×
Ad

Kerala | Mission 2026ಗೆ ಚಾಲನೆ ನೀಡಿದ ಅಮಿತ್ ಶಾ; ಕೇರಳ ರಾಜಕೀಯದಲ್ಲಿ ಈ ಭೇಟಿ ಯಾಕೆ ಪ್ರಾಮುಖ್ಯತೆ ವಹಿಸುತ್ತದೆ?

Update: 2026-01-12 21:00 IST

ಅಮಿತ್ ಶಾ | Photo Credit : PTI 

ರವಿವಾರ (ಜನವರಿ 11) ಕೇರಳಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುವನಂತಪುರಂನಲ್ಲಿ ನಡೆದ ಕೇರಳ ಕೌಮುದಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಹೊಂದಿದ ಕೇರಳ, ಸುರಕ್ಷಿತ ಕೇರಳ ಮತ್ತು ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸುವ ಕೇರಳವನ್ನು ನಿರ್ಮಿಸುವುದೇ ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಕೇರಳದ ಸಂಸ್ಕೃತಿ, ಸಾಹಿತ್ಯ ಮತ್ತು ಶಿಕ್ಷಣದ ಮೇಲಿನ ಉತ್ಸಾಹವು ಈ ರಾಜ್ಯವನ್ನು ಇಡೀ ದೇಶದ ಉನ್ನತ ರಾಜ್ಯಗಳಲ್ಲಿ ಒಂದಾಗಿ ರೂಪಿಸಿದೆ. ಇಡೀ ಭಾರತ ಇದರಲ್ಲಿ ನಂಬಿಕೆ ಹೊಂದಿದೆ. ಆಯುರ್ವೇದದಿಂದ ಐಟಿಯವರೆಗೆ, ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಹಿನ್ನೀರಿನಿಂದ ಬೌದ್ಧಿಕ ಚರ್ಚೆಗಳವರೆಗೆ ಎಲ್ಲವೂ ಇಲ್ಲಿದೆ. ಕೇರಳವು ಈ ಎಲ್ಲ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ.

ಆದರೆ ಕೇರಳದಲ್ಲಿ ಎರಡು ವಿರೋಧ ಪಕ್ಷಗಳ ಮೈತ್ರಿಕೂಟಗಳ ನಡುವಿನ ಅಧಿಕಾರ ಪರ್ಯಾಯ ಚಕ್ರವು ರಾಜಕೀಯದಲ್ಲಿ ಒಂದು ರೀತಿಯ ನಿಶ್ಚಲತೆಯನ್ನು ತಂದಿದೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಈ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಹೊಸ ಕಲ್ಪನೆ, ಹೊಸ ರಕ್ತ ಮತ್ತು ಹೊಸ ರೀತಿಯ ರಾಜಕೀಯಕ್ಕಾಗಿ ಕೇರಳದ ಜನರಿಗೆ ಮನವಿ ಮಾಡಲು ನಾನು ಬಂದಿದ್ದೇನೆ. ನಮ್ಮ ಪಕ್ಷ ಮತ್ತು ನಮ್ಮ ಮೈತ್ರಿಕೂಟ ಮಾತ್ರ ಕೇರಳದ ಅಗತ್ಯಗಳನ್ನು ಪೂರೈಸಲು ಸಾಧ್ಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿ ಹೊಂದಿದ ಕೇರಳದ ದೃಷ್ಟಿಕೋನವನ್ನು ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸಾಕಾರಗೊಳಿಸಬಹುದು ಎಂದು ಅಮಿತ್ ಶಾ ಹೇಳಿದರು.

ಕೇರಳದಲ್ಲಿ Mission 2026ಗೆ ಚಾಲನೆ

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಚುನಾಯಿತ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿನ ಗೆಲುವು ರಾಜ್ಯದಲ್ಲಿ ಸರ್ಕಾರ ರಚಿಸುವ ಅಂತಿಮ ಗುರಿಯತ್ತ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.

