×
Ad

ಬೆಂಗಳೂರಿನಿಂದ ವಿಯೆಟ್ನಾಂಗೆ ನೇರ ವಿಮಾನ ಸಂಪರ್ಕ

Update: 2025-07-29 17:21 IST

ಅತ್ಯಂತ ಮನೋಹರವಾದ ಪ್ರಕೃತಿ ಸೌಂದರ್ಯ, ಅತ್ಯಾಧುನಿಕ ನಗರಗಳು, ಸ್ವಾದಿಷ್ಟ ಖಾದ್ಯಗಳು, ರೋಚಕ ಚಾರಣಗಳ ರಾಷ್ಟ್ರವಾದ ವಿಯೆಟ್ನಾಂ ಈಗ ಕರ್ನಾಟಕದ ಜನತೆಗೆ ಇನ್ನಷ್ಟು ಹತ್ತಿರವಾಗಿದೆ. ಹೌದು. ವಿಯೆಟ್‌ಜೆಟ್‌ಏರ್ ಬೆಂಗಳೂರಿನಿಂದ ವಿಯೆಟ್ನಾಂನ ವಾಣಿಜ್ಯ ನಗರಿ ಹೊಚಿ ಮಿನ್ ಸಿಟಿಗೆ ವಾರದಲ್ಲಿ ಮೂರು ಬಾರಿ ನೇರ ವಿಮಾನಸಂಚಾರವನ್ನು ನಡೆಸುತ್ತಿದೆ. ಬೆಂಗಳೂರಿನ ಅಂತರ್‌ರಾಷ್ಟ್ರೀಯ ಕೆಂಪೇಗೌಡ ವಿಮಾನನಿಲ್ದಾಣದಿಂದ ಪ್ರತೀ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ವಿಯೆಟ್‌ಜೆಟ್ ಏರ್‌ನ ವಿಮಾನ ವಿಯೆಟ್ನಾಂಗೆ ಪ್ರಯಾಣಿಸುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ವಿಯೆಟ್ನಾಂ ಪ್ರವಾಸವನ್ನು ಕೈಗೊಳ್ಳುವ ಸದವಕಾಶವನ್ನು ರಾಜ್ಯದ ಜನತೆಗೆ ಒದಗಿಸಿದೆ.

ಜಗತ್ತಿನಲ್ಲೇ ಅಗ್ಗದ ದರದಲ್ಲಿ ಉತ್ಕೃಷ್ಟ ಮಟ್ಟದ ವಿಮಾನಯಾನ ಸೇವೆ ನೀಡುವ ಸಂಸ್ಥೆಯೆಂದು ವಿಯೆಟ್‌ಜೆಟ್ ಏರ್, ಜಾಗತಿಕ ಮಾನ್ಯತೆ ಪಡೆದಿರುವ https://www.airlineratings.com ಜಾಲತಾಣದ ಪುರಸ್ಕಾರಕ್ಕೆ ಪಾತ್ರವಾಗಿದೆ.

