×
Ad

ಕಾಂಗ್ರೆಸ್ ಇದ್ದಿದ್ದಕ್ಕೆ ಗಡಿಪಾರು; ಬಿಜೆಪಿ ಸರ್ಕಾರ ಇದ್ದಿದ್ದರೆ ಅರುಣ್ ಪುತ್ತಿಲ ಎನ್ ಕೌಂಟರ್!

Update: 2025-06-02 23:53 IST

ಅರುಣ್ ಪುತ್ತಿಲ,  ಪ್ರಸಾದ್ ಅತ್ತಾವರ

ಪುತ್ತೂರು ಬಿಜೆಪಿಯ ಮುಖಂಡ ಅರುಣ್ ಪುತ್ತಿಲ ಗಡಿಪಾರಿಗೆ ನೋಟಿಸ್ ನೀಡಿದ್ದನ್ನು ಬಿಜೆಪಿ ಖಂಡಿಸುತ್ತಿದೆ. ಕರಾವಳಿಯಲ್ಲಿ ಶಾಂತಿ ಸ್ಥಾಪಿಸಲು ಇಂತಹ ಗಡಿಪಾರು ಕ್ರಮಗಳ ಬಗ್ಗೆ ಪೊಲೀಸ್/ಜಿಲ್ಲಾಡಳಿತ ನಿರ್ಧರಿಸುತ್ತದೆ‌. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಿಂದುತ್ವವಾದಿ ಅರುಣ್ ಪುತ್ತಿಲ ನೋಟಿಸ್ ಪಡೆದುಕೊಂಡು ಬದುಕಿದ್ದಾರೆ. ಬಿಜೆಪಿ ಸರ್ಕಾರವೇನಾದರೂ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಅರುಣ್ ಪುತ್ತಿಲ ಎನ್ ಕೌಂಟರ್ ಆಗಿರುತ್ತಿದ್ದರು. ಈಗ ಬಗ್ಗೆ ಅರುಣ್ ಪುತ್ತಿಲ ಸ್ವತಃ ಹೇಳಿಕೊಂಡಿದ್ದಾರೆ.

ಅರುಣ್ ಪುತ್ತಿಲ ಎನ್ ಕೌಂಟರ್ ಗೆ ಬಿಜೆಪಿಯ ಸರ್ಕಾರವೇ ಆದೇಶ ನೀಡಿತ್ತು. ಪುತ್ತೂರಿನಲ್ಲಿ ಅರುಣ್ ಪುತ್ತಿಲ ಅವರು ಡಿ.ವಿ.ಸದಾನಂದ ಗೌಡರನ್ನೇ ಮೀರಿ ಬೆಳೆಯುತ್ತಿದ್ದರು. ಸದಾನಂದ ಗೌಡರಿಗೆ ಮಾಹಿತಿಯನ್ನೇ ನೀಡದೇ ಅರುಣ್ ಪುತ್ತಿಲ ಅವರು ಶನಿಪೂಜೆ, ಧರ್ಮಸಂಸತ್ತು, ಶಾರದಾ ವಿಸರ್ಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿಶ್ವಹಿಂದೂ ಪರಿಷತ್ತಿನ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 35 ಸಾವಿರ ಜನ ಹಿಂದೂ ಕಾರ್ಯಕರ್ತರು ಸೇರಿದ್ದರು. ಬೆಳಿಗ್ಗೆ ಶನಿದೇವರ ಪ್ರತಿಷ್ಠಾಪನೆಯಾಗಿ ಪೂಜಾವಿಧಿವಿಧಾನಗಳು ನಡೆಯಿತು. ಮದ್ಯಾಹ್ನ ದರ್ಮಸಂಸತ್ತೂ ನಡೆಯಿತು. ಇನ್ನೇನು ಶಾರದಾ ಮೆರವಣಿಗೆ ಹೊರಡಬೇಕು ಎಂದಾಗ ಬಿಜೆಪಿ ಸರ್ಕಾರದ ಪೊಲೀಸರು ಅಡ್ಡ ಬಂದರು‌. 'ನಮಗೆ ಸರ್ಕಾರದ ಆದೇಶ ಇದೆ. ಯಾವ ಕಾರಣಕ್ಕೂ ಶಾರದಾ ಮೆರವಣಿಗೆ ಹೋಗಬಾರದು' ಎಂದು ಪೊಲೀಸ್ ಅಧಿಕಾರಿಗಳು ಅಡ್ಡ ನಿಂತರು. ಶಾರದಾ ಮೆರವಣಿಗೆ ಹೋಗಿಯೇ ಸಿದ್ದ ಎಂದಾಗ ಬಿಜೆಪಿ ಸರ್ಕಾರದ ಪೊಲೀಸರು ಹಿಂದುತ್ವ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಪೊಲೀಸರೇ ಅರ್ಚಕರಿಗೆ ಹಿಂಸೆ ನೀಡಿ ಶಾರದಾ ಮೂರ್ತಿಯನ್ನು ಕಸಿದು ಬಾವಿಗೆ ಹಾಕಿದರು.

