Photo Credit : indianexpress.com

ಮೂರು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು 3,200 ಕೋಟಿ ರೂ. ವೆಚ್ಚದ ಸೂರತ್ ಡೈಮಂಡ್ ಬೋರ್ಸ್ (SDB) ಅನ್ನು ಉದ್ಘಾಟಿಸಿ, ಇದನ್ನು ‘ವಿಶ್ವದ ಅತ್ಯುತ್ತಮ ವಜ್ರದ ಕೇಂದ್ರ’ ಹಾಗೂ ಸೂರತ್ಗಾಗಿ ನೀಡಿದ ‘ಮೋದಿ ಗ್ಯಾರಂಟಿ’ ಎಂದು ಬಣ್ಣಿಸಿದ್ದರು.

ಅಮೆರಿಕದ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯಾದ ‘ಪೆಂಟಗನ್’ ಅನ್ನು ಹಿಂದಿಕ್ಕಿ, ‘ಒಂದೇ ಯೋಜನೆಯಲ್ಲಿ ಜಗತ್ತಿನ ಅತಿ ದೊಡ್ಡ ಕಚೇರಿ ಸಂಕೀರ್ಣ’ ಎಂಬ ಹೆಗ್ಗಳಿಕೆಗೆ ಪಾತ್ರವಾದ, ತಲಾ 15 ಮಹಡಿಗಳ 9 ಗೋಪುರಗಳನ್ನು ಹೊಂದಿರುವ ಈ ಬೃಹತ್ ಕಟ್ಟಡವು ಇಂದು ಹೆಚ್ಚಾಗಿ ಖಾಲಿಯಾಗಿದೆ. ತನ್ನ ಹೊಳೆಯುವ ಭರವಸೆಗೆ ಸಾಕ್ಷಿಯಾಗಿ ಕೇವಲ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಮಾತ್ರ ಈ ಕಟ್ಟಡ ವೇದಿಕೆಯಾಗಿದೆ.

ನಗರದ ದಕ್ಷಿಣ ಭಾಗದಲ್ಲಿರುವ ಖಜೋಡ್ ನ ‘ಡ್ರೀಮ್ ಸಿಟಿ’ (DREAM - Diamond Research and Mercantile City) ಯೋಜನೆಯಲ್ಲಿರುವ 4,200 ವಜ್ರದ ವ್ಯಾಪಾರ ಕಚೇರಿಗಳ ಪೈಕಿ ಪ್ರಸ್ತುತ ಕೇವಲ 300ರಷ್ಟು ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಕಳೆದ ವಾರ, ‘ಶ್ರೀ ರಾಮಕೃಷ್ಣ ಎಕ್ಸ್ಪೋರ್ಟ್ಸ್’ ಪ್ರೈವೇಟ್ ಸಂಸ್ಥೆಯ ಮಾಲೀಕ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಗೋವಿಂದಭಾಯಿ ಧೋಲಾಕಿಯಾ ಅವರು, ದೀಪಾವಳಿಯ ಮಾರನೇ ದಿನ ಆರಂಭವಾಗುವ ಗುಜರಾತಿ ಹೊಸ ವರ್ಷದಲ್ಲಿ ತಮ್ಮ ಖಾಲಿ ಕಚೇರಿಗಳಿಗೆ ಸ್ಥಳಾಂತರಗೊಂಡು, SDBಯನ್ನು ‘ವಿಶ್ವದ ಅತ್ಯಂತ ಯಶಸ್ವಿ ವಜ್ರದ ವ್ಯಾಪಾರ ಕೇಂದ್ರ’ವನ್ನಾಗಿ ಮಾಡುವಂತೆ ವ್ಯಾಪಾರಿಗಳಿಗೆ ಭಾವುಕ ಮನವಿ ಮಾಡಿದರು.

ಕಳೆದ ಮೂರು ವರ್ಷಗಳಲ್ಲಿ, ಸೂರತ್ ಮತ್ತು ಮುಂಬೈನ ವಜ್ರದ ಉದ್ಯಮಿಗಳು ಸೂರತ್ ಡೈಮಂಡ್ ಬೋರ್ಸ್‌ ನಲ್ಲಿ ತಮ್ಮ ಕಚೇರಿಗಳನ್ನು ತೆರೆಯುವಂತೆ ಒಲಿಸಲು SDB ಆಡಳಿತ ಮಂಡಳಿಯು ಎಲ್ಲ ಪ್ರಯತ್ನಗಳನ್ನು ನಡೆಸಿದೆ.

ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಾಂಘ್ವಿ ಅವರು, ಸೂರತ್‌ ನಲ್ಲಿ ವಜ್ರದ ವ್ಯಾಪಾರ ಕೇಂದ್ರೀಕೃತವಾಗಿರುವ ಪ್ರಮುಖ ವಾಣಿಜ್ಯ ಪ್ರದೇಶವಾದ ಮಹಿಧರಪುರದ ವ್ಯಾಪಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿ, ತಮ್ಮ ಕಚೇರಿಗಳನ್ನು SDBಗೆ ಸ್ಥಳಾಂತರಿಸುವಂತೆ ಉತ್ತೇಜಿಸಿದ್ದಾರೆ.

ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ಗಣಿಗಾರಿಕೆ, ವ್ಯಾಪಾರ ಮತ್ತು ಮಾರುಕಟ್ಟೆ ಸಂಸ್ಥೆಯಾದ ‘ಡಿ ಬೀರ್ಸ್’ ಗ್ರೂಪ್ ನ ‘ಸೈಟ್ಹೋಲ್ಡರ್’ ಹಾಗೂ ಭಾರತದ ಪ್ರಮುಖ ವಜ್ರ ಉದ್ಯಮ ಸಂಸ್ಥೆ ‘ಕಿರಣ್ ಜೆಮ್ಸ್’ನ ಮಾಲೀಕರಾದ ವಲ್ಲಭ್ಭಾಯಿ ಲಖಾನಿ, ನವೆಂಬರ್ 2023ರಲ್ಲಿ ತಮ್ಮ ಉದ್ಯಮವನ್ನು ಮುಂಬೈನಿಂದ ಸೂರತ್ ಗೆ ಸ್ಥಳಾಂತರಿಸಿದ ಮೊದಲ ವ್ಯಕ್ತಿಯಾಗಿದ್ದರು.

ಅವರು SDBಯ ‘ಎ’ ಬ್ಲಾಕ್‌ ನಲ್ಲಿ 1 ಲಕ್ಷ ಚದರ ಅಡಿ ಜಾಗ ಹಾಗೂ ತಮ್ಮ ಉದ್ಯೋಗಿಗಳಿಗಾಗಿ ಡ್ರೀಮ್ ಸಿಟಿಯಲ್ಲಿ ಫ್ಲಾಟ್ಗಳನ್ನು ಖರೀದಿಸಿದ್ದರು. 2023ರ ಡಿಸೆಂಬರ್ 17ರಂದು SDBಯನ್ನು ಉದ್ಘಾಟಿಸುವಾಗ ಪ್ರಧಾನಿ ಮೋದಿ ಅವರು ಲಖಾನಿ ಅವರ ಈ ಕೊಡುಗೆಯನ್ನು ಸ್ಮರಿಸಿದ್ದರು.

ಆದರೆ, ಲಖಾನಿ ಕೇವಲ ಒಂದೂವರೆ ತಿಂಗಳಲ್ಲೇ ಮತ್ತೆ ಮುಂಬೈಗೆ ಮರಳಿ, ಭಾರತ ಡೈಮಂಡ್ ಬೋರ್ಸ್‌ ನಲ್ಲಿದ್ದ ತಮ್ಮ ಹಳೆಯ ವಜ್ರ ವ್ಯಾಪಾರ ಕಚೇರಿಗಳನ್ನು ಮತ್ತೆ ಆರಂಭಿಸಿದರು.

ಈ ವರ್ಷದ ಜುಲೈನಲ್ಲಿ, ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ, ಸೂರತ್ ನ ನಾಲ್ಕು ಸಂಸ್ಥೆಗಳು SDBಯಲ್ಲಿರುವ ‘ಜೆಮ್ಸ್ ಅಂಡ್ ಜ್ಯುವೆಲ್ಲರಿ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್’ (GJEPC) ಕಚೇರಿಯನ್ನು ಬಳಸಿಕೊಂಡು ಬ್ರಿಟನ್‌ ಗೆ 10 ಮಿಲಿಯನ್ ಡಾಲರ್ ಮೌಲ್ಯದ ತಮ್ಮ ಮೊದಲ ಸರಕನ್ನು ರವಾನಿಸಿದವು.

