ಗ್ರೇಟರ್ ನೋಯ್ಡಾದ PNB ಹಗರಣ: ಉಳಿತಾಯ ಖಾತೆ ಹಾಗೂ FDಗಳಿಂದ 35 ಕೋಟಿ ರೂ. ‘ಕಾಣೆಯಾಗಿದ್ದು’ ಹೇಗೆ?
Photo Credit : indiratrade.com
ಗ್ರೇಟರ್ ನೋಯ್ಡಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಶಾಖೆಯೊಂದರ ಉಳಿತಾಯ ಖಾತೆಗಳು ಹಾಗೂ ಸ್ಥಿರ ಠೇವಣಿಗಳಿಂದ (FD) ಸುಮಾರು 35 ಕೋಟಿ ರೂಪಾಯಿ ಕಾಣೆಯಾಗಿದೆ ಎಂದು ಆರೋಪಿಸಲಾಗಿದ್ದು, ತಮ್ಮ ಹಣ ಹೇಗೆ ಮಾಯವಾಯಿತು ಎಂಬುದು ತಿಳಿಯದೆ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿದ್ದು, ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಐವರು ಉದ್ಯೋಗಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸುತ್ತಿದ್ದಾರೆ.
ಗ್ರೇಟರ್ ನೋಯ್ಡಾದ ಸೆಕ್ಟರ್ Pi-1 ಶಾಖೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ. ಗ್ರಾಹಕರು ತಮ್ಮ ಖಾತೆಗಳಲ್ಲಿದ್ದ ಹಣ ದಿಢೀರ್ ಕಡಿಮೆಯಾಗಿರುವುದನ್ನು ಹಾಗೂ ತಮ್ಮ ಒಪ್ಪಿಗೆಯಿಲ್ಲದೆ ಸ್ಥಿರ ಠೇವಣಿಗಳ ಹಣವನ್ನು ಹಿಂಪಡೆದಿರುವುದನ್ನು ಗಮನಿಸಿ ದೂರು ನೀಡಿದ್ದಾರೆ.
ಪಿಟಿಐ ವರದಿಯ ಪ್ರಕಾರ, ನಷ್ಟದ ಮೊತ್ತ ಸುಮಾರು 35 ಕೋಟಿ ರೂಪಾಯಿ ಇರಬಹುದು ಎಂದು ಖಾತೆದಾರರು ಅಂದಾಜಿಸಿದ್ದಾರೆ. ಬ್ಯಾಂಕ್ ಆಗಲಿ ಅಥವಾ ಪೊಲೀಸರಾಗಲಿ ಈ ಮೊತ್ತವನ್ನು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ.
ಈ ದೂರುಗಳ ಹಿನ್ನೆಲೆಯಲ್ಲಿ ಅನಧಿಕೃತ ವಹಿವಾಟುಗಳು ಹಾಗೂ ಬ್ಯಾಂಕ್ ಉದ್ಯೋಗಿಗಳ ಭಾಗಿಯಾಗಿರುವಿಕೆಯ ಬಗ್ಗೆ ತನಿಖೆ ಆರಂಭವಾಗಿದೆ. ವಹಿವಾಟುಗಳ ಕುರಿತು ತಮಗೆ ಯಾವುದೇ ಮೆಸೇಜ್ (ಅಲರ್ಟ್) ಬಾರದಿರುವುದು ಹಾಗೂ ಈ ಅಕ್ರಮ ಬೇಗನೆ ಬೆಳಕಿಗೆ ಬಾರದಿರುವುದರ ಕುರಿತು ಗ್ರಾಹಕರು ಪ್ರಶ್ನಿಸಿದ್ದಾರೆ.
►ಹಣ ಕಾಣೆಯಾಗಿರುವುದು ಗ್ರಾಹಕರಿಗೆ ತಿಳಿದದ್ದು ಹೇಗೆ?
