×
Ad

ಬೀನಾ ದಾಸ್ ಎಂಬ ಕ್ರಾಂತಿಯ ದೀವಟಿಗೆ ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!

Update: 2026-01-05 11:01 IST

ಕ್ಷಮೆ ಯಾಚಿಸುವುದು ಬಿಡಿ; ಸ್ವಾತಂತ್ರ್ಯ ಹೋರಾಟಗಾರರ

ಪಿಂಚಣಿಯನ್ನೂ ನಿರಾಕರಿಸಿದ್ದರು

ಫೆಬ್ರವರಿ, 6, 1932. ಕಲ್ಕತ್ತಾ ವಿಶ್ವವಿದ್ಯಾಲಯದ ಘಟಿಕೋತ್ಸವ. ಉಪಕುಲಪತಿ ಹಸನ್ ಸುಹ್ರವರ್ದಿ ಮತ್ತು ಬಂಗಾಳದ ಗವರ್ನರ್ ಸ್ಟಾನ್ಲಿ ಜಾಕ್ಸನ್ ವೇದಿಕೆ ಮೇಲೆ ಆಸೀನರಾಗಿದ್ದರು. ಕೂತಿದ್ದ ವಿದ್ಯಾರ್ಥಿಗಳ ಪೈಕಿ 21ರ ವಯಸ್ಸಿನ ತರುಣಿಯೊಬ್ಬಳು ಎದ್ದು, ಮರೆಮಾಚಿದ್ದ ರಿವಾಲ್ವರ್ ತೆಗೆದು ಏಕಾಏಕಿ ಗವರ್ನರ್ ಜಾಕ್ಸನ್‌ಗೆ ಗುಂಡು ಹಾರಿಸಿದಳು. ಐದೂ ಗುಂಡೂ ಗುರಿ ತಪ್ಪಿತ್ತು. ಮೊದಲನೆ ಗುಂಡಿಗೇ ಜಾಕ್ಸನ್ ತಪ್ಪಿಸಿಕೊಂಡು ವೇದಿಕೆಯಲ್ಲಿ ಬಗ್ಗಿ ಕೂತು ಗುಂಡೇಟು ತಪ್ಪಿಸಿಕೊಂಡ. ಈ ವೇಳೆಗೆ ಭದ್ರತಾ ಪಡೆಯವರು ಈ ತರುಣಿಯನ್ನು ವಶಕ್ಕೆ ಪಡೆದರು.

ಶಾಂತವಾಗಿದ್ದ ಆಕೆ, ಕೋರ್ಟಲ್ಲಿ ಈ ಕೆಳಗಿನ ಹೇಳಿಕೆ ನೀಡಿದರು.

‘‘ಈ ನಿರಂಕುಶ ಅಧಿಕಾರದ ವಿರುದ್ಧ ಹೋರಾಡುತ್ತಾ ಸತ್ತರೂ ಪರವಾಗಿಲ್ಲ ಎಂಬುದು ನನ್ನ ಗುರಿಯಾಗಿತ್ತು. ಈ ನಿರಂಕುಶ ಪ್ರಭುತ್ವ ನನ್ನ ದೇಶವನ್ನು ನಿರಂತರ ಅಡಿಯಾಳಾಗಿ ಇಟ್ಟುಕೊಂಡಿದೆ. ಇಷ್ಟು ದಯನೀಯವಾಗಿ ಬದುಕುತ್ತಿರುವ ಈ ದೇಶದಲ್ಲಿ ಹೋರಾಡುವುದೇ ಸರಿಯಾದ ಹಾದಿ. ವಿದೇಶಿ ಆಡಳಿತದ ನೊಗದಲ್ಲಿ ಬಳಲುತ್ತಿರುವ ಈ ದೇಶದ ಪರವಾಗಿ ಈ ವಿದೇಶಿ ಸರಕಾರದ ವಿರುದ್ಧ ಜೀವವನ್ನೇ ಪಣವೊಡ್ಡಿ ಹೋರಾಡಬೇಕಿದೆ. ಭಾರತದ ಒಬ್ಬ ಮಗಳು ಮತ್ತು ಇಂಗ್ಲೆಂಡಿನ ಒಬ್ಬ ಮಗನ ಸಾವು ಭಾರತ ಮತ್ತು ಇಂಗ್ಲೆಂಡ್‌ಗಳೆರಡನ್ನೂ ಎಚ್ಚರಗೊಳಿಸೀತು ಎಂದು ನಂಬಿದ್ದೆ’’

ಈ ಧೀರೋದಾತ್ತ ಆಕ್ರಮಣ ಮಾಡಿದ ತರುಣಿ ಬೀನಾ ದಾಸ್.