ಇದಕ್ಕೂ ಮುನ್ನ ಎಪ್ರಿಲ್‌ ನಲ್ಲಿ, ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಯುದ್ಧದ ಹಿನ್ನೆಲೆಯಲ್ಲಿ, ದುಬೈ ಮೂಲದ ‘ಸ್ಟಾರ್ಜೆಮ್ಸ್ ಗ್ರೂಪ್’ ಸೂರತ್ ಬೋರ್ಸ್‌ ನಲ್ಲಿ ಏಳು ದಿನಗಳ ಕಾಲ ಕಚ್ಚಾ ವಜ್ರಗಳ ಹರಾಜು ನಡೆಸಿತ್ತು. ಆದರೆ, ಇದಾದ ನಂತರ ಸೂರತ್ ಬೋರ್ಸ್‌ ನಲ್ಲಿ ಹೇಳಿಕೊಳ್ಳುವಂತಹ ಹೆಚ್ಚಿನ ಚಟುವಟಿಕೆಗಳು ನಡೆದಿಲ್ಲ.

►ಸೂರತ್ ಬೋರ್ಸ್ ಇನ್ನೂ ಚೇತರಿಸಿಕೊಳ್ಳದಿರಲು ಕಾರಣಗಳೇನು?

ಸೂರತ್ ಗಿಂತ ಮುಂಬೈ ಹೆಚ್ಚು ಆಕರ್ಷಕ

SDBಯಲ್ಲಿ ಉನ್ನತ ಮಟ್ಟದ ಸೌಲಭ್ಯಗಳಿದ್ದರೂ, ಮುಂಬೈ ಹೊಂದಿರುವ ಬೃಹತ್ ನಗರದ ವಾತಾವರಣ ಮತ್ತು ಆಕರ್ಷಣೆ ಸೂರತ್‌ ನಲ್ಲಿ ಇಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಂಬೈ ಮೂಲದ ವಜ್ರದ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಜ್ರದ ವ್ಯಾಪಾರದಲ್ಲಿ ಕಂಡುಬಂದಿರುವ ಸಾರ್ವತ್ರಿಕ ಕುಸಿತವನ್ನೂ ಅವರು ಉಲ್ಲೇಖಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿದೆ.

“SDBಯಲ್ಲಿರುವ ಎಲ್ಲ ಸೌಲಭ್ಯಗಳು ಅತ್ಯುತ್ತಮವಾಗಿವೆ ಮತ್ತು ಸೂಕ್ತ ಭದ್ರತೆಯೂ ಇದೆ. ಆದರೆ, ನಗರದಿಂದ ದೂರವಿರುವುದರಿಂದ ಮುಂಬೈನ ಭಾರತ ಡೈಮಂಡ್ ಬೋರ್ಸ್‌ ಗೆ ಹೋಲಿಸಿದರೆ SDBಗೆ ಬರುವವರ ಸಂಖ್ಯೆ ತೀರಾ ಕಡಿಮೆ. ಅಂತರರಾಷ್ಟ್ರೀಯ ಖರೀದಿದಾರರಿಗೆ ಮುಂಬೈನಲ್ಲಿ ಸಿಗುವ ಸೌಕರ್ಯಗಳು ಸೂರತ್‌ ನಲ್ಲಿ ಸಿಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

“ಅಲ್ಲದೆ, ಕಳೆದ ಕೆಲವು ತಿಂಗಳುಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ತುಸು ಚೇತರಿಸಿಕೊಂಡಿದೆಯಾದರೂ, ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ವಜ್ರದ ಉದ್ಯಮವು ಮಂದಗತಿಯಲ್ಲಿದೆ” ಎಂದು ಅವರು ತಿಳಿಸಿದ್ದಾರೆ.