ಹಣ ಹಿಂಪಡೆಯಲು, ಸ್ಥಿರ ಠೇವಣಿ ನವೀಕರಿಸಲು ಅಥವಾ ಖಾತೆಯಲ್ಲಿನ ಹಣ ಪರಿಶೀಲಿಸಲು ಬ್ಯಾಂಕ್ ಗೆ ಭೇಟಿ ನೀಡಿದಾಗಷ್ಟೇ ತಮ್ಮ ಹಣ ಕಾಣೆಯಾಗಿರುವುದು ಹಲವು ಗ್ರಾಹಕರಿಗೆ ತಿಳಿದುಬಂದಿದೆ.
ಸಂತ್ರಸ್ತ ಗ್ರಾಹಕರಲ್ಲಿ ಒಬ್ಬರಾದ ಹನೀಫ್ ಖಾನ್ ಪಿಟಿಐಗೆ ಪ್ರತಿಕ್ರಿಯಿಸಿ, "ನನ್ನ ಉಳಿತಾಯ ಖಾತೆಯಲ್ಲಿ 39 ಲಕ್ಷ ರೂಪಾಯಿ ಇತ್ತು, ಆದರೆ ಈಗ ಖಾತೆಯಲ್ಲಿ ಏನೂ ತೋರಿಸುತ್ತಿಲ್ಲ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನನಗೆ ಯಾವುದೇ ಮೆಸೇಜ್ ಬಂದಿಲ್ಲ ಅಥವಾ ನಾನು ಯಾವುದೇ ದಾಖಲೆಗೆ ಸಹಿ ಮಾಡಿಲ್ಲ" ಎಂದು ಹೇಳಿದ್ದಾರೆ.
ಮತ್ತೊಬ್ಬ ಖಾತೆದಾರ ಝಾಕೀರ್, ತಮ್ಮ ಖಾತೆಯಿಂದ 9.5 ಲಕ್ಷ ರೂಪಾಯಿ ಮಾಯವಾಗಿದೆ ಎಂದು ಆರೋಪಿಸಿದ್ದಾರೆ. ವಹಿವಾಟಿನ ಬಗ್ಗೆ ತಮಗೆ ಯಾವುದೇ ಮೆಸೇಜ್ ಬಂದಿರಲಿಲ್ಲ. ಬ್ಯಾಂಕ್ ಶಾಖೆಗೆ ಭೇಟಿ ನೀಡಿದಾಗಷ್ಟೇ ಈ ವಿಚಾರ ತಿಳಿದುಬಂತು ಎಂದು ಅವರು ಹೇಳಿರುವುದಾಗಿ ಅಕ್ಟೋಬರ್ 29ರಂದು NDTV ವರದಿ ಮಾಡಿದೆ.
ಜೇವಾರ್ ವಿಮಾನ ನಿಲ್ದಾಣ ಯೋಜನೆಗೆ ಭೂಮಿ ನೀಡಿ ಪರಿಹಾರವಾಗಿ ಪಡೆದ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದ ರೈತರು ಕೂಡ ಭಾರೀ ನಷ್ಟ ಅನುಭವಿಸಿದ್ದಾರೆ.
ವಿಜೇಂದ್ರ ಸಿಂಗ್ ಎಂಬ ರೈತ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಉಳಿತಾಯ ಖಾತೆಯಲ್ಲಿದ್ದ ಸುಮಾರು 87ರಿಂದ 88 ಲಕ್ಷ ರೂಪಾಯಿಗಳ ಪೈಕಿ ಈಗ ಕೇವಲ 1 ಲಕ್ಷ ರೂಪಾಯಿ ಮಾತ್ರ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ. ವಿಮಾನ ನಿಲ್ದಾಣ ಯೋಜನೆಗೆ ಭೂಮಿ ನೀಡಿದ್ದಕ್ಕಾಗಿ ಅವರಿಗೆ ಪ್ರಾಧಿಕಾರದಿಂದ ಈ ಪರಿಹಾರದ ಹಣ ಸಿಕ್ಕಿತ್ತು.
