ಮಾತ್ರೆ, ಇನ್ಸುಲಿನ್ ಇಲ್ಲದೆ ಮಧುಮೇಹ ನಿಯಂತ್ರಣಕ್ಕೆ ಹೊಸ ಆವಿಷ್ಕಾರ!
►ಸ್ನೇಹಾ ರಿಚ್ಚಾರಿಯಾ – theprint. in ವರದಿ
Photo Credit : Pixabay
ಮಾತ್ರೆಗಳನ್ನು ಸೇವಿಸದೆ ಅಥವಾ ಇನ್ಸುಲಿನ್ ಚುಚ್ಚುಮದ್ದು ಪಡೆಯದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವೇ? ಈ ನಿಟ್ಟಿನಲ್ಲಿ ವೈದ್ಯಕೀಯ ವಿಜ್ಞಾನ ಹೊಸ ಭರವಸೆಯ ಸಾಧ್ಯತೆಯೊಂದನ್ನು ತೆರೆದಿಟ್ಟಿದೆ. ದೇಹದಲ್ಲಿನ ಹೆಚ್ಚುವರಿ ಗ್ಲೂಕೋಸ್ ಅನ್ನು ಮೂತ್ರದ ಮೂಲಕ ಹೊರಹಾಕಬಲ್ಲ ವೈರ್ಲೆಸ್ ಇಂಪ್ಲಾಂಟ್ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ʼthe print' ವರದಿ ಮಾಡಿದೆ.
ಈ ಮಹತ್ವದ ಸಂಶೋಧನೆಯ ವಿವರಗಳು ಪ್ರತಿಷ್ಠಿತ 'ಸೈನ್ಸ್' ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ. ಸ್ವಿಟ್ಝರ್ ಲ್ಯಾಂಡ್ ನ ETH ಜೂರಿಕ್ ಹಾಗೂ ಫ್ರಾನ್ಸ್ ನ ಲಿಯಾನ್ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ ಮೂಲದ ವಿಜ್ಞಾನಿ ದೇಬಾಶಿಸ್ ಮೈತಿ ಕೂಡ ಸಂಶೋಧನಾ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.
ಸಾಮಾನ್ಯವಾಗಿ ಆಹಾರ ಸೇವಿಸಿದಾಗ ದೇಹವು ಅದನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಮೇದೋಜೀರಕ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ಹಾರ್ಮೋನ್ ಈ ಗ್ಲೂಕೋಸ್ ಅನ್ನು ಜೀವಕೋಶಗಳ ಒಳಗೆ ತಲುಪಿಸಿ, ಶಕ್ತಿಯಾಗಿ ಬಳಸಿಕೊಳ್ಳಲು ನೆರವಾಗುತ್ತದೆ.
ಆದರೆ, ಟೈಪ್-2 ಮಧುಮೇಹದಲ್ಲಿ ದೇಹದ ಜೀವಕೋಶಗಳು ಇನ್ಸುಲಿನ್ ಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಕಾಲಕ್ರಮೇಣ ಮೇದೋಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.
ಪ್ರಸ್ತುತ ಮಧುಮೇಹ ಚಿಕಿತ್ಸೆಗಳು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಅಥವಾ ಕೃತಕ ಇನ್ಸುಲಿನ್ ಒದಗಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ. ಆದರೆ, ಹೊಸ ಇಂಪ್ಲಾಂಟ್ ಇದಕ್ಕಿಂತ ಭಿನ್ನವಾದ ಮಾರ್ಗ ಅನುಸರಿಸುತ್ತದೆ. ಇನ್ಸುಲಿನ್ ಮೇಲೆ ಅವಲಂಬಿತವಾಗದೆ, ಹೆಚ್ಚುವರಿ ಗ್ಲೂಕೋಸ್ ಅನ್ನು ದೇಹದಿಂದ ಹೊರಹಾಕಬಹುದಾದ ಸಂಯುಕ್ತವಾಗಿ ಪರಿವರ್ತಿಸುವುದು ಇದರ ವಿಶೇಷತೆ.
►ಏನಿದು 'ಎಕೋ' ತಂತ್ರಜ್ಞಾನ?