►ವಜ್ರದ ಬೆಲೆಗಳ ಮೇಲಿನ ನಿರಂತರ ಒತ್ತಡ

‘ರಾಪಾಫೋರ್ಟ್ ಪ್ರೈಸ್ ಲಿಸ್ಟ್’ ಪ್ರಕಟಿಸುವ ರಾಪಾಫೋರ್ಟ್ ಗ್ರೂಪ್ ಪ್ರಕಾರ, ಜಾಗತಿಕ ಬೇಡಿಕೆಯ ಕೊರತೆ, ಅಧಿಕ ದಾಸ್ತಾನು ಮತ್ತು ಉತ್ಪಾದನೆ ಹೆಚ್ಚಾದ ಪರಿಣಾಮವಾಗಿ ಪಾಲಿಶ್ ಮಾಡಿದ ನೈಸರ್ಗಿಕ ವಜ್ರಗಳ ಸಗಟು ಬೆಲೆ ಕಳೆದ ಐದು ವರ್ಷಗಳಲ್ಲಿ ಶೇ. 30ರಿಂದ ಶೇ. 50ರಷ್ಟು ಕುಸಿದಿದ್ದು, ಪ್ರಸ್ತುತ ಎರಡು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಕಟ್ ಮತ್ತು ಪಾಲಿಶ್ ಮಾಡಿದ ನೈಸರ್ಗಿಕ ವಜ್ರಗಳ (CPD) ಸರಾಸರಿ ಬೆಲೆ 2020ರಲ್ಲಿ ಕ್ಯಾರಟ್‌ ಗೆ 5,500 ಡಾಲರ್ ಇತ್ತು. ಇದು 2022ರಲ್ಲಿ 5,100 ಡಾಲರ್‌ ಗೆ ಮತ್ತು 2025ರಲ್ಲಿ 4,200 ಡಾಲರ್‌ ಗೆ ಕುಸಿದಿತ್ತು. ನಂತರ, 2026ರ ಮೊದಲ ತ್ರೈಮಾಸಿಕದಲ್ಲಿ 4,456 ಡಾಲರ್‌ ಗೆ ಸ್ವಲ್ಪ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳ (LGD) ಸರಾಸರಿ ಬೆಲೆ ಕ್ಯಾರಟ್‌ ಗೆ ಅನುಕ್ರಮವಾಗಿ 3,410, 1,800, 1,000 ಮತ್ತು 800ರಿಂದ 1,200 ಡಾಲರ್ ನಷ್ಟಿತ್ತು.

ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳನ್ನು ನಿಯಂತ್ರಿತ ಕೃತಕ ವಾತಾವರಣದಲ್ಲಿ ರೂಪಿಸಲಾಗುತ್ತದೆ. ಇವು ನೈಸರ್ಗಿಕ ವಜ್ರಗಳಂತೆಯೇ ಅದೇ ಇಂಗಾಲದ ಸ್ಪಟಿಕ ರಚನೆ, ಆಪ್ಟಿಕಲ್ ಬ್ರಿಲಿಯನ್ಸ್, ಗಡಸುತನ ಹಾಗೂ ರಾಸಾಯನಿಕ ಸಂಯೋಜನೆಯನ್ನು ಹೊಂದಿರುತ್ತವೆ. ಆದರೆ, ಇವುಗಳ ಬೆಲೆ ನೈಸರ್ಗಿಕ ವಜ್ರಗಳಿಗಿಂತ ಅರ್ಧಕ್ಕಿಂತಲೂ ಕಡಿಮೆ ಇರುತ್ತದೆ. ವಿಶ್ವದಲ್ಲೇ ಚೀನಾ ಅತಿ ಹೆಚ್ಚು (ಶೇ. 50ರಿಂದ 70) LGDಗಳನ್ನು ಉತ್ಪಾದಿಸಿದರೆ, ಭಾರತ (ಶೇ. 15ರಿಂದ 25) ಎರಡನೇ ಸ್ಥಾನದಲ್ಲಿದೆ.

