×
Ad

ರಾಸಲೀಲೆ, ಚಿನ್ನ ಕಳ್ಳಸಾಗಾಣಿಕೆ, ಎನ್‌ಕೌಂಟರ್‌, ಹಣ ಗುಳುಂ ಆರೋಪ...; ಡಿಜಿಪಿ ಕೆ.ರಾಮಚಂದ್ರ ರಾವ್ ಹೆಸರು ಕೇಳಿಬಂದ ಪ್ರಕರಣಗಳು ಒಂದೆರಡಲ್ಲ

Update: 2026-01-20 15:49 IST

ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್


ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ರಾವ್ ಅವರನ್ನು ಅಮಾನತು ಮಾಡಿ ಸರಕಾರ ಆದೇಶ ಹೊರಡಿಸಿದೆ. ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಸೋಮವಾರ ನಂದಗಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣ ನನಗೆ ಗೊತ್ತಾಗಿದೆ. ವಿಚಾರಣೆ ನಡೆಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಎಷ್ಟೇ ದೊಡ್ಡ ಅಧಿಕಾರಿಯಾದರೂ ಕಾನೂನಿಗಿಂತ ದೊಡ್ಡವರಲ್ಲ. ಅವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಲು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸಕ್ಕೆ ರಾಮಚಂದ್ರ ರಾವ್ ಹೋಗಿದ್ದರೂ ಸಚಿವರ ಭೇಟಿ ಸಾಧ್ಯವಾಗಲಿಲ್ಲ.

ರಾಸಲೀಲೆ ಪ್ರಕರಣದ ಆರೋಪವನ್ನು ಡಿಜಿಪಿ ರಾಮಚಂದ್ರ ರಾವ್ ನಿರಾಕರಿಸಿದ್ದು. ಇದು ತಿರುಚಿದ ವಿಡಿಯೊ. ಇದರಲ್ಲಿರುವ ಮಹಿಳೆ ಯಾರೆಂಬುದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಕಚೇರಿಯಲ್ಲಿ ಬೇರೆ ಬೇರೆ ಸಮಯದಲ್ಲಿ ರೆಕಾರ್ಡ್ ಮಾಡಲಾದ ವಿಡಿಯೊ ತುಣುಕುಗಳ ಸಂಕಲನವಾಗಿದೆ. ಕಚೇರಿಯಲ್ಲಿ ಕುಳಿತು ಪೊಲೀಸ್ ಸಮವಸ್ತ್ರದಲ್ಲೇ ಮಹಿಳೆಯನ್ನು ಅಪ್ಪಿಕೊಂಡು ಮುತ್ತಿಡುತ್ತಿರುವ ದೃಶ್ಯವು ವಿಡಿಯೊದಲ್ಲಿ ದಾಖಲಾಗಿದೆ. ಬೇರೆ ಬೇರೆ ಮಹಿಳೆಯರೊಂದಿಗೆ ರಾಮಚಂದ್ರ ರಾವ್ ಈ ರೀತಿ ವರ್ತಿಸುತ್ತಿರುವುದು ವಿಡಿಯೊದಲ್ಲಿದ್ದು, ಚೇಂಬರ್‌ನಲ್ಲಿರುವ ರಾಷ್ಟ್ರಧ್ವಜ ಹಾಗೂ ರಾಜ್ಯ ಪೊಲೀಸ್ ಧ್ವಜ ಸಹ ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊ ವೈರಲ್ ಆದ ಬೆನ್ನಲ್ಲೇ ಸೋಮವಾರ ಸಂಜೆ ಎರಡು ಆಡಿಯೊ ಕ್ಲಿಪ್‌ಗಳು ಹರಿದಾಡಿದವು. ಅದರಲ್ಲಿ ಮಹಿಳೆಯ ಜತೆ ಮಾತಾಡುತ್ತಿರುವ ಪುರುಷ ದನಿ ಕೇಳಿಸುತ್ತಿದೆ. ಆಡಿಯೊದಲ್ಲಿ ಯಾರು ಯಾರೊಂದಿಗೆ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

