ಸಾಂದರ್ಭಿಕ ಚಿತ್ರ | Photo Credit : magnific

ಸುಶಿಕ್ಷಿತರೂ ಸಹ 'ಡಿಜಿಟಲ್ ಅರೆಸ್ಟ್' ವಂಚನೆಗೆ ತುತ್ತಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಮೊಬೈಲ್ ಫೋನ್ ಗಳ ಮೂಲಕವೇ ತಮ್ಮನ್ನು ಬಂಧಿಸಲಾಗುತ್ತಿದೆ ಎಂದು ನಾಗರಿಕರು ಹೇಗೆ ನಂಬಲು ಸಾಧ್ಯ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಇಂತಹ ವಂಚನೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು (RBI) ತರಾಟೆಗೆ ತೆಗೆದುಕೊಂಡಿದೆ.

ಗುರುವಾರ (ಅಕ್ಟೋಬರ್ 29) ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ಸದಸ್ಯರ ಪೀಠ, ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದರೂ ಸಂತ್ರಸ್ತರು ಇಂತಹ ವಂಚನೆಗೆ ಏಕೆ ಬಲಿಯಾಗುತ್ತಿದ್ದಾರೆ ಎಂದು ಪ್ರಶ್ನಿಸಿತು.

"ಸಂತ್ರಸ್ತರಿಗೆ ಏನಾಗಿದೆ? ಅವರು ಹೇಗೆ ಹೀಗೆ ಸಿಲುಕಿಕೊಳ್ಳುತ್ತಿದ್ದಾರೆ? ಈ ಮೂಲಭೂತ ವಿಷಯವೂ ಅವರಿಗೆ ಅರ್ಥವಾಗುವುದಿಲ್ಲವೇ? ಮೊಬೈಲ್ನಲ್ಲಿ ಬಂಧಿಸುವ ಭಯವಾದರೂ ಏಕೆ?" ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಫೋನ್ ಕರೆ ಬಂದಾಗ ಸಾರ್ವಜನಿಕರು ಕರೆಯನ್ನು ಕಡಿತಗೊಳಿಸಬಹುದು ಎಂದು ನ್ಯಾ. ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾ. ವಿ. ಮೋಹನಾ ಅವರನ್ನೊಳಗೊಂಡ ಪೀಠ ಹೇಳಿದೆ.

ಡಿಜಿಟಲ್ ಅರೆಸ್ಟ್ ವಂಚನೆಯು ಭಾರತದ ಅರ್ಥವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಅತಿ ದೊಡ್ಡ ಆರ್ಥಿಕ ಅಪರಾಧಗಳಲ್ಲಿ ಒಂದಾಗಿದ್ದು, ಇದರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ನ್ಯಾಯಾಲಯ ಹೇಳಿದೆ. ವೈಯಕ್ತಿಕ ಖಾತೆಗಳಿಂದ, ವಿಶೇಷವಾಗಿ ಹಿರಿಯ ನಾಗರಿಕರ ಖಾತೆಗಳಿಂದ ಸೂಕ್ತ ಪರಿಶೀಲನೆ ಇಲ್ಲದೆ ಅಸಾಧಾರಣ ರೀತಿಯಲ್ಲಿ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಅವಕಾಶ ನೀಡುತ್ತಿರುವ ಬ್ಯಾಂಕ್ ಗಳ ಪಾತ್ರವನ್ನೂ ನ್ಯಾಯಾಲಯ ಪ್ರಶ್ನಿಸಿದೆ.

ಡಿಜಿಟಲ್ ಅರೆಸ್ಟ್ ವಂಚನೆಯಿಂದಾಗಿ ದೇಶಾದ್ಯಂತ ಸಂತ್ರಸ್ತರು ಒಟ್ಟಾರೆಯಾಗಿ 3,000 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, 2025ರ ಅಕ್ಟೋಬರ್ ನಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಮುಖ್ಯವಾಗಿ, ವಂಚನೆಯ ವಹಿವಾಟುಗಳನ್ನು ತಡೆಯಲು ಹಣಕಾಸು ಸಂಸ್ಥೆಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಲ್ಲಿ ವಿಫಲವಾದ ಪ್ರಕರಣಗಳಲ್ಲಿ, ಸಂತ್ರಸ್ತರಿಗೆ ಕನಿಷ್ಠ ನಷ್ಟವಾದ ಹಣದಷ್ಟನ್ನಾದರೂ ಪರಿಹಾರವಾಗಿ ನೀಡಲು ಬ್ಯಾಂಕ್ ಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದೆ.