ಈ ವೇಳೆ ಮುಂಬರುವ ವಿಧಾನಸಭಾ ಚುನಾವಣೆಗೆ “ಮಿಷನ್ 2026” ಅಭಿಯಾನಕ್ಕೆ ಅವರು ಅಧಿಕೃತ ಚಾಲನೆ ನೀಡಿದರು. “ನಮಗೆ ಅಭಿವೃದ್ಧಿ ಹೊಂದಿದ ಕೇರಳ ಬೇಕು (ವಿಕಸಿತ ಕೇರಳ)” ಎಂಬ ಬಿಜೆಪಿಯ ಅಭಿಯಾನದ ಮೂರು ಅಂಶಗಳ ಕಾರ್ಯಸೂಚಿಯನ್ನು ಘೋಷಿಸಿದ ಅವರು, ಅಭಿವೃದ್ಧಿ ಹೊಂದಿದ ಕೇರಳ, ಸುರಕ್ಷಿತ ಕೇರಳ ಮತ್ತು ನಂಬಿಕೆಯ ರಕ್ಷಣೆ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.

‘ಮಾರಾತ್ತದ್ ಇನಿ ಮಾರುಮ್’ (ಬದಲಾಗದೇ ಇದ್ದದ್ದು ಇನ್ಮುಂದೆ ಬದಲಾಗುತ್ತದೆ) ಎಂಬ ಘೋಷಣೆಯೊಂದಿಗೆ ಮಿಷನ್ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಪಾಲು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ.

ಕೇರಳದಲ್ಲಿನ ಈ ಬದಲಾವಣೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ನಾವು 30 ಗ್ರಾಮ ಪಂಚಾಯತ್‌ಗಳನ್ನು ಗೆದ್ದಿದ್ದೇವೆ. 79ರಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ತಿರುವನಂತಪುರಂ ಕಾರ್ಪೊರೇಷನ್ ಮತ್ತು ಎರಡು ಪುರಸಭೆಗಳನ್ನು ಗೆದ್ದಿದ್ದೇವೆ. ಇಂದು ಬಿಜೆಪಿ ತಿರುವನಂತಪುರಂನಲ್ಲಿ ಮೇಯರ್ ಸ್ಥಾನವನ್ನು ಹೊಂದಿದೆ. ನಾಳೆ ನಾವು ಕೇರಳದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಹೊಂದುತ್ತೇವೆ ಎಂದು ಶಾ ಹೇಳಿದರು.

ನಮ್ಮ ಗೆಲುವು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಥವಾ ಜೈಲಿನಲ್ಲಿ ವರ್ಷಗಳನ್ನು ಕಳೆದ ಸಾವಿರಾರು ಕಾರ್ಯಕರ್ತರ ತ್ಯಾಗದ ಮೇಲೆ ನಿರ್ಮಿತವಾಗಿದೆ. ನಮ್ಮ ಮತ ಹಂಚಿಕೆ 2014ರಲ್ಲಿ 11% ಇತ್ತು. ಅದು 2019ರಲ್ಲಿ 16%ಕ್ಕೆ, 2024ರಲ್ಲಿ 20%ಕ್ಕೆ ಏರಿಕೆಯಾಗಿದೆ. ಈಗಿರುವ 20% ಮತಪಾಲು ಶೇ 30 ಅಥವಾ 40ಕ್ಕೆ ಹೆಚ್ಚಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.

1984ರಲ್ಲಿ ನಾವು ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನಗಳಿಂದ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಂತೆಯೇ, 2026ರಲ್ಲಿ ಕೂಡಾ ಇದು ಸಂಭವಿಸುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಅಧಿಕಾರದಿಂದ ಹೊರಡುವ ಸಮಯ ಬಂದಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ಕಮ್ಯುನಿಸ್ಟ್ ಪಕ್ಷಗಳು ಪ್ರಪಂಚದಾದ್ಯಂತ ಕಣ್ಮರೆಯಾಗಿವೆ. ಕಾಂಗ್ರೆಸ್ ಪಕ್ಷವೂ ದೇಶಾದ್ಯಂತ ಮರೆಯಾಗುತ್ತಿದೆ. ಈಗ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮಾತ್ರ ಕೇರಳವನ್ನು ಅಭಿವೃದ್ಧಿಯ ಹಾದಿಯತ್ತ ಕೊಂಡೊಯ್ಯಬಲ್ಲದು ಎಂದು ಅವರು ಹೇಳಿದರು.

ರಾಜ್ಯ ಮತ್ತು ದೇಶದ ಹೊರಗೆ ದುಡಿಯುವ ಯುವಕರ ಶ್ರಮದ ಹಣದ ಮೇಲೆ ಆಧಾರಿತ ಅಭಿವೃದ್ಧಿಗೆ ಬದಲಾಗಿ, ಬಿಜೆಪಿ ಕೇರಳದ ಪ್ರತಿಯೊಬ್ಬ ನಾಗರಿಕನಿಗೂ ಪ್ರಯೋಜನಕಾರಿಯಾದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮವನ್ನು ಭರವಸೆ ನೀಡುತ್ತದೆ.