ಗ್ರೇಟರ್ ನೋಯ್ಡಾದ ಹಳ್ಳಿಯೊಂದರಲ್ಲಿ ಚಹಾ ಮತ್ತು ಸಮೋಸಾ ಗಾಡಿ ನಡೆಸುತ್ತಿರುವ 60 ವರ್ಷದ ಸಂತೋಷ್ ಎಂಬ ಮಹಿಳೆ, ವಿಮಾನ ನಿಲ್ದಾಣ ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಬಂದ 1.29 ಕೋಟಿ ರೂಪಾಯಿಯನ್ನು ತಮ್ಮ PNB ಖಾತೆಯಲ್ಲಿ ಠೇವಣಿ ಇಟ್ಟಿದ್ದರು. ಇದರಲ್ಲಿ 1.18 ಕೋಟಿ ರೂಪಾಯಿ ಕಾಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಂತೋಷ್ ಅವರ ಮಗ ಹಣ ಹಿಂಪಡೆಯಲು ಬ್ಯಾಂಕ್ ಗೆ ಹೋದಾಗ ಖಾತೆಯಲ್ಲಿ ಹಣವೇ ಇಲ್ಲ ಎಂಬುದು ತಿಳಿದುಬಂತು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ಅವರು, "ಮಂಗಳವಾರ ನನ್ನ ಮಗ ಸ್ವಲ್ಪ ಹಣ ಹಿಂಪಡೆಯಲು ಹೋದಾಗ ಖಾತೆಯಲ್ಲಿ ಏನೂ ಉಳಿದಿಲ್ಲ ಎಂದು ಬ್ಯಾಂಕ್ನವರು ಹೇಳಿದರು" ಎಂದಿದ್ದಾರೆ.
►ಒಪ್ಪಿಗೆಯಿಲ್ಲದೆ ಸ್ಥಿರ ಠೇವಣಿಗಳನ್ನು ಹಿಂಪಡೆದ ಆರೋಪ
ಉಳಿತಾಯ ಖಾತೆಗಳು ಮತ್ತು ಸ್ಥಿರ ಠೇವಣಿಗಳೆರಡರಲ್ಲೂ ಈ ಅಕ್ರಮಗಳು ನಡೆದಿದ್ದು, ತಮ್ಮ ಗಮನಕ್ಕೆ ಬಾರದಂತೆ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಅಥವಾ ಅವಧಿ ಮುಗಿಯುವ ಮುನ್ನವೇ FDಗಳನ್ನು ಹಿಂಪಡೆಯಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
The print ವರದಿಯ ಪ್ರಕಾರ, ಬಿರೌಂಡಿ ಗ್ರಾಮದ 78 ವರ್ಷದ ಶ್ರೀಚಂದ್ ಎಂಬುವವರು ಕಳೆದ ವರ್ಷ ಇದೇ ಶಾಖೆಯಲ್ಲಿ 1.16 ಕೋಟಿ ರೂಪಾಯಿಯ ಸ್ಥಿರ ಠೇವಣಿ ಇಟ್ಟಿದ್ದರು. ಠೇವಣಿಯನ್ನು ನವೀಕರಿಸಲು ಅವರು ಮಂಗಳವಾರ ಬ್ಯಾಂಕ್ ಗೆ ಹೋದಾಗ ಹಣವೇ ಇಲ್ಲದಿರುವುದು ಬೆಳಕಿಗೆ ಬಂದಿದೆ.