ಬೇಣೀ ಮಾಧಬ್ ದಾಸ್ ಅವರ ಐದು ಮಗಳಂದಿರಲ್ಲಿ ಬೀನಾ ದಾಸ್ ಕಿರಿಯವರು. ಅವರ ಅಕ್ಕ ಕಲ್ಯಾಣಿ ಕಲ್ಕತ್ತಾದಲ್ಲಿ ಛಾತ್ರಿ ಸಂಘ ( ಮಹಿಳಾ ಕ್ರಾಂತಿಕಾರಿ ತಂಡ) ವನ್ನು ಸ್ಥಾಪಿಸಿದವರು. ಕಲ್ಯಾಣಿ 1921ರಲ್ಲೇ ಅಸಹಕಾರ ಚಳವಳಿಯಲ್ಲಿ ಜೈಲು ವಾಸ ಅನುಭವಿಸಿದ್ದರು.

ಕಾಲೇಜು ಸೇರಿದಾಗ ಕ್ರಾಂತಿಕಾರಿ ತಂಡದ ಒಡನಾಟ ಬೀನಾ ದಾಸ್ ಅವರಿಗೆ ದಕ್ಕಿತು. ನಿರ್ದಿಷ್ಟ ಗುರಿಯೇನೂ ಇಲ್ಲದಾಗ ಆಕೆಯ ಕ್ರಾಂತಿಯ ಸಂಗಾತಿ ‘‘ಏನಾದರೂ ಗಂಭೀರವಾಗಿ ಮಾಡಬೇಕು ಅಂತ ಇದ್ದೀಯಾ? ಹಾಗಿದ್ದರೆ ತಯಾರಾಗು’’ ಎಂದಿದ್ದರು. ಜಾಕ್ಸನ್ ಹತ್ಯೆಯ ನಿರ್ಧಾರ ಆಗಿದ್ದು ಹೀಗೆ.

ಇನ್ನೊಬ್ಬ ಕ್ರಾಂತಿಕಾರಿ ಕಮಲ್ ದಾಸ್ ಗುಪ್ತಾ ಬೀನಾಗೆ ರಿವಾಲ್ವರ್ ನೀಡಿದ್ದರು. ನನಗೆ ಫೈರಿಂಗ್ ಪ್ರಾಕ್ಟೀಸ್ ಇಲ್ಲ ಎಂದು ಬೀನಾ ಅಳುಕು ತೋರಿದ್ದರು. ಪರವಾಗಿಲ್ಲ, ಎಂದು ಕಮಲಾ ದಾಸ್ ಗುಪ್ತಾ ಧೈರ್ಯ ತುಂಬಿದ್ದರು.

ಬೀನಾ ದಾಸ್ ಅವರ (ವಿಫಲ) ಯತ್ನ ಬ್ರಿಟಿಷ್ ಸರಕಾರವನ್ನೇ ಅಲ್ಲಾಡಿಸಿತ್ತು. ಆ ಕಾಲದ ಪತ್ರಿಕೆಗಳಲ್ಲಿ ಈ ಹತ್ಯಾಯತ್ನದ ವಿಪುಲ ವಿವರಗಳಿದ್ದವು. ಈ ಕೊಲೆ ಯತ್ನಕ್ಕೆ ಬ್ರಿಟಿಷ್ ಸರಕಾರ ಬೀನಾ ದಾಸ್‌ಗೆ 9 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿತು. ಆಕೆ ವಿಫಲವಾಗಿರಬಹುದು, ಆದರೆ ಈ ಯತ್ನವೇ ಅಭೂತಪೂರ್ವ ಸ್ಫೂರ್ತಿಯನ್ನು ಸೃಷ್ಟಿ ಮಾಡಿತು ಎಂದು ದಾಸ್ ಗುಪ್ತಾ ಹೇಳುತ್ತಾರೆ.

