×
Ad

ವಿಶ್ವ ಮಹಿಳಾ ದಿನಾಚರಣೆಯ ರೂವಾರಿ ಕ್ಲಾರಾ ಝೆಟ್ ಕಿನ್

Update: 2024-03-08 10:02 IST

ಪ್ರತೀ ವರ್ಷ ಮಾರ್ಚ್ 8ರಂದು ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ವಿಶ್ವಾದ್ಯಂತ ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಸಾಧನೆ, ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಸಂಭ್ರಮಿಸುವ ದಿನ ಇದಾಗಿದೆ.

1910ರ ಆಗಸ್ಟ್ನಲ್ಲಿ ಡೆನ್ಮಾರ್ಕ್ನ ಕೋಪನ್ ಹೇಗನ್ನಲ್ಲಿ ಎರಡನೇ ಅಂತರ್ರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕದ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರ್ರಾಷ್ಟ್ರೀಯ ಮಹಿಳಾ ಸೆಕ್ರೆಟೆರಿಯೆಟ್ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಝೆಟ್ ಕಿನ್ ಅಧ್ಯಕ್ಷೆಯಾಗಿದ್ದರು. ಈ ಸಮ್ಮೇಳನದಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ತೆ ಮತ್ತು ಇತರ ಸೌಕರ್ಯಗಳ ಬಗ್ಗೆ ಚರ್ಚೆಗಳು ನಡೆದು ಅನುಮೋದನೆಗೊಂಡವು.

ಕ್ಲಾರಾ ಝೆಟ್ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಝೆಟ್ಕಿನ್ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರ್ರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂತು.

1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕದಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡಿದ್ದವು.

1908ರ ಫೆಬ್ರವರಿ ಕೊನೆಯ ರವಿವಾರ ಅಮೆರಿಕದಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ಆನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆ ಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್ನವರು ಜಾಮೀನು ನೀಡಿ ಬಂಧಿತ ಕೆಲಸಗಾರರನ್ನು ಬಿಡಿಸಿ ಕೊಂಡರು. ಅಮೆರಿಕದ ಮಹಿಳೆಯರ ಈ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಝೆಟ್ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದರು. ಅಂತರ್ರಾಷ್ಟ್ರೀಯ ಮಹಿಳೆಯರ ದಿನದ ಅಂಗವಾಗಿ ಮೊದಲ ಬಾರಿಗೆ ಹೊರ ಹೊಮ್ಮಿದ್ದು ಕೂಲಿ ಚಳವಳಿ(ಲೇಬರ್ ಮೂವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕ ಮತ್ತು ಯುರೋಪ್ ಪ್ರದೇಶಗಳಲ್ಲಿ ನಡೆದವು.

1911ರ ಕೋಪನ್ ಹೆಗನ್ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರ್ರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲಬಾರಿಗೆ ಮಾರ್ಚ್ 8ರಂದು ಆಸ್ಟ್ರೇಲಿಯ, ಜರ್ಮನಿ ಮತ್ತು ಸ್ವಿಟ್ಸರ್ಲ್ಯಾಂಡ್ ದೇಶಗಳು ಆಚರಿಸಿದವು. ಅಂದು ಒಂದು ಮಿಲಿಯನ್ಗಿಂತಲೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಈ ಚಳವಳಿಯಲ್ಲಿ ಭಾಗವಹಿಸಿದ್ದರು.

ಇದಲ್ಲದೆ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಚೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗೂ ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೆ, ಕೆಲಸದಲ್ಲಿನ ತಾರತಮ್ಯವನ್ನು ವಿರೋಧಿಸಿ ಪ್ರತಿಭಟಿಸಿದರು. 1913-1914ರಲ್ಲಿ ಅಂತರ್ರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ 1ನೇ ವಿಶ್ವ ಯುದ್ಧವನ್ನು ತಡೆಗಟ್ಟುವ ಬಗೆಗಿತ್ತು.

ಇದೇ ವೇಳೆಯಲ್ಲಿ ಶಾಂತಿ ಚಳವಳಿಯ ಅಂಗವಾಗಿ ರಶ್ಯದ ಮಹಿಳೆಯರು ಫೆಬ್ರವರಿ ಕೊನೆಯ ವಾರದಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ವರ್ಷ ಮಾರ್ಚ್ 8ರಂದು ಮಹಿಳೆಯರು ಯುದ್ಧ ನೀತಿಯನ್ನು ವಿರೋಧಿಸಿ ಬೃಹತ್ ಚಳವಳಿ ನಡೆಸಿದರು.

1917ರಲ್ಲಿ ಮತ್ತೆ ಯುದ್ಧ ನೀತಿಯನ್ನು ವಿರೋಧಿಸಿ ರಶ್ಯದ ಮಹಿಳೆ ಯರು ಶಾಂತಿ ಚಳವಳಿಯನ್ನು ನಡೆಸಿದರು. ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನು ಸರಕಾರ ನೀಡಿತು.

ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರಿದ ಮತ್ತು ಮುಂದುವರಿಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು. ಬೆಳೆಯುತ್ತಿದ್ದ ಅಂತರ್ರಾಷ್ಟ್ರೀಯ ಮಹಿಳಾ ಚಳವಳಿ, ಅವುಗಳ ಸಾಮರ್ಥ್ಯ ವನ್ನು ಹೆಚ್ಚಿಸಿದ ನಾಲ್ಕು ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾ ಲೋಚನೆ, ಮಹಿಳಾ ಹಕ್ಕು, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕನ್ನು ಪಡೆಯಲು ಪೋಷಿಸಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ.ಆರ್.ನಾಗರಾಜು, ಬಾಗಲಕೋಟೆ

contributor

Similar News