"ಶಾರದಾ ಮೆರವಣಿಗೆಯ ಮೇಲೆ ಬಿಜೆಪಿ ಸರ್ಕಾರದ ಪೊಲೀಸರು ನಡೆಸಿದ ಲಾಠಿ ಚಾರ್ಜ್ ನಲ್ಲಿ ನೂರಾರು ಹಿಂದೂ ಮಾತೆಯರ ಮಾಂಗಲ್ಯ ಕಡಿದು ನೆಲಕ್ಕೆ ಬಿತ್ತು. 80 ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕರೆದೊಯ್ದರು. ದೇವಸ್ಥಾನದ ಎದುರು ನಿಲ್ಲಿಸಿದ್ದ ಹಿಂದೂ ಕಾರ್ಯಕರ್ತರ 500 ವಾಹನಗಳನ್ನು ಜಪ್ತಿ ಮಾಡಿದರು. ಪೊಲೀಸರು ನನ್ನನ್ನು ಹುಡುಕಿದರು. ನಾನು ತಪ್ಪಿಸಿಕೊಂಡೆ" ಎಂದು ಅರುಣ್ ಪುತ್ತಿಲ ಈಗಲೂ ನೆನಪಿಸಿಕೊಳ್ಳುತ್ತಾರೆ.

"ಅಂದು ನನ್ನನ್ನು ಎನ್ ಕೌಂಟರ್ ಮಾಡಲು ಆದೇಶ ನೀಡಲಾಗಿತ್ತು. ಅದಕ್ಕಾಗಿಯೇ ಶಾರದಾ ಮೆರವಣಿಗೆಯ ಮೇಲೆ ಲಾಠಿ ಚಾರ್ಜ್ ಮಾಡಿದರು. ಆ ಗದ್ದಲದಲ್ಲಿ ನಾನು ಸಿಕ್ಕಿದ್ದರೆ ನನ್ನನ್ನು ಬಿಜೆಪಿ ಸರ್ಕಾರ ಎನ್ ಕೌಂಟರ್ ಮಾಡುತ್ತಿತ್ತು" ಎಂದು 2023 ರ ವಿಧಾನಸಭಾ ಚುನಾವಣೆ ಸಂದರ್ಭ ಹಿಂದುತ್ವ ಮುಖಂಡ ಅರುಣ್ ಪುತ್ತಿಲ ಹೇಳಿದ್ದರು.

"ನನ್ನನ್ನು ಮತ್ತು ಅರುಣ್ ಕುಮಾರ್ ಪುತ್ತಿಲರನ್ನು ಎನ್ ಕೌಂಟರ್ ಮಾಡಲು ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಈ ಎನ್ ಕೌಂಟರ್ ಗೆ ನಿಯೋಜಿಸಲಾಗಿತ್ತು. ಇದು ನನ್ನ ಆತ್ಮೀಯ ಪೊಲೀಸ್ ಅಧಿಕಾರಿಯಾಗಿದ್ದ ಡಿವೈಎಸ್ಪಿ ಗಣಪತಿಗೆ ತಿಳಿಯಿತು. ಗಣಪತಿಯವರು ತಕ್ಷಣ ನಮ್ಮಿಬ್ಬರಿಗೂ ಮಾಹಿತಿ ನೀಡಿ, ಭೂಗತರಾಗುವಂತೆ ಸೂಚಿಸಿದರು. ಹಾಗಾಗಿ ನಾವು ಬದುಕಿಕೊಂಡೆವು" ಎಂದು ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರ ಸಂದರ್ಶನದಲ್ಲಿ ಹೇಳಿದ್ದರು‌.

ಶ್ರೀರಾಮಸೇನೆಯ ಜಿಲ್ಲಾ ಸಂಚಾಲಕರಾಗಿದ್ದ ಪ್ರಸಾದ್ ಅತ್ತಾವರ ಅವರು ಮಂಗಳೂರಿನ ಅಮ್ನೇಶಿಯಾ ಪಬ್ ಮೇಲಿನ ದಾಳಿಯ ರುವಾರಿಯಾಗಿದ್ದರು. 2008 ರಲ್ಲಿ ಹಿಂದೂ ಸಂಸ್ಕೃತಿ ರಕ್ಷಣೆಗಾಗಿ ಪಬ್ ದಾಳಿ ನಡೆಸಿದ್ದೇವೆ ಎಂದು ಪ್ರಸಾದ್ ಅತ್ತಾವರ ಹೇಳಿಕೆ ನೀಡಿದ್ದರು. ಈ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ/ಕರ್ನಾಟಕ ತಲೆ ತಗ್ಗಿಸುವಂತೆ ಮಾಡಿತ್ತು. ತನಿಖೆಯ ಬಳಿಕ 'ಇದು ಹಿಂದುತ್ವದ ರಕ್ಷಣೆಗಾಗಿ ನಡೆದ ದಾಳಿಯಲ್ಲ. ಪ್ರಸಾದ್ ಅತ್ತಾವರ ಅವರ ಸೆಕ್ಯೂರಿಟಿ ಏಜೆನ್ಸಿ ಇದ್ದು, ಪಬ್ ನಲ್ಲಿ ಸೆಕ್ಯೂರಿಟಿ ಗುತ್ತಿಗೆ ಕೇಳಿದ್ದರು. ಕೊಡದೇ ಇದ್ದಾಗ ಹಿಂದೂ ಸಂಸ್ಕೃತಿಯ ರಕ್ಷಣೆಯ ಹೆಸರಲ್ಲಿ ಪಬ್ ಗೆ ದಾಳಿ ನಡೆಸಲಾಗಿತ್ತು' ಎಂದು ಬಯಲಾಗಿತ್ತು. ನಂತರದ ದಿನಗಳಲ್ಲಿ ಶ್ರೀರಾಮ ಸೇನೆಯ ಪ್ರಸಾದ್ ಅತ್ತಾವರ್ ಗೂ ಭೂಗತ ಲೋಕಕ್ಕೂ ಇರುವ ಸಂಪರ್ಕ ಬಯಲಾಗಿತ್ತು. ಹೀಗಾಗಿ ಇವರಿದ್ದರೆ ಸರ್ಕಾರ ನಡೆಸುವುದು ಕಷ್ಟ ಎಂದು ಅರಿತ ಆಗಿನ ಬಿಜೆಪಿ ಸರ್ಕಾರ ಪ್ರಸಾದ್ ಅತ್ತಾವರರನ್ನು ಎನ್ ಕೌಂಟರ್ ಮಾಡಲು ಸಿದ್ದತೆ ನಡೆಸಿತ್ತು.

ಅರುಣ್ ಪುತ್ತಿಲ ಅವರನ್ನು ಎನ್ ಕೌಂಟರ್ ಮಾಡಲು ಬಿಜೆಪಿ ಸರ್ಕಾರ ಆದೇಶ ನೀಡಿತ್ತು ಎಂದು ಖುದ್ದು ಅರುಣ್ ಪುತ್ತಿಲ ಮಾತ್ರವಲ್ಲದೇ ಪ್ರಸಾದ್ ಅತ್ತಾವರ ಕೂಡಾ ಹೇಳಿದ್ದರು. ಇದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರೂ ಹೇಳಿಕೆ ನೀಡಿದ್ದರು. ಅರುಣ್ ಪುತ್ತಿಲ ಪುತ್ತೂರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದಾಗ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಡಿವಿಎಸ್ ಬಂದಿದ್ದರು. "ಪುತ್ತೂರಿನಲ್ಲಿ ರೌಡಿಸಂ ಮಟ್ಟ ಹಾಕಿದ್ದೇ ನಾನು. ಅವತ್ತು ಶನಿಪೂಜೆಯಲ್ಲಿ ಅರುಣ್ ಪುತ್ತಿಲನ ಶನಿ ಬಿಡಿಸಿದ್ದೆ" ಎಂದು ಮೇ 2ರ, 2023 ರಲ್ಲಿ ಡಿ.ವಿ.ಸದಾನಂದ ಗೌಡರು ಹೇಳಿಕೆ ನೀಡಿದ್ದರು.

ಡಿ.1ರ 2006 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಹಿಂದುತ್ವದ ನಾಯಕ ಸುಖಾನಂದ ಶೆಟ್ಟಿ ಅಂದು ಕೊಲೆಯಾಗಿದ್ದರು. ಬಂಟ್ವಾಳದ ಶಾಸಕರಾಗಿದ್ದ ಬಿ.ನಾಗರಾಜ ಶೆಟ್ಟರು ಉಸ್ತುವಾರಿ ಸಚಿವರಾಗಿದ್ದರು. ಸುಖಾನಂದ ಶೆಟ್ಟರ ಶವ ಮೆರವಣಿಗೆ ಮಾಡುತ್ತಿದ್ದಾಗ ಗೂಂಡಾಗಿರಿ ಮಾಡಿದರು ಎಂದು ಇಬ್ಬರು ಹಿಂದುತ್ವ ಕಾರ್ಯಕರ್ತರನ್ನು ನನ್ನ ಕಣ್ಣೆದುರೇ ಶೂಟೌಟ್ ಮಾಡಲಾಗಿತ್ತು. ಬಿಜೆಪಿ ಮಂತ್ರಿಯ ಎದುರಲ್ಲೇ ಹಿಂದುತ್ವ ಕಾರ್ಯಕರ್ತರ ಶೂಟೌಟ್ ನಡೆದಿತ್ತು. ಯಾವ ನೋಟಿಸೂ ಇಲ್ಲ, ಬದುಕಿಕೊಳ್ಳಿ ಎಂದು ಗಡಿಪಾರೂ ಇಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದು ತಕ್ಷಣದ ಅಗತ್ಯವಾಗಿದೆ‌. ಹಾಗಾಗಿ ದ್ವೇಷ ಭಾಷಣ ಮಾಡುವ, ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ ಅರುಣ್ ಪುತ್ತಿಲರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. "ಜೂ.6ಕ್ಕೆ ವಿಚಾರಣೆಗೆ ಖುದ್ದು ಅಥವಾ ವಕೀಲರ ಮೂಲಕ ಹಾಜರಾಗಿ ವಿವರಣೆ ನೀಡುವುದು. ಇಲ್ಲದೇ ಇದ್ದರೆ ತಮ್ಮ ವಿವರಣೆಗಳಿಲ್ಲ ಎಂದು ಪರಿಗಣಿಸಿ ಜಿಲ್ಲೆಯಿಂದ ಕಲಬುರಗಿ ಶಹಬಾದ್‌ಗೆ ಗಡಿಪಾರು ಮಾಡಲಾಗುವುದು" ಎಂದು ಪುತ್ತೂರು ಉಪವಿಭಾಗಾಧಿಕಾರಿ ನೋಟಿಸ್ ನೀಡಿದ್ದಾರೆ. ಇದು ಸಂವಿಧಾನ, ಕಾನೂನು ಬದ್ದ ನೋಟಿಸ್. ಅದಕ್ಕೆ ಕಾನೂನಿನ ಮೂಲಕ ಅರುಣ್ ಪುತ್ತಿಲ ವಿವರಣೆ ನೀಡಬಹುದು. ಆದರೇ, ಬಿಜೆಪಿ ಸರ್ಕಾರ ಅರುಣ್ ಪುತ್ತಿಲರ ವಿವರಣೆಯನ್ನೇ ಕೇಳದೆ ಎನ್ ಕೌಂಟರ್ ಮಾಡುತ್ತಿತ್ತು. ಹಾಗಾಗಿ ಜಿಲ್ಲಾಡಳಿತ ನೀಡಿದ್ದ ಗಡಿಪಾರು ನೋಟಿಸನ್ನು ಖಂಡಿಸುವ ಬಿಜೆಪಿಯು ತನ್ನ ಆಡಳಿತ ಅವಧಿಯಲ್ಲಿ ಇದೇ ಅರುಣ್ ಪುತ್ತಿಲರನ್ನು ಎನ್ ಕೌಂಟರ್ ಮಾಡಲು ಆದೇಶ ನೀಡಿತ್ತು ಎಂಬುದನ್ನು ಮರೆಯಬಾರದು. "ಇದು ಹಿಂದುತ್ವದ ಮೇಲಿನ ದಾಳಿ" ಎಂದು ಹೇಳುತ್ತಿರುವ ಹಿಂದುತ್ವ ಕಾರ್ಯಕರ್ತರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 'ಶನಿಪೂಜೆ, ಶನಿಬಿಡಿಸಿದ್ದು, ಪುತ್ತಿಲ ಎನ್ ಕೌಂಟರ್ ಆರ್ಡರ್'ಗಳನ್ನು ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನವೀನ್ ಸೂರಿಂಜೆ

contributor

Similar News