ಜಮಾತ್-ಎ-ಇಸ್ಲಾಮಿ ಹಿಂದ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿಭಜಕ ಕಾರ್ಯಸೂಚಿಯಿಂದ ಎಲ್‌ಡಿಎಫ್ ಅಥವಾ ಯುಡಿಎಫ್ ಕೇರಳವನ್ನು ರಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಅವು ಅವರೊಂದಿಗೆ ಮೈತ್ರಿ ಮಾಡಿಕೊಂಡಿವೆ. ಎರಡೂ ರಂಗಗಳು ಓಲೈಕೆಯನ್ನು ನೀತಿಯಾಗಿ ಒಪ್ಪಿಕೊಂಡಿವೆ. ನೀವು ಓಲೈಕೆಯನ್ನು ನೀತಿಯಾಗಿ ಸ್ವೀಕರಿಸಿದಾಗ ಯಾರಿಗೂ ನ್ಯಾಯ ನೀಡಲು ಸಾಧ್ಯವಿಲ್ಲ. ಬಿಜೆಪಿಯ ನೀತಿ ಎಲ್ಲರಿಗೂ ನ್ಯಾಯ – ಯಾರನ್ನೂ ಓಲೈಕೆ ಮಾಡದೇ ಇರುವುದು ಎಂದು ಶಾ ಹೇಳಿದರು.

ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರಕರಣ

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನದ ಕಲಾಕೃತಿಗಳ ಕಳ್ಳತನ ಆರೋಪವು ಅಭಿಯಾನದ ಪ್ರಮುಖ ಕೇಂದ್ರಬಿಂದುವಾಗಿದೆ ಎಂದು ಶಾ ಹೇಳಿದರು. ತನಿಖೆಯನ್ನು ತಟಸ್ಥ ಸಂಸ್ಥೆಗೆ ಹಸ್ತಾಂತರಿಸುವವರೆಗೆ ಬಿಜೆಪಿ ಕೇರಳದ ಪ್ರತಿಯೊಂದು ಹಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.

ಶಬರಿಮಲೆಯಲ್ಲಿ ನಡೆದ ತಪ್ಪುಗಳು ಕೇವಲ ಕೇರಳಕ್ಕೆ ಸೀಮಿತವಾದ ವಿಷಯವಲ್ಲ. ಇದು ದೇಶಾದ್ಯಂತದ ಜನರ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ನಾನು ಎಫ್‌ಐಆರ್ ಅನ್ನು ನೋಡಿದ್ದೇನೆ. ಇದರಲ್ಲಿ ಕೆಲವು ಜನರನ್ನು ಉಳಿಸಲು ಪ್ರಯತ್ನಿಸಲಾಗಿದೆ. ಇಬ್ಬರು ಸಚಿವರ ಮೇಲೆ ಅನುಮಾನವಿದೆ. ಆರೋಪಿಗಳೊಂದಿಗೆ ಫೋಟೋಗಳಲ್ಲಿ ಅವರ ನಾಯಕರು ಕಾಣಿಸಿಕೊಂಡಿರುವುದರಿಂದ ಯುಡಿಎಫ್ ಕೂಡಾ ವಿಶ್ವಾಸಾರ್ಹ ತನಿಖೆಯ ಭರವಸೆ ನೀಡಲು ಸಾಧ್ಯವಿಲ್ಲ. ತನಿಖೆಯನ್ನು ತಟಸ್ಥ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಶಾ ಒತ್ತಾಯಿಸಿದರು.

ದೊಡ್ಡ ರಾಜಕೀಯ ಗುರಿ

ಬಿಜೆಪಿಯಿಂದ ಆಯ್ಕೆಯಾದ 2,000ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ಪಕ್ಷದ ದೀರ್ಘಕಾಲೀನ ಗುರಿಯನ್ನು ವಿವರಿಸಿದರು. ಬಿಜೆಪಿ ಕೇವಲ ಮತಪಾಲು ಹೆಚ್ಚಿಸಲು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿಲ್ಲ. ಕೇರಳದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುವ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.

