×
Ad

ಅಣಬೆ ಬೇಸಾಯದಲ್ಲೂ ಸೈ ಎನಿಸಿಕೊಂಡ ಇಂಜಿನಿಯರ್ ಸುಹಾಸ್

Update: 2025-11-10 10:46 IST

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಇಂಜಿನಿಯರ್ ಪದವೀಧರ ಎಂ.ಎಸ್.ಸುಹಾಸ್‌ಗೌಡ ಎರಡು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಜತೆಗೆ, ಅಣಬೆ

ಬೇಸಾಯದಲ್ಲಿ ಸಾಧನೆ ಮಾಡುವ ಮೂಲಕ ಇತರ ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.

ಸುಹಾಸ್‌ಗೌಡ ಪ್ರಕಾರ ವಾರ್ಷಿಕ ಸುಮಾರು 7 ಲಕ್ಷ ರೂ.ವರೆಗೆ ಹಣ ಸಂಪಾದನೆಯಾಗುತ್ತಿದೆ.

ಖಾಸಗಿ ಸಕ್ಕರೆ ಕಾರ್ಖಾನೆಯೊಂದರ ನಿವೃತ್ತ ನೌಕರ ಎಂ.ಎಚ್. ಶ್ರೀನಿವಾಸ್ ಅವರ ಪುತ್ರ ಸುಹಾಸ್‌ಗೌಡ, ಸಿವಿಲ್ ಇಂಜಿನಿಯರಿಂಗ್ ಪದವೀಧರ. ನೆಟ್‌ವರ್ಕ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಾ, ಜೊತೆಗೆ ಕೃಷಿಯಲ್ಲೂ ಯಶಸ್ವಿಯಾಗಿದ್ದಾರೆ. ಯುವಕನಿಗೆ ತಂದೆ ಶ್ರೀನಿವಾಸ್ ಸೇರಿದಂತೆ

ಕುಟುಂಬದವರು ನೆರವಾಗುತ್ತಿದ್ದಾರೆ.

250 ಬಾಳೆ, 300 ಅಡಿಕೆ, 500 ತೆಂಗಿನ ಮರಗಳನ್ನು ಬೆಳೆದಿದ್ದಾರೆ. 50 ನಾಟಿ ಕೋಳಿಗಳು, 25 ಮೇಕೆಗಳನ್ನು ಸಾಕುತ್ತಿದ್ದಾರೆ. ಮನೆಗೆ ಬೇಕಾದ ಸೊಪ್ಪು, ತರಕಾರಿ ಬೆಳೆದುಕೊಳ್ಳುತ್ತಿದ್ದಾರೆ. ಇದೀಗ ಎರಡು ವರ್ಷದಿಂದ ಕೃಷಿ ಜತೆಗೆ 20 ಗುಂಟೆ(ಅರ್ಧ ಎಕರೆ) ಖುಷ್ಕಿ ಜಮೀನಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಅಣಬೆ ಬೆಳೆಯುತ್ತಿದ್ದು, ಅದಕ್ಕೆ ಉದ್ಯಮ ರೂಪಕೊಡುವ ಸಿದ್ಧತೆ ನಡೆದಿದೆ.

ಮದ್ದೂರು-ಕೊಪ್ಪ ಮುಖ್ಯರಸ್ತೆಯ ತನ್ನ ಗ್ರಾಮದ ಬಳಿಯಿರುವ ನಿಲುವಾಗಿಲು ಗ್ರಾಮದ ಗೇಟ್ ಸಮೀಪದ ಭೂಮಿಯಲ್ಲಿ ಅಣಬೆ ಬೆಳೆಯುತ್ತಾರೆ. ಬಟನ್ ಮತ್ತು ಆಯ್‌ಸ್ಟರ್ ಎರಡು ಬಗೆಯ ಅಣಬೆ ಬೆಳೆಯುತ್ತಾರೆ. ಯಾವುದೇ ರಾಸಾಯನಿಕ ಬಳಸದೆ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸ್ಥಳದಲ್ಲೇ ಸಾರ್ವಜನಿಕರಿಗೆ ತಾಜಾ ಅಣಬೆ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌ನ ಹಲವು ಕಡೆ ಮಾರಾಟ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮೌಲ್ಯವರ್ಧನೆಗೆ ಸಿದ್ಧತೆ: ಹೆಚ್ಚಾಗಿ ಬೆಳೆದ ಅಣಬೆಯನ್ನು ಮೌಲ್ಯವರ್ಧಿತ ಪದಾರ್ಥಗಳ ಮೂಲಕ ಅಂದರೆ, ಒಣಗಿಸಿ ಪುಡಿ ಮಾಡುವುದು, ಉಪ್ಪಿನ ಕಾಯಿ, ಇತರ ಪದಾರ್ಥಗಳನ್ನು ತಯಾರಿಸಲು ತಯಾರಿ ನಡೆಸಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆಯಡಿ ಸೇರಿದಂತೆ ರಾಜ್ಯ ಸರಕಾರದಿಂದ ಯೋಜನೆಗಳಿಂದ ದೊರೆಯುವ ಸಾಲ ಸಾಲಸೌಲಭ್ಯದಿಂದ ಸಂಸ್ಕರಣ ಘಟಕ ಸ್ಥಾಪಿಸಲು ಸುಹಾಸ್‌ಗೌಡ ಯೋಜನೆ ರೂಪಿಸಿಕೊಂಡಿದ್ದಾರೆ.


 



ನೆಟ್‌ವರ್ಕ್ ಕ್ಷೇತ್ರದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಜತೆಗೆ, ಕುಟುಂಬದವರ ಕೃಷಿಯನ್ನೂ ಮುಂದುವರಿಸುತ್ತಿದ್ದೇನೆ. ಇದರಲ್ಲಿ ಖುಷಿ ಇದೆ. ಅಣಬೆ ಅತ್ಯಂತ ಪೌಷ್ಠಿಕಾಂಶವುಳ್ಳ ಬೆಳೆ. ಇದಕ್ಕೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಜನರಿಗೆ ರಾಸಾಯನಿಕ ಮುಕ್ತ ಅಣಬೆ ದೊರೆಯುವಂತೆ ಮಾಡುವ ಉದ್ದೇಶದಿಂದ ಅಣಬೆ ಬೇಸಾಯ ಆರಂಭಿಸಿದ್ದೇನೆ. ರೈತರು, ಮುಖ್ಯವಾಗಿ ಯುವಕರು ಅಣಬೆ ಕೃಷಿಯನ್ನು ಕೈಗೊಂಡು ಆರ್ಥಿಕವಾಗಿ ಸ್ವಾಲಂಬಿಗಳಾಗಬೇಕೆಂಬುದು ನನ್ನ ಆಶಯವಾಗಿದೆ.

-ಸುಹಾಸ್‌ಗೌಡ, ಪ್ರಗತಿಪರ ಕೃಷಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News