ಕೊನೇ ಹಂತದಲ್ಲಿ ಎದುರಾದ ಸಮಸ್ಯೆಯಿಂದ ಇಸ್ರೋದ PSLV-C62 ಮಿಷನ್ ವಿಫಲ: ಇಲ್ಲಿವರೆಗೆ ಯಾವೆಲ್ಲ ಕಾರ್ಯಾಚರಣೆ ವಿಫಲವಾಗಿತ್ತು?
Photo Credit : PTI
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು(ಜನವರಿ 12) ಬೆಳಿಗ್ಗೆ 10:18 ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 16 ಉಪಗ್ರಹಗಳನ್ನು ಹೊತ್ತೊಯ್ದ PSLV-C62 ರಾಕೆಟ್ ನ್ನು ಉಡಾವಣೆ ಮಾಡಿದೆ. 2026ರ ಮೊದಲ ಉಡಾವಣೆಗೆ ಇದಾಗಿದೆ. 260 ಟನ್ ತೂಕದ ಉಪಗ್ರಹಗಳನ್ನು ಹೊತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV)ಸಿ-62 ರಾಕೆಟ್ ನಭಕ್ಕೆ ಚಿಮ್ಮಿದ್ದು, ಮೂರನೇ ಹಂತದಲ್ಲಿ ತಾಂತ್ರಿಕ ದೋಷದಿಂದಾಗಿ ಪಥ ಬದಲಾಯಿಸಿದೆ. ಪಿಎಸ್‌ಎಲ್‌ವಿಯ ಮೂರನೇ ಹಂತದಲ್ಲಿ ಯಾವುದೇ ಅಡಚಣೆ ಬಹುತೇಕ ಸಂಪೂರ್ಣ ಮಿಷನ್ ವೈಫಲ್ಯಕ್ಕೆ ಕಾರಣವಾಗುತ್ತದೆ. PSLV-C62 ಕಾರ್ಯಾಚರಣೆ ವಿಫಲವಾಗಿದ್ದು ಇದರೊಂದಿಗೆ ಉಡಾವಣೆಯಲ್ಲಿ ಹೊತ್ತೊಯ್ಯಲಾದ ಎಲ್ಲಾ 16 ಉಪಗ್ರಹಗಳು ಬಾಹ್ಯಾಕಾಶದಲ್ಲೇ ನಿಯಂತ್ರಣ ಕಳೆದುಕೊಂಡಿವೆ.
ವೈಫಲ್ಯ ವರದಿಯಾಗುತ್ತಿದ್ದಂತೆ ಪ್ರತಿಕ್ರಯಿಸಿದ ಇಸ್ರೊ ಅಧ್ಯಕ್ಷ ಡಾ. ವಿ ನಾರಾಯಣನ್, ಇಂದು ನಾವು PSLV-C62/EOS-N1 ಮಿಷನ್ ಅನ್ನು ಪ್ರಯತ್ನಿಸಿದ್ದೇವೆ. PSLV ಎರಡು ಘನ ಹಂತಗಳು ಮತ್ತು ಎರಡು ದ್ರವ ಹಂತಗಳನ್ನು ಹೊಂದಿರುವ ನಾಲ್ಕು ಹಂತದ ವಾಹನವಾಗಿದೆ. ಮೂರನೇ ಹಂತದ ಅಂತ್ಯದವರೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು, ಮೂರನೇ ಹಂತದ ಅಂತ್ಯದ ವೇಳೆಗೆ ರಾಕೆಟ್ ಅನಿರೀಕ್ಷಿತವಾಗಿ ತಿರುಗಲು ಶುರುವಾಯಿತು.ತರುವಾಯ ಪಥ ಬದಲಾವಣೆ ಆಗಿದೆ. ನಾವು ಈ ಬಗ್ಗೆ ವಿಶ್ಲೇಷಿಸುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ಇಸ್ರೊ, ಪಿಎಸ್ಎಲ್ ವಿ- 62 ಕಾರ್ಯಾಚರಣೆಯ ಮೂರನೇ ಹಂತದಲ್ಲಿ ಅಸಹಜತೆ ಕಂಡು ಬಂದಿದೆ. ಈ ಬಗ್ಗೆ ವಿಶ್ಲೇಷಣೆ ಆರಂಭವಾಗಿದೆ ಎಂದು ಮಾಹಿತಿ ನೀಡಿದೆ.
22.5 ಗಂಟೆಗಳ ಕೌಂಟ್‌ಡೌನ್ ನಂತರ, ಭಾರತ ಮತ್ತು ವಿದೇಶಗಳ ಸ್ಟಾರ್ಟ್‌ಅಪ್‌ಗಳು ಮತ್ತು ಶಿಕ್ಷಣ ತಜ್ಞರು ಅಭಿವೃದ್ಧಿಪಡಿಸಿದ EOS-N1 ಉಪಗ್ರಹ ಮತ್ತು 15 ಇತರ ಉಪಗ್ರಹಗಳನ್ನು ಹೊಂದಿರುವ PSLV-C62 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ 10.18 ಕ್ಕೆ ಉಡಾವಣೆ ಮಾಡಲಾಗಿದೆ.
EOS-N1 ಭೂಸರ್ವೇಕ್ಷಣಾ ಉಪಗ್ರಹವನ್ನು ಕಾರ್ಯತಂತ್ರದ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ . ಇಸ್ರೊ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ನೇತೃತ್ವದಲ್ಲಿ ದೇಶೀಯ ಮತ್ತು ವಿದೇಶದ 14 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಗುರಿ ಈ PSLVಯದ್ದಾಗಿತ್ತು. ಪಿಎಸ್‌ಎಲ್‌ವಿ ಇದುವರೆಗೆ 63 ಹಾರಾಟಗಳನ್ನು ಪೂರ್ಣಗೊಳಿಸಿದೆ. ಇದು ಚಂದ್ರಯಾನ-1, ಮಂಗಳಯಾನ, ಆದಿತ್ಯ-ಎಲ್1 ಮತ್ತು ಆಸ್ಟ್ರೋಸ್ಯಾಟ್ ಮಿಷನ್‌ನಂತಹ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಿದೆ. 2017 ರಲ್ಲಿ, ಪಿಎಸ್‌ಎಲ್‌ವಿ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿತ್ತು.
15 ಉಪಗ್ರಹಗಳು:
ಥೈಲ್ಯಾಂಡ್ ಮತ್ತು ಯುಕೆ SSTL (UK) ಜಂಟಿಯಾಗಿ ನಿರ್ಮಿಸಿದ ಥಿಯೋಸ್-2 ಸರ್ವೇಕ್ಷಣಾ ಉಪಗ್ರಹ, ಧ್ರುವ ಸ್ಪೇಸ್ (ಭಾರತ) ನಿಂದ CGUSAT, ಧ್ರುವ ಸ್ಪೇಸ್ ನಿಂದ DSUSAT, ಧ್ರುವ ಸ್ಪೇಸ್ ಮತ್ತು Takeme2Space (ಭಾರತ) ನಿಂದ MOI-1, ಧ್ರುವ ಸ್ಪೇಸ್ ನಿಂದ LACHIT, ಧ್ರುವ ಸ್ಪೇಸ್ ಮತ್ತು ಡಾನ್ ಬಾಸ್ಕೋ ವಿಶ್ವವಿದ್ಯಾಲಯ (ಭಾರತ) ನಿಂದ ಥೈಬೋಲ್ಟ್-3, ನೇಪಾಳ ವಿಶ್ವವಿದ್ಯಾಲಯದ ಅಂತರಕ್ಷ್ಯ ಪ್ರತಿಷ್ಠಾನ (ನೇಪಾಳ) ಮತ್ತು MEA ನಿಂದ ಮುನಾಲ್, ಆರ್ಬಿಟಲ್ ಪ್ಯಾರಡೈಮ್ (ಸ್ಪೇನ್) ನಿಂದ KID ಮತ್ತು RIDE! (ಫ್ರಾನ್ಸ್), ಆಲ್ಟೋಸ್ಪೇಸ್ (ಬ್ರೆಜಿಲ್) ನಿಂದ ಎಡುಸ್ಯಾಟ್, ಆಲ್ಟೋಸ್ಪೇಸ್ ನಿಂದ Uaisat, ಆಲ್ಟೋಸ್ಪೇಸ್ ನಿಂದ ಗ್ಯಾಲಕ್ಸಿ ಎಕ್ಸ್‌ಪ್ಲೋರರ್, ಆಲ್ಟೋಸ್ಪೇಸ್ ನಿಂದ ಆರ್ಬಿಟಲ್ ಟೆಂಪಲ್, ಆಲ್ಟೋಸ್ಪೇಸ್ ನಿಂದ ಅಲ್ಡೆಬರನ್-1, ಲಕ್ಷ್ಮಣ್ ಜ್ಞಾನಪೀಠ್ (ಭಾರತ) ನಿಂದ SanskarSat-1 ಮತ್ತು ಆರ್ಬಿಟ್ಏಡ್ (ಭಾರತ) ನಿಂದ ಆಯುಲ್‌ಸ್ಯಾಟ್.