ಸುರಕ್ಷಿತ ವಿಮಾನಯಾನ ಸೇವೆಯಲ್ಲೂ ಅದು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ವಿಯೆಟ್‌ಜೆಟ್‌ಏರ್‌ನಲ್ಲಿ ಪ್ರಯಾಣಿಕರು ಭಾರತೀಯ ಖಾದ್ಯಗಳ ಜೊತೆಗೆ ವಿಯೆಟ್ನಾಂನ ಪಾರಂಪರಿಕ ಖಾದ್ಯಗಳನ್ನು ಕೂಡಾ ಸವಿಯಬಹುದಾಗಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುವ ವಿಯೆಟ್ನಾಂ ಅಕ್ಷರಶಃ ಪ್ರವಾಸಿಗರ ಸ್ವರ್ಗವಾಗಿದೆ. ಆಧುನಿಕತೆ ಹಾಗೂ ಸಂಸ್ಕೃತಿಯ ಭವ್ಯಸಂಗಮ ಸ್ಥಳವಿದು. ಹೊಚಿಮಿನ್ ಸಿಟಿ ಮತ್ತಿತರ ನಗರಗಳ ಅತ್ಯಾಧುನಿಕ ಗಗನಚುಂಬಿ ಕಟ್ಟಡಗಳಿಂದ ವಿಜೃಂಭಿಸಿದರೆ , ಗ್ರಾಮೀಣ ಪ್ರದೇಶಗಳಲ್ಲಿ ಅಪ್ಪಟ ವಿಯೆಟ್ನಾಂ ಸಂಸ್ಕೃತಿಯ ಸೊಗಡನ್ನು ಆಸ್ವಾದಿಸಬಹುದಾಗಿದೆ. ಸ್ವಚ್ಛ, ಸುಂದರ ಮತ್ತು ವಿಶಾಲವಾದ ರಸ್ತೆಗಳ ಆಹ್ಲಾದಕರ ನೋಟವು ಎಲ್ಲೆಲ್ಲೂ ಕಾಣಿಸುತ್ತಿದೆ. ವಿಯೆಟ್ನಾಂ ಯುದ್ಧದ ಇತಿಹಾಸವನ್ನು ಸಾರುವ ತಾಣಗಳನ್ನು ವಿಯೆಟ್ನಾಂ ಜತನದಿಂದ ಸಂರಕ್ಷಿಸಿಟ್ಟಿದ್ದು,ಅವು ಸ್ವಾತಂತ್ರ್ಯಪ್ರೇಮಿ ವಿಯೆಟ್ನಾಮಿಗರ ವೀರಗಾಥೆಯನ್ನು ಪ್ರವಾಸಿಗರಿಗೆ ಪರಿಚಯಿಸುತ್ತವೆ.

ಸರಿಸುಮಾರು ಐವತ್ತು ವರ್ಷಗಳ ಹಿಂದೆ ಸಂಘರ್ಷದಿಂದ ಜರ್ಜರಿತವಾಗಿದ್ದ ಈ ರಾಷ್ಟ್ರ ಇಂದು ಆಧುನಿಕತೆ ಹಾಗೂ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ರೀತಿಯಂತೂ ಅದ್ಭುತವಾಗಿದೆ. ಸುಂದರವಾದ ಕಡಲಕಿನಾರೆಗಳು, ಬಯಲು, ಪರ್ವತಗಳಿಂದ ಆವೃತವಾಗಿರುವ ವಿಯೆಟ್ನಾಂನ ಹವಾಮಾನ ಹೆಚ್ಚು ಕಡಿಮೆ ಕರ್ನಾಟಕದ ಕರಾವಳಿಯನ್ನೇ ಹೋಲುತ್ತದೆ. ಮೆಕಾಂಗ್‌ನದಿ ಮುಖಜ ಭೂಮಿಯಲ್ಲಿ ಕಣ್ಣಿಗೆ ಕಾಣಿಸುವಷ್ಟು ದೂರದಾಚೆಗೂ ಹರಡಿರುವ ವಿಶಾಲವಾದ ಭತ್ತದ ಗದ್ದೆಗಳು ನೋಡುಗರ ಕಣ್ಣಿಗೆ ಮುದನೀಡುತ್ತವೆ. ಅಲ್ಲಿನ ನದಿತಟದ ಗ್ರಾಮ ಜೀವನದ ಸೊಗಡನ್ನು ಕೂಡಾ ಪ್ರವಾಸಿಗರು ಸಂಭ್ರಮಿಸಬಹುದಾಗಿದೆ.

ಹೊಚಿ ಮಿನ್ ಸಿಟಿಯಲ್ಲಿರುವ ಫ್ರೆಂಚ್ ಶೈಲಿಯ ರಾಜಗಾಂಭೀರ್ಯದ ಭವ್ಯ ಕಟ್ಟಡಗಳು ಈ ದೇಶದ ವೈವಿಧ್ಯಮಯ ಇತಿಹಾಸಕ್ಕೆ ದೃಕ್‌ಸಾಕ್ಷಿಗಳಾಗಿವೆ. ವಿಯೆಟ್ನಾಂನ ಸ್ವಾದಿಷ್ಟಕರ ಹಾಗೂ ವೈವಿಧ್ಯಮಯ ಖಾದ್ಯ ವೈವಿಧ್ಯಗಳನ್ನು ಅಚ್ಚುಕಟ್ಟಾಗಿ ಉಣಬಡಿಸುವ ಅಸಂಖ್ಯ ರೆಸ್ಟೋರೆಂಟ್‌ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ರುಚಿಕರವಾದ ಮತ್ಸ್ಯಾಹಾರ ಭಕ್ಷ್ಯಗಳೂ ವಿಯೆಟ್ನಾಂನ ಖಾದ್ಯಪರಂಪರೆಯ ಉಜ್ವಲ ನಿದರ್ಶನ

ವಾಗಿವೆ. ಸಸ್ಯಾಹಾರ ಹಾಗೂ ಮಾಂಸಾಹಾರ ಪ್ರಿಯರಿಬ್ಬರೂ ಇಷ್ಟಪಡುವಂತಹ ವೈವಿಧ್ಯಮಯ ಆಹಾರಗಳ ಲೋಕವೇ ಪ್ರವಾಸಿಗರಿಗೆ ಇಲ್ಲಿ ತೆರೆದುಕೊಳ್ಳುತ್ತದೆ. ಸ್ನೇಹಮಯಿ ವಿಯೆಟ್ನಾಂ ಪ್ರಜೆಗಳ ಶಿಸ್ತು, ಪ್ರಾಮಾಣಿಕತೆ, ಆತಿಥ್ಯಗಳು ಗಮನಸೆಳೆಯುತ್ತವೆ. ವಿಯೆಟ್ನಾಂನ ಶಾಂತಿಯುತ ಹಾಗೂ ಸುರಕ್ಷಿತವಾದ ವಾತಾವರಣವು ಆ ದೇಶದೆಡೆಗೆ ಪ್ರವಾಸಿಗರನ್ನು ಸೆಳೆಯಲು ಇನ್ನೊಂದು ಪ್ರಮುಖ ಕಾರಣವಾಗಿದೆ.

ಬೆಂಗಳೂರಿನಿಂದ ಕೇವಲ 5 ತಾಸುಗಳ ವಿಮಾನ ಪ್ರಯಾಣದಲ್ಲಿ ವಿಯೆಟ್ನಾಂಗೆ ತಲುಪಬಹುದಾಗಿದೆ. ಭಾರತದ ಕಾಲಮಾನಕ್ಕಿಂತ ಸುಮಾರು ಒಂದೂವರೆ ತಾಸು ಮುಂಚಿತವಾಗಿ ಇಲ್ಲಿ ದಿನದ ಆರಂಭವಾಗುತ್ತದೆ.

ಮಧ್ಯಪ್ರಾಚ್ಯ ಹಾಗೂ ಉಕ್ರೇನ್-ರಶ್ಯ ಸಂಘರ್ಷದ ಬಳಿಕ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ವಿಯೆಟ್ನಾಂನತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಯೆಟ್‌ಜೆಟ್ ಏರ್ ಅಗ್ಗದ ದರದಲ್ಲಿ ವಿಮಾನ ಸಂಚಾರವನ್ನು ಒದಗಿಸಿರುವುದು ಆಕಾಂಕ್ಷಿ ಪ್ರವಾಸಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಬೆಂಗಳೂರಿನಿಂದ 20 ಸಾವಿರ ರೂ.ಗಿಂತಲೂ ಕಡಿಮೆ ವೆಚ್ಚದಲ್ಲಿ ವಿಯೆಟ್ನಾಂ ರೌಂಡ್ ಟ್ರಿಪ್ ಕೈಗೊಳ್ಳಬಹುದಾಗಿದೆ. ಇದಲ್ಲದೆ ಕೆಲವು ವಾರಗಳಷ್ಟು ಮುಂಗಡವಾಗಿ ಟಿಕೆಟ್ ಕಾದಿರಿಸಿದಲ್ಲಿ ಇನ್ನಷ್ಟು ರಿಯಾಯಿತಿ ದೊರೆಯಲು ಅವಕಾಶವಿದೆ. ಭಾರತದ ರೂಪಾಯಿ ಮೌಲ್ಯದ ಎದುರು ವಿಯೆಟ್ನಾಂ ಕರೆನ್ಸಿ ಡಾಂಗ್‌ನ ಮೌಲ್ಯ ತೀರಾ ಕಡಿಮೆಯಿರುವುದು ಭಾರತೀಯ ಪ್ರವಾಸಿಗರಿಗೆ ಇನ್ನೊಂದು ಪ್ಲಸ್‌ಪಾಯಿಂಟ್. ಆ ದೇಶದ 10 ಸಾವಿರ ಡೊಂಗ್ ಎದುರು ಭಾರತದ ರೂಪಾಯಿ ಮೌಲ್ಯ 33 ರೂ. ಆಗಿದೆ.

ಬೆಂಗಳೂರು ಅಲ್ಲದೆ ಹೈದರಾಬಾದ್, ಕೊಚ್ಚಿ, ಮುಂಬೈ, ದಿಲ್ಲಿ, ಅಹ್ಮ ದಾಬಾದ್ ನಗರಗಳಿಂದಲೂ ವಿಯೆಟ್ನಾಂಗೆ ವಿಯೆಟ್‌ಜೆಟ್‌ನಿಂದ ವಿಮಾನಯಾನ ಸೌಲಭ್ಯವಿದೆ. ಭಾರತಾದ್ಯಂತ ಸುಮಾರು 78 ವಿಮಾನಯಾನಗಳನ್ನು ನಡೆಸುವ ವಿಯೆಟ್‌ಜೆಟ್, ಉಭಯದೇಶಗಳ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.

ವಿಯೆಟ್ನಾಂ ಸಂದರ್ಶಿಸುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಳಗೊಂಡಿರುವುದಕ್ಕೆ ಪೂರಕವಾಗಿ ವಿಯೆಟ್‌ಜೆಟ್ ಏರ್ ದೇಶದಲ್ಲಿ ತನ್ನ ವಿಮಾನಯಾನಗಳನ್ನು ವಿಸ್ತರಿಸಿದೆ. ಕಳೆದ ವರ್ಷವೊಂದರಲ್ಲೇ 5 ಲಕ್ಷಕ್ಕೂ ಅಧಿಕ ಮಂದಿ ಭಾರತೀಯರು ವಿಯೆಟ್ನಾಂ ಸಂದರ್ಶಿಸಿದ್ದಾರೆ. ವಿಯೆಟ್‌ಜೆಟ್ ಏರ್, ಇಂಡೋನೇಶ್ಯದ ಬಾಲಿ,ಮಲೇಶ್ಯದ ಕೌಲಾಲಂಪುರ ಹಾಗೂ ಆಸ್ಟ್ರೇಲಿಯದ ಪ್ರಮುಖ ನಗರಗಳಿಗೂ ವಿಮಾನಯಾನ ಸಂಪರ್ಕವನ್ನು ಕಲ್ಪಿಸಿದೆ. ತನ್ನ ವಿಮಾನಯಾನ ಸಂಪರ್ಕಗಳನ್ನು ವಿಸ್ತರಿಸುತ್ತಾ ಬರುತ್ತಿರುವ ವಿಯೆಟ್‌ಜೆಟ್ ಏರ್ ಜಾಗತಿಕ ವಾಯುಯಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿ. ರಾಜೇಶ್ ನಾಯ್ಕ್

contributor

Similar News