► ವಿಡಿಯೊ ಬಗ್ಗೆ ರಾವ್ ಪ್ರತಿಕ್ರಿಯೆ

ಅದು ತಿರುಚಿದ ವಿಡಿಯೊ. ವಿಡಿಯೊ ಸುಳ್ಳು. ಈ ಬಗ್ಗೆ ತನಿಖೆ ಆಗಬೇಕು ಎಂದು ರಾಮಚಂದ್ರ ರಾವ್‌ ಪ್ರತಿಕ್ರಿಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹರಿದಾಡಿದ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ ಅವರ ಭೇಟಿಗೆ ರಾಮಚಂದ್ರ ರಾವ್ ತೆರಳಿದ್ದರು. ಆದರೆ, ಭೇಟಿ ಸಾಧ್ಯವಾಗಿರಲಿಲ್ಲ. ಆಮೇಲೆ ಗೃಹ ಸಚಿವರ ನಿವಾಸದ ಎದುರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಾವ್, ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ. ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿ ಇದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ತನಿಖೆ ಆಗಬೇಕು ಎಂದು ಹೇಳಿದ್ದಾರೆ.

► ಗೃಹ ಸಚಿವರು ಏನು ಹೇಳಿದ್ರು?

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಬೆನ್ನಲ್ಲೇ ಕೆ.ರಾಮಚಂದ್ರ ರಾವ್ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ತುರ್ತು ಕ್ರಮ ಕೈಗೊಂಡಿದ್ದೇವೆ. ಪ್ರಕರಣದ ತನಿಖೆಯಾದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಜಾ ಕೂಡ ಆಗಬಹುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ವಿಡಿಯೊ ಸುಳ್ಳು ಎಂದು ಡಿಜಿಪಿ ಹೇಳಿಕೆ ನೀಡಿದ್ದಾರೆ. ಆದರೆ ಮೇಲ್ನೋಟಕ್ಕೆ ನಿಜವಾದ ವಿಡಿಯೊ ಎಂದು ಕಾಣಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆ ನಡೆಸಿ ಬೇರೆ ಬೇರೆ ಆಯಾಮಗಳನ್ನು ಪರಿಶೀಲಿಸಲಾಗುವುದು. ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಇಲಾಖೆ ಅಷ್ಟೇ ಅಲ್ಲದೆ ಯಾವುದೇ ಇಲಾಖೆಗೂ ಇಂಥಾ ಘಟನೆಗಳು ಕಳಂಕವನ್ನುಂಟು ಮಾಡುತ್ತದೆ. ಅದಕ್ಕಾಗಿಯೇ ತುರ್ತು ಕ್ರಮ ಕೈಗೊಂಡಿದ್ದೇವೆ. ಸದ್ಯ ಸಂತ್ರಸ್ತೆ ಯಾರು ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲ ಎಂದಿದ್ದಾರೆ.

► ಯಾರು ಈ ರಾಮಚಂದ್ರ ರಾವ್?

ರಾಮಚಂದ್ರ ರಾವ್ 1993 ರ ಬ್ಯಾಚ್ ನ (ಕರ್ನಾಟಕ ಕೇಡರ್) ಐಪಿಎಸ್ ಅಧಿಕಾರಿ. ಅಮಾನತುಗೊಳಿಸುವವರೆಗೂ ನಾಗರಿಕ ಹಕ್ಕುಗಳ ಜಾರಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯಲ್ಲಿದ್ದರು. 2023 ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಬಡ್ತಿ ಪಡೆದಿದ್ದ ರಾಮಚಂದ್ರ ರಾವ್ ಅಕ್ಟೋಬರ್ ತಿಂಗಳಲ್ಲಿ ಡಿಜಿಪಿ (ನಾಗರಿಕ ಹಕ್ಕುಗಳ ಜಾರಿ) ಆಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು, ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ವಿವಾದಗಳಲ್ಲಿ ರಾಮಚಂದ್ರ ರಾವ್ ಅವರ ಹೆಸರು ಕೇಳಿ ಬಂದಿದ್ದು ಇದು ಮೊದಲೇನೂ ಅಲ್ಲ.ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಅವರ ಹೆಸರು ತಳಕು ಹಾಕಿಕೊಂಡಿತ್ತು. ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಎರಡು ಮದುವೆಯಾಗಿತ್ತು. ಅವರು ಎರಡನೇ ಬಾರಿ ಮದುವೆಯಾದ ಮಹಿಳೆಯ ಮೊದಲ ಪತಿಯ ಮಗಳೇ ನಟಿ ರನ್ಯಾ ರಾವ್.

► ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣ

ರನ್ಯಾ ರಾವ್ ಕೆ ರಾಮಚಂದ್ರ ರಾವ್ ಅವರ ಮಲಮಗಳು. ಈಕೆ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗಳನ್ನು ತಪ್ಪಿಸಲು ತನ್ನ ಸಂಬಂಧಗಳು ಮತ್ತು ಸಂಪರ್ಕಗಳನ್ನು ಬಳಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಕಳ್ಳಸಾಗಣೆ ಆರೋಪದ ನಂತರ ಕೆ ರಾಮಚಂದ್ರ ರಾವ್ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದು, ಆಕೆಯ ಚಟುವಟಿಕೆಗಳೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಆ ಪ್ರಕರಣದಲ್ಲಿ ಅಧಿಕೃತ ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇಲೆ ತನಿಖೆ ಆರಂಭಿಸಿದ ನಂತರ 2025 ಮಾರ್ಚ್ 15 ರಂದು ರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು. ನಂತರ ಅವರನ್ನು ಪುನಃ ನೇಮಕ ಮಾಡಲಾಯಿತು.

ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಆರೋಪದ ಅಡಿ ನಟಿ ರನ್ಯಾ ರಾವ್‌ ಅವರನ್ನು ಕೇಂದ್ರದ ರೆವೆನ್ಯೂ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದರು. 2025 ಮಾರ್ಚ್‌ 4ರಂದು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಬಂಧಕ್ಕೊಳಗಾಗಿದ್ದರು. ಆಮೇಲೆ ರನ್ಯಾ ಅವರಿದ್ದ ಫ್ಲ್ಯಾಟ್‌ ಮೇಲೆ ತನಿಖಾ ತಂಡ ದಾಳಿ ನಡೆಸಿ ರೂ.17.29 ಕೋಟಿಯ ಆಭರಣ, ನಗದು ಜಪ್ತಿ ಮಾಡಿಕೊಂಡಿತ್ತು. ಮಲತಂದೆ ರಾಮಚಂದ್ರ ರಾವ್ ಹೆಸರು ಬಳಸಿಕೊಂಡು ರನ್ಯಾ ಅವರು ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು. ನಟಿ ರನ್ಯಾ ರಾವ್‌ ಅವರು ಭಾಗಿಯಾಗಿರುವ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ರಾಮಚಂದ್ರ ರಾವ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ರಾಜ್ಯ ಸರಕಾರ, ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಕಡ್ಡಾಯ ರಜೆಯ ಆದೇಶವನ್ನು ರಾಜ್ಯ ಸರಕಾರವು ಇತ್ತೀಚೆಗೆ ವಾಪಸ್‌ ಪಡೆದು ಡಿಸಿಆರ್‌ಇ ಡಿಜಿಪಿ ಹುದ್ದೆಗೆ ನೇಮಕ ಮಾಡಿತ್ತು.