PSLV-C62 / EOS-N1 ಮಿಷನ್ ಯಾವುದರ ಬಗ್ಗೆ?
PSLV-C62/EOS-N1 ಮಿಷನ್ "ಅನ್ವೇಷಾ, EOS-N1" ಎಂಬ ಹೆಸರಿನ ಭೂ ಸರ್ವೇಕ್ಷಣಾ ಉಪಗ್ರಹ ಮತ್ತು ಇತರ 15 ಉಪಗ್ರಹಗಳನ್ನು ಭೂಮಿಯ ಮೇಲ್ಮೈಯಿಂದ ಕನಿಷ್ಠ ನೂರು ಕಿಲೋಮೀಟರ್ ಎತ್ತರದಲ್ಲಿರುವ Sun-Synchronous Orbit ಗೆ ಕೊಂಡೊಯ್ಯುತ್ತದೆ. PSLV-C62/EOS-N1 ಮಿಷನ್ ಆರಂಭದಲ್ಲಿ ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ ನಿರ್ಮಿಸಿದ ಭೂ ಸರ್ವೇಕ್ಷಣಾ ಉಪಗ್ರಹವನ್ನು ನಿಯೋಜಿಸುತ್ತದೆ, ನಂತರ 14 ಇತರ ಸಹ- ಉಪಗ್ರಹಗಳನ್ನು ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ ಸನ್-ಸಿಂಕ್ರೊನಸ್ ಕಕ್ಷೆಗೆ ನಿಯೋಜಿಸುತ್ತದೆ ಎಂದು ಇಸ್ರೊ ಹೇಳಿತ್ತು.
ಅನ್ವೇಷಾ ಉಪಗ್ರಹ
ಈ ಬಾರಿ PSLV-C62 ರಾಕೆಟ್ ಹೊತ್ತೊಯ್ದ ಪ್ರಮುಖ ಉಪಗ್ರಹದ ಹೆಸರು 'ಅನ್ವೇಷಾ'. ಇದನ್ನು EOS-N1 ಎಂದೂ ಕರೆಯಲಾಗುತ್ತದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಇದು 100 ರಿಂದ 150 ಕಿಲೋಗ್ರಾಂಗಳಷ್ಟು ತೂಕವಿರುವ ಸಣ್ಣ-ಉಪಗ್ರಹವಾಗಿದೆ ಇದು. ಅನ್ವೇಷಾ ಉಪಗ್ರಹ ಹೈಪರ್ ಸ್ಪೆಕ್ಟಲ್ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಮನುಷ್ಯರ ಕಣ್ಣಿಗೆ ಕಾಣದ ವಿವರವನ್ನೂ ಕಲೆಹಾಕುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್-ಸ್ಮಾರ್ಟ್ ಕ್ಯಾಮೆರಾದಂತಿದ್ದು ಕೇವಲ ಫೋಟೋಗಳನ್ನು ಕ್ಲಿಕ್ ಮಾಡುವುದಿಲ್ಲ, ನೇರವಾಗಿ ನೋಡುತ್ತದೆ. ಇದು ಗಡಿ ಭದ್ರತೆ, ಕರಾವಳಿ ತಪಾಸಣೆ, ಕೃಷಿ, ನಗರ ಯೋಜನೆ ಮತ್ತು ಪರಿಸರ ಅಧ್ಯಯನಗಳಲ್ಲಿ ಸಹಾಯ ಮಾಡುತ್ತದೆ. ಇದು ಕಾಡು ಮತ್ತು ಅಲ್ಲಿ ಮುಚ್ಚಿಟ್ಟಿರುವ ಯುದ್ಧ ಟ್ಯಾಂಕ್‌ಗಳ ನಡುವಿನ ವ್ಯತ್ಯಾಸಗಳನ್ನು ನಿಖರವಾಗಿ ಗುರುತಿಸಬಲ್ಲದು .ಈ ಹೈಪರ್‌ಸ್ಪೆಕ್ಟ್ರಲ್ ಉಪಗ್ರಹವು ಅದಕ್ಕೆ ಕಾಣುವ ವಸ್ತುಗಳು ಏನು? ಅದು ಯಾವ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂಬುದನ್ನು ಪತ್ತೆ ಮಾಡುತ್ತದೆ. ಇದು ಗುಪ್ತ ಮಾಹಿತಿಗಳನ್ನು ನೀಡಲು ಸಹಕರಿಸುತ್ತದೆ.