ಉನ್ನತ ಗುಣಮಟ್ಟದ ಹಾಗೂ 1 ಕ್ಯಾರಟ್‌ ಗಿಂತ ದೊಡ್ಡದಾದ ನೈಸರ್ಗಿಕ ವಜ್ರಗಳಿಗೆ ಹೋಲಿಸಿದರೆ, ಸಣ್ಣ ಮತ್ತು ಕಡಿಮೆ ಗುಣಮಟ್ಟದ ನೈಸರ್ಗಿಕ ವಜ್ರಗಳ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ರಾಪಾಫೋರ್ಟ್ ಸಂಸ್ಥೆಯ 2026ರ ಜನವರಿ ಮಾರುಕಟ್ಟೆ ವರದಿಯ ಪ್ರಕಾರ, 2025ರ ಕ್ಯಾಲೆಂಡರ್ ವರ್ಷದಲ್ಲಿ 0.3 ಕ್ಯಾರಟ್, 0.5 ಕ್ಯಾರಟ್ ಹಾಗೂ 1 ಕ್ಯಾರಟ್ ನ ನೈಸರ್ಗಿಕ ವಜ್ರಗಳ ಬೆಲೆ ಕ್ರಮವಾಗಿ ಶೇ. 20.3, ಶೇ. 26 ಮತ್ತು ಶೇ. 9.9ರಷ್ಟು ಕುಸಿದಿದ್ದರೆ, 3 ಕ್ಯಾರಟ್ ನೈಸರ್ಗಿಕ ವಜ್ರಗಳ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ.

“LGDಗಳ ಪ್ರಭಾವ, ಚೀನಾದಲ್ಲಿ ಮಂದಗತಿಯಲ್ಲಿರುವ ಬೇಡಿಕೆ, ಅಲ್ರೋಸಾ (ವಿಶ್ವದ ಪ್ರಮುಖ ವಜ್ರ ಗಣಿಗಾರಿಕೆ ಸಂಸ್ಥೆಯಾದ ರಷ್ಯಾ ಮೂಲದ ಆಲ್ರೋಸಾ ಮೇಲೆ ಪಾಶ್ಚಿಮಾತ್ಯ ದೇಶಗಳು ವಿಧಿಸಿದ ನಿರ್ಬಂಧಗಳಿಂದಾಗಿ ಸೂರತ್‌ ನಲ್ಲಿಯೇ ಕಟಿಂಗ್ ಮತ್ತು ಪಾಲಿಶಿಂಗ್ ನಡೆದಿದ್ದರೂ, ರಷ್ಯಾದ ವಜ್ರಗಳನ್ನು ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಾದ ಅಮೆರಿಕದಲ್ಲಿ ಮಾರಾಟ ಮಾಡುವುದು ಕಷ್ಟಕರವಾಯಿತು) ಮೇಲಿನ ನಿರ್ಬಂಧಗಳು ಹಾಗೂ ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಯುದ್ಧಗಳು (ಇವು ಐಷಾರಾಮಿ ವಸ್ತುಗಳ ಮೇಲಿನ ವೆಚ್ಚ ಮತ್ತು ಗ್ರಾಹಕರ ಆತ್ಮವಿಶ್ವಾಸವನ್ನು ಕುಗ್ಗಿಸಿವೆ) ಸೇರಿದಂತೆ ಹಲವು ಕಾರಣಗಳಿಂದ ಜಾಗತಿಕವಾಗಿ ನೈಸರ್ಗಿಕ ವಜ್ರಗಳ ಬೆಲೆ ಕುಸಿದಿದೆ” ಎಂದು ಜಿಜೆಇಪಿಸಿಯ ಗುಜರಾತ್ ವಿಭಾಗದ ಅಧ್ಯಕ್ಷ ಜಯಂತಿಭಾಯಿ ಸವಲಿಯಾ ತಿಳಿಸಿದ್ದಾರೆ.

ಸವಲಿಯಾ ಅವರ ಪ್ರಕಾರ, ಕೋವಿಡ್ ನಂತರ ತಲುಪಿದ್ದ ಗರಿಷ್ಠ ಬೆಲೆಗೆ ಹೋಲಿಸಿದರೆ ನೈಸರ್ಗಿಕ ವಜ್ರಗಳ ಬೆಲೆ ಪ್ರಸ್ತುತ ಶೇ. 30ರಷ್ಟು ಕುಸಿದಿದೆ.