"ಅಲ್ಲಿ ಏನೂ ಇರಲಿಲ್ಲ. ನನಗೆ ಬ್ಯಾಂಕ್ ಸಿಬ್ಬಂದಿಯ ಮಾತು ನಂಬಲು ಸಾಧ್ಯವಾಗಲಿಲ್ಲ. ಅವರು ಏನೋ ತಪ್ಪು ಮಾಡಿರಬಹುದು ಎಂದುಕೊಂಡೆ. ಮತ್ತೆ ಮತ್ತೆ ಪರಿಶೀಲಿಸುವಂತೆ ಕೇಳಿಕೊಂಡೆ, ಆದರೆ ಹಣವಿಲ್ಲ ಎಂದೇ ಹೇಳಿದರು" ಎಂದು ಶ್ರೀಚಂದ್ ದಿ ಪ್ರಿಂಟ್ ಗೆ ತಿಳಿಸಿದ್ದಾರೆ.
ಗ್ರಾಮದ ಇತರರೊಂದಿಗೆ ಮಾತನಾಡಿದ ನಂತರ, ಹಲವು ಗ್ರಾಹಕರು ಇಂಥದ್ದೇ ಸಮಸ್ಯೆಯನ್ನು ಎದುರಿಸಿರುವುದು ಅವರಿಗೆ ತಿಳಿದುಬಂದಿದೆ. ಇವರಲ್ಲಿ ಹೆಚ್ಚಿನವರು ಜೇವಾರ್ ವಿಮಾನ ನಿಲ್ದಾಣ ಯೋಜನೆಗೆ ಭೂಮಿ ನೀಡಿ ಬಂದ ಪರಿಹಾರದ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದರು.
ಈ ರೈತರು ವರ್ಷಗಳಿಂದ ಕಷ್ಟಪಟ್ಟು ಉಳಿಸಿದ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಶ್ರೀಚಂದ್ ಹೇಳಿದ್ದಾರೆ. "ನನ್ನಂತೆಯೇ ಹತ್ತಾರು ರೈತರು ತಮ್ಮ ಜೀವಮಾನದ ಸಂಪೂರ್ಣ ಉಳಿತಾಯವನ್ನು ಕಳೆದುಕೊಂಡಿರುವುದು ನನಗೆ ತಿಳಿಯಿತು. ನಾವಿಲ್ಲಿಯವರೆಗೆ ಗಳಿಸಿದ ಕಾಸೂ ಇಲ್ಲದಂತಾಗಿದೆ. ನಡೆದ ಘಟನೆಯಿಂದ ನಮಗೆ ತೀವ್ರ ಕೋಪ ಬಂದಿದೆ. ನಾವು ಬ್ಯಾಂಕ್ ಶಾಖೆಯ ಮುಂದೆ ಪ್ರತಿಭಟನೆ ನಡೆಸಿ ಉತ್ತರ ಕೇಳಿದೆವು. ಬಳಿಕ ಈ ವಿಚಾರವನ್ನು ಕಾನೂನುಬದ್ಧವಾಗಿ ಎದುರಿಸಲು ನಿರ್ಧರಿಸಿ ಪೊಲೀಸರನ್ನು ಸಂಪರ್ಕಿಸಿದೆವು. ನಮಗೆ ವಂಚನೆಯಾಗಿದೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಡಿಸೆಂಬರ್ ನಲ್ಲಿ ತಮ್ಮ ಮಕ್ಕಳ ಮದುವೆ ನಿಶ್ಚಯವಾಗಿದ್ದು, ಅದೇ ಹಣವನ್ನು ಬಳಸಲು ಉದ್ದೇಶಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
"ಡಿಸೆಂಬರ್ ನಲ್ಲಿ ನನ್ನ ಮಕ್ಕಳ ಮದುವೆಯಿದೆ. ಆ ಹಣವನ್ನು ಹಿಂಪಡೆದು ಮದುವೆಗೆ ಬಳಸಿಕೊಳ್ಳುವುದು ನನ್ನ ಯೋಜನೆಯಾಗಿತ್ತು. ಆದರೆ ಈಗ ನನಗೆ ಆಘಾತವಾಗಿದೆ. ನನ್ನ ಹಣ ಎಲ್ಲಿದೆ? ಹಣ ಪಾವತಿಯಾದ ಬಗ್ಗೆ ನನಗೆ ಯಾವುದೇ ರಶೀದಿಯೂ ಸಿಕ್ಕಿಲ್ಲ. ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ, ಆದರೆ ನಮಗೆ ಬ್ಯಾಂಕ್ ನಿಂದ ಸ್ಪಷ್ಟ ಉತ್ತರ ಬೇಕು. ಪ್ರತಿಯೊಂದು ನಯಾಪೈಸೆ ವಾಪಸ್ ಸಿಗುವವರೆಗೆ ಯಾವೊಬ್ಬ ರೈತನೂ ಹಿಂದೆ ಸರಿಯುವುದಿಲ್ಲ" ಎಂದು ಶ್ರೀಚಂದ್ ಹೇಳಿದ್ದಾರೆ.