PSLV ಉಡಾವಣೆಯಲ್ಲಿನ ವೈಫಲ್ಯ
ಚಂದ್ರಯಾನ-1 ಹಾಗೂ ಮಂಗಳಯಾನದಂತಹ ಕಾರ್ಯಾಚರಣೆಗಳ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ PSLV ರಾಕೆಟ್ ಅನ್ನು ಇಸ್ರೊದ 'ವರ್ಕ್ ಹಾರ್ಸ್ ' ಕರೆಯಲಾಗುತ್ತದೆ. 1993 ರಲ್ಲಿ ಪ್ರಾರಂಭವಾದಾಗಿನಿಂದ PSLV ಇಸ್ರೊದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನವಾಗಿದ್ದು, 50 ಕ್ಕೂ ಹೆಚ್ಚು ಯಶಸ್ವಿ ಕಾರ್ಯಾಚರಣೆಗಳನ್ನು ಮಾಡಿದೆ.
PSLV-C61
2025 ಮೇ 18, ರಂದು ಭೂ ಸರ್ವೇಕ್ಷಣೆಯ ಉದ್ದೇಶದಿಂದ ಉಡಾವಣೆ ಮಾಡಲಾಗಿದ್ದ PSLV-C61 ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಕ್ಷೆ ಸೇರುವಲ್ಲಿ ವಿಫಲವಾಗಿತ್ತು. ಇದು ಇಸ್ರೊದ 101ನೇ ಉಡ್ಡಯನವಾಗಿತ್ತು . ಮೇ 18ರಂದು ಬೆಳಗ್ಗೆ 5.59ಕ್ಕೆ ರಾಕೆಟ್ ಉಡಾವಣೆ ಆಗಿತ್ತು. ಒಟ್ಟು ನಾಲ್ಕು ಹಂತದಲ್ಲಿ ನಡೆಯುವ ಕಾರ್ಯಾಚರಣೆ ಇದಾಗಿತ್ತು. ಎರಡು ಹಂತಗಳವರೆಗೆ ಎಲ್ಲವೂ ಸುಸೂತ್ರವಾಗಿತ್ತು. ಮೂರನೇ ಹಂತದಲ್ಲಿ ಕಾರ್ಯಾಚರಣೆ ವಿಫಲವಾಗಿತ್ತು. ಇನ್ನಷ್ಟು ಮೇಲೆ ಹೋಗಲು ರಾಕೆಟ್ ನ ಎಂಜಿನ್ ಗೆ ಬೇಕಾದ ಒತ್ತಡ ಸೃಷ್ಟಿಯಾಗಲಿಲ್ಲ. ಎಂಜಿನ್ ಗೆ ಒತ್ತಡ ಸೃಷ್ಟಿಸಿಕೊಡಬೇಕಿದ್ದ ಇಂಧನ ಟ್ಯಾಂಕ್ ನಲ್ಲಿಯೂ ಒತ್ತಡ ಸೃಷ್ಟಿಯಾಗಲಿಲ್ಲ.ಆದ್ದರಿಂದ ನೆಲಮಟ್ಟದಿಂದ 450 ಕಿಮೀನಷ್ಟು ಎತ್ತರಕ್ಕೆ ಹಾರಿದ್ದ ರಾಕೆಟ್ ಸಮುದ್ರ ಸೇರಿತ್ತು
PSLV-C39