ಈ ಸಾಧನಕ್ಕೆ 'ಎಕೋ' (ಎಲೆಕ್ಟ್ರೋಕ್ಯಾಟಲಿಟಿಕ್ ಕ್ಲೋಸ್ಡ್-ಲೂಪ್ ಹೆಲ್ತ್ ಆಪ್ಟಿಮೈಸೇಶನ್) ಎಂದು ಹೆಸರಿಡಲಾಗಿದೆ. ಚರ್ಮದ ಕೆಳಗೆ ಅಳವಡಿಸುವ ಈ ಸಾಧನವು ಬ್ಯಾಟರಿ ರಹಿತವಾಗಿದ್ದು, ನಿಸ್ತಂತು ವಿದ್ಯುತ್ ಶಕ್ತಿಯ ಮೂಲಕ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ಫೋನ್ ನಿಂದ ಹೊರಸೂಸುವ ರೇಡಿಯೊಫ್ರೀಕ್ವೆನ್ಸಿ (RF) ತರಂಗಗಳ ಮೂಲಕ ಸಾಧನಕ್ಕೆ ಅಗತ್ಯವಾದ ವಿದ್ಯುತ್ ಶಕ್ತಿಯನ್ನು ಒದಗಿಸಲಾಗುತ್ತದೆ.
ಇದರಲ್ಲಿ ಗ್ರ್ಯಾಫೈಟ್ ಒಳಗೆ ಹುದುಗಿಸಲಾದ ಪ್ಲಾಟಿನಂ ಲೇಪಿತ ಚಿನ್ನದ ಸೂಕ್ಷ್ಮ ಕಣಗಳಿವೆ. ಹೊರಗಿನಿಂದ ವಿದ್ಯುತ್ ಶಕ್ತಿ ಒದಗಿಸಿದಾಗ ಈ ಕಣಗಳು ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಆಕ್ಸಿಡೀಕರಣ ಪ್ರಕ್ರಿಯೆಯ ಮೂಲಕ 'ಗ್ಲುಕೋನೇಟ್' ಎಂಬ ಸಂಯುಕ್ತವಾಗಿ ಪರಿವರ್ತಿಸುತ್ತವೆ. ಬಳಿಕ ಮೂತ್ರಪಿಂಡಗಳು ಈ ಸಂಯುಕ್ತವನ್ನು ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತವೆ.
ಸಾಧನಕ್ಕೆ ಒದಗಿಸುವ ವಿದ್ಯುತ್ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಗ್ಲೂಕೋಸ್ ಪರಿವರ್ತನೆಯ ವೇಗವನ್ನೂ ಹೊಂದಿಸಬಹುದು.
ಮಧುಮೇಹ ಹೊಂದಿದ್ದ ಇಲಿಗಳಲ್ಲಿ ಈ ಸಾಧನವನ್ನು ಚಾಲನೆಗೊಳಿಸಿದ 90 ನಿಮಿಷಗಳೊಳಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸಹಜ ಸ್ಥಿತಿಗೆ ಮರಳಿದೆ ಎಂದು ಪ್ರಾಯೋಗಿಕ ಪರೀಕ್ಷೆಯಲ್ಲಿ ತಿಳಿದುಬಂದಿದೆ.
►ಸಕ್ಕರೆ ಮಟ್ಟಕ್ಕೆ ಸ್ವಯಂಚಾಲಿತ ಕಾವಲು
ಈ ಸಾಧನದ ಮತ್ತೊಂದು ವಿಶೇಷವೆಂದರೆ ಅದರ ಸ್ವಯಂಚಾಲಿತ ಕಾರ್ಯನಿರ್ವಹಣೆ. ನಿರಂತರ ಗ್ಲೂಕೋಸ್ ಮಾನಿಟರ್ (CGM) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಿಸುತ್ತದೆ. ಗ್ಲೂಕೋಸ್ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಾದಾಗ ಇಂಪ್ಲಾಂಟ್ ತಾನಾಗಿಯೇ ಚಾಲನೆಗೊಳ್ಳುತ್ತದೆ. ಸಕ್ಕರೆ ಮಟ್ಟ ನಿಯಂತ್ರಿತ ಸ್ಥಿತಿಗೆ ಮರಳಿದಾಗ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತಿಯಾಗಿ ಕುಸಿಯುವ ಅಪಾಯವನ್ನು ತಪ್ಪಿಸಲು ಈ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆ ನೆರವಾಗುತ್ತದೆ.
