×
Ad

ಎಚ್-1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರ ಅಮೆರಿಕಕ್ಕೇ ತಿರುಗುಬಾಣವಾಗಲಿದೆಯೇ?

Update: 2025-09-30 12:20 IST

ಅಮೆರಿಕದ ಉದ್ಯೋಗಗಳು ದುಬಾರಿಯಾಗಿವೆ. ಅಥವಾ ಇನ್ನು ಮುಂದೆ ಸಾಧಾರಣ ಮಟ್ಟದ, ಸಣ್ಣ ಸಂಬಳದ ಕೆಲಸಗಳಿಗೆಲ್ಲ ಅಮೆರಿಕ ಸೇರಿಕೊಂಡುಬಿಡುವುದು ಸಾಧ್ಯವಿಲ್ಲ ಎನ್ನುವುದು ಟ್ರಂಪ್ ಸರಕಾರದ ಕ್ರಮದಿಂದ ಸ್ಪಷ್ಟವಾಗುತ್ತಿದೆ. ಟ್ರಂಪ್ ಎಚ್-1ಬಿ ವೀಸಾ ಅರ್ಜಿಗಳ ಶುಲ್ಕವನ್ನು 1 ಲಕ್ಷ ಡಾಲರ್ಗೆ ಏರಿಕೆ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಮೆರಿಕನ್ನರ ಹಿತಾಸಕ್ತಿ ಕಾಪಾಡುವ ಉದ್ದೇಶ ಎಂಬ ಲೇಪವನ್ನು ಈ ನಿರ್ಧಾರಕ್ಕೆ ಹಚ್ಚಲಾಗಿದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರೆಲ್ಲ ಬಂದು ಸೇರಿಕೊಳ್ಳಲು ಅವಕಾಶವಿಲ್ಲ, ಉನ್ನತ ಮಟ್ಟದ ಕೌಶಲ್ಯಪೂರ್ಣ ಜನರಿಗಷ್ಟೇ ಅಮೆರಿಕ ಪ್ರವೇಶಿಸಲು ಸಾಧ್ಯವಾಗಬೇಕು ಎಂಬ ಕಾರಣದಿಂದಲೇ ಈ ಶುಲ್ಕ ಹೆಚ್ಚಳ ಕ್ರಮ ಕೈಗೊಳ್ಳಲಾಗಿದೆ. ಆದರೂ, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಅಲ್ಲಿ ಉದ್ಯೋಗದಲ್ಲಿರುವುದರಿಂದ, ಇದು ಭಾರತವನ್ನು ಮಣಿಸುವ ಅಸ್ತ್ರ ಎನ್ನಲಾಗಿದೆ. ವೀಸಾ ಶುಲ್ಕ ಹೆಚ್ಚಿಸಿ ಒತ್ತಡ ಹೇರುವ ಮೂಲಕ, ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಕುದುರಿಸುವುದು ಟ್ರಂಪ್ ಲೆಕ್ಕಾಚಾರ ಎನ್ನಲಾಗಿದೆ. ಟ್ರಂಪ್ ನಿರ್ಧಾರ ಅಂತಿಮವಾಗಿ ಅಮೆರಿಕಕ್ಕೇ ತಿರುಗುಬಾಣ ಆಗಲಿದೆ ಎಂದು ಅಮೆರಿಕದ ಬಿಲಿಯನೇರ್ಗಳು, ಪರಿಣಿತರುಗಳೇ ಹೇಳುತ್ತಿದ್ದಾರೆ. ಹಾಗಿದ್ದೂ ಭಾರತದ ಪಾಲಿಗೆ ಸದ್ಯಕ್ಕಂತೂ ಇದು ತೀರಾ ಕಳವಳಕಾರಿ ಸಂಗತಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮವಾಗಿ ವಲಸಿಗರ ಪಾಲಿಗೆ ಎಚ್-1ಬಿ ವೀಸಾ ನಿಲುಕಲಾರದ ಹಾಗೆ ಮಾಡಿದ್ದಾರೆ. ಎಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು 90 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇಲ್ಲಿಯವರೆಗೆ, ಶುಲ್ಕ 4,500 ಡಾಲರ್, ಅಂದರೆ ಸುಮಾರು 4 ಲಕ್ಷ ರೂ. ಇತ್ತು.

ವೀಸಾ ಶುಲ್ಕ ಹೆಚ್ಚಳಕ್ಕೆ ಟ್ರಂಪ್ ಕೊಟ್ಟಿರುವ ಕಾರಣಗಳು:

ಈ ವೀಸಾ ಯೋಜನೆಯನ್ನು ಕಂಪೆನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ.

ಸ್ಥಳೀಯರಿಗೆ ಹೆಚ್ಚು ಸಂಬಳ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಹೊರದೇಶದವರಿಗೆ ಅವಕಾಶ.

ಸ್ಟೆಮ್, ಅಂದರೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ ವಿದೇಶಿ ಉದ್ಯೋಗಿಗಳ ಸಂಖ್ಯೆ 2000ದಿಂದ 2019ರ ಅವಧಿಯಲ್ಲಿ ದುಪ್ಪಟ್ಟಾಗಿದೆ.

ಕಳೆದ 5 ವರ್ಷಗಳಲ್ಲಿ ಕಂಪೆನಿಗಳು ಈ ವೀಸಾ ಪಡೆಯುವ ಪ್ರಮಾಣ ಶೇ.65ರಷ್ಟು ಹೆಚ್ಚಾಗಿದೆ.

ವಿದೇಶದವರಿಗೆ ಕಡಿಮೆ ಸಂಬಳಕ್ಕೆ ಕೆಲಸ ನೀಡಿ, ಹೆಚ್ಚು ಸಂಬಳದ ಅಮೆರಿಕದವರನ್ನು ಕೆಲಸದಿಂದ ತೆಗೆಯಲಾಗುತ್ತಿದೆ.

ಅಂದರೆ, ಸ್ಪಷ್ಟವಾಗಿ ಅಮೆರಿಕಕ್ಕೆ ಹೊರಗಿನವರ ವಲಸೆಯನ್ನು ತಡೆಯುವುದು ಟ್ರಂಪ್ ಉದ್ದೇಶವಾಗಿದೆ.

ಅದರಲ್ಲೂ ಸಾಮಾನ್ಯ ವರ್ಗದ ಜನರನ್ನು ಅಮೆರಿಕಕ್ಕೆ ಬರದಂತೆ ತಡೆದು, ಕೇವಲ ಉನ್ನತ ಮಟ್ಟದ ಕೌಶಲ್ಯವುಳ್ಳವರಿಗೆ ಮಾತ್ರ ಅವಕಾಶ ಕೊಡುವುದು ಟ್ರಂಪ್ ಸರಕಾರದ ಗುರಿ.

ಎಚ್-1ಬಿ ವೀಸಾ ಪಡೆದವರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಮೆರಿಕ ಸರಕಾರದ ಅಂಕಿಅಂಶಗಳ ಪ್ರಕಾರ, ಶೇ. 71ರಷ್ಟು ಭಾರತೀಯರು ಎಚ್-1ಬಿ ವೀಸಾ ಪಡೆದಿದ್ದಾರೆ. ಶೇ. 11.7ರಷ್ಟಿರುವ ಚೀನೀ ಪ್ರಜೆಗಳು ಎರಡನೇ ಸ್ಥಾನದಲ್ಲಿದ್ದಾರೆ. ಫಿಲಿಪ್ಪೀನ್ಸ್ ಜನರು ಮೂರನೇ ಸ್ಥಾನದಲ್ಲಿದ್ದು, ಅವರ ಸಂಖ್ಯೆ ಶೇ. 1.3ರಷ್ಟಿದೆ. ಕೆನಡಾದವರು ನಾಲ್ಕನೇ ಸ್ಥಾನದಲ್ಲಿದ್ದು, ಅವರ ಸಂಖ್ಯೆ ಶೇ. 1.1 ಇದೆ. ದಕ್ಷಿಣ ಕೊರಿಯನ್ನರು ಐದನೇ ಸ್ಥಾನದಲ್ಲಿದ್ದು, ಸಂಖ್ಯೆ ಶೇ. 1ರಷ್ಟಿದೆ.

ಹಿಂದಿನ ದಾಖಲೆಗಳನ್ನು ನೋಡಿದರೆ, ಭಾರತೀಯ ತಂತ್ರಜ್ಞಾನ ಕಂಪೆನಿಗಳು ಎಚ್-1ಬಿ ವೀಸಾ ಹೊಂದಿರುವ ಹೆಚ್ಚಿನ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಂಡಿವೆ. 2009 ರಿಂದ 2025ರ ಅವಧಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಅವೇ ಪಡೆದುಕೊಂಡಿವೆ. ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್ಸಿಐಎಸ್) ಅಂಕಿಅಂಶಗಳ ಪ್ರಕಾರ, 2009ರಿಂದ 2025ರ ಜೂನ್ 30ರವರೆಗಿನ ಚಿತ್ರಣ ಹೀಗಿದೆ:

ಮುಂಬೈ ಮೂಲದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಪಡೆದಿರುವ ವೀಸಾಗಳ ಸಂಖ್ಯೆ 98,259; ಚೆನ್ನೈ ಮೂಲದ, ಆದರೆ ಈಗ ಯುಎಸ್ ಕಂಪೆನಿಯಾಗಿರುವ ಕಾಗ್ನಿಜೆಂಟ್ - 92,435 ವೀಸಾಗಳು; ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇನ್ಫೋಸಿಸ್ - 87,654 ವೀಸಾಗಳು; ಬೆಂಗಳೂರಿನ ವಿಪ್ರೋ - 77,289 ವೀಸಾಗಳು.

2015ರಿಂದ 2025ರ ಅವಧಿಯಲ್ಲಿ ಟಿಸಿಎಸ್, ಕಾಗ್ನಿಜೆಂಟ್ ಮತ್ತು ಇನ್ಫೋಸಿಸ್ ಮೊದಲ ಮೂರು ಸ್ಥಾನಗಳಲ್ಲಿ ಉಳಿದಿವೆ. ಆದರೆ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಕ್ರಮವಾಗಿ ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪೆನಿಗಳಾದ ಮೈಕ್ರೋಸಾಫ್ಟ್ ಮತ್ತು ಗೂಗಲ್ ಆಕ್ರಮಿಸಿವೆ. 2020ರಿಂದ ಇನ್ನೂ ಬೇರೆ ಬಗೆಯ ಬದಲಾವಣೆ ಕಂಡಿದೆ. ಅಮೆರಿಕದ ತಂತ್ರಜ್ಞಾನ ಕಂಪೆನಿ ಅಮೆಝಾನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ - 43,375 ವೀಸಾಗಳು. ಇನ್ಫೋಸಿಸ್ - 43,332 ವೀಸಾಗಳು ಮತ್ತು ಟಿಸಿಎಸ್ - 38,138 ವೀಸಾಗಳೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ. ಗೂಗಲ್ - 35,736 ವೀಸಾಗಳು ಮತ್ತು ಮೈಕ್ರೋಸಾಫ್ಟ್ - 35,356 ವೀಸಾಗಳೊಂದಿಗೆ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿವೆ. ಪ್ಯೂ ರಿಸರ್ಚ್ ವರದಿ ಪ್ರಕಾರ, 2023 ರಲ್ಲಿ ಶೇ. 73ರಷ್ಟು ಭಾರತೀಯರು ಈ ವೀಸಾ ಪಡೆದಿದ್ದರು. ಆಗ ಚೀನಾದವರ ಸಂಖ್ಯೆ ಶೇ.12 ಇದ್ದರೆ, ಇತರ ದೇಶಗಳ ಜನರ ಪ್ರಮಾಣ ಶೇ.15ರಷ್ಟಿತ್ತು.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಒಂದು ದಶಕದ ಹಿಂದೆ ಇದ್ದದ್ದಕ್ಕಿಂತ ಬಹಳ ಭಿನ್ನವಾದ ಸನ್ನಿವೇಶ ಕಾಣಿಸುತ್ತದೆ. 2025 ರ ಮೊದಲ ಆರು ತಿಂಗಳಲ್ಲಿ, 5,505 ವೀಸಾಗಳೊಂದಿಗೆ ಟಾಪ್ 10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಕಂಪೆನಿ ಟಿಸಿಎಸ್ ಆಗಿದೆ. ಕಾಗ್ನಿಜೆಂಟ್ ಕೂಡ ಏಳನೇ ಸ್ಥಾನಕ್ಕೆ ಕುಸಿದಿದೆ. ಅಮೆಝಾನ್ 10,044 ವೀಸಾಗಳೊಂದಿಗೆ ಮುಂದಿದೆ. ಉಳಿದಂತೆ ಯುಎಸ್ ತಂತ್ರಜ್ಞಾನ, ಬ್ಯಾಂಕಿಂಗ್, ಸಲಹೆ ಮತ್ತು ಚಿಲ್ಲರೆ ವ್ಯಾಪಾರದ ಪ್ರಮುಖ ಕಂಪೆನಿಗಳಾಗಿರುವ ಮೈಕ್ರೋಸಾಫ್ಟ್, ಮೆಟಾ, ಆಪಲ್, ಗೂಗಲ್, ಜೆಪಿ ಮಾರ್ಗನ್ ಚೇಸ್, ವಾಲ್ಮಾರ್ಟ್ ಮತ್ತು ಡೆಲಾಯ್ಟ್ ಪ್ರಾಬಲ್ಯ ಹೊಂದಿವೆ.

ಸ್ಟಾರ್ಟ್ಅಪ್ಗಳಿಂದ ಜಾಗತಿಕ ದೈತ್ಯರವರೆಗೆ ತಂತ್ರಜ್ಞಾನ ಕಂಪೆನಿಗಳು ಕೌಶಲ್ಯಪೂರ್ಣ ಕೆಲಸಗಾರರನ್ನು ನೇಮಿಸಿಕೊಳ್ಳಲು ಈ ವೀಸಾವನ್ನು ಅವಲಂಬಿಸಿವೆ. ಅನೇಕ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳು ಅಲ್ಪಾವಧಿಯ ಅಧ್ಯಯನದ ಬಳಿಕ ಅಮೆರಿಕದಲ್ಲಿ ದೀರ್ಘಾವಧಿಯ ವೃತ್ತಿಜೀವನಕ್ಕೆ ಅವಕಾಶ ಪಡೆಯಲು ಸಹ ಇದನ್ನು ಅವಲಂಬಿಸಿದ್ದಾರೆ. ಈಗ ಹೊಸ ಶುಲ್ಕ ಜಾರಿಯಾಗುವುದರಿಂದ, ಅಮೆರಿಕದ ಕಂಪೆನಿಗಳ ಮೇಲೆ ನೇಮಕಾತಿ ವೆಚ್ಚದ ಹೆಚ್ಚಿನ ಹೊರೆ ಬೀಳಲಿದೆ. ನೇಮಕಾತಿಯನ್ನೇ ಅವು ಸ್ಥಗಿತಗೊಳಿಸಲೂಬಹುದು ಅಥವಾ ಕಂಪೆನಿಗಳು ಹೊರದೇಶಗಳಿಂದಲೇ ತಮ್ಮ ಕೆಲಸ ನಿರ್ವಹಿಸಲು ಮುಂದಾಗಬಹುದು.

ಭಾರತೀಯರ ಮೇಲೆ ಪರಿಣಾಮವೇನು?

ಎಚ್-1ಬಿ ಹೊಂದಿರುವವರಲ್ಲಿ ಶೇ. 71ಕ್ಕಿಂತ ಹೆಚ್ಚು ಭಾರತೀಯರು ಇರುವುದರಿಂದ, ಅವರ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಕಂಪೆನಿಗಳು ಈ ವೀಸಾ ಪ್ರಾಯೋಜಿಸಲು, ಅದರಲ್ಲೂ ಆರಂಭಿಕ ಹಂತದ ವೃತ್ತಿಪರರನ್ನು ಕರೆಸಿಕೊಳ್ಳಲು ಅಥವಾ ಉಳಿಸಿಕೊಳ್ಳಲು ಹಿಂಜರಿಯಬಹುದು. ಇದು ಕೆಲವರು ಭಾರತಕ್ಕೆ ಹಿಂದಿರುಗಬೇಕಾದ ಪರಿಸ್ಥಿತಿಗೆ ಕಾರಣವಾದೀತು. ಆಗ ಅವರು ಕೆನಡಾ, ಯುಕೆ, ಯುಎಇ ಮತ್ತು ಸೌದಿ ಅರೇಬಿಯದಂತಹ ಇತರ ದೇಶಗಳಿಗೆ ಹೋಗಬೇಕಾದ ಅನಿವಾರ್ಯತೆ ಬರಬಹುದು. ಇತರ ದೇಶಗಳು ಅಮೆರಿಕ ವೀಸಾ ಶುಲ್ಕ ಹೆಚ್ಚಳದ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಮೂಲಕ, ಭಾರತೀಯರಿಗೆ ಹೆಚ್ಚಿನ ಅವಕಾಶ ನೀಡಲು ಮುಂದಾಗಬಹುದು. ಜರ್ಮನ್ ರಾಯಭಾರಿ ಫಿಲಿಪ್ ಅಕೆರ್ಮನ್ ಐಟಿ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳನ್ನು ಪಡೆಯಲು ಈಗಾಗಲೇ ಭಾರತೀಯರಿಗೆ ಕರೆ ನೀಡಿದ್ದಾರೆ ಎಂಬುದು ಅಂಥ ಬೆಳವಣಿಗೆಗಳ ಸೂಚನೆಯಾಗಿದೆ. ಚೀನಾ ಕೂಡ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳ ಯುವ ವಿದೇಶಿ ಪ್ರತಿಭೆಗಳನ್ನು ಆಕರ್ಷಿಸಲು ಹೊಸ K ವೀಸಾ ಪರಿಚಯಿಸುವುದಾಗಿ ಘೋಷಿಸಿದೆ. ಇದು ಚೀನಾ ಪ್ರವೇಶ ಮತ್ತು ನಿರ್ಗಮನ ನಿಯಮಗಳಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವುದಾಗಿ ವರದಿಯಿದೆ.

ಉನ್ನತ ಕೌಶಲ್ಯವುಳ್ಳವರು ಅಮೆರಿಕಕ್ಕೆ ಹೋಗುವುದನ್ನು ತಪ್ಪಿಸಿದಾಗ, ಸ್ಟೆಮ್ ವಲಯದಲ್ಲಿ ಕೌಶಲ್ಯದ ಕೊರತೆ ಉಂಟಾಗಬಹುದು. ಮತ್ತದು ವೈವಿಧ್ಯತೆ ಕಡಿಮೆಯಾಗಲು ಕಾರಣವಾಗಬಹುದು. ಅಂತರ್ರಾಷ್ಟ್ರೀಯ ಪರಿಣತಿಯಿಲ್ಲದೆ ತಂತ್ರಜ್ಞಾನ ಮತ್ತು ಇತರ ವಲಯಗಳ ಬೆಳವಣಿಗೆಯ ಗತಿ ನಿಧಾನವಾಗಬಹುದು. ಅಸ್ತಿತ್ವದಲ್ಲಿರುವ ವೀಸಾಗಳ ವಿಷಯದಲ್ಲಿ ಆತಂಕವಿಲ್ಲದಿದ್ದರೂ, ಅವುಗಳ ದರ ವಿಸ್ತರಣೆಗಳು, ವರ್ಗಾವಣೆಗಳು ಅಥವಾ ನವೀಕರಣಗಳು ಹೊಸ ನಿಯಮಗಳನ್ನು ಎದುರಿಸಬೇಕಾಗಬಹುದು. ಶುಲ್ಕವನ್ನು 1 ಲಕ್ಷ ಡಾಲರ್ಗೆ ಹೆಚ್ಚಿಸಿರುವ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆಯೂ ತಯಾರಿಗಳು ನಡೆದಿವೆ. ವೀಸಾ ಶುಲ್ಕಗಳಿಗೆ ಸಾಮಾನ್ಯವಾಗಿ ಕಾನೂನು ಅಥವಾ ಔಪಚಾರಿಕ ನಿಯಮ ರಚನೆ ಅಗತ್ಯವಿರುವುದರಿಂದ, ಟ್ರಂಪ್ ಸರಕಾರದ ಈ ಕ್ರಮ ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಬಹುದು ಎನ್ನಲಾಗಿದೆ. ಜಾರಿಗೆ ಬಂದದ್ದೇ ಆದಲ್ಲಿ ಇದು ಯುಎಸ್ ವಲಸೆ ನೀತಿಯಲ್ಲಿ ಅತ್ಯಂತ ಮಹತ್ವದ ಬದಲಾವಣೆ ತರಲಿದೆ. ನೇಮಕಾತಿಯನ್ನು ಮರುರೂಪಿಸಬೇಕಾದ ಅಗತ್ಯ ಉಂಟಾಗುತ್ತದೆ. ಕೌಶಲ್ಯಪೂರ್ಣ ವಲಸೆ ಸೀಮಿತಗೊಳ್ಳಲಿದೆ. ಅದು ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುತ್ತದೆ.

ವೀಸಾ ಶುಲ್ಕ ಏರಿಸಿರುವುದರಿಂದ ಅಮೆರಿಕದ ತಂತ್ರಜ್ಞಾನದ ಯಶಸ್ಸಿಗೆ ದಾರಿಯಾಗುತ್ತದೆ ಎಂಬುದು ತಪ್ಪುಗ್ರಹಿಕೆ ಎನ್ನಲಾಗುತ್ತಿದೆ. ಅಮೆರಿಕದ ಐಟಿ ಕ್ಷೇತ್ರದ ಬೆಳವಣಿಗೆಗೆ ವಿದೇಶಿ ನಿಪುಣರ ಅವಶ್ಯಕತೆ ಇದೆ ಮತ್ತು ಸಿಲಿಕಾನ್ ವ್ಯಾಲಿ ಭವಿಷ್ಯ ಇದೇ ಕೌಶಲ್ಯಪೂರ್ಣ ಜನರ ಮೇಲೆ ಅವಲಂಬಿತವಾಗಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ. ವಿದೇಶಿ ಕಾರ್ಮಿಕರನ್ನು ದೂರ ತಳ್ಳಿ ಅಮೆರಿಕದವರಿಗೇ ಅವಕಾಶ ನೀಡುವ ಭರವಸೆಯ ಮೇಲೆ ಸಿಲಿಕಾನ್ ವ್ಯಾಲಿಯನ್ನು ನಡೆಸುವುದು ಸಾಧ್ಯವಿಲ್ಲ. ದೇಶದ ಐಟಿ ಕ್ಷೇತ್ರವನ್ನು ಕಾಪಾಡುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ನಮ್ಮಲ್ಲಿ ಇದೆಯೇ ಎಂಬ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳಬೇಕು ಎಂದು ಅಮೆರಿಕದ ಪರಿಣಿತ ವಲಯ ಹೇಳುತ್ತಿದೆ. ಅಮೆರಿಕದ ತಂತ್ರಜ್ಞಾನ ವಲಯ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸ್ಪಷ್ಟ ಅರಿವು ಟ್ರಂಪ್ ಆಡಳಿತಕ್ಕೆ ಇದ್ದಂತಿಲ್ಲ. ವಿದೇಶಿ ಕಾರ್ಮಿಕರನ್ನು ಹೊರಹಾಕಿದರೆ, ಸಿಲಿಕಾನ್ ವ್ಯಾಲಿಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದರಿಂದ ಅಮೆರಿಕದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಹಾಗೆ ನೋಡಿದರೆ, ಭಾರತೀಯರಿಗೆ ಅಮೆರಿಕವೊಂದೇ ದಾರಿಯಲ್ಲ. ಅದು ಬಹಳಷ್ಟು ಜನರ ಕನಸು ಎಂಬುದೇನೋ ನಿಜವಾದರೂ, ಭಾರತೀಯ ಪ್ರತಿಭೆಗಳನ್ನು ಕೈಬೀಸಿ ಕರೆಯುವ ಹಲವು ದೇಶಗಳಿವೆ. ಹೆಚ್ಚಿನ ಭಾರತೀಯರು ವಿದೇಶಗಳಲ್ಲಿ ಎಲ್ಲೆಲ್ಲಿ ಇದ್ದಾರೆ ಎನ್ನುವುದನ್ನೊಮ್ಮೆ ಗಮನಿಸಬೇಕು. ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಅಂತರ್ರಾಷ್ಟ್ರೀಯ ವಲಸಿಗರು ಭಾರತೀಯರಾಗಿದ್ದಾರೆ. ಅಮೆರಿಕ, ಯುಎಇ ಮತ್ತಿತರ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಲಸಿಗರಿದ್ದಾರೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (UNDESA)ಯ ಅಂದಾಜಿನ ಪ್ರಕಾರ 28.1 ಕೋಟಿ ಅಂತರ್ರಾಷ್ಟ್ರೀಯ ವಲಸಿಗರಿದ್ದಾರೆ. ಇದು ಜಾಗತಿಕ ಜನಸಂಖ್ಯೆಯ ಸರಿಸುಮಾರು ಶೇ.3.5 ರಷ್ಟಿದೆ. ಅಂತರ್ರಾಷ್ಟ್ರೀಯ ವಲಸಿಗರಲ್ಲಿ ಭಾರತೀಯರೇ ಅತಿ ಹೆಚ್ಚಿದ್ದು, ಅವರ ಸಂಖ್ಯೆ 1.8 ಕೋಟಿ ಮುಟ್ಟಿದೆ ಎಂದು ಯುಎನ್ ವರ್ಲ್ಡ್ ಮೈಗ್ರೇಷನ್ ರಿಪೋರ್ಟ್ 2024 ಹೇಳುತ್ತದೆ. ಭಾರತದ ವಿದೇಶಾಂಗ ಸಚಿವಾಲಯ ಹೇಳುವ ಪ್ರಕಾರ, ಮೇ 2024ರ ಹೊತ್ತಿಗೆ, ವಿಶ್ವಾದ್ಯಂತ ಒಟ್ಟು ವಿದೇಶಿ ಭಾರತೀಯರ ಸಂಖ್ಯೆ ಸುಮಾರು 3.54 ಕೋಟಿ ಆಗಿದ್ದು, ಇದರಲ್ಲಿ ಸುಮಾರು 1.58 ಕೋಟಿ ಅನಿವಾಸಿ ಭಾರತೀಯರು(NRI) ಮತ್ತು ಸುಮಾರು 1.95 ಕೋಟಿ ಭಾರತೀಯ ಮೂಲದ ವ್ಯಕ್ತಿಗಳು (PIO) ಇದ್ದಾರೆ.

2024ರ ಮೇ ವರೆಗಿನ ಅಂದಾಜಿನಂತೆ, ವಿಶ್ವಾದ್ಯಂತ ಅತಿ ಹೆಚ್ಚು ಭಾರತೀಯ ವಲಸಿಗರನ್ನು ಹೊಂದಿರುವ ದೇಶಗಳೆಂದರೆ, ಅಮೆರಿಕ 54 ಲಕ್ಷ; ಯುಎಇ 36 ಲಕ್ಷ; ಮಲೇಶ್ಯ 29 ಲಕ್ಷ; ಕೆನಡಾ 28 ಲಕ್ಷ; ಸೌದಿ ಅರೇಬಿಯ 25 ಲಕ್ಷ; ಮ್ಯಾನ್ಮಾರ್ 20 ಲಕ್ಷ; ಯುಕೆ 19 ಲಕ್ಷ; ದಕ್ಷಿಣ ಆಫ್ರಿಕಾ 17 ಲಕ್ಷ; ಶ್ರೀಲಂಕಾ 16 ಲಕ್ಷ; ಕುವೈತ್ 9.96 ಲಕ್ಷ.

ಭಾರತೀಯ ವಲಸಿಗರು ವಿವಿಧ ವಲಯಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. 2024ರ ಹೊತ್ತಿಗೆ ಭಾರತೀಯ ಮೂಲದ 20ಕ್ಕೂ ಹೆಚ್ಚು ಸಿಇಒಗಳು ಫಾರ್ಚೂನ್ 500 ಕಂಪೆನಿಗಳನ್ನು ಮುನ್ನಡೆಸುತ್ತಿದ್ದಾರೆ. ಅವರಲ್ಲಿ, ಸುಂದರ್ ಪಿಚೈ ಅವರು ಆಲ್ಫಾಬೆಟ್ ಮುಖ್ಯಸ್ಥರಾಗಿದ್ದರೆ, ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ನ ಸಾರಥ್ಯ ವಹಿಸಿದ್ದಾರೆ. ಇದಲ್ಲದೆ, ಮಲೇಶ್ಯ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಸಿಂಗಾಪುರದಂತಹ ಆಗ್ನೇಯ ಮತ್ತು ನೈಋತ್ಯ ಏಶ್ಯದ ರಾಷ್ಟ್ರಗಳಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಯುಎಇ, ಸೌದಿ ಅರೇಬಿಯ ಮತ್ತು ಕುವೈತ್ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳು ಕೂಡ ಗಣನೀಯ ಸಂಖ್ಯೆಯ ಭಾರತೀಯ ವಲಸಿಗರನ್ನು ಆಕರ್ಷಿಸುತ್ತವೆ. ಏಶ್ಯ ಪೆಸಿಫಿಕ್ ರಾಷ್ಟ್ರಗಳಾದ ಮಲೇಶ್ಯ, ಮ್ಯಾನ್ಮಾರ್, ಶ್ರೀಲಂಕಾ, ಆಸ್ಟ್ರೇಲಿಯ ಮತ್ತು ಸಿಂಗಾಪುರ ದೊಡ್ಡ ಸಂಖ್ಯೆಯ ಭಾರತೀಯ ವಲಸಿಗರಿಗೆ ನೆಲೆಯಾಗಿವೆ.

ಹೀಗೆ ಅತಿ ಹೆಚ್ಚು ಭಾರತೀಯರು ವಿದೇಶಗಳಲ್ಲಿರುವುದರಿಂದ, ಭಾರತಕ್ಕೆ ಹಣ ರವಾನೆ ಪ್ರಮಾಣವೂ ಹೆಚ್ಚು. ಇತ್ತೀಚೆಗೆ ಬಿಡುಗಡೆಯಾದ ವಿಶ್ವ ವಲಸೆ ವರದಿ 2024ರ ಪ್ರಕಾರ, ಭಾರತ ಜಾಗತಿಕವಾಗಿ ಹಣ ರವಾನೆ ಪಡೆಯವ ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿದೆ. 2022ರಲ್ಲಿ ಭಾರತಕ್ಕೆ ದಾಖಲೆಯ 11,122 ಕೋಟಿ ಡಾಲರ್ ಹಣ ರವಾನೆಯಾಗಿದೆ. ಇದು ಎಲ್ಲಾ ಇತರ ರಾಷ್ಟ್ರಗಳನ್ನು ಮೀರಿಸಿದೆ. ಮೆಕ್ಸಿಕೊ, ಚೀನಾ, ಫಿಲಿಪ್ಪೀನ್ಸ್ ಮತ್ತು ಫ್ರಾನ್ಸ್ ಹಣ ರವಾನೆ ಸ್ವೀಕರಿಸುವ ದೇಶಗಳಲ್ಲಿ ಭಾರತದ ನಂತರದ ಸ್ಥಾನದಲ್ಲಿವೆ ಎಂದು ವರದಿ ಹೇಳುತ್ತದೆ. 2010, 2015, 2020 ಮತ್ತು 2022ರಲ್ಲಿ ಭಾರತಕ್ಕೆ ಅತಿ ಹೆಚ್ಚು ಹಣ ಬಂದಿದೆ. ಇದು ಭಾರತೀಯ ವಲಸಿಗರ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಈಗ ಟ್ರಂಪ್ ಸರಕಾರದ ನಿರ್ಧಾರ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಇಲ್ಲಿನ ಬೃಹತ್ ಟೆಕ್ ಕಂಪೆನಿಗಳ ಮೇಲೆ ಭಾರೀ ದೊಡ್ಡ ಆರ್ಥಿಕ ಹೊರೆ ಬೀಳಲಿದೆ. ಅದರ ಅಂತಿಮ ಆರ್ಥಿಕ ಪರಿಣಾಮವನ್ನು ಭಾರತದ ಜನರೇ ಅನುಭವಿಸಬೇಕಾಗುತ್ತದೆ. ಆದರೆ ವೀಸಾ ಶುಲ್ಕ ಹೆಚ್ಚಳ ಎಂಬುದು ಎರಡು ಅಲಗಿನ ಕತ್ತಿ. ಅದು ಟ್ರಂಪ್ ಸರಕಾರವನ್ನೂ ಕಾಡದೇ ಬಿಡುವುದಿಲ್ಲ. ಪ್ರತಿಭಾವಂತರು ಅಮೆರಿಕಕ್ಕೆ ಹೋಗುವುದು ಕಡಿಮೆಯಾದರೆ ಅದರ ಪರಿಣಾಮವನ್ನು ಅಮೆರಿಕ ಎದುರಿಸಲೇಬೇಕಾಗುತ್ತದೆ. ಟ್ರಂಪ್ ನಿರ್ಧಾರಕ್ಕೆ ಅಲ್ಲಿನ ನ್ಯಾಯಾಲಯವೂ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ. ಹಾಗಾಗಿ ಟ್ರಂಪ್ ಮತ್ತೆ ಈ ವಿಷಯದಲ್ಲೂ ತಿಪ್ಪರಲಾಗ ಹೊಡೆದರೆ ಆಶ್ಚರ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಆರ್.ಜೀವಿ

contributor

Similar News