ರಾಜ್ಯಪಾಲ vs ತಮಿಳುನಾಡು | ಡಿಎಂಕೆ ಸರಕಾರದೊಂದಿಗೆ ರಾಜ್ಯಪಾಲ ಆರ್.ಎನ್.ರವಿ ಜಟಾಪಟಿ ಯಾಕೆ?
Photo Credit : PTI
ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಇಂದು (ಮಂಗಳವಾರ) ರಾಜ್ಯ ಸರಕಾರ ಸಿದ್ಧಪಡಿಸಿದ ನೀತಿ ಭಾಷಣವನ್ನು ಓದಲು ನಿರಾಕರಿಸಿ ವಿಧಾನಸಭೆಯಿಂದ ಹೊರನಡೆದಿದ್ದಾರೆ. ನನಗೆ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಜ್ಯಪಾಲರು, ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸತತ ಮೂರನೇ ವರ್ಷವೂ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿರುವ ನಡೆಗೆ ತೀವ್ರ ಟೀಕೆ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲರು ಸಂವಿಧಾನಾತ್ಮಕ ಸಂಪ್ರದಾಯಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿ ಸದನದಿಂದ ಹೊರನಡೆದಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಸಿದ್ಧಪಡಿಸುವ ನೀತಿ ಭಾಷಣದಲ್ಲಿ ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸಲು ಅಥವಾ ಬೇರೆ ಏನನ್ನಾದರೂ ಹೇಳಲು ಅವಕಾಶವಿಲ್ಲ. ಅವರು ಸರಕಾರದ ನೀತಿಗಳನ್ನು ಪ್ರತಿಬಿಂಬಿಸುವ ಭಾಷಣವನ್ನು ಮಾತ್ರ ಓದಬೇಕು. ಆದರೆ ಆರ್.ಎನ್.ರವಿ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಅವರು “ಉದ್ದೇಶಪೂರ್ವಕವಾಗಿ” ಈ ನಡೆ ಅನುಸರಿಸಿದ್ದಾರೆ. ಇದು “ಸದನವನ್ನು ಅವಮಾನಿಸಿದಂತೆ” ಎಂದು ಸ್ಟಾಲಿನ್ ಪ್ರತಿಕ್ರಿಯಿಸಿದರು.
ರಾಜ್ಯಪಾಲರು ಸದನದಿಂದ ಹೊರಬಂದ ಕೆಲವೇ ಹೊತ್ತಿನಲ್ಲಿ, ಭಾಷಣವನ್ನು ಓದಲು ನಿರಾಕರಿಸಿದ್ದಕ್ಕೆ ಕಾರಣಗಳನ್ನು ವಿವರಿಸುವ 13 ಅಂಶಗಳ ಹೇಳಿಕೆಯನ್ನು ರಾಜಭವನ ಬಿಡುಗಡೆ ಮಾಡಿತು.
ರಾಜಭವನ ಪ್ರಕಟಿಸಿದ ಹೇಳಿಕೆಯ ಪ್ರಕಾರ, ರಾಜ್ಯಪಾಲರ ಮೈಕ್ ಅನ್ನು ಪದೇಪದೇ ಆಫ್ ಮಾಡಲಾಗುತ್ತಿತ್ತು. ಸದನದ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವರಿಗೆ ಅವಕಾಶ ನೀಡಲಾಗಲಿಲ್ಲ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಮಾತನಾಡುವ ಹಕ್ಕನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸದನದಿಂದ ಹೊರನಡೆಯಬೇಕಾಯಿತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸಿದ್ಧಪಡಿಸಿದ ಭಾಷಣದಲ್ಲಿ ಗಂಭೀರ ಲೋಪಗಳು ಮತ್ತು ತಪ್ಪುಗಳನ್ನು ಗುರುತಿಸಲು ರಾಜ್ಯಪಾಲರು ಪ್ರಯತ್ನಿಸಿದ್ದರು. ಆದರೆ ಅದನ್ನು ಮಾಡಲು ಅವಕಾಶ ನೀಡಲಾಗಲಿಲ್ಲ. ಭಾಷಣವು ಹಲವಾರು ಆಧಾರರಹಿತ ಹಾಗೂ ದಾರಿತಪ್ಪಿಸುವ ಹೇಳಿಕೆಗಳನ್ನು ಒಳಗೊಂಡಿದ್ದು, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ರಾಜಭವನ ಆರೋಪಿಸಿದೆ.
