1,142.60 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಉಳಿಸಿದ ಗ್ರಾಪಂಗಳು
ಹೆಚ್ಚಿನ ಗ್ರಾಪಂಗಳು ತೆರಿಗೆ ವಹಿ ನಿರ್ವಹಿಸಿಲ್ಲ ಕರ್ನಾಟಕ ಪಂಚಾಯತ್ರಾಜ್ (ಗ್ರಾಮ ಪಂಚಾಯತ್ಗಳ ಅಯವ್ಯಯ ಮತ್ತು ಲೆಕ್ಕಪತ್ರಗಳು ) 2006ರ ನಿಯಮ 33 ಮತ್ತು 34ರಂತೆ ಗ್ರಾಮ ಪಂಚಾಯತ್ಗಳು ವಿಧಿಸುವ ವಿವಿಧ ತೆರಿಗೆಗಳ ಕುರಿತು ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸಬೇಕು. ಆದರೆ ಬಹಳಷ್ಟು ಗ್ರಾಮ ಪಂಚಾಯತ್ಗಳು ಈ ಕಾಯ್ದೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಹಾಗೂ ಬಹುತೇಕ ಪಂಚಾಯತ್ಗಳು ಈ ವಹಿಗಳನ್ನೂ ನಿರ್ವಹಿಸಿಲ್ಲ. ಈ ರೀತಿ ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸದಿದ್ದಲ್ಲಿ ಮತ್ತು ಸಂಸ್ಥೆವಾರು ಬಾಕಿ ಪಟ್ಟಿಯನ್ನು ತಯಾರಿಸದಿದ್ದಲ್ಲಿ ಗ್ರಾಮ ಪಂಚಾಯತ್ಗಳಿಗೆ ಬರುವ ಆದಾಯವು ಕೈ ತಪ್ಪುವ ಸಾಧ್ಯತೆ ಇರುತ್ತದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಬೆಂಗಳೂರು: ಮನೆ, ಭೂಮಿ ಮೇಲಿನ ತೆರಿಗೆ, ಜಾಹೀರಾತು, ಹೋರ್ಡಿಂಗ್ಸ್, ಮೊಬೈಲ್ ಟವರ್, ಸೋಲಾರ್ ಪಾರ್ಕ್ ತೆರಿಗೆ ಸಂಬಂಧ 1,710.39 ಕೋಟಿ ರೂ. ಬೇಡಿಕೆ ಪೈಕಿ 567.81 ಕೋಟಿ ರೂ. ಮಾತ್ರ ವಸೂಲಿ ಮಾಡಿರುವ ರಾಜ್ಯದ ಬಹುತೇಕ ಗ್ರಾಮ ಪಂಚಾಯತ್ಗಳು, ವಸೂಲಿಗೆ 1,142.60 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದನ್ನು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಹಿರಂಗಪಡಿಸಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ 2,916 ಗ್ರಾಮ ಪಂಚಾಯತ್ಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯತ್ಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಮತ್ತು ವಸೂಲಾತಿಯಲ್ಲಿ ಪಂಚಾಯತ್ಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದರ ಬೆನ್ನಲ್ಲೇ ಪಂಚಾಯತ್ಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪತ್ತೆ ಹಚ್ಚಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು 'the-file.in' ಗೆ ಲಭ್ಯವಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ರಾಜ್ ಅಧಿನಿಯಮ 1963ರ ಪ್ರಕರಣ 199ರ ಅನ್ವಯ ತೆರಿಗೆಗಳನ್ನು ವಿಧಿಸಲು ಅವಕಾಶವಿದೆ. ಹಾಗೂ ಪ್ರಕರಣ 199 (ಎ) ಅನ್ವಯ ಗ್ರಾಮ ಪಂಚಾಯತ್ಗಳು ವಿಧಿಸಬಹುದಾದ ತೆರಿಗೆಗಳು ಮತ್ತು ದರಗಳನ್ನು, ಕಟ್ಟಡಗಳು ಮತ್ತು ಕೃಷಿಯೇತರ ಭೂಮಿಗಳ ಸಂಬಂಧದಲ್ಲಿ ಕನಿಷ್ಠ 2 ವರ್ಷಕ್ಕೊಮ್ಮೆ ಪರಿಷ್ಕರಣೆಗೆ ಅವಕಾಶವಿದೆ. ಇದರಿಂದ ಗ್ರಾಮ ಪಂಚಾಯತ್ಗಳು ತಮ್ಮ ಸ್ವಂತ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ.
2022-23ನೇ ಸಾಲಿನಲ್ಲಿ ಕೈಗೊಂಡಿದ್ದ ಲೆಕ್ಕ ಪರಿಶೋಧನೆ ಪ್ರಕಾರ 5,952 ಗ್ರಾಮ ಪಂಚಾಯತ್ಗಳ ಒಟ್ಟು ಬೇಡಿಕೆ, ವಸೂಲಾತಿ ಮತ್ತು ಬಾಕಿ ಮೊತ್ತವು 17,104 ಕೋಟಿ ರೂ.ನಷ್ಟಿತ್ತು. ಈ ಪೈಕಿ ಕೇವಲ 567.81 ಕೋಟಿ ರೂ.ಮಾತ್ರ ವಸೂಲಾಗಿತ್ತು. ವಸೂಲಿಗೆ 1,147 ಕೋಟಿ ರೂ.ನಷ್ಟು ಬಾಕಿ ಇತ್ತು ಎಂಬುದು ಪಟ್ಟಿಯಿಂದ ಗೊತ್ತಾಗಿದೆ.
ಇದರಲ್ಲಿ ಮನೆ ಮೇಲಿನ ತೆರಿಗೆ ರೂಪದಲ್ಲಿ 1619.10 ಕೋಟಿ ರೂ., ಭೂಮಿ ಮೇಲಿನ ತೆರಿಗೆ ರೂಪದಲ್ಲಿ 28.79 ಕೋಟಿ ರೂ., ಜಾಹೀರಾತು ಮತ್ತು ಹೋರ್ಡಿಂಗ್ಗಳಿಂದ 13.99 ಕೋಟಿ ರೂ., ಮೊಬೈಲ್ ಟವರ್ಗಳ ತೆರಿಗೆ 33.92 ಕೋಟಿ ರೂ. , ಗಾಳಿ ಯಂತ್ರ ತೆರಿಗೆ 4.56 ಕೋಟಿ ರು., ಸೋಲಾರ್ ಪಾರ್ಕ್ ತೆರಿಗೆ 10.03 ಕೋಟಿ ರೂ. ಒಳಗೊಂಡಿತ್ತು.
ಮನೆ ಮೇಲಿನ ತೆರಿಗೆ ಬೇಡಿಕೆ ಪೈಕಿ 537.71 ಕೋಟಿ ರೂ. ಮಾತ್ರ ವಸೂಲಿ ಮಾಡಿದೆ. ಭೂಮಿ ಮೇಲಿನ ತೆರಿಗೆ ಪೈಕಿ 12.08 ಕೋಟಿ ರೂ., ಜಾಹೀರಾತು ಹೋರ್ಡಿಂಗ್ಸ್ ಮೇಲಿನ ತೆರಿಗೆಯಲ್ಲಿ ಕೇವಲ 2.90 ಕೋಟಿ ರೂ., ಮೊಬೈಲ್ ಟವರ್ ಮೇಲಿನ ತೆರಿಗೆಯಲ್ಲಿ 9.10 ಕೋಟಿ ರೂ., ಗಾಳಿ ಯಂತ್ರ ತೆರಿಗೆ 1.90 ಕೋಟಿ ರೂ., ಸೋಲಾರ್ ಪಾರ್ಕ್ ತೆರಿಗೆಯಲ್ಲಿ 4.09 ಕೋಟಿ ರೂ. ಸೇರಿ ಒಟ್ಟಾರೆ 567 ಕೋಟಿ ರೂ. ಮಾತ್ರ ವಸೂಲಾಗಿರುವುದು ತಿಳಿದು ಬಂದಿದೆ.
ಈ ಪಟ್ಟಿಯ ಪ್ರಕಾರ ಆರಂಭಿಕ ಶಿಲ್ಕಿನೊಂದಿಗೆ ವರ್ಷದ ಬೇಡಿಕೆಯನ್ನೊಳಗೊಂಡ ಶೇ. 33ರಷ್ಟು ತೆರಿಗೆ ಆದಾಯವನ್ನು ಮತ್ತು ಶೇ. 36ರಷ್ಟು ತೆರಿಗೆಯೇತರ ಆದಾಯ ಮೊತ್ತ ವಸೂಲಿಸಿದೆ. ಇದರ ಪ್ರಕಾರ ಶೆ. 67ರಷ್ಟು ತೆರಿಗೆ ಆದಾಯ ಮತ್ತು ಶೇ. 64ರಷ್ಟು ತೆರಿಗೆಯೇತರ ಆದಾಯದ ಮೊತ್ತವನ್ನು ವಸೂಲಿ ಮಾಡಲು ಬಾಕಿ ಉಳಿಸಿಕೊಂಡಿವೆ. ಇದರಿಂದಾಗಿ ಪಂಚಾಯತ್ಗಳು ತಮ್ಮ ಸ್ವಂತ ಆದಾಯದ ಮೂಲಗಳನ್ನು ಸಮರ್ಪಕವಾಗಿ ವಸೂಲು ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಇದರಿಂದಾಗಿ ಗ್ರಾಮ ಪಂಚಾಯತ್ಗಳ ಸುಸ್ಥಿರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ಸಂಪೂರ್ಣವಾಗಿ ಸರಕಾರದ ಅನುದಾನದ ಮೇಲೆಯೇ ಅವಲಂಬಿತವಾಗಬೇಕಾಗಿರುತ್ತದೆ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ನ ಆಸ್ತಿಗಳಿಗೂ ಹಾಗೂ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿಕೊಂಡಿರುವ ಆಸ್ತಿಗಳಿಗೂ ವ್ಯತ್ಯಾಸ ಕಂಡು ಬಂದಿದೆ. ಹಾಗೂ ಕಾಲಕಾಲಕ್ಕೆ ರಿಜಿಸ್ಟರ್ನಲ್ಲಿ ನಮೂದಿಸದ ಕಾರಣ ಗ್ರಾಮ ಪಂಚಾಯತ್ಗಳಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗುತ್ತಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳನ್ನೂ ಪಂಚ ತಂತ್ರ ತಂತ್ರಾಂಶದಲ್ಲಿ ಅಳವಡಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಸಂಪೂರ್ಣವಾಗಿ ತೆರಿಗೆ ವಸೂಲಿ ಮಾಡಿದರೆ ಗ್ರಾಮ ಪಂಚಾಯತ್ಗಳ ಆರ್ಥಿಕ ನಷ್ವವನ್ನು ತಪ್ಪಿಸಬಹುದಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಶಿಫಾರಸಾಗಿರುವುದು ಗೊತ್ತಾಗಿದೆ.