ಕೊನೆಗೂ ಯಡಿಯೂರಪ್ಪ ಪುತ್ರನಿಗೇ ಮಣೆ ಹಾಕಿದ ಬಿಜೆಪಿ
ಕಡೆಗೂ ಯಡಿಯೂರಪ್ಪನವರ ಬಲದ ಮುಂದೆ ಬಿಜೆಪಿ ಹೈಕಮಾಂಡ್ ಮಣಿದಿದೆ. ಯಡಿಯೂರಪ್ಪನವರನ್ನು ಅಷ್ಟು ಸುಲಭವಾಗಿ ಬಿಜೆಪಿ ಕಡೆಗಣಿಸಲಾಗದು ಎಂಬುದೂ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಅವರ ಪುತ್ರ ಬಿ ವೈ ವಿಜಯೇಂದ್ರ ನೇಮಕವಾಗಿದೆ.
ಮೊದಲ ಬಾರಿ ಶಾಸಕರಾಗಿ ಶಿಕಾರಿಪುರದಿಂದ ಆಯ್ಕೆಯಾಗಿದ್ದ ವಿಜಯೇಂದ್ರ ಅವರಿಗೆ ಈ ಮಹತ್ವದ ಹುದ್ದೆ ಒಲಿದಿದ್ದು, ಈ ಮೂಲಕ ಅವರ ರಾಜಕೀಯ ಬದುಕಿಗೆ ಮಹತ್ವದ ತಿರುವು ಸಿಕ್ಕಂತಾಗಿದೆ. ಈ ಮೂಲಕ ಆರೆಸ್ಸೆಸ್ ಕೇಂದ್ರಿತವಾದ ಬ್ರಾಹ್ಮಣ್ಯ ಒಳಸಂಚುಗಳ ವಿರುದ್ಧ ಒಂದು ಹಂತದಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ತನ್ನ ಪುತ್ರನ ಮೇಲಿನ ಭ್ರಷ್ಟಾಚಾರ ಆರೋಪವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಅತ್ಯಂತ ಅವಮಾನಕರ ರೀತಿಯಲ್ಲಿ ಕೆಳಗಿಳಿಸಿದ್ದ ಬಿಜೆಪಿಯ ವರಿಷ್ಠರ ವಿರುದ್ಧ ಅದೇ ಪುತ್ರನನ್ನು ರಾಜ್ಯಾಧ್ಯಕ್ಷನನ್ನಾಗಿಸುವ ಮೂಲಕ ಅಷ್ಟೇ ತೀವ್ರವಾಗಿ ಸೇಡು ತೀರಿಸಿಕೊಂಡಿದ್ದಾರೆ.
‘ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಘೋಷಣೆಯನ್ನು’ ಸಂಭ್ರಮಿಸಿದ್ದ ಹಲವು ನಾಯಕರು ವರಿಷ್ಠರ ಈ ಅನಿರೀಕ್ಷಿತ ತೀರ್ಮಾನದಿಂದ ಇಂಗು ತಿಂದ ಮಂಗನಂತಾಗಿದ್ದಾರೆ. ಹಿರಿಯ ನಾಯಕರನ್ನು ಹೊರಗಿಟ್ಟು, ಕಟ್ಟರ್ ಹಿಂದುತ್ವವಾದಿಗಳ ನೇತೃತ್ವದಲ್ಲಿ ಬಿಜೆಪಿಯನ್ನು ಹೊಸದಾಗಿ ಕಟ್ಟುವ ಆರೆಸ್ಸೆಸ್‌ನ ಯೋಜನೆಗೆ ಸದ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ಅವರ ನೇಮಕವಾಗಿರುವ ಈ ಸಂದರ್ಭವನ್ನು ಗಮನಿಸುವಾಗ ಎದ್ದು ಕಾಣುವ ಸಂಗತಿಗಳು ಎರಡು. ಮೊದಲನೆಯದು, ಬಿಎಲ್ ಸಂತೋಷ್ ಥರದ ಯಡಿಯೂರಪ್ಪ ವಿರೋಧಿಗಳು ಎಷ್ಟೇ ಹೆಣಗಾಡಿದರೂ ಯಡಿಯೂರಪ್ಪನವರನ್ನು ಬದಿಗೆ ಸರಿಸಿದ್ದೇವೆ ಎಂದು ಬೀಗಿದರೂ, ಕರ್ನಾಟಕ ಬಿಜೆಪಿಗೆ ಮಾತ್ರ ಯಡಿಯೂರಪ್ಪ ಅನಿವಾರ್ಯತೆ ಇದ್ದೇ ಇದೆ.
ಎರಡನೆಯದು, ಕುಟುಂಬ ರಾಜಕಾರಣಕ್ಕೆ ಬೆಂಬಲವಿಲ್ಲ , ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದೆಲ್ಲ ಹೇಳುತ್ತ ಸಂಪೂರ್ಣ ಹೊಸ ನಾಯಕತ್ವದ ಬಗ್ಗೆ ದೊಡ್ಡ ದೊಡ್ಡ ಮಾತನಾಡುತ್ತಿದ್ದ ಬಿಜೆಪಿಗೆ ಅದನ್ನು ಸಾಧಿಸುವುದು ಕೂಡ ಆಗಲಿಲ್ಲ. ಅಂದರೆ ರಾಜ್ಯದಲ್ಲಿ ಬಿಜೆಪಿಯ ಅಸಹಾಯಕತೆ ಹೊರಗಿನವರ ಊಹೆಗಿಂತಲೂ ಬಹಳ ಜಾಸ್ತಿಯೇ ಇದೆ.
ಯಡಿಯೂರಪ್ಪನವರನ್ನು ಆಗಲೇ ಬದಿಗೆ ಸರಿಸಿದ್ದ ಬಿಜೆಪಿ ಅದರಿಂದ ತಿಂದ ಏಟು ಸಣ್ಣದಲ್ಲ. ಆದರೂ ಮತ್ತೆ ಅವರೆದುರು ಮಣಿಯಬಾರದು ಎಂಬ ಹಠಕ್ಕೆ ಅದು ಬಿದ್ದಂತಿತ್ತು. ಹತ್ತು ಹಲವು ಬಾರಿ ಅವರ ಬದಲಿಗೆ ಹೊಸ ನಾಯಕತ್ವ ರೂಪಿಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ ಪ್ರತಿ ಬಾರಿ ವೈಫಲ್ಯ ಎದುರಿಸಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡುವ ಪ್ರಯತ್ನ ಢಾಳಾಗಿ ಎದ್ದು ಕಂಡಿತು. ಚುನಾವಣೆಯ ಪ್ರಚಾರ ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ನಡೆದಿತ್ತು. ರಾಜ್ಯದ ಎಲ್ಲ ಹಿರಿಯರನ್ನು ಬದಿಗೆ ಸರಿಸಿ, ಮೋದಿಯ ಹೆಸರಿನಲ್ಲಿ ಚುನಾವಣೆಯನ್ನು ಗೆದ್ದು ಹಿಂದುತ್ವವಾದಿ ಸರಕಾರವೊಂದನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರುವುದು ಆರೆಸ್ಸೆಸ್‌ನ ಯೋಜನೆಯಾಗಿತ್ತು.ಆದರೆ ಆ ಯೋಜನೆಗೆ ಅತ್ಯಂತ ಹೀನಾಯ ರೀತಿಯಲ್ಲಿ ಹಿನ್ನಡೆಯಾಯಿತು.
ಆದರೆ ಲೋಕಸಭೆ ಚುನಾವಣೆ ಎದುರಿಗಿರುವಾಗ ಅವರನ್ನು ಬದಿಗಿಟ್ಟು ನಡೆಯುತ್ತೇವೆಂಬುದು ಮೂರ್ಖತನವಾದೀತು ಎಂದು ತಮ್ಮನ್ನು ತಾವೇ ಚಾಣಾಕ್ಷರು ಎಂದುಕೊಂಡಿರುವ ದೆಹಲಿ ವರಿಷ್ಠರಿಗೆ ಹೊಳೆದ ಹಾಗಿದೆ. ಸಂತೋಷ್ ಅಂಥವರ ಮಾತು ಕೇಳಿಕೊಂಡು ಚುನಾವಣೆಯಲ್ಲಿ ಮುಖ ಕೆಡಿಸಿಕೊಂಡ ಕೆಟ್ಟ ಅನುಭವವೂ ಆಗಲೇ ಆಗಿರುವುದರಿಂದ ರಾತ್ರಿ ಕಂಡ ಬಾವಿಗೆ ಹಗಲು ಬೀಳುವ ಯಡವಟ್ಟು ಮಾಡಿಕೊಳ್ಳುವುದು ಬೇಡ ಎನ್ನಿಸಿರಬೇಕು.
ಏನೇನೆಲ್ಲ ಕಸರತ್ತು ಮಾಡಿದರೂ ಬಿಜೆಪಿ ವರಿಷ್ಠರಿಗೆ ರಾಜ್ಯದಲ್ಲಿ ಬಿ ಎಸ್ ವೈ ಯನ್ನು ಬಿಟ್ಟು ಆಟ ನಡೆಯೋದಿಲ್ಲ ಎಂಬುದು ಖಚಿತವಾಗಿದೆ. ಹಾಗಾಗಿಯೇ, ಒಂದಿಷ್ಟೂ ಮನಸ್ಸಿಲ್ಲದಿದ್ದರೂ ಕೊನೆಗೂ ಬಿ ಎಸ್ ವೈ ಪುತ್ರನಿಗೇ ವರಿಷ್ಠರು ಮಣೆ ಹಾಕಬೇಕಾಯಿತು. ಅವರನ್ನು ಬದಿಗೆ ಸರಿಸಿ ಸಂಪೂರ್ಣ ಹೊಸ ನಾಯಕತ್ವ ರೂಪಿಸುವ ಬಿಜೆಪಿ ವರಿಷ್ಠರ ಯೋಜನೆ ಸಂಪೂರ್ಣ ಫೇಲ್ ಆಗಿದೆ. ಕೊನೆಗೂ ಅವರೇ ಗತಿ ಎಂಬಂತಾಗಿದೆ.
ಅಂದರೆ ಬಿಜೆಪಿ ಎಲ್ಲಿ ನಿಂತಿತ್ತೋ ಅಲ್ಲೇ ನಿಂತಿದೆ. ಏನೋ ಯಾರೂ ನಿರೀಕ್ಷಿಸಿರದ ಬಗೆಯಲ್ಲಿ ನಾಯಕತ್ವವನ್ನು ರಾಜ್ಯ ಬಿಜೆಪಿಯಲ್ಲಿ ತರಬೇಕು ಎಂದುಕೊಂಡವರು ಊರೆಲ್ಲ ಸುತ್ತಿಬಂದು ಕಡೆಗೆ ಯಡಿಯೂರಪ್ಪ ಪುತ್ರನ ಕೈಗೇ ಪಕ್ಷವನ್ನು ಒಪ್ಪಿಸಬೇಕಾಗಿ ಬಂದಿದೆ. ಇಷ್ಟು ಸಮಯ ಕಳೆದಿದ್ದು ವ್ಯರ್ಥವಾಗಿದೆ.
ಇನ್ನು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಲಿಂಗಾಯತ ಸ್ವಾಮೀಜಿಗಳು ವೈದಿಕ ಸಿದ್ಧಾಂತದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತುತ್ತಿದ್ದಾರೆ. ಸ್ವಾಮೀಜಿಯೊಬ್ಬರು ‘ಗಣೇಶನ ನಂಬಿಕೆಗೂ ಲಿಂಗಾಯತ ಧರ್ಮಕ್ಕೂ ಸಂಬಂಧವಿಲ್ಲ’ ಎನ್ನುವ ಹೇಳಿಕೆಯನ್ನು ನೀಡಿದ್ದರು. ಇತರ ಸ್ವಾಮೀಜಿಗಳು ಇದಕ್ಕೆ ಧ್ವನಿಗೂಡಿಸಿದ್ದರು. ಯಡಿಯೂರಪ್ಪ ಅವರನ್ನು ಪೂರ್ಣ ಪ್ರಮಾಣದಲ್ಲಿ ಎದುರು ಹಾಕಿಕೊಂಡರೆ ಅದು ಬಿಜೆಪಿ ಮತ್ತು ಆರೆಸ್ಸೆಸ್‌ನ ಹಿಂದುತ್ವ ರಾಜಕಾರಣಕ್ಕೆ ಭಾರೀ ಹಿನ್ನಡೆಯನ್ನು ತರಬಹುದು ಎನ್ನುವ ಭಯ ಆರೆಸ್ಸೆಸ್‌ಗಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ‘ರಾಮಮಂದಿರ ಉದ್ಘಾಟನೆಯ’ ಹೆಸರಿನಲ್ಲೇ ಎದುರಿಸಲು ಸಿದ್ಧತೆ ನಡೆಸುತ್ತಿರುವ ಹೊತ್ತಿಗೆ ಹಿಂದುತ್ವವಾದಕ್ಕೆ ಕರ್ನಾಟಕದಲ್ಲಿ ಹಿನ್ನಡೆಯಾಗುವುದು ವರಿಷ್ಠರಿಗೆ ಬೇಡವಾಗಿದೆ.ಆದುದರಿಂದಲೇ ಕೈ ಬಿಟ್ಟ ಯಡಿಯೂರಪ್ಪರನ್ನು ಮತ್ತೆ ರಾಜ್ಯ ಬಿಜೆಪಿ ಕೈ ಹಿಡಿದಿದೆ.
ಇದರ ಪರಿಣಾಮಗಳು ಏನೇನು ? ಸಂತೋಷ್ ಸಹಿತ ಬಿ ಎಸ್ ವೈ ಎಂದರೆ ಅಷ್ಟಕ್ಕಷ್ಟೇ ಎಂಬಂತಿದ್ದ ಆರೆಸ್ಸೆಸ್ ಬಣ ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ?
ಜೆಡಿಎಸ್ ಜೊತೆಗಿನ ಮೈತ್ರಿಯನ್ನು, ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಹಿರಿಯರನ್ನು ವಿಜಯೇಂದ್ರ ಹೇಗೆ ನಿಭಾಯಿಸಬಹುದು ?. ಸರಕಾರದ ವಿರುದ್ಧ ಹೋರಾಟ ಜೋರಾಗಬಹುದೇ ? . ಇವೆಲ್ಲವೂ ಸದ್ಯದ ಕುತೂಹಲಗಳು. ಮೊದಲಿಗೆ ವಿಜಯೇಂದ್ರ ರಾಜಕೀಯ ಹಾದಿಯನ್ನೊಮ್ಮೆ ನೋಡೋಣ.
47 ವರ್ಷ ವಯಸ್ಸಿನ ವಿಜಯೇಂದ್ರ, ಮೂರು ವರ್ಷಗಳ ಹಿಂದೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದರು. ಉತ್ತಮ ಸಂಘಟನೆ ಮತ್ತು ರಾಜಕೀಯ ತಂತ್ರಗಾರಿಕೆಗಾಗಿ ಗಮನ ಸೆಳೆದವರು. 2020ರ ಬಿಜೆಪಿ ತೀರಾ ದುರ್ಬಲವಾಗಿರುವ ಕೆಆರ್ ಪೇಟೆ ಹಾಗು ಶಿರಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಕ್ರಿಯ ರಾಜಕಾರಣದಿಂದ ಯಡಿಯೂರಪ್ಪ ನಿವೃತ್ತಿ ಬಳಿಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಮೊದಲ ಬಾರಿಗೆ ಶಾಸಕರಾಗಿ ಗೆದ್ದರು. ಇದರ ಬೆನ್ನಲ್ಲೇ ಈಗ ಚಿಕ್ಕ ವಯಸ್ಸಿನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೂ ಏರಿದ್ದಾರೆ.
ಹಾಗೆಂದು ವಿಜಯೇಂದ್ರ ಪಾಲಿಗೆ ಈ ಹುದ್ದೆಯಲ್ಲಿ ಸವಾಲುಗಳೇ ಇಲ್ಲವೆಂದೇನೂ ಅಲ್ಲ. ಯಡಿಯೂರಪ್ಪನವರಿಗೆ ಹೆದರಿ ಹೈಕಮಾಂಡ್ ಈ ಹುದ್ದೆಗೆ ವಿಜಯೇಂದ್ರ ನೇಮಕ ಮಾಡಿದೆ ಎಂಬ ಭಾವನೆಯೊಂದು ಪಕ್ಷದೊಳಗೇ ಮೂಡದೇ ಇರುವುದಿಲ್ಲ.
ಇದು ವಿಜಯೇಂದ್ರ ಪಾಲಿನ ದೊಡ್ಡ ತೊಡಕೂ ಆಗಬಹುದು.
ಯಡಿಯೂರಪ್ಪನವರ ಮಾರ್ಗದರ್ಶನ ಇದ್ದರೂ, ಹುದ್ದೆಗೆ ರೇಸ್ನಲ್ಲಿದ್ದವರ ಅಸಮಾಧಾನವನ್ನೂ ವಿಜಯೇಂದ್ರ ಎದುರಿಸಬೇಕಾಗಿ ಬರುತ್ತದೆ.
ಚಿಕ್ಕ ವಯಸ್ಸಿನಲ್ಲೇ ಅವರಿಗೆ ಹೈಕಮಾಂಡ್ ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಿರುವುದು ಹಿರಿಯ ನಾಯಕರ ಕಣ್ಣು ಕುಕ್ಕದೆ ಇರುವುದಿಲ್ಲ. ಮುನಿಸಿಗೂ ಕಾರಣವಾಗಲಿದೆ.
ಇದೇ ಹುದ್ದೆಯ ರೇಸ್ನಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿ ಟಿ ರವಿ, ಸುನೀಲ್ ಕುಮಾರ್, ಆರ್. ಅಶೋಕ್, ಅಶ್ವಥ್ ನಾರಾಯಣ್ ಮೊದಲಾದವರ ಎದುರು ನಿಂತು ಅವರು ಈ ಜವಾಬ್ದಾರಿಯನ್ನು ನಿರ್ವಹಿಸುವಾಗ ಇಕ್ಕಟ್ಟೂ ಬಿಕ್ಕಟ್ಟೂ ತಲೆದೋರಲೂ ಬಹುದು.
ಈ ಪೈಕಿ ಯತ್ನಾಳ್, ಸಿ ಟಿ ರವಿ ಥರದ ನಾಯಕರು ಆರೆಸ್ಸೆಸ್ ಬಲದಲ್ಲಿ ಯಡಿಯೂರಪ್ಪ ಹಾಗು ಅವರ ಪುತ್ರನ ವಿರುದ್ಧ ನೇರ ದಾಳಿಯನ್ನೇ ಮಾಡುತ್ತಿದ್ದವರು. ಯತ್ನಾಳ್ ಅಂತೂ ವಿಜಯೇಂದ್ರ ವಿರುದ್ಧ ನಂಜು ಕಾರುತ್ತಲೇ ಬಂದವರು. ಮೊನ್ನೆಮೊನ್ನೆಯವರೆಗೂ ವಿಜಯೇಂದ್ರ ದೆಹಲಿಗೆ ಹೋದರೆ ಈ.ಡಿ ವಿಚಾರಣೆಗೆ ಹೋಗಿದ್ದಾರೆ ಎಂದೇ ಹೇಳಿಕೊಂಡು ಯತ್ನಾಳ್ ಇಲ್ಲಿ ತಿರುಗುತ್ತಿದ್ದರು.
ಅದೇ ಯತ್ನಾಳ್ ಈಗ ವಿಜಯೇಂದ್ರ ಅವರನ್ನು ಪಕ್ಷಾಧ್ಯಕ್ಷ ಹುದ್ದೆಯಲ್ಲಿ ಒಪ್ಪಿಕೊಳ್ಳಬೇಕಾಗಿದೆ. ಇದಕ್ಕಿಂತ, ಯಡಿಯೂರಪ್ಪನವರ ವಿರುದ್ಧ ಬಣದ ನಾಯಕನೆಂದೇ ಗುರುತಿಸಲ್ಪಡುವ ಬಿಎಲ್ ಸಂತೋಷ್ ಅವರನ್ನೂ ವಿಜಯೇಂದ್ರ ಎದುರಿಸಬೇಕಾಗುತ್ತದೆ.
ಕಳೆದ ಚುನಾವಣೆ ವೇಳೆ ಯಡಿಯೂರಪ್ಪನವರನ್ನು ಬಿಎಲ್ ಸಂತೋಷ್ ಹೇಗೆ ದೂರವಿಟ್ಟಿದ್ದರು ಎಂಬುದು ಗೊತ್ತಿರುವ ವಿಚಾರ. ಆದರೆ, ಯಡಿಯೂರಪ್ಪನವರ ವಿಚಾರದಲ್ಲಿ ಸಂತೋಷ್ ನಿರ್ಧಾರಗಳು ಅವರಿಗೇ ಮುಳ್ಳಾಗಿದ್ದವು. ಬಿಜೆಪಿಯ ಹೀನಾಯ ಸೋಲಿಗೆ ಹಲವರು ಸಂತೋಷ್ ವಿರುದ್ಧವೇ ಗರಂ ಆಗಿದ್ದರು.
ಹೀಗೆ ಯಡಿಯೂರಪ್ಪನವರನ್ನು ಸೈಡ್ಲೈನ್ ಮಾಡಲು ಹೋಗಿ ತಾವೇ ಹಳ್ಳಕ್ಕೆ ಬಿದ್ದಂತಾಗಿರುವ ಸಂತೋಷ್ ಪಾಲಿಗೆ ಈಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಏರಿರುವುದರಿಂದ ಬಿಎಸ್ವೈ ಎದುರು ಮುಖಭಂಗವಾಗಿದೆ. ಈ ವೈಮನಸ್ಯ ಮುಂದೆ ಯಾವಾಗ ಯಾವ ತಿರುವು ಪಡೆದೀತೊ ಗೊತ್ತಿಲ್ಲ.
ಸಮುದಾಯದ ಬಲವೇನೋ ವಿಜಯೇಂದ್ರಗೆ ಒದಗಿಬರಬಹುದಾದರೂ, ಪಕ್ಷದೊಳಗಿನ ಒಕ್ಕಲಿಗ ನಾಯಕರನ್ನೂ ನಿಭಾಯಿಸಬೇಕಾದ ಸವಾಲು ಇದೆ. ಇನ್ನು ಹೈಕಮಾಂಡ್ ಕಾರಣದಿಂದ ಆಗಿರುವ ಬಿಜೆಪಿ ಜೆಡಿಎಸ್ ಮೈತ್ರಿಯ ವಿಚಾರದಲ್ಲಿಯೂ ವಿಜಯೇಂದ್ರ ಎದುರಿಸಬೇಕಾದ ತಳಮಳಗಳು ಏನಿರಬಹುದು ಎಂಬ ಪ್ರಶ್ನೆಯಿದೆ.
ಬಹುಶಃ ಯಡಿಯೂರಪ್ಪನವರೂ ಸೇರಿದಂತೆ ರಾಜ್ಯ ಬಿಜೆಪಿಯ ಯಾವ ನಾಯಕರಿಗೂ ಜೆಡಿಎಸ್ ಜೊತೆಗಿನ ಮೈತ್ರಿ ಬೇಕಿರಲಿಲ್ಲ. ಆದರೆ ಹೈಕಮಾಂಡ್ ಮಟ್ಟದಲ್ಲಿ ಈ ಮೈತ್ರಿ ಆಗಿದೆ. ಮತ್ತದನ್ನು ಈಗ ರಾಜ್ಯ ನಾಯಕರು ಅನಿವಾರ್ಯವಾಗಿ ನಿಭಾಯಿಸಬೇಕಾಗಿದೆ. ಈ ಹಂತದಲ್ಲಿ ವಿಜಯೇಂದ್ರ ನಡೆ ಮತ್ತು ನಿಲುವುಗಳು ಹೇಗಿರಬಹುದು ಎಂಬ ಕುತೂಹಲವೂ ಇದ್ದೇ ಇದೆ.
ಹಲವು ತಿಂಗಳುಗಳಿಂದ ಅಧ್ಯಕ್ಷರಿಲ್ಲದಂತಾಗಿದ್ದ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕವಾಗಿರುವ ಹೊತ್ತಿನಲ್ಲಿ, ನಾಯಕರೆಲ್ಲ ವಿಜಯೇಂದ್ರ ಅವರಿಗೆ ಶುಭಾಶಯ ಹೇಳುತ್ತಿರುವ ಹೊತ್ತಿನಲ್ಲಿ, ಬೆಂಬಲಿಗರು ಸಂಭ್ರಮಿಸುತ್ತಿರುವ ಹೊತ್ತಿನಲ್ಲಿ ಪಕ್ಷದೊಳಗೆ ಅದಕ್ಕೆ ತದ್ವಿರುದ್ಧವಾದ ಭಾವನೆಗಳೂ ಏಳದೇ ಇರಲು ಸಾಧ್ಯವಿಲ್ಲ.
ಸೋತು ಹತಾಶವಾಗಿದ್ದ ಬಿಜೆಪಿಯ ಮತ್ತೊಂದು ಬಗೆಯ ಸವಾಲುಗಳು ಈಗ ನೂತನ ಅಧ್ಯಕ್ಷರ ನೇಮಕದೊಂದಿಗೆ ಶುರುವಾಗಿವೆ ಎಂಬುದಂತೂ ನಿಜ. ವಿಜಯೇಂದ್ರ ನೇಮಕದ ಪರಿಣಾಮವಾಗಿ ಬಣ ರಾಜಕೀಯ ಬಿಜೆಪಿಯೊಳಗೆ ಮತ್ತೊಂದು ರೀತಿಯಲ್ಲಿ ಮುಂದುವರಿಯುವುದೆ? ವಿಜಯೇಂದ್ರ ಪರ ನಿಲ್ಲುವವರು, ಅಂತರ ಕಾಯ್ದುಕೊಂಡು ಆಟ ನೋಡುವವರು ಯಾರು ಯಾರು ಎಂಬುದೆಲ್ಲ ಮುಂದಿನ ದಿನಗಳಲ್ಲಿ ತೆರೆಯ ಮೇಲೆಯೇ ನೋಡಲು ಸಿಗಲಿದೆ.
ಆಪರೇಷನ್ ಹಸ್ತ, ಆಪರೇಷನ್ ಕಮಲ ಎಂದೆಲ್ಲ ಮಾತುಗಳು ಕೇಳಿಬರುತ್ತಿರುವಾಗ ಬಿಜೆಪಿಗೊಬ್ಬ ನಾಯಕ ಸಿಕ್ಕಿರುವುದು, ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಲವಾಗಲೂ ಬಹುದು. ಆದರೂ, ಸದ್ಯಕ್ಕಂತೂ ಬಿಎಸ್ವೈ ಎದುರು ಮಂಡಿಯೂರಿರುವ ಬಿಜೆಪಿಯ ಈ ಅಸಹಾಯಕತೆ, ಅದು ಆಗಲೇ ಒಳಗೊಳಗೇ ಟೊಳ್ಳಾಗಿದೆ ಎಂಬುದನ್ನೇ ಸೂಚಿಸುತ್ತದೆ.
ವಿಜಯೇಂದ್ರ ಈಗ ಪಕ್ಷದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದ್ದಾರೆ ಎನ್ನುವುದರ ಅರ್ಥ, ಭವಿಷ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯ ಹಂತಕ್ಕೆ ಸಮೀಪದಲ್ಲಿದ್ದಾರೆ. ಅಂದರೆ ರಾಜ್ಯ ಬಿಜೆಪಿಯ ಹಿಡಿತ ತಂದೆಯಿಂದ ಮಗನಿಗೆ ಹಸ್ತಾಂತರಗೊಂಡಿದೆ. ಆದರೆ ತಂದೆಗಿದ್ದ ಮುತ್ಸದ್ದಿತನ, ದೂರದೃಷ್ಟಿ, ವಿವೇಕ ಇವುಗಳೆಲ್ಲ ವಿಜಯೇಂದ್ರ ಅವರಿಗೆ ಇದೆ ಎನ್ನುವಂತಿಲ್ಲ. ಬಿಜೆಪಿಯನ್ನು ತಳಸ್ತರದಿಂದ ಕಟ್ಟಿ ಬೆಳೆಸಿದ ಹಲವು ದಶಕಗಳ ರಾಜಕೀಯ ಅನುಭವ ಯಡಿಯೂರಪ್ಪರಿಗಿದೆ. ಅವರು ಪಕ್ಷದೊಳಗಿರುವ ಸಹ ನಾಯಕರ ಒಳಹೊರಗನ್ನು ಅರಿತುಕೊಂಡು ಮುಂದೆ ಹೆಜ್ಜೆ ಇಡುತ್ತಿದ್ದರು. ಆ ಮುತ್ಸದ್ದಿತನ ವಿಜಯೇಂದ್ರ ಅವರಲ್ಲಿ ಎಷ್ಟರಮಟ್ಟಿಗೆ ಇದೆ ಎನ್ನುವ ಆಧಾರದಲ್ಲಿ ಬಿಜೆಪಿಯೊಳಗೆ ಅವರ ಭವಿಷ್ಯ ನಿಂತಿದೆ.
ಯಡಿಯೂರಪ್ಪರ ಮುಂದೆ ಹಲ್ಲುಕಿರಿಯುತ್ತಾ, ಕೇಶವಕೃಪಾದ ಒಳಮನೆಯಲ್ಲಿ ಕುಳಿತು ಸಂಚು ರೂಪಿಸುವ ಆರೆಸ್ಸೆಸ್‌ನ ಬ್ರಾಹ್ಮಣ್ಯ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಎದುರಿಸುವುದು ಅಷ್ಟೊಂದು ಸುಲಭವಿಲ್ಲ ಎನ್ನುವುದು ವಿಜಯೇಂದ್ರ ಅವರಿಗೂ ಶೀಘ್ರದಲ್ಲೇ ಮನವರಿಕೆಯಾಗಬಹುದು.