ಬಿಜೆಪಿ ಸರಕಾರದ ಅವಧಿಯಲ್ಲಿ ನಿಯಮಬಾಹಿರವಾಗಿ ಕಾಕಂಬಿ ರಫ್ತು
ಬೆಂಗಳೂರು : ಹಾಲಿ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಅವಧಿಯಲ್ಲಿ 2 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಾಕಂಬಿಯನ್ನು ನಿಯಮಬಾಹಿರವಾಗಿ ರಫ್ತು ಮಾಡಲು ಅನುಮತಿ ನೀಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.
ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ನು ಬದಿಗೆ ಸರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಈ ಪ್ರಕರಣವನ್ನು ಕಾನೂನುಬದ್ಧವಾಗಿ ತನಿಖೆ ನಡೆಸಿ 3 ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ನಿಯಮಬಾಹಿರವಾಗಿ 2 ಲಕ್ಷ ಮೆಟ್ರಿಕ್ ಟನ್ ಕಾಕಂಬಿ ರಫ್ತಿಗೆ ಆದೇಶ ನೀಡಿದ್ದ ಪ್ರಕರಣವನ್ನು ಸೂಕ್ತ ಮತ್ತು ಕ್ರಮಬದ್ಧವಾಗಿ ತನಿಖೆ ನಡೆಸದೆಯೇ ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಪೊಲೀಸರಿಗೀಗ ನ್ಯಾಯಾಲಯವು ನೀಡಿರುವ ಆದೇಶವು, ಈ ಪ್ರಕರಣಕ್ಕೆ ಮರು ಜೀವ ನೀಡಿದಂತಾಗಿದೆ. ಅಲ್ಲದೇ ಈ ಆದೇಶವು, ಲೋಕಾಯುಕ್ತ ಪೊಲೀಸರನ್ನು ತೀವ್ರ ಮುಖ ಭಂಗಕ್ಕೀಡು ಮಾಡಿದಂತಾಗಿದೆ.
ಈ ಆದೇಶದ ಪ್ರತಿಯು "the-file.in"ಗೆ ಲಭ್ಯವಾಗಿದೆ. ದೆಹಲಿಯಲ್ಲಿ ನಡೆದಿದೆ ಎನ್ನಲಾಗಿದ್ದ ಅಬಕಾರಿ ಹಗರಣದಲ್ಲಿ ಹಿಂದಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹಿತ ಮತ್ತಿತರರು ಜೈಲು ಸೇರಿದ್ದರು. ಇದರ ಬೆನ್ನಲ್ಲೆ ರಾಜ್ಯದಲ್ಲಿ ನಡೆದಿರುವ ಅಬಕಾರಿ ಹಗರಣವನ್ನು ತನಿಖೆ ನಡೆಸಬೇಕು ಎಂದು ನ್ಯಾಯಾಲಯವು ಹೊರಡಿಸಿರುವ ಆದೇಶವು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣದ ಕುರಿತು ಕರ್ನಾಟಕ ಲೋಕಾಯುಕ್ತ ಪೊಲೀಸರು ನಡೆಸಿರುವ ತನಿಖೆಯು ಕಾನೂನಿಗೆ ಅನುಗುಣವಾಗಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ಯಾವುದೇ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖಾ ಸಂಸ್ಥೆಯು ಪ್ರಕರಣದಲ್ಲಿ ಲಭ್ಯವಿರುವ ಸುಳಿವುಗಳನ್ನು ಸೇರಿಸಬೇಕಾಗಿತ್ತು. ಆದರೆ ಇದಾವುದನ್ನೂ ಈ ಪ್ರಕರಣದ ತನಿಖೆಯಲ್ಲಿ ಮಾಡಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿರುವುದು ಲೋಕಾಯುಕ್ತ ಪೊಲೀಸರ ತನಿಖೆಯ ವಿಶ್ವಾಸಾರ್ಹತೆಯ ಬಗೆಗೆ ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಆರ್ಥಿಕ ಅಪರಾಧಗಳಿಗೆ ಸಂಬಂಧಿ ಸಿದ ವಿಷಯಗಳಲ್ಲಿ, ತನಿಖಾ ಸಂಸ್ಥೆಯು ಈ ಪ್ರಕರಣವನ್ನು ಸರಿಯಾದ ದೃಷ್ಟಿಕೋನದಿಂದ ಗಮನಿಸದೇ ಇರುವುದನ್ನೂ ಸಹ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿದೆ.
ಈ ಹಗರಣವನ್ನು "the-file.in" ದಾಖಲೆ ಸಹಿತ ಹೊರಗೆಳೆದಿತ್ತು. "the-file.in" ವರದಿ ಆಧರಿಸಿಯೇ ಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ದೂರು ಸಲ್ಲಿಸಿತ್ತು. ಆದರೆ ಲೋಕಾಯುಕ್ತ ಪೊಲೀಸರು ಕ್ರಮಬದ್ಧವಾಗಿ ವಿಚಾರಣೆ ನಡೆಸದೆಯೇ ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದರು. ಇದನ್ನು ಪ್ರಶ್ನಿಸಿ ವೇದಿಕೆಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ಸಲ್ಲಿಸಿತ್ತು.
ವೇದಿಕೆಯು ಸಲ್ಲಿಸಿದ್ದ ಅರ್ಜಿಯ ಕುರಿತಾಗಿ ನ್ಯಾಯಾಲಯದಲ್ಲಿ ಸತತ 2 ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಅರ್ಜಿದಾರರು ಸಲ್ಲಿಸಿದ್ದ ಮನವಿ ಮತ್ತು ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಪೊಲೀಸರ ಕ್ರಮವನ್ನು ನ್ಯಾಯಾಲಯವು ಸುದೀರ್ಘವಾಗಿ ವಿಚಾರಣೆ ನಡೆಸಿದ ನಂತರ ಈ ಪ್ರಕರಣದ ಕುರಿತು ಕಾನೂನು ಪ್ರಕಾರ ತನಿಖೆ ನಡೆಸಬೇಕು ಎಂದು 2025ರ ಮೇ 5ರಂದು ಆದೇಶ ಹೊರಡಿಸಿದೆ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸಲ್ಲಿಸಿದ್ದ ದೂರರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆ ನೀಡಿದ್ದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿಲ್ಲ ಎಂದು ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿದೆ. ಹಾಗೆಯೇ ತನಿಖಾಧಿಕಾರಿಯ ಕರ್ತವ್ಯ ಲೋಪ, ತನಿಖೆಯ ಎಲ್ಲ ಹಂತಗಳಲ್ಲಿನ ಲೋಪಗಳನ್ನು ಪತ್ತೆ ಹಚ್ಚಿರುವ ವಿಶೇಷ ನ್ಯಾಯಾಲಯವು, ತನಿಖಾಧಿಕಾರಿಯ ವೈಫಲ್ಯವನ್ನು ಕಂಡುಹಿಡಿದಿರುವುದು ಆದೇಶದಿಂದ ಗೊತ್ತಾಗಿದೆ.
ಪರವಾನಿಗೆ ಇಲ್ಲದಿದ್ದರೂ ಸಹ ಕಾಕಂಬಿ ರಫ್ತು ಮಾಡಲು ನೀಡಿರುವ ಆದೇಶ ನೀಡಿರುವುದೇ ಮೊದಲ ಅಕ್ರಮ ಎಂದು ದೂರುದಾರರು ಮಾಡಿದ್ದ ನಿರ್ದಿಷ್ಟ ಆರೋಪಗಳಿಗೆ ತನಿಖಾಧಿಕಾರಿಯು ಉತ್ತರಿಸಿಲ್ಲ. ಹೀಗಾಗಿ ತನಿಖೆಯ ವಿಧಾನದ ಮೇಲೆ ಸ್ಪಷ್ಟವಾಗಿ ಸಂದೇಹ ಮೂಡಿದೆ ಎಂದು ತೀರ್ಪಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಯಾರಿಗೆಲ್ಲ ಸಂಕಷ್ಟ? :
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿರುವ ಆದೇಶದಿಂದಾಗಿ ಬಿಜೆಪಿ ಶಾಸಕ ಕೆ.ಗೋಪಾಲಯ್ಯ, ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಸ್‌ಎನ್ ಪ್ರಸಾದ್, ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಏಕರೂಪ್ ಕೌರ್, ಅಬಕಾರಿ ಇಲಾಖೆ ಆಯುಕ್ತ ಡಾ ಜೆ ರವಿಶಂಕರ್, ಇಲಾಖೆಯ ಅಧೀನ ಕಾರ್ಯದರ್ಶಿಯಾಗಿದ್ದ ಮಂಜುಳಾ ನಟರಾಜ್ ಅವರನ್ನೂ ಲೋಕಾಯುಕ್ತ ಪೊಲೀಸರು ತನಿಖೆಗೆ ಒಳಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.