ದೇಶೀಯವಾಗಿ ಚಿನ್ನದ ಬೆಲೆ ಗಗನಕ್ಕೇರಿರುವುದು ಹಾಗೂ ಚಿಲ್ಲರೆ ವ್ಯಾಪಾರಿಗಳು ಅಧಿಕ ಲಾಭದ ಪ್ರಮಾಣವನ್ನು ಇಟ್ಟುಕೊಳ್ಳುತ್ತಿರುವುದರಿಂದ ವಜ್ರಗಳ ಬೆಲೆ ಕುಸಿತವು ಭಾರತದಲ್ಲಿ ಸಿದ್ಧ ವಜ್ರದ ಆಭರಣಗಳ ಬೆಲೆಯಲ್ಲಿ ಅಷ್ಟಾಗಿ ಗೋಚರಿಸುತ್ತಿಲ್ಲ.

►SDB ಹಿಂದಿನ ಬೃಹತ್ ಯೋಜನೆ

ವಿಶ್ವದಲ್ಲೇ ವಜ್ರ ಕಟಿಂಗ್ ಮತ್ತು ಪಾಲಿಶಿಂಗ್ ಮಾಡುವ ಅತಿ ದೊಡ್ಡ ಕೇಂದ್ರ ಸೂರತ್ ಆಗಿದೆ. ಜಾಗತಿಕವಾಗಿ ಶೇ. 95ರಷ್ಟು ಕಚ್ಚಾ ವಜ್ರಗಳ ಸಂಸ್ಕರಣೆ ಇಲ್ಲಿಯೇ ನಡೆಯುತ್ತಿದ್ದು, ಸಾವಿರಾರು ಉತ್ಪಾದನಾ ಘಟಕಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ನಗರದ ಸಾಂಪ್ರದಾಯಿಕ ವಜ್ರದ ಮಾರುಕಟ್ಟೆಯಾದ ಮಹಿಧರಪುರದ ‘ಹೀರಾ ಬಜಾರ್’ನಲ್ಲಿ ರಸ್ತೆಗೆ ಮುಖ ಮಾಡಿರುವ ಸಣ್ಣ ಅಂಗಡಿಗಳಲ್ಲಿಯೇ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಗಳನ್ನು ಪಾಲಿಶ್ ಮಾಡಿ ವ್ಯಾಪಾರ ಮಾಡಲಾಗುತ್ತದೆ. ಯಾವುದೇ ಹೆಚ್ಚಿನ ಭದ್ರತಾ ವ್ಯವಸ್ಥೆಗಳಿಲ್ಲದೆ ವ್ಯಾಪಾರಿಗಳು ಇಲ್ಲಿ ವಹಿವಾಟು ನಡೆಸುತ್ತಾರೆ.

ಅಂತರರಾಷ್ಟ್ರೀಯ ಖರೀದಿದಾರರನ್ನು ಆಕರ್ಷಿಸುವ ಪ್ರಮುಖ ಮತ್ತು ದೊಡ್ಡ ಮಟ್ಟದ ವಜ್ರದ ವಹಿವಾಟುಗಳು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ (BKC) ‘ಭಾರತ್ ಡೈಮಂಡ್ ಬೋರ್ಸ್’ನಲ್ಲಿ ನಡೆಯುತ್ತವೆ. ಅಲ್ಲಿ ಜಾಗದ ಅಭಾವವಿದ್ದು, ವಾಣಿಜ್ಯ ಮಳಿಗೆಗಳ ಬೆಲೆಯೂ ಅತ್ಯಂತ ದುಬಾರಿಯಾಗಿದೆ. ಜೊತೆಗೆ, ಮುಂಬೈನಲ್ಲಿ ವಹಿವಾಟಾಗುವ ಹೆಚ್ಚಿನ ವಜ್ರಗಳು ಸೂರತ್‌ ನಿಂದಲೇ 4ರಿಂದ 5 ಗಂಟೆಗಳ ರೈಲು ಪ್ರಯಾಣದ ಮೂಲಕ ತಲುಪುತ್ತವೆ.

ಡ್ರೀಮ್ ಸಿಟಿಯಲ್ಲಿ 66 ಲಕ್ಷ ಚದರ ಅಡಿಯಲ್ಲಿ ನಿರ್ಮಿಸಲಾದ SDB, ಮುಂಬೈನ ವಜ್ರ ವ್ಯಾಪಾರದ ಮೇಲಿನ ಹೊರೆಯನ್ನು ತಗ್ಗಿಸುವ ಹಾಗೂ ಕಟಿಂಗ್ ಮತ್ತು ಪಾಲಿಶಿಂಗ್ ಕೇಂದ್ರವಾಗಿರುವ ಸೂರತ್‌ ನಲ್ಲಿಯೇ ಆ ವಹಿವಾಟನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿತ್ತು.

