ಬಳ್ಳಾರಿಯ ಸಂಡೂರಿನಲ್ಲಿ ಎಂಎಸ್‌ಪಿಎಲ್ ಲಿಮಿಟೆಡ್‌ಗೆ 191.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನು ಮಂಜೂರು
ಬೆಂಗಳೂರು, ಜು.13: ಕೈಗಾರಿಕೆ ಉದ್ದೇಶಕ್ಕೆ 900 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿಸಿಕೊಂಡು ಹಲವು ವರ್ಷಗಳಾದರೂ ಕೈಗಾರಿಕೆಯನ್ನೇ ಸ್ಥಾಪಿಸಿಲ್ಲ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರತಿಷ್ಠಿತ ಎಂಎಸ್‌ಪಿಎಲ್ ಲಿಮಿಟೆಡ್‌ಗೆ ಇದೀಗ ಬಳ್ಳಾರಿಯ ಸಂಡೂರಿನಲ್ಲಿಯೂ 191.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನು ಮಂಜೂರು ಮಾಡಲು ಹೊರಟಿದೆ.
ಪ್ರತಿಷ್ಠಿತ ಎಂಎಸ್‌ಪಿಎಲ್ ಲಿಮಿಟೆಡ್ ಕಂಪೆನಿ ಒಡೆತನದ ಮತ್ತೊಂದು ಕಂಪೆನಿ ಆರ್.ಎಸ್. ಐರನ್ ಸ್ಟೀಲ್ ಕಂಪೆನಿ (AARESS IRON STEEL LIMITED) ಕೈಗಾರಿಕೆ ಉದ್ದೇಶಕ್ಕೆ ಮಂಜೂರು ಮಾಡಿಸಿಕೊಂಡಿದ್ದ 900 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಒಂದೇ ಒಂದು ಕೈಗಾರಿಕೆಯನ್ನು ಸ್ಥಾಪಿಸಿರಲಿಲ್ಲ. ಆದರೂ ಈ ಜಮೀನನ್ನು ಹಿಂದಿನ ಬಿಜೆಪಿ ಸರಕಾರವೂ ವಶಪಡಿಸಿಕೊಂಡಿರಲಿಲ್ಲ.
ಆದರೆ ಈಗ ಕಾಂಗ್ರೆಸ್ ಸರಕಾರವು ಎಂಎಸ್‌ಪಿಎಲ್ ಲಿಮಿಟೆಡ್‌ನ ಬೆನ್ನಿಗೆ ನಿಂತಿದೆ. ಅಲ್ಲದೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಕಾಳಿಂಗೇರಿ, ಅಂಕಮನಾಳ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿರುವ ಸರಕಾರಿ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ತುದಿಗಾಲಲ್ಲಿ ನಿಂತಿದೆ. ಈ ಸಂಬಂಧ ಕೆಲವು ದಾಖಲೆಗಳು "the-file.in"ಗೆ ಲಭ್ಯವಾಗಿವೆ.
191.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನು ಮಂಜೂರು ಮಾಡುವ ಸಂಬಂಧದ ಕಡತವು ಕಂದಾಯ ಇಲಾಖೆಯಲ್ಲಿ ಬಿರುಸಿನ ವೇಗದಲ್ಲಿ ಚಲಿಸುತ್ತಿದೆ.
ಸಂಡೂರು ತಾಲೂಕಿನ ಚೋರನೂರು ಹೋಬಳಿ ಕಾಳಿಂಗೇರಿ ಗ್ರಾಮ ಮತ್ತು ಅಂಕಮನಾಳ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ 201.92 ಎಕರೆ ಪೈಕಿ 191 ಎಕರೆ 71 ಗುಂಟೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಕಲಬುರಗಿ ಪ್ರಾದೇಶಿಕ ಆಯುಕ್ತರು 2024ರ ಜನವರಿ 19ರಂದೇ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಪ್ರಸ್ತಾವದ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಪ್ರಸ್ತಾವದಲ್ಲೇನಿದೆ?
ಎಂಎಸ್‌ಪಿಎಲ್ ಕಂಪೆನಿಯು 5.00 ಎಂಟಿಪಿಎ ಮತ್ತು 3.00 ಎಂಟಿಪಿಎ ಕಬ್ಬಿಣದ ಅದಿರು ಸಂಸ್ಕರಿಸುವ ಘಟಕ ಸ್ಥಾಪಿಸಲು ಮುಂದಾಗಿದೆ.
ಕೈಗಾರಿಕೆ ಉದ್ದೇಶಕ್ಕಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಾಳೀಂಗೇರಿ ಮತ್ತು ಅಂಕಮನಾಳ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ 201.92 ಎಕರೆ ಇದೆ. ಇದರಲ್ಲಿ 191.71 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ 2024ರ ಜನವರಿ 6ರಂದು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ್ದರು.
ಅಂಕಮನಾಳ ಗ್ರಾಮದ ಸರ್ವೇ ನಂಬರ್ 302ರಲ್ಲಿ ಪಹಣಿ ಪ್ರಕಾರ 147.56 ಎಕರೆ ಇದೆ. ಇದರಲ್ಲಿ ಕೈಗಾರಿಕೆಗಾಗಿ 20.00 ಎಕರೆ ಕೋರಿದೆ. ಕಾಳಿಂಗೇರಿ ಗ್ರಾಮದ ಸರ್ವೇ ನಂಬರ್ 30ರಲ್ಲಿರುವ 10.06 ಎಕರೆ, ಸರ್ವೇ ನಂಬರ್ 31ರಲ್ಲಿರುವ 10.92 ಎಕರೆ, 32ರಲ್ಲಿ 30.83 ಎಕರೆ, 35ರಲ್ಲಿ 99.90 ಎಕರೆ ಮತ್ತು 240ರಲ್ಲಿ 795. 57 ಎಕರೆಯಲ್ಲಿ 20.00 ಎಕರೆ ಸೇರಿ ಒಟ್ಟಾರೆ 191.71 ಎಕರೆ ವಿಸ್ತೀರ್ಣದ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕು ಎಂದು ಪ್ರಸ್ತಾವದಲ್ಲಿ ಕೋರಿತ್ತು.
ಪ್ರಸ್ತಾಪಿತ ಜಮೀನು ಕೈಗಾರಿಕೆ ಯೋಜನೆಗೆ ಅವಶ್ಯಕತೆಗೆ ಅನುಗುಣವಾದ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 19 ಹಾಗೂ 22ರ ಅಡಿಯಲ್ಲಿ ಸರಕಾರಕ್ಕೆ ಮೂಲ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ತಿಳಿಸಿದ್ದರು.
ಈ ಹಿಂದೆಯೂ ಇದೇ ಎಂಎಸ್‌ಪಿಎಲ್‌ಕಂಪೆನಿಯು ಕಬ್ಬಿಣ ಅದಿರು ಸಂಸ್ಕರಣೆ ಘಟಕ ಸ್ಥಾಪಿಸಲು ಸರಕಾರದಿಂದ 922 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು ಎಂಎಸ್‌ಪಿಎಲ್ ಸಮೂಹದ ಆರ್.ಎಸ್.ಸ್ಟೀಲ್ ಕಂಪೆನಿ ನೇರನೇರಾ ಉಲ್ಲಂಘಿಸಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.