ಗಾಳಿಯಲ್ಲಿ ವಿದ್ಯುತ್ ಪ್ರಸಾರ; ಫಿನ್ಲ್ಯಾಂಡ್ ಸಂಶೋಧಕರ ಹೊಸ ಸಾಧನೆ
ಸಾಂದರ್ಭಿಕ ಚಿತ್ರ | Photo Credit : freepik
ಗಾಳಿಯ ಮೂಲಕ ನಿಸ್ತಂತುವಾಗಿ ವಿದ್ಯುತ್ ಪ್ರಸಾರ ಮಾಡುವ ಕುರಿತ ಫಿನ್ಲ್ಯಾಂಡ್ನ ಸಂಶೋಧನೆ ವೈಜ್ಞಾನಿಕವಾಗಿ ಪ್ರಗತಿ ಕಂಡಿದ್ದರೂ, ಪಾರಂಪರಿಕ ಪವರ್ ಗ್ರಿಡ್ಗಳನ್ನು ಬದಲಿಸುವ ಮಟ್ಟಕ್ಕೆ ಇನ್ನೂ ತಲುಪಿಲ್ಲ.
ವೈರ್ರಹಿತ ಅಥವಾ ನಿಸ್ತಂತುವಾಗಿ ವಿದ್ಯುತ್ ಪ್ರಸಾರದ ವಿಷಯದಲ್ಲಿ ಫಿನ್ಲ್ಯಾಂಡ್ ತನ್ನ ಸಂಶೋಧನೆಯನ್ನು ಮುಂದುವರಿಸಿದ್ದು, ಪಾರಂಪರಿಕ ಕೇಬಲ್ಗಳು ಮತ್ತು ಪ್ಲಗ್ಗಳ ಹೊರತಾಗಿ ಗಾಳಿಯಲ್ಲಿ ವಿದ್ಯುತ್ ಕಳುಹಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ಸಾಧಿಸಿದೆ.
ಫಿನ್ಲ್ಯಾಂಡ್ನ ಸಂಶೋಧಕರು ಇತ್ತೀಚೆಗೆ ವಿವರಿಸಿರುವ ಪ್ರಯೋಗಗಳು ಈ ತಂತ್ರಜ್ಞಾನದಲ್ಲಿ ಸ್ಥಿರವಾದ ಪ್ರಗತಿ ಸಾಧಿಸುತ್ತಿರುವುದನ್ನು ತೋರಿಸಿವೆ. ಈ ಸಂಶೋಧನೆಗಳು ಭವಿಷ್ಯದಲ್ಲಿ ವಿದ್ಯುತ್ ಸಾಧನಗಳು ಚಾರ್ಜ್ ಮಾಡುವ ರೀತಿಯನ್ನೇ ಬದಲಿಸಲಿದೆ. ಆದರೆ ಇದಕ್ಕಾಗಿ ವ್ಯಾಪಕ ವಾಣಿಜ್ಯ ನಿಯೋಜನೆಗಳ ಅಗತ್ಯವಿರುವುದರಿಂದ ಸಂಶೋಧನೆ ಸಂಪೂರ್ಣ ಯಶಸ್ಸು ಕಾಣಲು ಇನ್ನೂ ಸಮಯ ಬೇಕಿದೆ.
ಪ್ರಯೋಗಾಲಯಗಳಲ್ಲಿ ಎಂಜಿನಿಯರ್ಗಳು ಗಾಳಿಯಲ್ಲಿ ವಿದ್ಯುತ್ ಪ್ರಸಾರ ಮಾಡಬಹುದು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅವರು ಅತಿ ನಿಯಂತ್ರಿತ ಎಲೆಕ್ಟ್ರೊಮ್ಯಾಗ್ನೆಟಿಕ್ ಕ್ಷೇತ್ರಗಳು ಮತ್ತು ರೆಸೊನಂಟ್ ಕಪ್ಲಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಇದನ್ನು ಸಾಧ್ಯವಾಗಿಸಿದ್ದಾರೆ. ಡಾಟಾವನ್ನು ವೈಫೈ ಮೂಲಕ ಕಳುಹಿಸುವ ಕಲ್ಪನೆಯ ರೀತಿಯಲ್ಲಿಯೇ ವಿದ್ಯುಚ್ಛಕ್ತಿಯ ವರ್ಗಾವಣೆಗೆ ಸಂಶೋಧಕರು ಪ್ರಯತ್ನಿಸಿದ್ದಾರೆ.
ಮ್ಯಾಗ್ನೆಟಿಕ್ ಅನುರಣನ (ರೆಸೊನೆನ್ಸ್) ಮತ್ತು ಇಂಡಕ್ಟಿವ್ ಪವರ್ (ಚೋದನೆಯ ಶಕ್ತಿ) ವರ್ಗಾವಣೆಯಲ್ಲಿ ದಶಕಗಳ ಸಂಶೋಧನೆಯ ನಂತರ ಈಗಿನ ಸಾಧನೆ ಕಂಡುಬಂದಿದೆ. ಭೌತಿಕ ಸಂಪರ್ಕವಿಲ್ಲದೆ ಸಣ್ಣ ಅಂತರಗಳಲ್ಲಿ ಟ್ರಾನ್ಸ್ಮಿಟರ್ ಮತ್ತು ರಿಸೀವರ್ ನಡುವೆ ವಿದ್ಯುಚ್ಛಕ್ತಿಯನ್ನು ವರ್ಗಾಯಿಸಲು ಸಾಧ್ಯವಾಗಿದೆ.
ಆಲ್ಟೋ ವಿಶ್ವವಿದ್ಯಾಲಯದಂತಹ ಫಿನ್ಲ್ಯಾಂಡ್ನ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಇವು ತಂತ್ರಜ್ಞಾನಕ್ಕೆ ಅಗತ್ಯವಿರುವ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತಳಹದಿಯನ್ನು ನೀಡಿವೆ.
ವಿಶ್ವವಿದ್ಯಾಲಯದ ಹಿಂದಿನ ಸಂಶೋಧನೆಗಳು ಸಾಬೀತು ಮಾಡಿರುವ ಪ್ರಕಾರ, ಮ್ಯಾಗ್ನೆಟಿಕ್ ಲೂಪ್ ಆಂಟೆನಾಗಳು ವಿದ್ಯುಚ್ಛಕ್ತಿಯನ್ನು ವೈರ್ ರಹಿತವಾಗಿ ಸಣ್ಣ ಅಂತರಗಳಿಗೆ ಹೆಚ್ಚು ದಕ್ಷತೆಯಿಂದ ವರ್ಗಾಯಿಸಿವೆ. ಹೀಗಾಗಿ ಕಪ್ಲಿಂಗ್ ಅನ್ನು ಅತ್ಯುನ್ನತೀಕರಿಸುವುದು ಹೇಗೆ ಮತ್ತು ಶಕ್ತಿಯ ನಷ್ಟ ಕಡಿಮೆಗೊಳಿಸುವ ಬಗ್ಗೆ ಒಳನೋಟಗಳು ದೊರೆತಿವೆ.
ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಫಿನ್ಲ್ಯಾಂಡ್ನ ತಂಡವು ಯಶಸ್ವಿಯಾಗಿ ನಿಸ್ತಂತು ವಿದ್ಯುತ್ ವರ್ಗಾವಣೆ ವಿಧಾನಗಳನ್ನು ಬಳಸಿಕೊಂಡು ಗಾಳಿಯ ಮೂಲಕ ಸಣ್ಣ ಸಾಧನಗಳಿಗೆ ವಿದ್ಯುಚ್ಛಕ್ತಿಯನ್ನು ವರ್ಗಾಯಿಸಿದೆ. ಇದೀಗ ಕಲ್ಪನೆಯು ಪ್ರಯೋಗಾಲಯಗಳ ಕುತೂಹಲವನ್ನು ಮೀರಿ ಹೆಚ್ಚು ಪ್ರಾಯೋಗಿಕವಾಗಿ ನಡೆಸಲು ಸಂಶೋಧಕರು ಸಿದ್ಧವಾಗುತ್ತಿದ್ದಾರೆ.
ಆದರೆ ಕಲ್ಪನೆ ಸಾಕಾರವಾಗಿರುವ ಹೊರತಾಗಿಯೂ, ನಿಸ್ತಂತು ವಿದ್ಯುತ್ ಪ್ರಸಾರವನ್ನು ಸಮೀಪದ ರೇಂಜ್ ಇರುವ ಅಪ್ಲಿಕೇಶನ್ಗಳಾದ ಸಣ್ಣ ಎಲೆಕ್ಟ್ರಾನಿಕ್ಸ್, ಸೆನ್ಸರ್ಗಳು ಅಥವಾ ರೊಬೊಟಿಕ್ಸ್ಗಳಿಗೆ ಮಾತ್ರ ನಿಯಂತ್ರಿತ ಸೆಟ್ಟಿಂಗ್ನಲ್ಲಿ ಬಳಸಲು ಸಾಧ್ಯವಾಗಿದೆ. ಈ ವ್ಯವಸ್ಥೆ ನಿಖರವಾಗಿ ಟ್ಯೂನ್ ಮಾಡಲಾದ ಎಲೆಕ್ಟ್ರೋಮ್ಯಾಗ್ನೆಟಿಕ್ (ವಿದ್ಯುತ್ಕಾಂತೀಯ) ಕ್ಷೇತ್ರಗಳು ಮತ್ತು ವಿಶೇಷವಾದ ರಿಸೀವರ್ ತಂತ್ರಜ್ಞಾನದ ಮೇಲೆ ಅವಲಂಬಿಸಿದೆ ಮತ್ತು ದೂರ ಸಾಗುತ್ತಿದ್ದಂತೆ ಅವುಗಳ ಕಾರ್ಯದಕ್ಷತೆ ಕುಸಿಯುತ್ತದೆ.
ನಿಸ್ತಂತು ವಿದ್ಯುತ್ ಅನ್ನು ನೈಜ ಪರಿಸರದಲ್ಲಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಉದಾಹರಣೆಗೆ ಆಲ್ಟೋ ವಿಶ್ವವಿದ್ಯಾಲಯದ ಅಧ್ಯಯನಗಳು ಮಾನವ ಅಂಗಾಂಶವು ವೈರ್ಲೆಸ್ ಚಾರ್ಜಿಂಗ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸಿದೆ. ಇದರಿಂದಾಗಿ ಶಸ್ತ್ರಚಿಕಿತ್ಸೆಯಿಲ್ಲದೆ ಇಂಪ್ಲಾಂಟ್ಗಳನ್ನು ಚಾರ್ಜ್ ಮಾಡುವ ಜೈವಿಕ ವೈದ್ಯಕೀಯ ಅನ್ವಯಿಕೆ ಸಾಧ್ಯವಾಗಲಿದೆ.
ಫಿನ್ಲ್ಯಾಂಡ್ನ ಸಂಶೋಧನೆ ವೈಜ್ಞಾನಿಕವಾಗಿ ಪ್ರಗತಿ ಕಂಡುಬಂದಿದ್ದರೂ ಪಾರಂಪರಿಕ ಪವರ್ ಗ್ರಿಡ್ಗಳನ್ನು ಬದಲಿಸುವ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಅಧಿಕ ಶಕ್ತಿಯ, ದೀರ್ಘ ದೂರದ ವಿದ್ಯುತ್ ಪ್ರಸಾರದಲ್ಲಿ ಈಗಿನ ವೈರ್ಡ್ ಮೂಲಸೌಕರ್ಯ ಮುಂದುವರಿಯಲಿದೆ. ಮನೆಗಳಿಗೆ, ವಾಹನಗಳಿಗೆ, ಅಥವಾ ನಗರ ವ್ಯವಸ್ಥೆಯಲ್ಲಿ ನಿಸ್ತಂತು ವಿದ್ಯುತ್ ಬಳಕೆಗೆ ಇನ್ನೂ ಬಹಳ ಅನ್ವೇಷಣೆ, ಪರೀಕ್ಷೆಗಳು ಆಗಬೇಕಿವೆ. ಪ್ರಸ್ತುತ ಫಿನ್ಲ್ಯಾಂಡ್ನ ಸಂಶೋಧನೆಗಳ ಕೊಡುಗೆ ನಿಸ್ತಂತು ವಿದ್ಯುತ್ ತಂತ್ರಜ್ಞಾನದ ಕುರಿತ ಜಾಗತಿಕ ಕುತೂಹಲವನ್ನು ತಣಿಸಲಷ್ಟೇ ಸಾಧ್ಯವಾಗಿದೆ.