► ಬಸ್ ನಲ್ಲಿ ವಶಪಡಿಸಿದ್ದ ಹಣ ಗುಳುಂ ಆರೋಪ

2014ರಲ್ಲಿನ ಪ್ರಕರಣ ಇದು. ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್‌ ನ್ನು ಮೈಸೂರಿನ ಇಲವಾಲ ಬಳಿ ಪೊಲೀಸರು ತಡೆದು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ 20 ಲಕ್ಷ ರೂ. ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿಕೊಂಡರು. ಆದರೆ ಹಣವನ್ನು ಸಾಗಿಸುತ್ತಿದ್ದ ಕೇರಳದ ವ್ಯಾಪಾರಿಗಳು ನಿಜವಾದ ಮೊತ್ತ ರೂ. 2.27 ಕೋಟಿ. ಪೊಲೀಸರು ಉದ್ಯಮಿಯೊಂದಿಗೆ ಶಾಮೀಲಾಗಿ ಹಣದ ದೊಡ್ಡ ಭಾಗವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ತನಿಖೆ ನಡೆಸಿದ ಸಿಬಿಐ, ರಾಮಚಂದ್ರ ರಾವ್ ಪ್ರಕರಣವನ್ನು ನಿರ್ವಹಿಸಿದ್ದರಲ್ಲಿ ಗಂಭೀರ ನ್ಯೂನತೆಗಳಿವೆ ಎಂದು ಹೇಳಿತ್ತು. ರಾವ್ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಅಧಿಕಾರಿಗಳು ಆಪಾದಿತ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಇದನ್ನು ಅವರು ನಿರಾಕರಿಸಿದ್ದರು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.

► ಚಡಚಣ ಸೋದರರ ಹತ್ಯೆ ಪ್ರಕರಣದಲ್ಲಿಯೂ ಹೆಸರು ಕೇಳಿ ಬಂದಿತ್ತು

ಭೀಮಾತೀರದ ಚಡಚಣ ಸೋದರರ ಹತ್ಯೆ ಪ್ರಕರಣದಲ್ಲಿಯೂ ರಾಮಚಂದ್ರ ರಾವ್ ಅವರ ಹೆಸರು ಕೇಳಿ ಬಂದಿತ್ತು. 2017ರ ಅಕ್ಟೋಬರ್ 29ರಂದು ರೌಡಿ ಧರ್ಮರಾಜ ಚಡಚಣನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಆತನ ತಮ್ಮ ಗಂಗಾಧರ ಚಡಚಣನನ್ನು ಈ ಸೋದರರ ಎದುರಾಳಿ ಮಹಾದೇವ ಭೈರಗೊಂಡನ ಸಹಚರರ ಸುಪರ್ದಿಗೆ ಕೊಟ್ಟಿದ್ದರು. ಅವರು ಗಂಗಾಧರನನ್ನು ತುಂಡು ತುಂಡಾಗಿ ಕತ್ತರಿಸಿ ಶವವನ್ನು ನದಿಗೆ ಎಸೆದಿದ್ದರು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ ಸಿಐಡಿ ಪೊಲೀಸರು ಪಿಎಸ್‌ಐ ಗೋಪಾಲ್ ಹಳ್ಳೂರ ಅವರನ್ನು ಬಂಧಿಸುತ್ತಿದ್ದಂತೆಯೇ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ.ಅಸೋಡೆ ತಲೆಮರೆಸಿಕೊಂಡಿದ್ದರು. 2018ರಲ್ಲಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಹೇಳಿದ್ದರು.

ಕೃತ್ಯ ನಡೆದ ಸಂದರ್ಭದಲ್ಲಿ ರಾಮಚಂದ್ರರಾವ್ ಉತ್ತರ ವಲಯದ ಐಜಿಪಿ ಆಗಿದ್ದರು. ಸ್ಥಳೀಯ ಶಾಸಕರ ಶಿಫಾರಸಿನ ಮೇರೆಗೆ ಅವರು ಗೋಪಾಲ್ ಹಳ್ಳೂರ ಅವರನ್ನು ಚಡಚಣ ಠಾಣೆಗೆ ವರ್ಗ ಮಾಡಿದ್ದರು. ಚಡಚಣ ಸಹೋದರರನ್ನು ಮುಗಿಸುವ ಉದ್ದೇಶದಿಂದಲೇ ಮಹಾದೇವ ಭೈರಗೊಂಡನ ಸೂಚನೆ ಮೇರೆಗೆ ಹಳ್ಳೂರ ಅವರನ್ನು ಈ ಠಾಣೆಗೆ ಕಳುಹಿಸಲಾಗಿತ್ತು ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದರು.

ಈ ಬಗ್ಗೆ ಸಿಐಡಿ ರಾವ್ ಅವರನ್ನು ವಿಚಾರಣೆ ಮಾಡಿತ್ತು. ನಾನು ಕಾನೂನಿನ ಪ್ರಕಾರವೇ ಹಳ್ಳೂರ ಅವರ ವರ್ಗ ಮಾಡಿದ್ದೆ. ಅವರು ಧರ್ಮರಾಜನನ್ನು ಎನ್‌ಕೌಂಟರ್ ಮಾಡುವ ಬಗ್ಗೆ ನನಗೂ ಮಾಹಿತಿ ಕೊಟ್ಟಿರಲಿಲ್ಲ. ನಂತರ ಎಸ್ಪಿ ಕರೆ ಮಾಡಿ ದಾಳಿಯ ಬಗ್ಗೆ ಹೇಳಿದರು. ಆ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೆ. ಈ ಪ್ರಕರಣದಲ್ಲಿ ನನ್ನಿಂದ ಲೋಪವಾಗಿಲ್ಲ ಎಂದು ರಾವ್ ಹೇಳಿಕೆ ನೀಡಿದ್ದರು.

ಧರ್ಮರಾಜ ಚಡಚಣ ಎನ್‌ಕೌಂಟರ್‌ ರಾಜ್ಯದಲ್ಲಿ ಭಾರೀ ಚರ್ಚೆಗೀಡಾಗಿತ್ತು . ಆಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ. ಸಮ್ಮಿಶ್ರ ಸರಕಾರ ರಚನೆ ಬಳಿಕ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ರಾಮಚಂದ್ರ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರೇ ಸುಪಾರಿ ಹಂತಕರಾಗೋದಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈ ವೇಳೆ ಸಿಎಂ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ರಾವ್ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಮತ್ತಷ್ಟು ಗರಂ ಆದ ಸಿಎಂ, ಕರ್ನಾಟಕ ಪೊಲೀಸ್ ಎಂದರೆ ಎಷ್ಟು ಮರ್ಯಾದೆ ಇತ್ತು. ಪೊಲೀಸ್ ಇಲಾಖೆಯ ಮರ್ಯಾದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಒಬ್ಬ ಕೊಲೆಗಾರ ಪೊಲೀಸರಿಗೆ ಮತ್ತೊಂದು ಕೊಲೆ ಮಾಡಲು ಸುಪಾರಿ ನೀಡುತ್ತಾನೆ ಅಂದ್ರೆ ನೀವೆಷ್ಟು ಬಲಿಷ್ಟರು ಎನ್ನುವುದು ತಿಳಿಯುತ್ತದೆ. ಇದು ನಾಚಿಕೆಗೇಡಿನ ಸಂಗತಿ ಎಂದಿದ್ದರು.

ಅಂದಿನ ಸಿಐಡಿ ಎಸ್ಪಿ ಆನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ, ಈ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಪಾತ್ರ ಇಲ್ಲ ಎಂದು ಸಾಬೀತಾಗಿತ್ತು.

ಆಗಾಗ ಆರೋಪಗಳ ಹೊರತಾಗಿಯೂ ರಾಮಚಂದ್ರ ರಾವ್ ಅವರು ಭಡ್ತಿ ಪಡೆಯುತ್ತಾ, ಹುದ್ದೆ ಪಡೆಯುತ್ತಾ ಬಂದಿದ್ದರು. ಆದರೆ ಈಗ ಅವರ ವಿರುದ್ಧ ಅತ್ಯಂತ ಗುರುತರ ಆರೋಪ ಎದುರಾಗಿದೆ. ಕಚೇರಿಯಲ್ಲೇ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋಗಳು ಬಯಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News