ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಮೌಲ್ಯಮಾಪನ ಹಿನ್ನೆಲೆ ಜನಗಣತಿ ನೇಮಕಕ್ಕೆ ವಿನಾಯಿತಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮನವಿ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಯಾಗಿರುವ ಶಿಕ್ಷಕರು, ಉಪನ್ಯಾಸಕರನ್ನು ಜನಗಣತಿಗೆ ನಿಯೋಜಿಸಬಾರದು, ಗಣತಿ ದಾರರನ್ನಾಗಿ ನೇಮಕಕ್ಕೆ ವಿನಾಯಿತಿ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಮುಖ್ಯ ಕಾರ್ಯದರ್ಶಿಗಳ ಮೊರೆ ಹೊಕ್ಕಿದೆ.
ಕೇಂದ್ರ ಸರಕಾರವು ಇದೇ 2026ರ ಎಪ್ರಿಲ್ 15ರಿಂದ ಮೇ 15ರವರೆಗೆ ಜನಗಣತಿ ನಡೆಸಲಿದೆ. ಈ ಕಾರ್ಯಕ್ಕೆ ಜನಗಣತಿ ನಿಯಮಗಳು-1990ರ ಪ್ರಕಾರ ಶಿಕ್ಷಕರು, ಗುಮಾಸ್ತರು ಹಾಗೂ ರಾಜ್ಯ ಸರಕಾರ ಅಥವಾ ಸ್ಥಳೀಯ ಸಂಸ್ಥೆಯ ಸಿಬ್ಬಂದಿಯನ್ನು ಗಣತಿದಾರರಾಗಿ ನೇಮಿಸಬಹುದು. ಆದರೆ ರಾಜ್ಯದಲ್ಲಿ ಇದೇ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಚಟುವಟಿಕೆಗಳೂ ಸಹ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯಲಿದೆ. ಹೀಗಾಗಿ ಶಿಕ್ಷಕರು ಮತ್ತು ಉಪನ್ಯಾಸಕರ ನಿಯೋಜನೆಗೆ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವ ಸಲ್ಲಿಸಿದೆ.
ಈ ಪ್ರಸ್ತಾವವನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೂ ಸಹ ಅನುಮೋದಿಸಿದ್ದಾರೆ ಮತ್ತು ಈ ಸಂಬಂಧ ಅಧಿಸೂಚನೆ ಹೊರಡಿಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಟಿಪ್ಪಣಿ ಹಾಳೆಗಳು ‘the-file.in’ಗೆ ಲಭ್ಯವಾಗಿವೆ.
ಶಿಕ್ಷಕರು ಮತ್ತು ಉಪನ್ಯಾಸಕರ ನಿಯೋಜನೆಗೆ ವಿನಾಯಿತಿ ನೀಡಿದಲ್ಲಿ ಜನಗಣತಿ ಕಾರ್ಯಚಟುವಟಿಕೆ ಮೇಲೆ ಬೀರುವ ಪರಿಣಾಮಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಅವರು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯು 2026ರ ಎಪ್ರಿಲ್ 25ರಿಂದ 2026ರ ಮೇ 9ರವರೆಗೆ ನಡೆಯಲಿದೆ. ಈಗಾಗಲೇ ಅಂತಿಮ ವೇಳಾಪಟಿಯನ್ನೂ ಪ್ರಕಟಿಸಿದೆ. ಈ ಪರೀಕ್ಷೆ ನಂತರ ಮೌಲ್ಯಮಾಪನ ಕಾರ್ಯಗಳು ಮತ್ತು ಫಲಿತಾಂಶ ಪ್ರಕಟಿಸುವ ಪೂರ್ವ ಸಿದ್ಧತೆಗಳೂ ಸಹ 2026ರ ಮೇ11ರಿಂದ 2026ರ ಮೇ 25 ರವರೆಗೆ ನಡೆಸಲು ಇಲಾಖೆಯು ಉದ್ದೇಶಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂದಾಜು 1,60,000 ವಿದ್ಯಾ ರ್ಥಿಗಳು ಹಾಜರಾಗುತ್ತಿ ದ್ದಾರೆ. ರಾಜ್ಯದಾದ್ಯಂತ ಅಂದಾಜು 350 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಅಂದಾಜು 9,000 ಉಪನ್ಯಾಸಕರು, ಪ್ರಾಂಶುಪಾಲರು, ಅಧಿಕಾರಿಗಳು, ಸಿಬ್ಬಂದಿ ವರ್ಗದ ಅಗತ್ಯವಿದೆ. ಹಾಗೆಯೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು 30 ಮೌಲ್ಯಮಾಪನ ಕೇಂದ್ರಗಳಲ್ಲಿ 12,000 ಉಪನ್ಯಾಸಕರನ್ನು ನಿಯೋಜಿಸಲಾಗುತ್ತದೆ.
ಅದೇ ರೀತಿ ಎಸೆಸೆಲ್ಸಿ ಪರೀಕ್ಷೆಯೂ ಸಹ 2023ರ ಮಾರ್ಚ್ 18ರಿಂದ ಎಪ್ರಿಲ್ 2ರವರೆಗೆ ನಡೆಯಲಿದೆ. ಈ ಪರೀಕ್ಷೆಗೂ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ. ಈ ಪರೀಕ್ಷೆಗೆ ಅಂದಾಜು 9,00,000 ವಿದ್ಯಾರ್ಥಿಗಳು ನೋಂ ದಾಯಿಸಿದ್ದಾರೆ. ಈ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ
ಕಾರ್ಯವೂ ಎಪ್ರಿಲ್ 6ರಿಂದ 18ರವರೆಗೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ 300 ಮೌಲ್ಯಮಾಪನ ಕೇಂದ್ರಗಳಲ್ಲಿ ಈ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಅಂದಾಜು 70,000 ಶಿಕ್ಷಕರು ಮತ್ತು ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗುತ್ತದೆ.
ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳನ್ನು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಹಿತದೃಷ್ಟಿಯಿಂದಕಾಲಮಿತಿಯಲ್ಲಿ ಕೈಗೊಳ್ಳಬೇಕಿದೆ. ಹೀಗಾಗಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ತೊಡಗುವುದರಿಂದ ಈ ಕಾರ್ಯಕ್ಕೆ ನಿಯೋಜನೆಯಾಗಿರುವ ಶಿಕ್ಷಕರು, ಉಪನ್ಯಾಸಕರನ್ನು ಗಣತಿ ಕಾರ್ಯದಿಂದ ಕೈ ಬಿಡಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿಯ ಜಿಲ್ಲಾ ಉಪ ನಿರ್ದೇಶಕರು ಇಲಾಖೆಯನ್ನು ಕೋರಿದ್ದರು.
ಮುಂಬರುವ ಜನಗಣತಿ ಕಾರ್ಯಕ್ಕಾಗಿ ಮನೆಪಟ್ಟಿ ಹಾಗೂ ಮನೆಗಣತಿ ಮತ್ತು ಜನಗಣತಿ ಹಂತಗಳ ವೇಳಾಪಟ್ಟಿಯನ್ನು ಈಗಾಗಲೇ ಗೃಹ ಸಚಿವಾಲಯವು ಬಿಡುಗಡೆ ಮಾಡಿದೆ. 2021ರ ಜನಗಣತಿಗಾಗಿ ಸಿದ್ಧಪಡಿಸಿದ್ದ ಎಲ್ಲ 33 ಪ್ರಶ್ನೆಗಳ ಪ್ರಶ್ನಾವಳಿಯನ್ನೇ ಈ ಬಾರಿ ಕೂಡ ಬಳಸಿಕೊಳ್ಳಲು ಉದ್ದೇಶಿಸಿದೆ.