"ಬ್ಯಾಂಕ್ ಅಧಿಕಾರಿಗಳ ಭಾಗಿಯಾಗುವಿಕೆಯೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. RBI ಈ ವಿಷಯದಲ್ಲಿ ಮೃದು ಧೋರಣೆ ತಳೆಯುತ್ತಿರುವುದು ದುರದೃಷ್ಟಕರ. ನಾವು ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರೆ RBI ಬ್ಯಾಂಕ್ ಗಳ ಸಲಹೆ ಪಡೆಯುತ್ತಿದೆ" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

►ಡಿಜಿಟಲ್ ಅರೆಸ್ಟ್ ಎಂದರೇನು?

ಡಿಜಿಟಲ್ ಅರೆಸ್ಟ್ ಎಂಬುದು ಒಂದು ರೀತಿಯ ಸೈಬರ್ ವಂಚನೆಯಾಗಿದೆ. ಇದರಲ್ಲಿ ಅಪರಾಧಿಗಳು ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ (ED), ಪೊಲೀಸ್ ಅಧಿಕಾರಿಗಳು ಅಥವಾ ನ್ಯಾಯಾಧೀಶರಂತೆ ನಟಿಸಿ, ಸಂತ್ರಸ್ತರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ನಂಬಿಸುತ್ತಾರೆ.

ಸಾಮಾನ್ಯವಾಗಿ ಫೋನ್ ಅಥವಾ ವಿಡಿಯೊ ಕರೆ ಮೂಲಕ ಈ ವಂಚನೆ ಆರಂಭವಾಗುತ್ತದೆ. ಸಂತ್ರಸ್ತರ ಆಧಾರ್ ವಿವರಗಳು, ಬ್ಯಾಂಕ್ ಖಾತೆಗಳು ಅಥವಾ ಮೊಬೈಲ್ ಸಂಖ್ಯೆಗಳು ಹಣ ಅಕ್ರಮ ವರ್ಗಾವಣೆ, ಡ್ರಗ್ಸ್ ಸರಬರಾಜು ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ವಂಚಕರು ಆರೋಪಿಸುತ್ತಾರೆ.

ಬಳಿಕ, ಸಂತ್ರಸ್ತರು ತನಿಖೆಗೆ ಒಳಪಟ್ಟಿದ್ದಾರೆ ಮತ್ತು ಬೇರೆಯವರೊಂದಿಗೆ ಸಂಪರ್ಕ ಸಾಧಿಸಬಾರದು ಎಂಬ ನೆಪವೊಡ್ಡಿ ವಿಡಿಯೊ ಕರೆಯಲ್ಲಿಯೇ ಇರುವಂತೆ ಸೂಚಿಸಲಾಗುತ್ತದೆ. ಕೆಲವೊಮ್ಮೆ ಗಂಟೆಗಟ್ಟಲೆ ಅಥವಾ ದಿನಗಟ್ಟಲೆಯೂ ಹೀಗೆ ಕರೆಯಲ್ಲಿಯೇ ಇರಿಸಿಕೊಳ್ಳಲಾಗುತ್ತದೆ.

ತಮ್ಮ ಬೆದರಿಕೆಯನ್ನು ನಿಜವೆಂದು ನಂಬಿಸಲು ವಂಚಕರು ನಕಲಿ ಬಂಧನ ವಾರಂಟ್ಗಳು, ನಕಲಿ ಕೋರ್ಟ್ ಆದೇಶಗಳು, ಪೊಲೀಸ್ ಠಾಣೆಯಂತಹ ಕೃತಕ ಹಿನ್ನೆಲೆ ಹಾಗೂ ಸಚಿವಾಲಯದ ಮಾದರಿಯ ಗುರುತಿನ ಚೀಟಿಗಳನ್ನು ಬಳಸುತ್ತಾರೆ. ಕೊನೆಗೆ, ಪರಿಶೀಲನೆಯ ನೆಪದಲ್ಲಿ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ನಿರ್ದಿಷ್ಟ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಕೇಳಲಾಗುತ್ತದೆ.

ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತದಲ್ಲಿ ‘ಡಿಜಿಟಲ್ ಅರೆಸ್ಟ್’ ಮಾಡಲು ಯಾವುದೇ ಕಾನೂನು ನಿಬಂಧನೆಗಳಿಲ್ಲ. ಯಾವುದೇ ತನಿಖಾ ಸಂಸ್ಥೆಯೂ ವಿಡಿಯೊ ಕರೆ ಮೂಲಕ ಜನರನ್ನು ಬಂಧಿಸಲು ಅಥವಾ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಹಣ ನೀಡುವಂತೆ ಬೇಡಿಕೆ ಇಡಲು ಸಾಧ್ಯವಿಲ್ಲ.