ಎಲ್‌ಡಿಎಫ್ ಮತ್ತು ಯುಡಿಎಫ್ ನಡುವಿನ “ಮ್ಯಾಚ್ ಫಿಕ್ಸಿಂಗ್” ಕಾರಣದಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಧಿಕಾರ ಪರ್ಯಾಯವಾಗುತ್ತಿದ್ದರೂ ಆಡಳಿತದ ಆದ್ಯತೆಗಳು ಬದಲಾಗದೆ ಉಳಿದಿವೆ. ಇದರ ಪರಿಣಾಮವಾಗಿ ಮೂಲಸೌಕರ್ಯ ಯೋಜನೆಗಳು, ನೀತಿ ಜಾರಿ ವಿಳಂಬವಾಗುತ್ತಿದ್ದು ಆರ್ಥಿಕ ಅವಕಾಶಗಳು ಕಳೆದುಹೋಗುತ್ತಿವೆ ಎಂದು ಅವರು ಹೇಳಿದರು.

ಕೇರಳದಲ್ಲಿ ಬಿಜೆಪಿಯ ಮತಗಳಲ್ಲಿ ಹೆಚ್ಚಳ

ಕೇರಳದಲ್ಲಿ ಎನ್‌ಡಿಎಯ ಮತಪಾಲು ಕ್ರಮೇಣ ಏರಿಕೆಯಾಗುತ್ತಿದೆ. 2001ರಲ್ಲಿ ಸುಮಾರು 3% ಇದ್ದ ಮತಪಾಲು, 2016 ಮತ್ತು 2021ರ ನಡುವೆ 12–15%ಕ್ಕೆ ಏರಿಕೆಯಾಗಿದೆ ಎಂದು ಚುನಾವಣಾ ದತ್ತಾಂಶಗಳು ಸೂಚಿಸುತ್ತವೆ. ಈ ಬೆಳವಣಿಗೆ ಅಸೆಂಬ್ಲಿ ಸ್ಥಾನಗಳಲ್ಲಿ ಇನ್ನೂ ಪ್ರತಿಬಿಂಬಿಸದಿದ್ದರೂ, ಪುನರಾವರ್ತಿತ ಸೋಲುಗಳ ನಡುವೆಯೂ ಪಕ್ಷದ ಸಾಂಸ್ಥಿಕ ನೆಲೆ ಬಲವಾಗಿ ಉಳಿದಿದೆ.

ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಕಳೆದ ಎರಡು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಇತ್ತೀಚಿನ ಚುನಾವಣೆಯಲ್ಲಿ 101 ವಾರ್ಡ್‌ಗಳಲ್ಲಿ 50ರಲ್ಲಿ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿ ಮೇಯರ್ ಸ್ಥಾನವನ್ನು ಪಡೆದುಕೊಂಡಿದೆ. ಆರು ಪುರಸಭೆಗಳಲ್ಲಿ ಬಿಜೆಪಿ–ಎನ್‌ಡಿಎ ಒಕ್ಕೂಟವು 23%ಕ್ಕೂ ಅಧಿಕ ಸಂಯುಕ್ತ ಮತಪಾಲು ಗಳಿಸಿದೆ. 79 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಇದು ಬಿಜೆಪಿ ಕೇವಲ ನಗರ ಕೇಂದ್ರಿತ ಪಕ್ಷವಲ್ಲ ಎಂಬುದನ್ನು ತೋರಿಸುತ್ತದೆ ಎಂದು ಶಾ ಹೇಳಿದರು.

ಶಬರಿಮಲೆ ವಿಷಯದ ರಾಜಕೀಯ ಪ್ರಭಾವ

ಶಬರಿಮಲೆ ವಿಷಯವು ಕೇರಳ ರಾಜಕೀಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿ ಮುಂದುವರಿದಿದೆ. ಚುನಾವಣಾ ಫಲಿತಾಂಶಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಿದ್ರೂ, ವಿಶೇಷವಾಗಿ ದಕ್ಷಿಣ ಕೇರಳದಲ್ಲಿ ಹಿಂದೂ ಮತದಾರರೊಂದಿಗೆ ಸಂಪರ್ಕ ಬಲಪಡಿಸಲು ಈ ವಿಷಯ ಸಹಕಾರಿಯಾಗಿದೆ ಎಂದು ಬಿಜೆಪಿ ನಂಬಿದೆ.

ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣಾ ದತ್ತಾಂಶಗಳು ಸಾಂಪ್ರದಾಯಿಕವಾಗಿ ಎಡಪಕ್ಷಗಳತ್ತ ಒಲವು ಹೊಂದಿದ್ದ ಈಳವ ಒಬಿಸಿ ಸಮುದಾಯದ ಕೆಲವು ವಿಭಾಗಗಳಲ್ಲಿ ಮತಬದಲಾವಣೆಯನ್ನು ಸೂಚಿಸುತ್ತವೆ. ಇಂತಹ ಸೀಮಿತ ಚಲನೆಯೇ ನಿಕಟ ಹೋರಾಟದ ಕ್ಷೇತ್ರಗಳಲ್ಲಿ ನಿರ್ಣಾಯಕವಾಗುತ್ತದೆ. ಒಬಿಸಿ ಸಮುದಾಯವು ಹಿಂದೂ ಸಮುದಾಯದ ಸುಮಾರು 26% ಅನ್ನು ಹೊಂದಿದೆ.

ಬಿಜೆಪಿಯ ಪ್ರಮುಖ ನಾಯಕರಾದ ಕೆ. ಸುರೇಂದ್ರನ್, ವಿ. ಮುರಳೀಧರನ್ ಮತ್ತು ಶೋಭಾ ಸುರೇಂದ್ರನ್ ಒಬಿಸಿ ಸಮುದಾಯದವರಾಗಿದ್ದಾರೆ.

ಅಲ್ಪಸಂಖ್ಯಾತ ಸಂಪರ್ಕದ ಮೂಲಕ ಮತ ಬೇಟೆ

ಮೊದಲ ಬಾರಿಗೆ ಬಿಜೆಪಿಯು ಪಕ್ಷದ ಉನ್ನತ ಶ್ರೇಣಿಯಲ್ಲಿ ಇಬ್ಬರು ಕ್ರಿಶ್ಚಿಯನ್ ನಾಯಕರನ್ನು ಸೇರಿಸಿಕೊಂಡಿದೆ. ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶೋನ್ ಜಾರ್ಜ್ ಮತ್ತು ಅನೂಪ್ ಆಂಟನಿ ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜಾರ್ಜ್ ಕುರಿಯನ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸಿರುವುದೂ ಅಲ್ಪಸಂಖ್ಯಾತ ಮತಗಟ್ಟೆಗಳ ದೃಷ್ಟಿಯಿಂದ ಮಹತ್ವದ್ದಾಗಿದೆ.

ಉತ್ತರ ಕೇರಳದಲ್ಲಿ ಕಾಸರಗೋಡಿನ ಮಂಜೇಶ್ವರ ಕ್ಷೇತ್ರವನ್ನು ಬಿಜೆಪಿ ಪ್ರಮುಖ ಗುರಿಯಾಗಿ ಗುರುತಿಸಿದೆ. ಹಿಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಕೇವಲ 80 ಮತಗಳ ಅಂತರದಿಂದ ಸೋತಿದ್ದರು. ಅಷ್ಟೇ ಕಡಿಮೆ ಅಂತರ ಇರುವುದರಿಂದ ಈ ಬಾರಿ ಗೆಲುವಿನ ಸಾಧ್ಯತೆ ಇದೆ ಎಂದು ಪಕ್ಷ ನಂಬಿದೆ.

ತ್ರಿಶೂರ್ ವಿಜಯ ಮತ್ತು ಕ್ರಿಶ್ಚಿಯನ್ ಮತಗಟ್ಟೆ

ಕೇರಳದ ಜನಸಂಖ್ಯೆಯಲ್ಲಿ ಸುಮಾರು 48% ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಇದ್ದಾರೆ. ಅಲ್ಪಸಂಖ್ಯಾತ ಸಂಪರ್ಕ ಬಿಜೆಪಿಯ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲೇ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಅವರ ಗೆಲುವನ್ನು ಮಹತ್ವದ ಯಶಸ್ಸಾಗಿ ಪರಿಗಣಿಸಲಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು 4,12,338 ಮತಗಳು (37.8% ಮತಪಾಲು) ಪಡೆದು 74,686 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈ ಗೆಲುವನ್ನು ಜಾತಿಯನ್ನು ಮೀರಿ ನಡೆದ ಹಿಂದೂ ಬಲವರ್ಧನೆಯ ಉದಾಹರಣೆಯಾಗಿ ಬಿಜೆಪಿ ನೋಡಿದೆ.