ಕಚ್ಚಾ ಮತ್ತು ಪಾಲಿಶ್ ಮಾಡಿದ ವಜ್ರಗಳ ಮಾರಾಟ, ವಜ್ರ ತಯಾರಿಕಾ ಯಂತ್ರೋಪಕರಣಗಳು, ವಜ್ರದ ವಿನ್ಯಾಸಕ್ಕೆ ಬಳಸುವ ತಂತ್ರಾಂಶಗಳು, ವಜ್ರ ಪ್ರಮಾಣೀಕರಣ ಸಂಸ್ಥೆಗಳು ಹಾಗೂ ಕೃತಕ ವಜ್ರಗಳ ಉದ್ಯಮ ಸೇರಿದಂತೆ ವಜ್ರ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಮತ್ತು ಸೌಲಭ್ಯಗಳನ್ನು ಒಂದೇ ಸೂರಿನಡಿ ತರಲು ಸೂರತ್ ಬೋರ್ಸ್ ಯೋಜಿಸಿತ್ತು. ಭಾರತೀಯ ಮತ್ತು ಅಂತರರಾಷ್ಟ್ರೀಯ ಖರೀದಿದಾರರಿಗಾಗಿ ವಜ್ರದ ಆಭರಣಗಳ 27 ಚಿಲ್ಲರೆ ಮಳಿಗೆಗಳನ್ನು ಇಲ್ಲಿ ತೆರೆಯಲು ಯೋಜಿಸಲಾಗಿತ್ತು.

2024ರಲ್ಲಿ, ಸೂರತ್ ಮಹಾನಗರ ಪಾಲಿಕೆಯು ಹೀರಾ ಬಜಾರ್ ನ ಕಾರ್ಮಿಕರನ್ನು 14 ಕಿ.ಮೀ. ದೂರದಲ್ಲಿರುವ SDBಗೆ ಕರೆದೊಯ್ಯಲು ವರಾಚಾ ಮತ್ತು ಮಹಿಧರಪುರದಿಂದ ಖಜೋಡ್ಗೆ ಉಚಿತ ಶಟಲ್ ಬಸ್ ಸೇವೆಯನ್ನು ಪ್ರಾರಂಭಿಸಿತು. ಈ ವರ್ಷದ ಆರಂಭದಲ್ಲಿ ಡ್ರೀಮ್ ಸಿಟಿಗೆ ಮೆಟ್ರೋ ಮಾರ್ಗದ ಪ್ರಾಯೋಗಿಕ ಸಂಚಾರವೂ ನಡೆದಿದೆ.

►SDBಯಲ್ಲಿ ವ್ಯಾಪಾರಿಗಳಿಗಾಗಿ ಕಾಯುವಿಕೆ; ಶೀಘ್ರವೇ ಬರಲಿದ್ದಾರೆಂಬ ಭರವಸೆ

SDBಯಲ್ಲಿರುವ 4,200 ಕಚೇರಿಗಳು 300 ಚದರ ಅಡಿಯ ಸಣ್ಣ ಕೊಠಡಿಗಳಿಂದ ಹಿಡಿದು 75,000 ಚದರ ಅಡಿಯ ಬೃಹತ್ ಸಂಕೀರ್ಣಗಳವರೆಗೆ ವಿವಿಧ ಗಾತ್ರಗಳಲ್ಲಿವೆ. ಪ್ರಸ್ತುತ ಕೇವಲ 300 ಕಚೇರಿಗಳು ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಬೋರ್ಸ್ ನ ಉಪಾಧ್ಯಕ್ಷ ಲಾಲ್ಜಿಭಾಯಿ ಪಟೇಲ್ ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ.