► ಭಾರತದಲ್ಲಿ ಡಿಜಿಟಲ್ ಅರೆಸ್ಟ್ ಎಷ್ಟು ವ್ಯಾಪಕವಾಗಿದೆ?

ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ಅರೆಸ್ಟ್ ವಂಚನೆಗಳ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ. 2024ರಲ್ಲಿ ಗರಿಷ್ಠ ಮಟ್ಟದಲ್ಲಿದ್ದ ಈ ಪ್ರಕರಣಗಳ ಸಂಖ್ಯೆ ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ ಕೊಂಚ ಕಡಿಮೆಯಾಗಿದೆ.

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C) ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಡಿಜಿಟಲ್ ಅರೆಸ್ಟ್ ದೂರುಗಳು 2022ರಲ್ಲಿ 39,925ರಿಂದ 2024ರಲ್ಲಿ 1,23,672ಕ್ಕೆ ಏರಿಕೆಯಾಗಿದ್ದವು. 2024ರಲ್ಲಿ ವರದಿಯಾದ ಆರ್ಥಿಕ ನಷ್ಟ ಸುಮಾರು 1,935 ಕೋಟಿ ರೂಪಾಯಿಗಳನ್ನು ತಲುಪಿತ್ತು.

2025ರಲ್ಲಿ ದೂರುಗಳ ಸಂಖ್ಯೆ 58,239ಕ್ಕೆ ಇಳಿಕೆಯಾಗಿದ್ದು, ಸುಮಾರು 1,211 ಕೋಟಿ ರೂಪಾಯಿ ನಷ್ಟ ವರದಿಯಾಗಿದೆ. 2026ರ ಜನವರಿಯಿಂದ ಆಗಸ್ಟ್ ನಡುವೆ 21,928 ದೂರುಗಳು ದಾಖಲಾಗಿದ್ದು, 647 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ. ಇಂತಹ ಹಲವು ವಂಚನೆ ಪ್ರಕರಣಗಳು ವರದಿಯಾಗದೇ ಉಳಿಯುವುದರಿಂದ, ಈ ಅಧಿಕೃತ ಅಂಕಿಅಂಶಗಳು ಸಮಸ್ಯೆಯ ನಿಜವಾದ ತೀವ್ರತೆಯನ್ನು ಪೂರ್ಣವಾಗಿ ಬಿಂಬಿಸುವುದಿಲ್ಲ ಎಂದು ಉದ್ಯಮ ಕ್ಷೇತ್ರದ ತಜ್ಞರು ಅಭಿಪ್ರಾಯಪಡುತ್ತಾರೆ.

ತನಿಖಾ ಸಂಸ್ಥೆಗಳಂತೆ ನಟಿಸಿದ ವಂಚಕರು ನಕಲಿ ಕೋರ್ಟ್ ದಾಖಲೆಗಳನ್ನು ಬಳಸಿ ಹರಿಯಾಣದ ಹಿರಿಯ ದಂಪತಿಗೆ 1 ಕೋಟಿಗೂ ಹೆಚ್ಚು ರೂಪಾಯಿ ವಂಚಿಸಿದ್ದರು. ಈ ದೂರಿನ ಆಧಾರದ ಮೇಲೆ ಸುಪ್ರೀಂ ಕೋರ್ಟ್ 2025ರ ಅಕ್ಟೋಬರ್ ನಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ನಿರಂತರವಾಗಿ ವರದಿಯಾಗುತ್ತಿರುವ ಇಂತಹ ಪ್ರಕರಣಗಳು ವಿದೇಶಗಳಿಂದ ಕಾರ್ಯಾಚರಿಸುವ ಸಂಘಟಿತ ಅಪರಾಧ ಜಾಲಗಳು ಹಾಗೂ ವಂಚನೆಯ ಹಣವನ್ನು ಶೀಘ್ರವಾಗಿ ವರ್ಗಾಯಿಸಲು ಬಳಸುವ ‘ಮ್ಯೂಲ್’ (ಬೆನಾಮಿ) ಬ್ಯಾಂಕ್ ಖಾತೆಗಳ ಬಳಕೆಯ ಬಗ್ಗೆಯೂ ಕಳವಳ ಮೂಡಿಸಿವೆ.

►ಇಂತಹ ವಂಚನೆಗಳನ್ನು ತಡೆಯಲು RBI ಮತ್ತು ಬ್ಯಾಂಕ್ ಗಳು ಏನು ಮಾಡುತ್ತಿವೆ?