ಇಲಿಗಳ ಮೇಲೆ ಆರು ವಾರಗಳ ಕಾಲ ನಡೆಸಿದ ಪುನರಾವರ್ತಿತ ಪ್ರಯೋಗಗಳಲ್ಲೂ ಅವುಗಳ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿತ್ತು. ಅಷ್ಟೇ ಅಲ್ಲ, ಗ್ಲೂಕೋಸ್ ಮೂತ್ರದ ಮೂಲಕ ಹೊರಹೋದ ಪರಿಣಾಮ, ಶಕ್ತಿಗಾಗಿ ದೇಹವು ಕೊಬ್ಬನ್ನು ಬಳಸಿಕೊಳ್ಳಲು ಆರಂಭಿಸಿತು. ಇದರಿಂದ ಇಲಿಗಳು ತಮ್ಮ ದೇಹದ ತೂಕದ ಶೇಕಡಾ 10ರಷ್ಟನ್ನು ಕಳೆದುಕೊಂಡವು. ಈ ಪ್ರಯೋಗದ ವೇಳೆ ಇಲಿಗಳಲ್ಲಿ ಟ್ರೈಗ್ಲಿಸರೈಡ್ ಪ್ರಮಾಣ ಕಡಿಮೆಯಾಗಿದ್ದು, ಫ್ರೀ ಫ್ಯಾಟಿ ಆಸಿಡ್ಗಳು ಮತ್ತು ಕೀಟೋನ್ ಬಾಡಿಗಳ ಪ್ರಮಾಣ ಹೆಚ್ಚಾಗಿರುವುದೂ ಕಂಡುಬಂದಿದೆ.
ಪ್ರಸ್ತುತ ಮಧುಮೇಹ ಚಿಕಿತ್ಸೆಯಲ್ಲಿ ಬಳಸುವ ಮೆಟ್ಫಾರ್ಮಿನ್, ಮೂತ್ರದ ಮೂಲಕ ಸಕ್ಕರೆ ಹೊರಹಾಕುವ SGLT-2 ಇನ್ ಹಿಬಿಟರ್ ಗಳು ಹಾಗೂ ತೂಕ ಇಳಿಕೆಗೆ ಬಳಸುವ GLP-1 ಔಷಧಗಳಿಗಿಂತ ಈ ತಂತ್ರಜ್ಞಾನ ವಿಭಿನ್ನವಾಗಿದೆ.
►ಮಾನವರ ಚಿಕಿತ್ಸೆಗೆ ಇನ್ನೂ ದೂರದ ಹಾದಿ
ಭಾರತದ ಪ್ರಮುಖ ಎಂಡೋಕ್ರೈನಾಲಜಿಸ್ಟ್ ಡಾ. ಅಂಬರೀಶ್ ಮಿತ್ತಲ್ ಅವರ ಪ್ರಕಾರ, ಯಾವುದೇ ರಾಸಾಯನಿಕ ಔಷಧ ಬಳಸದೆ ಕೇವಲ ಎಲೆಕ್ಟ್ರೋಕ್ಯಾಟಲಿಸಿಸ್ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮಹತ್ವದ ಮೈಲಿಗಲ್ಲು. ಈ ಸಾಧನವನ್ನು ಕೇವಲ ಸೈದ್ಧಾಂತಿಕ ಹಂತದಲ್ಲಿರಿಸದೆ ಪ್ರಾಣಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಿರುವುದು ಅದರ ಪ್ರಾಯೋಗಿಕ ಸಾಧ್ಯತೆಯನ್ನು ತೋರಿಸುತ್ತದೆ.
ಆದರೆ, ಈ ಹೊಸ ತಂತ್ರಜ್ಞಾನ ಸದ್ಯಕ್ಕೆ ಮಾನವರಲ್ಲಿ ಇನ್ಸುಲಿನ್ ಅಥವಾ ಔಷಧಗಳಿಗೆ ಸಂಪೂರ್ಣ ಪರ್ಯಾಯವಾಗಲು ಸಾಧ್ಯವಿಲ್ಲ. ದಿಲ್ಲಿಯ ಫೋರ್ಟಿಸ್ ಸಿ-ಡಾಕ್ ಆಸ್ಪತ್ರೆಯ ಅಧ್ಯಕ್ಷ ಡಾ. ಅನೂಪ್ ಮಿಶ್ರಾ ಹಾಗೂ ಮುಂಬೈನ ತಜ್ಞ ಡಾ. ರಾಜೀವ್ ಕೋವಿಲ್ ಅವರು ಈ ಸಂಶೋಧನೆಯ ಇತಿಮಿತಿಗಳತ್ತ ಗಮನ ಸೆಳೆದಿದ್ದಾರೆ.