2017 ಆಗಸ್ಟ್ 31 ರಂದು ಉಡಾವಣೆಯಾದ PSLV-C39 ಮಿಷನ್ ಅಪರೂಪದ ವೈಫಲ್ಯವನ್ನು ಎದುರಿಸಿತು. ರಾಕೆಟ್ ಎಲ್ಲಾ ನಾಲ್ಕು ಹಂತಗಳ ಪ್ರೊಪಲ್ಷನ್ ಮೂಲಕ ದೋಷರಹಿತವಾಗಿ ಕಾರ್ಯನಿರ್ವಹಿಸಿದರೂ, ಶಾಖ ಕವಚ (heat shield) ಹಾರಾಟದ 3 ನಿಮಿಷ ಮತ್ತು 23 ಸೆಕೆಂಡುಗಳ ನಿಗದಿತ ಸಮಯದಲ್ಲಿ ಬೇರ್ಪಡಿಸಲು ವಿಫಲವಾಯಿತು. ಉಪಗ್ರಹವು ರಾಕೆಟ್‌ನ ನಾಲ್ಕನೇ ಹಂತದಿಂದ ಆಂತರಿಕವಾಗಿ ಬೇರ್ಪಟ್ಟಿದ್ದರೂ, ಶಾಖ ಶೀಲ್ಡ್‌ನ ಹೆಚ್ಚುವರಿ ತೂಕವು ಉದ್ದೇಶಿತ ಕಕ್ಷೆಯನ್ನು ತಲುಪುವುದನ್ನು ತಡೆಯಿತು. ಇದರಿಂದ ಉಂಟಾದ ನಷ್ಟ ₹250-ಕೋಟಿ . ನಂತರದ ವಿಶ್ಲೇಷಣೆಯು ಪೈರೋ ಸಾಧನಗಳಲ್ಲಿನ (ಸ್ಫೋಟಕ ಬೋಲ್ಟ್‌ಗಳು) ಅಸಮರ್ಪಕ ಕಾರ್ಯವು ಕವಚ ಹೊರಹಾಕಲು ಉದ್ದೇಶಿಸಲಾದ ಲೋಹದ ಪಿನ್ ಮುರಿಯಲು ಸಾಕಷ್ಟು ಒತ್ತಡವನ್ನು ಉತ್ಪಾದಿಸುವಲ್ಲಿ ವಿಫಲವಾಗಿದೆ ಎಂದು ಬಹಿರಂಗಪಡಿಸಿತು.
PSLV-D1
1993 ಸೆಪ್ಟೆಂಬರ್ 20 ರಂದು, ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್, PSLV-D1 ನ ಮೊದಲ ಉಡಾವಣೆ ಆಗಿತ್ತು.ರಾಕೆಣ್ ಉಡಾವಣೆಯಾದ ಸುಮಾರು 12 ನಿಮಿಷಗಳ ನಂತರ ಮಾರ್ಗದರ್ಶನ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿನ ಸಾಫ್ಟ್‌ವೇರ್ ದೋಷದಿಂದಾಗಿ ರಾಕೆಟ್ ಸಮತೋಲನವನ್ನು ಕಳೆದುಕೊಂಡಿತು. ಮೊದಲ ಎರಡು ಹಂತಗಳು ಸರಿಯಾಗಿ ಕಾರ್ಯನಿರ್ವಹಿಸಿದರೂ, ಆನ್‌ಬೋರ್ಡ್ ಕಂಪ್ಯೂಟರ್‌ನಲ್ಲಿ "ಲಾಜಿಕ್ ದೋಷ" ಕಂಡು ಬಂದು ಇದು ಎರಡನೇ ಹಂತದ ಬೇರ್ಪಡುವಿಕೆಯ ಸಮಯದಲ್ಲಿ ತಪ್ಪಾದ ಆದೇಶವನ್ನು ನೀಡತೊಡಗಿತು. ಈ ಅಡಚಣೆಯು ವಾಹನವನ್ನು ಅದರ ಉದ್ದೇಶಿತ ಪಥದಿಂದ ದೂರಕ್ಕೆ ಒಯ್ದಿದ್ದು, IRS-1E ಉಪಗ್ರಹವನ್ನು ಕಕ್ಷೆಗೆ ತರಲು ಅಗತ್ಯವಾದ ಎತ್ತರ ಮತ್ತು ವೇಗವನ್ನು ತಲುಪುವುದನ್ನು ತಡೆಯಿತು. ಪರಿಣಾಮವಾಗಿ ರಾಕೆಟ್ ಮತ್ತು ಅದರ ಪೇಲೋಡ್ ಬಂಗಾಳಕೊಲ್ಲಿಗೆ ಬಿದ್ದಿತ್ತು.