×
Ad

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಸಂಸತ್ತಿನ ಹೊರಗೆ ವಿಪಕ್ಷಗಳಿಂದ ಪ್ರತಿಭಟನೆ

Update: 2026-02-12 19:13 IST

Photo Credit : PTI 

ಹೊಸದಿಲ್ಲಿ: ಭಾರತ-ಅಮೆರಿಕ ವ್ಯಾಪಾರ ಮಧ್ಯಂತರ ಒಪ್ಪಂದ ಹಾಗೂ ಇನ್ನಿತರ ವಿಷಯಗಳ ಕುರಿತು ವಿಪಕ್ಷಗಳ ಸಂಸದರು ಪ್ರತಿಭಟನೆ ಮುಂದುವರಿಸಿರುವುದರ ಹಿನ್ನೆಲೆಯಲ್ಲಿ ಲೋಕಸಭಾ ಅಧಿವೇಶನವನ್ನು ಮಧ್ಯಾಹ್ನ 12ರವರೆಗೆ ಮುಂದೂಡಲಾಯಿತು.

ಸದನ ಆರಂಭಗೊಳ್ಳುತ್ತಿದ್ದಂತೆಯೇ ವಿಪಕ್ಷ ಸಂಸದರ ಘೋಷಣೆಗಳ ನಡುವೆಯೇ ಲೋಕಸಭಾ ಸ್ಪೀಕರ್ ಕೃಷ್ಣ ಪ್ರಸಾದ್ ಟೆನ್ನೇಟಿ ಪ್ರಶ್ನೋತ್ತರ ಕಲಾಪಕ್ಕೆ ಚಾಲನೆ ನೀಡಿದರು. ಇದರ ಬೆನ್ನಿಗೇ, ಸದನದ ಬಾವಿಗೆ ಧಾವಿಸಿದ ವಿಪಕ್ಷಗಳ ಸದಸ್ಯರು, ಮಧ್ಯಾಹ್ನದವರೆಗೆ ಸದನದ ಕಲಾಪ ಮುಂದೂಡುವಂತೆ ಒತ್ತಡ ಹೇರಿದರು.

ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಹಾಗೂ ಜಂಟಿ ಹೇಳಿಕೆಯಿಂದ ಗಂಭೀರ ಪರಿಸ್ಥಿತಿ ಉದ್ಭವಿಸಿದ್ದು, ಈ ಕುರಿತು ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಆಗ್ರಹಿಸಿದರು.

ಬಳಿಕ, ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಸಂಸತ್ತಿನ ಹೊರಗೆ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದ ವಿಪಕ್ಷಗಳ ಸಂಸದರು, ಇದೊಂದು “ಕುಣಿಕೆಯ ಒಪ್ಪಂದ” ಎಂದು ಬಣ್ಣಿಸಿದರು. ಭಿತ್ತಿ ಫಲಕಗಳನ್ನು ಹಿಡಿದಿದ್ದ ಸಂಸದರು, ಸರಕಾರದ ವಿವಿಧ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.

ಕಾರ್ಮಿಕ ಸಂಹಿತೆಗಳು, ವ್ಯಾಪಾರ ಒಪ್ಪಂದಗಳು, ಖಾಸಗೀಕರಣ ಹಾಗೂ ಕಾರ್ಮಿಕ ಮತ್ತು ರೈತ ವಿರೋಧಿ ಎಂದು ಬಣ್ಣಿಸಲಾಗಿರುವ ಇನ್ನಿತರ ಕ್ರಮಗಳನ್ನು ವಿರೋಧಿಸಿ ಕಾರ್ಮಿಕರು ಹಾಗೂ ರೈತರು ದೇಶಾದ್ಯಂತ ಇಂದು ಭಾರತ ಬಂದ್ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News