ತಮಿಳುನಾಡು 12 ಲಕ್ಷ ಕೋಟಿ ರೂ. ಗೂ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಿದೆ ಎಂಬ ರಾಜ್ಯ ಸರಕಾರದ ಹೇಳಿಕೆಯನ್ನು ಪ್ರಶ್ನಿಸಿರುವ ರಾಜಭವನ, ಅನೇಕ ಹೂಡಿಕೆ ಒಪ್ಪಂದಗಳು ಕೇವಲ ಕಾಗದದಲ್ಲೇ ಉಳಿದಿವೆ ಎಂದು ಹೇಳಿದೆ. ನಿಜವಾದ ಹೂಡಿಕೆಗಳು ಘೋಷಿತ ಅಂಕಿಅಂಶಗಳ ಒಂದು ಭಾಗ ಮಾತ್ರ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆ (FDI) ಆಕರ್ಷಿಸುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಾಲ್ಕನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ ಎಂದೂ ಹೇಳಲಾಗಿದೆ.
ಪೋಕ್ಸೊ ಪ್ರಕರಣಗಳು ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದರೂ, ಮಹಿಳಾ ಸುರಕ್ಷತೆ ಕುರಿತ ಕಾಳಜಿಗಳನ್ನು ಭಾಷಣದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ರಾಜಭವನ ಹೇಳಿದೆ.
ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಯುವಕರಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಸೇವನೆಯ ಹೆಚ್ಚುತ್ತಿರುವ ಅಪಾಯವನ್ನು ಉಲ್ಲೇಖಿಸಿರುವ ರಾಜಭವನ, ಒಂದು ವರ್ಷದಲ್ಲಿ 2,000 ಕ್ಕೂ ಹೆಚ್ಚು ಆತ್ಮಹತ್ಯೆಗಳು ಮಾದಕ ವ್ಯಸನಕ್ಕೆ ಸಂಬಂಧಿಸಿದ್ದಿವೆ ಎಂದು ತಿಳಿಸಿದೆ.
ದಲಿತರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳು, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಖಾಲಿ ಉಳಿದಿರುವ ಹುದ್ದೆಗಳು ಮತ್ತು ದುರುಪಯೋಗ, ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸದಿರುವುದು — ಇವೆಲ್ಲವೂ ನಾಗರಿಕರ ತಳಮಟ್ಟದ ಪ್ರಜಾಪ್ರಭುತ್ವದ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸರಿಯಾಗಿ ರಚಿಸಲಾದ ಟ್ರಸ್ಟಿ ಮಂಡಳಿಗಳಿಲ್ಲದೆ ಸಾವಿರಾರು ದೇವಾಲಯಗಳ ಮೇಲೆ ದೀರ್ಘಕಾಲದಿಂದ ಸರಕಾರದ ನಿಯಂತ್ರಣ ಮುಂದುವರಿದಿರುವುದು, ಎಂಎಸ್‌ಎಂಇ ವಲಯದಲ್ಲಿ ಹೆಚ್ಚುತ್ತಿರುವ ಒತ್ತಡ, ಕೆಳ ಹಂತದ ಸರಕಾರಿ ನೌಕರರಲ್ಲಿ ಅಸಮಾಧಾನ, ರಾಷ್ಟ್ರಗೀತೆಗೆ ಗೌರವ ಸೇರಿದಂತೆ ಸಾಂವಿಧಾನಿಕ ಕರ್ತವ್ಯಗಳನ್ನು ಪದೇಪದೇ ನಿರ್ಲಕ್ಷಿಸಲಾಗುತ್ತಿರುವ ಬಗ್ಗೆ ರಾಜಭವನ ಕಳವಳ ವ್ಯಕ್ತಪಡಿಸಿದೆ.
ಈ ಎಲ್ಲಾ ಕಳವಳಗಳು ವಾಸ್ತವಗಳನ್ನು ಪ್ರತಿಬಿಂಬಿಸುತ್ತವೆ. ರಾಜ್ಯ ಸರಕಾರದ ಆದ್ಯತೆಗಳನ್ನು ನಿರ್ಧರಿಸುವ ಉದ್ದೇಶ ಹೊಂದಿರುವ ಮಹತ್ವದ ನೀತಿ ಭಾಷಣದಲ್ಲಿ ಇವುಗಳನ್ನು ನಿರ್ಲಕ್ಷಿಸಬಾರದು ಎಂದು ರಾಜಭವನ ಹೇಳಿಕೆಯಲ್ಲಿದೆ.
ರಾಜ್ಯಪಾಲ ಆರ್.ಎನ್.ರವಿ ಮತ್ತು ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರ ನಡುವಿನ ಸಂಘರ್ಷ ಹೊಸದೇನಲ್ಲ. ವಿವಾದಾತ್ಮಕ ಹೇಳಿಕೆಗಳು ಹಾಗೂ ಸರಕಾರದ ವಿರುದ್ಧದ ಟೀಕೆಗಳ ಮೂಲಕ ರಾಜ್ಯಪಾಲರು ಆಗಾಗ್ಗೆ ಸುದ್ದಿಯಾಗುತ್ತಲೇ ಇದ್ದಾರೆ.
*ಮಸೂದೆಗೆ ಒಪ್ಪಿಗೆ ನೀಡಲು ನಿರಾಕರಣೆ
2023ರ ಏಪ್ರಿಲ್‌ನಲ್ಲಿ, ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಪಾಲರು ತಡೆಹಿಡಿದರೆ ಆ ಮಸೂದೆ ಸತ್ತುಹೋಯಿತು ಎಂದರ್ಥ ಎಂದು ರವಿ ಹೇಳಿದ್ದರು. ಸುಪ್ರೀಂ ಕೋರ್ಟ್, ಒಪ್ಪಿಗೆಯನ್ನು ತಡೆಹಿಡಿಯುವುದನ್ನು ‘ಮಸೂದೆಗೆ ಒಪ್ಪಿಗೆ ಇಲ್ಲ’ ಎಂದು ವ್ಯಾಖ್ಯಾನಿಸಿದೆ. ಇದು ಮಸೂದೆ ಸತ್ತುಹೋಯಿತೆಂಬ ಅರ್ಥ ನೀಡುತ್ತದೆ. ‘ತಿರಸ್ಕೃತ’ ಎಂಬ ಪದ ಬಳಕೆಗೆ ಇದು ಸಮಾನ ಎಂದು ಅವರು ರಾಜಭವನದಲ್ಲಿ ನಾಗರಿಕ ಸೇವಾ ಆಕಾಂಕ್ಷಿಗಳನ್ನು ಉದ್ದೇಶಿಸಿ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಯಾವುದೇ ಮಾನ್ಯ ಕಾರಣವಿಲ್ಲದೆ ಮಸೂದೆಗೆ ಒಪ್ಪಿಗೆ ತಡೆಹಿಡಿದರೆ ಅದು ‘ಸಂಸದೀಯ ಪ್ರಜಾಪ್ರಭುತ್ವ ಸತ್ತುಹೋಯಿತು’ ಎಂಬರ್ಥ ಎಂದು ಹೇಳಿದ್ದಾರೆ.
ನವೆಂಬರ್ 2023ರಲ್ಲಿ ಪಂಜಾಬ್ ರಾಜ್ಯಪಾಲರ ಪ್ರಕರಣ ವಿಚಾರಣೆ ವೇಳೆ, ಭಾರತದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿದರೆ ಅದು ಸತ್ತುಹೋಯಿತೆಂದು ಅರ್ಥವಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ರಾಜ್ಯಪಾಲರ ನಡೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
*‘ನೀಟ್ ಮಸೂದೆಯನ್ನು ನಾನು ಎಂದಿಗೂ ಅಂಗೀಕರಿಸುವುದಿಲ್ಲ’
ಫೆಬ್ರವರಿ 2022ರಲ್ಲಿ, ತಮಿಳುನಾಡು ಪದವಿಪೂರ್ವ ವೈದ್ಯಕೀಯ ಪ್ರವೇಶ ಮಸೂದೆ–2021 ಅನ್ನು ರಾಜ್ಯಪಾಲ ರವಿ ಅವರು ವಿಧಾನಸಭಾ ಸ್ಪೀಕರ್ ಗೆ ಹಿಂತಿರುಗಿಸಿದ್ದರು. ಈ ಮಸೂದೆ MBBS/BDS ಕೋರ್ಸ್‌ಗಳಿಗೆ ನೀಟ್ ಆಧಾರಿತ ಪ್ರವೇಶದಿಂದ ವಿನಾಯಿತಿ ನೀಡಬೇಕು ಮತ್ತು ಸರಕಾರಿ ಕೋಟಾ ಸೀಟುಗಳಲ್ಲಿ 12ನೇ ತರಗತಿ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಬೇಕು ಎಂದು ಕೋರಿತ್ತು.
ನ್ಯಾಯಮೂರ್ತಿ ಎ.ಕೆ.ರಾಜನ್ ಸಮಿತಿಯ ಶಿಫಾರಸುಗಳ ಮೇರೆಗೆ ಮಸೂದೆ ರೂಪಿಸಲಾಗಿತ್ತು. ಆದರೆ ಸಮಿತಿಯ ವರದಿ “ಕಾಮಾಲೆ ರೋಗದ ದೃಷ್ಟಿಕೋನವನ್ನು” ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದ್ದ ರವಿ, ಈ ಮಸೂದೆ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದಿದ್ದರು.
ಈ ಮಸೂದೆ ಕೇಂದ್ರ ಕಾನೂನಿಗೆ ವಿರುದ್ಧವಾಗಿದ್ದ ಕಾರಣ, ವಿಧಾನಸಭೆ ಮತ್ತೊಮ್ಮೆ ಅಂಗೀಕರಿಸಿ ರಾಜಭವನಕ್ಕೆ ಕಳುಹಿಸಿತು. ಬಳಿಕ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಯಿತಾದರೂ, ರಾಷ್ಟ್ರಪತಿ ಒಪ್ಪಿಗೆ ನೀಡಲಿಲ್ಲ.
ಆಗಸ್ಟ್ 2023ರಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, “ನಾನು ನಿಮಗೆ ತುಂಬಾ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಾನು ಈ ಮಸೂದೆಗೆ ಎಂದಿಗೂ ಅನುಮತಿ ನೀಡುವುದಿಲ್ಲ” ಎಂದು ರವಿ ಹೇಳಿದ್ದರು.
*ಸೆಂಥಿಲ್‌ಬಾಲಾಜಿ ವಜಾ ಮತ್ತು ‘ಯು-ಟರ್ನ್’
2023 ಜೂನ್ 29ರಂದು ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿ.ಸೆಂಥಿಲ್‌ಬಾಲಾಜಿಯನ್ನು ಬಂಧಿಸಿತು. ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಅವರನ್ನು ಏಕಪಕ್ಷೀಯವಾಗಿ ಸಚಿವ ಸಂಪುಟದಿಂದ ವಜಾಗೊಳಿಸಿದರು.
ಇದು ನ್ಯಾಯಸಮ್ಮತ ತನಿಖೆಗೆ ಧಕ್ಕೆಯಾಗಬಹುದು ಎಂದು ರಾಜಭವನ ಹೇಳಿತ್ತು. ಆದರೆ ಅದೇ ದಿನ ರಾತ್ರಿ, ಕೇಂದ್ರ ಗೃಹ ಸಚಿವರು ಮತ್ತು ಅಟಾರ್ನಿ ಜನರಲ್ ಸಲಹೆ ಹಿನ್ನೆಲೆಯಲ್ಲಿ ವಜಾ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದರು. ಇಂದಿಗೂ ಅಟಾರ್ನಿ ಜನರಲ್ ಅಭಿಪ್ರಾಯವನ್ನು ಸಾರ್ವಜನಿಕಗೊಳಿಸಲಾಗಿಲ್ಲ.
*ಪೊನ್ಮುಡಿ ಮರುಸೇರ್ಪಡೆಗೆ ನಿರಾಕರಣೆ
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆ ಸ್ಥಗಿತಗೊಂಡಿದ್ದರೂ, 2024ರ ಮಾರ್ಚ್‌ನಲ್ಲಿ ಕೆ.ಪೊನ್ಮುಡಿಯನ್ನು ಸಂಪುಟಕ್ಕೆ ಸೇರಿಸಲು ರಾಜ್ಯಪಾಲರು ನಿರಾಕರಿಸಿದರು. ಇದು ಸಾಂವಿಧಾನಿಕ ನೈತಿಕತೆಗೆ ವಿರುದ್ಧ ಎಂದು ಅವರು ವಾದಿಸಿದರು.
ನಂತರ, ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ನಡೆಗಾಗಿ ರಾಜ್ಯಪಾಲರನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು. ಬಳಿಕ ರಾಜ್ಯಪಾಲರು ಪೊನ್ಮುಡಿಗೆ ಪ್ರಮಾಣವಚನ ಬೋಧಿಸಿದರು.
*ಪೆಟ್ರೋಲ್ ಬಾಂಬ್ ದಾಳಿ ಮತ್ತು NIA ತನಿಖೆ
2023 ಅಕ್ಟೋಬರ್ 25ರಂದು ಚೆನ್ನೈನ ರಾಜಭವನದ ಮೇಲೆ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದಲ್ಲಿ, ರಾಜಭವನ ಹಲವು ದಾಳಿಕೋರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿತು. ಆದರೆ NIA ತನಿಖೆಯಲ್ಲಿ ವಿನೋದ್ ಎಂಬ ವ್ಯಕ್ತಿಯೇ ಏಕೈಕ ಆರೋಪಿ ಎಂದು ತಿಳಿದುಬಂದಿತು.
*‘ತಮಿಳುನಾಡು’ಗಿಂತ ‘ತಮಿಳಗಂ’ ಸೂಕ್ತ
ಕಾಶಿ–ತಮಿಳು ಸಂಗಮ ಕಾರ್ಯಕ್ರಮದಲ್ಲಿ, ತಮಿಳುನಾಡನ್ನು ‘ತಮಿಳಗಂ’ ಎಂದು ಕರೆಯುವುದು ಸೂಕ್ತ ಎಂದು ರಾಜ್ಯಪಾಲರು ಹೇಳಿದ್ದು, ದ್ರಾವಿಡ ರಾಜಕೀಯದ ವಿರುದ್ಧದ ಹೇಳಿಕೆಗಳೊಂದಿಗೆ ಭಾರೀ ವಿವಾದಕ್ಕೆ ಕಾರಣವಾಯಿತು.
ದುರದೃಷ್ಟವಶಾತ್ ತಮಿಳುನಾಡಿನಲ್ಲಿ ನಾವು ದ್ರಾವಿಡರು ಎಂಬ ಪ್ರತಿಗಾಮಿ ರಾಜಕೀಯವಿದೆ. ಸಂವಿಧಾನದ ಬಲದಿಂದ ನಮ್ಮನ್ನು ಒಟ್ಟುಗೂಡಿಸಲಾಗಿದೆ. ನಾವು ರಾಷ್ಟ್ರದ ಭಾಗವಲ್ಲ, ರಾಷ್ಟ್ರದ ಅವಿಭಾಜ್ಯ ಅಂಗ ಎಂಬ ಈ ನಿರೂಪಣೆಯನ್ನು ಬಲಪಡಿಸಲು ಅರ್ಧ ಶತಮಾನದಲ್ಲಿ ಸಂಪೂರ್ಣ ಪ್ರಯತ್ನವನ್ನು ರಚಿಸಲಾಗಿದೆ. ವಿಭಿನ್ನ ರೀತಿಯ ನಿರೂಪಣೆಯನ್ನು ಸಹ ರಚಿಸಲಾಗಿದೆ. ಇಡೀ ದೇಶಕ್ಕೆ ಅನ್ವಯವಾಗುವ ಎಲ್ಲದಕ್ಕೂ, ತಮಿಳುನಾಡು ಇಲ್ಲ ಎಂದು ಹೇಳುತ್ತದೆ.ಇದು ಒಂದು ಅಭ್ಯಾಸವಾಗಿ ಹೋಗಿದೆ.ಇದನ್ನು ಮುರಿಯಬೇಕು. ಸತ್ಯ ಗೆಲ್ಲಬೇಕು. ವಾಸ್ತವವಾಗಿ, ತಮಿಳುನಾಡು ಭಾರತದ ಆತ್ಮವನ್ನು ಹೊಂದಿರುವ ಭೂಮಿ. ಅದು ಭಾರತದ ಗುರುತು. ಇದನ್ನು ತಮಿಳಗಂ ಎಂದು ಕರೆಯುವುದು ಸೂಕ್ತ ಎಂದು ರಾಜ್ಯಪಾಲರು ಹೇಳಿದ್ದರು. 2023ರಲ್ಲಿ ಕಾಶಿ-ತಮಿಳು ಸಂಗಮದ ಸಂಘಟಕರು ಮತ್ತು ಸ್ವಯಂಸೇವಕರನ್ನು ಸನ್ಮಾನಿಸಲು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಆ ಮಾತನ್ನಾಡಿದ್ದು ,ಇದು ವಿವಾದ ಸೃಷ್ಟಿಸಿತ್ತು.