ಮಂಗಳೂರು ಜಿಲ್ಲೆಗೆ ಹೆಚ್ಚಿದ ಒಲವು
ಮಂಗಳೂರು : ದ.ಕ. ಜಿಲ್ಲೆಯ ಹೆಸರು ಬದಲಾಗ ಬೇಕೆಂಬ ಕೂಗು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಗೂಗಲ್ ಮೀಟ್‌ನಲ್ಲಿ ಈಗ ಇರುವ ದ.ಕ. ಜಿಲ್ಲೆಯ ಹೆಸರನ್ನು ಬದಲಾಯಿಸಬೇಕೆಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಜಿಲ್ಲೆಯ ಶಾಸಕರು, ಸಂಸದರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಖಂಡರು, ಸಾಹಿತಿಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ಮಂದಿ ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲೆಯ ಹೆಸರು ದ.ಕ. ಎನ್ನುವುದು ಬದಲಾಗಬೇಕು. ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೆಸರು ಇರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು ಸಮಾಜದ ಗಣ್ಯರು ಸೇರಿದಂತೆ ಎಲ್ಲರ ಅಭಿಪ್ರಾಯವನ್ನು ಪಡೆದು ಜಿಲ್ಲೆಯ ಮರುನಾಮಕಣ ಬಗ್ಗೆ ನಿರ್ಧಾರವಾಗಿದೆ.
ದ.ಕ. ಜಿಲ್ಲೆಗೆ ಮಂಗಳೂರು, ತುಳುನಾಡು, ಕುಡ್ಲ, ಮಂಗಳಾಪುರ ಎಂಬ ಬಗ್ಗೆ ಮರುನಾಮಕರಣ ಬಗ್ಗೆ ಚರ್ಚೆ ಆರಂಭವಾಗಿದೆ. ಇನ್ನೊಂದು ಸುತ್ತಿನ ಆನ್‌ಲೈನ್ ಮಾತುಕತೆಯಲ್ಲಿ ಈ ಜಿಲ್ಲೆಯ ಇನ್ನಷ್ಟು ನಾಗರಿಕರು ಭಾಗವಹಿಸುವ ಮೂಲಕ ಮರುನಾಮಕರಣಕ್ಕೆ ಶಕ್ತಿ ದೊರಕಲಿದೆ.
ಕರ್ನಾಟಕದ ಕರಾವಳಿ ಭಾಗದಲ್ಲಿರುವ ಬಂದರು ನಗರಿ ಎನಿಸಿಕೊಂಡಿರುವ ದ.ಕ. (ಸೌತ್ ಕೆನರಾ) ಜಿಲ್ಲೆಯು ದಕ್ಷಿಣ ಜಿಲ್ಲೆಯ ವಿಸ್ತೀರ್ಣ ಒಟ್ಟು 4,859 ಚ.ಕೀ.ಮೀ ಆಗಿದೆ. 9 ತಾಲೂಕುಗಳನ್ನು ಹೊಂದಿರುವ ಜಿಲ್ಲೆಯು ಪಶ್ಚಿಮದಲ್ಲಿ ಅರಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳಿಂದ ಸುತ್ತುವರಿದಿದೆ.
ಮಂಗಳೂರು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳನ್ನೂ ಮಂಗಳೂರು ಆಕರ್ಷಿಸುತ್ತಿದೆ. ಬೀಚ್, ಧಾರ್ಮಿಕ ಕೇಂದ್ರಗಳಿಗೆ ಕೂಡಾ ಹೆಸರುವಾಸಿಯಾಗಿದೆ.
1799ರಲ್ಲಿ ಟಿಪ್ಪುಸಾಮ್ರಾಜ್ಯದ ಅವನತಿಯ ನಂತರ ಬ್ರಿಟಿಷರು ಮಂಗಳೂರನ್ನು ಕೆನರಾ ಜಿಲ್ಲೆಯ ಕೇಂದ್ರಸ್ಥಾನವಾಗಿ ಮಾಡಿದರು. ಪ್ರಮುಖ ಬಂದರನ್ನು ಹೊಂದಿರುವುದರಿಂದಾಗಿ ಈ ಕರಾವಳಿ ಪಟ್ಟಣವು ಒಂದು ವಾಣಿಜ್ಯ ಕೇಂದ್ರವಾಗಿದೆ. 2014ರಲ್ಲೂ ಮರುನಾಮಕರಣ ಬಗ್ಗೆ ಚರ್ಚೆ ನಡೆದಿತ್ತು. ಸರಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದ್ದರೂ, ಅದಕ್ಕೆ ಹೆಚ್ಚಿನ ಒಲವು ಬಂದಿರಲಿಲ್ಲ.
ದ.ಕ. ಮರುನಾಮಕರಣ ಉತ್ತಮ ಸಲಹೆ. ನಾನು ಗೂಗಲ್ ಮೀಟ್‌ನಲ್ಲಿ ಭಾಗವಹಿಸಿಲ್ಲ. ಈ ವಿಚಾರದಲ್ಲಿ ಚರ್ಚೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಹೆಸರು ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ಮತ್ತು ಇಲ್ಲಿಗೆ ಸೂಕ್ತ ಹೆಸರು ಯಾವುದು ಎಂಬ ಬಗ್ಗೆ ಚರ್ಚೆಯಾಗಬೇಕು. ಹಿರಿಯರ ಅಭಿಪ್ರಾಯ ಪಡೆದು ಮುಂದುವರಿಯಬೇಕಾಗಿದೆ.
-ಯು.ಟಿ.ಖಾದರ್, ವಿಧಾನ ಸಭಾ ಸ್ಪೀಕರ್
ದ.ಕ. ‘ಮಂಗಳೂರು’ ಆಗಿ ಬದಲಾದರೆ ಉತ್ತಮ. ಮಂಗಳೂರು ಕೇಂದ್ರ ಸ್ಥಾನವಾಗಿರುವುದರಿಂದ ಅದೇ ಹೆಸರನ್ನು ಇಡುವುದು ಹೆಚ್ಚು ಸೂಕ್ತ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಊರಿನ ಹೆಸರು ಇದೆ. ಹಾಗಿರುವಾಗ ದ.ಕ. ಬದಲಾಗಲಿ ಮಂಗಳೂರು ಜಿಲ್ಲೆ ಆಗಲಿ.
-ಕ್ಯಾ.ಬ್ರಿಜೇಶ್ ಚೌಟ, ಸಂಸದರು ದ.ಕ. ಜಿಲ್ಲೆ
ದ.ಕ. ಎಂದರೆ ಹೊರಗಿನವರಿಗೆ ಗೊತ್ತಾಗುವುದಿಲ್ಲ. ಮಂಗಳೂರು ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಹಾಗಿರುವಾಗ ಮಂಗಳೂರು ಹೆಸರು ಹೆಚ್ಚು ಸೂಕ್ತ.
-ಐವನ್ ಡಿಸೋಜ , ವಿಧಾನ ಪರಿಷತ್ ಸದಸ್ಯರು