ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಸರಕಾರಿ ಜಮೀನು ಹರಾಜು ಸಮಂಜಸವಲ್ಲ
ವರ್ಷದ ಹಿಂದೆಯೇ ಪತ್ರ ಬರೆದಿದ್ದ ಕಂದಾಯ ಇಲಾಖೆ
ಬೆಂಗಳೂರು: ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬೆಲೆಬಾಳುವ ಸರಕಾರಿ ಜಮೀನನ್ನು ಹರಾಜು ಮಾಡುವುದು ಸಮಂಜಸವಲ್ಲ ಎಂದು ಕಂದಾಯ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ವರ್ಷದ ಹಿಂದೆಯೇ ಬರೆದಿದ್ದ ಪತ್ರವು ಇದೀಗ ಬಹಿರಂಗವಾಗಿದೆ.
ಆಡಳಿತ ಇಲಾಖೆಗಳ ವಶದಲ್ಲಿರುವ ಆಸ್ತಿಗಳ ನಗದೀಕರಣ ಮಾಡಿಕೊಂಡು ಸಂಪನ್ಮೂಲ ಕ್ರೋಡೀಕರಣ ಮಾಡಲು ಸಮಿತಿಯು ಶಿಫಾರಸು ಮಾಡಿರುವ ಬೆನ್ನಲ್ಲೇ ಸರಕಾರಿ ಜಮೀನುಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಸಂಬಂಧ ಕಂದಾಯ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ 2024ರ ಫೆ.26ರಂದೇ ಬರೆದಿದ್ದ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರವು "the-file.in"ಗೆ ಲಭ್ಯವಾಗಿದೆ.
ಭೂ ಸ್ವತ್ತು ನಗದೀಕರಿಸಿ ಆದಾಯ ಹೆಚ್ಚಿಸಿ ಎಂದು ಸಂಪನ್ಮೂಲ ಕ್ರೋಡೀಕರಣ ಸಮಿತಿಯು ಶಿಫಾರಸು ಮಾಡಿರುವ ಬೆನ್ನಲ್ಲೇ ವರ್ಷದ ಹಿಂದಿನ ಪತ್ರವು ಮುನ್ನೆಲೆಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ತೆನೆಯೂರು ಗ್ರಾಮದ ಸರ್ವೇ ನಂಬರ್ 19/1ರಲ್ಲಿ ಒಟ್ಟು 8.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 6-05 ಎಕರೆ ಜಮೀನನ್ನು ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಿಸಲು ಮುಂದಾಗಿತ್ತು. ಈ ಸಂಬಂಧ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 69ರ ಅಡಿ ಹರಾಜು ಮಾಡುವ ಬಗ್ಗೆ ಸರಕಾರದ ಪೂರ್ವಾನುಮೋದನೆ ನೀಡಲು ಕಡತ ಸಲ್ಲಿಸಿತ್ತು.
‘ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ತೆನೆಯೂರು ಗ್ರಾಮದ ಸರ್ವೇ ನಂಬರ್ 19/1ರಲ್ಲಿ ಒಟ್ಟು 8.39 ಎಕರೆ ಜಮೀನಿನ ಪೈಕಿ 6-05 ಎಕರೆ ಜಮೀನನ್ನು ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 69ರ ಅಡಿ ಹರಾಜು ಮಾಡುವ ಪ್ರಸ್ತಾವವನ್ನು ತಿರಸ್ಕರಿಸಿದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಆದರೆ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿರುವ ಕಂದಾಯ ಇಲಾಖೆಯು ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬೆಲೆಬಾಳುವ ಸರಕಾರಿ ಜಮೀನನ್ನು ಹರಾಜು ಮಾಡುವುದು ಸಮಂಜಸವಲ್ಲ ಎಂದು ನಿಲುವು ತಳೆದಿರುವುದು ಪತ್ರದಿಂದ ಗೊತ್ತಾಗಿದೆ.
ಅಲ್ಲದೇ ಸರಕಾರಿ ಭೂಮಿಯನ್ನು ಹರಾಜು ಹಾಕುವುದು ನೈತಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಪ್ಪು. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದೂ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಪತ್ರದಲ್ಲೇನಿದೆ?: ಸರಕಾರಿ ಜಮೀನುಗಳು ಸಾರ್ವಜನಿಕ ಆಸ್ತಿಗಳಾಗಿದ್ದು ಇವುಗಳನ್ನು ಸಂರಕ್ಷಿಸುವುದು ಸರಕಾರದ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಅಲ್ಲದೇ ಶಾಲೆ, ಸ್ಮಶಾನದ ಉದ್ದೇಶ, ಮೈದಾನಗಳು, ಆಟದ ಮೈದಾನಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಬಡವರಿಗೆ ವಸತಿ, ಸರಕಾರಿ ಕಚೇರಿಗಳಂತಹ ಸಾರ್ವಜನಿಕ ಅಗತ್ಯಗಳಿಗಾಗಿ ಸರಕಾರವು ಆಗಾಗ್ಗೆ ಭೂಮಿಯ ಕೊರತೆ ಎದುರಿಸುತ್ತಿದೆ. ಇಂತಹ ಉದ್ದೇಶಕ್ಕೆ ಖಾಸಗಿ ಜಮೀನುಗಳನ್ನು ಭೂ ಸ್ವಾಧೀನ ಮಾಡುವುದು ಕಷ್ಟಸಾಧ್ಯವಾಗಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಪ್ರಸ್ತುತ ಮತ್ತು ಭವಿಷ್ಯದ ಸಾರ್ವಜನಿಕ ಅಗತ್ಯತೆಗಳಿಗಾಗಿ ಬಳಸಬಹುದಾದ ಲಭ್ಯವಿರುವ ಸರಕಾರಿ ಭೂಮಿಯನ್ನು ಹರಾಜು ಮಾಡುವುದರಿಂದ ಸಾರ್ವಜನಿಕ ಅಗತ್ಯಗಳಿಗಾಗಿ ಭೂಮಿ ಒದಗಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸಿದಂತಾಗುವುದಿಲ್ಲ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮೀನಿನ ಕೊರತೆಯ ಸಮಸ್ಯೆ ಹೆಚ್ಚು ತೀವ್ರವಾಗಿದೆ ಎಂದು ವಿವರಿಸಿದೆ.
ಕ್ಷಿಪ್ರ ನಗರೀಕರಣ, ಸಾರ್ವಜನಿಕ/ನಾಗರಿಕ ಅಗತ್ಯಗಳಿಗಾಗಿ ಜಾಗವನ್ನು ಕಾಯ್ದಿರಿಸದೇ ಅನಧಿಕೃತ ಲೇ ಔಟ್‌ಗಳ ಬೆಳವಣಿಗೆ, ಮೂಲಭೂತ, ಮೂಲಸೌಕರ್ಯ, ಸೌಲಭ್ಯಗಳಿಗಾಗಿ ಜಾಗಗಳನ್ನು ಮೀಸಲಿಡದೇ ಇರುವುದರಿಂದ ಸಾರ್ವಜನಿಕ ಅಗತ್ಯಗಳನ್ನು ಪೂರೈಸಲು ಸರಕಾರಕ್ಕೆ ಈಗಾಗಲೇ ಬಹಳ ಸವಾಲಾಗಿದೆ ಎಂದು ಹೇಳಿರುವುದು ಪತ್ರದಿಂದ ಗೊತ್ತಾಗಿದೆ. ಈಗಾಗಲೇ ಹರಾಜು ಮಾಡಿರುವ ಜಮೀನುಗಳ ಮೌಲ್ಯವು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಭಾವಿಸಿದರೂ ಸಹ ನಿಜವಾದ ಮಾರುಕಟ್ಟೆ ದರಗಳು ಬಹುಶಃ ಹರಾಜು ದರಗಳಿಗಿಂತ ಹೆಚ್ಚಾಗಿರುತ್ತದೆ. ಹರಾಜನ್ನು ಸಮರ್ಥಿಸಲು ಹೆಚ್ಚು ಕಡಿಮೆ ಮಾರುಕಟ್ಟೆ ದರವನ್ನು ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ ಅಂತಹ ಹರಾಜುಗಳು, ಖರೀದಿದಾರರಿಗೆ ಆಗಾಧ ಲಾಭವನ್ನು ತಂದುಕೊಡುತ್ತದೆ ಎಂದೂ ಹೇಳಿದೆ.