2015ರಲ್ಲಿ ಪ್ರಧಾನಿ ಮೋದಿಯವರ ಹೆಸರಿನ ಸೂಟ್ ಅನ್ನು 4.31 ಕೋಟಿ ರೂ.ಗೆ ಖರೀದಿಸಿ ಸುದ್ದಿಯಾಗಿದ್ದ ‘ಧರ್ಮಾನಂದನ್ ಡೈಮಂಡ್ಸ್’ ಮಾಲೀಕ ಲಾಲ್ಜಿಭಾಯಿ ಪಟೇಲ್ ಮಾತನಾಡಿ, “ಕಳೆದ ಕೆಲವು ವರ್ಷಗಳಿಂದ ವಜ್ರದ ಉದ್ಯಮವು ಮಂದಗತಿಯಲ್ಲಿದೆ. ಆದರೆ, ಈಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಮುಂಬರುವ ವರ್ಷದಲ್ಲಿ ಒಳ್ಳೆಯ ಬೆಳವಣಿಗೆಯಾಗುವ ಭರವಸೆಯಿದೆ” ಎಂದಿದ್ದಾರೆ.

“SDB ನಿರ್ಮಾಣಕ್ಕೆ ಸೂರತ್ ಮತ್ತು ಮುಂಬೈನ ವಜ್ರದ ಉದ್ಯಮದಿಂದ ಅಪಾರ ಬೆಂಬಲ ವ್ಯಕ್ತವಾಗಿತ್ತು. ನಾವು 4,000ಕ್ಕೂ ಹೆಚ್ಚು ಕಚೇರಿಗಳನ್ನು ಮಾರಾಟ ಮಾಡಿದ್ದೇವೆ. ಕಚೇರಿ ಮಾಲೀಕರು ಇತರರು ಆರಂಭಿಸಲಿ ಎಂದು ಕಾಯದೆ ತಮ್ಮ ಕಚೇರಿಗಳನ್ನು ತೆರೆಯಬೇಕು. ಹಲವು ಮಾಲೀಕರು ನಿಯಮಿತವಾಗಿ ನಿರ್ವಹಣಾ ವೆಚ್ಚವನ್ನೂ ಪಾವತಿಸುತ್ತಿದ್ದಾರೆ” ಎಂದು ಪಟೇಲ್ ಹೇಳಿದ್ದಾರೆ.

ಧೋಲಾಕಿಯಾ ಅವರು ಬೋರ್ಸ್ ನ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಅವರನ್ನು ‘ಕುಟುಂಬ’ ಎಂದು ಸಂಬೋಧಿಸಿದ್ದು, “ಕಳೆದ ನಾಲ್ಕು ವರ್ಷಗಳಿಂದ ವಜ್ರದ ಉದ್ಯಮವು ಅತ್ಯಂತ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದು ಸಹಜವಾಗಿಯೇ SDBಯ ಮೇಲೆಯೂ ಪರಿಣಾಮ ಬೀರಿದೆ. ಪ್ರತಿ ಕತ್ತಲ ರಾತ್ರಿಯ ನಂತರ ಹೊಸ ಬೆಳಗು ಮೂಡುವುದು ನಿಶ್ಚಿತ ಎಂಬ ಸಂಪೂರ್ಣ ಭರವಸೆ ನನಗಿದೆ. ಪ್ರಸ್ತುತ ವಜ್ರದ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣುತ್ತಿದ್ದು, ಈ ಸಕಾರಾತ್ಮಕ ಹಾದಿ ಹೀಗೆಯೇ ಮುಂದುವರಿಯಲಿದೆ ಎಂದು ಆಶಿಸುತ್ತೇನೆ” ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ ಸೂರತ್‌ ನಲ್ಲೇ ಕೇಂದ್ರೀಕೃತವಾಗಿರುವ ಕೃತಕ ವಜ್ರಗಳ (LGD) ವ್ಯಾಪಾರಕ್ಕೂ SDB ಸೂಕ್ತ ವೇದಿಕೆಯಾಗಿದೆ ಎಂಬುದನ್ನು ಅವರು ಹೇಳಿದ್ದಾರೆ. “ಇದು ಒಬ್ಬರಿಗೊಬ್ಬರು ಕಾಯುವ ಸಮಯವಲ್ಲ. ಬದಲಿಗೆ ಎಲ್ಲರೂ ಕೈಜೋಡಿಸಿ ಒಟ್ಟಿಗೆ ಮುನ್ನಡೆಯುವ ಸಮಯ” ಎಂದು ಅವರು ಕರೆ ನೀಡಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor