×
Ad

'ಜಾತಿ ಜನಗಣತಿ ವರದಿ' ತಡವಾದರೂ ಜಾರಿಯಾಗುತ್ತದೆ: ಸಂತೋಷ್ ಲಾಡ್

Update: 2025-03-11 10:22 IST

ಬೆಂಗಳೂರು : ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೊತೆ ವಾರ್ತಾಭಾರತಿ ವಿಶೇಷ ಸಂದರ್ಶನ ನಡೆಸಿದೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವಾರ್ತಾಭಾರತಿ: ಈ ಸಾಲಿನ ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಕೆಲವೊಂದು ಕೊಡುಗೆ ಸಿಕ್ಕಿದೆ. ಬಜೆಟ್‌ನಲ್ಲಿ ನಿಮ್ಮ ಇಲಾಖೆಯ ಬೇಡಿಕೆ ಏನಿತ್ತು? ನಿಮ್ಮ ಬೇಡಿಕೆಗಳೆಲ್ಲವೂ ಈಡೇರಿದೆಯೇ?

ಸಂತೋಷ್ ಲಾಡ್: ನಮ್ಮ ಕನ್‌ಸ್ಟ್ರಕ್ಷನ್ ಬೋರ್ಡ್‌ನಲ್ಲಿ ಹಣ ಇದೆ. ಅದು ನಮಗೆ ವಿಶೇಷವಾದ ಖಜಾನೆಯಿಂದ ಬರುವ ಹಣ ಅಲ್ಲ. ನಮ್ಮ ಸೆಸ್‌ನಿಂದ ಸಂಗ್ರಹಿಸಿದ ಹಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೊರಾರ್ಜಿ ದೇಸಾಯಿ ಹಾಸ್ಟೆಲ್ ರೀತಿಯ ವ್ಯವಸ್ಥಿತ ಹಾಸ್ಟೆಲ್ ಬೇಡಿಕೆ ಇತ್ತು. ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸುವ ಬೇಡಿಕೆ ಇತ್ತು. ಅದರ ಪ್ರಕಾರ ಮುಖ್ಯಮಂತ್ರಿ ಬಜೆಟ್‌ನಲ್ಲಿ ಮಂಡಿಸಿದ್ದಾರೆ. ನಮಗೆ ಬಹಳ ಸಮಸ್ಯೆ ಇರುವುದು ಅಸಂಘಟಿತ ವಲಯದಲ್ಲಿ. ಭಾರತದಲ್ಲಿ ಶೇ.90ರಷ್ಟು ಜನ ಅಸಂಘಟಿತ ವಲಯದಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಶೇ.83ರಿಂದ 85ರಷ್ಟು ಜನ ಅಸಂಘಟಿತ ವಲಯದಲ್ಲಿ ಇದ್ದಾರೆ. ಅಸಂಘಟಿತ ವಲಯಕ್ಕೆ ನಾವು ವಿಶೇಷವಾಗಿ 50 ಪೈಸೆ ಡೀಸೆಲ್ ಮೇಲೆ ಸೆಸ್ ಪಡೆದು ಅದಕ್ಕೆ ಪ್ರತ್ಯೇಕ ಸೊಸೈಟಿ ಮಾಡಿ, ಅಸಂಘಟಿತ ವಲಯ ಬೋರ್ಡ್‌ಗೆ ಹಣ ಸಂಗ್ರಹ ಆದರೆ ಬಹಳಷ್ಟು ಜನರಿಗೆ ಸಹಾಯ ಮಾಡಬಹುದು ಎಂಬ ಇಚ್ಚೆ ನಮ್ಮದಾಗಿತ್ತು. ಆದರೂ ತುಂಬಾ ತೊಂದರೆ ಇದೆ. ಯಾಕೆಂದರೆ 50 ಪೈಸೆ ಆದರೂ ಸುಮಾರು 500ರಿಂದ 600 ಕೋಟಿ ರೂ. ಆಗುತ್ತದೆ. ಬಜೆಟ್‌ನಲ್ಲಿ ಹೆಚ್ಚಿನ ಮೊತ್ತ ಗ್ಯಾರಂಟಿಗೆ ವ್ಯಯವಾಗುತ್ತದೆ. ಆದರೆ ಸಣ್ಣ ವೃತ್ತಿ ಮೇಲೆ ಬದುಕು ಕಟ್ಟಿಕೊಂಡಿರುವ ಜನಾಂಗವನ್ನು ಗುರುತಿಸಿ ಈಗಾಗಲೇ ಸೋಶಿಯಲ್ ಸೆಕ್ಯೂರಿಟಿ ಸ್ಕೀಮ್ ಅಲ್ಲಿ ಮಾಡಿದ್ದೇವೆ.

ವಾರ್ತಾಭಾರತಿ: ಬಜೆಟ್‌ನಲ್ಲಿ ನೋಂದಾಯಿತ ಕಾರ್ಮಿಕರಿಗೆ ಎಂದು ಪ್ರಸ್ತಾಪ ಆಗಿದೆ. ನೀವೇ ಹೇಳಿದ್ದೀರಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಬೋರ್ಡ್ ಇದೆ ಎಂದು. ಅದನ್ನು ವಿಸ್ತರಿಸಿದರೆ ಉಪಯೋಗ ಆಗುತ್ತದೆಯೇ?

ಸಂತೋಷ್ ಲಾಡ್: ಅಸಂಘಟಿತ ಕಾರ್ಮಿಕ ವಲಯಕ್ಕೆ ನಮಗೆ ಹಣ ಬರುವುದಿಲ್ಲ. ಹಾಗಾಗಿಯೇ ಸೆಸ್ ಕೇಳಿರುವುದು. ಅಸಂಘಟಿತ ಕಾರ್ಮಿಕ ವಲಯಕ್ಕೆ ಹಣ ಸಂಗ್ರಹಿಸಲು ನಮ್ಮಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಈ ವ್ಯವಸ್ಥೆ ಕರ್ನಾಟಕ್ಕೆ ಮಾತ್ರ ಸೀಮಿತವಲ್ಲ. ಇಡೀ ಭಾರತದಲ್ಲಿ ಇದೇ ವ್ಯವಸ್ಥೆ ಇದೆ. ಕನ್‌ಸ್ಟ್ರಕ್ಷನ್ ಬೋರ್ಡ್‌ನಲ್ಲಿ ನಮಗೆ ದುಡ್ಡಿದೆ. ಕನ್‌ಸ್ಟ್ರಕ್ಷನ್ ಬೋರ್ಡ್‌ನಲ್ಲಿರುವ ದುಡ್ಡನ್ನು ಬರೀ ಕನ್‌ಸ್ಟ್ರಕ್ಷನ್ ಕಾರ್ಮಿಕರಿಗೆ ಮಾತ್ರ ಕೊಡಬೇಕು ಎಂಬ ಕಾನೂನಿದೆ. ಅದು ಸರಿ ಕೂಡ. ಈ ಬಜೆಟ್ ನಲ್ಲಿ ಎಲ್ಲ ವರ್ಗದವರನ್ನು ಮುಖ್ಯಮಂತ್ರಿ ಒಳಗೊಳ್ಳಿಸಿದ್ದಾರೆ.

ವಾರ್ತಾಭಾರತಿ: ಈ ಬಾರಿಯ ಬಜೆಟ್‌ನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿದೆ. ಜೆಡಿಎಸ್ ಒಂದು ವರ್ಗದ ಓಲೈಕೆ ಎಂದರೆ, ಬಿಜೆಪಿ ಹಲಾಲ್ ಬಜೆಟ್ ಎಂದಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಸಂತೋಷ್ ಲಾಡ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಕೂಡ ಟೀಕೆ ಮಾಡುವ ಅವಕಾಶವಿದೆ. ಆದರೆ ಅದು ಇತಿಮಿತಿಯಲ್ಲಿರಬೇಕು. ವಿಪಕ್ಷಗಳದ್ದು ರಚನಾತ್ಮಕ ಟೀಕೆ ಅಲ್ಲ. ಅವರದ್ದು ಆಧಾರ ರಹಿತ ಆರೋಪ. ಹಾಗಾಗಿ ಇಂತಹ ಟೀಕೆಗಳಿಗೆ ಪ್ರತಿಕ್ರಿಯೆ ಕೊಡುವ ಅಗತ್ಯ ಇಲ್ಲ. ಬಿಜೆಪಿಗರಿಗೆ ಪ್ರತಿಯೊಂದು ವಿಚಾರದಲ್ಲೂ ಹಿಂದೂ-ಮುಸ್ಲಿಮ್ ಹುಡುಕುವುದೇ ಕೆಲಸ. ವಿಪಕ್ಷಗಳು ರಚನಾತ್ಮಕ ಟೀಕೆ ಮಾಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬಹುದು.

ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನಾವು ಕೊಟ್ಟಿರುವ ಬಗ್ಗೆ ಮಾತನಾಡುತ್ತಾರೆ, ಇವರು ಈಗ ಕೇಂದ್ರ ಸರಕಾರದಲ್ಲಿ ಕ್ರಿಮಿ ಲೇಯರ್ ಶೇ.10 ಕೊಟ್ಟಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುತ್ತಾರಾ? ಮೀಸಲಾತಿಯಲ್ಲಿ ನಾವು ಎಸ್‌ಸಿ-ಎಸ್‌ಟಿ ಜನಾಂಗದವರಿಗೆ, ಒಬಿಸಿಗಳಿಗೆ ಎಲ್ಲರಿಗೂ ನಾವು ಅವಕಾಶ ಕೊಟ್ಟಿದ್ದೇವೆ.

ವಾರ್ತಾಭಾರತಿ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ಮುಖ್ಯಮಂತ್ರಿ ಸಹಿತ ಕಾಂಗ್ರೆಸ್‌ನ ಮುಖಂಡರು ಆರೋಪಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಸೌಜನ್ಯಾ ವಿಚಾರವಾಗಿ ವೀಡಿಯೋ ಮಾಡಿ ಯ್ಯೂಟ್ಯೂಬ್‌ನಲ್ಲಿ ಹಾಕಿದ್ದ ಸಮೀರ್ ಎಂಬಾತನನ್ನು ಅರೆಸ್ಟ್ ಮಾಡುವ ತನಕ ಕರ್ನಾಟಕ ಪೊಲೀಸರು ಹೋಗಿದ್ದರು. ಆದರೆ ಬಹಿರಂಗವಾಗಿ ಕೋಮುಪ್ರಚೋದನಾ ಭಾಷಣ ಮಾಡುವವರ ವಿರುದ್ಧ ಕ್ರಮಗಳಾಗುತ್ತಿಲ್ಲ. ಯಾಕೆ ಹೀಗೆ?

ಸಂತೋಷ್ ಲಾಡ್: ಯುಟ್ಯೂಬರ್ ನಮ್ಮ ಬಳ್ಳಾರಿ ಜಿಲ್ಲೆಯ ಹುಡುಗ ಇರಬೇಕು ಅವನು ತುಂಬಾ ಚೆನ್ನಾಗಿ ಮಾತಾಡಿದ್ದಾನೆ ಎಂದು ನಾನು ಕೇಳಲ್ಪಟ್ಟೆ. ಪೊಲೀಸರು ಯಾವ ಕಾರಣಕ್ಕೆ ನೊಟೀಸ್ ನೀಡಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧ ಅಲ್ಲ. ಕೇಂದ್ರದಲ್ಲಿ ಯುಪಿಎ 1, ಯುಪಿಎ 2 ಅವಧಿಯಲ್ಲಿ ನಾವು ಮಾಧ್ಯಮಕ್ಕೆ ಅತಿಯಾದ ಸ್ವಾತಂತ್ರ್ಯ ಕೊಟ್ಟಿದ್ದೆವು.

ವಾರ್ತಾಭಾರತಿ: ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ಜಾತಿಗಣತಿ ಕುರಿತು ನೀವು ಆಶ್ವಾಸನೆ ಕೊಟ್ಟಿದ್ದೀರಿ. ಆದರೆ ಈವರೆಗೆ ಏನೂ ಕ್ರಮಗಳಾಗಿಲ್ಲ. ಒಳ ಮೀಸಲಾಗಿ ಬಗ್ಗೆಯೂ ಯಾವುದೇ ಬೆಳವಣಿಗೆ ಇಲ್ಲ. ಈ ಬಗ್ಗೆ ಏನು ಹೇಳುತ್ತೀರಿ?

ಸಂತೋಷ್ ಲಾಡ್: ಇದೆಲ್ಲಾ ರಾಜಕೀಯ ಸೂಕ್ಷ್ಮ ವಿಚಾರ. ನ್ಯೂಮೆಟ್ರಿಕಲ್ ಡಾಟಾ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ ಮೇಲೆ ಮುಖ್ಯಮಂತ್ರಿ ಕ್ಯಾಬಿನೆಟ್‌ನಲ್ಲಿ ಅದಕ್ಕೆ ಒಂದು ಕಮಿಟಿಯನ್ನು ರಚನೆ ಮಾಡಿದ್ದಾರೆ. ನಾವು ಅಂದುಕೊಂಡಷ್ಟು ಸುಲಭವಾಗಿ ನ್ಯೂಮೆರಿಫಿಕಲ್ ಡಾಟಾ ಸಿಗುವುದಿಲ್ಲ. ಅದಕ್ಕಾಗಿಯೇ ಒಂದು ಕಮಿಟಿ ರಚನೆ ಮಾಡಿದ್ದೇವೆ. ಸಂಬಂಧಪಟ್ಟಿರುವ ಜನರು ಮಾಹಿತಿ ಕಲೆ ಹಾಕಿದ್ದಾರೆ. ಸ್ವಲ್ಪ ತಡವಾಗಬಹುದು. ಆದರೆ ಖಂಡಿತವಾಗಿಯೂ ವರದಿ ಜಾರಿ ಆಗುತ್ತದೆ.

ಎರಡನೆಯದು ಕಾಂತರಾಜ್ ವರದಿ. ಇದು ಕೂಡಾ ರಾಜಕೀಯ ಸೂಕ್ಷ್ಮ ವಿಚಾರ. ಇದರಲ್ಲಿಯೂ ನಮ್ಮ ಸರಕಾರದ ಬದ್ಧತೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಅಂದರೆ, 50ರಿಂದ 70 ದಿನದ ಒಳಗಾಗಿ ರಾಜ್ಯದ ಜನತೆಗೆ ಡಾಟಾ ಸಿಗುತ್ತದೆ.

ವಾರ್ತಾಭಾರತಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಯಾಕೆ ಈ ಪ್ರಕ್ರಿಯೆ ನಿಧಾನವಾಗಿ ಸಾಗುತ್ತಿದೆ?

ಸಂತೋಷ್ ಲಾಡ್: ತಡವಾಗಿದೆಯೆಂದು ನಾನು ಒಪ್ಪಿಕೊಳ್ಳುತ್ತೇನೆ. ಪ್ರಾರಂಭಿಕ ಹಂತಗಳಲ್ಲಿ ಕೆಲವೊಂದು ರಾಜಕೀಯ ಕಾರಣಗಳಿರುತ್ತದೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯ ಹಿಂದುಳಿದ, ಶೋಷಿತ ಮತ್ತು ದಮನಿತ ಜನರ ಬಗ್ಗೆ ಹೋರಾಟ ಮಾಡಿರುವವರು. ಅವರಿಗೆ ಈ ವಿಷಯದ ಕುರಿತು ರಾಜಕೀಯ ಬದ್ಧತೆಗಿಂತ ಸಾಮಾಜಿಕ ಬದ್ಧತೆ ಹೆಚ್ಚಿದೆ.

ವಾರ್ತಾಭಾರತಿ: ನಿಮ್ಮ ಪಾರ್ಟಿ ಒಳಗೆ ಸಣ್ಣ ಪುಟ್ಟ ಗೊಂದಲಗಳು ಇವೆ. ಇದು ಇತ್ತೀಚೆಗಿನ ನಿಮ್ಮ ಕೆಲ ನಾಯಕರ ಹೇಳಿಕೆಗಳಿಂದ ತಿಳಿದು ಬರುತ್ತದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ಸಂತೋಷ್ ಲಾಡ್: ನಮ್ಮಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಕೆಲವೊಂದು ಅಭಿಪ್ರಾಯಗಳನ್ನು ಎಷ್ಟು ಬೇಕು ಅಷ್ಟೇ ಬಿಂಬಿಸಿದರೆ ಉತ್ತಮ. ಹೊರತು ಅದನ್ನೇ ದೊಡ್ಡದು ಮಾಡುತ್ತಾ ಹೋದರೆ ಏನು ಮಾಡಲು ಸಾಧ್ಯವಿಲ್ಲ. ಇದನ್ನೆಲ್ಲ ಉಪ್ಪಿನಕಾಯಿ ತರ ಸ್ವಲ್ಪವೇ ಬಳಸಬೇಕು. ಅದು ಬಿಟ್ಟು ಬೆಳಗ್ಗಿನಿಂದ ಸಂಜೆ ತನಕ ಅದನ್ನೇ ಪ್ರಕಟಿಸುವುದಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News