ಈ ವಿಷಯದಲ್ಲಿ RBI "ಮೃದು ಧೋರಣೆ" ತಳೆಯುತ್ತಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದ್ದರೂ, ಕೇಂದ್ರೀಯ ಬ್ಯಾಂಕ್ ಪರಿಷ್ಕೃತ ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (KYC) ನಿಯಮಗಳ ಮೇಲೆ ಕೆಲಸ ಮಾಡುತ್ತಿದೆ. ಈ ನಿಯಮಗಳ ಪ್ರಕಾರ, ಗ್ರಾಹಕರ ಸಾಮಾನ್ಯ ವ್ಯವಹಾರದ ಶೈಲಿಗೆ ಹೊಂದಿಕೆಯಾಗದ ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸಿ, ಅವುಗಳನ್ನು ತಾತ್ಕಾಲಿಕವಾಗಿ ತಡೆಯಲು ಬ್ಯಾಂಕ್ ಗಳಿಗೆ ಸೂಚಿಸಲಾಗುತ್ತದೆ.

ಸೆಪ್ಟೆಂಬರ್ ನಲ್ಲಿ ಹೊರಡಿಸಲಾದ ಕರಡು ನಿರ್ದೇಶನಗಳ ಪ್ರಕಾರ, ಬ್ಯಾಂಕ್ ಗಳು ಸಂಪೂರ್ಣ ಖಾತೆಯನ್ನು ಜಪ್ತಿ ಮಾಡುವ (ಫ್ರೀಜ್) ಬದಲಿಗೆ, ಅನುಮಾನಾಸ್ಪದ ಹಣದ ಮೇಲಷ್ಟೇ ತಾತ್ಕಾಲಿಕ ತಡೆ (ಡೆಬಿಟ್ ಹೋಲ್ಡ್) ಹೇರಬಹುದು. ವಿಶೇಷವಾಗಿ 'ಮ್ಯೂಲ್' (ಬೆನಾಮಿ) ಖಾತೆಗಳ ಚಟುವಟಿಕೆಯ ಶಂಕೆ ಇದ್ದಾಗ ಈ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಖಾತೆಯನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸುವುದನ್ನು ತಡೆಯಲು ಸೂಕ್ತ ಪರಿಶೀಲನೆ ಮತ್ತು ನಿಯಮಗಳನ್ನು ಈ ಕರಡಿನಲ್ಲಿ ಸೇರಿಸಲಾಗಿದೆ.

ಡಿಜಿಟಲ್ ವಂಚನೆಗೆ ಒಳಗಾಗುವ ಹಂತದಲ್ಲಿರುವ ಗ್ರಾಹಕರು ತಮ್ಮ ಖಾತೆಯಿಂದ ನಡೆಯುವ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ನೆರವಾಗುವ ‘ಕಿಲ್ ಸ್ವಿಚ್’ (Kill Switch) ವ್ಯವಸ್ಥೆಯನ್ನು ತರಲು RBI ಚಿಂತನೆ ನಡೆಸುತ್ತಿದೆ.

‘ಕಿಲ್ ಸ್ವಿಚ್’ ವ್ಯವಸ್ಥೆ ಎಂದರೆ ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಒಂದು ವ್ಯವಸ್ಥೆ, ಸಾಧನ, ಖಾತೆ ಅಥವಾ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸುವ, ನಿಷ್ಕ್ರಿಯಗೊಳಿಸುವ ಅಥವಾ ಬ್ಲಾಕ್ ಮಾಡುವ ತಂತ್ರಜ್ಞಾನವಾಗಿದೆ.

ಸರ್ಕಾರ ಮತ್ತು RBI ಪರಿಶೀಲಿಸುತ್ತಿರುವ ಈ ಕಿಲ್ ಸ್ವಿಚ್ ಪ್ರಸ್ತಾಪದಲ್ಲಿ, ಬ್ಯಾಂಕ್ ಗಳ ಆನ್ಲೈನ್ ಪಾವತಿ ಆ್ಯಪ್ಗಳಲ್ಲಿ ತುರ್ತು ಬಟನ್ ಒಂದನ್ನು ನೀಡುವ ಯೋಜನೆಯಿದೆ. ಬಳಕೆದಾರರು ತಮಗೆ ವಂಚನೆಯಾಗುತ್ತಿದೆ ಎಂದು ಶಂಕಿಸಿದ ತಕ್ಷಣ ಆ ಬಟನ್ ಒತ್ತಿ ತಮ್ಮ ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳನ್ನು ತಕ್ಷಣವೇ ಸ್ಥಗಿತಗೊಳಿಸಬಹುದು.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor