ್ತು ಊಟದ ಯೋಜನೆಗೆ ಹೊಂದಿಕೊಳ್ಳುವಂತೆ ಸೇವಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor