×
Ad

ಅವಸಾನದ ಅಂಚಿಗೆ ಸರಿಯುತ್ತಿರುವ ಹುಲ್ಲೇಡಿಗಳು

Update: 2025-09-01 08:45 IST

ಚಿಕ್ಕಮಗಳೂರು: ಕಾಫಿನಾಡು ಅಪರೂಪದ ಜೀವವೈವಿಧ್ಯತೆಯ ಆಗರ. ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾಗಿರುವ ಭತ್ತದ ಗದ್ದೆಗಳೂ ಏಡಿ, ಮೀನು, ಕಪ್ಪೆ, ಎರೆಹುಳದಂತಹ ಜೀವಿಗಳ ಬೀಡಾಗಿದೆ. ಈ ಪೈಕಿ ಮಲೆನಾಡಿನ ಭತ್ತದ ಗದ್ದೆಗಳಲ್ಲಿ ಮಾತ್ರ ಕಂಡು ಬರುವ ಹುಲ್ಲೇಡಿ ಮಲೆನಾಡು ಭಾಗದಲ್ಲಿ ಆಹಾರಕ್ಕೆ ಬಳಸುವ ಜೀವಿಯಾಗಿದೆ.

ಮಳೆಗಾಲದ ಅವಧಿಯಲ್ಲಿ ಭತ್ತದ ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದಂತೆ ಗದ್ದೆಗಳಲ್ಲಿ ಕಂಡು ಬರುವ ಹುಲ್ಲೇಡಿಗಳು ಔಷಧೀಯ ಗುಣವುಳ್ಳ ಜೀವಿಯಾಗಿದ್ದು, ಇದರಿಂದ ತಯಾರಿಸುವ ಖಾದ್ಯ ಮಲೆನಾಡು ಭಾಗದ ಮಾಂಸಪ್ರಿಯರ ಮೆಚ್ಚಿನ ಆಹಾರವಾಗಿದೆ. ಆದರೆ, ಆಧುನಿಕ ಕೃಷಿ ಪದ್ಧತಿಯಿಂದಾಗಿ ಹುಲ್ಲೇಡಿಗಳು ಅವಸಾನದ ಅಂಚಿಗೆ ಸರಿಯುತ್ತಿವೆ.

ಭತ್ತದ ಗದ್ದೆಗಳು ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾಗಿದೆ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಭತ್ತದ ಗದ್ದೆಗಳು ಎಂದರೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಂಡು ಬರುತ್ತಿತ್ತು. ಸದ್ಯ ಕಾಫಿ, ಅಡಿಕೆ ತೋಟಗಳು ಮಲೆನಾಡನ್ನು ಆವರಿಸಿಕೊಂಡಿದ್ದರೂ ಹಿಂದೆ ಮಲೆನಾಡಿನ ಪ್ರಮುಖ ಕೃಷಿ ಭತ್ತದ ಕೃಷಿಯೇ ಆಗಿತ್ತು. ಕಾಫಿ, ಅಡಿಕೆಗೆ ದುಪ್ಪಟ್ಟು ಬೆಲೆ ಬರುತ್ತಿದ್ದಂತೆ ಮಲೆನಾಡಿನ ಸಾಂಪ್ರದಾಯಿಕ ಭತ್ತದ ಗದ್ದೆಗಳನ್ನು ಅಡಿಕೆ, ಕಾಫಿ ತೋಟಗಳು ಆಪೋಶನಕ್ಕೆ ಪಡೆದುಕೊಂಡಿವೆ. ಸದ್ಯ ಮಲೆನಾಡಿನಲ್ಲಿ ಭತ್ತದ ಕೃಷಿ ಅಪರೂಪ ಎಂಬಂತಾಗಿದೆ. ಭತ್ತದ ಕೃಷಿಯ ಅವನತಿಯಿಂದಾಗಿ ಭತ್ತದ ಗದ್ದೆಗಳನ್ನೇ ಆಶ್ರಯಿಸಿಕೊಂಡಿದ್ದ ಹುಲ್ಲೇಡಿಗಳ ಸಂಖ್ಯೆಯೂ ಅತ್ಯಂತ ವಿರಳವಾಗಿವೆ.

ಸಾಮಾನ್ಯವಾಗಿ ಹುಲ್ಲೇಡಿಗಳು ಗಾತ್ರದಲ್ಲಿ ಕಲ್ಲೇಡಿಗಳಿಗಿಂತಲೂ ಕಿರಿದಾದ ಜೀವಿಗಳು. ಕಲ್ಲೇಡಿಗಳು ಗಟ್ಟಿಮುಟ್ಟಾದ ದೇಹ, ಕೊಂಬು, ಕಾಲುಗಳನ್ನು ಹೊಂದಿದ್ದರೆ, ಹುಲ್ಲೇಡಿಗಳ ಕೊಂಬು, ಕಾಲುಗಳು ಮೃದು ಹಾಗೂ ಟೊಳ್ಳು. ಗದ್ದೆಯಲ್ಲೇ ಸಿಗುವ, ಮಿಡತೆ, ಎರೆಹುಳದಂತಹ ಸಣ್ಣ ಕ್ರಿಮಿ ಕೀಟಗಳೇ ಇವುಗಳ ಆಹಾರವಾಗಿವೆ.

ಗದ್ದೆ ನಾಟಿ ಸಂದರ್ಭದಿಂದ ಕಾಣಿಸಿಕೊಳ್ಳುವ ಹುಲ್ಲೇಡಿಗಳು, ಸಸಿಗಳು ಬೆಳೆಯುವ ಅವಧಿಯಲ್ಲಿ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಹುಲ್ಲೇಡಿಗಳ ಭೇಟೆಗೆ ಹುಲ್ಲೇಡಿ ಪ್ರಿಯರು ಗದ್ದೆಗಳಿಗೆ ಇಳಿಯುತ್ತಾರೆ. ಹುಲ್ಲೇಡಿಗಳು ನಿರುಪದ್ರವಿ ಜೀವಿಗಳಾಗಿರುವುದರಿಂದ ಸಣ್ಣ ಮಕ್ಕಳೂ ಅದನ್ನು ಹಿಡಿಯಲು ಹೆದರುವುದಿಲ್ಲ. ಹುಲ್ಲೇಡಿಗಳನ್ನು ಹಿಡಿದ ಬಳಿಕ ಅವುಗಳ ದೇಹದಿಂದ ಬೇಡದ ಭಾಗಗಗಳನ್ನು ತೆಗೆದು ಇಡಿಯಾಗಿ, ಇಲ್ಲವೇ ನುಣ್ಣನೆ ಕಡಿದು ಕಳಿಲೆಯಂತಹ, ಕೆಸುವಿನ ಬೀಳು ಜೊತೆಗೆ ಬೆರೆಸಿ ಸಾಂಬಾರು ಮಾಡುತ್ತಾರೆ. ಹುಲ್ಲೇಡಿಯಲ್ಲಿ ಔಷಧೀಯ ಗುಣ ಇರುವ ಕಾರಣಕ್ಕೆ ಇದನ್ನು ಮಾಂಸಾಹಾರಿಗಳು ಹೆಚ್ಚು ಇಷ್ಟು ಪಟ್ಟು ತಿನ್ನುತ್ತಾರೆ.

ಹುಲ್ಲೇಡಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಕ್ಷೀಣಿಸಿದೆ. ಭತ್ತದ ಸಾಂಪ್ರದಾಯಿಕ ಕೃಷಿ ಮಾಯವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದರೆ, ಮತ್ತೊಂದೆಡೆ ಆಧುನಿಕ ಭತ್ತದ ಕೃಷಿಯಿಂದಾಗಿ ಹುಲ್ಲೇಡಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹುಲ್ಲೇಡಿಗಳು ಭತ್ತದ ಸಸಿಗಳನ್ನು ಕಡಿದು ತುಂಡು ಮಾಡುತ್ತವೆ ಎಂಬ ಕಾರಣಕ್ಕೆ ಭತ್ತದ ಗದ್ದೆಗಳಿಗೆ ಟಿಮೆಂಟ್‌ನಂತಹ ರಾಸಾಯನಿಕಗಳ ಬಳಕೆ ಮತ್ತು ಅತಿಯಾಗಿ ರಾಸಾಯನಿಕಗಳಿರುವ ರಸಗೊಬ್ಬರ ಬಳಕೆಯಿಂದಾಗಿ ಹುಲ್ಲೇಡಿಗಳು ಮರಿಗಳ ಹಂತದಲ್ಲೇ ಸಾಯುತ್ತಿವೆ. ರಾಸಾಯನಿಕಗಳ ಅತಿಯಾದ ಬಳಕೆಯಿಂದಾಗಿ ಹುಲ್ಲೇಡಿಗಳ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲದೆ ಹುಲ್ಲೇಡಿಗಳು ಸದ್ಯ ಅವಸಾನದ ಅಂಚಿಗೆ ತಲುಪಿವೆ.

ಆಧುನಿಕ ಭತ್ತದ ಕೃಷಿ ಪರಿಣಾಮ ಸದ್ಯ ಮಲೆನಾಡಿನಲ್ಲಿ ಹುಲ್ಲೇಡಿಗಳು ಸಂಪೂರ್ಣವಾಗಿ ಮಾಯವಾಗಿವೆ ಎಂದರೂ ತಪ್ಪಾಗಲಾರದು. ಸಾವಯವ ಗೊಬ್ಬರ ಬಳಸಿ ಬೆಳೆಯುವ ಭತ್ತದ ಗದ್ದೆಗಳು, ಕಡಿಮೆ ರಸಗೊಬ್ಬರ ಬಳಕೆಯ ಗದ್ದೆಗಳಲ್ಲಿ ಹುಲ್ಲೇಡಿಗಳು ಒಂದಷ್ಟು ಪ್ರಮಾಣದಲ್ಲಿ ಕಂಡು ಬರುತ್ತಿವೆ. ಒಟ್ಟಿನಲ್ಲಿ ಮಲೆನಾಡಿನ ಸಾಂಪ್ರದಾಯಿಕ ಆಹಾರವಾಗಿದ್ದ ಹುಲ್ಲೇಡಿ ಸಾರು, ಖಾದ್ಯಕ್ಕೆ ಭಾರೀ ಬೇಡಿಕೆ ಇದ್ದರೂ ಭತ್ತದ ಕೃಷಿಯ ನಾಶ ಮತ್ತು ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ ಅತಿಯಾದ ಬಳಕೆಯಿಂದಾಗಿ ಹುಲ್ಲೇಡಿಗಳು ಅವಸಾನದ ಅಂಚಿಗೆ ತಲುಪಿವೆ.

ಮುಖ್ಯವಾಗಿ ಹುಲ್ಲೇಡಿಗಳ ಸಂಖ್ಯೆ ಕಡಿಮೆಯಾಗಲು ಶುಂಠಿ ಬೆಳೆ ಪ್ರಮುಖ ಕಾರಣವಾಗಿದೆ. ಶುಂಠಿ ಬೆಳೆಗೆ ಭಾರೀ ಬೆಲೆ ಇರುವ ಅವಧಿಯಲ್ಲಿ ಭತ್ತದ ಗದ್ದೆಗಳನ್ನು ಗೇಣಿಗೆ ಪಡೆದು ಶುಂಠಿ ಬೆಳೆಯುವ ಪದ್ಧತಿ ಮಲೆನಾಡಿನಲ್ಲಿದೆ. ಹೀಗೆ ಗೇಣಿಗೆ ಭತ್ತದ ಗದ್ದೆಗಳನ್ನು ಪಡೆದವರು ಉತ್ತಮ ಫಸಲಿನ ಆಸೆಗಾಗಿ ಶುಂಠಿಗೆ ಅಪಾಯಕಾರಿ ರಸಗೊಬ್ಬರ, ಕೀಟನಾಶಕ ಬಳಸುತ್ತಿದ್ದಾರೆ. ಪರಿಣಾಮ ಗದ್ದೆಗಳ ಅಂಚಿನ ತೇವಾಂಶ ಇರುವ ಕುಣಿಗಳಲ್ಲಿ ಬದುಕುವ ಹುಲ್ಲೇಡಿಗಳು ಸಾಯುತ್ತಿವೆ. ಶುಂಠಿ ಬೆಳೆ ಹುಲ್ಲೇಡಿಗಳ ವಿನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ಹುಲ್ಲೇಡಿ ಪ್ರಿಯರ ಅಭಿಪ್ರಾಯವಾಗಿದೆ. ಕಾಫಿ, ಅಡಿಕೆ, ಶುಂಠಿಯಂತಹ ಬೆಳೆಗಳು ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾಗಿದ್ದ ಭತ್ತದ ಗದ್ದೆಗಳನ್ನು ನಾಶ ಮಾಡುತ್ತಿರುವಂತೆಯೇ ಹುಲ್ಲೇಡಿಯಂತಹ ಅಪರೂಪದ ಜೀವಿಗಳೂ ಸದ್ಯ ವಿನಾಶದಂಚಿಗೆ ಬಂದಿವೆ ಎಂಬುದು ಹುಲ್ಲೇಡಿ ಪ್ರಿಯರ ಆತಂಕವಾಗಿದೆ.

ಔಷಧೀಯ ಗುಣವುಳ್ಳ ಆಹಾರ ಜೀವಿ :

ಹುಲ್ಲೇಡಿಗಳು ಔಷಧೀಯ ಗುಣವುಳ್ಳ ಆಹಾರ ಜೀವಿಯಾಗಿದೆ. ಈ ಕಾರಣಕ್ಕೆ ಮಲೆನಾಡಿನಲ್ಲಿ ಹುಲ್ಲೇಡಿಗಳಿಗೆ ಭಾರೀ ಬೇಡಿಕೆ ಇದೆ. ಆದರೆ, ಭತ್ತದ ಗದ್ದೆಗಳ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಆಧುನಿಕ ಕೃಷಿಯಿಂದಾಗಿ ಹುಲ್ಲೇಡಿಗಳು ನಾಶವಾಗುತ್ತಿವೆ. ಅಲ್ಲಲ್ಲಿ ಕಂಡು ಬರುವ ಹುಲ್ಲೇಡಿಗಳನ್ನು ಹಿಡಿದು ಮಾರಾಟವನ್ನೂ ಮಾಡುತ್ತಿದ್ದಾರೆ. ಪ್ರತೀ ಕೆ.ಜಿ. ಹುಲ್ಲೇಡಿಗೆ 300ರಿಂದ 500 ರೂ. ಬೆಲೆ ಇದೆ. ನಗರ, ಪಟ್ಟಣಗಳ ಹುಲ್ಲೇಡಿ ಪ್ರಿಯರು ಗ್ರಾಮೀಣ ಪ್ರದೇಶಗಳ ಜನರಿಂದ ಹುಲ್ಲೇಡಿಗಳನ್ನು ಹಿಡಿಸಿ ಹಣಕ್ಕೆ ಖರೀದಿಸಿ ಖಾದ್ಯ ಮಾಡಿ ಸೇವಿಸುತ್ತಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು, ಚಿಕ್ಕಮಗಳೂರು

contributor

Similar News