ವೃದ್ಧಾಪ್ಯ, ವಿಧವಾ ಸಹಿತ 12 ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪೂರ್ಣ ವಿತರಣೆಯಾಗದ ಮಾಸಿಕ ವೇತನ
ಬೆಂಗಳೂರು: ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ಸೇರಿದಂತೆ 12 ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ಮಾಸಿಕ ವೇತನ ವಿತರಿಸಿಲ್ಲ. ಕಳೆದ 3 ವರ್ಷಗಳಲ್ಲಿ ಹಂಚಿಕೆ ಮಾಡಿದ್ದ ಒಟ್ಟು ಮೊತ್ತದಲ್ಲಿ 244.81 ಕೋಟಿ ರೂ. ಉಳಿಕೆ ಮಾಡಿದೆ.
ಅದೇ ರೀತಿ ಹಿರಿಯ ನಾಗರೀಕರು, ಅಂಗವಿಕಲರು ಮತ್ತು ವಿಧವೆಯರಿಗೆ ಈಗಿನ ಮಾಸಾಶನ ಮೊತ್ತ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಷದ ಹಿಂದೆಯೇ ಹೇಳಿಕೆ ನೀಡಿದ್ದರು. ಆದರೀಗ ಅಂತಹ ಯಾವುದೇ ಪ್ರಸ್ತಾವವು ಇಲ್ಲ ಎಂದು ಸರಕಾರವು ಉತ್ತರಿಸಿದೆ.
ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರ್ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಮಾಹಿತಿ
ಒದಗಿಸಿದ್ದಾರೆ.
ಸಾಮಾಜಿಕ ಭದ್ರತೆ ಅಡಿಯಲ್ಲಿ ಮಾಸಾಶನ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ 30,243.8 ಕೋಟಿ ರೂ.ಖರ್ಚಾಗಿದೆ. ಈ ಮೂರು ವರ್ಷದಲ್ಲಿ 244.81 ಕೋಟಿ ರೂ. ಮೊತ್ತವನ್ನು ಖರ್ಚು ಮಾಡದೇ ಉಳಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರ ಒದಗಿಸಿರುವುದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಈ ಹಣವು ಖರ್ಚಾಗಿಲ್ಲ ಎಂಬ ಮಾಹಿತಿಯನ್ನು ಉತ್ತರದಲ್ಲಿ ಒದಗಿಸಿಲ್ಲ.
ವೃದ್ಧಾಪ್ಯ ವೇತನದಡಿಯಲ್ಲಿ 60ರಿಂದ 64 ವರ್ಷ ವಯಸ್ಸಿನವರಿಗೆ ತಿಂಗಳಿಗೆ 600 ರೂ. ಮತ್ತು 65 ವರ್ಷ ಮೇಲ್ಪಟ್ಟವರಿಗೆ 1,200 ರೂ. ಪಿಂಚಣಿ ನೀಡುತ್ತಿದೆ. ಕಳೆದ 3 ವರ್ಷಗಳಲ್ಲಿ ವೃದ್ಧಾಪ್ಯ ವೇತನಕ್ಕೆ 6,894.06 ಕೋಟಿ ರೂ.ಅನದಾನ ಹಂಚಿಕೆಯಾಗಿತ್ತು. ಈ ಪೈಕಿ 67.15 ಕೋಟಿ ರೂ. ಖರ್ಚಾಗದೇ ಬಾಕಿ ಉಳಿದಿದೆ.
ರಾಜ್ಯದಲ್ಲಿ ಸದ್ಯ 1,200 ರೂ. ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯಿತ್ತು. ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿತ್ತು. 2024-25ನೇ ಸಾಲಿನಿಂದಲೇ ಹೆಚ್ಚಳ ಮಾಡಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಆದರೀಗ ಈ ಮೊತ್ತವನ್ನು ಹೆಚ್ಚಳ ಮಾಡುವ ಪ್ರಸ್ತಾವವೇ ಸರಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.
2025-26ನೇ ಸಾಲಿನಲ್ಲಿ ವೃದ್ಧಾಪ್ಯ ವೇತನಕ್ಕೆ 2,294.54 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಈ ಪೈಕಿ ಜೂನ್ ಅಂತ್ಯಕ್ಕೆ 232.59 ಕೋಟಿ ರೂ. ವೆಚ್ಚ ಮಾಡಿರುವುದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ವೃದ್ಧಾಪ್ಯ ವೇತನ ಮಾತ್ರವಲ್ಲದೇ ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ವಿಧವಾ ವೇತನ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ, ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಮತ್ತು ಕುಟುಂಬ ಪಿಂಚಣಿ, ಮಾಜಿ ದೇವದಾಸಿ ಮಾಸಾಶನವೂ ಪೂರ್ಣ ಪ್ರಮಾಣದಲ್ಲಿ ವಿತರಿಸಿಲ್ಲ.
2022-23ರಲ್ಲಿ ಈ ಎಲ್ಲ ಯೋಜನೆಗಳಿಗೆ 9,381.26 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಇದರಲ್ಲಿ 9,342.28 ಕೋಟಿ ರೂ.ಖರ್ಚಾಗಿದೆ. 38.97 ಕೋಟಿ ರೂ.ಉಳಿಕೆಯಾಗಿದೆ. 2023-24ರಲ್ಲಿ 10,178.94 ಕೋಟಿ ರೂ. ಅನುದಾನದ ಪೈಕಿ 9,989.24 ಕೋಟಿ ರೂ.ಖರ್ಚಾಗಿದೆ. 189.69 ಕೋಟಿ ರೂ.ಉಳಿಕೆಯಾಗಿದೆ. 2024-25ರಲ್ಲಿ 10,208.41 ಕೋಟಿ ರೂ.ಅನುದಾನದ ಪೈಕಿ 10,192.28 ಕೋಟಿ ರೂ.ಖರ್ಚಾಗಿದೆ. 16.15 ಕೋಟಿ ರೂ. ಉಳಿಕೆಯಾಗಿದೆ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.