ಗ್ಲುಕೋನೇಟ್ ನಿರಂತರವಾಗಿ ಉತ್ಪತ್ತಿಯಾಗುವುದರಿಂದ ಮೂತ್ರಪಿಂಡಗಳ ಮೇಲೆ ಉಂಟಾಗಬಹುದಾದ ಪರಿಣಾಮ, ದೇಹದ ಆಮ್ಲ-ಪ್ರತ್ಯಾಮ್ಲ ಸಮತೋಲನ ಹಾಗೂ ಚಯಾಪಚಯ ಕ್ರಿಯೆಯ ಮೇಲಿನ ದೀರ್ಘಕಾಲೀನ ಪ್ರಭಾವ ಇನ್ನೂ ಅಧ್ಯಯನವಾಗಬೇಕಿದೆ.
ಇದಲ್ಲದೆ, ಮಧುಮೇಹಕ್ಕೆ ಬಳಸುವ ಕೆಲವು ಆಧುನಿಕ ಔಷಧಗಳು ಹೃದಯ ಮತ್ತು ಮೂತ್ರಪಿಂಡಗಳಿಗೆ ರಕ್ಷಣಾತ್ಮಕ ಪ್ರಯೋಜನಗಳನ್ನು ಒದಗಿಸುತ್ತವೆ. ಕೇವಲ ಸಕ್ಕರೆಯನ್ನು ದೇಹದಿಂದ ಹೊರಹಾಕುವ ಇಂಪ್ಲಾಂಟ್ ಅಂತಹ ಎಲ್ಲ ಪ್ರಯೋಜನಗಳನ್ನು ನೀಡಲು ಸಾಧ್ಯವಿಲ್ಲ. ಮಾನವರಲ್ಲಿ ಬಳಸಲು ಯೋಗ್ಯವಾಗುವಂತೆ ಸಾಧನದ ಗಾತ್ರವನ್ನು ಮತ್ತಷ್ಟು ಕುಗ್ಗಿಸುವುದೂ ಸಂಶೋಧಕರ ಮುಂದಿರುವ ಸವಾಲಾಗಿದೆ.
ಇಂಪ್ಲಾಂಟ್ನ ದೀರ್ಘಕಾಲೀನ ಸುರಕ್ಷತೆ, ಬಾಳಿಕೆ ಮತ್ತು ಮಾನವ ದೇಹದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಹೆಚ್ಚಿನ ಅಧ್ಯಯನ ಅಗತ್ಯವಿದೆ.
ಒಟ್ಟಿನಲ್ಲಿ, 'ಎಕೋ' ಇಂಪ್ಲಾಂಟ್ ಮಧುಮೇಹ ನಿರ್ವಹಣೆಯ ಕ್ಷೇತ್ರದಲ್ಲಿ ಜೈವಿಕ ಇಂಜಿನಿಯರಿಂಗ್ ನ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ. ಪ್ರಾಣಿಗಳ ಮೇಲಿನ ಈ ಯಶಸ್ಸು ಮಾನವರ ಚಿಕಿತ್ಸೆಯಲ್ಲೂ ಫಲ ನೀಡಬಹುದೇ ಎಂಬುದನ್ನು ಮುಂದಿನ ಕ್ಲಿನಿಕಲ್ ಪ್ರಯೋಗಗಳೇ ನಿರ್ಧರಿಸಲಿವೆ. ಮಾನವರಲ್ಲಿ ಯಶಸ್ವಿಯಾದರೆ, ಮಧುಮೇಹ ಚಿಕಿತ್ಸೆಗೆ ಪೂರಕವಾದ ಹೊಸ ತಂತ್ರಜ್ಞಾನವಾಗಿ ಇದು ಬೆಳೆಯುವ ಸಾಧ್ಯತೆಯಿದೆ.
ಸೌಜನ್ಯ: theprint.in