×
Ad

ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅಕ್ರಮ ಸ್ಫೋಟಕ ಬಳಕೆ , ಕಲ್ಲುಸಾಗಾಣಿಕೆ ವರದಿ ಮುನ್ನೆಲೆಗೆ

Update: 2023-11-08 13:37 IST

ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ (45) ಅವರನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಹಿರಿಯ ಮಹಿಳಾ ಅಧಿಕಾರಿಯ ಈ ಭೀಕರ ಹತ್ಯೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅಕ್ರಮ ಕಲ್ಲು ಕ್ವಾರಿಯ ವಿರುದ್ಧ ನಿಂತಿದ್ದರು ಎಂಬ ಕಾರಣಕ್ಕೆ ಪ್ರತಿಮಾ ಅವರನ್ನು ಕೊಲೆ ಮಾಡಲಾಯಿತೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ದಂಡುಪಾಳ್ಯ ಸಿನಿಮಾದಲ್ಲಿನ ಕೊಲೆ ಮಾದರಿಯಲ್ಲೇ ಈ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ಹೋಲಿಸುತ್ತಿವೆ.

ಶನಿವಾರ ರಾತ್ರಿ ಈ ಭೀಕರ ಕೊಲೆ ನಡೆದಿದ್ದು, ಮನೆಯೊಳಗೇ ನುಗ್ಗಿ, ಮೊದಲು ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್‌ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ.

ಕೊಲೆ ನಡೆದ ಸಂದರ್ಭದಲ್ಲಿ ಪ್ರತಿಮಾ ಪತಿ ಮತ್ತು ಪುತ್ರ ತೀರ್ಥಹಳ್ಳಿಯಲ್ಲಿದ್ದರು ಎಂದು ಕೆಲವು ವರದಿಗಳು ಹೇಳುತ್ತಿದ್ದರೆ, ಹಲವು ವರ್ಷಗಳಿಂದ ಪ್ರತಿಮಾ ಒಬ್ಬರೇ ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂದು ಮತ್ತೆ ಕೆಲವು ವರದಿಗಳು ಹೇಳುತ್ತಿವೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಮೊದಲು ಘಟನೆ ಕುರಿತಂತೆ ಇರುವ ವರದಿಗಳ ಮುಖ್ಯ ವಿವರಗಳನ್ನು ಗಮನಿಸುವುದಾದರೆ, ನವೆಂಬರ್ 4ರಂದು ಸಂಜೆ 7:45ಕ್ಕೆ ಪ್ರತಿಮಾ ಅವರನ್ನು ಕಾರು ಚಾಲಕ ಮನೆಗೆ ಡ್ರಾಪ್ ಮಾಡಿ, ಅಲ್ಲಿಂದ ತನ್ನ ಮನೆಗೆ ಹೊರಟಿದ್ದಾನೆ. ಮೊದಲನೆ ಮಹಡಿಯಲ್ಲಿದ್ದ ತಮ್ಮ ಮನೆಗೆ ತೆರಳಿದ ಪ್ರತಿಮಾ, ಭದ್ರತೆಗಾಗಿ ಇದ್ದ ಮುಖ್ಯ ಬಾಗಿಲ ಮುಂಭಾಗದ ಕಬ್ಬಿಣದ ಬಾಗಿಲಿನ ಬೀಗ, ನಂತರ ಮುಖ್ಯ ಬಾಗಿಲಿನ ಬೀಗ ತೆರೆದು ಮನೆಯೊಳಗೆ ಕಾಲಿಟ್ಟಿದ್ದಾರೆ. ಹಿಂದಿನಿಂದ ತಕ್ಷಣ ಬಂದ ಇಬ್ಬರು ಹಂತಕರು ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾರೆ.

ಪ್ರತಿಮಾ ಅವರಿಗೆ ಸಹೋದರ ಕರೆ ಮಾಡಿದ್ದ. ಆದರೆ ಕರೆ ಸ್ವೀಕರಿಸದೆ ಇದ್ದುದರಿಂದ ಅನುಮಾನಗೊಂಡು ಮನೆ ಬಳಿ ಬಂದಾಗ ಕೊಲೆಯಾಗಿರುವುದು ಗೊತ್ತಾಯಿತು ಎಂದು ಹೇಳಲಾಗಿದೆ. ತಮಗೆ ಯಾರೂ ಶತ್ರುಗಳಿರಲಿಲ್ಲ ಎಂದಿರುವ ಪ್ರತಿಮಾ ಸಹೋದರ, ಕೆಲಸದ ವಿಚಾರಕ್ಕೇ ಕೊಲೆ ನಡೆದಿರಬೇಕು ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇದು ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಪರಿಚಿತರೇ ಕೊಲೆ ಮಾಡಿದರಾ ಎಂಬ ಪ್ರಶ್ನೆಯೂ ಎದ್ದಿದೆ. ಕುತ್ತಿಗೆಯಲ್ಲಿ ಹಗ್ಗ ಬಿಗಿದಿರುವ ಗುರುತು ಮರಣೋತ್ತರ ಪರೀಕ್ಷೆ ವೇಳೆ ಪತ್ತೆಯಾಗಿರುವುದಾಗಿ ಹೇಳಲಾಗಿದೆ. ಪೊಲೀಸರು ಪ್ರತಿಮಾ ಅವರ ಐಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೊನೆಯದಾಗಿ ಬಂದ ಕರೆಗಳು, ಮೆಸೇಜ್ ಹಾಗೂ ವಾಟ್ಸಾಪ್ ಚಾಟಿಂಗ್ ಸೇರಿದಂತೆ ಹಲವು ವಿವರಗಳನ್ನು ಕಲೆಹಾಕಬೇಕಿದೆ. ಪ್ರತಿಮಾ ಅವರು ಕೊನೆಯದಾಗಿ ಯಾವ ಯಾವ ಕೇಸ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು? ಅವರು ಇತ್ತೀಚಿಗೆ ಎಲ್ಲಿ ರೇಡ್ ಮಾಡಿದ್ದರು? ಇತ್ಯಾದಿ ಮಾಹಿತಿಗಳು ಮುಖ್ಯವಾಗಲಿವೆ.

'ಈ ಮೊದಲು ಪ್ರತಿಮಾ ಅವರ ಕಾರಿಗೆ ಚಾಲಕನಾಗಿದ್ದ ಕಿರಣ್ ಎಂಬಾತನನ್ನ ವಾರದ ಹಿಂದೆಯಷ್ಟೇ ಕೆಲಸದಿಂದ ತೆಗೆದು ಹಾಕಿದ್ದರು. ಆನಂತರ, ಚಾಲಕ ಚೇತನ್‌ ಹೊಸದಾಗಿ ಕೆಲಸಕ್ಕೆ ಸೇರಿದ್ದ. ಈ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಕಿರಣ್‌ ತಲೆಮರೆಸಿಕೊಂಡಿದ್ದಾನೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಪ್ರಕರಣದಲ್ಲಿ ಆತನ ಪಾತ್ರವಿರುವ ಶಂಕೆ ಇದ್ದು, ಆತನಿಗಾಗಿ ಶೋಧ ಮುಂದುವರಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಪ್ರತಿಮಾ ಅವರು ಇದ್ದ ಹುದ್ದೆ ಕೂಡ, ಅವರನ್ನು ಕೆಲಸದ ವಿಚಾರಕ್ಕೇ ಕೊಲೆ ಮಾಡಿರಬಹುದೇ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಪ್ರತಿಮಾ ಕರ್ತವ್ಯ ನಿರ್ವಹಿಸುತ್ತಿದ್ದರು.

2017ರಲ್ಲಿ ರಾಮನಗರದಲ್ಲೂ ಸಹ ಸುಮಾರು 3 ವರ್ಷ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.

ಪ್ರತಿಮಾ ಅವರು ಇತ್ತೀಚೆಗೆ ಹುಣಸಮಾರನಹಳ್ಳಿಯಲ್ಲಿನ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದರು ಎಂದು ವರದಿಗಳು ಹೇಳುತ್ತಿವೆ.

ಅಕ್ರಮ ಗಣಿಗಾರಿಕೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅದರ ವಿರುದ್ಧ ವರದಿ ನೀಡಿದ್ದರು.

ಇದರಿಂದ ಕೋಪಗೊಂಡವರೇ ಪ್ರತಿಮಾ ಹತ್ಯೆಗೆ ಸಂಚು ರೂಪಿಸಿದ್ದಿರಬಹುದೆ ಎಂಬುದು ಈಗ ಎದ್ದಿರುವ ಅನುಮಾನ.

ಈಗ ಪ್ರತಿಮಾ ಹತ್ಯೆ ಬೆನ್ನಲ್ಲೇ, ಅವರು ಅಕ್ರಮ ಸ್ಫೋಟಕ ಬಳಕೆ ಮತ್ತು ಕಲ್ಲು ಸಾಗಾಣಿಕೆ ತಪಾಸಣೆ ವರದಿಯನ್ನು ಒಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ವಿಚಾರ ಬಹಿರಂಗಗೊಂಡಿದೆ. ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ, ಬೆಟ್ಟ ಹಲಸೂರು ಗ್ರಾಮದಲ್ಲಿ ಪರವಾನಿಗೆಯಿಲ್ಲದೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ವಿಚಾರವಾಗಿ ಅವರು ಸಲ್ಲಿಸಿದ್ದ ವರದಿ ಇದಾಗಿದೆ.

ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಠಾಣೆಯಲ್ಲಿ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಸಹಿತ ನಾಲ್ವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಬಿಜೆಪಿ ಶಾಸಕ ಮುನಿರತ್ನ ಇದರಲ್ಲಿ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿದೆ. ಪ್ರತಿಮಾ ಅವರು ಜಿಲ್ಲಾಧಿಕಾರಿಗೆ 2023ರ ಜುಲೈ 12ರಂದು ಸಲ್ಲಿಸಿದ್ದ ವರದಿಯನ್ನು ಕೆಪಿಸಿಸಿ ವಕ್ತಾರ ಸೂರ್ಯ ಮುಕುಂದರಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹುಣಸಮಾರನಹಳ್ಳಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಿಲೆಟಿನ್ ಸ್ಫೋಟ ಕುರಿತು ದೂರುಗಳು ಇದ್ದವು. ಪ್ರತಿಭಟನೆಗಳೂ ನಡೆದಿದ್ದವು. ತಹಶೀಲ್ದಾರ್ ವರದಿ ಬಳಿಕ ಸ್ವತಃ ಪ್ರತಿಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇಲ್ಲಿಂದ ಕಲ್ಲು ಸಾಗಾಣಿಕೆ ನಡೆದಿದ್ದು, 4 ಎಕರೆ 5ಗುಂಟೆ ಜಮೀನಿನಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದೆ. ನಾಲ್ಕು ಪ್ರದೇಶಗಳಲ್ಲಿ 51,460 ಟನ್ ಪ್ರಮಾಣದ ಭೂ ಅಗೆತ ಮಾಡಲಾಗಿದೆ. ಸ್ಥಳದಲ್ಲಿ 5000 ಟನ್ ಕಟ್ಟಡ ಕಲ್ಲಿನ ದಾಸ್ತಾನು ಇದೆ. 25,876 ಟನ್ ಕಟ್ಟಡ ಕಲ್ಲು ಬೇರೆಡೆಗೆ ಸಾಗಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ 25 ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವುದರ ಬಗ್ಗೆ ಅವರು ವರದಿ ಕೊಟ್ಟಿದ್ದರು.

​ಈಗ ಪ್ರತಿಮಾ ಅವರ ಬರ್ಬರ ಕೊಲೆಯಾಗಿದೆ.

ಮುನಿರತ್ನ ವಿರುದ್ಧ ಅಕ್ರಮ ಸ್ಫೋಟಕ ಬಳಕೆ ಮತ್ತು ಸರ್ಕಾರಕ್ಕೆ ನಷ್ಟ ಮಾಡಿದ್ದ ಬಗ್ಗೆ ಎಫ್ ಐ ಆರ್ ದಾಖಲಿಸಿದ್ದರು. ಬಹುಶಃ ಇವರ ಸಹೋದರನ ಹಳೇ ನಂಟು ಈ ಕೊಲೆ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿರಬಹುದು. ಪೊಲೀಸರು ತನಿಖೆ ನಡೆಸುವರೆಂದು ಭಾವಿಸುತ್ತೇನೆ ಎಂದು ಸೂರ್ಯ ಮುಕುಂದರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

“ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳಿದ್ದವು. ಈ ಬಗ್ಗೆ ಚರ್ಚಿಸಲು ಒಂದು ತಿಂಗಳ ಹಿಂದೆಯಷ್ಟೇ ಸಭೆ ಕರೆದಿದ್ದೆವು. ಈ ಸಭೆಯಲ್ಲಿ ಪ್ರತಿಮಾ ಅವರೂ ಹಾಜರಾಗಿದ್ದರು. ತಮಿಳುನಾಡಿನಿಂದ ಬರುವ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಅಕ್ರಮ ಗಣಿಗಾರಿಕೆ ತಡೆಯಲು ಕಾರ್ಯಾಚರಣೆ ನಡೆಸುವಂತೆಯೂ ಹೇಳಿದ್ದೆ' ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಪ್ರತಿಮಾ, ಉತ್ತಮ ಅಧಿಕಾರಿ. ಕೆಲಸದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಜೊತೆಗೆ, ಯಾವುದೇ ದೂರು ಬಂದಿರಲಿಲ್ಲ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ ಎಂದಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಅವರ ಕೊಲೆ ಪ್ರಕರಣದ ಬಗ್ಗೆ ಹಲವು ಸಂಶಯಗಳಿವೆ. ಎಲ್ಲಾ ಅಯಾಮಗಳಿಂದ ತನಿಖೆ ನಡೆಯಲಿದೆ' ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ಕೆಲವರು ಕೌಟುಂಬಿಕ ಕಾರಣ, ಇಲಾಖೆ ವಿಚಾರ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದೇ ಕಾರಣ ಎನ್ನುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯಲಿದೆ. ಅಕ್ರಮ ಗಣಿಗಾರಿಕೆ ನಿಯಂತ್ರಣದ ಕುರಿತ ಮಾತುಗಳು ಇವೆ. ತನಿಖೆ ನಂತರವೇ ಸ್ಪಷ್ಟ ವಾಗಲಿದೆ' ಎಂದರು. 'ಎಲ್ಲ ಅಧಿಕಾರಿಗಳಿಗೂ ಪೊಲೀಸ್ ಭದ್ರತೆಯನ್ನು ಕಲ್ಪಿಸುವುದು ಅಸಾಧ್ಯ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಪತಿ ಊರಿನಲ್ಲಿದ್ದರು ಎಂದು ತಿಳಿದುಬಂದಿದೆ. ಕಾರಣ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅಕ್ರಮದ ವಿರುದ್ಧ ದೃಢವಾಗಿ ನಿಂತ ಮಹಿಳಾ ಅಧಿಕಾರಿ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಮೇಲ್ನೋಟಕ್ಕೆ ಇದರ ಹಿಂದೆ ಮಾಫಿಯಾ ಕೈವಾಡ ಇದ್ದಿರಬಹುದೆಂಬ ಅನುಮಾನ ಇರುವುದರಿಂದ ಸಹಜವಾಗಿಯೇ ಆತಂಕ ಕೂಡ ಮೂಡುವಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News