ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ಬೆಲೆ!
ಭವಿಷ್ಯದಲ್ಲಿ ಬೆಲೆ ಇಳಿಕೆ ಆಗಬಹುದೇ?
ಸಾಂದರ್ಭಿಕ ಚಿತ್ರ (credit: Grok)
ಭಾರತೀಯರು ಚಿನ್ನಕ್ಕೆ ನೀಡುವ ಮಹತ್ವ ಚಿನ್ನದೊಂದಿಗೆ ಅವರಿಗೆ ಇರುವ ಭಾವನಾತ್ಮಕ ಸಂಬಂಧ ನಿಮಗೆಲ್ಲ ಗೊತ್ತಿದೆ. ಪ್ರತೀ ಮನೆಗೂ, ಅದರಲ್ಲೂ ಮಹಿಳೆಯರಿಗೆ, ಚಿನ್ನ ಎಂದರೆ ಕೇವಲ ಆಭರಣವಲ್ಲ, ಅದೊಂದು ಭರವಸೆ, ಸಂಪತ್ತಿನ ಸಂಕೇತ. ಮದುವೆ, ಹಬ್ಬ ಹರಿ ದಿನಗಳಲ್ಲಿ ಚಿನ್ನ ಖರೀದಿಸುವುದು, ಧರಿಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರುತ್ತಿದೆ. ಈ ಬೆಲೆ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪಾಲಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದು ಏಕೆ ಹೀಗಾಗಿದೆ? ಭವಿಷ್ಯದಲ್ಲಿ ಬೆಲೆ ಇಳಿಕೆ ಆಗಬಹುದೇ?
ಮಂಗಳವಾರ ಸೆಪ್ಟೆಂಬರ್ 23 , 2025 ರಂದು 22 ಕ್ಯಾರಟ್ ಚಿನ್ನಕ್ಕೆ 10 ಗ್ರಾಂ ಗೆ 1150 ರೂಪಾಯಿ ಹೆಚ್ಚಾಗಿ 104,800 ರೂಪಾಯಿಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ 1260 ರೂಪಾಯಿ ಹೆಚ್ಚಾಗಿ 10 ಗ್ರಾಂ ಗೆ 114,330 ರೂಪಾಯಿಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ 940 ರೂಪಾಯಿ ಹೆಚ್ಚಾಗಿ 10 ಗ್ರಾಂ ಗೆ85,750 ರೂಪಾಯಿಯಾಗಿದೆ.
ಚಿನ್ನದ ಬೆಲೆ ಗಗನಕ್ಕೇರಲು ಹಲವು ಕಾರಣಗಳಿವೆ. ಇವುಗಳಲ್ಲಿ ಕೆಲವು ಜಾಗತಿಕ ಕಾರಣಗಳಾದರೆ, ಇನ್ನು ಕೆಲವು ನಮ್ಮ ದೇಶಕ್ಕೆ ಸಂಬಂಧಪಟ್ಟವು.
1 ಜಾಗತಿಕ ಆರ್ಥಿಕ ಅನಿಶ್ಚಿತತೆ :
ಜಗತ್ತಿನ ವಿವಿಧೆಡೆ ಈಗ ನಡೆಯುತ್ತಿರುವ ಯುದ್ಧಗಳು, ರಾಜಕೀಯ ಗೊಂದಲಗಳು, ಆರ್ಥಿಕ ಹಿಂಜರಿಕೆ ಭೀತಿ - ಇವೆಲ್ಲವೂ ಹೂಡಿಕೆದಾರರನ್ನು ಗೊಂದಲಕ್ಕೀಡು ಮಾಡಿವೆ. ಷೇರು ಮಾರುಕಟ್ಟೆ ಅಥವಾ ಇತರ ಹೂಡಿಕೆಗಳಲ್ಲಿ ಲಾಭದ ಭರವಸೆ ಇಲ್ಲದಾಗ, ಸುರಕ್ಷಿತವಾದ ಹೂಡಿಕೆಗಾಗಿ ಜನರು ಚಿನ್ನದತ್ತ ಮುಖ ಮಾಡುತ್ತಾರೆ. ಈ ಬೇಡಿಕೆ ಹೆಚ್ಚಾದಂತೆ ಚಿನ್ನದ ಬೆಲೆ ಹೆಚ್ಚಾಗುತ್ತದೆ.
2 ಕೇಂದ್ರ ಬ್ಯಾಂಕ್ ಗಳ ಚಿನ್ನ ಖರೀದಿ :
ಜಗತ್ತಿನಾದ್ಯಂತ ಹಲವು ದೇಶಗಳ ಕೇಂದ್ರ ಬ್ಯಾಂಕ್‌ಗಳು ತಮ್ಮ ಸಂಗ್ರಹದಲ್ಲಿ ಚಿನ್ನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿವೆ. ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಇದು ಒಂದು ಪ್ರಮುಖ ಕಾರಣ. ಈ ಬೃಹತ್ ಬೇಡಿಕೆ ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.
3 ಅಮೆರಿಕದ ಬಡ್ಡಿದರಗಳು :
ಅಮೆರಿಕದ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರಗಳನ್ನು ಕಡಿಮೆ ಮಾಡಬಹುದೆಂಬ ನಿರೀಕ್ಷೆಯಿದೆ. ಬಡ್ಡಿದರ ಕಡಿಮೆಯಾದರೆ, ಬ್ಯಾಂಕುಗಳಲ್ಲಿ ಹಣ ಇಟ್ಟರೆ ಸಿಗುವ ಬಡ್ಡಿ ಕಡಿಮೆಯಾಗುತ್ತದೆ. ಆಗ ಜನರು ಬಡ್ಡಿ ಇಲ್ಲದಿದ್ದರೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಲಾಭದಾಯಕ ಎಂದು ಭಾವಿಸುತ್ತಾರೆ. ಹಾಗಾಗಿ ಚಿನ್ನ ಖರೀದಿಯತ್ತ ಮುಖಮಾಡುತ್ತಾರೆ.
4 ಹಣದುಬ್ಬರ ಮತ್ತು ರೂಪಾಯಿ ಮೌಲ್ಯ ಕುಸಿತ :
ನಮ್ಮ ದೇಶದಲ್ಲಿ ಹಣದುಬ್ಬರ ಹೆಚ್ಚಾದಾಗ ಜನರು ತಮ್ಮ ಸಂಪತ್ತಿನ ಮೌಲ್ಯವನ್ನು ಉಳಿಸಿಕೊಳ್ಳಲು ಚಿನ್ನವನ್ನು ಖರೀದಿಸುತ್ತಾರೆ. ಇದಲ್ಲದೆ, ಡಾಲರ್ ಎದುರು ನಮ್ಮ ರೂಪಾಯಿ ಮೌಲ್ಯ ಕುಸಿದಾಗ, ವಿದೇಶದಿಂದ ಆಮದು ಆಗುವ ಚಿನ್ನದ ಬೆಲೆ ನಮ್ಮ ದೇಶದಲ್ಲಿ ಹೆಚ್ಚಾಗುತ್ತದೆ. ಈಗಾಗಲೇ ಡಾಲರ್ ಎದುರು ರುಪಾಯಿ ಮೌಲ್ಯ ಮತ್ತೆ ದಾಖಲೆ ಮಟ್ಟಕ್ಕೆ ಕುಸಿದಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.
ಹಾಗಾದರೆ, ಚಿನ್ನದ ಬೆಲೆ ಇಳಿಕೆ ಆಗಬಹುದೇ? ಅನೇಕರಿಗೆ ಇರುವ ಬಹುದೊಡ್ಡ ಪ್ರಶ್ನೆ ಇದು. ತಜ್ಞರ ಅಭಿಪ್ರಾಯದಂತೆ, ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ಇಳಿಕೆ ನಿರೀಕ್ಷಿಸುವುದು ಕಷ್ಟ. ಜಾಗತಿಕ ಪರಿಸ್ಥಿತಿಗಳು ತಿಳಿಯಾಗದೆ , ಚಿನ್ನದ ಬೆಲೆ ಮತ್ತಷ್ಟು ಏರುವ ಸಾಧ್ಯತೆಗಳೇ ಹೆಚ್ಚು.
ಆದರೆ, ಚಿನ್ನದ ಬೆಲೆ ದೀರ್ಘಾವಧಿಯಲ್ಲಿ ಏರಿಳಿತಕ್ಕೆ ಒಳಪಟ್ಟಿರುತ್ತದೆ. ಜಾಗತಿಕ ಆರ್ಥಿಕತೆ ಚೇತರಿಸಿಕೊಂಡು, ಶಾಂತಿ ನೆಲೆಸಿದರೆ, ಚಿನ್ನದ ಮೇಲಿನ ಹೂಡಿಕೆ ಬೇಡಿಕೆ ಕಡಿಮೆಯಾಗಿ ಬೆಲೆ ಇಳಿಯಬಹುದು.
ಚಿನ್ನದ ಬೆಲೆ ಏರಿಕೆ ನಿಜಕ್ಕೂ ಬಡ ಮತ್ತು ಮಧ್ಯಮ ವರ್ಗದವರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಆದರೆ, ಈ ಬಗ್ಗೆ ಸರಿಯಾದ ತಿಳುವಳಿಕೆ ಮತ್ತು ಯೋಜನೆ ಇದ್ದರೆ, ಈ ಸವಾಲನ್ನು ಎದುರಿಸಲು ಸಾಧ್ಯ. ಆದರೆ ಹೂಡಿಕೆ ಹೊರತುಪಡಿಸಿ ಧರಿಸಲೆಂದೇ ಆಭರಣ ಖರೀದಿಸುವವರು ಈಗ ಗಗನಕ್ಕೇರಿದ ಬೆಲೆ ಕೊಟ್ಟು ಚಿನ್ನ ಖರೀದಿಸಬೇಕೇ ಹೊರತು ಅನ್ಯ ಮಾರ್ಗವಿಲ್ಲ.