ಜೈಲು ವಾಸದಲ್ಲಿ ಬೀನಾ ಅವರೊಂದಿಗೆ ಹಲವಾರು ಮಹಿಳಾ ಕ್ರಾಂತಿಕಾರಿಗಳೂ ಇದ್ದರು. ಆಕೆಯ ಅಕ್ಕ ಕಲ್ಯಾಣಿಯೂ ಇದೇ ಜೈಲಲ್ಲಿದ್ದರು.

ವಿಚಾರಣೆ ವೇಳೆ ರಿವಾಲ್ವರ್‌ನ ಮೂಲ ಹೇಳಿದರೂ ಸಾಕು ನಿಮ್ಮ ಮಗಳು ಬಿಡುಗಡೆಯಾಗುತ್ತಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬ ಬೀನಾ ಅವರ ತಂದೆಯಲ್ಲಿ ಹೇಳಿದ್ದರು. ಅದನ್ನು ಆಕೆಯಲ್ಲಿ ಆಕೆಯ ತಂದೆ ಹೇಳಿದ್ದರು.

ಪೊಲೀಸರಲ್ಲಿ ಬೀನಾ ದಾಸ್, ‘‘ದ್ರೋಹ ಬಗೆಯುವುದನ್ನು ನಮ್ಮ ಅಪ್ಪ ನನಗೆ ಹೇಳಿಕೊಡಲಿಲ್ಲ’’ಎಂದಿದ್ದರು! ಬೀನಾ ದಾಸ್ ತಂದೆ ಒಂದಷ್ಟು ಭಾವವಶರಾಗುತ್ತಿದ್ದರೂ ಆಕೆಯ ತಾಯಿ ಮಾತ್ರ ಸ್ವಾತಂತ್ರ್ಯಕ್ಕಾಗಿ ನನ್ನ ಮಗಳಂದಿರು ಜೈಲು ಸೇರಿರುವುದು ನನಗೆ ತೃಪ್ತಿ ತಂದಿದೆ ಎಂದಿದ್ದರು.

9 ವರ್ಷಗಳ ಕಠಿಣ ಜೈಲು ಶಿಕ್ಷೆ ಮುಗಿಸಿ ಹೊರಬಂದ ಬೀನಾ ದಾಸ್ ಮತ್ತೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದರು.

ಜೈಲಿನಲ್ಲಿದ್ದಾಗಲೇ ಗಾಂಧಿಯವರನ್ನು ಭೇಟಿಯಾಗಿದ್ದ ಬೀನಾ ಅಹಿಂಸಾ ವಿಧಾನದ ಬಗ್ಗೆ ತನಗಿರುವ ಆಕ್ಷೇಪಗಳ ಬಗ್ಗೆ ಚರ್ಚಿಸಿದ್ದರು. 1945ರಲ್ಲಿ ಬೀನಾ ಅವರ ಬಿಡುಗಡೆಯಾಯಿತು. ದೇಶ ವಿಭಜನೆಯ ಸಂದರ್ಭದಲ್ಲಿ ಕಲ್ಕತ್ತಾದಲ್ಲಿ ಭುಗಿಲೆದ್ದ ಕೋಮು ದಳ್ಳುರಿಯನ್ನು ತಣಿಸಲು ಬಾಪೂ ಬಂಗಾಳದುದ್ದಕ್ಕೂ ಓಡಾಡಿದ್ದರು. ನೌಖಾಲಿಯಲ್ಲಿ ಬೀನಾ ದಾಸ್, ಗಾಂಧಿ ಜೊತೆ ಇದ್ದು ಪರಿಹಾರ ಕಾರ್ಯಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಒಂದು ಅವಧಿಗೆ ಬಂಗಾಳದ ಶಾಸಕಿಯಾಗಿದ್ದ ಬೀನಾ ದಾಸ್ ತಮ್ಮಂತೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ರಾಜಕೀಯ ಕಾರ್ಯಕರ್ತ ಜತೀಶ್ ಭೌಮಿಕ್ ಅವರನ್ನು ವಿವಾಹವಾದರು.

ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಲಿಚ್ಛಿಸಿದ್ದರೂ ಬೀನಾ ದಾಸ್ ಗೆ ಶೈಕ್ಷಣಿಕ ಅರ್ಹತೆಯ ಪದವಿಯೇ ಇರಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಸರಿಯಾದ ಕೆಲಸವೂ ದೊರಕಲಿಲ್ಲ. ಬೀನಾ ದಾಸ್ ಅವರ ಸಮಾಜ ಸೇವೆಗೆ 1960ರಲ್ಲಿ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನೂ ಬೀನಾ ದಾಸ್ ನಿರಾಕರಿಸಿದ್ದರು.

ತಮ್ಮ ಪತಿಯ ಸಾವಿನ ಬಳಿಕ ಸಾರ್ವಜನಿಕ ಜೀವನದಿಂದ ಸಂಪೂರ್ಣ ದೂರವುಳಿದ ಬೀನಾ ದಾಸ್ ತಮ್ಮ ಕೊನೆಯ ದಿನಗಳನ್ನು ಹೃಷಿಕೇಶದಲ್ಲಿ ಏಕಾಂಗಿಯಾಗಿ ಕಳೆದರು. ಕೊನೆಯ ವರುಷಗಳಲ್ಲಿ ಮರೆವಿನ ಕಾಯಿಲೆಯೂ ಅವರನ್ನು ಬಾಧಿಸಿತ್ತು ಎಂಬ ಉಲ್ಲೇಖಗಳಿವೆ. 1986ರಲ್ಲಿ ಬೀನಾ ದಾಸ್ ನಿಧನ ಹೊಂದಿದರು. ಅತ್ಯಂತ ವಿಷಾದದ ಸಂಗತಿಯೆಂದರೆ ಹೃಷಿಕೇಶದ ಬೀದಿಯೊಂದರಲ್ಲಿ ಆಕೆ ಕೊನೆಯುಸಿರೆಳೆದು ದಿನವೊಂದು ಕಳೆದ ಮೇಲೆಯೇ ಸಾರ್ವಜನಿಕರಿಗೆ ಈ ಸಾವು ಗೊತ್ತಾಗಿದ್ದು.

ಬೀನಾ ದಾಸ್ ಅವರು ಬರೆದ ತಮ್ಮ ಆತ್ಮ ಚರಿತ್ರೆ ಸ್ವಾತಂತ್ರ್ಯ ಹೋರಾಟದ ಬಹುಮುಖ್ಯ ದಾಖಲೆಗಳಲ್ಲೊಂದು. ಆತ್ಮ ಚರಿತ್ರೆ ಬರೆದ ಬಂಗಾಳದ ಎರಡನೇ ಮಹಿಳೆ ಬೀನಾ ದಾಸ್. ಆಕೆಯ ಅಕ್ಕ ಕಲ್ಯಾಣಿ ಈ ಸ್ಮತಿಗಳನ್ನು ಪ್ರಕಟಿಸಿದ್ದರು.

ಕಾಂಗ್ರೆಸ್‌ನ ಬಗ್ಗೆ ಭಿನ್ನಾಭಿಪ್ರಾಯ ತಳೆದು ಬೀನಾ ದಾಸ್ ದೂರವುಳಿದಿದ್ದರು. ಆದರೆ ಕೊನೆಯವರೆಗೂ ಕಮ್ಯುನಿಸಂ ಒಂದೇ ಈ ದೇಶಕ್ಕೆ ಪರಿಹಾರದ ದಾರಿ ತೋರಬಲ್ಲುದು ಎನ್ನುತ್ತಿದ್ದರು. ಬೀನಾದಾಸ್ ಎಡ ಪಕ್ಷವನ್ನೂ ಸೇರಿರಲಿಲ್ಲ.

ಬೀನಾ ದಾಸ್ ಮತ್ತು ಇನ್ನಿತರ ಮಹಿಳಾ ಕ್ರಾಂತಿಕಾರಿಗಳು ಮುಖ್ಯವಾಗುವುದು ಆ ಕಾಲದ ಪುರುಷ ಪ್ರಧಾನ ಸಮಾಜದ ಅದೃಶ್ಯ ಸಂಕೋಲೆಗಳನ್ನು ಭೇದಿಸಿದ್ದಕ್ಕೆ. ಮೇಲ್ಜಾತಿ/ ಮೇಲ್ವರ್ಗಕ್ಕೆ ಸೇರಿದ ಈ ತರುಣಿಯರು ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಸಾಮಾಜಿಕ ಹಿಂಜರಿಕೆಯ ಭಯ ಮೀರಿ ಧುಮುಕಿದ್ದರು.

ಸ್ವತಃ ತನ್ನ ಅಕ್ಕ ಅಷ್ಟೇ ಅಲ್ಲ ಅಪ್ಪನೂ ತನ್ನ ಬಗ್ಗೆ ಹೆಮ್ಮೆ ತಾಳಿದ್ದರು ಎಂಬುದು ಬೀನಾ ಅವರಿಗೆ ತೃಪ್ತಿ ತಂದಿತ್ತು. ಬೀನಾ ಅಮ್ಮನಂತೂ ಇಂತಹ ಕ್ರಾಂತಿಯ ರಾಜಕೀಯಕ್ಕಿಳಿದ ತರುಣಿಯರಿಗಾಗಿಯೇ ಒಂದು ಪುಟ್ಟ ಹಾಸ್ಟೆಲ್ ತೆರೆದಿದ್ದರು. ಕ್ರಾಂತಿಕಾರಿ

ಸಾಹಿತ್ಯ, ಕರಪತ್ರ, ಶಸ್ತ್ರಾಸ್ತ್ರಗಳ ಗುಪ್ತ ಸಂಗ್ರಹ ಇವೆಲ್ಲಾ ಇಲ್ಲಿ ಸಲೀಸಾಗಿತ್ತು

ಬೀನಾ ದಾಸ್ ಕ್ಷಮೆಯನ್ನೂ ಯಾಚಿಸಲಿಲ್ಲ; ಬಿಡುಗಡೆಯಾದ ಬಳಿಕ ಮತ್ತೆ ಹೋರಾಟಕ್ಕೆ ಧುಮುಕಿದರು. ಸ್ವಾತಂತ್ರ್ಯ ದೊರೆತ ಬಳಿಕ ನಮ್ಮ ಸರಕಾರ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನೂ ನಿರಾಕರಿಸಿ ಘನತೆಯಿಂದ ಬಾಳಿದ ಅಪೂರ್ವ ಚೇತನ ಬೀನಾ ದಾಸ್.

ಅಂದಹಾಗೆ ಪ್ರೀತಿಲತಾ ವಡ್ಡೇದಾರ್ ಮತ್ತು ಬೀನಾ ದಾಸ್ ಅವರ ಪದವಿ ಸರ್ಟಿಫಿಕೇಟುಗಳನ್ನು ಕಲ್ಕತ್ತಾ ವಿಶ್ವವಿದ್ಯಾನಿಲಯ ಆ ಕಾಲದಲ್ಲಿ ಅಮಾನತಿನಲ್ಲಿಟ್ಟಿತ್ತು. 2012ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯ ಮರಣೋತ್ತರವಾಗಿ ಈ ಇಬ್ಬರು ಕ್ರಾಂತಿಕಾರಿಗಳಿಗೆ ಪದವಿ ಪ್ರದಾನ ಮಾಡಿತು!!

ಇನ್ನೊಂದು ವಿವರ: ಈ ಜಾಕ್ಸನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನಾಗಿ 20 ಟೆಸ್ಟ್ ಆಡಿದ್ದ! ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ತಂಡದ ನಾಯಕನಾಗಿದ್ದ! ಚರ್ಚಿಲ್ ಗೆಳೆಯನಾಗಿ ಕನ್ಸರ್ವೇಟಿವ್ ಪಕ್ಷದ ಸಂಸದನಾಗಿ ಬಳಿಕ ಬಂಗಾಳದ ಗವರ್ನರ್ ಆಗಿ ನಿಯುಕ್ತಿಗೊಂಡಿದ್ದ!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News