ದೇಶದ ಇತರೆ ಭಾಗಗಳಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಗಳಿಗೆ ಸಂಬಂಧಿಸಿದ ಘಟನೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟುಮಾಡಿದ್ದರೂ, ರಾಜೀವ್ ಚಂದ್ರಶೇಖರ್ ಅವರಂತಹ ನಾಯಕರ ನೇತೃತ್ವದ ಕೇರಳ ಬಿಜೆಪಿ ನಾಯಕತ್ವವು ಚರ್ಚ್ ಮುಖಂಡರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಂಡಿದ್ದು, ಅಭಿವೃದ್ಧಿಯೇ ಮೊದಲ ಆದ್ಯತೆ ಎಂಬ ಸಂದೇಶವನ್ನು ಮುಂದಿಟ್ಟಿದೆ.

35 ‘ಎ–ಶ್ರೇಣಿ’ ಕ್ಷೇತ್ರಗಳು

ಕೇರಳದಲ್ಲಿ ಬಿಜೆಪಿ ಸುಮಾರು 35 “ಎ–ಶ್ರೇಣಿ” ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ನೇಮಮ್, ವಟ್ಟಿಯೂರ್ಕಾವು, ಕಝಕೂಟಂ ಮತ್ತು ಅಟ್ಟಿಂಗಲ್ ಕ್ಷೇತ್ರಗಳು ಪ್ರಮುಖವಾಗಿವೆ. ಅಟ್ಟಿಂಗಲ್ ಕ್ಷೇತ್ರದಲ್ಲಿ ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಮತಪಾಲು 24.97%ರಿಂದ 31.64%ಕ್ಕೆ ಏರಿಕೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಅಭಿವೃದ್ಧಿ ನಿಧಿಗಳ ಲೆಕ್ಕಾಚಾರ

ಕೇರಳ ಕೌಮುದಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಕೇಂದ್ರ ಸರ್ಕಾರವು ಕೇರಳಕ್ಕೆ 72,000 ಕೋಟಿ ರೂ. ನೀಡಿದ್ದರೆ, 2014ರಿಂದ 2024ರವರೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 3.13 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ನಿಧಿಯನ್ನು ಒದಗಿಸಿದೆ ಎಂದು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಗೆ 22,000 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 4,000 ಕೋಟಿ ರೂ., ರೈಲ್ವೆ ಮತ್ತು ವಿಮಾನ ನಿಲ್ದಾಣಗಳಿಗೆ 17,000 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ. ನಗರಾಭಿವೃದ್ಧಿಗೆ ಮಾತ್ರವೇ 22,000 ಕೋಟಿ ರೂ. ನೀಡಲಾಗಿದೆ.

ಅಮೃತ್ ಯೋಜನೆಯಡಿ ಆಲಪ್ಪುಳ, ಕಣ್ಣೂರು, ಕೊಚ್ಚಿ, ಕೊಲ್ಲಂ, ಕೋಝಿಕೋಡ್‌, ಪಾಲಕ್ಕಾಡ್‌, ತಿರುವನಂತಪುರಂ, ತ್ರಿಶೂರ್ ಮತ್ತು ಗುರುವಾಯೂರು ನಗರಗಳಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತಿರುವನಂತಪುರಂ ಮತ್ತು ಕೊಚ್ಚಿಯನ್ನು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಸೇರಿಸಲಾಗಿದೆ.

ಜನ ವಿಕಾಸ್ ಕಾರ್ಯಕ್ರಮದಡಿ, ಮೋದಿ ಸರ್ಕಾರವು 130 ಕೋಟಿ ರೂ.ಗಳ ನೆರವಿನೊಂದಿಗೆ ಸುಮಾರು 19 ಸಮುದಾಯ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದೆ. ಕೇರಳಕ್ಕೆ ಅನ್ಯಾಯ ಮಾಡಿರುವುದು ನರೇಂದ್ರ ಮೋದಿ ಸರ್ಕಾರವಲ್ಲ, ಕೇರಳ ಸರ್ಕಾರವೇ. ನವ ಕೇರಳ ನಿರ್ಮಾಣವಾದಾಗ ಮಾತ್ರ ನವ ಭಾರತ ಹೊರಹೊಮ್ಮುತ್ತದೆ. ಅಭಿವೃದ್ಧಿ ಹೊಂದಿದ ಕೇರಳದಿಂದ ಮಾತ್ರ ಅಭಿವೃದ್ಧಿ ಹೊಂದಿದ ಭಾರತ ಸಾಧ್ಯ ಎಂದು ಶಾ ಹೇಳಿದರು.