ಮನೆಭೇಟಿ ಹಂತದಲ್ಲಿ ಮಾಹಿತಿ ಸಂಗ್ರಹಣೆ ನಡೆಯಲಿದೆ. ಈ ಹಂತವು ಎಪ್ರಿಲ್ 1ರಿಂದ ಸೆ.30ರವರೆಗೆ ನಡೆಯಬೇಕಿತ್ತು. ಆದರೀಗ ಮತ್ತು ಪರೀಕ್ಷೆ, ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆಗೆ ವಿನಾಯಿತಿ ನೀಡಿದಲ್ಲಿ ಈ ಕಾರ್ಯವು ವಿಳಂಬವಾಗಲಿದೆ.
ಸುತ್ತೋಲೆಯಲ್ಲಿ, 2027ರ ಜನಗಣತಿಯಲ್ಲಿ ಡಿಜಿಟಲ್ ವಿಧಾನಗಳ ಬಳಕೆ ಹೆಚ್ಚಿರುವುದರಿಂದ, ಸಿಬ್ಬಂದಿ ಗುರುತಿಸುವಿಕೆ ಮತ್ತು ಸಿಎಂಎಂಎಸ್ ಪೋರ್ಟಲ್ ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮುಂಚಿತವಾಗಿ ಆರಂಭಿಸಿ ಪೂರ್ಣಗೊಳಿಸುವುದು ಅತ್ಯವಶ್ಯಕ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ನೈಜ ದತ್ತಾಂಶ ಸಂಗ್ರಹಣೆಯನ್ನು ನೇಮಕಾತಿಯ ನಂತರ ಮಾಡಬಹುದಾದರೂ, ಗುರುತು ಮತ್ತು ನೋಂದಣಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸ್ಪಷ್ಟಪಡಿಸಿದೆ.
ಎರಡು ಹಂತಗಳಲ್ಲಿ ಜನಗಣತಿ
ಜನಗಣತಿ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ. ಮನೆಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯ 2026ರ ಎಪ್ರಿಲ್ 1ರಿಂದ ಸೆಪ್ಟಂಬರ್ 30ರವರೆಗೆ ನಡೆಯಲಿದ್ದು, ಜನಗಣತಿ ಹಂತವು 2027ರ ಫೆಬ್ರವರಿ 9ರಿಂದ 28ರವರೆಗೆ ನಡೆಯಲಿದೆ. 2027ರ ಮಾರ್ಚ್ 1ನ್ನು ಉಲ್ಲೇಖ ದಿನಾಂಕವಾಗಿ ಪರಿಗಣಿಸಲಾಗುತ್ತದೆ. 2027ರ ಜನಗಣತಿಗೆ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ, ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿಯನ್ನು ಜನವರಿ 15, 2026ರೊಳಗೆ ಪೂರ್ಣಗೊಳಿಸಬೇಕೆಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ರಿಜಿಸ್ಟ್ರಾರ್ ಜನರಲ್ ನೂತನ ಸುತ್ತೋಲೆಯ ಮೂಲಕ ಕಟ್ಟುನಿಟ್ಟಾಗಿ ನಿರ್ದೇಶಿಸಿದೆ.
ಜನಗಣತಿಗಾಗಿ ದೇಶಾದ್ಯಂತ ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸುವ ಯೋಜನೆ ರೂಪಿಸಲಾಗಿದೆ. ನೇಮಕಾತಿ, ಬ್ಲಾಕ್ ಹಂಚಿಕೆ, ಮೇಲ್ವಿಚಾರಣಾ ವಲಯಗಳ ನಿಗದಿ ಮತ್ತು ಕ್ಷೇತ್ರ ಕಾರ್ಯದ ನೈಜ ಸಮಯದ ಪ್ರಗತಿಯ ಮೇಲ್ವಿಚಾರಣೆ ನಡೆಸಲು GI ‘Census Management and Monitoring System (CMMS)’ ಎಂಬ ಡಿಜಿಟಲ್ ಪೋರ್ಟಲ್ ಅನ್ನು ನಿರ್ಮಿಸಿದೆ.