ಮತ್ತೊಬ್ಬ ಗ್ರಾಹಕ ಸಂಜಯ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯಿಸಿ, ತಮ್ಮ ತಂದೆ ಸ್ಥಿರ ಠೇವಣಿಯಲ್ಲಿ ಇಡಲು 10 ಲಕ್ಷ ರೂಪಾಯಿ ನೀಡಿದ್ದರು. ಅದರಲ್ಲಿ ಈಗಾಗಲೇ 8 ಲಕ್ಷ ರೂಪಾಯಿ ಬಳಸಲಾಗಿದ್ದು, ತಮ್ಮ 12 ವರ್ಷದ ಮಗಳ ವೈದ್ಯಕೀಯ ಚಿಕಿತ್ಸೆಗಾಗಿ ಉಳಿದ ಹಣವನ್ನು ಹಿಂಪಡೆಯಲು ಬಯಸಿದ್ದರು ಎಂದು ತಿಳಿಸಿದ್ದಾರೆ.
"MRI ಸ್ಕ್ಯಾನ್ ಮತ್ತು ಔಷಧಿಗಳಿಗೆ 1.5 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ವೈದ್ಯರು ಇತ್ತೀಚೆಗೆ ಹೇಳಿದರು. ನನ್ನ ಖಾತೆಯಲ್ಲಿ 60,000ದಿಂದ 70,000 ರೂಪಾಯಿ ಇತ್ತು, ಹೀಗಾಗಿ FD ಕ್ಲೋಸ್ ಮಾಡೋಣ ಎಂದುಕೊಂಡಿದ್ದೆ. ಆದರೆ ಇಂದು ಬ್ಯಾಂಕ್ ಗೆ ಬಂದು ನೋಡಿದರೆ ಹಣವೇ ಇರಲಿಲ್ಲ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
"ನನ್ನ ಮಗಳಿಗೆ ಚಿಕಿತ್ಸೆ ಕೊಡಿಸುವುದು ಹೇಗೆ?" ಎಂದು ಪ್ರಶ್ನಿಸಿದ ಸಂಜಯ್, "ನಾನೊಬ್ಬ ಬಡವ. ಸಾಲ ಕೇಳಿದರೆ ಜಮೀನಿನ ಪತ್ರಗಳನ್ನು ಕೇಳುತ್ತಾರೆ" ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಗೌತಮ್ ಎಂಬ ರೈತನ ತಂದೆಯ ಖಾತೆಯಲ್ಲಿ 94 ಲಕ್ಷ ರೂಪಾಯಿ ಇತ್ತು. ಆದರೆ 50,000 ರೂಪಾಯಿ ಹಿಂಪಡೆಯಲು ಬ್ಯಾಂಕ್ ಗೆ ಹೋದಾಗ ಖಾತೆಯಲ್ಲಿ ಕೇವಲ 16,000 ರೂಪಾಯಿ ಮಾತ್ರ ಉಳಿದಿರುವುದು ಬೆಳಕಿಗೆ ಬಂದಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
►SMS ಗಳಿಲ್ಲ, ದಾಖಲೆ ನೀಡಲು ವಿಳಂಬ: ಗ್ರಾಹಕರ ಪ್ರಶ್ನೆ