ಕೇಂದ್ರ ನೀತಿಗಳ ವಿರುದ್ಧ ಎಲ್‌ಡಿಎಫ್ ಪ್ರತಿಭಟನೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕೇರಳದ ಎಲ್‌ಡಿಎಫ್ ನೇತೃತ್ವದಲ್ಲಿ ಸೋಮವಾರ ತಿರುವನಂತಪುರಂನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ. ಹಣಕಾಸಿನ ಸಂಪನ್ಮೂಲಗಳು ಮತ್ತು ಬೆಂಬಲದ ನ್ಯಾಯಸಮ್ಮತ ಪಾಲನ್ನು ನಿರಾಕರಿಸಲಾಗುತ್ತಿದೆ. ಇದು ಉಳಿವಿಗಾಗಿ ನಡೆಸುವ ಹೋರಾಟ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಕೇಂದ್ರವು ಕೇರಳದ ಬಗ್ಗೆ ಪಕ್ಷಪಾತ ಮತ್ತು ಸೇಡಿನ ಮನೋಭಾವ ಹೊಂದಿದೆ. ರಾಜ್ಯವು ಸಾಂವಿಧಾನಿಕವಾಗಿ ಅರ್ಹವಾಗಿರುವುದನ್ನೇ ಕೇಳುತ್ತಿದೆ. ತನ್ನ ನೀತಿಗಳ ಮೂಲಕ ಕೇಂದ್ರವು ರಾಜ್ಯದ ಪ್ರಗತಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಪಿಣರಾಯಿ ಆರೋಪಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, ಕೇರಳದಲ್ಲಿ ಶಾ ಅವರ ಕನಸುಗಳು ನನಸಾಗುವುದಿಲ್ಲ ಎಂದರು. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇರಳದ ತೆರಿಗೆ ಪಾಲು, 14ನೇ ಹಣಕಾಸು ಆಯೋಗದ ಅವಧಿಗಿಂತ ಕಡಿಮೆಯಾಗಿದೆ. 14ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಕಡಿತಗೊಳಿಸಲು ಮೋದಿ ಸರ್ಕಾರ ಪ್ರಯತ್ನಿಸಿದೆ ಎಂಬ ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಇನ್ನೂ ಖಂಡಿಸಿಲ್ಲ. ಈ ಬಗ್ಗೆ ಅಮಿತ್ ಶಾ ಸ್ಪಷ್ಟನೆ ನೀಡಬೇಕಿತ್ತು ಎಂದು ಪಿಣರಾಯಿ ಹೇಳಿದರು.

ಈ ಭೇಟಿ ಏಕೆ ಮುಖ್ಯ?

ಅಮಿತ್ ಶಾ ಅವರ ಈ ಭೇಟಿ ಕೇವಲ ಚುನಾವಣಾ ಭರವಸೆಗಳಿಗೆ ಸೀಮಿತವಾಗದೇ, ಪಕ್ಷದ ಸಂಘಟನಾತ್ಮಕ ಬಲವರ್ಧನೆಗೆ ಹೆಚ್ಚು ಮಹತ್ವ ನೀಡಿದ ಭೇಟಿ ಎಂದು ವಿಶ್ಲೇಷಿಸಲಾಗಿದೆ. ಕಳೆದ ಮೂರು ಚುನಾವಣೆಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ, ಎನ್‌ಡಿಎ ನಾಯಕರು ಮತ್ತು ರಾಜ್ಯದ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದವು ಅಭ್ಯರ್ಥಿಗಳ ಆಯ್ಕೆ, ಕಾರ್ಯತಂತ್ರ ರೂಪಣೆ ಮತ್ತು ಬೂತ್ ಮಟ್ಟದ ಯೋಜನೆಗಳನ್ನು ಬಲಪಡಿಸುವ ನಿರೀಕ್ಷೆ ಇದೆ.

ಈ ಮಹತ್ವಾಕಾಂಕ್ಷೆ ಚುನಾವಣಾ ಸ್ಥಾನಗಳಾಗಿ ರೂಪಾಂತರಗೊಳ್ಳುತ್ತದೆಯೇ ಎಂಬುದನ್ನು ಮುಂದಿನ ದಿನಗಳು ತೋರಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News