ಈ ಅಕ್ರಮ ವಹಿವಾಟುಗಳು ಹೇಗೆ ನಡೆದಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಮ್ಮ ಗಮನಕ್ಕೆ ಬಾರದಂತೆ ಹಣ ಹೇಗೆ ಮಾಯವಾಯಿತು ಎಂಬ ಬಗ್ಗೆ ಗ್ರಾಹಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಹಿವಾಟಿಗೆ ಸಂಬಂಧಿಸಿದಂತೆ ತಮಗೆ ಯಾವುದೇ ಮೆಸೇಜ್ (SMS alert) ಬಂದಿಲ್ಲ ಎಂದು ಹಲವು ಖಾತೆದಾರರು ಆರೋಪಿಸಿದ್ದಾರೆ. ವಂಚನೆ ನಡೆಸುವ ಮುನ್ನ ಬ್ಯಾಂಕ್ ಸಿಬ್ಬಂದಿಯೇ SMS ಅಲರ್ಟ್ ಗಳನ್ನು ನಿಷ್ಕ್ರಿಯಗೊಳಿಸಿದ್ದರು ಎಂದು ಕೆಲವು ಗ್ರಾಹಕರು ಆರೋಪಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ಈ ಆರೋಪಗಳು ಇನ್ನೂ ದೃಢಪಟ್ಟಿಲ್ಲ.
ತಮ್ಮ ಖಾತೆಯ ದಾಖಲೆಗಳನ್ನು ಪಡೆಯಲು ಹೋದಾಗ ಬ್ಯಾಂಕ್ ನಲ್ಲಿ ಆಡಿಟ್ ನಡೆಯುತ್ತಿದೆ ಎಂದು ಪದೇ ಪದೇ ಹೇಳಲಾಗುತ್ತಿತ್ತು ಎಂದು ಕೆಲವು ಗ್ರಾಹಕರು ತಿಳಿಸಿದ್ದಾರೆ. ಈ ವಿಳಂಬದಿಂದಾಗಿ ತಮ್ಮ ಖಾತೆಯಲ್ಲಿನ ಹಣವನ್ನು ಪರಿಶೀಲಿಸಲು ಮತ್ತು ಅಕ್ರಮವನ್ನು ಬೇಗನೆ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿರುವುದಾಗಿ India Today ವರದಿ ಮಾಡಿದೆ.
ಬ್ಯಾಂಕ್ ನಿಂದ ಮೆಸೇಜ್ಗಳು ಮತ್ತು ಕರೆಗಳು ಬಂದ ನಂತರ ಗ್ರಾಹಕರು ತಮ್ಮ ಖಾತೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. 1 ಲಕ್ಷ ರೂಪಾಯಿಗೂ ಹೆಚ್ಚು ಹಣ ಹಿಂಪಡೆಯಲು 4ರಿಂದ 5 ದಿನಗಳ ಮುಂಚಿತವಾಗಿ ಸೂಚನೆ ನೀಡುವಂತೆ ಬ್ಯಾಂಕ್ ಕೇಳಿಕೊಂಡಿತ್ತು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ತಿಳಿಸಿದೆ.
ಬ್ಯಾಂಕ್ನ ಈ ಕೋರಿಕೆಯಿಂದ ಅನುಮಾನಗೊಂಡ ಗ್ರಾಹಕರೊಬ್ಬರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂತು. ಇದನ್ನು ನೋಡಿ ಇತರರೂ ತಮ್ಮ ಖಾತೆಗಳನ್ನು ಪರಿಶೀಲಿಸಲು ಮುಂದಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ಜನರು ದೂರು ನೀಡಲು ಮುಂದೆ ಬರುತ್ತಿರುವುದರಿಂದ ಒಟ್ಟು ವಂಚನೆಯ ಮೊತ್ತವನ್ನು ಲೆಕ್ಕಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. "ನಿಖರವಾದ ಮೊತ್ತ ಇನ್ನೂ ತಿಳಿದುಬಂದಿಲ್ಲ. ಒಬ್ಬರು ತಮ್ಮ ಖಾತೆಯಲ್ಲಿ ಒಂದು ಕೋಟಿ ಇತ್ತು ಎಂದರೆ, ಮತ್ತೊಬ್ಬರು 10 ಲಕ್ಷ ಇತ್ತು ಎಂದಿದ್ದಾರೆ. ಪ್ರಸ್ತುತ ಇದು ಕೆಲವು ಕೋಟಿ ರೂಪಾಯಿಗಳ ಅಕ್ರಮ ಎಂದು ತಿಳಿದುಬಂದಿದೆ. ಇನ್ನೂ ಹಲವರು ದೂರು ನೀಡಲು ಬರುತ್ತಿದ್ದು, ಇದು ಇನ್ನೊಂದು ವಾರ ಮುಂದುವರಿಯಬಹುದು" ಎಂದು ಅವರು ತಿಳಿಸಿದ್ದಾರೆ.
►FIR ದಾಖಲು, ಉದ್ಯೋಗಿಗಳ ಅಮಾನತು
ಲಭ್ಯವಿರುವ ದೂರುಗಳಿಗೆ ಸಂಬಂಧಿಸಿದಂತೆ ಗೌತಮ್ ಬುದ್ಧ ನಗರ ಪೊಲೀಸರು ಬೀಟಾ-2 ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 316(5)ರ ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಕನಿಷ್ಠ 18 ಜನರು ಪೊಲೀಸರನ್ನು ಸಂಪರ್ಕಿಸಿದ್ದು, ಆ ಹಂತದಲ್ಲೇ ಅಕ್ರಮದ ಮೊತ್ತ 16 ಕೋಟಿ ರೂಪಾಯಿ ದಾಟಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು the print ಗೆ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರ್ಥಿಕ ಅಪರಾಧಗಳ ತನಿಖಾ ವಿಭಾಗವನ್ನು (EOW) ಕರೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಐವರು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದ್ದು, ಶಾಖೆಯ ಇತರ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ.
ಈ ಅಕ್ರಮ ವಹಿವಾಟುಗಳು ಹೇಗೆ ನಡೆದವು, ಗ್ರಾಹಕರ ಅನುಮತಿಯಿಲ್ಲದೆ ಸ್ಥಿರ ಠೇವಣಿಗಳನ್ನು ಕಡಿತಗೊಳಿಸಲಾಗಿದೆಯೇ ಮತ್ತು ಇದರಲ್ಲಿ ಬ್ಯಾಂಕ್ ಉದ್ಯೋಗಿಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ತನಿಖೆ ನಿರ್ಧರಿಸಲಿದೆ. ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆಯೇ ಅಥವಾ ಇತರ ಆಡಳಿತಾತ್ಮಕ ಲೋಪಗಳಿಂದ ಹಣ ಮಾಯವಾಗಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕ್ನ ಮುಖ್ಯ ಪ್ರಬಂಧಕ ರಾಕೇಶ್ ನಿಗಮ್, "ಈ ಅಕ್ರಮ ಯಾವಾಗ ಪ್ರಾರಂಭವಾಯಿತು ಎಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದೊಂದು ದೊಡ್ಡ ವಂಚನೆಯಾಗಿದ್ದು, ತಪ್ಪಿತಸ್ಥರೆಂದು ಕಂಡುಬಂದವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಶಾಖೆಯ ಎಲ್ಲಾ ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ ಹಾಗೂ ಒಂದು ವಾರದೊಳಗೆ ಪ್ರತಿಯೊಬ್ಬರ ಹಣವನ್ನು ವಾಪಸ್ ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಸೌಜನ್ಯ: firstpost.com